Ground Report
ಇಪ್ಪತ್ತು ವರ್ಷಗಳ ಹಿಂದೆ ಮುಚ್ಚಲ್ಪಟ್ಟ ಕೆಜಿಎಫ್ ಚಿನ್ನದ ಗ?ಣಿಗಳ ವಿಷಯದಲ್ಲಿ ನಡೆದ ರಾಜಕೀಯ ಮೇಲಾಟ ಅಷ್ಟಿಷ್ಟಲ್ಲ. 2013ರಲ್ಲಿ ಅದು ಪುನಾರಂಭ ಆಗಬಹುದು ಎಂಬ ನಿರೀಕ್ಷೆ ಇತ್ತು. ಆಗಲಿಲ್ಲ. ಮತ್ತೆ ಈಗ ಇನ್ನೊಂದು ಸುದ್ದಿ ಬಂದಿದೆ. ಕೇಂದ್ರ ಸರಕಾರ ಗಣಿಗಾರಿಕೆ ಬಗ್ಗೆ ಮಾತನಾಡಿದೆಯಲ್ಲದೆ ಆ ಗಣಿಗಳ ಜಾಗದಲ್ಲಿ ಕೈಗಾರಿಕಾ ಪಾರ್ಕು ಮಾಡುವ ಹೇಳಿಕೆಯನ್ನೂ ಕೊಟ್ಟಿದೆ. ಏನಿದರ ಅಸಲಿ ಕಥೆ? ಈ ಬಗ್ಗೆ ಸಿಕೆನ್ಯೂಸ್ ನೌ ವಿಶ್ಲೇ಼ಷಣಾತ್ಮಕ ವರದಿಗಳನ್ನು ಪ್ರಕಟಿಸಲಿದೆ. ಅದರ ಮೊದಲ ಭಾಗವೇ “ಚಿನ್ನ ಖಾಲಿಯಾದರೂ ಪರವಾಗಿಲ್ಲ!; ಕೆಜಿಎಫ್ ಎಂದರೆ ಎಲ್ಲರಿಗೂ ಇಷ್ಟ!! ಏಕೆಂದರೆ…?”
ನ್ಯೂ ಗೋಲ್ಕೊಂಡ ಶಾಫ್ಟ್ʼನ ಒಂದು ದೃಶ್ಯ.
CKPHOTOGRAPHY
ಇದು ಕೆಜಿಎಫ್!
ಈ ಹೆಸರಿಗೇ ಒಂದು ತಾಕತ್ತು ಇದೆ.
ಸಿನಿಮಾ ಮಂದಿಗೆ ಬಾಕ್ಸಾಫೀಸಿನಲ್ಲಿ ಕನಕವರ್ಷ ಮಾಡಿಸುವ ಹಣದ ಗಣಿ. ರಾಜಕಾರಣಿಗಳ ಪಾಲಿಗೆ ವೋಟುಗಳ ಗಣಿ. ಕಳ್ಳಕಾಕರಿಗೆ ಬೇಕೆಂದಾಗ ಕಾಸಿನ ಮಳೆ ಸುರಿಸುವ ಅದೃಷ್ಟದ ಗಣಿ!!
ಸುಳ್ಳುಗಳ ಸರಮಾಲೆಯ ನಡುವೆ ಪಾಳುಬಿದ್ದಿರುವ ಗಣಿಗಳ ಮೇಲೆ ಕೊಳಗೇರಿ ಸಸ್ಯಗಳ ಫಸಲು ಬೆಳೆದಂತೆ, ನಮ್ಮ ರಾಜಕಾರಣಿಗಳಂತೂ ಸುಳ್ಳುಗಳ ಕಥೆ ಕಟ್ಟಿ ಪ್ರತಿ ಚುನಾವಣೆಯಲ್ಲೂ ಆ ಗಣಿಗಳ ಜತೆ ಜೀವಜೀವದ ನಂಟು ಹೊಂದಿರುವ ಮುಗ್ಧ ಜನರನ್ನು ಯಾಮಾರಿಸಿ ಭರ್ಜರಿ ಮತಫಸಲು ತೆಗೆಯುತ್ತಿದ್ದಾರೆ. ಇದು ಆ ಗಣಿಯ ಈಗಿನ ಕರುಣಾಜನಕ ಕಥೆ. ಇನ್ನು ವರ್ಷಾನುಗಟ್ಟಲೆ ಗಣಿಗಳ ಆಳದಲ್ಲಿ ಕೆಲಸ ಮಾಡಿ ಬಸವಳಿದ ಕಾರ್ಮಿಕರು ಇಪ್ಪತ್ತು ವರ್ಷವಾದರೂ ಸುಳ್ಳುಗಳ ಸುಳಿಯಲ್ಲಿ ಸಿಕ್ಕಿ ವಿಲವಿಲನೇ ಒದ್ದಾಡುತ್ತಿದ್ದಾರೆ.
ಸ್ವಾತಂತ್ರ್ಯ ಬಂದ ಮೇಲೆ ಮತ್ತು ಅದಕ್ಕೂ ಮೊದಲು ಕೆಜಿಎಫ್ ಅಕ್ಷರಶಃ ಬೆಳಗಿತ್ತು. ಅದನ್ನು ಮಿನಿ ಇಂಗ್ಲೆಂಡ್ ಅಂತ ಕರೆಯಲಾಗುತ್ತಿತ್ತು. ಆವತ್ತಿನ ಬಿಳಿ ಗಣಿಧಣಿಗಳ ಸಾರೋಟುಗಳು, ವಿಂಟೇಜ್ ಕಾರುಗಳು ಸಂಚರಿಸಿದ ಕುರುಹುಗಳಿವೆ. ಕೆಲ ಇತಿಹಾಸಕಾರರು ಹೇಳುವ ಹಾಗೆ, ಆವತ್ತಿನ ದಿನಗಳಲ್ಲಿ ಇದೇ ಕೆಜಿಎಫ್ ಚಿನ್ನದ ಹೊಳಪಿನಿಂದ ವಿಜಯನಗರ ಸಾಮ್ರಾಜ್ಯದಂತೆ ಕಂಗೊಳಿಸಿತ್ತು! ಇಡೀ ಮೈಸೂರು ರಾಜ್ಯದಲ್ಲೇ ಏಕೆ? ಇಡೀ ದೇಶದಲ್ಲೇ ಕೆಜಿಎಫ್ ಎಂಬ ಹೆಸರಿಗೆ ಒಂದು ಸಮ್ಮೋಹಕ ಶಕ್ತಿ ಇತ್ತು. ದೇಶದ ಮೂಲೆಮೂಲೆಯಿಂದ ಇಲ್ಲಿಗೆ ಕೆಲಸ ಅರಸಿ ಬರುತ್ತಿದ್ದ ಕಾಲವೂ ಇತ್ತು. ಕಾಲ ಕಳೆದಂತೆ ಕೆಜಿಎಫ್ ಕಳೆಗೆ ಕೊಳ್ಳಿಬಿತ್ತು. ಮೊದಲೇ ಬ್ರಿಟೀಷರು ದುರಾಸೆಗೆ ಬಿದ್ದು ಗಣಿಗಳ ಕಾರ್ಮಿಕರ ನೆತ್ತರು ಹರಿಸಿದ್ದರು. ಈ ಗಣಿಗಳ ಬಗ್ಗೆ ತೀವ್ರ ಅಧ್ಯಯನ ಮಾಡಿರುವ ಹಿರಿಯ ಗಣಿ ವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಅವರು ಹೇಳುವಂತೆ, ಬ್ರಿಟೀಷರು ಒಟ್ಟು 650 ಟನ್ ಚಿನ್ನವನ್ನು ಕೊಳ್ಳೆ ಹೊಡೆದರು. ಆಮೇಲೆ ಬಂದ ಸ್ವತಂತ್ರ ಭಾರತ ಸರಕಾರವು ಗಣಿಗಳ ಮೇಲೆ ಇನ್ನಿಲ್ಲದ ಪ್ರೀತಿ ತೋರಿತಾದರೂ, ಅದಕ್ಷತೆ ಮತ್ತು ದೂರದೃಷ್ಟಿ ಇಲ್ಲದ ನೀತಿಗಳಿಂದಾಗಿ ಈ ಗಣಿಗಳು 2001ರಲ್ಲಿ ಸತ್ತುಹೋದವು! ಅಂದರೆ, ಮುಚ್ಚಲ್ಪಟ್ಟವು.
ಮತ್ತೊಮ್ಮೆ ನಾಟಕ
ಇಪ್ಪತ್ತು ವರ್ಷಗಳ ಹಿಂದೆ ಬಾಗಿಲೆಳೆದುಕೊಂಡ ಚಿನ್ನದ ಗಣಿಗಳನ್ನು ಮತ್ತೆ ತೆರೆಸಿ ಕಾರ್ಮಿಕರಿಗೆ ನ್ಯಾಯ ಕೊಡಿಸುವುದಾಗಿ ಹೇಳಲಾಗುತ್ತಿರುವ ಬಣ್ಣಬಣ್ಣದ ಸುಳ್ಳನ ಕಥೆಗಳು ನಿಲ್ಲುವ ಹಾಗೆ ಕಾಣುತ್ತಿಲ್ಲ. ಕಾರ್ಮಿಕರಿಗೆ ಇನ್ನೂ ಗಣಿ ಆಡಳಿತದಿಂದ ಬರುವ ಬಾಕಿ ಹಾಗೆಯೇ ಇದೆ. 2013ರಲ್ಲಿ ಆಸ್ಟ್ರೇಲಿಯಾ ಮೂಲದ ಕಂಪನಿಯೊಂದು ಗಣಿಗಾರಿಕೆ ಮಾಡುವುದಾಗಿ ಮುಂದೆ ಬಂದಿತು. ಆ ಕಂಪನಿಯು ಅತ್ಯಂತ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿತು. ಆದರೆ, 2005ರಲ್ಲಿ ಕೆಜಿಎಫ್‌ನಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಗಣಿಗಳಿಗೆ ನೀರು ನುಗ್ಗಿ ಅವುಗಳ ಒಳರಚನೆಯೇ ಸಂಪೂರ್ಣ ಹಾಳುಬಿದ್ದು ಈಗಲೂ ಅವುಗಳಲ್ಲಿ ಅರ್ಧ ಟಿಎಂಸಿಗೂ ಹೆಚ್ಚು ನೀರು ತುಂಬಿದೆ. ಹೀಗಾಗಿ ಆ ಗಣಿಗಳಲ್ಲಿ ಮತ್ತೆ ಗಣಿಗಾರಿಕೆ ನಡೆಸುವ ಸಾಧ್ಯತೆ ಇಲ್ಲವೇ ಇಲ್ಲ. ಇನ್ನು ಓಪೆನ್‌ವೆಲ್ ಗಣಿಗಾರಿಕೆ ಮಾಡಲೂ ಅಸಾಧ್ಯ. ಏಕೆಂದರೆ, ಹಾಗೆ ಮಾಡಬೇಕಾದರೆ ಇಡೀ ಕೆಜಿಎಫ್ ಪಟ್ಟಣವನ್ನೇ ಬೇರೆಗೆ ಶಿಫ್ಟ್ ಮಾಡಬೇಕಾಗುತ್ತದೆ. ಅದು ಕಾರ್ಯಸಾಧುವಲ್ಲ. ಅಷ್ಟು ಖರ್ಚು ಮಾಡಿದರೆ ವರ್ಕೌಟ್ ಆಗುವಷ್ಟು ಚಿನ್ನವು ಅಲ್ಲಿ ಸಿಗಲಾರದು. ಹೀಗಾಗಿ ಆಸ್ಟ್ರೇಲಿಯಾ ಕಂಪನಿ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ ಹೋಯಿತು ಎನ್ನುತ್ತಾರೆ ಡಾ.ವೆಂಕಟಸ್ವಾಮಿ.
ಡಾ.ಎಂ.ವೆಂಕಟಸ್ವಾಮಿ
ಇನ್ನು ಈ ಆಸ್ಟ್ರೇಲಿಯಾ ಕಂಪನಿಯ ಹೆಸರೇಳಿಕೊಂಡೇ ರಾಜಕಾರಣಿಗಳು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಸಖತ್ತಾಗಿ ಮತಬೇಟೆ ನಡೆಸಿದ್ದರು. ಜನರೋ ತಮಗಾಗುತ್ತಿರುವ ಅನ್ಯಾಯವನ್ನು ಅವಗಾಹನೆಗೆ ತೆಗೆದುಕೊಳ್ಳದೇ ಸುಳ್ಳಿನಕಥೆ ಕಟ್ಟಿದ ನಾಯಕರಿಗೆ ವೋಟು ಹಾಕಿ ತಮಗೆ ತಾವೇ ಮೋಸ ಮಾಡಿಕೊಂಡಿದ್ದರು.
ಈಗ ಇನ್ನೊಂದು ಡ್ರಾಮಾ
ಇತ್ತೀಚೆಗೆ ಕೇಂದ್ರದ ಗಣಿ ಸಚಿವ ಪ್ರಹ್ಲಾದ ಜೋಶಿ ಈಚೆಗೆ ಬೆಂಗಳೂರಿನಲ್ಲಿ ಒಂದು ಹೇಳಿಕೆ ನೀಡಿ ಇನ್ನೊಂದು ನಾಟಕದ ಅಂಕಪರಧೆ ತೆರೆಯಲು ನಾಂದಿ ಹಾಡಿದರು. ಹಿಂದೆ ಕೋಲಾರ ಕ್ಷೇತ್ರವನ್ನು ಲೋಕಸಭೆಯಲ್ಲಿ ಸತತ 7 ಅವಧಿಗೆ ಪ್ರತಿನಿಧಿಸಿದ್ದ ಕೆ.ಎಚ್. ಮುನಿಯಪ್ಪ ಕೂಡ ಗಣಿಫಸಲನ್ನು ಪೊಗದಸ್ತಾಗಿ ತೆಗೆದುಕೊಂಡವರೇ. ಗಣಿ ಪುನಾರಂಭದ ಬಗ್ಗೆ ಅವರಷ್ಟು ಭರವಸೆ(!)ಗಳನ್ನು ಬೇರಾರೂ ಕೊಟ್ಟಿದ್ದೇ ಇಲ್ಲ. ಜತೆಗೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರಿಯನ್ನು ವಿಧಾನಸಭೆಗೆ ಕಳಿಸುವಾಗಲೂ ಅವರು ಮತ್ತೆಮತ್ತೆ ಗಣಿ ವಿಷಯವನ್ನೇ ಬಳಸಿಕೊಂಡು ನತದೃಷ್ಟ ಕಾರ್ಮಿಕರಿಗೆ ಆಸೆಯ ಅಂಬರ ತೋರಿಸಿ ಯಶಸ್ವಿಯೂ ಆದರು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿಅವರ ಲೆಕ್ಕ ಕೈಕೊಟ್ಟಿತು. ಇದೇ ಗಣಿಗಳನ್ನು ಕೆದಕಿದರೂ ಅವರಿಗೆ ಫಲ ಸಿಗದೇ ಸೋತರು. ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಕೊಟ್ಟ ಹೊಸ ಲೆಕ್ಕಕ್ಕೆ ಜನ ಮಾರುಹೋದರು. ಮಾತ್ರವಲ್ಲ, “ನಾನು ಗೆದ್ದರೆ ನರೇಂದ್ರ ಮೋದಿ ಗೆದ್ದ ಹಾಗೆ. ಅವರಿಂದಲೇ ಗಣಿಗಳನ್ನು ಮರು ಆರಂಭ ಮಾಡಿಸುತ್ತೇನೆ” ಎಂದು ಭಾಷಣ ಮಾಡಿದ್ದರು ಮುನಿಸ್ವಾಮಿ. ಜನ ನಂಬಿದರು, ಮುನಿಯಪ್ಪ ಸೋತು ಮುನಿಸ್ವಾಮಿ ಗೆದ್ದರು!
ಕೆ.ಎಚ್. ಮುನಿಯಪ್ಪ
curtassy: khmuniyappa.khm
ಈಗ ಪ್ರಹ್ಲಾದ ಜೋಶಿ ಬಿಟ್ಟ ಗಣಿಗಳ ರೀ ಓಪೆನಿಂಗ್ ಸುದ್ದಿ ಕೋಲಾರ ಜಿಲ್ಲೆಯಲ್ಲಿ ಭರ್ಜರಿಯಾಗಿಯೇ ಓಡುತ್ತಿದೆ. ಸಂಸದ ಮುನಿಸ್ವಾಮಿ ಅಂತೂ ಹೋದ ಕಡೆ ಬಂದ ಕಡೆಯಲ್ಲ ಅದನ್ನು ಹೇಳಿಕೊಂಡೇ ತಿರುಗುತ್ತಿದ್ದಾರೆ. ಇಷ್ಟಕ್ಕೂ ಕೇಂದ್ರ ಮಂತ್ರಿ ಹೇಳಿರುವ ಪ್ರಕಾರ, ಸದ್ಯಕ್ಕೆ ಕೆಜಿಎಫ್ ಗಣಿಗಳು ಅಂದರೆ ಭಾರತ್ ಗೋಲ್ಡ್ ಮೈನ್ಸ್ (ಬಿಜಿಎಂಎಲ್) ಬಳಿ ಈಗ 10ರಿಂದ 12 ಸಾವಿರ ಎಕರೆಗೂ ಹೆಚ್ಚು ಭೂಮಿ ಇದೆ. ಅಲ್ಲಿ ಗಣಿಗಾರಿಕೆ ನಡೆಯದ ಜಾಗದಲ್ಲಿ ಗಣಿಗಾರಿಕೆ ಆರಂಭಿಸುವುದು ಅಥವಾ ಅಲ್ಲಿ ಚಿನ್ನ ಖಾಲಿಯಾಗಿದ್ದರೆ ಅದೇ ಪ್ರದೇಶವನ್ನು ಕೈಗಾರಿಕಾ ಪಾರ್ಕ್ ಮಾಡುವ ಉದ್ದೇಶವಿದೆ ಎಂದಿದ್ದರು. ಯಾವುದಕ್ಕೂ ಆರು ತಿಂಗಳಲ್ಲಿ ವರದಿ ಬರಲಿದೆ. ಅದನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳಿದ್ದರು. ಹಾಗೆ ನೋಡಿದರೆ, ಕೆಜಿಎಫ್‌ನಲ್ಲಿ ಚಿನ್ನ ಪೂರ್ಣ ಖಾಲಿಯಾಗಿದೆ, ಬಿಟ್ಟಜಾಗದಲ್ಲಿ ಚಿನ್ನದ ಲಭ್ಯತೆ ಇಲ್ಲ. ಹೀಗಾಗಿ ಮತ್ತೆ ಗಣಿಗಾರಿಕೆ ಎಂಬುದು ವ್ಯರ್ಥ ಕಸರತ್ತು. ಉಳಿದಂತೆ ಕೈಗಾರಿಕಾ ಪಾರ್ಕ್ ಸ್ಥಾಪನೆ ಉತ್ತಮ ಯೋಚನೆ ಎನ್ನುತ್ತಾರೆ ತಜ್ಞರು.
ಕೆಜಿಎಫ್ ಗಣಿ ಕುರಿತ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಸಚಿವ ಪ್ರಹ್ಲಾದ ಜೋಶಿ.
ಇನ್ನು 2013ರಲ್ಲಿ ಗಣಿಗಾರಿಕೆ ನಡೆಸುವ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಕೊನೆಗೆ ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಇಟ್ಟ ಹೆಜ್ಜೆಗಳು ಈಗಲೂ ನಿಗೂಢವೇ. ಯುಪಿಎ-2 ಸರಕಾರದಲ್ಲಿ ಮಂತ್ರಿಯಾಗಿದ್ದ ಕೆ.ಎಚ್. ಮುನಿಯಪ್ಪ ಮಾಡಿದ್ದಕ್ಕಿಂತ ಮಾತನಾಡಿದ್ದೇ ಜಾಸ್ತಿ. ಆಗ ಮಾಧ್ಯಮಗಳಲ್ಲಿ ಗಣಿಗಳು ಒಂದಿಷ್ಟು ಸುದ್ದಿಯಾಗಿದ್ದು ಬಿಟ್ಟರೆ ಬೇರೆ ಯಾವ ಉಪಯೋಗವೂ ಆಗಲಿಲ್ಲ ಎನ್ನುತ್ತಾರೆ ಕೆಜಿಎಫ್ ನಿವಾಸಿ ನರಸಿಂಹ ಮೂರ್ತಿ.
ತುಕ್ಕು ಹಿಡಿದಿರುವ ನಂದಿದುರ್ಗದ ಕಾರ್ಯಾಗಾರ.
CKPHOTOGRAPHY
ಈಗ ಹೇಗಿದೆ ಕೆಜಿಎಫ್?
ಮಿನಿ ಇಂಗ್ಲೆಂಡ್ ಆಗಿದ್ದ ಕೆಜಿಎಫ್ ಇದೀಗ ಸಾವಿನ ಮನೆಯಂತಿದೆ. ಏಕೆಂದರೆ, ಸುತ್ತ ಹರಡಿಕೊಂಡಿರುವ ಸೈನೇಡ್ ದಿಬ್ಬಗಳ ನಡುವೆಯೇ ಜನ ಬದುಕುತ್ತಿದ್ದಾರೆ. ಕಾಮಧೇನುವಿನಂತೆ ಬಂದವರಿಗೆಲ್ಲ ಬದುಕುಕೊಟ್ಟಿದ್ದ ಪಟ್ಟಣ ಪಾಳುಬಿದ್ದ, ತುಕ್ಕುಹಿಡಿದ ಪರಿಕರಗಳ ಹಾಳುಕೊಂಪೆಯಾಗಿದೆ. ಅದರ ಜತೆಗೆ, ರಾಜಕೀಯ ಹಿತಾಸಕ್ತಿಗಳು ಕಾರ್ಮಿಕರ ಸಂಘಟನೆಗಳಲ್ಲಿ ಹುಳಿಹಿಂಡಿ ಹದಿನೆಂಟಕ್ಕೂ ಹೆಚ್ಚು ಹೋಳಾಗುವಂತೆ ಮಾಡಿವೆ. ತಮ್ಮ ಕಣ್ಣೆದುರೇ ತುಕ್ಕುಹಿಡಿದು ನಾಶವಾಗುತ್ತಿರುವ ಗಣಿಯಂತ್ರಗಳನ್ನು ನಿತ್ಯವೂ ನೋಡುತ್ತಾ ಕಣ್ಣೀರಿಡುತ್ತಿದ್ದಾರೆ ಕಾರ್ಮಿಕರು. ಇದು ನಮ್ಮ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿರುವುದಕ್ಕೆ ಸಾಕ್ಷಿಯಲ್ಲದೇ ಮತ್ತೇನೂ ಅಲ್ಲ.
ಇನ್ನು ಕೆಜಿಎಫ್ ಹೇಗಿದೆ ಅಂತೀರಾ? ವರ್ತಮಾನ ಕಾಲದ ಕಿಷ್ಕಿಂಧೆ. ಹತ್ತು ಹಲವು ಬೀದಿಗಳಲ್ಲಿ ಸುತ್ತು ಹಾಕಿದ ಸಿಕೆನ್ಯೂಸ್ ನೌ ಕಣ್ಣಿಗೆ ಅನೇಕ ವಿದ್ರಾವಕ ದೃಶ್ಯಗಳು ಕಂಡವು. ಸೈನೇಡ್ ದಿಬ್ಬಗಳ ಪಕ್ಕದಲ್ಲಿ ಕಾರ್ಮಿಕರು ಸವೆಸುತ್ತಿರುವ ಜೀವನ ಅಯೋಮಯವಾಗಿದೆ. ಗಣಿಗಳನ್ನು ಮುಚ್ಚಿದ ಮೇಲೆ ನಿತ್ಯವೂ ರೈಲು ಮೂಲಕ ಬೆಂಗಳೂರಿಗೆ ಬಂದು ಜೀವನೋಪಾಯ ಕಂಡುಕೊಂಡಿದ್ದ ಇವರೆಲ್ಲ ಕೋವಿಡ್ ಕಾಲದಲ್ಲಿ ಮನೆಯಲ್ಲೇ ಕೆಲಸವಿಲ್ಲದೆ ಉಳಿದರಲ್ಲದೆ ಹಸಿವಿನಿಂದಲೂ ಬಸವಳಿದಿದ್ದರು. ಇನ್ನು ಮನೆಗಳು ಹೇಗಿವೆ ಅಂತೀರಾ? ಆ ಮನೆಗಳಲ್ಲಿ ಒಂದು ಮಗು ಜತೆ ಪತಿ-ಪತ್ನಿ ಮಲಗಲಿಕ್ಕೇ ಜಾಗ ಸಾಲದು. ಮೂಲಸೌಕರ್ಯಗಳ ಮಾತಂತೂ ದೂರ. ಇಪ್ಪತ್ತು ವರ್ಷಗಳಿಂದ ಗಣಿಗಳ ಶಾಫ್ಟ್‌ಗಳಲ್ಲಿ ತುಕ್ಕುಹಿಡಿದು ಕೊಳೆಯುತ್ತಿರುವ ಯಂತ್ರಗಳನ್ನು ನೋಡಿಕೊಂಡೇ ಕಾರ್ಮಿಕರು ಬದುಕು ಸವೆಸುತ್ತಿದ್ದಾರೆ.
ಗಣಿ ಕಾರ್ಮಿಕರ ಇಕ್ಕಟ್ಟಿನ ಮನೆಗಳು..
ಕಾರ್ಮಿಕರು ಮತ್ತು ಕಣ್ಣೀರು
ಕೆಜಿಎಫ್ ಗಣಿಗಳ ಕಾರ್ಮಿಕರು ಅಕ್ಷರಶಃ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಅಲ್ಲಿ ಕೆಲಸವಿಲ್ಲ, ಈ ನೆಲ ಬಿಟ್ಟುಹೋಗಲು ಅವರಿಗೆ ಆಗುತ್ತಿಲ್ಲ. ಕೋವಿಡ್ ಬಂದು ಬೆಂಗಳೂರನ್ನೂ ದೂರ ಇಟ್ಟಿದೆ. 2001ರಲ್ಲಿ ಗಣಿಗಳನ್ನು ಮುಚ್ಚಿದಾಗ ಕೊಟ್ಟಿದ್ದ ಭರವಸೆಗಳು ಸೈನೇಡ್ ದಿಬ್ಬಗಳ ನಡುವೆ ಏದುಸಿರೆಳೆಯುತ್ತಿವೆ. ಆಗ 3,500 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅತ್ಯಂತ ನಯವಾದ ಮಾತುಗಳನ್ನು ಹೇಳುತ್ತಲೇ ಅವರನ್ನು ಮನೆಗೆ ಕಳಿಸಲಾಯಿತು. ಆಮೇಲೆ ನಡೆದಿದ್ದು ಅಷ್ಟೇ ನಯವಂಚಕ ರಾಜಕೀಯ. ಅಷ್ಟೂ ಮಂದಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರೆ ಕಷ್ಟವಾದೀತು ಎಂಬ ಭಯದಿಂದ ಅವರೆಲ್ಲರನ್ನೂ ಪಾರ್ಟಿವೈಸ್ ಒಡೆದು ಹಾಕಲಾಯಿತು.
ಕೆಜಿಎಫ್ ಪಟ್ಟಣದ ಸೈನೇಡ್ ದಿಬ್ಬ.
CKPHOTOGRAPHY
ಭೂಮಿ ಮೇಲೆ ಕಣ್ಣು
2013ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ಕೂಡಲೇ ರಿಯಲ್ ಎಸ್ಟೇಟ್ ಕುಳಗಳು ಕೆಜಿಎಫ್ ಮೇಲೆ ಮುಗಿಬಿದ್ದಿದ್ದರು. ಬೆಂಗಳೂರಿಗೆ 95 ಕಿ.ಮೀ ದೂರವಷ್ಟೇ. ಜತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹತ್ತಿರವೂ ಹೌದು. ನರಸಾಪುರ ಕೈಗಾರಿಕಾ ಪ್ರದೇಶ ಅತ್ಯಂತ ಸನಿಹದಲ್ಲಿದೆ. ಇದೆಲ್ಲಕ್ಕೂ ಮೀರಿ ಬೆಂಗಳೂರು- ಚೆನ್ನೈ ನಡುವಿನ ಅತಿದೊಡ್ಡ ರೈಲು ಜಂಕ್ಷನ್ ಬಂಗಾರಪೇಟೆ ಕೂಡ ಕೆಜಿಎಫ್‌ಗೆ ಹೊಂದಿಕೊಂಡೇ ಇದೆ. ಇಷ್ಟು ಸಾಕು ಕೆಜಿಎಫ್ ಭೂಮಿಗೆ ಬೇಡಿಕೆ ಹೆಚ್ಚಲು. ಸದ್ಯಕ್ಕೆ ಬಿಜಿಎಂಎಲ್ ವಶದಲ್ಲಿರುವ 12,500 ಎಕರೆ ಭೂಮಿಗೆ ಭೀತಿ ಶುರುವಾಗಿರುವುದೇ ಇಲ್ಲಿ. ಈಗಾಗಲೇ ಚಿಕ್ಕಚಿಕ್ಕ ಪ್ರಮಾಣದಲ್ಲಿ ಒತ್ತುವರಿಯಾಗಿದ್ದ ಗಣಿಭೂಮಿ ಉಳ್ಳವರ ಪಾಲಾಗುತ್ತಾ ಎಂಬ ಆತಂಕವೂ ಎದುರಾಗಿದೆ. ಇತ್ತೀಚೆಗಷ್ಟೇ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಜಮೀನು ಖರೀದಿ ಮೇಲಿದ್ದ ಮಿತಿಯನ್ನು ಸರಕಾರ ಏಕಾಎಕಿ ಸರಕಾರ ತೆಗೆದುಹಾಕಿತ್ತು. ಕೆಜಿಎಫ್ ಸುತ್ತಮುತ್ತ ಭೂಮಿ ಕಂಪಿಸುತ್ತಿರುವುದಕ್ಕೆ ಇದೂ ಮುಖ್ಯ ಕಾರಣ ಎನ್ನುತ್ತಾರೆ ಅಲ್ಲಿನ ಜನ.
ಒಟ್ಟಾರೆ, ಮುಂದಿನ ದಿನಗಳಲ್ಲಿ ಚಿನ್ನದ ಗಣಿಭೂಮಿಯಲ್ಲಿ ಗಣಿಗಾರಿಕೆ ನಡೆಯುತ್ತೋ ಅಥವಾ ಕೈಗಾರಿಕಾ ಪಾರ್ಕು ಬರುತ್ತೋ, ಇಲ್ಲವೇ ಕೆಲ ವಿಮಾನ ನಿಲ್ದಾಣಗಳನ್ನು ಕಾರ್ಪೋರೇಟು ಪಾರ್ಟಿಗಳಿಗೆ ಕೊಟ್ಟ ಕೈತೊಳೆದುಕೊಂಡ ಬೆನ್ನಲ್ಲೇ ಕೆಜಿಎಫ್ ಕಥೆ ಏನಾಗುತ್ತೋ ದೇವರೇ ಬಲ್ಲ. ಎಷ್ಟೇ ಆಗಲಿ, ಕೋವಿಡ್ ಪೀಡೆ ʼಆಕ್ಟ್ ಆಫ್ ಗಾಡ್ʼ ಎಂದಿದ್ದಾರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.
ಮುಂದೆ ಕಾದಿದೆ ‘ದೇವರ ಆಟ!!ʼ
Worthfull ani meaning full articals
ವರದಿ ಚೆನ್ನಾಗಿ ಬಂದಿದೆ ಕೆಜಿಎಫ್ ಬಗ್ಗೆ ತಿಳಿಯದ ಹಲವಾರು ವಿಷಯಗಳು ಗೊತ್ತಾಯ್ತು