ಒಂದೆಡೆ ಕೋವಿಡ್, ಇನ್ನೊಂದೆಡೆ ಪೈರಸಿ. ಇದರ ಜತೆ ಜತೆಯಲ್ಲಿಯೇ ಸಾಲು ಸಾಲು ಸಮಸ್ಯೆಗಳು. ಇದು ಸ್ಯಾಂಡಲ್‌ವುಡ್‌ನ ಸದ್ಯದ ಪರಿಸ್ಥಿತಿ. ಈ ಸುಳಿಯಿಂದ ಹೊರಬರಲು ಇಡೀ ಇಂಡಸ್ಟ್ರೀ ಇನ್ನಿಲ್ಲದೇ ಟ್ರೈ ಮಾಡುತ್ತಿದೆ. ಮುಖ್ಯವಾಗಿ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1, ಸುದೀಪ್ ಅವರ ಪೈಲ್ವಾನ್ ಹಾಗೂ ರಕ್ಷಿತ್ ಶೆಟ್ಟಿಯ ಅವನೇ ಶ್ರೀಮನ್ನಾರಾಯಣದಂಥ ಬಿಗ್ ಬಜೆಟ್, ಚಿತ್ರಗಳು ಬಂದ ಮೇಲಂತೂ ಪೈರಸಿ ಫಟಿಂಗರಿಗೆ ಸ್ಯಾಂಡಲ್‌ವುಡ್ ಹುಲ್ಲುಗಾವಲಾಯಿತು. ಇವರ ಹೆಡೆಮುರಿ ಕಟ್ಟಲು ಸರಕಾರ ಪ್ಲ್ಯಾನ್ ಮಾಡುತ್ತಿದೆ.
ಬೆಂಗಳೂರು: ಕೋವಿಡ್ ಪೀಡೆಯಿಂದ ತೀವ್ರ ಹೊಡೆತಕ್ಕೆ ಸಿಲುಕಿರುವ ಕನ್ನಡ ಚಿತ್ರರಂಗವನ್ನು ಹೇಗಾದರೂ ಮೇಲೆತ್ತಲು ರಾಜ್ಯ ಸರಕಾರ ಕೊನೆಗೂ ಮುಂದಾಗಿದೆ. ವೈರಸ್ ಅಪ್ಪಳಿಸುವ ಮುನ್ನವೇ ಪೈರಸಿ ಸೇರಿ ಹತ್ತುಹಲವು ಬಿಕ್ಕಟ್ಟುಗಳಿಂದ ಬಸವಳಿದಿದ್ದ ಸ್ಯಾಂಡಲ್‌ವುಡ್ ಇದೀಗ ಚೇರಿಸಿಕೊಳ್ಳಲು ಹರಸಾಹಸ ನಡೆಸುತ್ತಿದೆ. ಅದಕ್ಕಾಗಿ ಸರಕಾರದ ನೆರವನ್ನು ಕೇಳುತ್ತಿದೆ.
ಬೆಂಗಳೂರಿನಲ್ಲಿ ಬುಧವಾರ ಚಿತ್ರರಂಗದ ಪ್ರಮುಖರ ಜತೆ ಮಹತ್ತ್ವದ ಮಾತುಕತೆ ನಡೆಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಈ ಬಗ್ಗೆ ಮತ್ತಷ್ಟು ಮಾತುಕತೆ ನಡೆಸುವ ಹಾಗೂ ಎಲ್ಲ ಬಿಕ್ಕಟ್ಟುಗಳಿಗೆ ರಚನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತಷ್ಟು ಮಾತುಕತೆ ನಡೆಸುವ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ವಹಿಸಿದ್ದರು. ಅದರಂತೆ, ಇಪ್ಪತ್ತನಾಲ್ಕು ಗಂಟೆಗಳಲ್ಲೇ ಅಂದರೆ, ಗುರುವಾರ ಚಿತ್ರರಂಗದ ಗಣ್ಯರೊಂದಿಗೆ ಚರ್ಚೆ ನಡೆಸಿದ ಡಿಸಿಎಂ, ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಚಿತ್ರರಂಗಕ್ಕೆ ತನ್ನೆಲ್ಲ ಬಿಕ್ಕಟ್ಟುಗಳು ಶಮನ ಆಗುತ್ತವೆ ಎಂಬ ಭರವಸೆ ಮೂಡಿದ್ದು, ಇನ್ನು ಕೆಲ ದಿನಗಳಲ್ಲಿಯೇ ಉತ್ತಮ ಫಲಿತಾಂಶ ಬರಬಹುದು ಎಂಬ ನಿರೀಕ್ಷೆಯಲ್ಲಿದೆ ಚಿತ್ರರಂಗ. ಇದೇ ವೇಳೆ ಚಿತ್ರರಂಗ ಮುಂದಿಟ್ಟಿರುವ ಎಲ್ಲ ಬೇಡಿಕೆಗಳ ಬಗ್ಗೆ ಕೂಲಂಕಶವಾಗಿ ಪರಿಶೀಲನೆ ನಡೆಸಿರುವ ಡಿಸಿಎಂ, ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದ ಇಲಾಖೆಗಳು ಹರಿದುಹಂಚಿ ಹೋಗಿವೆ. ಇವೆಲ್ಲವನ್ನೂ ಒಂದೇ ವೇದಿಕೆಯಡಿ ತಂದು ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಗಟ್ಟಿಯಾದ ಪ್ರಯತ್ನ ನಡೆಸಲಾಗುತ್ತಿದೆ ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ತಿಳಿಸಿದರು.
ಆಡಳಿತಾತ್ಮಕ ಬದಲಾವಣೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜಿನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸೇರಿ ಹಲವಾರು ಇಲಾಖೆಗಳ ವತಿಯಿಂದ ಚಿತ್ರರಂಗದ ಕೆಲಸಗಳು ಆಗಬೇಕಿದೆ. ಈಗ ಇವೆಲ್ಲ ವ್ಯವಸ್ಥೆಗಳನ್ನು ಒಂದೇ ವೇದಿಕೆಗೆ ತಂದು ಏಕಗವಾಕ್ಷಿ ವ್ಯವಸ್ಥೆ ಮೂಲಕ ಸಿನಿಮಾ ಬಿಕ್ಕಟ್ಟುಗಳನ್ನು ಬಗೆಹರಿಸುವ ಕೆಲಸಕ್ಕೆ ಸರಕಾರ ಕೈಹಾಕಿದೆ. ಈ ನಿಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಮಹತ್ತ್ವದ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಡಿಸಿಎಂ ಅವರು ಚಿತ್ರರಂಗದ ಜತೆ ಮತ್ತೊಮ್ಮೆ ಮಾತುಕತೆ ನಡೆಸುವ ನಿರೀಕ್ಷೆ ಇದೆ.
ಇನ್ನೊಂದೆಡೆ ಮಾರ್ಚ್ 14ರಿಂದಲೇ ಚಿತ್ರಮಂದಿರಗಳು ಬಾಗಿಲೆಳೆದುಕೊಂಡಿದ್ದವು. ಇದ್ದಕ್ಕಿದ್ದಂತೆ ಚಿತ್ರ ಪ್ರದರ್ಶನ, ಶೂಟಿಂಗ್ ಮತ್ತಿತರೆ ಎಲ್ಲ ಚಟುವಟಿಕೆಗಳು ಸ್ಥಗಿತವಾಗಿಬಿಟ್ಟವು. ಜತೆಯಲ್ಲೇ ಲಾಕ್‌ಡೌನ್ ಬಂತು. ಕ್ರಮೇಣ ಅನ್‌ಲಾಕ್ ಮಾಡಲಾಗುತ್ತಿದ್ದರೂ ಕೇಂದ್ರ ಸರಕಾರ ಇನ್ನೂ ಸಿನಿಮಾ ಪ್ರದರ್ಶನದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ಕೈಗೊಳ್ಳಿ ಎಂದು ಚಿತ್ರರಂಗ ಕೇಳುತ್ತಿದೆ. ರಾಜ್ಯ ಸರಕಾರ ದಿಲ್ಲಿಯ ಮಾರ್ಗಸೂಚಿಗೆ ಕಾಯುತ್ತಿದೆ. ದಂತಚೋರ ವೀರಪ್ಪನ್ ವರನಟ ಡಾ. ರಾಜಕುಮಾರ್ ಅವರನ್ನು ಅಪಹರಿಸಿದ್ದ ವೇಳೆ ಸುಮಾರು ಹದಿನೈದು ದಿನ ಇಡೀ ಚಿತ್ರರಂಗ ಸ್ಥಗಿತವಾಗಿತ್ತು. ಈಗ ಕೋವಿಡ್ ಕಾರಣದಿಂದ ಆರು ತಿಂಗಳಿಗೂ ಹೆಚ್ಚು ಕಾಲದಿಂದ ನಿಂತನೀರಾಗಿಬಿಟ್ಟಿದೆ. ಒಂದು ಅಂದಾಜಿನಂತೆ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್, ಏಕಪರದೆ ಥಿಯೇಟರ್‌ಗಳೂ ಸೇರಿ ಒಟ್ಟು 800ಕ್ಕೂ ಹೆಚ್ಚು ತೆರೆಗಳಲ್ಲಿ ಸಿನಿಮಾಗಳು ಪ್ರದರ್ಶನವಾಗುತ್ತಿದ್ದವು. ಅವೆಲ್ಲವೂ ಇದೀಗ ಮೌನವಾಗಿದ್ದು, ಧೂಳು ತುಂಬಿವೆ.
ಚಿತ್ರರಂಗಕ್ಕೆ ಸರಕಾರದ ಕಡೆಯಿಂದ ಕಾಯಕಲ್ಪ ಆಗಬೇಕಿದೆ. ಇಲ್ಲವಾದರೆ ಕಷ್ಟವಾಗುತ್ತಿದೆ. ಕೋವಿಡ್‌ನಿಂದ ಕಂಗೆಟ್ಟಿರುವ ಚಿತ್ರೋದ್ಯಮಕ್ಕೆ ಈಗ ಕಷ್ಟಕಾಲ. ಸರಕಾರಕ್ಕೆ ಎಲ್ಲ ಸಮಸ್ಯೆಗಳನ್ನೂ ಹೇಳಿದ್ದೇವೆ. ಬಗೆಹರಿಯುವ ನಿರೀಕ್ಷೆ ಖಂಡಿತಾ ಇದೆ ಎನ್ನುತ್ತಾರೆ ಎನ್ನುತ್ತಾರೆ ಹಿರಿಯ ನಟಿ, ಮಾಜಿ ಶಾಸಕಿ ತಾರಾ ಅವರು.
ಸುದೀರ್ಘ ಮನವಿ ಪತ್ರ
ಉಳಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ದೊಡ್ಡ ಮನವಿ ಪತ್ರವನ್ನೇ ಸರಕಾರಕ್ಕೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಹಿರಿಯ ನಟ ಶಿವರಾಜ್ ಕುಮಾರ್ ಅವರು ಕೂಡ ಇದೇ ಬೇಡಿಕೆಗಳ ಪಟ್ಟಿಯನ್ನು ಇಟ್ಟುಕೊಂಡು ಡಿಸಿಎಂ ಮತ್ತು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಜತೆ ಮಾತುಕತೆ ನಡೆಸಿದ್ದರು.
ಶೂಟಿಂಗ್‌ಗೆ ಅನುಮತಿ ನೀಡಿ
ಇದು ಮೊದಲ ಬೇಡಿಕೆ. ಕೋವಿಡ್ ಕಾರಣಕ್ಕೆ ಚಿತ್ರರಂಗದ ಎಲ್ಲ ಚಟುವಟಿಕೆಗಳೂ ಸ್ಥಗಿತವಾಗಿವೆ. ಶೂಟಿಂಗ್ ಜತೆಗೆ ರೆಕಾರ್ಡಿಂಗ್, ಎಡಿಟಿಂಗ್, ಡಬ್ಬಿಂಗ್ ಎಲ್ಲವೂ ನಿಂತಿದೆ. ಈವರೆಗೆ ಸಾಕಷ್ಟು ಅನ್‌ಲಾಕ್ ಮಾಡಲಾಗಿದ್ದು, ಸಿನಿಮಾ ಚಟುವಟಿಕೆಗಳಿಗೂ ಅನುಮತಿ ನೀಡಲು ಕೇಳಲಾಗಿದೆ.
ಫಿಲ್ಮ್‌ಸಿಟಿ
ಆದಷು ಬೇಗ ಫಿಲ್ಮ್‌ಸಿಟಿ ಸ್ಥಾಪನೆ ಮಾಡಬೇಕು ಎಂಬುದು ಚಿತ್ರರಂಗದ ಮತ್ತೊಂದು ಪ್ರಮುಖ ಬೇಡಿಕೆ. ಈಗಾಗಲೇ ಇದಕ್ಕಾಗಿ ಬಜೆಟ್‌ನಲ್ಲಿ ೫೦೦ ಕೋಟಿ ರೂ. ಅನುದಾನ ನೀಡಲಾಗಿದೆ. ಕನಕಪುರ ರಸ್ತೆಯ ರೋರಿಕ್ ಎಸ್ಟೇಟ್ ಬದಲು ಹೆಸರಘಟ್ಟದಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಸರಕಾರ ಮುಂದಾಗಿದೆ. ಅಲ್ಲಿ ಪಶುಸಂಗೋಪನಾ ಇಲಾಖೆಯ ೪೦೦ ಎಕರೆ ಜಾಗವಿದ್ದು, ಅದರಲ್ಲಿ ೧೫೦ ಎಕರೆಯನ್ನು ಚಿತ್ರನಗರಿಗೆ ನೀಡಲು ಸರಕಾರ ನಿರ್ಧರಿಸಿದೆ. ಈ ಬೇಡಿಕೆ ಬಹುತೇಕ ಈಡೇರಿಕೆ ಹಂತದಲ್ಲಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಯೋಜನೆಗೆ ಅಡಿಲ್ಲು ಹಾಕುವ ನಿರೀಕ್ಷೆ ಇದೆ.
ನಿರ್ಮಾಪಕರಿಗೆ ಜಿಎಸ್‌ಟಿ ಪಾಲು
ಕನ್ನಡ ಚಿತ್ರಗಳಿಗೆ ಜಿಎಸ್‌ಟಿ ವಿನಾಯ್ತಿಯನ್ನು ರಾಜ್ಯ ಸರಕಾರವೇ ಘೋಷಿಸಿತ್ತು. ಅದರಂತೆ ಸಂಗ್ರಹವಾಗುವ ಜಿಎಸ್‌ಟಿ ಮೊತ್ತವನ್ನು ಆಯಾ ಚಿತ್ರಗಳ ನಿರ್ಮಾಪಕರಿಗೆ ವಾಪಸ್ ಕೊಡಿಸಬೇಕು ಎಂದು ಚಿತ್ರರಂಗ ಮನವಿ ಮಾಡಿದೆ. ಈ ಬಗ್ಗೆಯೂ ಸರಕಾರ ಸಕಾರಾತ್ಮಕವಾಗಿ ಯೋಚಿಸುತ್ತಿದೆ. ಇದರ ಜತೆಗೆ, ವ್ಯಾಟ್‌ನಲ್ಲಿಯೂ ವಿನಾಯಿತಿ ನೀಡಬೇಕು ಎಂಬ ಬೇಡಿಕೆಯೂ ಇದೆ.
ಏಕಗವಾಕ್ಷಿ ಪದ್ಧತಿ
ಕೇಂದ್ರ ಸರಕಾರ ಈಗಾಗಲೇ ಏಕಗವಾಕ್ಷಿ ಪದ್ಧತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಈ ಪದ್ಧತಿಯನ್ನು ರಾಜ್ಯ ಸರಕಾರವೂ ಜಾರಿ ಮಾಡಬೇಕು. ಶೂಟಿಂಗ್ ಸೇರಿ ಸಿನಿಮಾ ಸಂಬಂಧಿತ ಎಲ್ಲ ಚಟುವಟಿಕೆಗಳಿಗೆ ಇದು ಅನುಕೂಲ ಆಗುತ್ತದೆ.
ಪೈರಸಿಗೆ ನಿಗ್ರಹ
ಚಿತ್ರರಂಗ ಎದುರಿಸುತ್ತಿರುವ ಬಿಕ್ಕಟ್ಟುಗಳಲ್ಲಿ ಪೈರಸಿ ಅತ್ಯಂತ ಜಟಿಲ ಹಾಗೂ ದೊಡ್ಡ ಬಿಕ್ಕಟ್ಟಾಗಿದೆ. ಗುಣಾತ್ಮಕ ಚಿತ್ರಗಳ ತೊಟ್ಟಿಲಾಗಿದ್ದ ಸ್ಯಾಂಡಲ್‌ವುಡ್‌ನಲ್ಲಿ ಇದೀಗ ಬಾಲಿವುಡ್ ಅನ್ನೂ ಸರಿಗಟ್ಟುವ ಬಿಗ್ ಬಜೆಟ್ ಸಿನಿಮಾಗಳೂ ಬರುತ್ತಿವೆ. ಕೆಜಿಎಫ್, ಪೈಲ್ವಾನ್ ಚಿತ್ರಗಳು ಬಂದ ಮೇಲಂತೂ ಪೈರಸಿ ಹಾವಳಿ ಮಿತಿಮೀರಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ. ಚಿತ್ರರಂಗ ಸಿನಿಮಾಗಳ ಪೈರಸಿ ಬಗ್ಗೆ ತೀವ್ರ ಆತಂಕವನ್ನು ಹೊಂದಿದೆ. ಆ ಹಿನ್ನೆಲೆಯಲ್ಲಿ ಸರಕಾರ ಇಡೀ ಚಿತ್ರರಂಗಕ್ಕೆ ಸೈಬರ್ ಸೆಕ್ಯೂರಿಟಿ ಖಾತ್ರಿ ಕೊಡಲು ಸಿದ್ಧವಾಗಿದೆ. ಅತ್ಯುತ್ತಮ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಬರುತ್ತಿದ್ದು, ಅವುಗಳನ್ನು ಅಗಂತುಕರು ಪೈರಸಿ ಮಾಡಿ ಆನ್‌ಲೈನ್‌ನಲ್ಲಿ ಬಿಡುತ್ತಿರುವುದರಿಂದ ನಿರ್ಮಾಪಕರಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಇದಕ್ಕೆ ಚರಮಗೀತೆ ಹಾಡುವ ನಿಟ್ಟಿನಲ್ಲಿ ನಮ್ಮ ಸೈಬರ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಡಿಸಿಎಂ ಚಿತ್ರರಂಗದ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಲೋಕಲ್ ತೆರಿಗೆಗಳಲ್ಲಿ ವಿನಾಯಿತಿ
ಕೋವಿಡ್ ಕಾರಣಕ್ಕೆ ಮುಚ್ಚಲ್ಪಟ್ಟಿರುವ ಏಕಪರದೆ ಥಿಯೇಟರ್‌ಗಳಿಗೆ ವಿದ್ಯತ್, ನೀರಿನ ಬಿಲ್ ಮತ್ತು ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂಬುದು ಮತ್ತೊಂದು ಬೇಡಿಕೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಈಗಾಗಲೇ ಸರಕಾರ ಭರವಸೆ ನೀಡಿದೆ.
ಕೈಗಾರಿಕೆ ಸ್ಥಾನಮಾನ
ಕನ್ನಡ ಚಿತ್ರರಂಗದಲ್ಲಿ ಈಗ ಬಿಗ್ ಬಜೆಟ್ ಚಿತ್ರಗಳು ನಿರ್ಮಾಣ ಆಗುತ್ತಿವೆ. ಕೆಜಿಎಫ್, ಪೈಲ್ವಾನ್ ಸೇರಿ ಹತ್ತಾರು ಬಿಗ್ ಬಜೆಟ್ ಚಿತ್ರಗಳು ಬಂದ ಮೇಲೆ ಸ್ಯಾಂಡಲ್‌ವುಡ್ ಈಗ ಇತರೆ ಎಲ್ಲ ಚಿತ್ರರಂಗಗಳಿಗೆ ಸಡ್ಡು ಹೊಡೆಯುವ ದಿಕ್ಕಿನಲ್ಲಿ ಬೆಳೆಯುತ್ತಿದೆ. ಹೀಗಾಗಿ ಇಂಡಸ್ಟ್ರಿಗೆ ಕೈಗಾರಿಕಾ ಸ್ಥಾನಮಾನ ನೀಡಬೇಕು ಎಂಬುದು ಮತ್ತೊಂದು ಮನವಿ.
ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಹೇಳದ್ದು ಹೀಗೆ..,
“ಕನ್ನಡ ಚಿತ್ರರಂಗಕ್ಕೆ 85 ವರ್ಷಗಳ ಅವಿಚ್ಛಿನ್ನ ಇತಿಹಾಸವಿದೆ. ಅತಿ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದೆ. ದೊಡ್ಡ ಬಜೆಟ್ ಚಿತ್ರಗಳೂ ಬರುತ್ತಿವೆ. ಹೀಗಾಗಿ ಚಿತ್ರರಂಗಕ್ಕೆ ಉದ್ಯಮದ ಸ್ಥಾನಮಾನ ನೀಡಿದರೆ ಇನ್ನಷ್ಟು ಉತ್ತಮ ಬೆಳವಣಿಗೆ ಆಗುತ್ತದೆ” ಎಂಬುದು ಅವರ ಅಭಿಪ್ರಾಯ.
ಚೇಂಬರ್‌ಗೆ ಅಧಿಕೃತತೆ
ಇದೊಂದು ಜಟಿಲ ಸಮಸ್ಯೆ. ಈಗಾಗೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರರಂಗದ ಮಾತೃಸಂಸ್ಥೆ ಎಂಬ ಮಾನ್ಯತೆ ಇದೆ. ಆದರೆ ಇತ್ತೀಚೆಗೆ ಚೇಂಬರ್‌ಗೆ ಸಡ್ಡು ಹೊಡೆದು ಇತರೆ ವಾಣಿಜ್ಯ ಮಂಡಳಿಗಳು ಅಸ್ತಿತ್ವಕ್ಕೆ ಬಂದಿವೆ. ಆದರೆ, ಸರಕಾರ ಮಾತ್ರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೇ ಚಿತ್ರರಂಗದ ಅಧಿಕೃತ ಸಂಸ್ಥೆ ಎಂದು ಮಾನ್ಯತೆ ನೀಡಬೇಕು ಎಂಬುದು ಚಿತ್ರರಂಗದ ಬೇಡಿಕೆಯಾಗಿದೆ.
ಇವುಗಳ ಜತೆ ಮತ್ತಷ್ಟು ಬೇಡಿಕೆಗಳ ಪಟ್ಟಿಯಿದ್ದು, ಬಗೆಹರಿಸಲು ಸಾಧ್ಯವಾಗುವ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ. ತುರ್ತಾಗಿ ಕೋವಿಡ್ ಬಿಕ್ಕಟ್ಟಿನಿಂದ ಚಿತ್ರರಂಗವನ್ನು ಪಾರು ಮಾಡುವುದು ಸರಕಾರದ ಆದ್ಯತೆ ಎನ್ನುತ್ತಾರೆ ಅವರು.
“ಚಿತ್ರರಂಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತದೆ. ಎಲ್ಲವನ್ನು ಸರಕಾರದ ಗಮನಕ್ಕೆ ತಂದಿದ್ದೇವೆ. ಇಡೀ ಚಿತ್ರರಂಗ ಒಟ್ಟಾಗಿ ಕೆಲಸ ಮಾಡುತ್ತಿದೆ. ಸರಕಾರದ ಕಡೆಯಿಂದಲೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿದೆ. ಹೀಗಾಗಿ ನಮಗೆ ಭರವಸೆ ಮೂಡಿದೆ” ಎಂದು ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಹೇಳಿದರು.
Lead Photo by Bruno Massao from Pexels