ಇಂಗ್ಲಿಷ್ ಮೂಲ: ಮೇಜರ್ ಜನರಲ್ ಸರ್ ಜೇಮ್ಸ್ ಜಾನ್ಸ್ಟೋನ್ / ಕನ್ನಡಕ್ಕೆ : ಡಾ. ಎಂ.ವೆಂಕಟಸ್ವಾಮಿ
ಇತಿಹಾಸ ಎಂಬುದು ಇತಿಹಾಸವೇ. ಅದನ್ನು ಅಳಿಸಲು ಅಸಾಧ್ಯ. ನಮ್ಮ ದೇಶವೇನು? ಜಗತ್ತಿನ ಉದ್ದಗಲಕ್ಕೂ ಇದೇ ಇತಿಹಾಸವನ್ನೇ ಇಟ್ಟುಕೊಂಡು ತಲೆತಲೆಮಾರುಗಳಿಂದ ವಾದವಿವಾದ, ತಿಕ್ಕಾಟ ನಡೆಯುತ್ತಿದೆ, ಕಚ್ಚಾಟವಾಗುತ್ತಿದೆ, ನೆತ್ತರೂ ಹರಿಯುತ್ತಿದೆ. ಅದು ಭಾರತದಲ್ಲಿ, ಕರ್ನಾಟಕದಲ್ಲಿಯೂ ಆಗಿದೆ. ಐತಿಹಾಸಿಕ ಅನ್ಯಾಯಕ್ಕೊಳಗಾದ ಈಶಾನ್ಯ ಭಾರತದ ಮಹಾ ಸಮರವೊಂದು ಆ ಬ್ರಹ್ಮಪುತ್ರನ ಒಡಲಲ್ಲಿ ಮುಳುಗಿ ಹೋಗಿದೆ. ಅದನ್ನು ಜಗತ್ತಿಗೆ ಮೊದಲು ತೋರಿಸಿದವರು ಬ್ರಿಟಿಷ್ ಸೇನಾಧಿಕಾರಿ ಮೇಜರ್ ಜನರಲ್ ಸರ್ ಜೇಮ್ಸ್ ಜಾನ್ಸ್ಟೋನ್. ಆಮೇಲೆಯೂ ಜಗತ್ತಿನ ಇತಿಹಾಸಕಾರರ ಗಮನವನ್ನೇ ಸೆಳೆಯದ ಈ ಯುದ್ಧದ ಬಗ್ಗೆ ಜಾನ್ಸ್ಟೋನ್ ಅವರೇ ಬರೆದ ಬರಹವನ್ನು ಕನ್ನಡಿಗರಿಗಾಗಿ ಅನುವಾದಿಸಿದ್ದಾರೆ ಹಿರಿಯ ಭೂವಿಜ್ಞಾನಿ ಡಾ. ಎಂ.ವೆಂಕಟಸ್ವಾಮಿ. ಮರೆಯಲ್ಪಟ್ಟಿದ್ದ ಮಹಾ ಸಂಗತಿಯೊಂದನ್ನು ಅವರು ಹೆಕ್ಕಿ ತೆಗೆದಿದ್ದಾರೆ. ಇದು ಸಿಕೆನ್ಯೂಸ್ ನೌ ಓದುರಿಗೆ ವಿಶೇಷ ಕೊಡುಗೆ. 12,000 ವರ್ಷಗಳಿಗೂ ಹಿಂದಿನ ಭಾರತೀಯ ಇತಿಹಾಸ, ಸಂಸ್ಕೃತಿಯ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರಕಾರ ಈಚೆಗೆ ಸಮಿತಿಯೊಂದನ್ನು ರಚಿಸಿರುವ ಹಿನ್ನೆಲೆಯಲ್ಲಿ ಈ ಲೇಖನದ ಮಹತ್ತ್ವ ಮತ್ತೂ ಹೆಚ್ಚಾಗಿದೆ.
ಈಶಾನ್ಯ ಭಾರತ ದಕ್ಷಿಣ-ಪೂರ್ವ ಏಶಿಯಾದ ಸಾಂಸ್ಕೃತಿಕ ಪಾಡಸಾಲೆ. 2.6 ಮಿಲಿಯನ್ ಚದರ ಕಿ.ಮಿ. ವಿಸ್ತೀರ್ಣದ ಪ್ರದೇಶದಲ್ಲಿ ಎಂಟು ರಾಜ್ಯಗಳಿದ್ದು ಅವುಗಳನ್ನು ಸಪ್ತ ಸಹೋದರಿಯರು ಮತ್ತು ಒಬ್ಬ ಪುಟ್ಟ ತಮ್ಮ ಎನ್ನುತ್ತಾರೆ. ಈ ವಲಯದಲ್ಲಿ ಸುಮಾರು 130 ಪ್ರಮುಖ ಬುಡಕಟ್ಟು ಮತ್ತು ಉಪಬುಡಕಟ್ಟು ಜನಾಂಗಗಳು ವಾಸಿಸುತ್ತಿವೆ. ಈಶಾನ್ಯ ಭಾರತ ಭೌಗೋಳಿಕವಾಗಿ, ಸಾಂಸ್ಕೃತಿವಾಗಿ ಮತ್ತು ಚಾರಿತ್ರಿಕವಾಗಿ ಬಹಳ ವೈವಿದ್ಯತೆಯನ್ನು ಹೊಂದಿದ್ದು, ಇಂಡೋ-ಮಂಗೋಲಾಯ್ಡ್ ಜನಾಂಗಗಳು ನೂರಾರು ವರ್ಷಗಳಿಂದ ಸಂಕರಗೊಂಡಿವೆ. ನೈಸರ್ಗಿಕ ರಮಣೀಯವಾದ ಈ ಪ್ರದೇಶ ಹಿಮಾಲಯ ಪರ್ವತ ಶ್ರೇಣಿಗಳು ಮತ್ತು ದಟ್ಟ ಹರಿದ್ವರ್ಣ ಕಾಡುಗಳಿಂದ ಕಂಗೊಳಿಸುತ್ತಿದ್ದರೆ, ಮಧ್ಯ ಭಾಗದಲ್ಲಿ ಗಂಡು ನದಿ ಬ್ರಹ್ಮಪುತ್ರ ಈ ಭಾಗವನ್ನು ಸೀಳಿಕೊಂಡು ಹರಿಯುತ್ತದೆ.
ಕ್ರಿ.ಶ. 1228ರಲ್ಲಿ ರ್ಮಾದ ಆಓಮ್ಸ್ ಜನರು ಚಿಂದ್ವಿನ್ ಮತ್ತು ಇರಾವಾಡಿ ನದಿ ಕಣಿವೆಗಳ ಮೂಲಕ ಈಶಾನ್ಯ ವಲಯಕ್ಕೆ ಬಂದು ಇಲ್ಲಿನ ಜನಾಂಗಗಳ ಮೇಲೆ ದಾಳಿ ಮಾಡುವುದರ ಮೂಲಕ ಇಲ್ಲಿನ ಇತಿಹಾಸ ತೆರೆದುಕೂಳ್ಳುತ್ತದೆ. ಅದಕ್ಕೂ ಮುಂಚೆ ಕೆಲ ಚೀನಿ ಇತಿಹಾಸಕಾರರು ಇಲ್ಲಿನ ಜನರ ಬಗ್ಗೆ ದಾಖಲಿಸಿರುವುದು ಚರಿತ್ರೆಯಲ್ಲಿ ಕಾಣಸಿಗುತ್ತದೆ. ಹಿಂದೂ ಪುರಾಣಗಳು ಮತ್ತು ಮಹಾಭಾರತದಲ್ಲಿ ಇದೇ ಜನಾಂಗಗಳ ಬಗ್ಗೆ ಕೆಲ ಕಡೆ ಉಲ್ಲೇಖಗಳು ದೂರಕುತ್ತವೆ. ನಾಗಾಲ್ಯಾಂಡಿನಲ್ಲಿರುವ ದಿಮಾಪುರ ಮಹಾಭಾರತದಲ್ಲಿ ಭೀಮನು ವರಿಸಿದ ಹಿಡಿಂಭಳ ಊರು ಹಿಡಿಂಭಾಪುರವಾಗಿ, ಅರ್ಜುನನು ವರಿಸಿದ ಸುಭದ್ರಳ ತವರು ಮಣಿಪುರ ಎಂಬ ಉಲ್ಲೇಖಗಳು ಇವೆ.
ಈ ವಲಯದಲ್ಲಿ ಮೂಲವಾಗಿ ಕಾಕಸಿಕ್ ಮತ್ತು ಮಂಗೋಲಾಯ್ಡ್ ಎಂಬ ಎರಡು ಜನಾಂಗಗಳು ಇದ್ದವು. ಮಂಗೋಲಾಯ್ಡ್’ರಲ್ಲಿ ಪರ್ವತ ಮತ್ತು ಬಯಲು ಪ್ರದೇಶಗಳಲ್ಲಿ ನೆಲೆ ನಿಂತವರು. ಅದಕ್ಕೂ ಮುಂಚೆ ಆಸ್ಟ್ರೋಲಾಯ್ಡ್ ಎಂಬ ಜನರು ಇಲ್ಲಿ ನೆಲೆಸಿದ್ದರು. ಬಹುಶಃ ಮಂಗೋಲಾಯ್ಡ್ ಜನಾಂಗಗಳು ಹೆಚ್ಚಾಗಿ ವಲಸೆ ಬಂದ ಕಾರಣ ಆಸ್ಟ್ರೋಲಾಯ್ಡ್ ಚಿಹ್ನೆಗಳಿರುವ ಜನಾಂಗಗಳನ್ನು ಮಂಗೋಲಾಯ್ಡ್ ಜನಾಂಗಗಳು ಜೀರ್ಣಿಸಿಕೊಂಡರಬೇಕು. ಆರ್ಯರ ವೇದಗಳ ಕಾಲದಲ್ಲಿ ಇವರನ್ನು ನಿಶಾದಾಸ್ ಮತ್ತು ಸಬಾರಾಸ್ ಎಂದು ಗುರುತಿಸಲಾಗಿದೆ. ಆಸ್ಟ್ರೋಲಾಯ್ಡ್’ರನ್ನು ಪುಲಿಂದಾಸ್ ಎಂದೂ ಮಂಗೋಲಾಯ್ಡ್’ರನ್ನು ಕಿರಾತಾಸ್ ಎಂದು ಕರೆಯಲಾಗಿದೆ.
ಉತ್ತರ-ಪಶ್ಚಿಮ ಚೀನಾದ ಹೋಹಾಂಗ್ ಮತ್ತು ಯಾಂಗ್-ಟೆಝ್ ಕಿಯಾಂಗ್ ನದಿಗಳ ಉಗಮಸ್ಥಾನ ಪ್ರದೇಶಗಳು ಮಂಗೋಲಾಯ್ಡರ ಮೂಲ ಸ್ಥಳ ಎಂದು ಗುರುತಿಸಲಾಗಿದೆ. ಪ್ರಾಗೈತಿಹಾಸಿಕ ಕಾಲದಿಂದಲೇ ಗುಂಪು ಗುಂಪುಗಳಾಗಿ ಅವರು ದಕ್ಷಿಣ ಮತ್ತು ಪಶ್ಚಿಮದ ಕಡೆಗೆ ವಲಸೆ ಬಂದಿದ್ದಾರೆ. ಮೊದಲಿಗೆ ಬರ್ಮಾ ಕಡೆಗೆ ಬಂದು ಅಲ್ಲಿಂದ ಇನ್ನಷ್ಟು ಗುಂಪುಗಳಾಗಿ ಹೊಡೆದುಕೊಂಡು ಪ್ರತ್ಯೇಕಗೊಂಡಿದ್ದಾರೆ. ಒಂದು ಗುಂಪು ಬರ್ಮಾದ ತಳಭಾಗಕ್ಕೆ, ಇನ್ನೊಂದು ಗುಂಪು ದಕ್ಷಿಣ-ಪೂರ್ವ ಏಷಿಯಾದ ಕಡೆಗೆ, ಮತ್ತೊಂದು ಗುಂಪು ಬ್ರಹ್ಮಪುತ್ರ ಕಣಿವೆಯ ಕಡೆಗೆ ಬಂದಿವೆ. ಅಲ್ಲಿಂದ ಇನ್ನೊಂದು ಗುಂಪು ನೇಪಾಳದ ಕಡೆಗೆ ಸಾಗಿದೆ.
ಸಂಸ್ಕೃತ ಸಾಹಿತ್ಯದಲ್ಲಿ ಮಂಗೋಲಾಯ್ಡರನ್ನು ಕಿರಾತಾಸ್ ಎಂದು ಉಲ್ಲೇಖಿಸಲಾಗಿದೆ. ಒಂದು ಕಾಲಕ್ಕೆ ಇವರು ಈಶಾನ್ಯ ಭಾರತದ ಮೂಲೆ ಮೂಲೆಯನ್ನೂ ಆವರಿಸಿಕೊಂಡಿದ್ದರು. ಇಂಡೋ-ಮಂಗೋಲಾಯ್ಡ್ ಗುಂಪಿಗೆ ಸೇರಿದ ಬೋಡೋ ಗುಂಪಿನ ಭಾಷೆಗಳನ್ನು ಮಾತನಾಡುವವರು ಬ್ರಹ್ಮಪುತ್ರ ಕಣಿವೆಯಿಂದ ಪೂರ್ವ ಮತ್ತು ಪಶ್ಚಿಮ ಬಂಗಾಲದವರೆಗೂ ಹರಡಿದ್ದರು ಎನ್ನಲಾಗಿದೆ. ಪ್ರಸ್ತುತ ಅವರನ್ನು ಬೋಡೊ, ಕಛಾರಿ, ಘಾರೋ, ಹಾಜೋಂಗ್, ತ್ರಿಪುರಿಗಳೆಂದು ಕರೆಯಲಾಗುತ್ತದೆ. ಈ ಮಂಗೋಲಾಯ್ಡ್ ಗುಂಪುಗಳು ವಿವಿಧ ಪರಿಸರಗಳಲ್ಲಿ ನೆಲೆಯೂರಿ ಹಲವಾರು ಸಣ್ಣ ಸಣ್ಣ ಹೆಸರಿನ ಗುಂಪುಗಳಾಗಿ ಈಶಾನ್ಯ ವಲಯದಲ್ಲಿ ಇಂದು ಅಸ್ತಿತ್ವದಲ್ಲಿವೆ.
ಮಂಗೋಲಾಯ್ಡ್’ರು ಈ ಪ್ರದೇಶಕ್ಕೆ ಬರುವುದಕ್ಕಿಂತ ಮುಂಚೆ ಇಲ್ಲಿ ಕಕಾಸಾಯ್ಡ್ ಮೂಲದ ಜನಾಂಗಗಳಿದ್ದವು ಎನ್ನಲಾಗಿದೆ. ಕಕಾಸಾಯ್ಡ್ ಮತ್ತು ಮಂಗೋಲಾಯ್ಡರ ನಡುವೆ ನೂರಾರು ವರ್ಷಗಳಲ್ಲಿ ಭಿನ್ನ ಕುಲ ಮದುವೆಗಳು ಮತ್ತು ಸಜಾತೀಕರಣದಿಂದ ಕಕಾಸಾಯ್ಡ್ ಮತ್ತು ಮಂಗೋಲಾಯ್ಡ್ ಲಕ್ಷಣಗಳು ಮಿಳಿತಗೊಂಡಿವೆ. ಕಕಾಸಾಯ್ಡ್ ಲಕ್ಷಣಗಳನ್ನು ಪ್ರಬಲ ಮಂಗೋಲಾಯ್ಡ್ ಜನಾಂಗಗಳು ಜೀರ್ಣಿಸಿಕೊಂಡುಬಿಟ್ಟಿವೆ ಎನ್ನಲಾಗುತ್ತದೆ. ಮಂಗೋಲಾಯ್ಡ್ ಜನಾಂಗಕ್ಕೆ ಸೇರಿದವರು ಹಳದಿ ಅಥವಾ ಕಂದು ಬಣ್ಣ ಹೊಂದಿದ್ದು, ಗಡುಸಾದ ಉದ್ದನೆ ಕೂದಲು, ಕಪ್ಪು ಅಥವಾ ಕಂದು ಬಣ್ಣದ ಕಣ್ಣು ಪಾಪೆಗಳನ್ನು ಹೊಂದಿರುತ್ತಾರೆ. ಇವರ ಕಣ್ಣು ರೆಪ್ಪೆಗಳು ಓರೆಯಾಗಿರುತ್ತವೆ. ಮುಖ ಅಗಲವಾಗಿದ್ದು ಕೆನ್ನೆ ಎಲುಬುಗಳು ಎದ್ದು ಕಾಣಿಸುತ್ತವೆ. ವಿಶೇಷವಾಗಿ ಇವರ ಮುಖ ಮತ್ತು ದೇಹದ ಮೇಲೆ ರೋಮಗಳು ಇರುವುದಿಲ್ಲ.
ಈಶಾನ್ಯ ಭಾರತದ ಇಂಡೋ-ಮಂಗೋಲಾಯ್ಡ್ರು ಸೈನೊ-ಟಿಬೆಟಿಯನ್ ಗುಂಪಿನ ಭಾಷೆಗಳನ್ನು ಮಾತನಾಡುತ್ತಾರೆ. ಇದನ್ನು ಮುಖ್ಯವಾಗಿ ಎರಡು ಗುಂಪುಗಳಾಗಿ ವಿಭಾಗಿಸಲಾಗಿದೆ. ಟಿಬೆಟೋ-ರ್ಮನ್ ಮತ್ತು ಸಿಯಾಮೀಸ್-ಚೈನೀಸ್. ಸಿಯಾಮೀಸ್-ಚೈನೀಸ್ ಗುಂಪಿನಲ್ಲಿ ಸಿಯಾಮೀಸ್ ಮತ್ತು ಪ್ರಾದೇಶಿಕ ಭಾಷೆಗಳು ದೇವಿ ಅಥವಾ ಥಾಯ್ ಗುಂಪಿಗೆ ಸೇರಿವೆ. ಈಶಾನ್ಯದಲ್ಲಿ ಮಾತನಾಡುವ ಆಓಮ್, ಕಾಮ್ತಿ, ಕಾಮ್ಯಾಂಗ್, ಆಯಿಟನ್, ಫೇಕಿಯಲ್, ತುರಂಗ್ ಇತ್ಯಾದಿ ಭಾಷೆಗಳು ಥಾಯ್ ಭಾಷೆಯ ಉಪ ಭಾಷೆಗಳಾಗಿವೆ.
ಇನ್ನೊಂದು, ಇಂಡೋ-ಮಂಗೋಲಾಯ್ಡ್ ಗುಂಪಿನ ಭಾಷೆಗಳು (ಕಾಶಿ ಮತ್ತು ಪ್ನರ್ ಭಾಷೆಗಳನ್ನು ಬಿಟ್ಟು) ಟಿಬೆಟೊ-ರ್ಮನ್ ಗುಂಪಿಗೆ ಸೇರಿವೆ. ಇವು ಉತ್ತರ ಅಸ್ಸಾಂನಲ್ಲಿ ಮಾತನಾಡುವ ಭಾಷೆಗಳು. ಉದಾಹರಣೆಗೆ: ಅರುಣಾಚಲ ಪ್ರದೇಶದ ಉಪ ಬುಡಕಟ್ಟುಗಳು ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಅಕಾ, ಆದಿ, ಮಿಸ್ಸಿಂಗ್, ನಿಶೆ, ಮಿಸ್ಮೀ ಇತ್ಯಾದಿ ಗುಂಪುಗಳ ಜನರು ಮಾತನಾಡುವ ಭಾಷೆಗಳು. ಇನ್ನೊಂದು ಟಿಬೆಟೊ-ಬರ್ಮನ್ ಗುಂಪಿನಲ್ಲಿ ಅಸ್ಸಾಂ-ಬರ್ಮಾ ಭಾಷೆಗಳು ಸೃಷ್ಟಿಯಾಗಿವೆ. ಇವು ಉತ್ತರ ಮತ್ತು ಪೂರ್ವ ಬಂಗಾಳ, ಅಸ್ಸಾಂ ಮತ್ತು ಬರ್ಮಾ ಪ್ರದೇಶಗಳಲ್ಲಿ ಮಾತನಾಡುವ ಭಾಷೆಗಳು. 1) ಬೋಡೋ, ಮೆಕ್, ರಾಭಾ, ಘಾರೋ, ಕಛಾರಿ, ತಿಪ್ರಿ ಇನ್ನಿತರ ಉಪಭಾಷೆಗಳು. 2) ನಾಗಾ ಬುಡಕಟ್ಟು ಜನರು ಮಾತನಾಡುವ ಆಓ, ಅಂಗಾಮಿ, ಸೆಮಾ, ತಂಕೂಲ್, ಸಂಗ್ಟಮ್, ಕೊನ್ಯಾಕ್, ಲೋಥಾ, ಮಾಹೊ ಮತ್ತು ಕುಬೈ ಇತ್ಯಾದಿ. 3) ಕುಕಿ, ಚಿನ್ ಬುಡಕಟ್ಟು ಜನರು ಮಾತನಾಡುವ ಮಣಿಪುರಿ, ತ್ರಿಪುರ ಮತ್ತು ಮಿಜೋರಂ ಭಾಷೆಗಳು.
ಅಂಗಾಮಿ ಬುಡಕಟ್ಟಿನ ನಾಗಾ ವ್ಯಕ್ತಿಯ ರೇಖಾಚಿತ್ರ
ಮೇಘಾಲಯದಲ್ಲಿ ಮಾತನಾಡುವ ಕಾಶಿ ಮತ್ತು ಅದರ ಉಪಭಾಷೆಗಳು ಮಾತ್ರ ಈಶಾನ್ಯ ಭಾರತದಲ್ಲಿ ಮಾತನಾಡುವ ಭಾಷೆಗಳಲ್ಲಿ ಭಿನ್ನವಾದವು. ಅವರು ಮೊನ್-ಕೇಮಿರ್ ಗುಂಪಿನ ಭಾಷೆಯನ್ನು ಮಾತನಾಡುತ್ತಾರೆ. ಇದು ಆಸ್ಟ್ರೋ-ಏಷಿಯಾಟಿಕ್ ಗುಂಪಿಗೆ ಸೇರಿದ ಭಾಷೆಗಳಾಗಿವೆ. ವಿಶೇಷವೆಂದರೆ ಈ ಭಾಷೆ ಮಾತನಾಡುವ ಜನರ ಸುತ್ತಲೂ ಟಿಬೆಟೊ-ಬರ್ಮನ್ ಭಾಷೆಗಳು ಸುತ್ತುವರಿದಿವೆ.
ದೇಶದ ಈಶಾನ್ಯ ಭಾಗದಲ್ಲಿರುವ ಎಂಟು ರಾಜ್ಯಗಳನ್ನು ಸಪ್ತ ಸಹೋದರಿಯರು ಒಬ್ಬ ಪುಟ್ಟ ತಮ್ಮ (ಸಿಕ್ಕಿಂ) ಎಂದು ಕರೆಯುತ್ತಾರೆ. ಗಂಡು ನದಿ ಬ್ರಹ್ಮಪುತ್ರದ ಎರಡೂ ಕಡೆ ಸಮತಟ್ಟು ಮತ್ತು ಕೆಳತಪ್ಪಲು ಪ್ರದೇಶಗಳನ್ನು ಬಿಟ್ಟರೆ ಉಳಿದ ಇಡೀ ಈಶಾನ್ಯ ವಲಯ ಹಿಮಾಲಯ ಪರ್ವತ ಶ್ರೇಣಿಗಳಿಂದ ಕೂಡಿದೆ. ನೂರಾರು ಬುಡಕಟ್ಟು ಜನಾಂಗಗಳು ಮತ್ತು ಭಾಷೆಗಳನ್ನು ಹೊಂದಿರುವ ಈ ಪ್ರದೇಶದ ಚಾರಿತ್ರಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿದ್ಯತೆಗಳನ್ನು ತಿಳಿದುಕೊಳ್ಳುತ್ತಾ ಹೋದರೆ ವಿಸ್ಮಯ ಮತ್ತು ರೋಮಾಂಚನವಾಗುತ್ತದೆ. ಪರ್ವತ ಶಿಖರಗಳ ತುತ್ತತುದಿಯಲ್ಲಿ ಹಳ್ಳಿಗಳನ್ನು ಕಟ್ಟಿಕೊಳ್ಳುವುದು, ಯುವಕ-ಯುವತಿಯರು ಮದುವೆಯಾಗುವ ಮುನ್ನ ಬರಿ ಕೈಯಲ್ಲಿ ಕಾಡಿಗೆ ಹೋಗಿ ಜೀವನ ನಡೆಸಿ ಬಂದು ಮದುವೆಯಾಗುವುದು. ಡಿಸೆಂಬರ್ ಚಳಿಯಲ್ಲಿ ತಾವೇ ತಯಾರಿಸಿದ ನಾಗಾ ಅಕ್ಕಿ ಬೀರು ಕುಡಿದು ಇಡೀ ರಾತ್ರಿ ಪರ್ವತಗಳ ಮೇಲೆ ಹೆಣ್ಣು-ಗಂಡೆನ್ನದೆ ಅರೆ ಬೆತ್ತಲೆಯಾಗಿ ಕುಣಿಯುವುದು. ನಾಯಿ, ಕೋತಿಗಳನ್ನು ಆನಂದದಿಂದ ಭಕ್ಷಿಸುವುದು. ಶತ್ರುಗಳ ತಲೆಗಳನ್ನು ಚೆಂಡಾಡಿ ಅವುಗಳನ್ನು ವಿಜಯದ ಟ್ರೋಪಿಗಳಂತೆ ಮನೆ ಮುಂದೆ ನೇತಾಕುವಂತಹ ಬೀಭತ್ಸ ಪದ್ಧತಿ… ಇತ್ಯಾದಿ.
ಇಂದಿಗೂ ಈ ವಲಯದಲ್ಲಿ ಹೆಚ್ಚು ಬುಡಕಟ್ಟು ಜನಾಂಗಗಳಲ್ಲಿ ಹೆಣ್ಣೆ ಮನೆಯ ಒಡತಿ, ಇಡೀ ಆಸ್ತಿ ಅವಳ ಹೆಸರಿನಲ್ಲೇ ಇರುತ್ತದೆ. ಮದುವೆಯಾಗುವ ಮುನ್ನ ಹೆಣ್ಣಿನ ಮನೆಯವರು ಗಂಡಿನ ಮನೆಗೆ ಹೋಗಿ ಹುಡುಗನನ್ನು ನೋಡಿಕೊಂಡು ಬರುತ್ತಾರೆ. ನೂರಕ್ಕೆ ಶೇಕಡ 70ರಷ್ಟು ಜನಾಂಗಗಳನ್ನು ಪಶ್ಚಿಮ ದೇಶಗಳ ಮಿಷನರಿಗಳು 18 ಮತ್ತು 19ನೇ ಶತಮಾನಗಳಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸಿವೆ. ಫಲಿತಾಂಶ ಎಲ್ಲೆಲ್ಲೂ ಇಂಗ್ಲಿಷ್ ಶಾಲೆಗಳು ಮತ್ತು ಚರ್ಚ್’ಗಳೇ. ಪ್ರಸ್ತುತ ಇಡೀ ಈಶಾನ್ಯ ವಲಯದ ವಿದ್ಯಾಭ್ಯಾಸ ಇಂಗ್ಲಿಷ್ ಮಾಧ್ಯಮದಲ್ಲೇ ನಡೆಯುತ್ತದೆ. ಅದಕ್ಕೆ ಮುಂಚೆ ಅವರೆಲ್ಲ ಪ್ರಕೃತಿ ಆರಾಧಕರಾಗಿದ್ದರು. ಈಗಲೂ ಕೆಲವರು ಅದನ್ನು ಅನುಸರಿಸುತ್ತಾರೆ.
ಇಡೀ ಈಶಾನ್ಯ ಭಾರತದಲ್ಲಿ ನಾಗಾಬುಡಕಟ್ಟು ಜನಾಂಗಗಳು ಚತುರ, ಶಕ್ತಿಶಾಲಿ ಮತ್ತು ಸಿಂಹ ಹೃದಯ ಉಳ್ಳವರು. ಅಂತಹ ನಾಗಾಗಳು ಇಂದಿಗೆ ಸರಿಯಾಗಿ 130 ವರ್ಷಗಳ ಹಿಂದೆ ಪೂರ್ವ ಹಿಮಾಲಯ ಪರ್ವತಗಳಲ್ಲಿ ಬ್ರಿಟಿಷ್ ಸೈನ್ಯದ ಬ್ಯಾರಕ್’ಗಳಿಗೆ ನುಗ್ಗಿ ರುಂಡಗಳನ್ನು ಚೆಂಡಾಡಿದ ಒಂದು ಭೀಕರ ಯುದ್ಧವನ್ನು ಇಲ್ಲಿ ವಿವರಿಸಲಾಗಿದೆ. ಇಡೀ ಭಾರತದಲ್ಲಿ ಬ್ರಿಟಿಷರು ಬಾರತೀಯರಿಗೆ ಸಿಂಹಸ್ವಪ್ನರಾಗಿದ್ದರೆ, ಇಲ್ಲಿ ನಾಗಾಗಳು ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಅದಕ್ಕೆ ಈ ಯುದ್ಧವನ್ನು ಇತಿಹಾಸಕಾರರು ಚರಿತ್ರೆಯಲ್ಲಿ ಇದೊಂದು ಮೈಲಿಗಲ್ಲು ಎಂದಿದ್ದಾರೆ. ಇಂದಿನ ಮಣಿಪುರ (ಇಂಫಾಲ್ ರಾಜ್ಯಧಾನಿ) ಆ ಕಾಲಕ್ಕೆ ಬಂಗಾಳದ ಪ್ರಭಾವದಿಂದ ಹಿಂದೂ ರಾಜರ ಒಡೆತನದಲ್ಲಿತ್ತು. ಈಶಾನ್ಯ ವಲಯವನ್ನು ಆ ಕಾಲಕ್ಕೆ North Eastern Frontier (NEFA) ಎಂದು ಕರೆಯುತ್ತಿದ್ದರು. ಈ ಯುದ್ಧದ ತಿರುಳನ್ನು Major General Sir James Johnstone My Experiences in Manipur and the Naga Hills ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಯಾವುದೇ ಮಾರ್ಪಾಡುಗಳನ್ನು ಮಾಡದೆ ಹಾಗೆ ಭಾಷಾಂತರಿಸಲಾಗಿದೆ. ಇದೆಲ್ಲ ನಡೆಯುವುದು ನವೆಂಬರ್ 1878 ರಿಂದ ಮಾರ್ಚ್ 1880ರ ನಡುವೆ.
ನವ್ ಓವರ್ ಟು ಮೇಜರ್ ಜನರಲ್ ಸರ್ ಜೇಮ್ಸ್ ಜಾನ್ಸ್ಟೋನ್…
ಕಥೆ ಅತ್ಯಂತ ರೋಚಕ. ಮುಂದಿನ ಭಾಗವನ್ನು ನಿರೀಕ್ಷಿಸಿ..