- 135 ವರ್ಷಗಳಷ್ಟು ಪುರಾತನವಾದ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕುರಿತು ಈಗ ಬಿರುಗಾಳಿ ಎದ್ದಿದೆ. ನೆಹರು-ಗಾಂಧಿ ಕುಟುಂಬದ ವಂಶಪಾರಂಪರ್ಯ ಆಡಳಿತದ ಕಪಿಮುಷ್ಟಿಗೆ ಸಿಲುಕಿರುವ ಆ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಖಂಡಿತವಾಗಿಯೂ ಇಲ್ಲ. ಅಲ್ಲಿರುವುದೇನಿದ್ದರೂ ಒಂದು ಪಕ್ಷಕ್ಕೆ ಗಂಡಾಂತರಕಾರಿಯಾದ ಹೈಕಮಾಂಡ್ ಸಂಸ್ಕೃತಿ! ವಿಚಿತ್ರವೆಂದರೆ, ಈ ಕುಟುಂಬದ ಕುಡಿಗಳ ಮುಂದೆ ತಗ್ಗಿಬಗ್ಗಿ, ಡೊಗ್ಗು ಸಲಾಮು ಹೊಡೆಯುತ್ತಿದ್ದವರೇ ಈಗ ಬಂಡಾಯದ ಬಾವುಟ ಹಾರಿಸಿದ್ದಾರೆ. ಆದರೆ, ಸೋನಿಯಾ ಗಾಂಧಿ ಯಥಾಪ್ರಕಾರ ತಮ್ಮ ಬಾಲಬಡುಕರಿಗೇ ಮಣೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ನಾವು ದಿವಂಗತ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಅಧ್ಯಕ್ಷ, ದಕ್ಷ ರಾಜನೀತಿಜ್ಞ, ಚತುರ ರಾಜಕಾರಣಿ ಪಿ.ವಿ.ನರಸಿಂಹರಾವ್ ಅವರನ್ನು ನೆನಪಿಸಿಕೊಳ್ಳಲೇಬೇಕು. ಏಕೆಂದರೆ, ಇಂದಿರಾ ಗಾಂಧಿ ಕಾಲದಲ್ಲಿ ಸ್ಥಗಿತವಾಗಿದ್ದ ಪಕ್ಷದ ಆಂತರಿಕ ಚುನಾವಣೆಯನ್ನು ಇವರು 1991ರಲ್ಲಿ ಧೈರ್ಯದಿಂದ ನಡೆಸಿದರು. ಆ ಮೂಲಕ ಕಾಂಗ್ರೆಸ್ಸಿನಲ್ಲಿ ಪ್ರಜಾಪ್ರಭುತ್ವದ ಗಾಳಿ ಬೀಸುವಂತೆ ಮಾಡಿದರು. ಅವರ ನಿರ್ಗಮನದ ನಂತರ ಮತ್ತೆ ನೆಹರು-ಗಾಂಧಿ ಕುಟುಂಬದ ಆಕ್ಟೋಪಸ್ ಹಿಡಿತಕ್ಕೆ ಸಿಲುಕಿ ಉಸಿರುಗಟ್ಟುತ್ತಿರುವ ಪಕ್ಷವು ಹೊಸ ಹಾದಿ ತುಳಿಯದಿದ್ದರೆ ಅದೊಂದು ಚಾರಿತ್ರಿಕ ಅಪರಾಧವಾಗಲಿದೆ ಅಷ್ಟೆ.
- ಪಿವಿಎನ್ ಅವರನ್ನು ಕುರಿತು ಖ್ಯಾತ ಪತ್ರಕರ್ತ ಸಂಜಯ ಬರೂ ಬರೆದಿರುವ ‘1991: ಹೌ ಪಿ.ವಿ.ನರಸಿಂಹರಾವ್ ಮೇಡ್ ಹಿಸ್ಟರಿʼ ಕೃತಿಯು ಇನ್ನು ಕೆಲವೇ ದಿನಗಳಲ್ಲಿ ಕನ್ನಡದ ಓದುಗರಿಗೆ ‘ಪಿವಿಎನ್: ಪರ್ವಕಾಲದ ಪುರುಷೋತ್ತಮʼ ಎನ್ನುವ ಹೆಸರಿನಲ್ಲಿ ಕೈ ಸೇರಲಿದೆ. ಇದರ ಕನ್ನಡ ಅನುವಾದ ಬಿ.ಎಸ್. ಜಯಪ್ರಕಾಶ ನಾರಾಯಣ (ಜೇಪಿ) ಅವರದು; ಪ್ರಕಟಿಸುತ್ತಿರುವವರು ಸಮನ್ವಿತ ಪ್ರಕಾಶನದ ಕೆ.ವಿ.ರಾಧಾಕೃಷ್ಣ. ನಮ್ಮ ಓದುಗರಿಗಾಗಿ ಈ ಮಹತ್ತ್ವದ ಪುಸ್ತಕದ ಆಯ್ದ ಭಾಗ ಇಲ್ಲಿದೆ.
***
ನರಸಿಂಹರಾವ್ ಅವರು ಪ್ರಧಾನಿಯಾಗಿ ಇಟ್ಟ ಮೊಟ್ಟಮೊದಲ ರಾಜಕೀಯ ಹೆಜ್ಜೆಯೆಂದರೆ, ಅದು 1992ರ ಏಪ್ರಿಲ್‌ನಲ್ಲಿ ತಿರುಪತಿಯಲ್ಲಿ ನಡೆದ ಎಐಸಿಸಿ ಅಧಿವೇಶನವಾಗಿತ್ತು. ಇದಕ್ಕೂ ಮೊದಲು ಅವರು “ಈ ವರ್ಷದ (1991) ಕೊನೆಯಲ್ಲಿ ಅಥವಾ ಮುಂದಿನ ವರ್ಷದ (1992) ಆರಂಭದಲ್ಲಿ ಕಾಂಗ್ರೆಸ್ಸಿನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ,” ಎಂದು ಘೋಷಿಸಿದರು. ವಾಸ್ತವವೆಂದರೆ, ಅಷ್ಟು ಹೊತ್ತಿಗಾಗಲೇ ಕಾಂಗ್ರೆಸ್ಸಿನಲ್ಲಿ ಇಂತಹ ಚುನಾವಣೆ ನಡೆದು ಹೆಚ್ಚೂಕಮ್ಮಿ ಇಪ್ಪತ್ತು ವರ್ಷಗಳಾಗಿ ಹೋಗಿದ್ದವು. ಅಂದರೆ, ಕಾಂಗ್ರೆಸ್ಸಿನಲ್ಲಿ ಹಿಂದಿನ ಆಂತರಿಕ ಚುನಾವಣೆ ನಡೆದಿದ್ದು 1973ರಷ್ಟು ಹಿಂದೆ! ಅದಾದ ಮೇಲೆ, ಬಹುತೇಕ ಎರಡು ದಶಕಗಳ ಕಾಲ ಇಂದಿರಾ ಗಾಂಧಿ, ಅವರ ಕಿರಿಯ ಮಗನಾಗಿದ್ದ ಸಂಜಯ್ ಗಾಂಧಿ ಮತ್ತು ಆ ನಂತರ ಹಿರಿಯ ಮಗ ರಾಜೀವ್ ಗಾಂಧಿ ಈ ಮೂವರೇ ಕಾಂಗ್ರೆಸ್ ಪಕ್ಷವನ್ನು ತಮ್ಮ ಕುಟುಂಬದ ಆಸ್ತಿ ಎನ್ನುವಂತೆ ಆಳಿದರು.
ಪಿವಿಎನ್ ಅವರು ಆಯೋಜಿಸಿದ ತಿರುಪತಿ ಅಧಿವೇಶನವು ಐತಿಹಾಸಿಕವಾಗಿತ್ತು. ಏಕೆಂದರೆ, 1966ನೇ ಇಸವಿಯ ನಂತರ ಇದೇ ಮೊದಲ ಬಾರಿಗೆ ನೆಹರು-ಗಾಂಧಿ ಕುಟುಂಬದ ಕುಡಿಗಳು ಪಕ್ಷದ ಅಧ್ಯಕ್ಷರೂ ಆಗಿರಲಿಲ್ಲ; ಪ್ರಧಾನಮಂತ್ರಿಯೂ ಆಗಿರಲಿಲ್ಲ. 1966ರಲ್ಲಿ ಲಾಲ್‌ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದರೆ, ತಮಿಳುನಾಡಿನ ಕೆ.ಕಾಮರಾಜ್ ಅವರು ಪಕ್ಷದ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ 1966ರ ಯುಗಕ್ಕೆ ಮರಳಿ, ಯಾವುದೇ ಒಂದು ಕುಟುಂಬದ ಹಿಡಿತಕ್ಕೆ ಸಿಕ್ಕಿಹಾಕಿಕೊಳ್ಳದೆ ಸ್ವತಂತ್ರವಾಗಿ ಮುಂದಡಿ ಇಡಬೇಕೆಂದು ಪಿವಿಎನ್ ಬಯಸಿದ್ದರು. ಕಾಂಗ್ರೆಸ್ ಪಕ್ಷವೇಕೆ ಬರೀ ʼಇಂದಿರಾ ಕಾಂಗ್ರೆಸ್ʼ ಆಗಿ ಉಳಿಯಬೇಕೆನ್ನುವುದು ಅವರ ಪ್ರಶ್ನೆಯಾಗಿತ್ತು. ಹೀಗಾಗಿ, ಪಕ್ಷವು ತನ್ನ ಮೂಲರೂಪವಾದ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ʼನ ಲಕ್ಷಣಗಳನ್ನು ಮೈಗೂಡಿಸಿ ಕೊಳ್ಳಬೇಕಾಗಿತ್ತು. ಏಕೆಂದರೆ, ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಸಾಮಾನ್ಯವಾಗಿ ಒಬ್ಬ ಸಾಮಾನ್ಯ ಕಾರ್ಯಕರ್ತ ಕೂಡ ಪಕ್ಷದ ಅತ್ಯಂತ ಮೇಲಿನ ಸ್ಥಾನಮಾನಕ್ಕೇರುವ ಬಯಕೆಯನ್ನು ಹೊಂದುವ ವಾತಾವರಣವಿರಬೇಕು.
ಇಂತಹ ಕಾಂಗ್ರೆಸ್ಸಿನಲ್ಲಿ ಆಂತರಿಕ ಚುನಾವಣೆಗಳನ್ನು ಘೋಷಿಸುವ ಮೂಲಕ ನರಸಿಂಹರಾವ್ ಅವರು ತಮಗೆ ಬಳುವಳಿಯಾಗಿ ಬಂದಿದ್ದ ‘ಕೌಟುಂಬಿಕ ಯಜಮಾನಿಕೆʼಯ ವ್ಯವಸ್ಥೆಯನ್ನು ಭಗ್ನಗೊಳಿಸಲು ತೀರ್ಮಾನಿಸಿದರು. ಈ ಚುನಾವಣೆಯಲ್ಲಿ, ಪಕ್ಷದ ಅತ್ಯಂತ ಪ್ರಬಲವಾದ ಅಂಗವಾದ ಕಾಂಗ್ರೆಸ್ ಕಾರ್ಯ ಸಮಿತಿಗೆ (ಸಿಡಬ್ಲ್ಯುಸಿ) ಕೂಡ ಅವರು ಚುನಾಯಿತರೇ ಇರಬೇಕೆಂದು ಅದಕ್ಕೂ ಮತದಾನ ಆಗುವಂತೆ ಆದೇಶಿಸಿದರು. ಅವರು ಎಐಸಿಸಿ ಅಧಿವೇಶವನ್ನು ಘೋಷಿಸುವ ಮೂಲಕ ತಮ್ಮ ವಿರುದ್ಧ ನಡೆಯುತ್ತಿದ್ದ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆʼ ಎನ್ನುವ ಚರ್ಚೆ ಕೂಡ ಕೊನೆಗೊಳ್ಳುವಂತೆ ಮಾಡಿದರು. ಕಾಂಗ್ರೆಸ್ಸಿನಲ್ಲಿ 1980ರಿಂದಲೂ ಮೊದಲು ಇಂದಿರಾ ಗಾಂಧಿ, ಅವರ ಸಾವಿನ ಬಳಿಕ ರಾಜೀವ್ ಗಾಂಧಿ ಇವರಿಬ್ಬರೇ ಪಕ್ಷದ ಅಧ್ಯಕ್ಷ ಹುದ್ದೆ ಮತ್ತು ಪ್ರಧಾನಮಂತ್ರಿಯ ಹುದ್ದೆ ಎರಡನ್ನೂ ಅಲಂಕರಿಸಿದ್ದರು. ಆದರೆ, ಪಿವಿಎನ್ ಅವರು ಕೂಡ ಹೀಗೆಯೇ ಮಾಡಿದ ಮೇಲೆ, ಮುಖ್ಯವಾಗಿ ಪಕ್ಷದೊಳಗಿದ್ದ ಅರ್ಜುನ್ ಸಿಂಗ್ ಮತ್ತು ಸೋನಿಯಾ ಗಾಂಧಿಗೆ ನಿಷ್ಠರಾಗಿದ್ದ ಎಂ.ಎಲ್.ಫೋತೇದಾರ್ ಅವರಂಥವರು, “ನರಸಿಂಹರಾವ್ ಅವರು ಈಗಾಗಲೇ ಪ್ರಧಾನಿಯಾಗಿದ್ದಾರೆ. ಹೀಗಾಗಿ ಅವರು ಪಕ್ಷದ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕು,” ಎಂದು ಆಗ್ರಹಿಸತೊಡಗಿದರು. ಪಿವಿಎನ್ ಅವರು ಈ ಬೇಡಿಕೆಗೆ ಮಣಿಯುವ ಬದಲು, ಪಕ್ಷದ ಆಂತರಿಕ ಚುನಾವಣೆಯನ್ನು ಘೋಷಿಸಿದರು! ಪಕ್ಷದ ಅಧ್ಯಕ್ಷರು ಕೂಡ ಚುನಾಯಿತರಾದವರೇ ಆಗಿರಬೇಕೆಂದಾದರೆ ಹಾಗೆಯೇ ಆಗಲಿ ಎನ್ನುವುದು ಅವರ ತಂತ್ರವಾಗಿತ್ತು.
ತಿರುಪತಿಯನ್ನೇ ಆರಿಸಿಕೊಂಡಿದ್ದೇಕೆ?
ತಿರುಮಲ ವೆಂಕಟೇಶ್ವರ ದೇವಾಲಯ
courtesy: wikipedia
ಕೆಲವು ವಿಶ್ಲೇಷಕರ ಪ್ರಕಾರ, ಪಿವಿಎನ್ ಅವರು ತಿರುಪತಿಯಲ್ಲೇ ಎಐಸಿಸಿ ಅಧಿವೇಶನವನ್ನು ಏರ್ಪಡಿಸಲು ಒಂದಿಷ್ಟು ಕಾರಣಗಳಿದ್ದವು. ಮುಖ್ಯವಾಗಿ, ಈ ಊರು ಅವರು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿದ್ದ ನಂದ್ಯಾಲವೂ ಇರುವ ರಾಯಲಸೀಮೆಯ ಪ್ರಾಂತ್ಯದಲ್ಲಿತ್ತು. ಜೊತೆಗೆ, ಇಡೀ ದಕ್ಷಿಣ ಭಾರತದಲ್ಲಿ ತಿರುಪತಿಯು ಅಲ್ಲಿ ನೆಲೆಸಿರುವ ತಿಮ್ಮಪ್ಪನ ಕೃಪೆಯಿಂದಾಗಿ ಅತ್ಯಂತ ಪವಿತ್ರವಾದ ತಾಣವಾಗಿರುವುದು ಕೂಡ ಪಿವಿಎನ್‌ಗೆ ಹಿಡಿಸಿತ್ತು. ಇವುಗಳಲ್ಲದೆ, ಅವರು ತಿರುಪತಿಯನ್ನೇ ಆಯ್ಕೆ ಮಾಡಲು ರಾಜಕೀಯವಾದ ಮೂರನೇ ಅಂಶವೂ ಒಂದಿತ್ತು.
ಅದೇನೆಂದರೆ, ಕಾಂಗ್ರೆಸ್ಸಿನ ಐವರು ಹಿರಿಯ ನಾಯಕರಾಗಿದ್ದ ಕೆ.ಕಾಮರಾಜ್, ನೀಲಂ ಸಂಜೀವರೆಡ್ಡಿ, ಅತುಲ್ಯ ಘೋಷ್, ಎಸ್.ನಿಜಲಿಂಗಪ್ಪ ಮತ್ತು ಶ್ರೀನಿವಾಸ ಮಲ್ಯ ಅವರು ನೆಹರು ನಂತರದ ಕಾಂಗ್ರೆಸ್ಸಿನ ಗತಿಯನ್ನು ನಿರ್ಧರಿಸಲು 1963ರ ಅಕ್ಟೋಬರ್‌ನಲ್ಲಿ ಸಭೆ ಸೇರಿದ್ದು ಇದೇ ಊರಿನಲ್ಲಾಗಿತ್ತು! 1962ರಲ್ಲಿ ಭಾರತವು ಚೀನಾ ಎದುರು ಸೋತ ನಂತರ ನೆಹರು ಅವರ ಆರೋಗ್ಯವು ಕ್ಷಿಪ್ರಗತಿಯಲ್ಲಿ ಕ್ಷೀಣಿಸಲಾರಂಭಿತ್ತು. ಆಗ ‘ನೆಹರು ನಂತರ ಯಾರು?ʼ ಎನ್ನುವ ದೊಡ್ಡ ರಾಜಕೀಯ ಪ್ರಶ್ನೆಯೊಂದು ಉದ್ಭವಿಸಿತು. ನಂತರದ ದಿನಗಳಲ್ಲಿ ಈ ಐವರು ನಾಯಕರ ಗುಂಪು ಕಾಂಗ್ರೆಸ್ಸಿನಲ್ಲಿ ‘ಸಿಂಡಿಕೇಟ್ʼ ಎಂದು ಗುರುತಿಸಿಕೊಂಡಿತು. ಪ್ರಾಯಶಃ, ಪಿವಿಎನ್ ಅವರು 1991ರಲ್ಲಿ ನೆಹರು ಕುಟುಂಬದ ನಂತರದ ಕಾಂಗ್ರೆಸ್ಸಿನ ಭವಿಷ್ಯವನ್ನು ಕುರಿತು ತೀರ್ಮಾನಿಸಲು ಬಯಸಿದ್ದರೆನಿಸುತ್ತದೆ.
ಕಾಂಗ್ರೆಸ್ಸಿನಲ್ಲಿನ ಬೆಳವಣಿಗೆಗಳ ಬಗ್ಗೆ ‘ದಿ ಹಿಂದೂʼ ಪತ್ರಿಕೆಯಲ್ಲಿ ವಿಶ್ಲೇಷಣಾತ್ಮಕ ಲೇಖವನ್ನು ಬರೆದಿದ್ದ ಹೆಸರಾಂತ ರಾಜಕೀಯ ಪತ್ರಕರ್ತ ಕೆ.ಕೆ.ಕಟಿಯಾಲ್ ಅವರು, “ಕಾಂಗ್ರೆಸ್ಸಿನಲ್ಲಿ ಇತ್ತೀಚೆಗೆ ನಡೆದ ಆಂತರಿಕ ಚುನಾವಣೆಯು ಮತ್ತೊಮ್ಮೆ ಪಿವಿಎನ್ ಅವರ ನಾಯಕತ್ವದಲ್ಲಿ ತನ್ನ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಮುಂದಿನ ವಾರ ತಿರುಪತಿಯಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನವು ಪಿವಿಎನ್ ಅವರಿಗೆ ಸಿಕ್ಕಿರುವ ಜನಾದೇಶವನ್ನು ಎತ್ತಿ ಹಿಡಿಯಲಿದ್ದು, ಅವರು ಜಾರಿಗೆ ತಂದಿರುವ ಆರ್ಥಿಕ ಮತ್ತು ವಿದೇಶಾಂಗ ನೀತಿಗಳಿಗೆ ಬೆಂಬಲ ವ್ಯಕ್ತಪಡಿಸಲಿದೆ. ಈ ಮೂಲಕ ಕಾಂಗ್ರೆಸ್ ಪಕ್ಷವು ನರಸಿಂಹರಾವ್ ಅವರ ರಾಜಕೀಯ ಶೈಲಿಗೆ ತನ್ನ ಅಧಿಕೃತ ಠಸ್ಸೆಯನ್ನು ಒತ್ತಲಿದೆ,” ಎಂದು ವಿವರಿಸಿದ್ದರು.
ನರಸಿಂಹರಾವ್ ಅವರು ಪ್ರಧಾನಿಯಾಗಿ ಆಯ್ಕೆಯಾದ ವಿದ್ಯಮಾನವು ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‌ಗೆ ಒಂದು ಹೊಸ ಭರವಸೆಯನ್ನು ನೀಡಿತು. ಅಂದರೆ, ಪಕ್ಷದಲ್ಲಿ ಅಧಿಕಾರವು ವಂಶಪಾರಂಪರ್ಯದ ಬಲದಿಂದ ಸಿಕ್ಕುವುದಿಲ್ಲ; ಅದಕ್ಕೇನಿದ್ದರೂ ಅವರವರ ರಾಜಕೀಯ ಪರಿಶ್ರಮವಿರಬೇಕು ಎನ್ನುವ ಸಂದೇಶವನ್ನು ಇದು ರವಾನಿಸಿತು. ತಿರುಪತಿಯಲ್ಲಿನ ಎಐಸಿಸಿ ಅಧಿವೇಶನವು ಅಧಿಕೃತವಾಗಿ ನಡೆದಿದ್ದು 1992ರಲ್ಲಿ ಎನ್ನುವುದೇನೋ ದಿಟ. ಆದರೆ, ಇದರ ಬೀಜಗಳು 1991ರ ಮಳೆಗಾಲದಲ್ಲಿ ನಡೆದ ವಿದ್ಯಮಾನಗಳಲ್ಲೇ ಅಡಗಿದ್ದವು.
ನಾಲ್ಕು ಗುಂಪುಗಳು ಸೃಷ್ಟಿಯಾದವು!
ರಾಜೀವ್ ಗಾಂಧಿ ಅವರ ಹತ್ಯೆ ಮತ್ತು ಪಿವಿಎನ್ ಅವರ ಆಯ್ಕೆಯೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕು ಗುಂಪುಗಳು ಸೃಷ್ಟಿಯಾದವು. ಈ ಪೈಕಿ ಮೊದಲನೆಯದು, ನೆಹರು-ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದವರ ಗುಂಪು. ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ತಾವು ಮಾಡಿಕೊಂಡು ಬಂದ ಸೇವೆ ಮತ್ತು ತೋರಿಕೊಂಡು ಬಂದ ವಿಧೇಯತೆಗೆ ತಕ್ಕಂತೆ ಇವರಿಗೆ ಅಧಿಕಾರ ಸಿಕ್ಕುತ್ತಿತ್ತು. ಇಂದಿರಾ ಗಾಂಧಿಯವರು ಗುಂಡೇಟಿಗೆ ಬಲಿಯಾದ ನಂತರ ರಾಜೀವ್ ಗಾಂಧಿಯವರೇ ಅವರ ಉತ್ತರಾಧಿಕಾರಿಯಾಗಬೇಕೆಂದು ಹಠ ಹಿಡಿದಿದ್ದೇ ಈ ಗುಂಪು. ಇಷ್ಟೇ ಅಲ್ಲ, ರಾಜೀವ್ ಗಾಂಧಿಯವರ ಸಾವಿನ ನಂತರ ಸೋನಿಯಾ ಗಾಂಧಿಯವರನ್ನು ಪಕ್ಷದ ಅಧ್ಯಕ್ಷೆಯನ್ನಾಗಿ ಮಾಡಬೇಕೆಂದು ಈ ಗುಂಪು ತಹತಹಿಸಿದ್ದೂ ಉಂಟು. ಸೋನಿಯಾ ಅವರು ಪಕ್ಷವನ್ನು ಮುನ್ನಡೆಸಬೇಕೆಂಬ ಈ ನಿಲುವಳಿಯನ್ನು ಸ್ವತಃ ಪಿವಿಎನ್ ಅವರೇ ಮಂಡಿಸಿದ್ದರೂ, ಇದರ ಹಿಂದೆ ನಿಜವಾಗಿ ಇದ್ದವರೆಂದರೆ ಸೋನಿಯಾ ಅವರ ಆಪ್ತಕೂಟದಲ್ಲಿದ್ದ ಎಂ.ಎಲ್.ಫೋತೇದಾರ್, ಆರ್.ಕೆ.ಧವನ್ ಥರದವರು; ಎರಡನೆಯದು, ಅರ್ಜುನ್ ಸಿಂಗ್, ಜಗನ್ನಾಥ ಮಿಶ್ರ ಮತ್ತು ಎನ್.ಡಿ.ತಿವಾರಿ ಮುಂತಾದವರು ನೇತೃತ್ವ ವಹಿಸಿದ್ದ ಉತ್ತರ ಭಾರತೀಯರ ಪಾಳೆಯ; ಮೂರನೆಯದು, ಶರದ್ ಪವಾರ್ ನಾಯಕರಾಗಿದ್ದ ಶಿಬಿರ; ನಾಲ್ಕನೆಯದು, ಪಿವಿಎನ್ ಅವರ ಬೆಂಬಲಕ್ಕಿದ್ದ ದಕ್ಷಿಣ ಭಾರತೀಯ ಸಂಸದರ ಗುಂಪು. ಈ ನಾಲ್ಕನೆಯ ಗುಂಪನ್ನು ನಿರ್ವಹಿಸುತ್ತಿದ್ದವರೆಂದರೆ, ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಕೆ.ಕರುಣಾಕರನ್. ಈ ಗುಂಪಿಗೆ ಆಗಿನ ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರ ಬೆಂಬಲವೂ ಇತ್ತೆನಿಸುತ್ತದೆ.
ತಿರುಪತಿಯಲ್ಲಿನ ಅಧಿವೇಶನದ ಅಂಗವಾಗಿ ನಡೆಯುತ್ತಿದ್ದ ಎಲ್ಲ ಚಟುವಟಿಕೆಗಳಲ್ಲೂ ಈ ನಾಲ್ಕೂ ಗುಂಪಿನ ನಾಯಕರಿಗೆ ಅವಕಾಶಗಳನ್ನು ಕೊಡಲಾಯಿತು. ಪಿವಿಎನ್ ಅವರ ಕಡುವಿರೋಧಿ ಅರ್ಜುನ್ ಸಿಂಗ್ ಅವರನ್ನು ನಿಲುವಳಿ ರಚನಾ ಸಮಿತಿಯ ಸಂಚಾಲಕರನ್ನಾಗಿ ಮಾಡಿದರೆ, ಪಿವಿಎನ್ ಅವರಿಗೆ ನಿಷ್ಠರಾಗಿದ್ದ ಉತ್ತರಪ್ರದೇಶದ ಬ್ರಾಹ್ಮಣ ನಾಯಕ ಜಿತೇಂದ್ರ ಪ್ರಸಾದ ಅವರನ್ನು ಅಧಿವೇಶನವನ್ನು ಏರ್ಪಡಿಸುವ ಹೊಣೆ ಹೊತ್ತಿದ್ದ ಸಂಚಾಲನಾ ಸಮಿತಿಯ ಸಂಚಾಲಕರನ್ನಾಗಿ ನೇಮಿಸಲಾಯಿತು. ಈ ಎರಡೂ ಸಮಿತಿಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಾನಾ ರಾಜ್ಯಗಳ ಮತ್ತು ಜಾತಿಗಳ ಹಿರಿಯ ಮುಖಂಡರಿಗೆ ಪ್ರಾತಿನಿಧ್ಯ ನೀಡಲಾಯಿತು. ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಪ್ರಬಲವಾದ ಸಿಡಬ್ಲ್ಯುಸಿ-ಕಾಂಗ್ರೆಸ್ ವರ್ಕಿಂಗ್ ಕಮಿಟಿ- ಪದಾಧಿಕಾರಿಗಳಾಗಲು ಬಯಸಿ, 400ಕ್ಕೂ ಹೆಚ್ಚು ಜನ ನಾಮಪತ್ರ ಸಲ್ಲಿಸಿದರು. ಇದರಲ್ಲಿ ಅರ್ಜುನ್ ಸಿಂಗ್ ಅವರು ಎಲ್ಲರಿಗಿಂತ ಹೆಚ್ಚು ಮತಗಳನ್ನು ಪಡೆಯುವ ಮೂಲಕ ತಮ್ಮ ರಾಜಕೀಯ ಶಕ್ತಿಯನ್ನು ಪ್ರದರ್ಶಿಸಿದರು. ಸಿಡಬ್ಲುಸಿಯಲ್ಲಿನ ಉಳಿದ ಒಂಬತ್ತು ಸ್ಥಾನಗಳಿಗೆ ಎ.ಕೆ.ಆ್ಯಂಟನಿ, ಜಿತೇಂದ್ರ ಪ್ರಸಾದ, ಶರದ್ ಪವಾರ್, ಆರ್.ಕೆ.ಧವನ್, ಗುಲಾಂ ನಬಿ ಆಜಾದ್, ಬಲರಾಂ ಜಾಖಡ್, ರಾಜೇಶ್ ಪೈಲಟ್, ಅಹಮದ್ ಪಟೇಲ್ ಮತ್ತು ಕೆ.ವಿಜಯಭಾಸ್ಕರ ರೆಡ್ಡಿ ಅವರು ಆಯ್ಕೆಯಾದರು. ಪ್ರಣಬ್ ಮುಖರ್ಜಿ ಈ ಚುನಾವಣೆಯಲ್ಲಿ ಸೋತು ಹೋದರು.
ರಾಜಕೀಯ ವಿಶ್ಲೇಷಕರು ಈ ವಿದ್ಯಮಾನವನ್ನು, “ನೆಹರು-ಗಾಂಧಿ ಕುಟುಂಬಕ್ಕೆ ಆಪ್ತವಾಗಿದ್ದ ಕೂಟದ ಜಾಗದಲ್ಲಿ ಪ್ರಜಾಪ್ರಭುತ್ವವು ಮರಳಿ ಬಂದಿರುವುದು ಸ್ವಾಗತಾರ್ಹ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅದರಲ್ಲೂ ವಿಶೇಷವಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ರಾಜಕೀಯಶಾಸ್ತ್ರಜ್ಞ ಸಿ.ಪಿ.ಬಾಂಭ್ರಿ ಅವರು ‘ಫೈನಾನ್ಷಿಯಲ್ ಎಕ್ಸ್ʼಪ್ರೆಸ್ʼ ಪತ್ರಿಕೆಯಲ್ಲಿನ ತಮ್ಮ ಅಂಕಣದಲ್ಲಿ, ಕಾಂಗ್ರೆಸ್ಸಿನಲ್ಲಿ ಸೃಷ್ಟಿಯಾದ ಈ ಪ್ರಾದೇಶಿಕ ಗುಂಪುಗಳು ಮತ್ತು ನೆಹರು ಹಾಗೂ ಇಂದಿರಾ ಗಾಂಧಿಯವರಂತಹ ಅಗ್ರಗಣ್ಯ ನಾಯಕರ ನೆರಳಿನಿಂದ ಪಕ್ಷವು ಹೊರಬಂದು, ಒಂದು ಸಹಜವಾದ ರಾಜಕೀಯ ಪಕ್ಷದಂತಾಗಲು ಪಟ್ಟ ಶ್ರಮದ ಬಗ್ಗೆ ವಿವರವಾಗಿಯೇ ಬರೆದಿದ್ದರು.
ಪ್ರಣಬ್ ಮುಖರ್ಜಿ
ಇದೇನೇ ಇದ್ದರೂ ಕಾಂಗ್ರೆಸ್ಸಿನ ಆಂತರಿಕ ಚುನಾವಣೆಯು ಪಿವಿಎನ್ ಅವರ ನಿರೀಕ್ಷೆಯಂತೆ ನಡೆದಿರಲಿಲ್ಲ. ಅದರಲ್ಲೂ ತಮ್ಮ ಕಡುವೈರಿ ಅರ್ಜುನ್ ಸಿಂಗ್ ಅವರು ಅತ್ಯಧಿಕ ಮತಗಳನ್ನು ಪಡೆದಿದ್ದು, ತಮ್ಮನ್ನು ಒಲ್ಲದ ಆ್ಯಂಟನಿ ಮತ್ತು ಬಲರಾಂ ಜಾಖಡ್ ಅವರು ಸಿಡಬ್ಲುಸಿಗೆ ಚುನಾಯಿತರಾಗಿದ್ದು, ಹಾಗೂ ತಮಗೆ ಬೇಕಾಗಿದ್ದ ಕರುಣಾಕರನ್ ಮತ್ತು ಪ್ರಣಬ್ ಮುಖರ್ಜಿಯವರು ಸೋತಿದ್ದು ಚಾಣಕ್ಯನಂತಿದ್ದ ಅವರಿಗೆ ಹಿಡಿಸಲಿಲ್ಲ. ಇದಕ್ಕೇನಾದರೂ ಒಂದು ಪರಿಹಾರವನ್ನು ಕಂಡುಹಿಡಿಯಬೇಕೆಂದುಕೊಂಡ ಪಿವಿಎನ್, “ಸಿಡಬ್ಲ್ಯುಸಿಗೆ ಒಬ್ಬ ಮಹಿಳೆಯಾಗಲಿ, ದಲಿತ ಮುಖಂಡನಾಗಲಿ ಪ್ರವೇಶ ಪಡೆದಿಲ್ಲ ಎಂದರೆ, ಈ ಚುನಾವಣೆ ಹೇಗೆ ನಡೆದಿರಬಹುದು?” ಎಂದು ಅಸಂತೋಷ ಮತ್ತು ಅಚ್ಚರಿ ಎರಡನ್ನೂ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಪಿವಿಎನ್ ಅವರ ಬೆಂಬಲಿಗರು, ಕಾಂಗ್ರೆಸ್ಸಿನ ಎಲ್ಲ ಪದಾಧಿಕಾರಿಗಳ ಸ್ಥಾನವನ್ನೂ ಮೇಲ್ಜಾತಿಯವರು ಕಬಳಿಸಿಬಿಟ್ಟಿದ್ದಾರೆ ಎನ್ನತೊಡಗಿದರು. ಕೂಡಲೇ ಎಚ್ಚೆತ್ತ ಪ್ರಧಾನಿಗಳು, “ಸಿಡಬ್ಲ್ಯುಸಿಗೆ ಆಯ್ಕೆಯಾಗಿರುವ ಎಲ್ಲರೂ ರಾಜೀನಾಮೆ ಕೊಡುವ ಮೂಲಕ ಮಹಿಳೆಯರು ಮತ್ತು ದಲಿತ ಮುಖಂಡರಿಗೆ ಅವಕಾಶ ಮಾಡಿಕೊಡಬೇಕು,” ಎಂದು ಕರೆ ಕೊಟ್ಟರು. ಈ ಮೂಲಕ ಅವರು ಸಿಡಬ್ಲ್ಯುಸಿಯನ್ನು ಪುನಾರಚಿಸಿದರಲ್ಲದೆ, ಅಲ್ಲಿಗೆ ತಮ್ಮ ಆಪ್ತರಾದ ಕರುಣಾಕರನ್, ಮಹಾರಾಷ್ಟ್ರದ ದಲಿತ ಮುಖಂಡ ಸುಶೀಲ್‌ಕುಮಾರ್ ಶಿಂದೆ, ಈಶಾನ್ಯ ಭಾರತದ ಬುಡಕಟ್ಟು ಮಹಿಳೆಯಾದ ಓಮನ್ ದೇವ್ರಿ ಅವರನ್ನು ನಾಮಕರಣದ ಮೂಲಕ ತಂದು ಪ್ರತಿಷ್ಠಾಪಿಸಿದರು. ಉಳಿದಂತೆ, ಚುನಾಯಿತ ಸದಸ್ಯರಿಗೂ ಇದರಲ್ಲಿ ಅವಕಾಶ ಕಲ್ಪಿಸಿದರು. ಈ ತಂತ್ರದ ಮೂಲಕ ಅವರು ತಮ್ಮ ಎದುರಾಳಿಗಳಾಗಿದ್ದ ಅರ್ಜುನ್ ಸಿಂಗ್ ಮತ್ತು ಶರದ್ ಪವಾರ್ ಇಬ್ಬರ ಮೇಲೂ ತಮ್ಮ ಅಧಿಕಾರವನ್ನು ಸ್ಥಾಪಿಸಿದರು. ಪಿವಿಎನ್ ಅವರ ಬೆಂಬಲಿಗರು ಈ ಕ್ರಮವನ್ನು ಸಹಜವಾಗಿಯೇ ಅನುಮೋದಿಸಿದರು. ಮಹಿಳಾ ಮತ್ತು ದಲಿತ ಪ್ರಾತಿನಿಧ್ಯ ಇಲ್ಲದಿದ್ದರೆ ಪವಾರ್ ಮತ್ತು ಅವರಂತಹ ಪ್ರಾದೇಶಿಕ ಯಜಮಾನರುಗಳು ಈ ದುರ್ಬಲ ವರ್ಗದವರನ್ನೆಲ್ಲ ಅಂಚಿಗೆ ತಳ್ಳಿಬಿಡುತ್ತಿದ್ದರು ಎಂದು ಇವರು ತರ್ಕ ಹೂಡಿದರು. ಆ ಸಂದರ್ಭದಲ್ಲಿ ಧೈರ್ಯದಿಂದ ಮುನ್ನುಗ್ಗಿದ ನರಸಿಂಹರಾವ್, ದುರ್ಬಲ ವರ್ಗಗಳ ಮುಖಂಡರನ್ನು ಸಿಡಬ್ಲ್ಯುಸಿಗೆ ಕರೆತಂದರು.
ತಿರುಪತಿ ಅಧಿವೇಶನವು ನರಸಿಂಹರಾವ್ ಅವರಿಗೆ ಬಲ ತುಂಬಿತಲ್ಲದೆ, ಪಕ್ಷವನ್ನೂ ಶಕ್ತಿಯುತಗೊಳಿಸಿತು. ಈ ಮೂಲಕ ಅವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ಪಕ್ಷವನ್ನಾಗಿ ಕಟ್ಟಿ ನಿಲ್ಲಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟರು. ಅವರ ಕಲ್ಪನೆಯ ಈ ಪಕ್ಷದಲ್ಲಿ ಯಾವುದೇ ಒಬ್ಬ ವ್ಯಕ್ತಿಗಾಗಲಿ, ಅಥವಾ ಕುಟುಂಬಕ್ಕಾಗಲಿ ಮಹತ್ತ್ವಇರಲಿಲ್ಲ.
ಸೋನಿಯಾ ನಿಷ್ಠರು ನಿಷ್ಕ್ರಿಯರಾದರು!
ಸೋನಿಯಾ ಗಾಂಧಿ
COURTESY: WIKIPEDIA
ತಿರುಪತಿ ಅಧಿವೇಶನದಲ್ಲಿ ನರಸಿಂಹರಾವ್ ಅವರು ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರಿಂದಾಗಿ, ಸೋನಿಯಾ ಗಾಂಧಿಯವರನ್ನು ರಾಜಕೀಯಕ್ಕೆ ಕರೆತರಲು ಹವಣಿಸುತ್ತಿದ್ದ ನೆಹರು-ಗಾಂಧಿ ಕುಟುಂಬದ ನಿಷ್ಠರಿಗೆ ತಣ್ಣೀರೆರಚಿದಂತಾಯಿತು. ಇದರಿಂದಾಗಿ, ಅದುವರೆಗೂ ಈ ‘ವಿಧೇಯರ ಸಂತತಿʼಯು ಪಕ್ಷದ ಮೇಲೆ ಹೊಂದಿದ್ದ ಬಿಗಿಹಿಡಿತವು ದುರ್ಬಲಗೊಂಡಿತು. ಇನ್ನೊಂದೆಡೆಯಲ್ಲಿ, ಈ ಬೆಳವಣಿಗೆಯು ಪ್ರಾದೇಶಿಕವಾಗಿ ಪ್ರಬಲರಾಗಿದ್ದ ಶರದ್ ಪವಾರ್, ಕರುಣಾಕರನ್ ಮತ್ತು ಅರ್ಜುನ್ ಸಿಂಗ್ ಅವರ ಸ್ಥಾನಮಾನಗಳನ್ನು ಇನ್ನಷ್ಟು ಬಲಪಡಿಸಿತು. 1991ರ ಕೊನೆಯ ಹೊತ್ತಿಗೆ ಪಕ್ಷದಲ್ಲಿದ್ದ ಚಿತ್ರಣವನ್ನು ಕುರಿತು ಬರೆಯುತ್ತ, “ನರಸಿಂಹರಾವ್ ಅವರ ನಾಯಕತ್ವವು ಕಾಂಗ್ರೆಸ್(ಐ) ಪಕ್ಷವನ್ನು ಉಳಿಸಿತು ಎಂದು ಪಕ್ಷದಲ್ಲಿದ್ದವರೆಲ್ಲ ಭಾವಿಸತೊಡಗಿದ್ದರು. ಅಂತಹ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರೇನಾದರೂ ಪಕ್ಷಕ್ಕೆ ಬಂದಿದ್ದರೆ ಅದು ಕಾಂಗ್ರೆಸ್ಸಿನ ವಿಭಜನೆಗೆ ದಾರಿ ಮಾಡಿಕೊಡುತ್ತಿತ್ತಷ್ಟೆ. ಸೋನಿಯಾ ಗಾಂಧಿಯವರಲ್ಲಿ ಪಕ್ಷವು ಅಚಲವಾದ ನಂಬಿಕೆಯನ್ನಿಟ್ಟಿದೆ ಎಂಬ ನಿರ್ಣಯವನ್ನು ಅಂಗೀಕರಿಸಲು ತುದಿಗಾಲಲ್ಲಿ ನಿಂತಿದ್ದವರು ಪಕ್ಷದಲ್ಲಿನ ಬೆಳವಣಿಗೆಗಳನ್ನು ಕಂಡು ವ್ಯಂಗ್ಯವಾಗಿ ನಕ್ಕಿರಬಹುದು,” ಎಂದು ವಿವರಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳೂ ದೇಶದ ದೃಷ್ಟಿಯಿಂದಲೂ ಅಧಿಕಾರಾರೂಢವಾಗಿದ್ದ ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದಲೂ ರಾಜಕೀಯ ದೃಷ್ಟಿಯಿಂದ ಮಹತ್ತ್ವದ ಘಟನೆಗಳಾಗಿದ್ದವು. ಅದೆಷ್ಟೋ ವರುಷಗಳ ನಂತರ ಕಾಂಗ್ರೆಸ್ ಪಕ್ಷವು ಒಂದು ಸಹಜವಾದ ರಾಜಕೀಯ ಪಕ್ಷದಂತೆ ಕೆಲಸ ಮಾಡುವುದನ್ನು ಕಲಿಯುತ್ತಿತ್ತು. ಈ ಸಂದರ್ಭದಲ್ಲಿ ಒಂದು ಸೃಜನಶೀಲ ಸಾಹಿತ್ಯಕೃತಿಯಂತಿರುವ ನರಸಿಂಹರಾವ್ ಅವರ ಆತ್ಮಕಥನಾತ್ಮಕ ಕೃತಿ ʼದಿ ಇನ್‌ಸೈಡರ್ʼ ನೆನಪಿಗೆ ಬರುತ್ತಿದೆ. ಈ ಕೃತಿಯಲ್ಲಿ ಅಫ್ರೋಝಾಬಾದ್ ಎನ್ನುವ ಒಂದು ರಾಜ್ಯದ ಮುಖ್ಯಮಂತ್ರಿಯಾಗಿರುವ ಚೌಧುರಿ ಎನ್ನುವ ವ್ಯಕ್ತಿಯು “ಪ್ರಧಾನಮಂತ್ರಿಯ ಸ್ಥಾನವೆಲ್ಲ ಈಗ ಯಾವುದೋ ಒಂದು ಕುಟುಂಬದ ಸ್ವತ್ತಾಗಿದೆ,” ಎಂದು ದೂರುತ್ತಾನೆ. ದೇಶದ ಅತ್ಯುನ್ನತ ಸ್ಥಾನವು ವಂಶಪಾರಂಪರ್ಯವಾಗಿ ಒಬ್ಬರಿಂದ ಒಬ್ಬರಿಗೆ ಬರುತ್ತಿರುವ ವಾಸ್ತವದತ್ತ ಇದು ನಮ್ಮ ಗಮನವನ್ನು ಸೆಳೆಯುತ್ತದೆ. ಚತುರ ರಾಜಕಾರಣಿಯಾದ ಚೌಧುರಿಯ ಬಗ್ಗೆ ಕೃತಿಯ ನಿರೂಪಕ ಆನಂದ್ ಹೇಳುವ ಮಾತುಗಳು ಹೀಗಿವೆ- “ಚೌಧುರಿ ಚತುರನಾಗಿದ್ದರೂ ಅವನಿಗೆ ರಾಜಕೀಯದ ಹಾವು-ಏಣಿ ಆಟ ಅಷ್ಟಾಗಿ ಗೊತ್ತಿರಲಿಲ್ಲ. ಅದರಲ್ಲೂ ಈ ರಾಜಕೀಯ ಆಟದಲ್ಲಿ ಹಾವು ಮತ್ತು ಏಣಿ ಎರಡನ್ನೂ ತಾವೇ ನಿಯಂತ್ರಿಸುತ್ತಿದ್ದ ಇಂದಿರಾ ಗಾಂಧಿಯವರ ಮರ್ಮಗಳ ಬಗ್ಗೆ ಈ ಚೌಧುರಿಗೆ ತಿಳಿವಳಿಕೆ ಸಾಲದಾಗಿತ್ತು. ಚೌಧುರಿಯು ಕೆಳಕ್ಕೆ ಬಂದಕೂಡಲೇ ಇಂದಿರಾ ಗಾಂಧಿಯು ನನ್ನನ್ನೇ ಅಫ್ರೋಝಾಬಾದ್‌ನ ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದರು. ಇದರಿಂದಾಗಿ ಅಫ್ರೋಜಾಬಾದ್ ರಾಜ್ಯವು ಚುನಾಯಿತ ಮುಖ್ಯಮಂತ್ರಿಯನ್ನು ಹೊಂದುವ ಬದಲು, ಸಕಲ ಅಧಿಕಾರಗಳನ್ನೂ ತಮ್ಮ ಕಪಿಮುಷ್ಟಿಯಲ್ಲೇ ಇಟ್ಟುಕೊಂಡಿದ್ದ ಪ್ರಧಾನಮಂತ್ರಿಯವರ ಮೂಗಿನ ನೇರಕ್ಕೆ ತಕ್ಕಂತೆ ಇದ್ದ ನಾಮಕರಣ ಮಾಡಲಾದ ಮುಖ್ಯಮಂತ್ರಿಯನ್ನು ಸಹಿಸಿಕೊಳ್ಳುವ ಮಟ್ಟಕ್ಕೆ ಇಳಿಯಿತು.
ನಿಜ, ಕಾಂಗ್ರೆಸ್ ಪಕ್ಷವು ತಾನು ಸರಕಾರ ರಚಿಸಿದ ರಾಜ್ಯಗಳಲ್ಲೆಲ್ಲ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವವರನ್ನು ಮುಖ್ಯಮಂತ್ರಿಗಳ ಸ್ಥಾನದಲ್ಲಿ ಕೂರಿಸುವ ಸಂಪ್ರದಾಯವನ್ನು ಅನುಸರಿಸುವ ಪಕ್ಷವಾಗಿದ್ದು, ಈ ಪ್ರವೃತ್ತಿಯು ಹೇಗೆ ಆರಂಭವಾಯಿತು ಎನ್ನುವ ಬಗ್ಗೆ ಸ್ವತಃ ಆ ಪಕ್ಷದಲ್ಲೇ ಎರಡು ಬಗೆಯ ಅಭಿಪ್ರಾಯಗಳಿವೆ. ‘ದಿ ಇನ್‌ಸೈಡರ್ʼ ಕೃತಿಯ ಪ್ರಕಾರ ಅವು ಹೀಗಿವೆ. ಒಂದು, ʼಇಂದಿರಾ ಗಾಂಧಿಯವರಿಗೆ ಎಷ್ಟು ಅಧಿಕಾರ ಸಿಕ್ಕಿದರೂ ತಣಿಯದಂತಹ ಅಧಿಕಾರದ ದಾಹವಿತ್ತು. ಹೀಗಾಗಿ, ತಾವು ಅನುವಂಶೀಯವಾಗಿ ಪ್ರಧಾನಿಯಾಗುವುದನ್ನು ವಿರೋಧಿಸುತ್ತಿದ್ದ ಯಾರನ್ನೂ ಅವರು ಸ್ವಲ್ಪವೂ ಸಹಿಸಿಕೊಳ್ಳುತ್ತಿರಲಿಲ್ಲ. ಎರಡು, ಪ್ರಾದೇಶಿಕವಾಗಿ ಪ್ರಭಾವಶಾಲಿಗಳಾಗಿದ್ದ ನಾಯಕರ ಬೆನ್ನುಮೂಳೆಯನ್ನು ಮುರಿಯುವ ಉದ್ದೇಶದಿಂದಲೇ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದ ರಾಜ್ಯಗಳಲ್ಲೆಲ್ಲ ತಮಗೆ ಇಷ್ಟವಾದವರನ್ನು ಮುಖ್ಯಮಂತ್ರಿ ಸ್ಥಾನದ ಮೇಲೆ ತಂದು ಕೂರಿಸುತ್ತಿದ್ದರು.
ನರಸಿಂಹರಾವ್ ಅವರ ‘ದಿ ಇನ್‌ಸೈಡರ್ʼ ಒಂದು ಕಲ್ಪನಾಶೀಲವಾದ ಕೃತಿ ಎನ್ನುವುದು ನಿಜ. ಆದರೆ, ಅಲ್ಲಿರುವ ಅನೇಕ ಪಾತ್ರಗಳು ಆಡಿರುವ ಮಾತುಗಳನ್ನು ನೋಡಿದರೆ, ಅವೆಲ್ಲವೂ ಸ್ವತಃ ಪಿವಿಎನ್ ಅವರೇ ತಮ್ಮ ಪಕ್ಷದ ವಿರುದ್ಧ ಆಡುತ್ತಿರುವ ಮಾತುಗಳಂತೆ ಭಾಸವಾಗುತ್ತದೆ. ಏಕೆಂದರೆ, ಇಂದಿರಾ ಗಾಂಧಿಯವರು ತಾವು ಅಧಿಕಾರಕ್ಕೆ ಬಂದ ಕೇವಲ ಹತ್ತು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಮೂಲಚಹರೆಗಳು ಒಂದೂ ಉಳಿಯದಂತೆ ಆ ಪಕ್ಷವನ್ನು ಬದಲಿಸಿ ಹಾಕಿದರು. 1951ರ ಚುನಾವಣೆಯಲ್ಲಿ ʼನೊಗವನ್ನು ಹೊತ್ತಿರುವ ಎರಡು ಎತ್ತುಗಳನ್ನುʼ ಈ ಪಕ್ಷಕ್ಕೆ ಚಿಹ್ನೆಯಾಗಿ ನೀಡಲಾಗಿತ್ತು. 1967ರಲ್ಲಿ ಪಕ್ಷ ಇಬ್ಭಾಗವಾದಾಗ ಇಂದಿರಾ ಗಾಂಧಿಯವರ ನೇತೃತ್ವದ ಒಂದು ಗುಂಪು ತನ್ನ ಹೆಸರನ್ನು ʼಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ರಿಕ್ವಿಸಿಷನ್)ʼ ಎಂದು ಬದಲಿಸಿಕೊಂಡಿತು. ಅಂದಂತೆ, ಪಕ್ಷವು ಹೋಳಾದ ಆ ಸಭೆಯು ನಡೆಯುವಂತೆ ಮಾಡಿದ್ದವರೇ ಇಂದಿರಾ ಗಾಂಧಿಯವರ ಬೆಂಬಲಕ್ಕಿದ್ದ ಒಂದು ಗುಂಪಿನ ನಾಯಕರು! ಕಾಂಗ್ರೆಸ್ಸಿನ ಈ ಬಣವು ʼಹಸು ಮತ್ತು ಕರುʼವನ್ನು ತನ್ನ ಚಿಹ್ನೆಯಾಗಿ ಮಾಡಿಕೊಂಡಿತು. ಆದರೆ, ಈ ಚಿಹ್ನೆಯು ʼಕಾಂಗ್ರೆಸ್ಸಿನಲ್ಲಿ ಅಧಿಕಾರವು ವಂಶಪಾರಂಪರ್ಯವಾಗಿ ನೆಹರು ಅವರಿಂದ ಇಂದಿರಾ ಗಾಂಧಿಗೆ ಹರಿದುಬರಲಿದೆ,ʼ ಎನ್ನುವುದರ ಸಂಕೇತವೆನ್ನುವುದನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಇಷ್ಟೇ ಅಲ್ಲ, ಈ ಚಿಹ್ನೆಯು ಭವಿಷ್ಯದಲ್ಲಿ ಕಾಂಗ್ರೆಸ್ಸಿನಲ್ಲಿ ನಡೆಯಲಿರುವ ವಿದ್ಯಮಾನಗಳ ಸೂಚನೆ ಎನ್ನುವುದು ಕೂಡ ಯಾರಿಗೂ ತಿಳಿಯಲಿಲ್ಲ.
ಇಷ್ಟಾದರೂ ವಂಶಪಾರಂಪರ್ಯ ರಾಜಕಾರಣವು ಆ ದಿನಗಳಲ್ಲಿನ್ನೂ ಭಾರತದ ರಾಜಕಾರಣವನ್ನು ವ್ಯಾಖ್ಯಾನಿಸುವಷ್ಟು ಪ್ರಬಲವಾಗಿ ಬೆಳೆದಿರಲಿಲ್ಲ. ಜವಾಹರಲಾಲ್ ನೆಹರು ಅವರು 1956ರಲ್ಲಿ ಇಂದಿರಾ ಗಾಂಧಿಯವರನ್ನು ಪಕ್ಷದ ಅಧ್ಯಕ್ಷಸ್ಥಾನಕ್ಕೆ ತಂದು ಕೂರಿಸುವ ಮೂಲಕ ಸ್ವಜನಪಕ್ಷಪಾತವನ್ನು ಪ್ರದರ್ಶಿಸಿದರು. ಇದಾದ ನಂತರ 1966ರಲ್ಲಿ ಇಂದಿರಾ ಗಾಂಧಿಯವರು ಪ್ರಧಾನಿ ಸ್ಥಾನದಲ್ಲಿ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಂಡರು.
ದುಷ್ಟ ಸಂಸ್ಕೃತಿಯ ಜನಕ ಮೋತಿಲಾಲ್
ಕಾಂಗ್ರೆಸ್ ಪಕ್ಷದಲ್ಲಿ ವಂಶಪಾರಂಪರ್ಯ ಆಡಳಿತದ ಮೂಲವನ್ನು ಹಿಡಿಯಲು ಹೊರಟರೆ ಅದು ಮೋತಿಲಾಲ್ ನೆಹರು ಅವರ ಕಾಲಕ್ಕೆ ಹೋಗುತ್ತದೆ. ಮೋತಿಲಾಲ್ ಅವರು ತಮ್ಮ ಪುತ್ರ ಜವಾಹರಲಾಲ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವಂತೆ ಮಹಾತ್ಮ ಗಾಂಧಿಯವರನ್ನು ಆಗ್ರಹಿಸಿದಾಗಲೇ ಇಂತಹ ಚಹರೆ ಮೊದಲ ಬಾರಿಗೆ ಅಲ್ಲಿ ಕಾಣಿಸಿಕೊಂಡಿತು. ಇದಕ್ಕೂ ಮೊದಲೇ ಮೋತಿಲಾಲ್ ಅವರು ತಮ್ಮ ಮಗನಿಗೋಸ್ಕರ ಇಂತಹ ಆಗ್ರಹಗಳನ್ನು ಮಾಡಿದ್ದರು. ಅಂತಿಮವಾಗಿ, ಮಹಾತ್ಮ ಗಾಂಧೀಜಿಯವರು ಈ ಆಗ್ರಹವನ್ನು ಮನ್ನಿಸಿದರು. ಆದರೆ, ಗಾಂಧೀಜಿಯವರ ಈ ನಿರ್ಧಾರವು ಸುಭಾಷಚಂದ್ರ ಬೋಸ್ ಮತ್ತು ವಲ್ಲಭಭಾಯಿ ಪಟೇಲ್ ಇಬ್ಬರಿಗೂ ತೀವ್ರ ಅಸಮಾಧಾನವನ್ನು ಹುಟ್ಟುಹಾಕಿತು. ಇವರಿಬ್ಬರ ಪೈಕಿ ಬೋಸ್ ಅವರು ಗಾಂಧೀಜಿಯು ನೆಹರೂ ಅವರಿಗೆ ಮಣೆ ಹಾಕಿದ್ದನ್ನು ಉಗ್ರವಾಗಿ ಪ್ರತಿಭಟಿಸಿದರು. ಆದರೆ, ಗಾಂಧೀಜಿಯವರ ಮೇಲೆ ಅಪಾರವಾದ ವಿಶ್ವಾಸವನ್ನು ಇಟ್ಟುಕೊಂಡಿದ್ದ ಪಟೇಲರಿಗೆ ಇದು ಸಾಧ್ಯವಾಗಲಿಲ್ಲ. ಈ ಬಗ್ಗೆ, ಮಹಾತ್ಮ ಗಾಂಧೀಜಿಯವರ ಮೊಮ್ಮಗನೂ ಆಗಿರುವ ವಿದ್ವಾಂಸ ರಾಜಮೋಹನ್ ಗಾಂಧಿ ತಮ್ಮ ‘ದಿ ಗುಡ್ ಬೋಟ್‌ಮ್ಯಾನ್ʼ ಕೃತಿಯಲ್ಲಿ ಬರೆದಿರುವ ಸಾಲುಗಳು ಹೀಗಿವೆ- “ಲಾಹೋರ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದ ಜವಾಹರಲಾಲ್ ನೆಹರು ಅವರು ಸ್ವತಃ ಮಾತನಾಡಿ, ʼನಾನು ರಾಜಸತ್ತೆಯನ್ನು ನಂಬುವವನಲ್ಲ. ನಾನೇನಿದ್ದರೂ ಪ್ರಜಾಪ್ರಭುತ್ವವಾದಿ ಎಂದು ಹೇಳಿದರು. ಆದರೆ, ಕಾಂಗ್ರೆಸ್ ಅಧ್ಯಕ್ಷಗಿರಿ ತಮ್ಮ ಪುತ್ರನಿಗೆ ಸಿಕ್ಕಿದ್ದಕ್ಕೆ ನೆಹರು ಅವರ ತಾಯಿ ಸ್ವರೂಪಾರಾಣಿಯವರ ಸಂಭ್ರಮ ಮುಗಿಲು ಮುಟ್ಟಿತ್ತು. ಯಾವಾಗಲೂ ದಮನಿತರ ಹಕ್ಕುಗಳ ಪರವಾಗಿ, ಸಮಾಜದ ಕಟ್ಟಕಡೆಯ ಸದಸ್ಯನ ಹಕ್ಕುಗಳ ಪರವಾಗಿ ದನಿ ಎತ್ತುತ್ತಿದ್ದ ಮಹಾತ್ಮ ಗಾಂಧೀಜಿಯವರು ಈ ಮೂಲಕ ತಮಗೆ ಗೊತ್ತಿಲ್ಲದಂತೆಯೇ ವಂಶಪಾರಂಪರ್ಯ ಆಡಳಿತವನ್ನು ಹುಟ್ಟುಹಾಕಿದರು.”
ಒಂದೇ ಕುಟುಂಬದ ಆಡಳಿತಕ್ಕೆ ಬಿದ್ದ ಈ ಬೀಜವು ಮುಂದೆ, ಇಂದಿರಾ ಗಾಂಧಿಯವರ ಕಾಲದಲ್ಲಿ ಹೆಮ್ಮರವಾಗಿ ಬೆಳೆಯಿತು. ಅದರಲ್ಲೂ ಅವರು 1975ರಲ್ಲಿ ತಮ್ಮ ಮುದ್ದಿನ ಮಗ ಸಂಜಯ್ ಗಾಂಧಿಯನ್ನು ಪಕ್ಷದ ನೀತಿ ನಿರ್ಧಾರಕ ವರ್ತುಲಕ್ಕೆ ತಂದಾಗಲಂತೂ ಈ ವಂಶಪಾರಂಪರ್ಯ ಆಡಳಿತ ಮತ್ತಷ್ಟು ದೊಡ್ಡದಾಯಿತು. ಇದಾದ ಎರಡು ವರ್ಷಗಳ ಬಳಿಕ -1977ರಲ್ಲಿ- ಇಂದಿರಾ ಗಾಂಧಿಯವರು ಅಧಿಕಾರವನ್ನು ಕಳೆದುಕೊಂಡರು ಎನ್ನುವುದೇನೋ ನಿಜ. ಆದರೆ, ಭಾರತವನ್ನು ಆಳುವುದು ತಮಗಿರುವ ದೈವದತ್ತವಾದ ಹಕ್ಕೇನೋ ಎಂಬ ಧಾಟಿಯಲ್ಲಿ ಅವರು 1980ರ ಮಹಾಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದು, ಪ್ರಧಾನಿಯ ಪಟ್ಟವನ್ನೇರಿದರು.
ತುರ್ತುಪರಿಸ್ಥಿತಿಯ ದಿನಗಳಲ್ಲಿ ಅವರ ಸುತ್ತ ಅಸ್ತಿತ್ವಕ್ಕೆ ಬಂದ ‘ದರ್ಬಾರ್ʼ ಮತ್ತು 1977ರಲ್ಲಿ ಅವರು ಮಣ್ಣು ಮುಕ್ಕಿದಾಗಲೂ ಅವರಿಗೆ ವಿಧೇಯವಾಗಿದ್ದ ಒಂದು ಗುಂಪು, “ಇಂದಿರಾ ಗಾಂಧಿಯವರೇ ಕಾಂಗ್ರೆಸ್ ಪಕ್ಷದ ಸಹಜ ನಾಯಕಿ” ಎಂಬಂತಹ ಒಂದು ಪ್ರಭಾವಳಿಯನ್ನು ಸೃಷ್ಟಿಸಿದ್ದೇ ಇದಕ್ಕೆ ಕಾರಣ. ಇದರ ದುರ್ಲಾಭವನ್ನು ಪಡೆದುಕೊಂಡ ಇಂದಿರಾ ಗಾಂಧಿಯವರು ಯಾವ ಹಿಂಜರಿಕೆಯೂ ಇಲ್ಲದೆ ತಮ್ಮ ಕಿರಿಯ ಮಗ ಸಂಜಯ್ ಗಾಂಧಿಯನ್ನು ತಮ್ಮ ನೈಜ ಉತ್ತರಾಧಿಕಾರಿ ಎನ್ನುವ ಮಟ್ಟಕ್ಕೆ ಬೆಳೆಸಿದರು. ಹೀಗೆ ಬೆಳೆದ ಸಂಜಯ್ ಗಾಂಧಿ, ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಯಜಮಾನಿಕೆಯನ್ನು ಪ್ರದರ್ಶಿಸತೊಡಗಿದರು. ಇದನ್ನು ಪ್ರಶ್ನಿಸಿದವರನ್ನು ಪಕ್ಷದೊಳಗೆ ಅಂಚಿಗೆ ತಳ್ಳಲಾಯಿತು. ಬದಲಿಗೆ ಪ್ರಾಯದಿಂದ ಕೂಡಿದ್ದು, ಸಾಮಾಜಿಕವಾಗಿ ಲಂಬ ಚಲನೆಯನ್ನು ಹೊಂದಿದ್ದ ಕರ್ನಾಟಕದ ಆರ್.ಗುಂಡೂರಾವ್, ಅಕ್ಬರ್ ಅಹಮದ್, ಅಂಬಿಕಾ ಸೋನಿ, ರುಕ್ಸಾನಾ ಸುಲ್ತಾನಾ, ಜಗದೀಶ್ ಟೈಟ್ಲರ್, ಕಮಲ್‌ನಾಥ್, ಬನ್ಸೀಲಾಲ್ ಮುಂತಾದವರನ್ನು ಮುಂಚೂಣಿಗೆ ತರಲಾಯಿತು. ಈ ನಾಯಕಮಣಿಗಳು ಪಕ್ಷದೊಳಗೂ ಸರಕಾರದಲ್ಲೂ ತುಂಬಾ ಪ್ರಭಾವಶಾಲಿಗಳಾದರು.
ಅಲ್ಲಿಯವರೆಗೂ ಯಾವುದೇ ಒಂದು ರಾಷ್ಟ್ರೀಯ ಪಕ್ಷವಾಗಲಿ, ಪ್ರಬಲವಾದ ಪ್ರಾದೇಶಿಕ ಪಕ್ಷವೇ ಆಗಿರಲಿ, ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಹೀಗೆ ಅಪರಿಮಿತವಾದ ಅಧಿಕಾರದೊಂದಿಗೆ ಪ್ರತಿಷ್ಠಾಪಿಸಿದ ಉದಾಹರಣೆಗಳಿರಲಿಲ್ಲ. ಸೈದ್ಧಾಂತಿಕವಾಗಿ ಎಡ ಮತ್ತು ಬಲ ಪಾಳೆಯಗಳಲ್ಲಿ ಗುರುತಿಸಿಕೊಂಡಿದ್ದ ಪಕ್ಷಗಳಲ್ಲೂ ಇಂತಹ ವಂಶಪಾರಂಪರ್ಯ ಅಧಿಕಾರದ ಕುರುಹು ಎಂದೂ ಕಾಣಿಸಿಕೊಂಡಿರಲಿಲ್ಲ. ಆದರೆ, ಸಂಜಯ್ ಗಾಂಧಿಯನ್ನು ಪ್ರಶ್ನಾತೀತ ನಾಯಕನೆಂಬಂತೆ ಬೆಳೆಸಿ ಕೂರಿಸಿದ್ದು ಭಾರತದ ರಾಜಕಾರಣದಲ್ಲಿ ಒಂದು ಹೊಸ ಅಧ್ಯಾಯದ ಆರಂಭಕ್ಕೆ ಕಾರಣವಾಯಿತು. ಅಂದರೆ, ಒಂದು ಜಾತಿಯ ಬೆಂಬಲವನ್ನು ಅಥವಾ ಒಂದು ರಾಜ್ಯದ ಬೆಂಬಲವನ್ನು ಮಾತ್ರ ನೆಚ್ಚಿಕೊಂಡಿದ್ದ ಪ್ರಾದೇಶಿಕ ಪಕ್ಷಗಳು ಕೂಡ ವಂಶಪಾರಂಪರ್ಯ ಆಡಳಿತಕ್ಕೆ ಜೋತು ಬಿದ್ದವು.
ಇಂತಹ ‘ಸರ್ವಾಧಿಕಾರಿ ಮನೋಭಾವದʼ ಸಂಜಯ್ ಗಾಂಧಿಯವರು 1980ರ ಜುಲೈನಲ್ಲಿ ವಿಮಾನ ಅಪಘಾತದಲ್ಲಿ ಕೊನೆಯುಸಿರೆಳೆದರು. ಆಗ, ಇಂದಿರಾ ಗಾಂಧಿಯವರ ಸುತ್ತ ಠಳಾಯಿಸುತ್ತಿದ್ದ ನಿಷ್ಠರ ಗುಂಪು ಪುನಃ “ರಾಜೀವ್ ಗಾಂಧಿಯವರನ್ನು ಈಗ ನೀವು ಪಕ್ಷಕ್ಕೆ ಕರೆತಂದು, ಅವರಿಗೆ ನಾಯಕತ್ವವನ್ನು ವಹಿಸಬೇಕು,” ಎಂದು ದುಂಬಾಲು ಬಿದ್ದಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅದುವರೆಗೂ ‘ಇಂಡಿಯನ್ ಏರ್‌ಲೈನ್ಸ್ʼ ಸಂಸ್ಥೆಯಲ್ಲಿ ಪೈಲಟ್ ಆಗಿದ್ದ ರಾಜೀವ್ ಗಾಂಧಿಯವರು ಈ ಮೂಲಕ ಸಕ್ರಿಯ ರಾಜಕಾರಣಕ್ಕೆ ಬಂದರು. ಸಂಜಯ್ ಗಾಂಧಿಯ ಮರಣದ ನಂತರ ಆ ಜಾಗಕ್ಕೆ ರಾಜೀವ್ ಅವರು ಬಂದಿದ್ದು ತುಂಬಾ ಸಹಜವಾದ ಪ್ರಕ್ರಿಯೆಯೇನೋ ಎಂಬಂತೆ ನಡೆಯಿತು. ಈ ಬಗ್ಗೆ ಮಖನ್‌ಲಾಲ್ ಫೋತೇದಾರ್ ಅವರು ತಮ್ಮ ಆತ್ಮವೃತ್ತಾಂತ ‘ಚಿನಾರ್ ಲೀವ್ಸ್ʼನಲ್ಲಿ ಆ ದಿನಗಳಲ್ಲಿ ಪಕ್ಷದಲ್ಲಿ ಏನು ನಡೆಯಿತು ಎನ್ನುವುದನ್ನು ವಿವರವಾಗಿ ಬರೆದಿದ್ದು, ಆ ಸಾಲುಗಳು ಕೆಳಕಂಡಂತಿವೆ-
ರಾಜೀವ್ ಗಾಂಧಿ
COURTESY: WIKIPEDIA
“1980ರ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ರಾಜೀವ್ ಗಾಂಧಿಯವರು ಕಾಂಗ್ರೆಸ್ ಪಕ್ಷದ ಭಾಗವಾದರು. ಅವರು ಪಕ್ಷಕ್ಕೆ ಸಂಬಂಧಪಟ್ಟ ವಿಚಾರಗಳನ್ನು ನಿರ್ವಹಿಸುವುದು, ಪಕ್ಷದ ಚರ್ಚೆಗಳಲ್ಲಿ ಮತ್ತು ರಾಜಕೀಯ ವಿಚಾರದ ನಿರ್ವಹಣೆಗಳಿಗೆ ಸಂಬಂಧಿಸಿದಂತೆ ಪಳಗಲು ಹಾಗೂ ಅವರೊಂದಿಗೆ ಹಿರಿಯ ನಾಯಕರು ಹೊಂದಿಕೊಂಡು ಹೋಗುವಂತಾಗಲು ಹೆಚ್ಚೂಕಮ್ಮಿ ಒಂದು ವರ್ಷವೇ ಹಿಡಿಯಿತು. ನಂತರ ತುಂಬಾ ವ್ಯವಸ್ಥಿತವಾಗಿ ರಾಜೀವ್ ಗಾಂಧಿಯವರನ್ನು ಪಕ್ಷದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಮಧ್ಯೆ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತಕ್ಕೆ ಉಪಚುನಾವಣೆ ಘೋಷಣೆಯಾಯಿತು. ಆ ವೇಳೆಗಾಗಲೇ ಅವರು (ರಾಜೀವ್ ಗಾಂಧಿ) ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದರು. ಆ ಉಪಚುನಾವಣೆಯಲ್ಲಿ ಗೆದ್ದು, ಲೋಕಸಭಾ ಸದಸ್ಯರಾದ ಅವರು, ಇದು ತಮ್ಮ ಪಿತ್ರಾರ್ಜಿತವಾದ ಹಕ್ಕು ಎಂಬಂತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೂ ಆದರು.”
ಹೀಗೆ, ಪಕ್ಷವು ಕೈಗೊಂಡ ಇಂತಹ ನಿರ್ಧಾರಗಳೇ ಕಾಂಗ್ರೆಸ್ಸಿನಲ್ಲಿ ವಂಶಪಾರಂಪರ್ಯ ಆಡಳಿತವು ನೆಲೆಯೂರಿತು. ಅಲ್ಲದೆ, 1984ರಲ್ಲಿ ಇಂದಿರಾ ಗಾಂಧಿಯವರು ಗುಂಡೇಟು ತಿಂದು ಇಹಲೋಕವನ್ನು ತ್ಯಜಿಸಿದ ಬಳಿಕ, ರಾಜೀವ್ ಗಾಂಧಿಯವರು ತೀರಾ ಸುಗಮವಾಗಿ ಪ್ರಧಾನಿ ಪಟ್ಟಕ್ಕೇರಿದರು. ಇಂತಹ ವಂಶಪಾರಂಪರ್ಯ ಅಧಿಕಾರ ಶೈಲಿಯನ್ನು ಪ್ರಶ್ನಿಸುವುದಿರಲಿ, ಅನುಮಾನಿಸಿದವರು ಕೂಡ ಕಾಂಗ್ರೆಸ್ಸಿನಲ್ಲಿ ಭಾರೀ ದೊಡ್ಡ ʼರಾಜಕೀಯ ದಂಡʼವನ್ನೇ ತೆತ್ತರೆನ್ನುವುದು ನಮಗೆ ಈಗ ಗೊತ್ತಾಗಿದೆಯಷ್ಟೆ.
***
*ಜೇಪಿ ಅನುವಾದಿಸಿರುವ ಓಶೋ ಅವರ ಈ ಲೇಖನವನ್ನೂ ಓದಿ..
- ಬಿ.ಎಸ್. ಜಯಪ್ರಕಾಶ ನಾರಾಯಣ
- ಕನ್ನಡ ಸಾಹಿತ್ಯ ಲೋಕದಲ್ಲಿ ‘ಜೇಪಿ’ ಎಂದೇ ಖ್ಯಾತಿ. ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಖಂಡಿತಾ ಒಬ್ಬರು, ಪತ್ರಕರ್ತರು ಕೂಡ. ಅನ್ಯಭಾಷೆಗಳ ಕೆಲ ಅತ್ಯುತ್ತಮ ಕೃತಿಗಳನ್ನು ಹೆಕ್ಕಿ ಅವುಗಳನ್ನು ಕನ್ನಡೀಕರಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮೀ ಅವರ ‘ಸುಸ್ವರಲಕ್ಷ್ಮೀ ಸುಬ್ಬುಲಕ್ಷ್ಮೀ’, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಆತ್ಮಕಥೆ ‘ನಾನು ಮಲಾಲ’, ಸ್ಯಾಮ್ ಪಿತ್ರೋಡ ಅವರ ಆತ್ಮಕಥೆ ‘ಭಾರತದ ಬೆಸುಗೆ’, ವಿಜಯ ಮಲ್ಯ ಕುರಿತ ‘ಸೊಗಸುಗಾರನ ಏಳುಬೀಳು’, ಓಂ ಸ್ವಾಮಿ ಅವರ ಆತ್ಮಕಥೆ ‘ಸಾಫ್ಟ್’ವೇರ್’ನಿಂದ ಸಾಕ್ಷಾತ್ಕಾರದೆಡೆಗೆ’, ಕಾಶ್ಮೀರಿ ಪಂಡಿತರ ಕರುಣಾಜನಕ ಕಥೆ ಹೇಳುವ ‘ಕದಡಿದ ಕಣಿವೆ’, ಸೇರಿದಂತೆ ಹತ್ತಾರು ಮಹತ್ತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಈಗ ಓಶೋ ಅವರು ಶಿಕ್ಷಣದ ಕುರಿತು ಮಾಡಿರುವ ಅಪರೂಪದ ಭಾಷಣಗಳುಳ್ಳ ‘ಶಿಕ್ಷಣ ಕ್ರಾಂತಿಗೆ ಆಹ್ವಾನ’ ಕೃತಿ ಕೆಲ ದಿನಗಳ ಹಿಂದೆ ಓದುಗರ ಕೈ ಸೇರಿದೆ. ಸಂಜಯ ಬರೂ ಅವರ ‘1991: ಹೌ ಪಿ.ವಿ.ನರಸಿಂಹರಾವ್ ಮೇಡ್ ಹಿಸ್ಟರಿʼ ಕೃತಿಯು ಕನ್ನಡಲ್ಲಿ ’ʼಪಿವಿಎನ್: ಪರ್ವಕಾಲದ ಪುರುಷೋತ್ತಮʼ ಎಂಬ ಹೆಸರಿನಲ್ಲಿ ಇನ್ನು ಕೆಲ ದಿನಗಳಲ್ಲೇ ಓದುಗರನ್ನು ತಲುಪಲಿದೆ. ಎರಡು ಸಲ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಜೇಪಿಗೆ ಸಂದಿವೆ.