ಬೆಂಗಳೂರು: ರಾಜ್ಯ ಸರಕಾರದ ವಿವಿಧ ಇಲಾಖೆಗಳ ಕಚೇರಿಗಳು, ನಿರ್ದೇಶನಾಲಯಗಳು, ಅಕಾಡೆಮಿಗಳಿರುವ ನಗರದ ಅಂಬೇಡ್ಕರ್ ವೀಧಿಯ ವಿಶ್ವೇಶ್ವರಯ್ಯ ಟವರ್ಸ್ ಆವರಣದಲ್ಲಿ ಮುಖ್ಯದ್ವಾರದ ಸನಿಹದಲ್ಲಿ ನಿತ್ಯವೂ ವಿರಾಮದ ಸಮಯದಲ್ಲಿ ಚೌಕಾಬಾರ ಆಡುತ್ತಾ ಕುಳಿತಿರುತ್ತಿದ್ದ ವಿವಿಧ ಅಧಿಕಾರಿಗಳ ಕಾರು ಚಾಲಕರಿಗೆ ಅನುಕೂಲವಾಗುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಅವರ ಸೂಚನೆ ಮೇರೆಗೆ ಗ್ರಂಥಾಲಯ ಇಲಾಖೆಯಿಂದ ಪತ್ರಿಕೆಗಳನ್ನು ಒದಗಿಸಲಾಗಿದೆ.
ಇತ್ತೀಚಿಗೆ ವಿಶ್ವೇಶ್ವರಯ್ಯ ಟವರ್ಸ್ ನ 4ನೇ ಮಹಡಿಯಲ್ಲಿರುವ ಗ್ರಂಥಾಲಯ ಇಲಾಖೆ ಕಚೇರಿಯಲ್ಲಿನ ಸಭೆಗೆ ಆಗಮಿಸಿದ್ದ ಪ್ರಾಥಮಿಕ ಸುರೇಶ್ ಕುಮಾರ್ ಭೇಟಿ ನೀಡಿ ಸಭೆ ಮುಗಿಸಿ ಹೊರಬಂದು ಕಾರಿನಲ್ಲಿ ತೆರಳುತ್ತಿದ್ದರು. ಆಗ ಎಡಗಡೆ ಕಣ್ಣು ಹಾಯಿಸಿದಾಗ ಹತ್ತಾರು ಮಂದಿ ಗುಂಪೂಗೂಡಿದ್ದನ್ನು ನೋಡಿ ಕಾರಿನಿಂದ ಇಳಿದು ಸ್ಥಳಕ್ಕೆ ಭೇಟಿ ನೀಡಿದರು. ಆಗ ಕಾರು ಚಾಲಕರೆಲ್ಲ ಚೌಕಾಬಾರ ಆಡುವುದರಲ್ಲಿ ತೊಡಗಿದ್ದರು. ಕಾರು ಚಾಲಕರು ಚೌಕಾಬಾರ ಆಡುವುದನ್ನು ಗಮನಿಸಿ ಅವರನ್ನು ಮಾತನಾಡಿಸಿದ ಸಚಿವರು ಗ್ರಂಥಾಲಯ ಇಲಾಖೆ ನಿರ್ದೇಶಕರನ್ನು ಕರೆದು, ಚಾಲಕರಿಗೆ ವಿರಾಮ ದೊರೆತಾಗ ಓದಲು ಅನುಕೂಲವಾಗುವಂತೆ ಈ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಲು ಸೂಚಿಸಿದರು.
ಸಚಿವರ ನಿರ್ದೇಶನದಂತೆ ಗ್ರಂಥಾಲಯ ಇಲಾಖೆ ನಿರ್ದೇಶಕರು ಚಾಲಕರು ಚೌಕಾಬಾರ ಆಡುತ್ತಿದ್ದ ಸ್ಥಳಕ್ಕೆ ಪತ್ರಿಕೆಗಳನ್ನು ಪೂರೈಸಿದ್ದು, ಚಾಲಕರೆಲ್ಲ ಚೌಕಾಬಾರ ಆಟದ ಬದಲಿಗೆ ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದಾರೆ. ತಮಗೆಲ್ಲ ಪತ್ರಿಕೆ ಒದಗಿಸಲು ಸೂಚಿಸಿರುವುದಕ್ಕೆ ಚಾಲಕರು ಸುರೇಶ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈಗ ಚೌಕಾಬಾರ ಆಡುವ ಸ್ಥಳ ವಾಚಾನಾಲಯವಾಗಿ ಮಾರ್ಪಟ್ಟಿದೆ ಎಂದು ಚಾಲಕರು ಖುಷಿ ವ್ಯಕ್ತಪಡಿಸಿದ್ದಾರೆ.
ಕನ್ನಡ ಪತ್ರಿಕೆ ಓದುತ್ತಿರುವ ಸರಕಾರಿ ಕಚೇರಿಗಳ ಚಾಲಕರು.