• About
  • Advertise
  • Careers
  • Contact
Monday, June 15, 2026
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಟಾಲ್‌ಸ್ಟಾಯ್‌ ಅವರಂತೆ ಜೀವಿಸಲು ಯಾರಿಗೂ ಸಾಧ್ಯವಿಲ್ಲ; ಹಾಗೆಯೇ ತನ್ನ ತಾನು ಸುಟ್ಟುಕೊಂಡು ಸಂತನಾಗುವುದೂ ಸುಲಭವಲ್ಲ!

cknewsnow desk by cknewsnow desk
September 20, 2020
in CKPLUS, GUEST COLUMN, WORLD
Reading Time: 4 mins read
0
ಟಾಲ್‌ಸ್ಟಾಯ್‌ ಅವರಂತೆ ಜೀವಿಸಲು ಯಾರಿಗೂ ಸಾಧ್ಯವಿಲ್ಲ; ಹಾಗೆಯೇ ತನ್ನ ತಾನು ಸುಟ್ಟುಕೊಂಡು ಸಂತನಾಗುವುದೂ ಸುಲಭವಲ್ಲ!
947
VIEWS
FacebookTwitterWhatsuplinkedinEmail

ಪ್ರಭುತ್ವದ ಎದುರಾಳಿ, ವಿಚಾರ ಸ್ವಾತಂತ್ರ‍್ಯದ ಪ್ರತಿಪಾದಕ ಲೆವ್‌ ಟಾಲ್‌ಸ್ಟಾಯ್‌ ಎಂಬ ಆರ್ಷೇಯ ವೃದ್ಧರ ಜನ್ಮದಿನ ಇಂದು

110 ವರ್ಷಗಳ ಹಿಂದೆ ಈ ಜಗತ್ತಿಗೆ ವಿದಾಯ ಹೇಳಿಹೊರಟ ಟಾಲ್‌ಸ್ಟಾಯ್‌ ಬಗ್ಗೆ ಹೀಗೆ ಹೃದಯ ಉಕ್ಕುವಂತೆ, ಅದನ್ನೊಮ್ಮೆ ಗಟ್ಟಿಯಾಗಿ ಹಿಂಡುವಂತೆ ಬರೆದಿದ್ದಾರೆ ಕಥೆಗಾರ ಕೇಶವ ಮಳಗಿ. ಇವತ್ತು ಟಾಲ್‌ಸ್ಟಾಯ್‌ ಅವರ ಹುಟ್ಟಿದ ದಿನ. 192 ವರ್ಷಗಳ ಹಿಂದೆ ಇದೇ ದಿನ ಅವರು ಜನಿಸಿದ್ದರು.
…ಮಿಸ್‌ ಮಾಡದೇ ಓದಲೇಬೇಕಾದ ಬರಹವಿದು..

Leo Tolstoy Portrait by Ilya Efimovich Repin / courtesy: wikipedia

ನನ್ನದೇ ಹೆಸರಿನ ಪಾಸ್‌ಪೋರ್ಟ್‌ ಆಗಲಿ, ರೊಕ್ಕದ ಇಡುಗಂಟಾಗಲಿ ಈವರೆಗೆ ಹೊಂದಿರದ ನಾನು, ಬದುಕಿರುವಾಗ ಭೇಟಿ ನೀಡಲೇ ಬೇಕಾದ ಮೂರುನಾಲ್ಕು ಸ್ಥಳಗಳ ಪಟ್ಟಿಯನ್ನು ಮಾಡಿಕೊಂಡಿರುವೆ. ಆ ಯಾದಿಯಲ್ಲಿರುವ ಮೊದಲ ಹೆಸರು: ’ಯಸ್ನಯಾ ಪೊಲ್ಯಾನ’.

ಜನವಿದೂರವಾದ ಆ ’ಬೆಳಗು ಹುಲ್ಲುಗಾವಲು’ ತೋಪಿನಲ್ಲಿ ಜಟೆ ಬೆಳೆಸಿಕೊಂಡ ಪುರಾತನ ಆಲದ ಮರವೊಂದು ನೆಲದಾಳದಲ್ಲಿ ಬೇರು ಬಿಟ್ಟು, ಆಕಾಶಕ್ಕೆ ನಿರುಮ್ಮಳವಾಗಿ ಮುಖ ಮಾಡಿ ನಿಂತಿರುವಂತೆ, ಹೊಸ ಯುಗದ ಪ್ರವಾದಿ ಪ್ರಜ್ಞೆಯ ಸಂತನೊಬ್ಬ ಶತಮಾನದಿಂದ ಮಲಗಿ ನಿದ್ರಿಸುತ್ತಿದ್ದಾನೆ. “ಲೋಕದಲ್ಲಿನ ದುಃಖ, ರೋಗರುಜಿನ, ನೋವುಗಳನ್ನೆಲ್ಲ ಶಮನಗೊಳಿಸುವ ಹಸಿರು ಕಡ್ಡಿಯೊಂದನು ಈ ತೋಪಿನಲ್ಲಿ ನೆಟ್ಟಿರುವೆ, ಇನ್ನು ಮುಂದೆ ಈ ಜಗ ಸಾವುನೋವುಗಳಿಂದ ಮುಕ್ತವಾಗಿ ನೆಮ್ಮದಿಯಿಂದಿರುವುದು”, ಎಂದು ಬಾಲ್ಯದಲ್ಲಿ ಆತನ ಹಿರಿಯ ಸೋದರ ನಿಕೊಲಸ್‌ ಹೇಳಿದ್ದ ಮಾತಿನ ನಂಬಿಕೆಗೆ ಅನುಸಾರವಾಗಿ ’ಇಲ್ಲಿಯೇ ನನ್ನನ್ನು ಮಣ್ಣು ಮಾಡಿ’, ಎಂಬುದು ಆ ಋಷಿಯ ಕೊನೆಯಾಸೆಯಾಗಿತ್ತು. ಹೀಗಾಗಿ, ಆತನನ್ನು ಇಲ್ಲಿ ಕುಣಿ ತೋಡಿ ಮಲಗಿಸಲಾಗಿದೆ.

ಯಸ್ನಯಾ ಪೊಲ್ಯಾನ

ಬಾಲ್ಯದಲಿ, ಆತನ ಎಳೆಯ ಪಾದಗಳು ನಡೆದಾಡಿ ’ಯಸ್ನಯಾ ಪೊಲ್ಯಾನ’ದ ಮಣ್ಣು ಮೃದುವಾಗಿ ಹದಗೊಂಡಿದೆ. ಉದ್ವಗ್ನತೆ ತುಂಬಿದ್ದ ತಾರುಣ್ಯದ ಪ್ರೇಮಕಾಮಗಳ ಸಂಘರ್ಷಗಳ ಸೂಸುವ ಆತನ ಬಿಸಿಯುಸಿರಿನಿಂದ ಈ ತೋಪು ಹೆಪ್ಪುಗಟ್ಟುವ ಚಳಿಗಾಲದಲ್ಲಿಯೂ ಹೊತ್ತಿ ಉರಿದು ಜಗಕೆ ಕಾಮನೆ ಏನೆಂಬುದನು ತೋರಿಸಿಕೊಟ್ಟಿದೆ. ಮಧ್ಯವಯಸ್ಸಿನ ಭಯಾನಕ ದುಸ್ವಪ್ನದಂಥ ವಿಷಮ ದಾಂಪತ್ಯ, ಸಂಬಂಧಗಳ ಅರ್ಥ-ನಿರರ್ಥಗಳ ಬಸಿಯುತ್ತ ಆತ ಕೊತ ಕುದಿದು ಕುಲುಮೆಯಾಗಿದ್ದು ಇಲ್ಲಿನ ಕಲ್ಲು ಬಂಗಲೆಯಲ್ಲಿಯೇ. ಮಕ್ಕಳ ಹುಡುಗಾಟ, ಸಾವುನೋವು ಕಂಡಿದ್ದು ಕೂಡ ಈ ಬಯಲು-ಆಲಯದಲ್ಲಿಯೇ. ಆತನ ಕುದಿತದ ಹಬೆಯೇ ಇಲ್ಲಿ ಮೋಡಗಟ್ಟಿ ಮಳೆ ಸುರಿಸುವುದಂತೆ. ಆ ಮಳೆಯ ನೀರನ್ನು ತೋಪಿನಲ್ಲಿರುವ ಸರೋವರ ಹಿಡಿದಿಟ್ಟು ಬಂದ ಯಾತ್ರಾರ್ಥಿಗಳಿಗೆ ತೀರ್ಥವಾಗಿ ನೀಡುವುದಂತೆ. ತನ್ನ ಕುದುರೆಗಳ ಹೂಡಿ ಸಾಮಾನ್ಯ ರೈತನಂತೆ ಕುಡತಿಯನು ತೊಟ್ಟು ಉತ್ತಿ ಬಿತ್ತುತ್ತಿದ್ದ, ಮರಗೆಲಸ ನಿಪುಣನಾಗಿದ್ದ, ತನ್ನ ಬೂಟುಗಳನ್ನು ತಾನೇ ಹೊಲೆದುಕೊಳ್ಳುತ್ತಿದ್ದ ಈ ಬಡಜನರ ದೊರೆಯ ಬೆವರಿನ ಶ್ರಮದ ತೆನೆಗಳನು ಆ ನೆಲವು ಈಗಲೂ ಬೈಚಿಟ್ಟುಕೊಂಡಿದೆಯಂತೆ. ಆ ಕಾರಣವಾಗಿಯೇ ಅಲ್ಲಿನ ಗಿಡಗಳು ಸರ್ವಋತುವಿನಲೂ ಕ್ರಾಂತಿಯ-ಬದಲಾವಣೆಯ ಹಣ್ಣುಗಳನು ಬಿಡುವವಂತೆ. ಆತ ಬಳಸಿದ ಮಸಿ ಕುಡಿಕೆ, ಪೆನ್ನು, ಅಂಕುಡೊಂಕಿನ ಅಕ್ಷರಗಳಲಿ ಕೆತ್ತಿದ ಶಿಲಾಶಾಸನಗಳಂಥ ಪುಸ್ತಕದ ಹಸ್ತಪ್ರತಿಗಳಲಿ ಈಗಲೂ ಆತನ ಕೈ ಬೆವರಿನ ವಾಸನೆ, ಮಸಿಯ ಹಸಿ, ಅಲ್ಲಿ ಹೋದವರ ಮೂಗಿನ ಹೊರಳೆಗಳನು ತುಂಬಿ ಮತ್ತೇರಿಸಬಲ್ಲವಂತೆ. ಹಾಗೆ ಮತ್ತೇರಿದ ಜನ ಆತನ ಪುಸ್ತಕಗಳ ವ್ಯಸನಿಗಳಾಗಿ ಬದಲಾಗುವರಂತೆ.

ತನ್ನ ಎಂಬತ್ತೆರಡನೆಯ ವಯಸ್ಸಿನಲ್ಲಿ, ನಿದ್ರೆ ಸುಳಿಯದ ಒಂದು ಅಪರಾತ್ರಿ ಎಲ್ಲವನ್ನೂ ಬಿಚ್ಚಿ ಬಿಸಾಕದೆ ಬಿಡುಗಡೆ ಸಾಧ್ಯವಿಲ್ಲವೆಂದು ನಿರ್ಧರಿಸಿ, ಜೋಳಿಗೆಯನ್ನು ಹೆಗಲಿಗೇರಿಸಿ ಈ ಮುದುಕ ಕತ್ತಲೆಯಲಿ ಕರಗಿ ಹೋದ. ಒಂದೊಮ್ಮೆ ತನ್ನ ಬದುಕನ್ನು ರೂಪಿಸಿದ್ದ ’ಯಸ್ನಯಾ ಪೊಲ್ಯಾನ’ವನ್ನು ಹಿಂತಿರುಗಿ ನೋಡುತ್ತ, ನೋಡುತ್ತ ಹೋದವನು, ಮತ್ತಿಲ್ಲಿಗೆ ಮರಳಿದ್ದು ಮರಣದ ಮಹಾನವಮಿ ವೃತವನ್ನು ಪೂರ್ಣಗೊಳಿಸಿಯೇ. ಈ ಅಶಾಂತ ಸಂತನ ಬದುಕಿನ ಬೆಳಗು-ಬೈಗು-ಇರುಳುಗಳನ್ನು ಕಂಡ ಈ ತೋಪಿನಲಿ ಉರುಳಾಡಿ, ಸಮಾಧಿಯೊಳಗಿನ ಆತನ ಆತ್ಮದ ಪಿಸುನುಡಿಗಳನ್ನು ಕೇಳಲು, ಇರುಳಿಡೀ ಆತನ ಸಮಾಧಿಯ ಮಣ್ಣಿನ ಪಕ್ಕದಲಿ ಮಲಗಿ ಬದುಕು-ಬರವಣಿಗೆಯ ಮೊದಲ ತಾಲೀಮನ್ನು ಪಡೆಯಲು ಒಮ್ಮೆಯಲ್ಲ ಒಮ್ಮೆ ಅಲ್ಲಿ ಹೋಗಿಯೇ ತೀರುವೆ ಎನ್ನುವುದು ನನ್ನ ಸಂಕಲ್ಪ!
*

ಯಸ್ನಯಾ ಪೊಲ್ಯಾನ; ಟಾಲ್‌ಸ್ಟಾಯ್‌ ಅವರು ಹುಟ್ಟಿದ ಮನೆ ಮತ್ತು ಸನಿಹದಲ್ಲಿಯೇ ಹಸಿರು ಹೊದಿಕೆಯಲ್ಲಿರುವ ಅವರ ಸಮಾಧಿ ಹಾಗೂ ದಿನನಿತ್ಯವೂ ಓಡಾಡಿದ ದಾರಿ…
COURTESY: WIKIPEDIA

ಸಾವಿನ ನಂತರವೂ ತೆರವಾಗದ ಬಹಿಷ್ಕಾರ!

ಹೇಯ್‌! ಆತನ ಆತ್ಮದ ಪಿಸುದನಿಯನ್ನು ಅಲ್ಲಿಯೇ ಹೋಗಿ ಕೇಳಬೇಕೆ? ಆಳುವವರ ದಬ್ಬಾಳಿಕೆ, ಹಿಂಸೆ ಮಿತಿ ಮೀರಿದಾಗ, ಸಮಾಜದ ಪಾಪದ ಗಳಿಗೆ ಬಟ್ಟಲು ತುಂಬಿ ತುಳುಕಿದಾಗ, ಬಡಜನರ ಬವಣೆ-ಸಂಕಟಗಳು ಇನ್ನು ಸಹಿಸೆವು ಎಂಬಷ್ಟು ಹೆಚ್ಚಿದಾಗ ಈ ವೃದ್ಧನ ಆತ್ಮ ಸಮಾಧಿಯೊಳಗೆ ಕನಲಿ, ಕಂಗೆಟ್ಟು ಹೊರಳಾಡುತ್ತದೆ. ಅದಾಗ ಜನ ನಿದ್ರೆಯಿಂದ ಎಚ್ಚತ್ತು, ಈವರೆಗೆ ಏನೋ ಮರೆತಿದ್ದೆವು, ಎಂಬಂತೆ ತಪ್ಪು ಮಾಡಿದ ಶಿಶುಗಳ ಅಂಜಿಕೆಯಲ್ಲಿ ಆತನ ಕೃತಿಗಳ ಪಾರಾಯಣದಲ್ಲಿ ತೊಡಗುತ್ತಾರೆ. ಸಮಾಜದಲ್ಲಿ ಅನೈತಿಕತೆ, ಹಿಂಸೆ, ಅಸಮಾನತೆಗಳ ನಗ್ನ ನೃತ್ಯ ತಾರಕಕ್ಕೇರಿದಾಗ ಈ ಮುದುಕ ಮತ್ತಷ್ಟು ಕೋಪದಲಿ ಕುದಿಯುವನು. ಆಗ ಎಲ್ಲ ಯೋಜನ, ಕಾಲ-ದೇಶ-ಭಾಷೆಗಳಲಿ ಹೊಸ ಯುಗದ ಸಂತನ ವಾಣಿಯನ್ನು ಪಸರಿಸುವೆವು ಎಂಬಂತೆ ಹೊಸ ಹೊಸ ಲೇಖಕರು ಹುಟ್ಟುವರು. ಮನುಕುಲದ ಸಾವನೋವಿನ, ಸುಖದುಃಖಗಳ ಕಥೆಗಳನ್ನು ಹೊಸದಾಗಿ ಹೇಳಲು ಆರಂಭಿಸುವರು. ತಮ್ಮ ಕಥನಗಳಿಗೆ ಈ ಮದಿಸಿಂಹದ ಕೃತಿಗಳನು ಬುನಾದಿ ಕಲ್ಲುಗಳಾಗಿ ಬಳಸುವರು.

ತನ್ನ ನೆಲದ ಆಳುವ ದೊರೆ ತ್ಸಾರ್‌ನ ದೂರದ ಸಂಬಂಧಿಯಾಗಿದ್ದ ಈತನ ಹೆಸರು ಕೇಳಿದರೆ ದೊರೆ ಭಯಾನಕ ದುಸ್ವಪ್ನ ಕಂಡವನಂತೆ ನಡುರಾತ್ರಿಯಲಿ ಎದ್ದು ಕೂರುತ್ತಿದ್ದನಂತೆ. ಅನೈತಿಕತೆ, ಶೋಷಣೆಯನ್ನೇ ಬದುಕಾಗಿಸಿಕೊಂಡಿದ್ದ ಕುಲೀನ ಸಮಾಜದ ’ಬರಿಯ ಮರ್ಯಾದಸ್ತರು’ ಹೊದಿಕೆಗಳಲ್ಲಿ ತಮ್ಮ ಮುಖವನ್ನು ಮುಚ್ಚಿಕೊಳ್ಳುತ್ತಿದ್ದರೆ, ಮೀತಿಮೀರಿದ ಅನಾಚಾರಗಳ ಈ ಪಾಪಾತ್ಮನ ಧರ್ಮಭ್ರಷ್ಟ ವಿಚಾರಗಳಿಗೆ ಕೆಂಡಾಮಂಡಲವಾಗಿ ಕಂದಾಚಾರಿ ಕ್ರೈಸ್ತಪೀಠ ಈತನನ್ನು ಧರ್ಮದಿಂದ ಬಹಿಷ್ಕರಿಸಿ ಕೈ ತೊಳೆದುಕೊಂಡಿತಂತೆ! ಅದಕ್ಕೆ ಬೇರೆ ಉಪಾಯವಾದರೂ ಎಲ್ಲಿತ್ತು? ಭೌತಿಕವಾಗಿ ಬಂಡೆದ್ದವರನ್ನು ಸೆರೆವಾಸಕ್ಕೆ ತಳ್ಳಬಹುದು. ಜನರ ಆತ್ಮಗಳನ್ನೇ ಒಕ್ಕಲೆಬ್ಬಿಸಿ ಬಂಡಕೋರರನ್ನಾಗಿಸುತ್ತಿರುವ ಈ ನಿರ್ಲಜ್ಜ ಅಜ್ಜನಿಗೆ ಬಹಿಷ್ಕಾರವೇ ತಕ್ಕ ಶಿಕ್ಷೆಯಾಗಿತ್ತು! ಆತನ ಮರಣದ ನೂರಹತ್ತು ವರ್ಷಗಳ ಬಳಿಕವೂ ಆ ಬಹಿಷ್ಕಾರ ತೆರವುಗೊಂಡಿಲ್ಲದಿರುವುದಕ್ಕೆ, ಈ ವೃದ್ಧ ಈಗಲೂ ತನ್ನ ಕೃತಿಗಳ ಮೂಲಕ ವಿಶ್ವದೆಲ್ಲೆಡೆಯ ಸೂಕ್ಷ್ಮ ಜನರನ್ನು ಮಾನಸಿಕವಾಗಿ ಅಸ್ವಸ್ಥಗೊಳಿಸುತ್ತಿರುವುದೇ ಕಾರಣವಂತೆ! ಇಂಥ ಬಹಿಷ್ಕಾರದ ಭಾಗವಾಗಿಯೇ ಮೊನ್ನೆ ಮೊನ್ನೆ ಅಜ್ಜನೇ ಸೃಷ್ಟಿಸಿದ ನೂರಾರು ಪಾತ್ರಗಳ ನಕಲಿನಂತೆ ಕಾಣುವ ಕರಿಕೋಟಿನ ಕಾರಕೂನನೊಬ್ಬ ಈತನ ಮೇಲೆ ಉಗ್ಗಡಿಸಿರುವುದು ಸಹ ಸತ್ಯವೆ ಅಂತೆ!
*

ಅವರಿಂದ ಪಾರಾಗುವ ದಾರಿ

ಎಲ್ಲ ಎಷ್ಟು ಸುಂದರವೂ, ನೆಮ್ಮದಿಯಿಂದ ಕೂಡಿದ್ದೂ ಆಗಿದೆ ಎಂಬ ಚಿತ್ತ ವಿಭ್ರಮೆಯಲ್ಲಿರುವ ಲೋಕವನ್ನು ತನ್ನ ಕೃತಿಗಳಿಂದ ಅಸ್ತವ್ಯಸ್ತಗೊಳಿಸುತ್ತಿರುವ ನಿರಂತರ ಈ ಅತೃಪ್ತ ಮುದುಕನನ್ನು ಲೆವ್‌ (ಲಿಯೋ) ಟಾಲ್‌ಸ್ಟಾಯ್‌ ಎಂದು ಕರೆಯೋಣ (ಹುಟ್ಟಿದ್ದು: ಸೆಪ್ಟೆಂಬರ್‌ 9, 1828, ಯಸ್ನಯಾ ಪೊಲ್ಯಾನದಲ್ಲಿ, ಮರಣ: ನವೆಂಬರ್‌ 20, 1910, ಅಸ್ತಪೊವೊ ರೇಲ್ವೆ ನಿಲ್ದಾಣದ ಮಾಸ್ತರನ ಮನೆಯಲ್ಲಿ). ಒಳಗೇ ಸುಟ್ಟು ಹಾಕುವ ಈತನ ಸಹವಾಸಕ್ಕೆ ಯಾವಾಗ, ಯಾಕಾಗಿ ಬಿದ್ದೆನೊ ಎಂಬ ನೆನಪು ಕೂಡ ನನಗಿಲ್ಲ. ಆದರೆ, ಗಾಂಜಾ-ಅಫೀಮು, ಹೆಂಡ ಮತ್ತು ಜ್ವರದಂತೆ ಜೀವ ಹಿಂಡುವ ಕಾಮನೆಗಳ ವ್ಯಸನದಂತೆ ಈತ ದಶಕಗಳಿಂದ ನನಗೆ ಗಂಟು ಬಿದ್ದಿರುವುದಂತೂ ನಿಜ. ಈತನ ಬಾಲ್ಯ, ಹುಡುಗುತನ, ತಾರುಣ್ಯ,ಗಳ ತ್ರಿವಳಿಗಳನ್ನು (ಚೈಲ್ಡ್‌ಹುಡ್‌, ಬಾಯ್‌ಹುಡ್‌, ಯೂತ್‌) ಪಠಣ ಮಾಡದೆ ನನಗೆ ಬಿಡುಗಡೆಯಿಲ್ಲ. ಈತನ ಕಥೆಗಳಿಂದ, ಬದುಕು ರೂಪಿಸುವ ಬರಹಗಳಿಂದ ಬಿಡಿಸಿಕೊಳ್ಳುತ್ತ ಹೋದಂತೆ, ತೇನವಿನಾ ತೇನವಿನಾ ತೃಣಮಪಿ ಚಲತಿ ನಮ್ಮವಿನಾ, ಎಂಬಂತೆ ಅವುಗಳ ಹುದುಲಿನಲಿ ಸಿಲುಕುತ್ತೇನೆ. ಇವಾನ್‌ ಇಲಿಚ್ಯನ ಸಾವು, ಫಾದರ್‌ ಸೆರ್ಗಿಯ ದುರ್ಭರ ಸಂತ ಬದುಕು, ಸಾವಿನಲಷ್ಟೆ ಮುಕ್ತಿ ಪಡೆಯಬಹುದಾದ ಜೀತಗಾರ ತರುಣ ಅಲ್ಯೋಷನ ಮುಗ್ಧತೆ, ಮೂವರು ಮುಗ್ಧ ಸಂತರ ನೀರ ಮೇಲಿನ ನಡಿಗೆಯ ಪವಾಡ, ಸೊನಾಟದಲ್ಲಿ ತೆರೆದುಕೊಳ್ಳುವ ಪ್ರೇಮ-ಕಾಮ-ಮದುವೆಗಳ ಗೋಜಲು, ಆನಾ ಎಂಬ ಹೆಂಗಸಿನ ಹೃದಯ ವಿದ್ರಾವಕ ಒಂಟಿತನ, ಪ್ರೇಮಕಾಮ, ಭಗ್ನತೆಯ ಕಥನಗಳು, ಆತನ ಧಾರ್ಮಿಕ ವಿಚಾರಗಳು, ಶಿಕ್ಷಣ, ಸಮಾಜದ ಕುರಿತು ಮುನ್ನಾಲೋಚನೆಗಳು ನಾನೆಂದೂ ಮರಳಿ ಸ್ವಸ್ಥ ಬದುಕಿನ ದಡವನ್ನು ತಲುಪಿ ಸೂರ್ಯಾಸ್ತ ನೋಡಿ ಸುಖಿಸದಂತೆ ತಮ್ಮ ಬಳ್ಳಿಗಳಿಂದ ಕಟ್ಟಿ ಹಾಕಿವೆ. ಈತನಿಂದ ಪಾರಾಗುವ ಸುಲಭದ ದಾರಿಯೆಂದರೆ, ಆತನ ಕೃತಿಗಳಲ್ಲಿ ಕಳೆದು ಹೋಗುವುದು. ಇಲ್ಲದಿದ್ದರೆ ಈ ಮುದುಕ ನನ್ನನ್ನು ಬ್ರಹ್ಮೇತಿಯಂತೆ ಕಾಡುವನು. ’ನನ್ನನ್ನು ಓದದೆ ತಿಂಗಳಾದರೂ ಆಗಿರಬೇಕು ನೋಡು’, ಎಂದು ಮೆಲುದನಿಯಲಿ ಎಚ್ಚರಿಸುವನು. ನಾನಾದರೂ ತಕ್ಷಣವೇ ಆತನ ಹತ್ತಾರು ಪುಟಗಳನು ತಿರುವಿ ಹಾಕಿ, ಬಿಡುಗಡೆಗೊಂಡವನಂತೆ ನಿಟ್ಟುಸಿರು ಬಿಡುವೆನು.
*

ಹೋಗಲಿ ಎಂದರೆ, ಈತ ಬದುಕಿಡೀ ಅರೆಗಳಿಗೆಯಾದರೂ ಸಮಾಧಾನಿಯಾಗಿ ಬದುಕಿದನೆ? ಲೋಕಕ್ಕೆ ಸಂಕಟವನು ಸೃಷ್ಟಿಸಲೆಂದೇ ಹುಟ್ಟಿದ ಉಪದ್ವ್ಯಾಪಿಯ ಬದುಕು ಹೇಗೆ ತಾನೆ ನೆಟ್ಟಗಿರಲು ಸಾಧ್ಯ? ಎರಡು ವರ್ಷವಿದ್ದಾಗ ತಾಯಿಯನ್ನು, ಒಂಬತ್ತರ ಹಸುಳೆಯಾಗಿದ್ದಾಗ ತಂದೆಯನ್ನು ಕಳೆದುಕೊಂಡು ಅನಾಥನಾಗಿ ಅತ್ತೆಯ ಬಳಿ ಬೆಳೆದ. ಅತ್ತೆಯ ಗಂಡ ತತಾರ್‌ನ ರಾಜಧಾನಿ ಕಸಾ಼ನ್‌ನ ಗರ್ವನರ್‌ ಆಗಿದ್ದರಿಂದ ನೆಮ್ಮದಿಯ ಸಿರಿವಂತ ಬದುಕೇ ಇತ್ತು. ಆದರೆ, ಇವನು ಸರಿಯಿದ್ದರಲ್ಲವೆ? ತನ್ನ ಬದುಕು ಎಷ್ಟು ಉದಾತ್ತತೆಯಿಂದ ಕೂಡಿರಬೇಕು, ಬದುಕಿನ ಗುರಿ ಏನಾಗಿರಬೇಕು?, ಎಂಬೆಲ್ಲ ಆದರ್ಶಮಯ ವಿಚಾರಗಳನ್ನು ದಿನಚರಿಯಲ್ಲಿ ಟಿಪ್ಪಣಿಯನ್ನೇನೋ ಮಾಡಿಕೊಳ್ಳುತ್ತಿದ್ದ, ಕಸಾ಼ನ್‌ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ್ದ ಹುಡುಗ ಮಾತ್ರ ಕೊನೆಗೊಂಡಿದ್ದು ವೇಶ್ಯೆಯರ ಮನೆಗಳಲ್ಲಿ, ಜೂಜಿನ ಅಡ್ಡೆಗಳಲ್ಲಿ. ಆ ಎಳೆಯಕ್ಕೇ ಲೈಂಗಿಕ ರೋಗ ಅಂಟಿಸಿಕೊಂಡು ವೈದ್ಯರಲ್ಲಿಗೆ ಎಡತಾಕುವಷ್ಟು ಈತ ಹದಗೆಟ್ಟಿದ್ದ. ಈತನ ಶೈಕ್ಷಣಿಕ ಅಶಿಸ್ತಿಗೆ ರೋಸಿದ ಆಡಳಿತ ಮಂಡಳಿ, ಒಂದಿಡೀ ಇರುಳು ಕತ್ತಲು ಕೋಣೆಯಲ್ಲಿ ಕೊಳೆಯಿಸಿತು. ಆದರೂ ಸುಧಾರಿಸದಿದ್ದಾಗ ಶಿಕ್ಷಣ ಸಂಸ್ಥೆಯಿಂದ ಹೊರ ಹಾಕಿತು. ಪೋಕಿರಿ ಲೆವ್‌ ಯಾವುದೇ ಪದವಿಯಿಲ್ಲದೆ ಬರಿಗೈಯಲಿ ಮನೆ ಸೇರಿದ. ಸಾಂಸ್ಥಿಕ ಶಿಕ್ಷಣ, ಶಿಸ್ತು, ಉರು ಹಚ್ಚುವುದು, ಪ್ರೊಫೆಸರುಗಳಿಗೆ ಕಾಕಾ ಹೊಡೆಯುವುದು ಮಹಾ ಸ್ವಾಭಿಮಾನಿ, ಸ್ವತಂತ್ರ ಮನೋಭಾವದ ಈತನಿಗೆ ಹೇಗೆ ತಾನೇ ರುಚಿಸಿಯಾವು? ಸಾಲದಕ್ಕೆ ಮೊದಲ ದಿನವೇ ಪ್ರೊಫೆಸರನೊಬ್ಬನ ಹಿಟ್ಟಿನ ಗಿರಣಿಯ ಕೊರೆತ ತಾಳದೆ ಆತನ 18 ಅಣಕಚಿತ್ರಗಳನು ರಚಿಸಿ ತನ್ನ ಕಲಾ ಪ್ರತಿಭೆಗೆ ತಾನೇ ಬೀಗಿದ್ದ ಬೇರೆ!

ಲೆವ್‌ನಿಗೆ ಪದವಿಯನ್ನು ನೀಡದೆ ವಿಶ್ವವಿದ್ಯಾಲಯದಿಂದ ಹೊರ ಹಾಕಿ ಆಡಳಿತ ಮಂಡಳಿ ತಕ್ಕುದನ್ನೇ ಮಾಡಿತು. ಇಲ್ಲದಿದ್ದರೆ, ಅದಾದ ಮೇಲೆ ಸ್ನಾತಕೋತ್ತರ ಪದವಿ ಮಣ್ಣುಮಸಿಯೆಂದು ಬರೆದು-ಕೊರೆದು ಅದೇ ವಿಶ್ವವಿದ್ಯಾಲಯದಲ್ಲಿ ಮಾಸ್ತರನಾಗಿ ಆತ ನಿವೃತ್ತನಾಗಬೇಕಾಗುತ್ತಿತ್ತು. ಆಗ ಯುದ್ಧ ಮತ್ತು ಶಾಂತಿ, ಪುನರುತ್ಥಾನ, ಒಬ್ಬನಿಗೆ ಎಷ್ಟು ಭೂಮಿ ಬೇಕು, ಕಸ್ಸಾಕ್‌ನ ಸೆರೆವಾಸಿಗಳು, ದೇವರ ಸಾಮ್ರಾಜ್ಯವಿರುವುದು ನಿನ್ನೊಳಗೇ, ಸೂರತ್ತಿನ ಕಾಫಿಹೌಸ್‌, ಹಿಂದೂವಿಗೊಂದು ಪತ್ರ. . . ಹೀಗೆ ಸಾವಿರ ಸಾವಿರ ಪುಟಗಳ ಅಕ್ಷರ ಶಾಸನಗಳನ್ನು ಯಾರು ಕೆತ್ತುತ್ತಿದ್ದರು? ಈ ಪುಸ್ತಕಗಳಿಲ್ಲದ ಜಗತ್ತು ಅನಾಥವಾಗುತ್ತಿತ್ತು.
*

ಹತ್ತೊಂಬತ್ತರ ಹರೆಯಕ್ಕೆ ಶಿಕ್ಷಣದ ಕಥೆ ಮುಗಿದಂತಾಗಿದ್ದರಿಂದ ಪಾರಂಪರಿಕ ಆಸ್ತಿಯನ್ನಾದರೂ ನೋಡಿಕೊಳ್ಳೋಣವೆಂದು ಲೆವ್‌, ಯಸ್ನಯಾ ಪೊಲ್ಯಾನಕ್ಕೆ ಮರಳಿದ. ಯೌವ್ವನದ ಸೊಕ್ಕಿನಿಂದ ತೊನೆಯುತ್ತಿದ್ದವನಿಗೆ ಈ ಕುಗ್ರಾಮ ಹೇಗೆ ತಾನೆ ಆಕರ್ಷಕ? ಈ ವಯಸ್ಸು ಇರುವುದು ಹೊರಲೋಕದ ಅನುಭವಗಳನ್ನು ಬಿಗಿದಪ್ಪಲು. ಹೀಗಾಗಿಯೇ, ಹಳ್ಳಿ ಬಂಗಲೆಯಲ್ಲಿ ಕೊಳೆಯುತ್ತಿರುವೆ, ಎಂದು ಖಿನ್ನತೆಗೆ ಒಳಗಾದ. ಕೊನೆಗೆ ಸೇನಾಧಿಕಾರಿಯಾಗಿ ಕಾಕ್ಸಸ್ಸಿನ ಚೆಚನ್ಯದಲ್ಲಿ ಕೆಲಸ ಮಾಡುತ್ತಿದ್ದ ಸೋದರ ನಿಕೊಲಾಯ್‌ನನ್ನು ಕೂಡಿಕೊಳ್ಳಲು ನಡೆದ. ಅಣ್ಣ, ರಶ್ಯನ್‌ ಪಡೆ ಮತ್ತು ಚೆಚನ್ಯ ಸ್ವಾತಂತ್ರ‍್ಯ ಹೋರಾಟಗಾರರ ನಡುವಿನ ಭೀಕರ ಯುದ್ಧದಲ್ಲಿ ತೊಡಗಿಕೊಂಡಿದ್ದ. ಪರ್ವತ ಪ್ರದೇಶದ ಏಕಾಂತ, ಸೃಷ್ಟಿಯ ಸೊಬಗು ಲೆವ್‌ಗೆ ಉಲ್ಲಾಸ, ಕಸುವು ತುಂಬಿದವು. ಇದ್ದಕ್ಕಿದ್ದಂತೆ ಎಂಬಂತೆ ಬರವಣಿಗೆಯಲ್ಲಿ ತೊಡಗಿಕೊಂಡ. ಒಂದೆರಡು ಕಥೆಗಳು, ಬಳಿಕ ತನ್ನ ಮೊದಲ ಪೂರ್ಣ ಪ್ರಮಾಣದ ಕೃತಿ ’ಚೈಲ್ಡ್‌ಹುಡ್‌’ ಬರೆದ. ಅದು 1851ರಲ್ಲಿ ಪ್ರಕಟವಾದದ್ದೇ ಅಪಾರ ಜನಪ್ರಿಯತೆ ಗಳಿಸಿತು. ಎರಡು ವರ್ಷ ಕಾಕ್ಸಸ್‌ನಲ್ಲಿ ಕಾಲ ಕಳೆದವನು ತಾನೂ ಸೈನ್ಯ ಸೇರಿದ. ಕಪ್ಪು ಸಮುದ್ರದ ಅಂಚಿಗೆ ಪೋಸ್ಟಿಂಗ್‌ ದೊರಕಿತು. ಕ್ರೈಮಿಯ ಯುದ್ಧ (ಇಂದಿನ ಯುಕ್ರೈನ್‌) ಅಂಚಿನಲ್ಲಿತ್ತು. ಒಟ್ಟೊಮನ್‌ ಸಾಮ್ರಾಜ್ಯದ ತುರ್ಕಿಗಳನ್ನು ಬಗ್ಗು ಬಡಿಯಲು ರಶ್ಯಾ, ಬ್ರಿಟನ್‌, ಫ್ರಾನ್ಸ್‌ ಟೊಂಕ ಕಟ್ಟಿದ್ದವು. ಇದೇ ಕಾಲದಲ್ಲಿ, ಆತನ ಜೂಜು, ಕುಡಿತಗಳು ಮತ್ತು ಸುರತ ಸುಖಗಳು ಶೃಂಗ ತಲುಪಿದ್ದವು. ತನ್ನ ಪಾಲಿಗೆ ಬಂದ ಬಹುಪಾಲು ಆಸ್ತಿಯನ್ನು, ಯಸ್ನಿಯಾ ಪೊಲ್ಯಾನದ ಮನೆಯನ್ನೂ ಲೆವ್‌, ಲೆತ್ತದ ಪಣದಲಿ ಸೋಲುವಷ್ಟು ವ್ಯಸನಿಯಾಗಿ ಬದಲಾಗಿದ್ದ.

ಇನ್ನೊಂದೆಡೆ, ಸಮರೋತ್ಸಾಹ, ರಶ್ಯನ್‌ ಸೈನಿಕರ ಕೆಚ್ಚೆದೆ ಮತ್ತು ರಾಷ್ಟ್ರಪ್ರೇಮದಲ್ಲಿ ಮುಳುಗಿ ಏಳುತ್ತಿದ್ದ ೨೬ರ ಹರೆಯದ ಲೆವ್‌, ಯುದ್ಧದ ಅನುಭವಗಳನ್ನು ಕಥಿಸುವ ’ಸೆಬಸ್ಟಪೊಲ್‌ ಸ್ಕೆಚಸ್‌’ (೧೮೫೫) ಪ್ರಕಟಿಸಿದ. ದೇಶಪ್ರೇಮಿ ಜನಗಳು ಹುಚ್ಚೆದ್ದು ಓದಿದರು. ತ್ಸಾರ್‌ ದೊರೆ ಕೃತಿಗೆ ಎಷ್ಟೊಂದು ಮಾರು ಹೋದನೆಂದರೆ ಕೃತಿಯ ಫ್ರೆಂಚ್‌ ಅನುವಾದವನ್ನು ನಿಯೋಜಿಸಿದ. ಆದರೆ, ಎರಡನೆಯ ಸಂಪುಟ ಪ್ರಕಟಿಸುವಷ್ಟರಲ್ಲಿ ಲೆವ್‌ನ ಸಮರೋತ್ಸಾಹ ಇಳಿಯತೊಡಗಿತ್ತು. ಲೆವ್‌, ಬದುಕಿನ ಕಠೋರತೆ, ವಸ್ತುನಿಷ್ಠತೆ ಮತ್ತು ವಾಸ್ತವಕ್ಕೆ ಕಣ್ತೆರೆದುಕೊಳ್ಳತೊಡಗಿದ. ಆಧುನಿಕ ಸಾಹಿತ್ಯದಲ್ಲಿ ವಾಸ್ತವಮಾರ್ಗದ ಕಥನವನ್ನು ತೋರಿಸಿಕೊಟ್ಟಿದ್ದೆ ಈತನಲ್ಲವೆ? ’ನಾವು ಕೆಡಕನ್ನು ಗುರುತಿಸಬೇಕು. ಆದರೆ, ಒಳಿತನ್ನು ಅನುಕರಿಸಬೇಕು. ನನ್ನ ಕಥೆಯ ನಾಯಕ ನಾನಾಗಲಿ, ಯುದ್ಧವಾಗಲಿ, ಸೈನಿಕರಾಗಲಿ ಅಲ್ಲ. ಈ ಕಥೆಯಲ್ಲಿ ನಾಯಕನ ಪಾತ್ರ ವಹಿಸುತ್ತಿರುವುದು ’ಸತ್ಯ’ ಮಾತ್ರ’ ಎಂದು ಬರೆದವನಿಗೆ, ಯುದ್ಧ, ಸ್ವಾರ್ಥ-ಲಾಲಸೆ ಮತ್ತು ಪರರನ್ನು ದಮನಿಸುವ ಹುನ್ನಾರಗಳ ಫಲ, ನಾಗರಿಕತೆಯ ನಾಶಕ್ಕೆ ಮೊದಲ ಹೆಜ್ಜೆ ಎಂದು ಅರಿವಾಗತೊಡಗಿತ್ತು.

ಯುದ್ಧ ಮುಗಿದಿದ್ದೇ ನಿರುಮ್ಮುಳ ಮನಸ್ಸಿನಲ್ಲಿ ಬುದ್ಧಿಜೀವಿಗಳ ಸಗ್ಗವೆಂದು ಪ್ರಸಿದ್ಧವಾಗಿದ್ದ ಸೇಂಟ್‌ ಪೀಟರ್ಸ್‌ಬರ್ಗ್‌‌ಗೆ ಪಯಣ ಬೆಳೆಸಿದ. ’ನಾನು ಬರಹಗಾರನಲ್ಲದೆ ಬೇರೇನೂ ಆಗಲಾರೆ’ ಎಂದು ಲೆ‌ವ್‌ ಆ ವೇಳೆಗೆ ನಿರ್ಧರಿಸಿದ್ದ.
*

ivan Turgenev by Repin / COURTESY: WIKIPEDIA

ಪೀಟರ್ಸ್‌‌ಬರ್ಗ್‌: ಕ್ರಾಂತಿಕಾರಿ ಲೇಖಕರ, ತೀವ್ರಗಾಮಿ ವಿಚಾರವಾದಿಗಳ, ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದ ಮಹಾನ್‌ ಬರಹಗಾರರನ್ನು ಸೃಷ್ಟಿಸಿದ ಚುಂಬಕ ನಗರ. ಇವಾನ್‌ ತರ್ಗನೇವ್‌ ಆ ಕಾಲದ ಬಹುದೊಡ್ಡ ಲೇಖಕ ಮತ್ತು ಕ್ರಾಂತಿಕಾರಿ. ಲೆವ್‌ನಿಗೆ ಕಾಲೇಜು ದಿನಗಳಿಂದಲೇ ಮೆಚ್ಚಿನ ಲೇಖಕ. ತರುಣ ಬರಹಗಾರ ಲೆವ್‌, ತರ್ಗನೇವ್‌ನ ಅತಿಥಿಯಾದ. ಈ ತರುಣ ಅತಿಥಿ ರಾತ್ರಿಪೂರ ಜೂಜು, ವೇಶ್ಯಾವಾಟಿಕೆ, ಕುಡಿತಗಳಲ್ಲಿ ಕಳೆಯುತ್ತ, ಹಗಲಿಡೀ ನಿದ್ರೆ ಮಾಡುವುದು ತರ್ಗನೇವ್‌ನಿಗೆ ಇರುಸುಮುರುಸೇ. ಆದಾಗ್ಯೂ, ಸುಟ್ಟಲ್ಲದೆ ಏನನ್ನೂ ಮುಟ್ಟೆನೆಂಬ ಲೆವ್‌ನ ಎದೆಗಾರಿಕೆ, ಗೂಳಿಮದ ಆತನಿಗೆ ಮೆಚ್ಚು. ಪೀಟರ್ಸ್‌‌ಬರ್ಗ್‌‌ನಲ್ಲಿ ಆಗ ಬಹು ಚರ್ಚೆಯಲ್ಲಿದ್ದ ವಿಷಯವೆಂದರೆ, ಜೀತಪದ್ಧತಿಯ ನಿರ್ಮೂಲನೆ ಮತ್ತು ಭೂಮಿಕಾಣಿಯ ಸಮಾನ ಹಂಚಿಕೆ. ಲೆವ್‌ನಾದರೂ ಸಾವಿರಾರು ಎಕರೆ ಭೂಮಿಕಾಣಿ, ಮುನ್ನೂರು ಜೀತದಾಳುಗಳನ್ನು ಹೊಂದಿದ್ದ ಸುಖಲೋಲುಪ ಕೌಂಟಿಯಾಗಿದ್ದ! ಆತನ ಜೀವನದಲ್ಲಿ ಎಲ್ಲವೂ ವೈರುಧ್ಯವೇ. ಆದರೆ, ಪೀಟರ್ಸ್‌‌ಬರ್ಗ್‌‌ನ ಚರ್ಚೆಯಲ್ಲಿ ಪ್ರಸ್ತಾಪಗೊಂಡ ವಿಷಯಗಳು ಆತನ ಎದೆಯಾಳಕ್ಕೆ ಇಳಿಯತೊಡಗಿದವು.
*

ಲೆವ್‌ ತನ್ನ ಮೂವತ್ನಾಲ್ಕನೆಯ ವಯಸ್ಸಿನಲ್ಲಿ ಮದುವೆಯಾದುದು ತನಗಿಂತ ಹದಿನಾಲ್ಕು ವರ್ಷ ಚಿಕ್ಕವಳಾದ ಸೋಫಿಯಾಳನ್ನು. ಲೆವ್‌ನ ಕೃತಿಗಳನ್ನು ಓದಿದ್ದ ಸೋಫಿಯಾ ಆತನಷ್ಟು ಬುದ್ಧಿವಂತಳಲ್ಲ. ಸರಳ ಮನೆವಾರ್ತೆಯ ಹೆಣ್ಣು. ಆಕೆಯ ಜಗತ್ತೆಂದರೆ ಗಂಡ, ಆತನಿಂದ ಪಡೆದ ಮಕ್ಕಳು, ತೋಟ, ಕುದುರೆಲಾಯ, ಆಳುಗಳು ಮತ್ತು ಇವೆಲ್ಲವನ್ನೂ ಒಳಗೊಂಡ ಕುಟುಂಬ. ಆ ವರ್ಷಗಳಲ್ಲಿ ಲೆವ್‌ನ ಬರಹಗಳ ಶುದ್ಧ ಪ್ರತಿ ತಯಾರಕಿ, ಸಂಪಾದಕಿ, ಓರಣಗಿತ್ತಿ ಎಲ್ಲವೂ ಸೋಫಿಯಾಳೇ. ಕೃತಿಗಳಲ್ಲಿ ಅತ್ಯಂತ ಸೂಕ್ಷ್ಮಗಳನ್ನು ಸೆರೆ ಹಿಡಿವ ಪತಿ ನಿಜದ ಬದುಕಲ್ಲಿ ಅಸೂಕ್ಷನೂ, ವಿಕ್ಷಿಪ್ತನೂ, ದುಷ್ಚಟಗಳ ದಾಸನೂ, ಬೇಜವಾಬ್ದಾರಿಯವನೂ ಆಗಿ ಆಕೆಗೆ ಕಾಣುತ್ತಿದ್ದ. ಬೇಟೆ, ಬೇಟದ ಹುಚ್ಚಿನ ಯಜಮಾನ ವಾರಗಟ್ಟಲೆ ಮನೆಯೇ ಸೇರುತ್ತಿರಲಿಲ್ಲ.

ಪಾಪದ ಸಂತಾಪದಿಂದ ಸಂತನಾಗುವಲ್ಲಿ ದುರ್ಗಮ ದಾರಿಯನ್ನು ಕ್ರಮಿಸುತ್ತಿದ್ದ ಲೆವ್‌ ಮಾತ್ರ ತನ್ನದೇ ಲೋಕದಲ್ಲಿ ಕಳೆದು ಹೋಗಿರುತ್ತಿದ್ದ. ಕಸಾ಼ನ್‌ನಲ್ಲಿ ಹುಡುಗನಾಗಿದ್ದಾಗ ದಿನಚರಿಯಲ್ಲಿ ಬರೆಯುವುದೊಂದು, ಬದುಕುವುದು ತದ್ವಿರುದ್ಧ ಎಂಬಂತಿದ್ದ. ಅಂಥ ದ್ವಂದ್ವ ಈಗಲೂ ಮುಂದುವರೆದಿತ್ತು. ವೈರುಧ್ಯ, ಮಾನಸಿಕ ಸಂಘರ್ಷಗಳು ಮುಂದುವರೆದು ಸೋಫಿಯಾ-ಲೆವ್‌ರ ದಾಂಪತ್ಯ ವಿಷಮಶೀತ ಜ್ವರದಿಂದ ನರಳುತ್ತಿತ್ತು. ಮದುವೆಯಾದವರು ಕೂಡ ಬ್ರಹ್ಮಚರ್ಯ ಆಚರಿಸಬೇಕು, ಆ ಮೂಲಕ ಮಾನವ ಕುಲ ಅಳಿದರೆ ಅದರಿಂದ ಪೃಥ್ವಿಗೆ ಶಾಂತಿ ಎಂದು ಬರೆಯುತ್ತಿದ್ದ. ಆದರೆ, ತಾನೇ ಹದಿಮೂರು ಮಕ್ಕಳ ತಂದೆಯಾಗಿದ್ದ. ಆತ ಕೊನೆಯ ಮಗುವಿನ ತಂದೆಯಾದಾಗ ಅವನ ವಯಸ್ಸು ಅರವತ್ತು. ಹದಿಮೂರು ಮಕ್ಕಳಲ್ಲಿ ನಾಲ್ಕು ಮಕ್ಕಳ ಸಾವು ಸೋಫಿಯಾಳನ್ನಷ್ಟೇ ಅಲ್ಲ, ಲೆವ್‌ನನ್ನೂ ಒಳಗೇ ಕುಸಿಯುವಂತೆ ಮಾಡಿತ್ತು.

ವಿರೋಧಾಭಾಸದ ಬದುಕು, ಒಳಹೊರಗಿನ ಸಂಘರ್ಷದಲ್ಲಿ ಆತ ಇನ್ನಷ್ಟು, ಮತ್ತಷ್ಟು ನವೆಯುತ್ತ ತನ್ನ ಕೃತಿಗಳನ್ನು ಸೃಷ್ಟಿಸುತ್ತಿದ್ದ. ತನ್ನ ದೇಶದಲ್ಲಿ ತ್ಸಾರ್‌, ಪಾರಂಪರಿಕ ಚರ್ಚಿನ ಹಿರಿಯ ಪಾದ್ರಿಯನ್ನು ಬಿಟ್ಟರೆ ಜನ ದೇವರೆಂದು ಆರಾಧಿಸುತ್ತಿದ್ದುದು ಲೆವ್‌ ಟಾಲ್‌ಸ್ಟಾಯ್‌ ಎಂಬ ಈ ಹೊಸ ಯುಗದ ಪ್ರವಾದಿಯನ್ನು ಮಾತ್ರ. ಆತ ಹೊರಗಡಿಯಿಟ್ಟರೆ ನೂರಾರು ಜನ ಇರುವೆಯಂತೆ ಮುತ್ತಿಕೊಳ್ಳುತ್ತಿದ್ದರು. ತಮ್ಮ ಬದುಕನ್ನು ಬಯಲಾಗಿಸುವಂಥದ್ದು ಇನ್ನೇನು ಬರೆಯುವನೋ ಎಂದು ತ್ಸಾರ್‌, ಕುಲೀನರು, ಕ್ರೈಸ್ತಧರ್ಮ ನಿಯಂತ್ರಕರು ಆತಂಕಗೊಳ್ಳುತ್ತಿದ್ದರು. ಆಳುವವರ್ಗಕ್ಕೆ ಸಿಂಹಸ್ವಪ್ನವಾಗಿದ್ದರೂ, ಜನ ಸಾಮಾನ್ಯರು ಮಾತ್ರ, ತಮ್ಮದೇ ಕಥೆಗಳನ್ನೀತ ಮಹಾಕಾವ್ಯವಾಗಿಸುತ್ತಿದ್ದ ಮಹಾಲೇಖಕ. ಆತ ’ಪ್ರಭುತ್ವದ ಕಡುವೈರಿ, ಜನತೆಯ ಮಿತ್ರ’.

ಲೆವ್‌ ಬದುಕಿಡೀ ಧ್ಯಾನಿಸಿದ್ದು ಮನುಷ್ಯ ಅತ್ಯಂತ ಸತ್ಯಸಂಧನಾಗಿ, ಸರಳವಾಗಿ ಬದುಕಲು ಏನು ಮಾಡಬೇಕು? ಜನಸಾಮಾನ್ಯರ ಜೀವನ ಹಸನು ಮಾಡುವುದು ಹೇಗೆ; ಅವರ ಕಷ್ಟಕ್ಕೆ ಆದುಕೊಳ್ಳುವ ಬಗೆ ಯಾವುದು? ಮನುಷ್ಯ ಬದುಕಿದ್ದಾಗ ಪಡೆದುಕೊಳ್ಳುವುದು ಏನು? ಎಂಬುದರ ಕುರಿತು. ತನ್ನ ನಂಬಿಕೆಗೆ ಅಡ್ಡಬಂದರೆ ಆತ ಕ್ರಿಸ್ತನಾಗಿದ್ದರೂ ಸರಿಯೇ ಆತನ ಜನ್ಮ ಜಾಲಾಡದೆ ಬಿಡುವವನಲ್ಲ. ಆತನ ಕೃತಿಗಳು ಬರುಬರುತ್ತ ಹೆಚ್ಚು ಹೆಚ್ಚು ಅನುಭಾವಿಕವೂ, ಆತ್ಮಶೋಧಕವೂ, ಲೋಕೋತ್ತರ ಚೆಲುವಿನಿಂದಲೂ ಕಂಗೊಳಿಸತೊಡಗಿದವು. ಆತ ಕ್ರಿಶ್ಚಿಯನ್‌ ಧರ್ಮಗ್ರಂಥಗಳಿಂದ (ಗಾಸ್ಪೆಲ್‌) ಎಷ್ಟೊಂದು ಹತಾಶೆಗೊಂಡನೆಂದರೆ ಲಭ್ಯವಿದ್ದ ನಾಲ್ಕೂ ಸತ್ಯಸಂದೇಶಗಳನ್ನು ಒಗ್ಗೂಡಿಸಿ ತನ್ನದೇ ಸತ್ಯಸಂದೇಶವನ್ನು ರಚಿಸಿದ! ಏನೇ ಮಾಡಿದರೂ ಆತನ ಮನಸ್ಸು ಸದಾ ಉದ್ವಿಗ್ನ ಸ್ಥಿತಿಯಲ್ಲಿರುತ್ತಿತ್ತು. ಭವ ಬಂಧನದಿಂದ ಕಳಚಿಕೊಳ್ಳದೆ ಬಿಡುಗಡೆಯಿಲ್ಲ ಎಂದು ಮತ್ತೆ ಮತ್ತೆ ಅನ್ನಿಸುತ್ತಿತ್ತು.

ಸಿದ್ಧಾರ್ಥ, ಬುದ್ಧನಾಗಿ ರೂಪಾಂತರಗೊಂಡ ಮೇಲೆ ಉಪದೇಶ ನೀಡಿದರೆ, ಈ ವೃದ್ಧ ಅವೆರಡೂ ಸ್ಥಿತಿಗಳು ಬೇರೆಯಲ್ಲ, ಬದುಕುತ್ತ, ಬದುಕುತ್ತ ಕಂಡಿದ್ದನ್ನು ಕಂಡಿರಿಸುವೆ ಎಂದು ನಂಬಿದವನು. ಆ ಕಾರಣದಿಂದಲೇ ಆತ ಮನೆಯಿಂದ ನಿರ್ಗಮಿಸಿದ್ದು ಜ್ಞಾನವನ್ನು ಪಡೆಯಲು ಅಲ್ಲ. ಬದುಕಿಡೀ ಆತ ಮಾಡಿದ್ದು ಅದನ್ನೇ. ಹೇಗೆ ಪಡೆದನೋ ಹಾಗೆಯೇ ಜನರಿಗೆ ಹಂಚುತ್ತಲೇ ಹೋಗಿದ್ದ. ಜ್ಞಾನ ಪಡೆದ ಮೇಲೆ ಬಯಲಲ್ಲದೆ ಬೇರೇನೂ ಉಳಿಯದು ಎಂದು ಆತನ ಬದುಕು ತೋರಿಸಿಕೊಟ್ಟಿತ್ತು. ತನ್ನ ಎಂಬತ್ತೆರಡನೆಯ ವಯಸ್ಸಿಗೆ ಚಳಿಗಾಲದ ಅಪರಾತ್ರಿಯಲ್ಲಿ ತನ್ನನ್ನು ಅರ್ಥ ಮಾಡಿಕೊಳ್ಳಬಲ್ಲ ಪ್ರೀತಿಪಾತ್ರ ಮಗಳಾಗಿದ್ದ ಅಲೆಕ್ಸಾಂದ್ರಾಳ ಕೋಣೆಯ ಬಾಗಿಲು ತಟ್ಟಿದ, ’ಅಲೆಕ್ಸಾಂದ್ರಾ, ನಾನು ಹೊರಡುತ್ತಿರುವೆ’, ಅಂದ. ’ಎಲ್ಲಿಗೆ?’ ಎಂದು ಮಗಳು ಕೇಳಿದ್ದಕ್ಕೆ, ’ಮತ್ತೆಂದೂ ಮರಳಿ ಬರದಿರುವಲ್ಲಿಗೆ’, ಎಂದು ಉತ್ತರ ನೀಡಿದ್ದ. ಅವು 1910ರ ಅಕ್ಟೋಬರ್‌ನ ಕೊನೆಯ ದಿನಗಳು. ಆಗ ಮನೆ ಬಿಟ್ಟವನು ಎರಡು ಮೂರು ದಿನ ಪಯಣಿಸಿದ. ಆದರೆ, ರೈಲು ಪಯಣ ಮುಂದುವರಿಸದಷ್ಟು ಆರೋಗ್ಯ ಹದಗೆಟ್ಟಿತು. ಕೊನೆಗೆ, ಅಸ್ತೊಪೊವೊ ರೈಲ್ವೆ ಸ್ಟೇಶನ್‌ ಮಾಸ್ಟರನ ಮನೆಯಲ್ಲಿ ಆತನನ್ನು ಇಳಿಸಲಾಯಿತು. ಗಂಟೆಗಂಟೆಗೂ ಆರೋಗ್ಯ ಕ್ಷೀಣಿಸುತ್ತ, ರಕ್ತಹೀನತೆಯಿಂದ ಲೆವ್‌ ಟಾಲ್‌ಸ್ಟಾಯ್ ಅಸುನೀಗಿದ್ದು “ನವೆಂಬರ್‌ 7 (ಹೊಸ ಕಾಲಮಾನದ ಪ್ರಕಾರ ನವೆಂಬರ್‌ 20), ಬೆಳಗಿನ ಜಾವ ಆರು ಗಂಟೆಗೆ. ಲೆವ್‌ ನಿಕೊಲೊವಿಚ್‌ ತೀರಿಕೊಂಡ.” (ಸೋಫಿಯಾಳ ದಿನಚರಿ).

  • ಮಗಳು ಅಲೆಕ್ಸಾಂದ್ರಾ ಮತ್ತು ಟಾಲ್‌ಸ್ಟಾಯ್‌
COURTESY: WIKIPEDIA

ಲೆವ್‌ ತನ್ನ ಮಗಳು ಅಲೆಕ್ಸಾಂದ್ರಾಳಿಗೆ ಒಮ್ಮೆ ಹೇಳಿದ್ದ:

ಬದುಕು ಒಂದು ಕನಸಿನಂತೆ. ಸಾವೊಂದು ಮಹಾ ಅರಿವಿನಂತೆ…

ನಾನು ಮಹಾ ಅರಿವು ಪಡೆವ ಮೊದಲು, ನಮ್ಮ ತರುಣರು ಅತ್ಯವಶ್ಯಕವಾಗಿ ಓದಲೇಬೇಕಾದ ಈ ವೃದ್ಧನ ಬರಹಗಳ ವಾಚಿಕೆಯೊಂದನ್ನು ಸಿದ್ಧಪಡಿಸಿದಂತೆ ಕನಸುವೆ.


***

ಕೇಶವ ಮಳಗಿ

ಕನ್ನಡದ ವರ್ತಮಾನ ಕಾಲದ ಬಹುಮುಖ್ಯ ಕಥೆಗಾರರು. ಟಾಲ್‌ಸ್ಟಾಯ್‌ ಮತ್ತು ಗಾರ್ಕಿ ಅವರಿಂದ ಪ್ರಭಾವಿತರಾದವರು. ಮುಖ್ಯವಾಗಿ ರಶ್ಯನ್‌ ಸಾಹಿತ್ಯದ ಬಗ್ಗೆ ಬಲವಾದ ಒಲವುಳ್ಳವರು. ಸಮಾಜಕ್ಕೆ ಸದಾ ಕಾಲ ಸಲ್ಲುವ ಬರಹಗಾರ. ‘ಕಡಲ ತೆರೆಗೆ ದಂಡೆ’, ‘ಮಾಗಿ ಮೂವತ್ತೈದು’, ‘ವೆನ್ನೆಲ ದೊರೆಸಾನಿ’, ‘ಹೊಳೆ ಬದಿಯ ಬೆಳಗು’ ಕಥಾ ಸಂಕಲನಗಳು ಹಾಗೂ  ‘ಕುಂಕುಮ ಭೂಮಿ’, ‘ಅಂಗಧ ಧರೆ’ ಕಾದಂಬರಿಗಳು, ‘ಬೋರಿಸ್ ಪಾಸ್ತರ್‌ನಾಕ್: ವಾಚಿಕೆ’, “ನೀಲಿ ಕಡಲ ಹಕ್ಕಿ’ (ಕತೆಗಳು), ‘ಮದನೋತ್ಸವ’ (ಕಾದಂಬರಿ), ‘ಸಂಕಥನ’ (ಫ್ರೆಂಚ್ ಸಾಹಿತ್ಯ, ಸಮಾಜ, ಸಂಸ್ಕೃತಿ, ಸಾಹಿತ್ಯ ವಿಮರ್ಶೆ), ‘ಕಡಲಾಚೆಯ ಚೆಲುವೆ’ (ಫ್ರೆಂಚ್ ಕಥೆಗಳು), ಆಲ್ಬರ್ಟ್‌ ಕಾಮು (ತರುಣ ವಾಚಿಕೆ) ಇವು ಅನುವಾದಗಳು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಮಹತ್ತ್ವದ ಪ್ರಶಸ್ತಿಗಳು ಮಳಗಿ ಅವರನ್ನು ಅರಸಿ ಬಂದಿವೆ.

Tags: ivan turgenevkeshava malagileoleo tolstoyRussiatolstoyyasnaya polyana
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಶ್ರೀರಾಮ ನವಮಿ ದಿನ ಅಯೋಧ್ಯೆಯ ಬಾಲ ರಾಮನಿಗೆ ಸೂರ್ಯ ತಿಲಕ

ಶ್ರೀರಾಮ ನವಮಿ ದಿನ ಅಯೋಧ್ಯೆಯ ಬಾಲ ರಾಮನಿಗೆ ಸೂರ್ಯ ತಿಲಕ

by cknewsnow desk
April 17, 2024
0

ಭಕ್ತಿ ಪರವಶತೆಯಿಂದ ಈ ದಿವ್ಯಕ್ಷಣವನ್ನು ಕಣ್ತುಂಬಿಕೊಂಡ ಅಸಂಖ್ಯಾತ ಭಕ್ತರು

Next Post
ಕೋವಿಡ್‌ ಸುಳಿಯಲ್ಲಿ ಸ್ಯಾಂಡಲ್‌ವುಡ್‌; ನೆರವಿಗೆ ಮುಂದಾದ ಸರಕಾರ

ಕೋವಿಡ್‌ ಸುಳಿಯಲ್ಲಿ ಸ್ಯಾಂಡಲ್‌ವುಡ್‌; ನೆರವಿಗೆ ಮುಂದಾದ ಸರಕಾರ

Leave a Reply Cancel reply

Your email address will not be published. Required fields are marked *

Recommended

ಬಾಹುಬಲಿ ಪ್ರಭಾಸ್‌ ಜತೆ ಪ್ರಶಾಂತ್ ನೀಲ್‌ ಸಲಾರ್;‌ ಅನೌನ್ಸ್‌ ಮಾಡಿದ ಕೆಜಿಎಫ್‌ ನಿರ್ಮಾಪಕ ವಿಜಯ್‌ ಕಿರಗಂದೂರು

ಬಾಹುಬಲಿ ಪ್ರಭಾಸ್‌ ಜತೆ ಪ್ರಶಾಂತ್ ನೀಲ್‌ ಸಲಾರ್;‌ ಅನೌನ್ಸ್‌ ಮಾಡಿದ ಕೆಜಿಎಫ್‌ ನಿರ್ಮಾಪಕ ವಿಜಯ್‌ ಕಿರಗಂದೂರು

6 years ago
ಕಲ್ಲು ಗಣಿಗಾರಿಕೆ ಉಪಟಳ; ಡೀಸಿಗೆ ದೂರು ನೀಡಿದ ಮಾಡಪಲ್ಲಿ ಗ್ರಾಮಸ್ಥರು

ಕಲ್ಲು ಗಣಿಗಾರಿಕೆ ಉಪಟಳ; ಡೀಸಿಗೆ ದೂರು ನೀಡಿದ ಮಾಡಪಲ್ಲಿ ಗ್ರಾಮಸ್ಥರು

5 years ago

Popular News

  • ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

    ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

    0 shares
    Share 0 Tweet 0
  • ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

    0 shares
    Share 0 Tweet 0
  • ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

    0 shares
    Share 0 Tweet 0
  • ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

    0 shares
    Share 0 Tweet 0
  • ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ  ತಗಾದೆ; ರಾಜ್ಯಕ್ಕೆ ಆಘಾತ

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ತಗಾದೆ; ರಾಜ್ಯಕ್ಕೆ ಆಘಾತ

June 2, 2025
ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2025 cknewsnow | Website Design  by Karnatakabest Digital Services

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2025 cknewsnow | Website Design  by Karnatakabest Digital Services

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ