ಬೆಂಗಳೂರು/ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಗೆ ಕೇಂದ್ರ ಸರಕಾರವು ವೇಗ ನೀಡಿದೆ. ದೇಶದ ಪ್ರತಿಷ್ಠಿತ ಬಾಹ್ಯಾಕಾಶ ವಿಜ್ಞಾನಿ, ಇಸ್ತ್ರೋ ಮಾಜಿ ಅಧ್ಯಕ್ಷ, ಮಿಗಿಲಾಗಿ ಕನ್ನಡಿಗ ಡಾ.ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿ ನೀಡಿರುವ ವರದಿಯನ್ನು ಹಂತ ಹಂತವಾಗಿ ಜಾರಿ ಮಾಡಲು ನರೇಂದ್ರ ಮೋದಿ ಆಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
2020 ಜುಲೈ 29ರಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಅದಾದ ಮೇಲೆ ಆ ನೀತಿಯನ್ನು ಪ್ರಕಟಿಸಲಾಗಿತ್ತಲ್ಲದೆ, ಕೇಂದ್ರದ ಮಾನವ ಸಂಪನ್ಮೂಲ ಖಾತೆಗೆ ಶಿಕ್ಷಣ ಸಚಿವಾಲಯವೆಂದೂ ಮರುನಾಮಕರಣ ಮಾಡುವ ಹೆಜ್ಜೆಯನ್ನೂ ಕೇಂದ್ರ ಇಟ್ಟಿತ್ತು. ಇದರಿಂದ ಆಡಳಿತಾತ್ಮಕವಾಗಿ ಸರಕಾರವು ಕೆಲ ದಿನಗಳಿಂದಲೇ ವೇಗಗತಿಯಲ್ಲಿ ಹೆಜ್ಜೆಗಳನ್ನು ಇಡುತ್ತಾ ಬಂದಿದೆ ಎಂಬುದು ಇದರಿಂದ ಅರ್ಥವಾಗುತ್ತಿದೆ.
ಹಾಗೆ ನೋಡೊದರೆ 2019ರಲ್ಲಿಯೇ ಕೇಂದ್ರವು ರಾಷ್ಟ್ರೀಯ ಶಿಕ್ಷಣ ನೀತಿ (NEP: National Education Policy ) ಕರಡನ್ನು ಎಲ್ಲ ರಾಜ್ಯಗಳಿಗೆ ಒದಗಿಸಿತ್ತು. ಆದು ಕೈಗೆ ಸಿಕ್ಕ ಕೂಡಲೇ ರಾಜ್ಯ ಸರಕಾರವು ಮಾಜಿ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಕಾರ್ಯಪಡೆ ರಚನೆ ಮಾಡಿತ್ತಲ್ಲದೆ, ಅದರ ಜಾರಿಯ ದಿಕ್ಕಿನಲ್ಲಿ ಉಳಿದೆಲ್ಲ ರಾಜ್ಯಗಳಿಗಿಂತ ವೇಗವಾಗಿ ಹೆಜ್ಜೆಗಳನ್ನು ಇಟ್ಟಿತ್ತು. ಮುಖ್ಯವಾಗಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರಂತೂ, ಎಲ್ಲ ರಾಜ್ಯಗಳಿಗಿಂತ ಮೊದಲೇ ನಮ್ಮ ರಾಜ್ಯದಲ್ಲಿ ಈ ನೀತಿಯನ್ನು ಮೊದಲು ಜಾರಿ ಮಾಡುವ ಉಮೇದಿನಲ್ಲಿದ್ದಾರೆ. ಅದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರ ಜತೆಯಲ್ಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಕೂಡ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ವ್ಯಾಪ್ತಿಯಲ್ಲಿ ಈ ನೀತಿಯನ್ನು ಅನುಷ್ಟಾನಕ್ಕೆ ತರಲು ಯತ್ನಿಸುತ್ತಿದ್ದಾರೆ.
1986ರಲ್ಲಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರು ಶಿಕ್ಷಣ ನೀತಿಯ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿದ್ದರು. ಅವರಿಂದ ಎರಡನೇ ಬಾರಿಗೆ ಶಿಕ್ಷಣ ನೀತಿಯನ್ನು ಪ್ರಕಟಿಸಿದ್ದರು. ಆದರೆ 86ರ ಶಿಕ್ಷಣ ನೀತಿಗಿಂತ ಹೊಸ ಶಿಕ್ಷಣ ನೀತಿ ಪರಿಣಾಮಕಾರಿಯಾಗಿದೆ ಹಾಗೂ ಪ್ರಚಲಿತವಾಗಿದೆ. 2017ರಲ್ಲಿಯೇ ಮೋದಿ ಸರಕಾರವು ಕಸ್ತೂರಿ ರಂಗನ್ ಅವರ ನೇತೃತ್ವದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗಾಗಿ ಕರಡು ಸಿದ್ಧತೆಗಾಗಿ ಹೊಸ ಸಮಿತಿಯನ್ನು ರಚನೆ ಮಾಡಿತ್ತು. ಅದನ್ನೀಗ ದೇಶಾದ್ಯಂತ ಉತ್ತಮ ರೀತಿಯಲ್ಲಿ ಜಾರಿ ಮಾಡಲು ನರೇಂದ್ರ ಮೋದಿ ಸರಕಾರ ಸರ್ವ ಪ್ರಯತ್ನಗಳನ್ನೂ ಮಾಡುತ್ತಿದೆ.
ಜ್ಞಾನ ಆರ್ಥಿಕತೆ (Knowledge Economy)
ನೂತನ ಶಿಕ್ಷಣ ನೀತಿಯಿಂದ ೨೧ನೇ ಶತಮಾನದಲ್ಲಿ ಭಾರತವು ಜ್ಞಾನ ಆರ್ಥಿಕತೆಯಲ್ಲಿ ಜಗತ್ತಿನಲ್ಲಿಯೇ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕನಸು. ಹಿಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು, ಭಾರತದಲ್ಲಿ ಜ್ಞಾನಯುಗ ಉದಯವಾಗಲಿ ಎಂದು ಹಾರೈಸಿದ್ದರಲ್ಲದೆ, ಅಂತಹ ದಿನ ಬಂದೇಬರುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದು ನಿಜವಾಗುವತ್ತ ಭಾರತ ಹೆಜ್ಜೆ ಹಾಕುತ್ತಿದೆ.
ಈ ನಿಟ್ಟಿನಲ್ಲಿಯೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ಹಿನ್ನೆಲೆಯಲ್ಲಿ ಸೋಮವಾರ ನವದೆಹಲಿಯಿಂದಲೇ ದೇಶದ ಎಲ್ಲ ರಾಜ್ಯಪಾಲರು ಮತ್ತು ಶಿಕ್ಷಣ ಸಚಿವರ ಎರಡು ದಿನಗಳ ಆನ್‌ಲೈನ್ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೊಂದಿಗೆ ಸಂವಾದ ನಡೆಸಿದರು ಮೋದಿ. “ಶಿಕ್ಷಣ ಕ್ಷೇತ್ರದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ. ಆ ನಿಟ್ಟಿನಲ್ಲಿ ಶಿಕ್ಷಣ ನೀತಿ ಹೆಚ್ಚು ಸಹಕಾರಿಯಾಗಲಿದೆ” ಎಂದು ಅವರು ಹೇಳಿದರು.
ಮೋದಿ ಮಾತುಗಳು…
*ಶಿಕ್ಷಣ ನೀತಿಯಲ್ಲಿ ಸರಕಾರದ ಪ್ರಭಾವ ಕಡಿಮೆ ಇರಬೇಕು, ಏಕೆಂದರೆ ಇದು ಸರಕಾರದ ಶಿಕ್ಷಣ ನೀತಿಯಲ್ಲ, ದೇಶದ ಶಿಕ್ಷಣ ನೀತಿ. ವಿದೇಶ, ರಕ್ಷಣಾ ನೀತಿ ಹೇಗೆ ದೇಶದ್ದು ಆಗುತ್ತದೆಯೋ ಹಾಗೆಯೇ ಶಿಕ್ಷಣ ನೀತಿ ದೇಶದ್ದು.
*ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಯುವಕರಿಗೆ ಅಗತ್ಯ ಕೌಶಲ್ಯಗಳು ಬೇಕು. ಅದಕ್ಕೆ ಪ್ರಾಯೋಗಿಕ ಕಲಿಕೆಯ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಇದಕ್ಕೆ ಅವಕಾಶ ಕಲ್ಪಿಸಲಿದೆ ಎಂದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತವನ್ನು ಸಮಾನ, ಸ್ಪರ್ಧಾತ್ಮಕ ಮತ್ತು ಕ್ರಿಯಾಶೀಲ ಜ್ಞಾನದ ಸಮಾಜವನ್ನಾಗಿ ರೂಪಿಸಲಿದೆ.
ಶಿಕ್ಷಣ ನೀತಿ ಓದು, ಬರೆಯುವುದರ ಮೇಲೆ ನಿಂತಿಲ್ಲ. ಇದು ದೇಶದ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ. ವಿದ್ಯಾರ್ಥಿಗಳ ಕಲಿಕೆ ಪುಸ್ತಕಕ್ಕೆ ಮಾತ್ರ ಸೀಮಿತ ಆಗಬಾರದು. ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ.
*ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ತಕ್ಕಂತೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಅದಕ್ಕೆ ಪೂರಕವಾದ ಎಲ್ಲ ಅಂಶಗಳೂ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇವೆ ಹಾಗೂ ದೇಶದ ನಿರೀಕ್ಷೆಗಳನ್ನು ಈಡೇರಿಸುವ ಶಕ್ತಿಯನ್ನು ನೀತಿ ಹೊಂದಿದೆ.
*ಶಿಕ್ಷಣ ನೀತಿ ಇಡೀ ದೇಶಕ್ಕೆ ಹೊಸ ದಿಕ್ಸೂಚಿ ನೀಡುವ ಶಕ್ತಿ ಹೊಂದಿದೆ. ವಿವಿಧ ಕ್ಷೇತ್ರಗಳೂ ಸೇರಿ ಜಾಗತಿಕವಾಗಿ ಆಗುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಎದುರಾಗುತ್ತಿರುವ ಸವಾಲುಗಳಿಗೆ ದೇಶದ ಯುವಜನತೆಯನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ನೀತಿ ದಾರಿ ತೋರಿಸುತ್ತದೆ.
*ದೇಶಾದ್ಯಂತ ಶಿಕ್ಷಣ ನೀತಿಗೆ ಉತ್ತಮ ಪ್ರತಿಕ್ರಿಯೆ ಹಾಗೂ ಸ್ವಾಗತ ವ್ಯಕ್ತವಾಗಿದೆ ಎಂಬುದನ್ನು ನಾನು ಬಲ್ಲೆ. ಹೀಗಾಗಿ ದೇಶದ ಎಲ್ಲ ನಿರೀಕ್ಷೆಗಳಿಗೆ ಶಿಕ್ಷಣ ನೀತಿಯಲ್ಲಿ ಉತ್ತರವಿದೆ. ಆದ್ದರಿಂದ ಈ ನೀತಿಯನ್ನು ಅತ್ಯಂತ ಪರಿಣಾಮಕಾರಿ ಹಾಗೂ ರಚನಾತ್ಮಕವಾಗಿ ಕಟಿಬದ್ಧವಾಗಿ ಎಲ್ಲ ರಾಜ್ಯಗಳು ಜಾರಿ ಮಾಡಬೇಕು.
*ಶಿಕ್ಷಣ ನೀತಿಯೂ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಹೊಸ ಜೋಶ್ ಸೃಷ್ಟಿಸಲಿದೆ. ಪ್ರಾಯೋಗಿಕವಾಗಿ ಮಕ್ಕಳು ಮುಂದಿನ ಹೆಜ್ಜೆ ಇಡಲು ಸಹಕಾರಿಯಾಗುತ್ತದೆ. ಜತೆಗೆ, ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಅತ್ಯಂತ ಪರಿಣಾಮಕಾರಿಯಾಗಿ ನೆರವಿಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಭಾರತದ ಶೈಕ್ಷಣಿಕ ಗುಣಮಟ್ಟ ಮತ್ತಷ್ಟು ಉನ್ನತಮಟ್ಟವನ್ನು ಮುಟ್ಟಲಿದೆ.
ರಾಷ್ಟ್ರಪತಿ ರಾಮನಾಥ ಕೋವಿಂದ್
ರಾಷ್ಟ್ರಪತಿಗಳ ನಿರೀಕ್ಷೆ
ವರ್ಚುಯಲ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಇವತ್ತಿನ ಮಹತ್ತ್ವದ ಅಗತ್ಯ. ದೇಶಾದ್ಯಂತ ನೀತಿಯು ಆದ್ಯತೆಯ ಮೇರೆಗೆ ಜಾರಿಯಾಗಬೇಕಿದೆ ಎಂದು ಕರೆ ನೀಡಿದರು.
ಒಮ್ಮೆ ನೀತಿ ಎಲ್ಲ ಹಂತಗಳಲ್ಲೂ ಅನುಷ್ಟಾನಗೊಂಡರೆ ಪ್ರಸಕ್ತ ಶಿಕ್ಷಣ ನೀತಿಯ ಸ್ವರೂಪವೇ ಬದಲಾಗಲಿದೆ. ಬೋಧನೆಯಲ್ಲಿ ಗುಣಮಟ್ಟ ಹಾಗೂ ಸಂಶೋಧನೆಯಲ್ಲಿ ಉತ್ತಮ ಸಾಧನೆಗೆ ಅದು ಸಹಕಾರಿಯಾಗಲಿದೆ. ಬಹುವಿಷಯಗಳ ಬೋಧನೆಯ ಜತೆಗೆ, ತಮಗೆ ಅಗತ್ಯವಾದ ವಿಷಯಗಳ ಕಲಿಯಲು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಇರುತ್ತದೆ. ಹೀಗಾಗಿ ಭಾರತದ ಮುಂದಿನ ಬೆಳವಣಿಗೆಗೆ ನೂತನ ಶಿಕ್ಷಣ ನೀತಿಯು ಮಹತ್ತ್ವದ ಕಾಣಿಕೆ ನೀಡಲಿದೆ ಎಂಬುದು ತಮ್ಮ ಅಚಲ ನಂಬಕೆ ಎಂದು ರಾಷ್ಟ್ರಪತಿಗಳು ಹೇಳಿದರು.
ರಾಜ್ಯಪಾಲ ವಜೂಭಾಯಿ ವಾಲ & ಡಾ. ಸಿ.ಎನ್. ಅಶ್ವತ್ಥನಾರಾಯಣ
ಕೇಂದ್ರದ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ಸೇರಿದಂತೆ ಎಲ್ಲ ರಾಜ್ಯಗಳು ರಾಲ್ಯಪಾಲರು ಹಾಗೂ ಶಿಕ್ಷಣ ಸಚಿವರು ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ರಾಜ್ಯದ ವತಿಯಿಯಿಂದ ರಾಜ್ಯಪಾಲ ವಜೂಭಾಯಿ ವಾಲ, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬೆಂಗಳೂರು ವಿವಿ ಉಪ ಕುಲಪತಿ ಕೆ. ವೇಣುಗೋಪಾಲ್, ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಮುಖ್ಯಸ್ಥ ಕಸ್ತೂರಿ ರಂಗನ್ , ಸಮಿತಿ ಸದಸ್ಯ ಪ್ರೊ. ಎಂ.ಕೆ.ಶ್ರೀಧರ್ ಸೇರಿದಂತೆ ಅನೇಕ ಗಣ್ಯರು ವರ್ಚುವಲ್ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.
lead photo: wikipedia
ಈ ಸುದ್ದಿಯನ್ನೂ ಓದಿ…
ಗುರುವಾರದ ಹೊತ್ತಿಗೆ ಕಾರ್ಯಪಡೆ ವರದಿ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ರಚಿಸಲಾಗಿರುವ ಕಾರ್ಯಪಡೆ ಇನ್ನು ನಾಲ್ಕು ದಿನಗಳಲ್ಲಿ (ಗುರುವಾರದೊಳಗೆ) ಅಂತಿಮ ವರದಿ ನೀಡಲಿದ್ದು, ಅದು ಕೈಸೇರಿದ ಕೂಡಲೇ ರಾಜ್ಯದಲ್ಲಿ ಶಿಕ್ಷಣ ನೀತಿ ಅನುಷ್ಟಾನದತ್ತ ಸರಕಾರ ಹೆಜ್ಜೆ ಇಡಲಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಕೇಂದ್ರ ಸರಕಾರ ಹಾಗೂ ಬಿಜೆಪಿಯ ಕೇಂದ್ರ ಘಟಕಕ್ಕೆ ಮಾಹಿತಿ ನೀಡಿದ್ದರು.
ಭಾನುವಾರ ಬೆಂಗಳೂರಿನಿಂದಲೇ ಕೇಂದ್ರದ ಮಾನವ ಸಂಪನ್ಮೂಲ ಖಾತೆ ಮಂತ್ರಿ ರಮೇಶ್ ಪೋಖ್ರಿಯಾಲ್ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕಾರ್ಯಪಡೆಯು ಶಿಕ್ಷಣ ನೀತಿಯನ್ನು ಹೇಗೆ ಜಾರಿ ಮಾಡಬೇಕು ಎಂಬ ಬಗ್ಗೆ ಅತ್ಯಂತ ಪರಿಣಾಮಕಾರಿ ಹಾಗೂ ರಚನಾತ್ಮಕವಾದ ವರದಿಯನ್ನು ನೀಡುವ ವಿಶ್ವಾಸವಿದೆ. ಇಡೀ ನೀತಿಯನ್ನು ಎಷ್ಟು ಹಂತಗಳಲ್ಲಿ ಹಾಗೂ ಯಾವ ಯಾವ ದಿಕ್ಕಿನಲ್ಲಿ ಜಾರಿ ಮಾಡಬೇಕೆಂಬ ಮಾಹಿತಿ ವರದಿಯಿಂದ ತಿಳಿಯಲಿದೆ. ಆ ವರದಿ ಸಿಕ್ಕ ಕೂಡಲೇ ನೀತಿಯ ಜಾರಿಯತ್ತ ದೃಢವಾದ ಹೆಜ್ಜೆಗಳನ್ನು ಇಡಲಾಗುವುದು. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದರು.
ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಣ ನೀತಿ ಜಾರಿಯ ಬಗ್ಗೆ ಎಲ್ಲ ರಾಜ್ಯಪಾಲರುಗಳ ಜತೆ ದಿಲ್ಲಿಯಿಂದಲೇ ಆನ್ಲೈನ್ ಸಂವಾದ ನಡೆಸಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಭಾನುವಾರ ಬಿ.ಎಲ್. ಸಂತೋಷ್ ಮತ್ತು ಸಚಿವ ರಮೇಶ್ ಪೋಖ್ರಿಯಾಲ್ ಅವರು ಡಾ. ಅಶ್ವತ್ಥನಾರಾಯಣ ಜತೆ ಮಾತುಕತೆ ನಡೆಸಿದ್ದರು.
ಜಾರಿಗೆ ಸರ್ವಸಿದ್ಧತೆ
ಶಿಕ್ಷಣ ನೀತಿಯಲ್ಲಿರುವ ಅಂಶಗಳ ಬಗ್ಗೆ ಸರಕಾರಕ್ಕೆ ಸ್ಪಷ್ಟ ಮಾಹಿತಿ ಇದೆ. ಹಾಗಾಗಿ ಈಗಾಗಲೇ ಸರಕಾರವು ಕಾರ್ಯಪಡೆ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದೆ. ಜತೆಗೆ, ಎಲ್ಲ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ಜತೆಯಲ್ಲೂ ಸಮಾಲೋಚನೆ ನಡೆಸಲಾಗಿದೆ, ಹಲವಾರು ವೆಬಿನಾರ್ಗಳನ್ನು ಆಯೋಜಿಸಲಾಗಿದೆ. ವಿವಿಧ ಕ್ಷೇತ್ರಗಳ ತಜ್ಞರ ಜತೆಯಲ್ಲೂ ಚರ್ಚಿಸಲಾಗಿದೆ. ಸಮಾಜದ ಎಲ್ಲ ವರ್ಗದ ಜನರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿಕ್ಷಣ ನೀತಿಯ ಬಗ್ಗೆ ವ್ಯಾಪಕ ಸ್ವಾಗತ ವ್ಯಕ್ತವಾಗಿದೆ. ಹೀಗಾಗಿ ಇಡೀ ನೀತಿಯನ್ನು ಅತ್ಯಂತ ರಚನಾತ್ಮಕವಾಗಿ ಜಾರಿ ಮಾಡಲು ಸರ್ವರೀತಿಯಲ್ಲೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಡಾ. ಅಶ್ವತ್ಥನಾರಾಯಣ ತಿಳಿಸಿದ್ದರು.
ಇದರ ಜತೆಜತೆಯಲ್ಲಿ ನೀತಿಯ ಜಾರಿಯ ಬಗ್ಗೆ ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆಡಳಿತ ಯಂತ್ರವನ್ನು ಎಲ್ಲ ರೀತಿಯಲ್ಲೂ ಸಜ್ಜುಗೊಳಿಸಲಾಗಿದೆ. ಹಾಗೆಯೇ, ಶಿಕ್ಷಣ ನೀತಿ ಜಾರಿಗೆ ಬಂದ ನಂತರ ಶೈಕ್ಷಣಿಕ ಸಾಂಸ್ಥಿಕ ರಚನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಅಧಿಕಾರ ವಿಕೇಂದ್ರೀಕರಣವಾಗಿ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಅಧಿಕಾರ ಸಿಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೋಧನೆ ಮತ್ತು ಸಂಶೋಧನೆ ದಿಕ್ಕಿನಲ್ಲಿ ಹೆಚ್ಚು ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಜತೆಗೆ, ವಿವಿಗಳಲ್ಲಿ ವಿದ್ಯಾರ್ಥಿಗಳಿಗೆ ಬಹು ವಿಷಯಗಳ ಕಲಿಕೆ ಹಾಗೂ ವಿಷಯಗಳ ಆಯ್ಕೆಯ ಬಗ್ಗೆ ಹೆಚ್ಚು ಅವಕಾಶಗಳು ಇರುತ್ತವೆ. ಕರ್ನಾಟಕ ರಾಜ್ಯಕ್ಕೆ ಇದರಿಂದ ಹೆಚ್ಚೆಚ್ಚು ಪ್ರಯೋಜನ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದ್ದರು.
***