Obituary
ಅಂದುಕೊಂಡಿದ್ದನ್ನು ಮಾಡಿ ಸದ್ದಿಲ್ಲದೆ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದವರು ಕೇಶವಾನಂದ ಭಾರತಿ ಶ್ರೀಗಳು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂವಿಧಾನದ ಆಶಯಗಳು, ನಾಗರೀಕರ ಹಕ್ಕುಗಳನ್ನು ಎತ್ತಿಹಿಡಿಯಲು ನಡೆದ ಪ್ರಯತ್ನದಲ್ಲಿ ಅವರು ಮುಂಚೂಣಿಯಲ್ಲಿ ನಿಂತವರು. ಧರ್ಮಸೇವೆಯ ಜತೆಜತೆಯಲ್ಲೇ ಅವರು ನಡೆಸಿದ ಹೋರಾಟ ಅನೇಕ ಬದಲಾವಣೆಗಳಿಗೆ ಕಾರಣವಾಯಿತು ಮತ್ತೂ ಅನೇಕ ಐತಿಹಾಸಿಕ ಹೆಗ್ಗುರುತುಗಳಿಗೆ ಸಾಕ್ಷಿಯಾಯಿತು. ಸರ್ವಾಧಿಕಾರಿ ಆಡಳಿತದ ಮನಃಸ್ಥಿತಿಯ ನೆರಳಿನಲ್ಲೇ ಬೆಳಕು ಮೂಡಿಸಿದ ಯತಿಶ್ರೇಷ್ಠರು ಆ ಹೆಜ್ಜೆಗುರುತುಗಳನ್ನೆಲ್ಲ ನಮಗೇ ಬಿಟ್ಟು ನಿರ್ಗಮಿಸಿದ್ದಾರೆ. ಹೆಸರಾಂತ ಲೇಖಕ ಕೆ.ವಿ.ರಾಧಾಕೃಷ್ಣ ಅವರು ಸಿಕೆನ್ಯೂಸ್ ನೌ ಮೂಲಕ ಶ್ರೀಗಳಿಗೆ ಅಕ್ಷರ ನಮನ ಸಲ್ಲಿಸಿದ್ದಾರೆ. ಓಂ ಶಾಂತಿ..
***
ಇತ್ತೀಚೆಗೆ ಕೇರಳದ ತಿರುವನಂತಪುರ ಪದ್ಮನಾಭ ದೇವಳದ ಗರ್ಭಗುಡಿಯ ಕೆಳಗಿನ ಕೋಣೆಗಳನ್ನು ತೆರೆಯುವುದನ್ನು ಸುಪ್ರೀಂ ಕೋರ್ಟ್ ನಿರ್ಣಯಿಸಿದಾಗ ಅದು ತಪ್ಪು ಎಂದು ಸ್ಪಷ್ಟವಾಗಿ ವಿರೋಧಿಸಿದ ಶಂಕರಾಚಾರ್ಯರು ಕೇಶವಾನಂದ ಭಾರತಿಗಳೇ ಎಂಬುದು ವಿಶೇಷ. ಸರಕಾರಗಳ ಹಸ್ತಕ್ಷೇಪವನ್ನು ವಿರೋಧಿಸಿ ಮಠದ ಆಸ್ತಿಗಳನ್ನು ಮಠದ ಆಡಳಿತಕ್ಕೆ ಬಿಡಬೇಕೆಂದು ಕೇಶವಾನಂದ ಭಾರತಿಗಳು ಪ್ರತಿಪಾದಿಸಿದ್ದರು. ಈವರೆಗೆ ವರ್ಷಾಂತರಗಳಿಂದ ದೇವಳದ ನೆಲಮಾಳಿಗೆಯಲ್ಲಿ ಕೇರಳದ ರಾಜಮನೆತನವು ಇರಿಸಿದ್ದ ಲಕ್ಷ ಕೋಟಿಗೂ ಮೀರಿದ ಸಂಪತ್ತನ್ನು ಹೊರತೆಗೆದ ಕಾರಣದಿಂದ ಇಂದು ಅವುಗಳ ರಕ್ಷಣೆಗೇ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುವ ಸ್ಥಿತಿಗೆ ಆಡಳಿತ ಬಂದಿದೆ.
ಭಾರತದ ನೆಲದಲ್ಲಿ ಸನ್ಯಾಸ ಎಂಬುದು ಸಂಪೂರ್ಣ ವಿರಕ್ತಿಯಲ್ಲ. ಈ ನೆಲದಲ್ಲಿ ಧರ್ಮ ಚ್ಯುತಿಯಾದಾಗಲೆಲ್ಲ ಯತಿಗಳು ತಮ್ಮ ದನಿ ಎತ್ತಿದ್ದಾರೆ. ಸಾಮ್ರಾಜ್ಯಗಳನ್ನು ಸ್ಥಾಪಿಸಿದ್ದಾರೆ. ಅವುಗಳ ಸುರಕ್ಷತೆಗಾಗಿ ಸಂಕಲ್ಪಿಸಿ ಶ್ರಮಿಸಿದ್ದಾರೆ. ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತದ ನೆಲದ ಭಾವಕೋಶಗಳನ್ನು ತೆರೆದಿರಿಸಿ ಜಗವನ್ನೆಲ್ಲ ವಸುಧೈವ ಕುಟುಂಬಕಂ ಸೂತ್ರದ ಪರಿಧಿಗೆ ತಂದಿರಿಸಿ ಭಾರತದ ಮಹತ್ತನ್ನು ಆಧುನಿಕ ಕಾಲಘಟ್ದಲ್ಲಿಯೂ ಪರಿಚಯಿಸುತ್ತಾರೆ.
ಯತಿ ವಿದ್ಯಾರಣ್ಯರು ದಕ್ಷಿಣದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾರೆ. ಸಮರ್ಥ ರಾಮದಾಸರು ಮರಾಠಾ ನೆಲದಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪನೆಗೆ ಶಿವಾಜಿ ಮಹಾರಾಜರಿಗೆ ಮಾರ್ಗದರ್ಶನ ಮಾಡಿದ್ದಾರೆ. ವ್ಯಾಸರಾಯರು ಕೃಷ್ಣದೇವರಾಯರಿಗೆ ಕುಹೂಯೋಗವೆಂಬ ದುರ್ಯೋಗ ಬಂದಾಗ ತಾವೇ ಸಾಮ್ರಾಜ್ಯ ನಿರ್ವಹಿಸಿ ಅದನ್ನು ಮತ್ತೆ ಸುಮುಹೂರ್ತದಲ್ಲಿ ಕೃಷ್ಣದೇವರಾಯರಿಗೆ ಹಿಂತಿರುಗಿಸುತ್ತಾರೆ.
ಸಂಪೂರ್ಣ ಭಾರತವನ್ನು ಕಾಲ್ನಡಿಗೆಯಲ್ಲಿ ಪರಿಕ್ರಮ ಮಾಡಿದ ಆಚಾರ್ಯ ಶಂಕರರು ಯತಿಗಳಿಗೆ ಕೆಲವು ಸ್ವರೂಪ ಮತ್ತು ವಿಧಿಗಳನ್ನು ರಚಿಸಿದರು. ಯತಿಗಳಿಗೆ ಏಕದಂಡಿ ಸಂಪ್ರದಾಯವನ್ನು ಆರಂಭಿಸಿದ್ದಲ್ಲದೆ, ದಶನಾಮೀ ಪರಂಪರೆಯನ್ನು ಸಹ ಆರಂಭಿಸಿದರು. ಅವು ಸರಸ್ವತಿ, ತೀರ್ಥ, ಅರಣ್ಯ ಭಾರತಿ, ಆಶ್ರಮ, ಗಿರಿ, ಪರ್ವತ, ಸಾಗರ, ವನ, ಮತ್ತು ಪುರಿ. ಇಂತಹ ದಶನಾಮೀ ಪರಂಪರೆಯಲ್ಲಿ ಬಂದ ಭಾರತೀ ನಾಮಕ ಯತಿ ಪರಂಪರೆಯ ಯತಿಗಳಲ್ಲಿ ಕೇಶವಾನಂದ ಭಾರತಿ ಅವರೂ ಒಬ್ಬರು. ಶಂಕರಾಚಾರ್ಯರ ಮೊದಲ ನಾಲ್ಕು ಶಿಷ್ಯರಲ್ಲಿ ಒಬ್ಬರಾದ ತೋಟಕಾಚಾರ್ಯರ ಪರಂಪರೆಯಲ್ಲಿ ತಮ್ಮ ಹತ್ತೊಂಭತ್ತನೆಯ ವಯಸ್ಸಿಗೆ ಸನ್ಯಾಸ ಸ್ವೀಕರಿಸಿದ್ದರು ಇವರು.
ಕರ್ನಾಟಕದ ನೆಲದಲ್ಲೇ ಇದ್ದ ಎಡನೀರು ಮಠದಲ್ಲಿ ಯತಿಗಳಾಗಿದ್ದ ಕೇಶವಾನಂದ ಭಾರತಿಗಳು, ರಾಜ್ಯ ವಿಭಜನೆಯ ನಂತರ ಪುನಾರಚಿತಗೊಂಡ ಕೇರಳದ ಕಾಸರಗೋಡಿನಲ್ಲಿ ಸೇರಿಹೋದರು. ಆಗ ರಾಷ್ಟ್ರದಲ್ಲಿ ಹಲವಾರು ಕ್ರಾಂತಿಕಾರಕ ನಡೆಗಳ ಕಾಲ. ಕ್ರಾಂತಿ ಎಂಬುದೇ ಭ್ರಾಂತಿಯಾಗಿ ಎಲ್ಲೆಡೆಯೂ ಇದ್ದ ವ್ಯವಸ್ಥೆಗಳು ಪರಿವರ್ತನೆ ಕಂಡ ಕಾಲ ಎನ್ನಬಹುದು.
ಭೂಸುಧಾರಣೆ ಕಾಯ್ದೆ ಮತ್ತು ಸಂವಿಧಾನ ತಿದ್ದುಪಡಿ
ಹೆನ್ರಿ ಮತ್ತು ವಿಲಿಯಂ ಗೋಲಕನಾಥ ಸಹೋದರರು ತಮ್ಮ ಕೃಷಿ ಉತ್ಪಾದನೆಯಿಂದ ಪಂಜಾಬಿನ ಜಲಂಧರ್ ಪ್ರದೇಶದಲ್ಲಿ ಸುಮಾರು 500 ಎಕರೆ ಕೃಷಿ ಪ್ರದೇಶವನ್ನು ಹೊಂದಿದ್ದರು. 1956ರಲ್ಲಿ ಪಂಜಾಬ್ ಸರಕಾರ ಭೂ ಕಾಯಿದೆ ತಂದು ಸೋದರರಲ್ಲಿ ಪ್ರತಿ ವ್ಯಕ್ತಿ ಗರಿಷ್ಠ ಮುವ್ವತ್ತು ಎಕರೆ ಪ್ರದೇಶವನ್ನು ಮಾತ್ರ ಹೊಂದಬಹುದು ಎಂದು ಆದೇಶಿಸಿ ಹೆಚ್ಚುವರಿ ಜಮೀನನ್ನು ತನ್ನ ಸ್ವಾಧೀನಕ್ಕೆ ಪಡೆಯಿತು. ಇದನ್ನು ಸುಪ್ರೀಂ ಕೋರ್ಟಿನಲ್ಲಿ (1967 ಎಐಆರ್ 1643, 1967 ಎಸ್.ಸಿ.ಆರ್(2) 762, ಅನುಸಾರ ದಾವೆ ಹೂಡಿ ಪ್ರಶ್ನಿಸಿದ ಗೋಲಕನಾಥ ಸಹೋದರರು ಸಂವಿಧಾನದ ಮೂಲ ಆಶಯಗಳ ಅನುಸಾರ ತಾವು ನ್ಯಾಯಬದ್ಧವಾಗಿ ದುಡಿದು ಹೊಂದುವ ಸಂಪತ್ತಿಗೆ ನ್ಯಾಯದ ದೃಷ್ಟಿಯಲ್ಲಿ ರಕ್ಷಣೆ ನೀಡಬೇಕು, ಸಂಪತ್ತನ್ನು ಹೊಂದುವುದು ತಮ್ಮ ಮೂಲಭೂತ ಹಕ್ಕು ಎಂದು ವಾದಿಸಿದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಿತು. ಸುಪ್ರೀಂ ಕೋರ್ಟ್ 6:5 ಅನುಪಾತದಲ್ಲಿ ತೀರ್ಪು ನೀಡಿ ಸಂವಿಧಾನದ ಸಂರಕ್ಷಣೆಯ ದೃಷ್ಟಿಯಿಂದ ಚೀಫ್ ಜಸ್ಟೀಸ್ ಕೋಕಾ ಸುಬ್ಬರಾವ್ ಅವರು ಅಮೆರಿಕದ ಕಾನೂನನ್ನು ಆಧರಿಸಿ ಸಂಸತ್ತು ಮೂಲಭೂತ ಆಶಯಗಳಿಗೆ ತಿದ್ದುಪಡಿ ತರಬಾರದು ಎಂದು ಸೂಚಿಸಿತ್ತು. ಇದನ್ನು ವಿರೋಧಿಸಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಕೇಂದ್ರ ಸರಕಾರವು ಸಂವಿಧಾನದ ಯಾವುದೇ ಭಾಗಕ್ಕೆ ತಿದ್ದುಪಡಿ ತರಲು ಸಂಸತ್ತಿಗೆ ಪರಮೋಚ್ಛ ಅಧಿಕಾರವಿದೆ ಎಂದು ಇಪ್ಪತ್ನಾಲ್ಕನೆಯ ತಿದ್ದುಪಡಿ ತಂದಿತು.
ಬ್ಯಾಂಕ್ ರಾಷ್ಟ್ರೀಕರಣ ಮತ್ತು ಸಂವಿಧಾನ ತಿದ್ದುಪಡಿ
ಇದರ ನಂತರ ಇಂದಿರಾ ಸರಕಾರದ ವತಿಯಿಂದ ಬ್ಯಾಂಕುಗಳ ರಾಷ್ಟ್ರೀಕರಣವಾಗಿತ್ತು. ಬ್ಯಾಂಕುಗಳನ್ನು ನಡೆಸುತ್ತಿದ್ದ ಖಾಸಗಿ ವ್ಯಕ್ತಿಗಳಿಗೆ ಅದರ ಪರಿಹಾರವಾಗಿ ಹತ್ತು ವರ್ಷಗಳ ನಂತರ ಮೆಚ್ಯೂರ್ ಆಗುವ ಬಾಂಡ್ ನೀಡಲಾಗಿತ್ತು. ಇದನ್ನು ರುಸ್ತುಂ ಕಾವಾಸ್ ಜಿ ಕೂಪರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (1970 ಎಐಆರ್ 564, 1970 ಎಸ್.ಸಿ.ಆರ್.3(530) ಪ್ರಶ್ನಿಸಿದರೆ ಆ ದಾವೆಯನ್ನು ಕೋರ್ಟ್ ಮಾನ್ಯ ಮಾಡಿ ಸಂವಿಧಾನದ ಅಡಿಯಲ್ಲಿ ಯಾವುದೇ ವ್ಯಕ್ತಿಗೆ ಆದ ನಷ್ಟಕ್ಕೆ ಪರಿಹಾರವನ್ನು ತಕ್ಷಣ ನೀಡಬೇಕೆಂದು ಸೂಚಿಸಿತು. ಅದನ್ನು ಸರಕಾರ ವಿರೋಧಿಸಲು ಸಂವಿಧಾನದ ಮೂಲ ತತ್ವಗಳಿಗೆ ತಿದ್ದುಪಡಿ ತಂದು ಯಾವುದೇ ವ್ಯಕ್ತಿಯ ಸ್ವತ್ತು ಮತ್ತು ಸಂಪತ್ತನ್ನು ಸಾರ್ವಜನಿಕ ಹಿತಕ್ಕಾಗಿ ಸಂಪತ್ತನ್ನು ವಶ ಪಡಿಸಿಕೊಳ್ಳುವುದು ಮತ್ತು ಈ ಉದ್ದೇಶಕ್ಕಾಗಿ ಪರಿಹಾರ ನೀಡುವ ಅಧಿಕಾರವನ್ನು ಸಂಸತ್ತಿಗೆ ಸೀಮಿತಗೊಳಿಸಿ ಅದಕ್ಕೆ ನ್ಯಾಯಿಕ ವ್ಯಾಪ್ತಿಯಿಂದ ಹೊರಗಿಡಲಾಯಿತು. ಇದು ಸಂವಿಧಾನದ ಇಪ್ಪತ್ತೈದನೆಯ ತಿದ್ದುಪಡಿ ಎಂದೇ ಖ್ಯಾತವಾಯಿತು.
ಹೀಗೆ ಹಂತ ಹಂತವಾಗಿ ದೇಶದ ನ್ಯಾಯಿಕ ವ್ಯವಸ್ಥೆಯನ್ನು ಮಿತಗೊಳಿಸುತ್ತ ನಡೆದ ಕೇಂದ್ರದ ಪ್ರಜಾ ಸರಕಾರವು ಪ್ರಜಾಸತ್ತೆಯ ಮೂಲ ಸ್ವರೂಪವನ್ನು ಬದಲಿಸುತ್ತಾ ಸಾಗಿತು. ಯಾವ ಪಕ್ಷ ಬ್ರಿಟೀಷರ ಸರ್ವಾಧಿಕಾರದ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದಿತ್ತೋ ಅದೇ ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ಬಂದ ಎರಡೇ ದಶಕಗಳಲ್ಲಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಸರ್ವಾಧಿಕಾರಿ ನಡೆಗಳನ್ನು ತೋರಲಾರಂಭಿಸಿತು.
ಕೇಶವಾನಂದ ಭಾರತಿ ಪ್ರಕರಣ
ಕೇರಳದ ಕಾಂಗ್ರೆಸ್ ಸರಕಾರವು ಭೂ ಸುಧಾರಣೆ ಕಾಯಿದೆ ಹಿನ್ನೆಲೆಯಲ್ಲಿ ಕಾಸರಗೋಡಿನ ಎಡನೀರು ಮಠಧ ಆಸ್ತಿ ಸ್ವಾಧೀನಕ್ಕೆ ನೋಟೀಸು ನೀಡುತ್ತದೆ. ನಾನೀ ಪಾಲ್ಖೀವಾಲಾ ಅವರು ವಕೀಲರಾಗಿ ಕೇಶವಾನಂದ ಭಾರತಿ ಶ್ರೀಗಳ ಪರವಾಗಿ ಈ ಕಾಯಿದೆಯನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ದೇಶದ ನಾಗರಿಕರು ಆಸ್ತಿಯನ್ನು ಹೊಂದುವುದು ಮೂಲಭೂತ ಹಕ್ಕು ಹೌದೋ ಅಲ್ಲವೋ ಎಂಬುದು ದಾವೆಯ ಮುಖ್ಯ ಪ್ರಶ್ನೆ ಆಗಿರುತ್ತದೆ.
ಪಾಲಿ ನಾರೀಮನ್ ನೇತೃತ್ವದಲ್ಲಿ ನಾನೀ ಪಾಲ್ಖೀವಾಲಾ ಅವರ ವಾದವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕೇಂದ್ರ ಸರಕಾರವು ಘಟಾನುಘಟಿ ವಕೀಲರನ್ನು ವಾದಕ್ಕೆ ನಿಯೋಜಿಸುತ್ತದೆ. 31 ಅಕ್ಟೋಬರ್ 1972ರಿಂದ 23 ಮಾರ್ಚ್ 1973ರ ನಡುವೆ ಬರೋಬ್ಬರಿ ಅರವತ್ತೆಂಟು ದಿನಗಳ ನಡೆಯುವ ವ್ಯಾಜ್ಯದ ವಾದ ಪ್ರತಿವಾದಗಳ ನಂತರ ಮಹತ್ವದ ತೀರ್ಪೊಂದು ಜಾರಿಯಾಯಿತು.
ಸಂಸತ್ತು ಪೂರ್ಣಮತದಿಂದ ಪರಿಚ್ಛೇಧ ಒಂಭತ್ತರಲ್ಲಿ ನಿರ್ಣಯಿಸಲಾದ ಯಾವುದೇ ತಿದ್ದುಪಡಿಗಳು ಸಹ ನ್ಯಾಯಿಕ ಅಧ್ಯಯನಕ್ಕೆ ಒಳಪಡುತ್ತವೆ ಎಂದು ಸಾಂವಿಧಾನಿಕ ತಿದ್ದುಪಡಿಗಳಿಗೆ ಮಾರ್ಗಸೂಚಿಗಳನ್ನು ಜಾರಿ ಮಾಡಿತು. ಸಾಂವಿಧಾನಿಕ ತಿದ್ದುಪಡಿಗಳಲ್ಲಿ ಲೋಪಗಳಿದ್ದರೆ ನ್ಯಾಯಿಕ ಪ್ರಕ್ರಿಯೆಯಲ್ಲಿ ಅದನ್ನು ತಿರಸ್ಕರಿಸಬಹುದು ಎಂಬ ಮಹತ್ವದ ತೀರ್ಪನ್ನು ನ್ಯಾಯಾಲಯ ಜಾರಿ ಮಾಡಿತು. ಇದರೊಂದಿಗೆ ಗೋಲಕನಾಥ ಪ್ರಕರಣದಲ್ಲಿ ನೀಡಿದ್ದ ಇಪ್ಪತ್ತೈದನೆಯ ಸಾಂವಿದಾನಿಕ ತಿದ್ದುಪಡಿಯ ಮೂಲಕ ಪ್ರದತ್ತವಾದ ಸಂಸತ್ತಿನ ಪರಮಾಧಿಕಾರಕ್ಕೆ ನಿಯಂತ್ರಣ ಬಂದಿತು. ಇದುವರೆಗೆ ಸುಪ್ರೀಂ ಕೋರ್ಟ್ ರಚಿಸಿರುವ ಅತಿದೊಡ್ಡ ಪೀಠವೆಂದರೆ ಹದಿಮೂರು ನ್ಯಾಯಾಧೀಶರ ಪೀಠ. ಅದು ರಚನೆಯಾಗಿದ್ದು ಸಹ ಇದೇ ಕೇಶವಾನಂದ ಭಾರತಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದ ಪ್ರಕರಣದಲ್ಲಿ ಎಂಬುದು ಗಮನಾರ್ಹ. 24 ಏಪ್ರಿಲ್ 1973ರಲ್ಲಿ 7:6ರ ಬಹುಮತದಲ್ಲಿ ನೀಡಲಾದ ಈ ತೀರ್ಪು ಸುಮಾರು 703 ಪುಟಗಳಷ್ಟಿದೆ ಎಂಬುದು ಇದರ ವಿಸ್ತೃತ ವಿಶ್ಲೇಷಣೆ ಮತ್ತು ಪ್ರಾಮುಖ್ಯತೆಯನ್ನು ಸಾರುತ್ತದೆ.
ಸಂವಿಧಾನದ ಮೂಲಭೂತ ರಚನೆಗಳಿಗೆ ಸಿದ್ಧಾಂತಗಳಿಗೆ ತಿದ್ದುಪಡಿ ಮಾಡಲು ಅವಕಾಶವಿಲ್ಲ ಎಂಬ ಸುಪ್ರೀಂ ಕೋರ್ಟಿನ ನಿರ್ಣಯವು ಸಂವಿಧಾನ ರಕ್ಷಿಸಿ ಎಂದು ಹೋರಾಟಗಳು ನಡೆಯುವ ಬಹಳ ಮುನ್ನವೇ ಎಡನೀರು ಯತಿಗಳಾದ ಶ್ರೀ ಕೇಶವಾನಂದ ಭಾರತಿಗಳ ಹೋರಾಟವೊಂದು ಭಾರತದ ಸಂವಿಧಾನವು ಎಂದೆಂದಿಗೂ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳದಂತೆ ಕಾಪಾಡಿತು. ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ತ್ರಿವಿಧ ಉಪಕ್ರಮಗಳು ಇಂದಿಗೂ ಸಂವಿಧಾನದ ತ್ರಿವಿಧ ಅಂಗಗಳಾಗಿ ಸಮಾನ ನೆಲೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಆಗಿರುವುದಕ್ಕೆ ಇದೇ ಕಾರಣ.
ಆ ನಂತರ ನ್ಯಾಯಾಂಗವನ್ನು ಮಣಿಸಲು ಮಾಡಿದ ವಿಫಲ ಯತ್ನದಲ್ಲಿ ಹತಾಶರಾದ ಇಂದಿರಾ ಗಾಂಧಿ ಅವರು ಇತರ ನ್ಯಾಯಮೂರ್ತಿಗಳ ಹಿರಿತನವನ್ನು ಕಡೆಗಣಿಸಿ ಎ.ಎನ್.ರೇ ಅವರಿಗೆ ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ನೀಡಿದರು. ಇದನ್ನು ವಿರೋಧಿಸಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಬಹುಮತದ ತೀರ್ಪು ನೀಡಿದ್ದ ಹಿರಿಯ ನ್ಯಾಯಮೂರ್ತಿಗಳಾಗಿದ್ದ ನ್ಯಾ.ಜೆ.ಎಂ.ಶೆಲಾತ್, ನ್ಯಾ.ಎ.ಎನ್.ಗ್ರೋವರ್ ಮತ್ತು ನ್ಯಾ.ಕೆ.ಎಸ್.ಹೆಗ್ಡೆ ಅವರು ರಾಜೀನಾಮೆ ನೀಡಿದರು. (ನ್ಯಾ.ಎ.ಎಸ್. ಹೆಗ್ಡೆ ಅವರು ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಆಗಿದ್ದ ಸಂತೋಷ ಹೆಗ್ಡೆ ಅವರ ತಂದೆ.)
ಈ ತೀರ್ಪು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಹ ಪ್ರಜಾಪ್ರಭುತ್ವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು ಉಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ಇದಕ್ಕಾಗಿ ನಮಗೆ ಕೇಶವಾನಂದ ಭಾರತಿ ಅವರಂತಹ ಯತಿಗಳು ಮುಖ್ಯ ಎನಿಸುತ್ತಾರೆ.
ಕಲಾಪೋಷಕ ಯತಿಗಳು
ತೆಂಕು ತಿಟ್ಟಿನ ಯಕ್ಷಗಾನಕ್ಕೆ ಬಹುದೊಡ್ಡ ಭಾಗವತರೂ ಆಗಿದ್ದ ಕೇಶವಾನಂದ ಭಾರತಿಗಳು ಬಹಳ ಒಳ್ಳೆಯ ಗಾಯಕರಾಗಿದ್ದರು. ಕಳೆದೊಂದೂವರೆ ದಶಕಗಳಿಗೂ ಹೆಚ್ಚುಕಾಲ ಅವರು ಸ್ವಂತ ಆಸಕ್ತಿ ಮತ್ತು ಪರಿಶ್ರಮದಿಂದ ಯಕ್ಷಗಾನ ಮೇಳವನ್ನು ನಡೆಸುತ್ತಿದ್ದರು. ಯಕ್ಷಗಾನ ಸಪ್ತಾಹ ಮತ್ತು ತಾಳಮದ್ದಲೆಗಳನ್ನು ಆಯೋಜಿಸಿ ಪ್ರೋತ್ಸಾಹ ನೀಡುತ್ತಿದ್ದರು. ಕನ್ನಡ ನಾಡಿನ ಬಹಳ ಕಲಾವಿದರಿಗೆ ಕಾರ್ಯಕ್ರಮ ಆಯೋಜನೆಯಲ್ಲಿ ನೆರವಾಗುತ್ತಿದ್ದ ಶ್ರೀಗಳು ಸ್ವತಃ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ತಾನಿ ಸಂಗೀತದಲ್ಲಿ ಅವರಿಗೆ ಪರಿಶ್ರಮವಿತ್ತು.
ಅವರ ನೇತೃತ್ವದಲ್ಲಿ ಎಡನೀರು ಮಠವು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ, ಜೂನಿಯರ್ ಕಾಲೇಜು ಮತ್ತು ಸಂಸ್ಕೃತ ವೇದ ಪಾಠಶಾಲೆಯನ್ನು ನಿರ್ವಹಿಸುತ್ತಿದೆ. ಇತ್ತೀಚೆಗಷ್ಟೇ ಸೆಪ್ಟೆಂಬರ್ ಒಂದರಂದು ನಡೆದ ತಾಳಮದ್ದಲೆ ಕಾರ್ಯಕ್ರಮದಲ್ಲಿ ಸಹ ಶ್ರೀಗಳು ಭಾಗವತಿಕೆ ಮಾಡಿದ್ದರು ಎಂಬುದು ಅವರ ಕಲಾಪ್ರೇಮ ಮತ್ತು ಸಕ್ರಿಯತೆಗೆ ನಿದರ್ಶನ.
ತಮ್ಮ ಅರವತ್ತನೆಯ ಚಾತುರ್ಮಾಸವನ್ನು ಪೂರೈಸಿದ ಯತಿಗಳು ತಮ್ಮ ಇಹಲೋಕ ವ್ಯಾಪಾರವನ್ನು ಪೂರೈಸಿದ್ದಾರೆ. ಅವರ ಅಂತಿಮ ಕ್ರಿಯೆಯ ವಿಧಿ ವಿಧಾನಗಳನ್ನು ಎಡನೀರು ಮಠದಲ್ಲಿ ಭಾನುವಾರ ಮಠದ ಶ್ರದ್ಧಾಳುಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ.
ಸಂವಿಧಾನದ ಆಶಯವನ್ನು ಉಳಿಸಿಕೊಟ್ಟ ಶ್ರೀಗಳಿಗೆ ಅಂತಿಮ ನಮನಗಳು.
***