ಸಂಗೊಳ್ಳಿ ರಾಯಣ್ಣ ಅವರನ್ನು ಬ್ರಿಟೀಷರು ಗಲ್ಲಿಗೇರಿಸಿದ ಆಲದ ಮರವಿರುವ ಸ್ಥಳದಲ್ಲಿ ಅಮರ ಸೇನಾನಿಗೆ ನಮನ ಸಲ್ಲಿಸಿದ ಸಚಿವರು.
***
ಬೆಳಗಾವಿ: ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಸ್ಥಾಪಿಸಿದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕುರಿತು ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇದರೊಂದಿಗೆ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕಾನೂನಿನ ಮದ್ದರೆಯಲು ಮುಂದಾಗಿರುವ ಸರಕಾರ, ಮುಂದಿನ ದಿನಗಳಲ್ಲಿ ಮರಾಠಿ ಪ್ರೇರಿತ ಪುಂಡರು ಮಿಸುಕಾಡದಂತೆ ಮಾಡಲು ಮುಂದಾಗಿದೆ.
ಪೀರನವಾಡಿಯಲ್ಲಿ ಸುದ್ದಿಗಾರರ ಜತೆ ರಮೇಶ್ ಜಾರಕಿಹೊಳಿ, ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಶುಕ್ರವಾರವೇ ಸುಖಾಂತ್ಯವಾಗಿದೆ. ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ, ಇಬ್ಬರೂ ದೇಶದ ಮಹಾಪುರುಷರು. ಅವರಿಬ್ಬರೂ ಯಾವುದೇ ಜಾತಿಗೆ ಸೀಮಿತವಲ್ಲ. ಇಬ್ಬರೂ ನಮ್ಮ ಸಮಾಜದ ಆಸ್ತಿ. ರಾಷ್ಟ್ರಭಕ್ತ ಮಹಾನ್ ನಾಯಕರ ಪ್ರತಿಮೆಗಳಿಗೆ ಯಾವುದೇ ರೀತಿಯ ಅವಮಾನವಾಗದಂತೆ ಎಚ್ಚರಿಕೆ ವಹಿಸಲಾಗುವುದು. ಸರಕಾರ ಕೈಕಟ್ಟಿ ಕೂರುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದರು.
ಕರ್ನಾಟಕ ಸರಕಾರಕ್ಕೆ ಶಿವಸೇನೆಯ ಸಚಿವರು ಪತ್ರ ಬರೆದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಜಾರಕಿಹೊಳಿ, ಶಿವಸೇನೆ ಬರೆದ ಪತ್ರ ದುರುದ್ದೇಶದಿಂದ ಕೂಡಿದೆ. ಅವರು ಯಾವ ಅಜೆಂಡಾ ಇಟ್ಟುಕೊಂಡು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಏರಿದ್ದಾರೆ ಎಂಬುದು ದೇಶಕ್ಕೆಲ್ಲ ಗೊತ್ತಿದೆ. ಈ ಕುರಿತು ನಾನು ಬಹಳಷ್ಟು ಸಲ ಹೇಳಿದ್ದೇನೆ. ನಾವು ಅದಕ್ಕೆ ಮಹತ್ವ ಕೊಡಬಾರದು ಎಂದು ಹೇಳಿದರು.
ಇವತ್ತು ಪೀರನವಾಡಿಯಲ್ಲಿನ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಪುತ್ಥಳಿಗೆ ಸಚಿವ ಈಶ್ವರಪ್ಪ ಮತ್ತು ನಾನು ಹೂವಿನ ಹಾರ ಹಾಕಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದೇವೆ ಮತ್ತು ನಾವು ಸದಾ ರಾಷ್ಟ್ರಭಕ್ತರನ್ನು ಗೌರವಿಸುತ್ತೇವೆ. ಇನ್ನು ಕನ್ನಡಪರ ಹೋರಾಟಗಾರರ ಮೇಲಿನ ಪ್ರಕರಣಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ. ಹಾಗೆಯೇ ಪ್ರಕರಣ ಹಿಂಪಡೆಯುವಂತೆ ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
ಮಾಲಾರ್ಪಣೆ ಮಾಡಿದ ಈಶ್ವರಪ್ಪ, ರಮೇಶ್ ಜಾರಕಿಹೊಳಿ.
ಸಂಗೊಳ್ಳಿ ರಾಯಣ್ಣ ಗಲ್ಲಿಗೇರಿಸಿದ ಸ್ಥಳ
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡಕ್ಕೆ ಭೇಟಿ ನೀಡಿದ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಕೆ.ಎಸ್. ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಅವರನ್ನು ಬ್ರಿಟೀಷರು ಗಲ್ಲಿಗೇರಿಸಿದ ಆಲದ ಮರವಿರುವ ಸ್ಥಳದಲ್ಲಿ ಅಮರ ಸೇನಾನಿಗೆ ನಮನ ಸಲ್ಲಿಸಿದರು. ಆ ಸ್ಥಳದಲ್ಲಿರುವ ಹನುಮಂತನ ಮೂರ್ತಿಗೆ ಮತ್ತು ನಂದಗಡ ಗ್ರಾಮದ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಸಚಿವರಿಂದ ಮಾಲಾರ್ಪಣೆಯೂ ನಡೆಯಿತು. ಬಳಿಕ ಬಳಿಕ ಸಂಗೊಳ್ಳಿ ರಾಯಣ್ಣ ಸಮಾಧಿಗೂ ಭೇಟಿ ನೀಡಿ ನಮನ ಸಲ್ಲಿಸಿದರು. ಇದರೊಂದಿಗೆ ಸಂಗೊಳ್ಳಿ ರಾಯಣ್ಣ ವಿಚಾರದಲ್ಲಿ ಕರ್ನಾಟಕ ಸುಮ್ಮನಿರುವುದಿಲ್ಲ, ಮುಂದೆ ಕೆಣಕದಿರಿ ಎಂಬ ಸಂದೇಶವನ್ನು ಅವರಿಬ್ಬರು ಸಾರಿದರು.
ಪ್ರಕರಣ ವಾಪಸ್:
ಪೀರನವಾಡಿಯಲ್ಲಿ ಆದ ಗಲಾಟೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಕನ್ನಡಪರ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ರದ್ದು ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ ಎಂದು ಸಚಿ ಈಶ್ವರಪ್ಪ ಹೇಳಿದರು.