tribute
“#ಮನಮೋಹನ್ ಸಿಂಗ್ ನಿಜಕ್ಕೂ ನನಗಿಂತ ಉತ್ತಮ ಆಯ್ಕೆ. ಆ ಬಗ್ಗೆ ನನ್ನ ಮನಸ್ಸಿನಲ್ಲಿ ಕೊಂಚವೂ ಬೇಸರವಿಲ್ಲ” ಎಂದ್ಹೇಳಿ ಸೀನಿಯಾರಿಟಿಯನ್ನೇ ತ್ಯಾಗ ಮಾಡಿದ್ದರು ಪ್ರಣಬ್ ದಾದಾ!!
curtassy: Priyanka Gandhi@gandhipriyanka ·Fan Page
ಅವರು ಪ್ರೆಸಿಡೆಂಟ್ ಮುಖರ್ಜಿಗಿಂತ ಸಿಟಿಜನ್ ಮುಖರ್ಜಿ ಎಂದೇ ಕರೆಸಿಕೊಳ್ಳಲು ಇಷ್ಟಪಡುತ್ತಿದ್ದರು. ಯಾರಿಗಾದರೂ ತಮ್ಮ ಬಗ್ಗೆ ಹೇಳಬೇಕು ಎಂದೆನಿಸಿದರೆ ಯಾವ ಹಿಂಜಿರಿಕೆಯೂ ಇಲ್ಲದೆ ‘ಸಿಟಿಜನ್ ಮುಖರ್ಜಿʼ ಎಂದೇ ಅವರು ಹೇಳುತ್ತಿದ್ದರು. ಆ ಸರಳತೆ, ನಿರ್ಭಾವುಕತೆ ಮತ್ತು ಬದುಕಿನ ಪ್ರತೀ ಏರಿಳಿತವನ್ನೂ ಪ್ರಾಕ್ಟೀಕಲ್ ಆಗಿ ಒಪ್ಪಿಕೊಳ್ಳುವ ಮುಕ್ತತೆ ಅವರಿಗಷ್ಟೇ ಸಾಧ್ಯವಾಗಿತ್ತು. ಅವರೇ ಪ್ರೆಸಿಡೆಂಟ್ ಪ್ರಣಬ್ ಮುಖರ್ಜಿ, ನಮ್ಮ ನಿಮ್ಮೆಲ್ಲರ ಸಿಟಿಜನ್ ಮುಖರ್ಜಿ.
ಸಿಟಿಜನ್ ಮುಖರ್ಜಿ ಅವರು ಮೂಲತಃ ಬಂಗಾಳದವರಾದರೂ ಇಡೀ ಭಾರತಕ್ಕೇ ಸಲ್ಲುವ ನಾಯಕರಾಗಿ ಬೆಳೆದ ಪರಿಯೇ ಬೆರಗು ಮೂಡಿಸುವಂತದ್ದು. ಅತ್ತ ರಾಷ್ಟ್ರಪತಿ ಭವನಕ್ಕೂ ದೊಡ್ಡಸ್ತಿಕೆ ತಂದುಕೊಟ್ಟಿದ್ದ ಅವರು, ಅದಕ್ಕೂ ಮೊದಲು ತಾವಿದ್ದ ಕಾಂಗ್ರೆಸ್ ಪಕ್ಷಕ್ಕೂ ಹೆಚ್ಚುಗಾರಿಕೆ ತಂದುಕೊಟ್ಟವರು ಎಂದು ನಿಸ್ಸಂಕೋಚವಾಗಿ ಹೇಳಬಹುದು. ಪಕ್ಷಕ್ಕೂ ಮೀರಿದ ವ್ಯಕ್ತಿತ್ವ, ಪಕ್ಷಕ್ಕೂ ಮೀರಿದ ಪಕ್ವತೆ ಅವರೊಬ್ಬರಲ್ಲಿ ಮಾತ್ರವೇ ಇತ್ತು. ಅದಕ್ಕೊಂದು ಬೆರಗಿನ ಉದಾಹರಣೆಯನ್ನು ಇಲ್ಲಿ ನೀಡಬಹುದು.
@CitiznMukherjee
ಮನಮೋಹನ್ ಉತ್ತಮ ಆಯ್ಕೆ ಎಂದಿದ್ದರು
2004, ಸೋನಿಯಾ ಗಾಂಧಿ ಅವರು ಪ್ರಧಾನಿಯಾಗುವ ಎಲ್ಲ ಅವಕಾಶಗಳಿದ್ದರೂ ಅವರು ಹಿಂದೆ ಸರಿದರು. ಬಿಜೆಪಿಯ ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ಅವರ ಅಬ್ಬರಕ್ಕೆ ದಿಗಿಲುಬಿದ್ದು ಅವರು, ಪ್ರಧಾನಿ ಕುರ್ಚಿಯಿಂದ ಹೊರಗುಳಿದುಬಿಟ್ಟರು. ಒಂದು ವೇಳೆ ಸೋನಿಯಾ ಹಠಕ್ಕೆ ಬಿದ್ದು ಪ್ರಧಾನಿಯಾಗಿದ್ದಿದ್ದರೆ ಈ ಇಬ್ಬರು ಮಹಿಳೆಯರು ಮಾಡುವುದೇನೂ ಇರಲಿಲ್ಲ. ಆದರೆ, ಮುಂದಿನ ದಿನಗಳಲ್ಲಿ ತಮ್ಮ ವಿರುದ್ಧ ಬಿಜೆಪಿಯ ದಾಳಿ ತೀವ್ರವಾಗಬಹುದು ಎಂದು ಆತಂಕಗೊಂಡ ಸೋನಿಯಾ ಹಿಂದಕ್ಕೆ ಸರಿದೇಬಿಟ್ಟರು. ಆ ಸಮಯದಲ್ಲಿ ಪ್ರಣಬ್ ಮುಖರ್ಜಿ ಪಿಎಂ ಕ್ಯಾಂಡಿಡೇಟ್ ಆಗಬಹುದು ಎಂಬ ಲೆಕ್ಕಾಚಾರ ಅತ್ತ ದಿಲ್ಲಿಯ ಅಕ್ಬರ್ ರಸ್ತೆಯ ಪಕ್ಷದ ಕಚೇರಿಯಲ್ಲಿ ಚಾತಕ ಪಕ್ಷಿಗಳಂತೆ ಕಾದಿದ್ದ ಪಾರ್ಟಿ ಸಂಸದರ ತಲೆಯಲ್ಲಿ ಒಂದೇ ಸಮನೆ ಗಿರಕಿ ಹೊಡೆಯುತ್ತಿತ್ತು. ಆದರೆ, ಸೋನಿಯಾ ಅದೆಂಥ ಲೆಕ್ಕ ಹಾಕಿದ್ದರೋ ಗೊತ್ತಿಲ್ಲ, ತಮಗಿಂತ ಪ್ರಬಲ ವ್ಯಕ್ತಿಗೆ ಚುಕ್ಕಾಣಿ ಕೊಡಬಾರದು ಎಂದುಕೊಂಡರೋ ಏನೋ.., ತಮ್ಮಲ್ಲಿಯೇ ನಾಯಕತ್ವದ ಗುಣಗಳು ಇಲ್ಲದ (ಕೆಲವರು ಹಾಗೆಂದುಕೊಳ್ಳುತ್ತಾರೆ, ನಾನಲ್ಲ..) ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಿಕೊಂಡು ಸ್ವಪಕ್ಷದ ನಾಯಕರಿಗೆ ಮಾತ್ರವಲ್ಲ ಪ್ರತಿಪಕ್ಷ ಬಿಜೆಪಿಗೆ, ಯುಪಿಎ ಅಂಗಪಕ್ಷಗಳ ಲೀಡರುಗಳಿಗೆ ಬಿಗ್ಶಾಕ್ ಕೊಟ್ಟಿದ್ದರು. ಹಾಗೆ ನೋಡಿದರೆ, ಸೋನಿಯಾ ಗಾಂಧಿ ಅವರು ರಾಜಕೀಯವಾಗಿ ಕೈಗೊಂಡ ಅತಿ ಮಹತ್ವದ, ಅಚ್ಚರಿಯ ನಿರ್ಧಾರ ಅದಾಗಿತ್ತು. ಹಾಗಾದರೆ, ಪ್ರಣಬ್ ಸುಮ್ಮನಿದ್ದರೆ? ಗೊತ್ತಿಲ್ಲ. ಪ್ರಧಾನಿ ಕುರ್ಚಿಯಿಂದ ದೂರವಿರಲು ಅವರಿಗೆ ಸೋನಿಯಾ ಏನಾದರೂ ಹೇಳಿದ್ದರೆ? ಭರವಸೆಯೇನಾದರೂ ಕೊಟ್ಟಿದ್ದರಾ? ಅದೂ ಗೊತ್ತಿಲ್ಲ. 2004 ಮೇ 22ರಂದು ಸಂಜೆ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿ ಆವತ್ತಿನ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಂದ ಗೌಪ್ಯತೆಯ ಪ್ರಮಾಣ ಸ್ವೀಕಾರ ಮಾಡಿದಾಗ, ಪ್ರಣಬ್ ಕೂಡ ಅವರ ಕ್ಯಾಬಿನೆಟ್ಟಿನಲ್ಲಿ ನಂ.೨ ಆಗಿ ಪ್ರಮಾಣ ಸ್ವೀಕರಿಸಿದ್ದರು. ಹಾಗೆ ನೋಡಿದರೆ, ಸರಕಾರ ನಡೆಸುವಷ್ಟು ಆಡಳಿತದ ಅನುಭವವೂ ಇಲ್ಲದ, ಪ್ರಭಾವಶಾಲಿಯೂ ಅಲ್ಲದ, ಹಣಕಾಸು ಬಿಟ್ಟು ಬೇರಾವ ಖಾತೆಗಳ ಗೋಜೂ ಗೊತ್ತಿಲ್ಲದ, ಅಷ್ಟೇ ಏಕೆ? ರಾಜಕೀಯದಲ್ಲಿ ತಮ್ಮ ಅನುಭವಕ್ಕೆ ಯಾವ ರೀತಿಯಲ್ಲೂ ಸಾಟಿಯಲ್ಲದ ಮನಮೋಹನ್ ಸಿಂಗ್ ಸಂಪುಟದಲ್ಲಿ ಕೆಲಸ ಮಾಡುವುದೂ ಎಂದರೆ..? ಅದು ಸಾಧ್ಯವಾಯಿತು. ಪ್ರಣಬ್ ಬಹುವಾಗಿ ಮಾಗಿದ್ದರು ಮಾತ್ರವಲ್ಲ, ಈಗಿರುವ ಕಾಂಗ್ರೆಸ್ ಇಂದಿರಾ ಕಾಲದ ಕಾಂಗ್ರೆಸ್ ಅಲ್ಲ ಎಂಬ ಸೂಕ್ಷ್ಮವೂ ಅವರಿಗೆ ತಿಳಿದಿತ್ತು. ಇವತ್ತಿನ ತಾಳ್ಮೆ ಮುಂದೊಂದು ದಿನ ಖಚಿತವಾಗಿ ಫಲ ನೀಡುತ್ತದೆ ಎಂಬ ನಂಬಿಕೆಯೂ ಅವರಲ್ಲಿತ್ತು ಎಂದು ಕಾಣುತ್ತದೆ. ಮುಂದಿನ ದಿನಗಳಲ್ಲಿ ಈ ಕಿಚಡಿ ಪಾಲಿಟಿಕ್ಸ್ ಹೇಗೆಲ್ಲ ಟರ್ನ್ ಹೊಡೆಯಬಹುದು ಎಂಬ ಲೆಕ್ಕವೂ ಅವರಿಗೆ ಖಂಡಿತಾ ಗೊತ್ತಿತ್ತು ಎನಿಸುತ್ತದೆ. ಹೀಗಾಗಿ ಅವರು ತಮ್ಮ ʼಅದ್ವೀತೀಯ ಶಕ್ತಿʼಯೇ ಆಗಿದ್ದ ತಾಳ್ಮೆಯನ್ನಷ್ಟೇ ನಂಬಿಕೊಂಡರು. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಮರುಮಾತಿಲ್ಲದೆ ಒಪ್ಪಿಕೊಂಡರು.
ಆಗೊಂದು ಸಂದರ್ಭದಲ್ಲಿ ಅವರು ಒಂದು ಮಾತನ್ನೂ ಹೇಳಿಬಿಟ್ಟರು. “ಮನಮೋಹನ್ ಸಿಂಗ್ ಅವರಿಗಿಂತ ಪ್ರಧಾನಿ ಪದವಿಗೆ ನೀವೆ ಉತ್ತಮ ಆಯ್ಕೆ ಅಲ್ಲವೆ?” ಎಂದು ಯಾರೋ ಪತ್ರಕರ್ತರು ಕೇಳಿಬಿಟ್ಟಾಗ ಪ್ರಣಬ್ ದಾದಾ ಮರುಕ್ಷಣದಲ್ಲೇ ಹೀಗೆ ಉತ್ತರ ನೀಡಿದ್ದರು. “ಮನಮೋಹನ್ ಸಿಂಗ್, ನಿಜಕ್ಕೂ ನನಗಿಂತ ಉತ್ತಮ ಆಯ್ಕೆ. ಆ ಬಗ್ಗೆ ನನ್ನ ಮನಸ್ಸಿನಲ್ಲಿ ಕೊಂಚವೂ ಬೇಸರವಿಲ್ಲ” ಎಂದುಬಿಟ್ಟಿದ್ದರು. ಆ ಒಂದು ಲೈನ್ ಆವತ್ತಿನ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಯಿತು. ಆದರೆ ಪ್ರಣಬ್ ಅವರು ತಮ್ಮ ಎಂದಿನ ಗಾಂಭೀರ್ಯದ ಚಿತ್ತವನ್ನೂ ಸಡಿಲ ಮಾಡಿಕೊಂಡಿದ್ದೇ ಇಲ್ಲ. ಪ್ರಣಬ್ ಅಂದರೆ ಹಾಗೆ. ಈ ಪಾಟಿ ತಾಳ್ಮೆ, ಸಹನೆ ಇದ್ದಿದ್ದು ಪ್ರಣಬ್ ಅವರು ತುಂಬಾ ಗೌರವಿಸುತ್ತಿದ್ದ ಪಿ.ವಿ.ನರಸಿಂಹರಾಯರಿಗೆ ಮಾತ್ರ. ಅಷ್ಟೇ ಅಲ್ಲ, ರಾಷ್ಟ್ರಪತಿ ಭವನದಿಂದ ನಿರ್ಗಮಿಸಿದ ನಂತರವೂ ಅವರು ಇದೇ ಮಾತನ್ನು ಪುನರುಚ್ಛರಿಸಿದ್ದರು. ಇನ್ನು ಇದೇ ಮಾತಿಗೆ ಬಂದರೆ, ಮನಮೋಹನ್ ಸಿಂಗ್ ಕೂಡ ಅಷ್ಟೇ ಪ್ರಾಂಜಲವಾಗಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. “ಪ್ರಧಾನಮಂತ್ರಿ ಹುದ್ದೆಗೆ ನನಗಿಂತ ಪ್ರಣಬ್ ಅವರು ಹೆಚ್ಚು ಅರ್ಹತೆ ಹೊಂದಿದವರಾಗಿದ್ದರು. ಆದರೆ, ಸೋನಿಯಾ ಗಾಂಧಿ ಅವರು ತಮ್ಮನ್ನು ಆಯ್ಕೆ ಮಾಡಿಕೊಂಡರು” ಎಂದು ಮುಚ್ಚುಮರೆ ಇಲ್ಲದೇ ಹೇಳಿಬಿಟ್ಟಿದ್ದರು ಸಿಂಗ್. ಪ್ರಣಬ್ ಅವರ ಆತ್ಮಕಥೆ ಬಿಡುಗಡೆ ಸಂದರ್ಭದಲ್ಲಿ ಮನಮೋಹನ್ ಹೀಗೆ ನೇರಾನೇರ ಹೇಳಿದ್ದರು. ಹಾಗೆ ನೋಡಿದರೆ ತಾವು ʼಕೇವಲʼ ಸೋನಿಯಾ ಗಾಂಧಿ ಅವರ ಆಯ್ಕೆಯಷ್ಟೇ ಎಂದು ನಿರ್ಭಾವುಕತೆಯಿಂದ ಅದೂ ಸೋನಿಯಾ, ರಾಹುಲ್ ಅವರಿಬ್ಬರೂ ಎದುರಿಗೆ ಕೂತಿದ್ದಾಗಲೇ ನುಡಿದಿದ್ದರು ಮನಮೋಹನ್. ಅಂಥ ಪ್ರಾಮಾಣಿಕತೆಯಲ್ಲಿ ಪ್ರಣಬ್ ಮತ್ತು ಮನಮೋಹನ್ ಅವರಿಬ್ಬರೂ ಕಾಂಗ್ರೆಸ್ಸಿನಲ್ಲಿ ಜೋಡೆತ್ತುಗಳಂತೆಯೇ ಇದ್ದರು. ಪ್ರಧಾನಿಯಾಗಿದ್ದರೂ ಮನಮೋಹನ್ ಎಂದೂ ಪ್ರಣಬ್ರ ಹಿರಿತನಕ್ಕೆ ಹಾಗೂ ಅವರ ಮೇಧಸ್ಸಿಗೆ ಕುಂದುತರುವ ರೀತಿ ವರ್ತಿಸಲೇ ಇಲ್ಲ. ಅನುಭವಕ್ಕಿರುವ ಘನತೆ ಅವರಿಗೆ ತಿಳಿದಿತ್ತು. ಹಾಗೆಯೇ ಪ್ರಣಬ್ ಕೂಡ ಸಿಂಗ್ ಅವರ ಜತೆ ಕೆಲಸ ಮಾಡಲು ತಮ್ಮ ಹಿರಿತನವನ್ನು ಲೆಕ್ಕಿಸಲಿಲ್ಲ. ಜ್ಞಾನದ ಮೌಲ್ಯದ ಬೆಲೆ ಅವರಿಗೆ ಗೊತ್ತಿತ್ತು. ಹೀಗೆ ಭಾರತದಂಥ ರಾಜಕೀಯ ಸ್ಥಿತಿಯಲ್ಲಿ ಹಿರಿತನವನ್ನು ತ್ಯಾಗ ಮಾಡುವುದು ಹೇಳಿದಷ್ಟು ಸುಲಭವಲ್ಲ. ಬರೆದಷ್ಟು ಸರಳವೂ ಅಲ್ಲ. ಅದನ್ನು ಇಡೀ ದೇಶಕ್ಕೆ ತಾವೇ ಉದಾಹರಣೆಯಾಗಿ ಪ್ರಣಬ್ ದಾದಾ ಗೊತ್ತು ಮಾಡಿಸಿದ್ದರು!
@PRESIDENTMUKHERJEE@POI13
ಆ ದಿನವೂ ಬಂತು
ಇನ್ನು, ಮನಮೋಹನ್ ಆಯ್ಕೆ ಸೀನ್ ಕಟ್ ಮಾಡಿದರೆ 2007ರ ಜುಲೈನಲ್ಲಿ ರಾಜಸ್ತಾನದ ರಾಜ್ಯಪಾಲರಾಗಿದ್ದ ಪ್ರತಿಭಾ ದೇವಿಸಿಂಗ್ ಪಾಟೀಲರು ರಾಷ್ಟ್ರಪತಿಯಾಗಿಯೇಬಿಟ್ಟಿದ್ದರು. ಆಗಲೂ ದಿಲ್ಲಿಯ ಪಡಸಾಲೆಯಲ್ಲಿ ಜೋರು ಚರ್ಚೆಯಾಗಿದ್ದೂ ಉಂಟು. ಪ್ರಣಬ್ ದಾದಾ ಮುಂದೇನು? ಅವರಿಗೆ ಪಕ್ಷ ಯಾವ ರೀತಿ ನ್ಯಾಯ ಮಾಡುತ್ತದೆ? ಎಂದೆಲ್ಲ.. ಅಂದರೆ, ಪ್ರಧಾನಿ ಪದವಿ ನೀಡದೇ ಪಕ್ಷ ಅವರಿಗೆ ಅನ್ಯಾಯ ಮಾಡಿದೆ ಎಂಬುದು ಅನೇಕರ ನಿಲುವಾಗಿತ್ತು. ಗುಟ್ಟಿನಲ್ಲಿ ಮತ್ತು ರಾಜಕೀಯ ಲೆಕ್ಕದಲ್ಲಿ ಯಾರೇ ಆದರೂ ತಮಗಿಂತ ನಂತರವೇ ಎನ್ನುವ ಹಾಗಿದ್ದ ಸೋನಿಯಾ, ಆ ಹೊತ್ತಿನಲ್ಲಿ ಏನೇ ಆಗಬೇಕಿದ್ದರೂ ಪ್ರಣಬ್ರನ್ನು ಬಿಟ್ಟು ಒಂದು ಹೆಜ್ಜೆಯನ್ನೂ ಮುಂದೆ ಇಡುತ್ತಿರಲಿಲ್ಲ ಎಂದರೆ ಯಾರೂ ನಂಬಲಿಕ್ಕೆ ಇಲ್ಲ. ನನಗೆ ಗೊತ್ತಿರುವ ಕೆಲ ಕಾಂಗ್ರೆಸ್ಸಿಗರೇ ಹೇಳುವ ಮಾತಿದು. ಅಂತಹ ಮುಖರ್ಜಿಯವರು 2012 ಜುಲೈನಲ್ಲಿ ರೈಸಿನಾ ಹಿಲ್ಸ್ ಮುಂದೆ ವಿರಾಜಮಾನವಾಗಿ ನಿಂತಿದ್ದರು. ಪ್ರತಿಪಕ್ಷದಿಂದ ಕೊಂಚ ಪೈಪೋಟಿ ಇತ್ತು ಕಂಡಿದ್ದು ಬಿಟ್ಟರೆ, ಅವರು ನಿರಾಯಾಸವಾಗಿ ರಾಷ್ಟ್ರಪತಿ ಪದವಿಯನ್ನೇರಿದ್ದರು. ನಿಜಕ್ಕೂ ಇಡೀ ದೇಶಕ್ಕೆ ಆಗಲೇ ಗೊತ್ತಾಗಿದ್ದು ಸೋನಿಯಾ ಗಾಂಧಿ ಅವರ ರಾಜಕೀಯ ಲೆಕ್ಕ ಹಾಗೂ ಪ್ರಣಬ್ ಅವರ ತಾಳ್ಮೆಯ ಅಗಾಧತೆ ಏನೆಂಬುದು. ಹೆಚ್ಚೂಕಮ್ಮಿ ಕಾಂಗ್ರೆಸ್ಸಿನಲ್ಲಿ ಆಗ ರೈಸಿನಾ ಹಿಲ್ಸ್ ಕಡೆ ಕರಣ್ ಸಿಂಗ್ ಅವರು ಈ ಸಲವಾದರೂ ಹೋಗಬಹುದು ಎಂದು ನಂಬಲಾಗಿತ್ತು. ಅದುಬಿಟ್ಟರೆ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೇ ಸಹಜ ಆಯ್ಕೆ ಎಂದು ಬಹುತೇಕರು ನಂಬಿದ್ದರು. ಇದರ ಜತೆ ಜತೆಗೇ ದಾದಾ ಅವರ ಸ್ವಂತ ರಾಜ್ಯ ಪಶ್ಚಿಮ ಬಂಗಾಳದ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರ ಹೆಸರೂ ತೂರಿಬಂದಿತ್ತು. ಆದರೆ, ಸೋನಿಯಾ ಅವರು ಎಲ್ಲ ಲೆಕ್ಕಗಳನ್ನು ಪಕ್ಕಕ್ಕಿಟ್ಟು ತಮ್ಮದೇ ಲೆಕ್ಕವನ್ನು ಬಿಡಿಸಿಟ್ಟಿದ್ದರು. ದಿಲ್ಲಿಯಲ್ಲಿ ನಡೆದ ಯುಪಿಎ ಒಕ್ಕೂಟದ ಸಭೆಯಲ್ಲಿ ದಾದಾ ಅವರನ್ನು ಅವಿರೋಧ ಅಭ್ಯರ್ಥಿಯಾಗಿ ಸಮ್ಮಿತಿಸಲಾಗಿತ್ತು. ಆ ಕ್ಷಣದಲ್ಲಿ ಪ್ರಣಬ್ರನ್ನು ಮೊದಲು ಅಪ್ಪಿಕೊಂಡು ಶುಭ ಕೋರಿದ್ದು ಅದೇ ಮನಮೋಹನ್ ಸಿಂಗ್. ಪ್ರಣಬ್ ಅವರು ಯುಪಿಎ ಒಕ್ಕೂಟದ ಅಭ್ಯರ್ಥಿಯಾಗಿ ನಿರಾಯಾಸವಾಗಿ ಜಯಶೀಲರಾಗಿ ಪ್ರಥಮ ಪ್ರಜೆಯಾಗಿಬಿಟ್ಟರು ಮಾತ್ರವಲ್ಲದೆ, ಶೇ.70ರಷ್ಟು ಮತಗಳು ಅವರನ್ನು ವರಿಸಿದ್ದವು.
ಸಿಂಪಲ್ ರಾಷ್ಟ್ರಪತಿ
ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಷ್ಟ್ರಪತಿ ಭವನದ ಘನತೆಯನ್ನು ಮುಗಿಲೆತ್ತರಕ್ಕೆ ಒಯ್ದವರಲ್ಲಿ ಪ್ರಣಬ್ ಅವರ ಹೆಸರು ಬಲು ದೊಡ್ಡದು. ಅಬ್ದುಲ್ ಕಲಾಂ ಅವರು ರೈಸಿನಾ ಹಿಲ್ಸ್ನ್ನು ಸಾಮಾನ್ಯರು ತಲುಪುವಂತೆ ಮಾಡಿದ್ದರು. ಅದೇ ಮೇಲ್ಪಂಕ್ತಿಯನ್ನು ದಾದಾ ಮತ್ತಷ್ಟು ವಿಸ್ತರಿಸಿದ್ದರು ಮಾತ್ರವಲ್ಲ, ತಮ್ಮ ಕಾರ್ಯಶೈಲಿಯ ಮೂಲಕ ಅನೇಕ ಶಾಶ್ವತ ಹೆಜ್ಜೆಗುರುತುಗಳನ್ನು ಹಾಕಿ ಹೋಗಿದ್ದಾರೆ ಎಂದೇ ಹೇಳಬಹುದು. ಅನೇಕರು ಹೇಳುವಂತೆ, ರಾಷ್ಟ್ರಪತಿ ಭವನದಲ್ಲಿ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಿದ ಕೀರ್ತಿ ಅವರದ್ದು. ಕೆಲ ಸಂಗತಿಗಳಲ್ಲಿ ಅವಗಣನೆಗೆ ಈಡಾಗಿದ್ದ ಆ ಭವ್ಯ ಕಟ್ಟಡವನ್ನು ನಮ್ಮ ಗಣರಾಜ್ಯದ ಘನತೆಯ ಸಂಕೇತವಾಗಿ ಅವರು ಮರು ರೂಪಿಸಿದರು. ಗಾಂಭೀರ್ಯಕ್ಕೆ ಅನ್ವರ್ಥವಾಗಿದ್ದ ದಾದಾ, ದರ್ಬಾರ್ ಹಾಲ್ಗೆ ಹೊಸ ಮೆರುಗು ತಂದು ಎಲ್ಲ ಕಾರ್ಯಕ್ರಮಗಳೂ ಅಲ್ಲಿಯೇ ಆಗುವಂತೆ ಮಾಡಿದರು. ಧೂಳು ತುಂಬಿದ್ದ ರಾಷ್ಟ್ರಪತಿ ಭವನದ ಲೈಬ್ರರಿಗೆ ಜೀವಕೊಟ್ಟು, ಅಲ್ಲಿ ನಿರ್ಜೀವವಾಗಿದ್ದ ಅಪರೂಪದ ಗ್ರಂಥಗಳನ್ನು ರಕ್ಷಿಸಿದರು. ಜತೆಗೆ, ಅಧ್ಯಯನಾಸಕ್ತರಿಗೆ ಅದರ ಬಾಗಿಲುಗಳನ್ನು ಮುಕ್ತವಾಗಿ ತೆರೆದರು. ಇದರ ಹೊರತಾಗಿ ರಾಷ್ಟ್ರಪತಿಗಳಿಗೆ ಸಂಬೋಧನೆ ಮಾಡಲು ಬಳಸುತ್ತಿದ್ದ ʼಮಹಾಮಹಿಮ್ʼ ಹಾಗೂ ʼಹಿಸ್ ಎಕ್ಸಲೆನ್ಸಿʼ ಎಂಬ ಪದಗಳಿಗೆ ಗೇಟ್ಪಾಸ್ ನೀಡಿದರು. ಇದರ ಜತೆಗೆ, ರಾಷ್ಟ್ರಪತಿ ಸಂಚಾರದ ಕಾರಣಕ್ಕೆ ದಿಲ್ಲಿ ಜನರಿಗೆ ಟ್ರಾಫಿಕ್ ಕಿರಿಕಿರಿ ಆಗಕೂಡದು ಎಂದ್ಹೇಳಿ ಆದಷ್ಟೂ ರಾಷ್ಟ್ರಪತಿ ಭವನದಲ್ಲಿಯೇ ತಮ್ಮ ಕಾರ್ಯುಕ್ರಮಗಳು ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಕೆಲಸ-ಕಾರ್ಯದಲ್ಲಿ ಕೊಂಚ ಬಿಡುವು ಸಿಕ್ಕರೂ ಒಂದೋ ಪುಸ್ತಕ ಓದುತ್ತಿದ್ದರು, ತಪ್ಪಿದರೆ ಹಿಂದೂಸ್ತಾನಿ ಸಂಗೀತಕ್ಕೆ ಕಿವಿಗೊಡುತ್ತಿದ್ದರು. ಮೂಲತಃ ಕೋಲ್ಕತಾದವರಾದ ದಾದಾರಿಗೆ ಹಿಂದೂಸ್ತಾನಿ, ಅದರಲ್ಲೂ ನಿಖಿಲ್ ಬ್ಯಾನರ್ಜಿ ಅವರ ಸಿತಾರ್ ಎಂದರೆ ಬಹಳ ಅಚ್ಚುಮೆಚ್ಚು. ಇನ್ನು ಪಾಠ ಮಾಡುವುದರಲ್ಲಿ ನಮ್ಮ ಕಲಾಂ ಮೇಷ್ಟ್ರು ಎತ್ತಿದ ಕೈ. ಅದೇ ರೀತಿ ಪ್ರಣಬ್ ದಾದಾ ಕೂಡ.. ರಾಷ್ಟ್ರಪತಿ ಅವಧಿ ಇನ್ನೂ ಎರಡು ವರ್ಷ ಇದೆ ಎನ್ನುವಾಗಲೇ ಅವರು ದಿಲ್ಲಿಯ ಸರ್ವೋದಯ ರಾಜೇಂದ್ರ ಪ್ರಸಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ರಾಜಕೀಯದ ಪಾಠ ಮಾಡುತ್ತಿದ್ದರು. ರಾಜ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಐತಿಹಾಸಿಕ, ಅಂದರೆ ಹಳೆಯದಾದ ರಾಜಕೀಯಕ್ಕಿಂತ ವರ್ತಮಾನ ಕಾಲದ ರಾಜಕೀಯವನ್ನು ಬೋಧಿಸಬೇಕು ಎಂದು ಅವರು ಹೇಳುತ್ತಿದ್ದರು.
@PRESIDENTMUKHERJEE@POI13
ಭಾರತವೆಂದರೆ ಉತ್ತರ ಭಾರತವಲ್ಲ
ಅನೇಕ ಕಾರಣಗಳಿಗೆ ಪ್ರಣಬ್ ಭಾರತದ ರಾಜಕಾರಣದಲ್ಲಿ ಬಹು ಮುಖ್ಯರು ಹಾಗೂ ಅಧ್ಯಯನಕ್ಕೂ ಅರ್ಹರು. ನಮ್ಮ ದಕ್ಷಿಣದ ರಾಜ್ಯಗಳ ಅಭಿಮಾನಕ್ಕೆ ಪಾತ್ರರೂ ಹೌದು. ಇಂದಿರಾ ಗಾಂಧಿ ಅವರಿಗೆ ಅತ್ಯಾಪ್ತರಾಗಿದ್ದ ಅವರು, ಅವರ ಪುತ್ರ ರಾಜೀವ್ ಅವರಿಗೆ ಅಪಥ್ಯವಾಗಿದ್ದರು. ಇದು ರಾಜಕೀಯದ ವಿಧಿಲೀಲೆ ಎನ್ನಬಹುದೇನೋ. ಆ ಹೊತ್ತಿನ ಕಾಂಗ್ರೆಸ್ ಭಜನಾ ಮಂಡಳಿಯನ್ನು ಪ್ರಣಬ್ ತದನಂತರದ ಕಾಲದಲ್ಲಿ ಸುಲಭವಾಗಿ ಎದುರಿಸಿದ್ದರು, ತಮ್ಮ ಮಾತಿಗೆ ಸೊಲ್ಲೆತ್ತದಂತೆ ಮಾಡಿದ್ದರು. ಇನ್ನು ಪಿ.ವಿ. ನರಸಿಂಹರಾಯರು ಪ್ರಧಾನಿಯಾಗಿದ್ದ ಕಾಲದಲ್ಲಿ ಅವರನ್ನು ಹೇಗಾದರೂ ಕೆಳಗೆ ದಬ್ಬಬೇಕು ಎಂದು ನಡೆಯುತ್ತಿದ್ದ ಉತ್ತರ ಭಾರತದ ಲಾಬಿಗೆ (ಮುಖ್ಯವಾಗಿ ಅರ್ಜುನ್ ಸಿಂಗ್ ಗ್ಯಾಂಗ್) ಸಡ್ಡು ಹೊಡೆದು, ರಾಯರ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದವರು ಇದೇ ಪ್ರಣಬ್ ದಾದಾ. ಆ ಮೂಲಕ ಅವರು, ಭಾರತವೆಂದರೆ ಉತ್ತರ ಭಾರತವಷ್ಟೇ ಅಲ್ಲ ಎಂಬ ಸಂಗತಿಯನ್ನು ಸ್ವಪಕ್ಷೀಯರಿಗೇ ನೇರವಾಗಿ ಹೇಳಿದ್ದರು, ಅದು ತಿರುಪತಿಯಲ್ಲಿ ನಡೆದ ಎಐಸಿಸಿ ಅಧಿವೇಶನದಲ್ಲಿಯೂ ಧ್ವನಿಸಿತ್ತು ಕೂಡ.
@PRESIDENTMUKHERJEE@POI13
ಸಂಘದ ಸಭೆಯಲ್ಲಿ
ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿಯಾದ ನಂತರ ಅವರು ಪಕ್ಷ ರಾಜಕೀಯವನ್ನು ತಮ್ಮ ಸನಿಹಕ್ಕೂ ಬಿಟ್ಟುಕೊಡಲಿಲ್ಲ ಎಂಬುದು ಎಲ್ಲರೂ ಬಲ್ಲ ಸಂಗತಿಯೇ. ನಾಗಪುರದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಸರ ಸಂಘಚಾಲಕರಾದ ಮೋಹನ್ ಜೀ ಭಾಗ್ವತ್ ಅವರು ಆಹ್ವಾನಿಸಿದ್ದರು. ರಾಷ್ಟ್ರಪತಿಯಂಥ ಹುದ್ದೆ ಅಲಂಕರಿಸಿದ್ದ ನೀವು ಸಂಘದ ಕಾರ್ಯಕ್ರಮಕ್ಕೆ ಹೋಗುವುದೇ ಎಂದು ತೆಗಳುವ ಮೂಲಕ ಅವರನ್ನು ನಾಗಪುರಕ್ಕೆ ಹೋಗದಂತೆ ತಡೆಯುವ ಗಟ್ಟಿ ಪ್ರಯುತ್ನವೂ ನಡೆಯಿತು. ಮೊನ್ನೆ ಕಾಂಗ್ರೆಸ್ ನಾಯಕತ್ವದ ವಿರುದ್ಧ ಪೇಪರ್ ರೆಬಲ್ಗಿರಿ ಮಾಡಿದ ೨೩ ಮಂದಿಯಲ್ಲಿದ್ದ ಕೆಲವರೂ ಇದ್ದರು. ದಾದಾ ಯಾರ ಮಾತನ್ನೂ ಲೆಕ್ಕಿಸಲಿಲ್ಲ. ಸಿಟಿಜನ್ ಮುಖರ್ಜಿಯಾಗಿಯೇ ಅವರು ಅಲ್ಲಿಗೆ ಹೋದರು. ಸಂಘದ ನೆಲದಲ್ಲಿ ನಿಂತೇ, “ನಮ್ಮ ಭಾರತದ ಆತ್ಮ ನೆಲೆಸಿರುವುದೇ ಬಹುತ್ವದಲ್ಲಿ. ದ್ವೇಷ ಮತ್ತು ಅಸಹನೆಯಿಂದ ಮಾತ್ರವೇ ನಮ್ಮ ರಾಷ್ಟ್ರೀಯತೆ ವಿನಾಶವಾಗುತ್ತದೆ” ಎಂದು ನೇರವಾಗಿ ಹೇಳಿಬಿಟ್ಟದ್ದರು. ಸರಿಸುಮಾರು ಐದು ದಶಕಕ್ಕೂ ಹೆಚ್ಚು ಕಾಲ ಸಂಘ ಪರಿವಾರವನ್ನು ವಿರೋಧಿಸಿಕೊಂಡೇ ಬಂದಿದ್ದ ಅವರು, ಆವತ್ತು ನಾಗಪುರದಲ್ಲಿ ನಿಂತು ದೇಶಕ್ಕೆ ಕೊಟ್ಟ ಸಂದೇಶ ಯಾರಿಗೆ ನಾಟಬೇಕೋ, ಯಾರಿಗೆ ತಟ್ಟಬೇಕೋ ಅವರಿಗೆ ಸರಿಯಾಗಿ ನಾಟಿತ್ತು. ಯಾವುದೇ ಒತ್ತಡವನ್ನು ಮೀರಿ ನಿಲ್ಲುವ ಅಗಾಧತೆ ಅವರಲ್ಲಿ ಇತ್ತು ಎಂಬುದನ್ನು ಈ ಘಟನೆ ಸಾರಿ ಹೇಳುತ್ತದೆ.
ಇದಕ್ಕೆ ಪೂರಕವಾಗಿ ಒಂದು ಮಾತನ್ನು ಉಲ್ಲೇಖೀಸಬೇಕು. ಸ್ವಾತಂತ್ರ್ಯದ ನಂತರ ಮುಸ್ಲೀಮ್ ದಾಳಿಕೋರರಿಗೆ ಬಲಿಯಾಗಿದ್ದ ಗುಜರಾತಿನ ಸೋಮನಾಥ ದೇಗುಲವನ್ನು ಮರು ನಿರ್ಮಾಣವಾದ ಕಾಲಘಟ್ಟದಲ್ಲಿ ನಡೆದ ಘಟನೆ ಇದು. ಆಗ ಬಾಬು ರಾಜೇಂದ್ರ ಪ್ರಸಾದರು ರಾಷ್ಟ್ರಪತಿ ಆಗಿದ್ದರು. ಪಂಡಿತ್ ನೆಹರು ಪ್ರಧಾನಮಂತ್ರಿ ಆಗಿದ್ದರು. ಆಗ ಆ ದೇಗುಲದ ನಿರ್ಮಾಣದ ನೇತೃತ್ವ ವಹಿಸಿದ್ದ ಕೆ.ಎಂ.ಮುನ್ಷಿ ಅವರು ದೇವಾಲಯವನ್ನು ಬಾಬು ರಾಜೇಂದ್ರ ಪ್ರಸಾದರಿಂದಲೇ ಉದ್ಘಾಟಿಸಬೇಕೆಂದು ಭಾವಿಸಿದ್ದರು. ಆದರೆ, ಇದಕ್ಕೆ ಪ್ರಧಾನಿ ನೆಹರು ಅವರು ಅಡ್ಡಿಪಡಿಸುವ ಅಥವಾ ರಾಷ್ಟ್ರಪತಿಗಳನ್ನು ತಡೆಯುವ ಪ್ರಯತ್ನ ಮಾಡಬಹುದು ಎಂಬ ಆತಂಕ ಹೊಂದಿದ್ದರು. ಆದರೆ, ಮುನ್ಷಿ ಅವರ ಆಹ್ವಾನವನ್ನು ಸ್ವೀಕರಿಸಿದ ಪ್ರಸಾದರು ಹೀಗೆ ಹೇಳಿದ್ದರು. “ನಾನು ಕೇವಲ ಸೋಮನಾಥ ದೇಗುಲವನ್ನಷ್ಟೇ ಅಲ್ಲ, ಯಾರಾದರೂ ಪ್ರೀತಿಯಿಂದ ಒಂದು ಮಸೀದಿಯನ್ನೋ, ಇನ್ನೊಂದು ಚರ್ಚನ್ನೋ ಉದ್ಘಾಟಿಸಲು ಕರೆದರೆ ಅದನ್ನೂ ನೆರವೇರಿಸುತ್ತೇನೆ. ನಮ್ಮ ದೇಶವು ಅಧಾರ್ಮಿಕವೂ ಅಲ್ಲ, ಧರ್ಮವಿರೋಧಿಯೂ ಅಲ್ಲ. ಇದೇ ನಮ್ಮ ದೇಶದ ಜಾತ್ಯತೀತತೆಯ ನಿಜವಾದ ಬುನಾದಿ..’’
ಅಷ್ಟೇ ಅಲ್ಲ, ಆ ದೇಗುಲವನ್ನು ಉದ್ಘಾಟಿಸಿದ ಮೇಲೆ “ಸೋಮನಾಥ ದೇಗುಲವು ಭಾರತದ ರಾಷ್ಟ್ರೀಯ ನಂಬಿಕೆಯ ಪ್ರತೀಕ’’ ಎಂದು ಕೊಂಡಾಡಿದರು. ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಅವರು ತಮ್ಮ ಆತ್ಮಕಥೆ ʼಮೈ ಕಂಟ್ರಿ ಮೈ ಲೈಫ್ʼ ಕೃತಿಯಲ್ಲಿ ಈ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. ಪ್ರಣಬ್ ಮುಖರ್ಜಿ ಅವರು ನಾಗಪುರಕ್ಕೆ ತೆರಳಿದ ಘಟನೆಯನ್ನು ಅದಕ್ಕೆ ಸಮೀಕರಿಸಬಹುದೇನೋ. ನನಗೆ ಗೊತ್ತಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್.
ಸಿಟಿಜನ್ ಆಗಿಯೇ ಹೇಳುತ್ತೇನೆ ಎಂದಿದ್ದರು..
ಪ್ರಣಬ್ ದಾದಾ ರಾಷ್ಟ್ರಪತಿ ಭವನದಿಂದ ಹೊರ ಬಂದ ಮೇಲೆ ಒಂದು ದಿನ ಅವರು ಎನ್ಡಿಟಿವಿ ಮುಂದೆ ಮಾತನಾಡಿದ್ದರು. ಆವತ್ತಿನ ಅವರ ಮಾತುಗಳನ್ನು ಪ್ರತಿಯೊಬ್ಬರೂ ಕೇಳಲೇಬೇಕು. ಆಗಷ್ಟೇ ರಾಷ್ಟ್ರಪತಿಗಿರಿಯಿಂದ ನಿರ್ಗಮಿಸಿದ್ದ ಅವರು, ಅಂದು ಹೇಳಿದ ಮಾತುಗಳನ್ನು ಕ್ರಿಯಾಶೀಲ ರಾಜಕಾರಣಿಗಳೇ ಬರೀ ಕನವರಿಸಲಿಕ್ಕೂ ಭಯಪಡುತ್ತಾರೆ. ಆ ವಾಹಿನಿಯ ನಿರೂಪಕಿ ಪ್ರಶ್ನೆ ಕೇಳಿದ್ದರು. “ಸದ್ಯದ ನಮ್ಮ ದೇಶದ ರಾಜಕೀಯ ಪರಿಸ್ಥಿತಿಯ ಬಗ್ಗೆ ತಮ್ಮ ಅನಿಸಿಕೆ ಏನು?” ಅದಕ್ಕೆ ಪ್ರಣಬ್ ಅವರು ಕೊಟ್ಟ ಉತ್ತರ ಹೀಗಿತ್ತು.
“ಈ ಶ್ರೇಷ್ಠ ದೇಶದ ಒಬ್ಬ ಪ್ರಜೆಯಾಗಿ ಈ ಮಾತನ್ನು ಹೇಳುತ್ತಿದ್ದೇನೆ. ಯಾವುದೇ ರಾಜಕೀಯ ಜಿಜ್ಞಾಸೆ ಅಥವಾ ಪೂರ್ವಗ್ರಹಕ್ಕೆ ಈಡಾಗದೇ…” ಎಂದು ಮಾತು ಶುರು ಮಾಡಿದ್ದರು. ಅದರಲ್ಲಿ ಕಾಂಗ್ರೆಸ್ ಬಗ್ಗೆಯೂ ಹೇಳಿದ್ದರು. ಬಿಜೆಪಿ ಬಗ್ಗೆಯೂ ಮಾತನಾಡಿದ್ದರು. ಜತೆಗೆ, ತಮ್ಮ ನೆಚ್ಚಿನ ನಾಯಕಿ ಆಗಿದ್ದ ಇಂದಿರಾ ಗಾಂಧಿ ಬಗ್ಗೆ, ಮೋದಿ ಕುರಿತೂ.. ಎಲ್ಲಕ್ಕಿಂತ ಮಿಗಿಲಾಗಿ ಮನಮೋಹನ್ ಸಿಂಗ್ ಬಗ್ಗೆ ದೀರ್ಘವಾಗಿ…
ನನಗೆ ತೀವ್ರವಾಗಿ ಅನಿಸಿದ್ದೆಂದರೆ, ಈ ಸಂದರ್ಶನದ ಬಗ್ಗೆಯೇ ಬರೆಯಬೇಕೆನಿಸಿತು. ಆದರೆ, ಈ ಸಂದರ್ಶನವನ್ನು ಹಾಗೆಯೇ, ಪ್ರಣಬ್ ದಾದಾರ ಮಾತುಗಳಲ್ಲಿಯೇ ಕೇಳುವುದರಲ್ಲಿ ಒಂದು ವಿಶೇಷ ಸ್ವಾದವಿದೆ. ಹೀಗಾಗಿ ನಾನು ಆ ಸಂದರ್ಶನದ #ndtv ಲಿಂಕ್ ಹಾಕಿದ್ದೇನೆ.
ಕೊನೆಗೊಂದೇ ಮಾತು
2010ರಲ್ಲಿ ನಾನು ʼಹೊಸ ದಿಗಂತʼ ಪತ್ರಿಕೆಯ ಸುದ್ದಿ ಸಂಪಾದಕನಾಗಿದ್ದೆ. ಆಗ ಪ್ರಣಬ್ ಅವರು ಮನಮೋಹನ್ ಸಿಂಗ್ ಸರಕಾರದಲ್ಲಿ ವಿತ್ತಮಂತ್ರಿ ಆಗಿದ್ದರು. ಅದೇ ವರ್ಷದ ಫೆಬ್ರವರಿ ೨೬ರಂದು ಅವರು ಕೇಂದ್ರ ಬಜೆಟ್ ಮಂಡಿಸಿದ್ದರು. ಆ ಬಜೆಟ್ನಲ್ಲಿ ಅವರು ಕೆಲ ವಸ್ತುಗಳ ಬೆಲೆ ಹೆಚ್ಚಿಸಿದ್ದರು, ಕೆಲವುಗಳ ಬೆಲೆ ಇಳಿಸಿದ್ದರು. ಆದರೆ, ಪೆಟ್ರೋಲ್ ಬೆಲೆಯನ್ನು ಪ್ರತೀ ಲೀಟರಿಗೆ 2.67 ರೂ. ಹಾಗೂ ಡೀಸೆಲ್ಗೆ 2.58 ರೂ.ನಂತೆ ಏರಿಕೆ ಮಾಡಿದ್ದರು. ಈ ಏರಿಕೆಯ ಶಾಕ್ ಆವತ್ತಿನ ದಿನಕ್ಕೆ ದೊಡ್ಡದೇ ಆಗಿತ್ತು. ಅದಕ್ಕೆ ಪತ್ರಿಕೆಯ ಮುಖಪುಟದಲ್ಲಿ ನಾನು ಕೊಟ್ಟ ಹೆಡ್ಲೈನ್ ಹೀಗಿತ್ತು. “ದೇವರೇ ಗತಿ! ಪ್ರಣಬ್ ಹೀಗೆ ಮಾಡಬಾರದಿತ್ತು!” ಆದರೆ, ಇವತ್ತು ಓಪೆನ್ ಮಾರ್ಕೆಟ್ ನೆಪದಲ್ಲಿ ನಿತ್ಯವೂ ತೈಲಬೆಲೆ ತುಟ್ಟಿಯಾಗುತ್ತಿದೆ! ಆವತ್ತಿನ ಆ ಹೆಡ್ಡಿಂಗಿನ ಬಗ್ಗೆ ನನಗೆ ವಿಷಾದವಿದೆ
ಆದರೆ, ಪ್ರಣಬ್ ಅತ್ಯುತ್ತಮ ವಿದೇಶ ಸಚಿವರು, ವಿತ್ತ ಸಚಿವರೂ ಆಗಿದ್ದರು ಮಾತ್ರವಲ್ಲದೆ, ಯಾವುದೇ ಕೆಲಸವಿದ್ದರೂ ಅದನ್ನು ತಮ್ಮ ವ್ಯಕ್ತಿತ್ವದಷ್ಟೇ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ವ್ಯಕ್ತಿಗಳನ್ನು ಅರಿಯುವುದರಲ್ಲಿ, ಲೀಡರುಗಳನ್ನು ಅಳೆಯುವುದರಲ್ಲಿ ಅವರು ನಿಸ್ಸೀಮರಾಗಿದ್ದರು. ಅವರು ಈ ಕೊವಿಡ್ ಸಂಕಷ್ಟ ಕಾಲದಲ್ಲಿ ನಿರ್ಗಮಿಸಿದ್ದಾರೆ. ಭಾರತ ಓರ್ವ ಸರ್ವಶ್ರೇಷ್ಠ ಮಾರ್ಗದರ್ಶಕನನ್ನು ಕಳೆದುಕೊಂಡಿದೆ.
***