ಬೆಂಗಳೂರು: ಇದೇ ಸೆಪ್ಟೆಂಬರ್ 15ರಂದು ಆಚರಿಸಲಾದ ಹಿಂದಿ ದಿವಸಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮತ್ತೊಂದು ಅಂಶದ ಬಗ್ಗೆ ಕನ್ನಡಿಗರು ಮಾತ್ರವಲ್ಲ, ಎರಡು ರಾಜ್ಯಗಳ ತೆಲುಗು ಭಾಷಿಗರು, ತಮಿಳರು ಮತ್ತು ಮಲೆಯಾಳಿಗಳು ಬೇಸರಪಡುವಂಥ ಸುದ್ದಿಯೊಂದು ದಿಲ್ಲಿಯಿಂದ ಬಂದಿದೆ.
ಅದೇನು ಅಂತೀರಾ? ಮುಂದೆ ಓದಿ…
ಭಾರತದ ಸಮಗ್ರ ಇತಿಹಾಸ ಹಾಗೂ ನಮ್ಮ ದೇಶದ ಸಾಂಸ್ಕೃತಿಕ ಹುಟ್ಟು, ಅದರ ವಿಕಾಸವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯು 16 ಸದಸ್ಯರುಳ್ಳ ಸಮಿತಿಯೊಂದನ್ನು ರಚಿಸಿದೆ. ಆದರೆ, ಆ ಸಮಿತಿಯಲ್ಲಿ ಅಭಿಜಾತ ಭಾಷೆ ಕನ್ನಡಕ್ಕೆ ಸೇರಿದ ಒಬ್ಬೇ ಒಬ್ಬರಿಗೂ ಅವಕಾಶ ಸಿಕ್ಕಿಲ್ಲ. ಅಷ್ಟೇ ಅಲ್ಲದೆ, ದಕ್ಷಿಣದ ಪ್ರಮುಖ ಭಾಷೆಗಳಾದ ತಮಿಳು, ತೆಲುಗು ಹಾಗೂ ಮಲೆಯಾಳವನ್ನು ಪ್ರತಿನಿಧಿಸುವ ಒಬ್ಬರಿಗಾದರೂ ಜಾಗ ನೀಡದೆ ಕಡೆಗಣಿಸಲಾಗಿದೆ.
ಈ ಬಗ್ಗೆ ಕೇಂದ್ರ ಸರಕಾರ ಸೋಮವಾರವೇ (ಸೆ.14) ಪ್ರಕಟಣೆ ಹೊರಡಿಸಿ ಅಧ್ಯಯನ ಸಮಿತಿಗೆ ನೇಮಕಗೊಂಡವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಆ ಪಟ್ಟಿಯ ಬಗ್ಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಅಥವಾ ಕಾಂಗ್ರೆಸ್‌ಗೆ ಸೇರಿದ ಯಾವೊಬ್ಬ ನಾಯಕನೂ ಚಕಾರವೆತ್ತಿಲ್ಲ. ಆದರೆ, ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪಟ್ಟಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಬುಧವಾರ ಟ್ವೀಟ್ ಮಾಡಿದ್ದಾರೆ. ಮಾತ್ರವಲ್ಲ, ಕನ್ನಡ ಹಾಗೂ ದಕ್ಷಿಣ ಭಾರತೀಯ ಭಾಷೆಗಳ ಬಗ್ಗೆ ಕೇಂದ್ರ ತಾಳುತ್ತಿರುವ ಮಲತಾಯಿ ಧೋರಣೆ ಬಗ್ಗೆ ಕಿಡಿಕಾರಿದ್ದಾರೆ.
ಈ ಪಟ್ಟಿಯಲ್ಲಿ ದಕ್ಷಿಣ ಭಾರತದ ಪರಂಪರೆಯ ಜ್ಞಾನವಿರುವ ಓರ್ವ ಕನ್ನಡಿಗರಾಗಲಿ, ಅಥವಾ ಮಹಿಳೆಯರಾಗಲಿ, ಇಲ್ಲವೇ ದ್ರಾವಿಡರಾಗಲಿ ಇಲ್ಲ ಬೇಸರ ವ್ಯಕ್ತಪಡಿಸಿರುವ ಕುಮಾರಸ್ವಾಮಿ, ಈ ಬಗ್ಗೆ ಸರಣಿ ಟ್ವೀಟ್ ಮಾಡಿ ಕೇಂದ್ರದ ನೀತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಭಾರತದ 12,000 ವರ್ಷಗಳ ಇತಿಹಾಸ, ಸಂಸ್ಕೃತಿ ಮತ್ತು ಜಗತ್ತಿನ ಇತರೆ ಸಂಸ್ಕೃತಿಗಳೊಂದಿಗಿನ ಸಂಪರ್ಕದ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರಕಾರವು ಈಗ 16 ಸದಸ್ಯರ ತಜ್ಞರ ಸಮಿತಿ ರಚಿಸಿದೆಯಷ್ಟೇ. ಈ ಸಮಿತಿಯಲ್ಲಿ ಕನ್ನಡಿಗರಾಗಲಿ, ದ್ರಾವಿಡ ಪರಂಪರೆಗೆ ಸೇರಿದ ದಕ್ಷಿಣ ಭಾರತೀಯರಾಗಲಿ, ಮಹಿಳೆಯರಾಗಲಿ ಇಲ್ಲವೇ ಇಲ್ಲವಾಗಿರುವುದು ದುರದೃಷ್ಟಕರ.
“ಕನ್ನಡಿಗ ಪ್ರತಿನಿಧಿಗಳೇ ಇಲ್ಲದ ಸಮಿತಿಯಿಂದ ಕರ್ನಾಟಕದ ಇತಿಹಾಸ, ಪರಂಪರೆಯ ಅಧ್ಯಯನ ನಡೆಸುವುದು ಸಾಧ್ಯವಾಗುತ್ತದೆಯೇ? ದಕ್ಷಿಣ ಭಾರತವೇ ಇಲ್ಲದ ಇಡೀ ಭಾರತದ ಇತಿಹಾಸ ಅಧ್ಯಯನ ನಡೆಯುವುದಾದರೂ ಹೇಗೆ? ಈ ದೇಶವನ್ನು ತಾಯಿಗೆ ಹೋಲಿಸಿ ಪೂಜಿಸಿದವರು ನಾವು. ಹೆಣ್ಣನ್ನು ಪೂಜಿಸುವ ದೇಶದ ಸಂಸ್ಕೃತಿ ಅಧ್ಯಯನ ಮಾಡುವ ಸಮಿತಿಯಲ್ಲಿ ಮಹಿಳೆಗೇ ಸ್ಥಾನವೇ ಇಲ್ಲವೇ? ಕೂಡಲೇ ಸಮಿತಿಯ ಪುನಾರಚನೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿ” ಎಂದು ಅವರು ಒತ್ತಾಯ ಮಾಡಿದ್ದಾರೆ.
ಅನೇಕ ಸಂಗತಿಗಳ ಬಗ್ಗೆ ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಇತ್ತೀಚೆಗೆ ಜಿಎಸ್‌ಟಿ ಪಾಲಿನ ಬಗ್ಗೆ ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿದ್ದವು. ಅದಾದ ಮೇಲೆ ಹಿಂದಿ ದಿವಸ ಹೇರಿಕೆಯ ಬಗ್ಗೆ ಕೂಡ ಅತೃಪ್ತಿ ವ್ಯಕ್ತವಾಗಿತ್ತು. ಈಗ ಈ ಸಮಿತಿ ರಚನೆಗೆ ಸಂಬಂಧಿಸಿದಂತೆ ತಾರರಮ್ಯ ಕಣ್ಣಿಗೆ ರಾಚುವಂತೆ ಕಾಣುತ್ತಿದೆ. ಇದನ್ನು ಕೇಂದ್ರ ಸರಿಪಡಿಸಬೇಕಿದೆ.