ಹಿಂದಿಯಿಂದ ಸಾವಿರಾರು ವರುಷಗಳ ಅವಿಚ್ಛಿನ್ನ ಇತಿಹಾಸವುಳ್ಳ, 5 ಕೋಟಿ ಜನ ಮಾತನಾಡುವ ಕನ್ನಡ ಭಾಷೆ ದುರ್ಬಲವಾಗಿಬಿಡುತ್ತಾ? ಹೋಗಲಿ, ಕನ್ನಡವನ್ನೇ ದುರ್ಬಲ ಮಾಡಿಬಿಡುವಷ್ಟು ಶಕ್ತಿ ಹಿಂದಿಗೆ ಇದೆಯಾ? ಇದ್ದರೆ ಹೇಗೆ? ಪಂಪನಿಂದ ಈಗಿನ ಹೊಸ ತಲೆಮಾರಿನ ಬರಹಗಾರರವೆರಗೂ ಅಭಿಜಾತ ಭಾಷೆಯಾಗಿ ಬೆಳೆದುನಿಂತು ಜಗತ್ತಿನ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದಾಗಿರುವ ಕನ್ನಡವನ್ನು ರಕ್ಷಿಸುವ ಪರಿಸ್ಥಿತಿ ನಿರ್ಮಾಣ ಆಗಿದೆಯಾ? ಹೀಗೆ ಅನೇಕ ಪ್ರಶ್ನೆಗಳನ್ನು ಎತ್ತಿ ಚರ್ಚೆ ನಡೆಸಿದ್ದಾರೆ ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ..
ಕೊರೋನಾ ಮತ್ತಿತರ ಅಪಸವ್ಯಗಳಿಂದಾಗಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಗೆ ತಮ್ಮ ʼಪರಾಕ್ರಮ’ ತೋರುವ ಯಾವುದೇ ಸಂದರ್ಭ, ಅವಕಾಶಗಳೇ ಸಿಕ್ಕಿರಲಿಲ್ಲ. ಅಂತಾರಾಷ್ಟ್ರೀಯ ಹಿಂದಿ ದಿವಸ್ ಆಚರಣೆಗೆ ಕೇಂದ್ರ ಸರಕಾರ ಕರೆ ಕೊಟ್ಟಿದ್ದು ಕೆಲಸವಿಲ್ಲದ ಬಡಗಿಗೆ ಕೆಲಸ ಕೊಟ್ಟಂತಾಗಿದೆ. (ಬಡಗಿಯ ಬಗ್ಗೆ ನನಗೆ ಅಪಾರ ಗೌರವವಿದೆ. ಯಾರೂ ತಪ್ಪು ತಿಳಿಯುವ ಅಗತ್ಯವಿಲ್ಲ.) ರಾಜ್ಯದಾದ್ಯಂತ ಹಿಂದಿ ನಾಮಫಲಕಗಳನ್ನು ಕಿತ್ತೊಗೆಯುವ ಮೂಲಕ ನಾನಾ ರೀತಿಯಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಈ ಸಂಘಟನೆಗಳಿಗೆ ಕುಮ್ಮಕ್ಕು ಕೊಡುವ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಣ್ಣನವರು `ಹಿಂದಿ ದಿವಸ್ ಭಾಷಾ ಅಹಂಕಾರದ ಸಂಕೇತ. ಅನ್ಯ ಭಾಷಿಕರ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಲಾಗುತ್ತಿದೆ’ ಎಂದು ಕರವಸ್ತ್ರ ಇಲ್ಲದಿದ್ದರೂ ಕಣ್ಣೀರು ಹಾಕಿ, ಅಲವತ್ತುಕೊಂಡಿದ್ದಾರೆ. ಹಿಂದಿ ಹೇರಿಕೆ ಮತ್ತೊಂದು ಭಾಷೆಯ ಅವಸಾನಕ್ಕೆ ಕಾರಣವಾಗುವ ಜತೆಗೆ ದೇಶದ ಸಂಸ್ಕೃತಿ, ವೈವಿಧ್ಯತೆ, ಸಮಗ್ರತೆಗೆ ಧಕ್ಕೆ ತರುವ ಅಪಾಯವಿದೆ ಎಂದೂ ಎಚ್ಚರಿಸಿದ್ದಾರೆ.
ಒಂದು ವೇಳೆ ಕನ್ನಡಿಗರಲ್ಲಿ ಹೆಚ್ಚಿನವರು ಹಿಂದಿ ಕಲಿತುಬಿಟ್ಟರೆ ಕನ್ನಡ ಭಾಷೆ ಹಾಗಿದ್ದರೆ ಅವಸಾನ ಹಂತಕ್ಕೆ ತಲುಪುತ್ತದೆಯೇ? ಕನ್ನಡ ಅಷ್ಟೊಂದು ದುರ್ಬಲ ಭಾಷೆಯೆ? ಹಿಂದಿಯ ಹೊಡೆತದ ಮುಂದೆ ಕನ್ನಡ ದುರ್ಬಲವಾಗಿಬಿಡುತ್ತಾ? ಇದು ನನ್ನಂಥ ಜಿಜ್ಞಾಸುಗಳ ಪ್ರಶ್ನೆ.
ಒಂದು ಭಾಷೆಯ ಮೇಲೆ ಇನ್ನೊಂದನ್ನು ಹೇರುವ ಪ್ರವೃತ್ತಿ ಎಲ್ಲಿಂದ ಆರಂಭವಾಯಿತು? ಭಾಷೆಯನ್ನು ಹೇರುವುದು ಸಾಧ್ಯವಿದೆಯೆ? ಅದರಿಂದ ನಿಜವಾಗಿಯೂ ಭಾಷೆಗಳು ನಾಶವಾಗುತ್ತವೆಯೆ? ಈ ಹಿಂದಿ ಹೇರಿಕೆ ಹಿಂದಿನಿಂದಲೂ ಇದೆಯೆ? ಇತ್ತೀಚೆಗೆ ಯಾಕೆ ಇದರ ಬಗ್ಗೆ ಹೆಚ್ಚು ಚರ್ಚೆ? ಈ ಜಿಜ್ಞಾಸೆ ವ್ಯಕ್ತಪಡಿಸಿದವರು ಗೆಳೆಯರಾದ ತುಮಕೂರಿನ ಸಿಬಂತಿ ಪದ್ಮನಾಭ ಅವರು. ಫೇಸ್ ಬುಕ್‌ನಲ್ಲಿ ವ್ಯಕ್ತಪಡಿಸಿದ ಅವರ ಈ ಜಿಜ್ಞಾಸೆಗೆ ರಾಧಾಕೃಷ್ಣ ಹೊಳ್ಳ ಎಂಬ ಸಾಮಾಜಿಕ ಕಾರ್ಯಕರ್ತರು ನೀಡಿರುವ ಉತ್ತರ ಹೀಗಿತ್ತು:`ಭಾಷೆಯ ಹೇರಿಕೆ ಆಗುವುದು ಆಡಳಿತದಲ್ಲಿ ಅಥವಾ ಶಿಕ್ಷಣದಲ್ಲಿ. ಅದನ್ನು ಬಿಟ್ಟರೆ ಭಾಷೆಯನ್ನು ಹೇರುವುದು ಕಷ್ಟ. ಟಿಪ್ಪು ಪರ್ಷಿಯನ್ ಹೇರಲು ಪ್ರಯತ್ನಪಟ್ಟಿದ್ದ ಅಂತ ಓದಿದ್ದೇವೆ. ಹಾಗಾಗಿಯೇ ಅನೇಕ ಪರ್ಷಿಯನ್ ಶಬ್ಧಗಳು ಕನ್ನಡದೊಳಕ್ಕೂ ಇಳಿದಿವೆ. ಹಾಗೆಯೇ ಶಿಕ್ಷಣ ಮಾಧ್ಯಮದ ಮೂಲಕ ಇಂದು ಮಕ್ಕಳ ಮೇಲೆ ಇಂಗ್ಲಿಷನ್ನು ಹೇರುತ್ತಿದ್ದೇವೆ. ಹಿಂದಿ ಹೇರಿಕೆ ಆಗಿದ್ದು ಕಡಿಮೆಯೇ’.
ಸಿಬಂತಿ ಮತ್ತು ಹೊಳ್ಳ ಅವರ ನಡುವಿನ ಸಂವಾದದಲ್ಲಿ ಸಾಕಷ್ಟು ಚಿಂತನೀಯ ಅಂಶಗಳಿವೆ. ಹಿಂದಿ ಭಾಷೆಯನ್ನು ಹೇರುವುದರಿಂದ ಉಳಿದ ಪ್ರಾದೇಶಿಕ ಭಾಷೆಗಳು ನಾಶವಾಗುತ್ತವೆ ಎಂಬುದು ಬರೀ ಭ್ರಮೆ. ಹಾಗಿದ್ದರೆ ಈ ವೇಳೆಗೆ ಭಾರತದ ನೂರಾರು ಪ್ರಾದೇಶಿಕ ಭಾಷೆಗಳ ಅವಸಾನವಾಗಬೇಕಿತ್ತು. ಆದರೆ ಹಾಗಾಗಿಲ್ಲ. ಬದಲಿಗೆ ಅವು ಈಗಲೂ ಗಟ್ಟಿಯಾಗಿ ತಮ್ಮ ಅಸ್ಮಿತೆ ಹಾಗೂ ಸ್ವಂತಿಕೆಯನ್ನು ಉಳಿಸಿಕೊಂಡಿವೆ. ಆಯಾ ಭಾಷೆಗಳಲ್ಲಿ ಸಾಹಿತ್ಯ ಕೃಷಿ ಹುಲುಸಾಗಿಯೇ ಬೆಳೆದಿದೆ.
ಜಗತ್ತಿನಲ್ಲಿ ಅತಿ ಹೆಚ್ಚು ಭಾಷೆಗಳನ್ನು ಮಾತಾಡುವ ದೇಶಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಸದ್ಯ ಭಾರತದಲ್ಲಿರುವುದು ಒಟ್ಟು 780 ಭಾಷೆಗಳು. ಇವುಗಳಲ್ಲಿ ಪ್ರಮುಖವಾದವು 122 (ಹತ್ತು ಸಾವಿರಕ್ಕಿಂತಲೂ ಅಧಿಕ ಜನರು ಮಾತನಾಡುವುದು) ಭಾರತದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇಷ್ಟೊಂದು ಪ್ರಮುಖ ಭಾಷೆಗಳಲ್ಲಿ ಅಧಿಕೃತ ಭಾಷೆ ಎಂಬ ಸ್ಥಾನಮಾನ ನೀಡಿರುವುದು ಕೇವಲ ಇಪ್ಪತ್ತೆರಡು ಭಾಷೆಗಳಿಗೆ ಮಾತ್ರ. ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸ ಪರಂಪರೆ ಹಾಗೂ ಸ್ವತಂತ್ರ ಗುಣಲಕ್ಷಣಗಳನ್ನು ಹೊಂದಿರುವ ಕಾರಣಕ್ಕೆ ಸಂಸ್ಕೃತ, ಒಡಿಶಾ, ಕನ್ನಡ, ತಮಿಳು, ಮಲೆಯಾಳಂ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿದೆ.
ತಮಿಳುನಾಡು ಹಿಂದಿನಿಂದಲೂ ಹಿಂದಿ ಹೇರಿಕೆಯನ್ನು ವಿರೋಧಿಸಿ, ವೈಭವೀಕರಿಸಿ ಬದ್ಧ ದ್ವೇಷ ಸಾಧಿಸುತ್ತಲೇ ಬಂದಿರುವುದು ಹಳೆಯ ಸಂಗತಿ. ತಮಿಳುನಾಡಿನಲ್ಲಿ ಎಲ್ಲೇ ಹೋದರೂ ತಮಿಳುಮಯ. ತಮಿಳು ಬಿಟ್ಟರೆ ಅಲ್ಪಸ್ವಲ್ಪ ಇಂಗ್ಲಿಷ್ ಬಳಕೆ, ಅಷ್ಟೆ. ಅಕಸ್ಮಾತ್ ಹಿಂದಿ ಭಾಷೆಯ ಅರಿವಿದ್ದರೂ ಮಾತನಾಡಲು ಗೊತ್ತಿದ್ದರೂ ಅಪ್ಪಿತಪ್ಪಿಯೂ ಹಿಂದಿ ಮಾತನಾಡುವುದಿಲ್ಲ. ಆ ಮಟ್ಟದ ಭಯಂಕರ ಭಾಷಾಂಧತೆ ತಮಿಳರದು.
ಕರ್ನಾಟಕದಲ್ಲಿ ತಮಿಳುನಾಡಿನಂತೆ ಭಾಷಾಂಧತೆ ಇಲ್ಲ. ಹಿಂದಿಯ ಬಗ್ಗೆ ಆ ಮಟ್ಟದ ದ್ವೇಷ ಭಾವನೆ ಸಿಡಿದಿಲ್ಲ. ಕನ್ನಡಪರ ಸಂಘಟನೆಗಳು, ಎಡಪಂಥೀಯ ಬುದ್ದಿಜೀವಿಗಳು, ಸಾಹಿತಿಗಳೆನಿಸಿಕೊಂಡವರನ್ನು ಹೊರತುಪಡಿಸಿದರೆ ಹಿಂದಿ ಭಾಷೆಗೆ ವಿರೋಧ ವ್ಯಕ್ತಪಡಿಸುವವರು ವಿರಳ. ಕರ್ನಾಟಕದ ಹಿರಿಯ ರಾಜಕಾರಣಿಯಾಗಿದ್ದ ಅನಂತ ಕುಮಾರ್ ದಿಲ್ಲಿಯಲ್ಲಿ ಹಿಂದಿಯಲ್ಲೇ ಮಾತನಾಡಿ ಹಿಂದಿ ಭಾಷೆಯವರೇ ನಿಬ್ಬೆರಗಾಗುವಂತೆ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ, ಅನಂತಕುಮಾರ ಹೆಗಡೆ, ಪ್ರಹ್ಲಾದ ಜೋಶಿ ಮೊದಲಾದವರೂ ಹಿಂದಿಯನ್ನು ಸೊಗಸಾಗಿ ಮಾತನಾಡಬಲ್ಲವರು. ಆರ್ ಎಸ್ ಎಸ್ ನ ಅಖಿಲ ಭಾರತ ಸಹಸರಕಾರ್ಯರಾಗಿರುವ ಸೊರಬದ ದತ್ತಾತ್ರೇಯ ಹೊಸಬಾಳೆ ಕನ್ನಡ, ಇಂಗ್ಲಿಷ್ ಭಾಷೆಯಷ್ಟೇ ನಿರರ್ಗಳವಾಗಿ ಹಿಂದಿಯಲ್ಲೂ ಭಾಷಣ ಮಾಡುತ್ತಾರೆ. ಇವರೆಲ್ಲ ಹಿಂದಿಯಲ್ಲಿ ಮಾತನಾಡಿದ ಪರಿಣಾಮವಾಗಿ ಅವರಾಡುವ ಕನ್ನಡದ ಕಿಮ್ಮತ್ತು ಕಡಿಮೆಯಾಗಿಲ್ಲ. ಕನ್ನಡದ ಸಾಹಿತಿಗಳಿಗಿಂತಲೂ ಚೆನ್ನಾಗಿ ಕನ್ನಡ ಮಾತನಾಡುತ್ತಾರೆ, ಬರೆಯುತ್ತಾರೆ.
ಡಿವಿಜಿ, ಮಾಸ್ತಿ, ಬೇಂದ್ರೆ, ಗೊರೂರು
courtesy: wikipedia
ಕನ್ನಡ, ಕನ್ನಡ ಎಂದು ಬೊಬ್ಬೆ ಹೊಡೆಯುವ ಕನ್ನಡಪರ ಸಂಘಟನೆಗಳಿಗೆ ಅನ್ಯ ಭಾಷಿಕರಿಂದಲೂ ಕನ್ನಡ ಬೆಳೆದು ಉದ್ಧಾರವಾಗಿದೆ ಎಂಬ ಸಾಮಾನ್ಯ ಸಂಗತಿಯೂ ಗೊತ್ತಿರಲಿಕ್ಕಿಲ್ಲ. ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದ ದ.ರಾ. ಬೇಂದ್ರೆಯವರ ಮನೆಯ ಮಾತು ಮರಾಠಿ. ಆದರೆ ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ, ಅಮೋಘ. `ಕನ್ನಡದ ಆಸ್ತಿ’ಯೆಂದು ಖ್ಯಾತರಾದ ಸಣ್ಣ ಕಥೆಗಳ ಸರದಾರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮಾತೃಭಾಷೆ ತಮಿಳು. `ಮಂಕುತಿಮ್ಮನ ಕಗ್ಗ’ ಖ್ಯಾತಿಯ ಡಿವಿಜಿ ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿ ಕಡೆಯವರು. ಮನೆಯಲ್ಲಿ ತಮಿಳು, ತೆಲುಗು ಎರಡರ ಬಳಕೆಯೂ ಇತ್ತು. ತಮಿಳು ಮನೆ ಭಾಷೆಯಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡದಲ್ಲಿ ಉತ್ಕೃಷ್ಟ ಕೃತಿಗಳನ್ನು ಬರೆದಿಲ್ಲವೆ? ಕನ್ನಡದಲ್ಲೇ ದೇವರ ಪೂಜೆಯ ಮಂತ್ರಗಳನ್ನು ಬಳಕೆಗೆ ತಂದು ಜನಪ್ರಿಯರಾದ `ಕನ್ನಡ ಪೂಜಾರಿ’ ಹಿರೇಮಗಳೂರು ಕಣ್ಣನ್ ಅವರ ಮಾತೃಭಾಷೆ ತಮಿಳು. ಕನ್ನಡ ಜಗತ್ತಿಗೆ ಅವರ ಕೊಡುಗೆಯೇನು ಕಡಿಮೆಯೆ? ಅವರ ಅದ್ಭುತ ಕನ್ನಡ ಮಾತಿನ ಮುಂದೆ ಕನ್ನಡಪರ ಸಂಘಟನೆಗಳ ಯಾವ ನಾಯಕ ಮಣಿಗಳೂ ಸರಿಸಾಟಿಯಾಗಲಾರರು. `ಭಾರತ ದರ್ಶನ’ ಉಪನ್ಯಾಸ ಖ್ಯಾತಿಯ ವಿದ್ಯಾನಂದ ಶೆಣೈ, ಜನಪ್ರಿಯ ಹರಿಕಥಾ ದಾಸರಾಗಿದ್ದ ಭದ್ರಗಿರಿ ಅಚ್ಯುತದಾಸ್ ಅವರ ಮನೆಯ ಭಾಷೆ ಕೊಂಕಣಿ. ಆದರೆ ಇವರಿಬ್ಬರು ಆಡುತ್ತಿದ್ದ ಕನ್ನಡ ಕೇಳಿದರೆ ಕನ್ನಡ ಸಾಹಿತಿಗಳು, ಪಂಡಿತರೂ ನತಮಸ್ತಕರಾಗಬೇಕು, ಅಂತಹ ಕನ್ನಡ ವಾಗ್ಝರಿ.
ಅನಂತಕುಮಾರ್, ದತ್ತಾತ್ರೇಯ ಹೊಸಬಾಳೆ, ಅನಂತಕುಮಾರ ಹೆಗಡೆ, ಪ್ರಹ್ಲಾದ ಜೋಶಿ, ಹಿರೇಮಗಳೂರು ಕಣ್ಣನ್.
COURTESY: respective LEADERSʼ facebook page
ದುರ್ದೈವದ ಸಂಗತಿಯೆಂದರೆ, ಕನ್ನಡಪರ ಸಂಘಟನೆಗಳ ಕೆಲ ಕಾರ್ಯಕರ್ತರಿಗೆ ನೆಟ್ಟಗೆ ಸರಳ ಕನ್ನಡವನ್ನೂ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. ರಾಜ್ಯೋತ್ಸವಕ್ಕೆ ರಾಜ್ಯೋಸ್ತವ, ಕನ್ನಡ ಹಬ್ಬಕ್ಕೆ ಕನ್ನಡ ಅಬ್ಬ, ಹೋರಾಟಕ್ಕೆ ಓರಾಟ, ಆದರ ಎಂಬ ಶಬ್ದಕ್ಕೆ ಹಾದರ… ಹೀಗೆ ಕನ್ನಡ ಭಾಷೆಯ ಕೊಲೆಯಲ್ಲೇ ನಿತ್ಯನಿರಂತರ ನಿರತರಾಗಿದ್ದಾರೆ ಕೆಲವರು. ಕನ್ನಡ ಶಬ್ಧಗಳ ಸರಿಯಾದ ಉಚ್ಛಾರಣೆ, ಬಳಕೆಯನ್ನು ಕಲಿತುಕೊಳ್ಳಬೇಕೆಂಬ ಇಚ್ಛೆಯೇ ಈ ಮಂದಿಗಿಲ್ಲ. ನಾವು ಮಾತನಾಡಿದ್ದೇ ಸರಿ ಎಂಬ ಧೋರಣೆ ಬೇರೆ.
ಕನ್ನಡ ಬಳಕೆಯ ವಿಷಯ ಹಾಗಿರಲಿ, ಕನ್ನಡ ಸಮ್ಮೇಳನಗಳು ನಡೆದಾಗ ಅಲ್ಲಿ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡಲೆಂದು ಬಂದು ಸರಿಯಾದ ಅಂಗಡಿ ಹಾಕಲು ಜಾಗವೂ ಸಿಗದೆ ಪರದಾಡುವ ಪ್ರಕಾಶಕರನ್ನು ಅಪ್ಪಿತಪ್ಪಿ ಕೂಡ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮಾತನಾಡಿಸುವ ಗೋಜಿಗೆ ಹೋಗುವುದಿಲ್ಲ. ಅಲ್ಲಿ ನಡೆಯುವ ಗೋಷ್ಠಿಗಳಲ್ಲಿ ವೇದಿಕೆಯ ಮೇಲೆ ತಮಗೆ ಕುರ್ಚಿ ಸಿಗುತ್ತದೋ ಇಲ್ಲವೋ ಎಂಬ ಕುರ್ಚಿ ಚಿಂತೆಯಲ್ಲೇ ಇರುತ್ತಾರೆ. ಇನ್ನು ಇವರು ಧರಿಸುವ ಬೂಟು, ಶರಟು, ಪ್ಯಾಂಟು ಬಳಸುವ ವಿಲಾಸಿ ಕಾರು ಇತ್ಯಾದಿ ಎಲ್ಲವೂ ಹಿಂದಿ ರಾಜ್ಯಗಳಲ್ಲಿ ತಯಾರಾಗಿದ್ದೇ ಆಗಿರುತ್ತದೆ! ಕರ್ನಾಟಕದಲ್ಲೇ ತಯಾರಾಗುವ ಖಾದಿ ಬಟ್ಟೆ, ಚಪ್ಪಲಿ ಧರಿಸುವ ಸರಳ ಉಡುಗೆ ತೊಡುಗೆಯ ಯಾವೊಬ್ಬ ಕನ್ನಡಪರ ಸಂಘಟನೆಯ ಕಾರ್ಯಕರ್ತನನ್ನೂ ನಾನು ಕಂಡಿಲ್ಲ. ಈಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಂಘಟನೆಯೊಂದರ ಮಹಿಳಾ ಘಟಕದ ಪ್ರಮುಖಿಯಾಗಿ ಆಯ್ಕೆಯಾದ ಮಹಿಳಾಮಣಿ ಮರುಕ್ಷಣವೇ ಫೇಸ್‌ಬುಕ್‌ನಲ್ಲಿ ಸಫಾರಿ ಉಡುಗೆ ತೊಟ್ಟು ಕಣ್ಣಿಗೆ ತಂಪು ಕನ್ನಡಕ ಹಾಕಿ, ವಿಲಾಸಿ ಕಾರೊಂದಕ್ಕೆ ಒರಗಿ ನಿಂತಿರುವ ಫೋಟೋ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಂಡಿದ್ದರು. ಸಫಾರಿ ಉಡುಗೆ, ಕಣ್ಣಿಗೆ ತಂಪು ಕನ್ನಡಕ, ವಿಲಾಸಿ ಕಾರು- ಇವೆಲ್ಲ ಕನ್ನಡ ಸಂಸ್ಕೃತಿ, ಪರಂಪರೆಯ ಪ್ರತೀಕವೆಂದು ಈಕೆಗೆ ಹೇಳಿದವರು ಯಾರು?
ಹಿಂದಿ ಭಾಷೆಯನ್ನು ವಿರೋಧಿಸುವ ಹಕ್ಕು ಕನ್ನಡಪರ ಸಂಘಟನೆಗಳಿಗಿದೆ. ಆದರೆ ಅದೇ ವೇಳೆ ಕನ್ನಡ ನುಡಿ, ಕನ್ನಡ ಸಂಸ್ಕೃತಿ, ಪರಂಪರೆಯನ್ನು ಸ್ವಂತ ಬದುಕಿಗೆ ರೂಢಿಸಿಕೊಳ್ಳುವ ಕರ್ತವ್ಯವೂ ಇದೆ ಎಂಬುದನ್ನು ಮರೆತರೆ ಹೇಗೆ?
***