LEAD PHOTO: AS
ಬೆಂಗಳೂರು: ಸಂಚಾರಿ ಪೊಲೀಸರು ಅದೆಷ್ಟು ಹರಸಾಹಸ ಮಾಡಿದರೂ ಟ್ರಾಫಿಕ್‌ಜಾಮ್ ಕಂಟ್ರೋಲಿಗೇ ಬರುತ್ತಿಲ್ಲ. ಫುಟ್‌ಪಾತ್ ಮೇಲೆ ನಡೆಯುವ ಜನರಿಗೂ ಕಿರಿಕಿರಿ. ಯಾಕೆಂದರೆ, ಪಾದಾಚಾರಿ ಮಾರ್ಗಗಳನ್ನೂ ದ್ವಿಚಕ್ರ ವಾಹನ ಚಾಲಕರು ಬಿಡುತ್ತಿಲ್ಲ. ರಸ್ತೆಯಲ್ಲಿ ಜಾಗವಿಲ್ಲದಿದ್ದರೆ ನೇರ ಫುಟ್‌ಪಾತ್‌ಗೇ ನುಗ್ಗಿಬಿಡುತ್ತಾರೆ ಬೈಕರುಗಳು. ಅರ್ಧ ಗಂಟೆ ದಾರಿಯ ಕಚೇರಿಗೆ ಬಸ್‌ನಲ್ಲೋ, ಕಾರಿನಲ್ಲಿ ಹೊರಟರೆ ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಮೆಟ್ರೋ ಬಂದ ಮೇಲೂ ಎಲ್ಲೆಲ್ಲೂ ಜಾಮ್! ಆ ಮೆಟ್ರೋ ಸಂಚರಿಸುವ ದಾರಿಗಳಲ್ಲೇ ಟ್ರಾಫಿಕ್ ಕಿರಿಕಿರಿ. ಹಾಗಾದರೆ, ಬೆಂಗಳೂರು ಟ್ರಾಫಿಕ್ ಕಂಟ್ರೋಲ್ ಹೇಗೆ? ಬೆಂಗಳೂರು ರಸ್ತೆಗಳಿಯುತ್ತಾ ಟ್ರಿಣ್ ಟ್ರಿಣ್ ಬೈಸಿಕಲ್.
ಇದಕ್ಕೆ ಪರಿಹಾರವೇನು? ಬೆಂಗಳೂರಿನ ಹಣೆಬರಹ ಇಷ್ಟೇನಾ? ಎಂದು ತಲೆ ಪರಚಿಕೊಳ್ಳುವ ಹೊತ್ತಿನಲ್ಲಿಯೇ ಕೆಲ ತಜ್ಞರು ಕೆಲ ಪರಿಹಾರಗಳನ್ನು ಸೂಚಿಸಿದ್ದಾರೆ. ಸರಕಾರಕ್ಕೆ ಕೆಲ ಶಿಫಾರಸುಗಳನ್ನೂ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಿದ್ಧಪಡಿಸಿರುವ ವೈಜ್ಞಾನಿಕ ವರದಿಯನ್ನು ಅವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಸಲ್ಲಿಸಿದ್ದಾರೆ.
ಬೆಂಗಳೂರಿನ ವಾಹನ ದಟ್ಟಣಿಯನ್ನು ನಿವಾರಿಸುವುದು ಹಾಗೂ ವಾಯು ಮಾಲಿನ್ಯವನ್ನು ತಗ್ಗಿಸಲು ನಮ್ಮ ಮೆಟ್ರೋದಂಥ ಸಾರ್ವಜನಿಕ ಸಾರಿಗೆಯನ್ನು ಸರಕಾರ ಉತ್ತೇಜಿಸಬೇಕು ಎಂಬುದು ತಜ್ಞರು ಮಾಡಿರುವ ಬಹುಮುಖ್ಯ ಶಿಫಾರಸು.
ವರದಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. “ಇಡೀ ಜಗತ್ತಿನಲ್ಲಿಯೇ ಬೆಂಗಳೂರು ಅತ್ಯಂತ ವೇಗವಾಗಿ ಹಾಗೂ ವಿಸ್ತೃತವಾಗಿ ಬೆಳೆಯುತ್ತಿದೆ. ಕೈಗಾರಿಕೆ, ವಾಣಿಜ್ಯ, ಸೇವೆ, ಉದ್ಯೋಗ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿ ನಗರವಾಗಿ ಹೊರಹೊಮ್ಮಿದೆ. ಹೀಗಾಗಿ ದೇಶದ ಮೂಲೆ ಮೂಲೆಗಳಿಂದ ಕೆಲಸಕ್ಕಾಗಿ ಜನರು ನಗರಕ್ಕೆ ವಲಸೆ ಬರುತ್ತಿದ್ದಾರೆ. ಹೀಗಾಗಿ ವಾಹನ ದಟ್ಟಣಿ ಹೆಚ್ಚಾಗಿ ವಾಯುಮಾಲಿನ್ಯವೂ ಜಾಸ್ತಿಯಾಗುತ್ತಿದೆ. ಇದನ್ನು ಹತ್ತಿಕ್ಕಲು ಸಾರ್ವಜನಿಕ ಸಾರಿಗೆಯನ್ನು ಸರಕಾರ ಉತ್ತೇಜಿಸುತ್ತಿದೆ. ಮುಖ್ಯವಾಗಿ ಬಿಎಂಟಿಸಿ ಮತ್ತು ಮೆಟ್ರೋ ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ಪೋಷಿಸುತ್ತಿವೆ. ಮುಂದಿನ ದಿನಗಳಲ್ಲಿ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ಸಾರ್ವಜನಿಕ ಸಾರಿಕೆ ಪ್ರಮಾಣವನ್ನು ಶೇ.41ರಿಂದ 73ರಷ್ಟಕ್ಕೆ ಹೆಚ್ಚಿಸುವ ಗುರಿಯನ್ನು ಸರಕಾರ ಹೊಂದಿದೆ” ಎಂದು ಡಿಸಿಎಂ ಹೇಳಿದ್ದಾರೆ.
ಬೆಂಗಳೂರು ಮೂವಿಂಗ್ ಕ್ಯಾಂಪೇನ್ (#BengaluruMovingCampaign) ಅಡಿಯಲ್ಲಿ ಈ ವರದಿ ಸಲ್ಲಿಸಿರುವ ಸಾರ್ವಜನಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಬೆಂಗಳೂರು ನೀಡ್ಸ್ ಯು (ಬಿಎನ್‌ವೈ), ಎನ್ವಿರಾನ್‌ಮೆಂಟ್ ಸಪೋರ್ಟ್ ಗ್ರೂಪ್ (ಇಎಸ್‌ಜಿ), ಯಂಗ್ ಲೀಡರ್ಸ್ ಫಾರ್ ಆಕ್ಟೀವ್ ಸಿಟಿಜನ್‌ಶಿಪ್ (ವೈಎಲ್‌ಎಸಿ), ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ.ಪಿಎಸಿ) ಸಂಸ್ಥೆಗಳು ಇದರ ಜತೆ ಕೈಜೋಡಿಸಿವೆ.
ನಗರದಲ್ಲಿ ಸುಲಭ ಸಂಚಾರಕ್ಕಾಗಿ ವೈಯಕ್ತಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ಆ ಎಲ್ಲ ಸಂಸ್ಥೆಗಳು ಒಟ್ಟಾಗಿ ಈ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಕೆಲ ಮಹತ್ತ್ವದ ಶಿಫಾರಸುಗಳನ್ನು ಮಾಡಿವೆ. ಈ ಶಿಫಾರಸುಗಳನ್ನು ಸರಕಾರ ಗಂಭೀರವಾಗಿ ಪರಿಶೀಲನೆ ನಡೆಸಲಿದೆ. ಬ್ರ್ಯಾಂಡ್ ಬೆಂಗಳೂರನ್ನು ಮತ್ತಷ್ಟು ಉತ್ತಮಪಡಿಸುವುದು ಹಾಗೂ ಮುಂದಿನ ತಲೆಮಾರಿಗೆ ಶುದ್ಧ ಬೆಂಗಳೂರನ್ನು ನೀಡುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ಶಿಫಾರಸುಗಳು
ಮೆಟ್ರೋ ಸುಲಭವಾಗಿ ಸಂಚರಿಸುವಂತೆ ಬಿಎಂಟಿಸಿ ಬಸ್ಸುಗಳು ಕೂಡ ವಾಹನದಟ್ಟಣಿಗೆ ಸಿಲುಕದೆ ಸಂಚರಿಸಬೇಕು. ಅದಕ್ಕಾಗಿ ಪ್ರತ್ಯೇಕ ಬಸ್ ಲೇನುಗಳನ್ನು ಹಾಕುವುದು, ನಗರದ ಕಟ್ಟಕಡೆಯ ಬಡಾವಣೆವರೆಗೂ ನಗರ ಸಂಚಾರವನ್ನು ವ್ಯವಸ್ಥಿತವಾಗಿ ವಿಸ್ತರಿಸುವುದು, ಸುಸ್ಥಿರ ಹಾಗೂ ಖಾಸಗಿ ವಾಹನರಹಿತ ಸಾರಿಗೆ ವ್ಯವಸ್ಥೆ (non-motorised transport) ಪರಿಹಾರಗಳನ್ನು ಕಂಡುಕೊಳ್ಳುವುದು, ನಗರ ಸಾರಿಗೆ ಮೂಲಸೌಕರ್ಯಗಳ ಮೇಲೆ ಹೆಚ್ಚು ಹೂಡಿಕೆ ಮಾಡುವುದು ಸೇರಿದಂತೆ ಹತ್ತಾರು ಪ್ರಮುಖ ಶಿಫಾರಸುಗಳನ್ನು ಮಾಡಲಾಗಿದೆ.
ಟ್ರಿಣ್ ಟ್ರಿಣ್ ಬೈಸಿಕಲ್
ಸಭೆಯಲ್ಲಿ ಮಾತನಾಡುತ್ತಾ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಹೇಳಿದ್ದಿಷ್ಟು.. “ನಗರದಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸರಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ವಿವಿಧ ಸಂಸ್ಥೆಗಳ ಜತೆಗೂಡಿ ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯತ್ನಿಸಲಾಗುತ್ತಿದೆ. ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಬೈಸಿಕಲ್‌ಳನ್ನು ಪ್ರೋತ್ಸಾಹಿಸಿದಂತೆ ಬೆಂಗಳೂರಿನಲ್ಲೂ ಅದನ್ನೇ ಮಾಡಲು ಯತ್ನಿಸಲಾಗುವುದು.”
ಸಾರ್ವಜನಿಕ ಸಾರಿಗೆ ಬೆಸ್ಟ್
“ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಿ ಸಂಚಾರ ದಟ್ಟಣಿಯನ್ನು ಕಡಿಮೆ ಮಾಡುವುದು ಸರಕಾರದ ಉದ್ದೇಶವಾಗಿದ್ದು, ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ನಗರ ಸಂಚಾರ ಪೊಲೀಸ್ ವ್ಯವಸ್ಥೆ ಬದ್ಧವಾಗಿದೆ. ಈಗಾಗಲೇ ನಗರಾದ್ಯಂತ 1500 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಲ್ಲೆಲ್ಲಿ ಹೆಚ್ಚು ಟ್ರಾಫಿಕ್ ಇದೆ ಎಂಬುನ್ನು ಗುರುತಿಸಲಾಗಿದೆ. ಆ ಮಾಹಿತಿಯನ್ನು ಆಧರಿಸಿ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಲಾಗುವುದು” ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ. ರವಿಕಾಂತೇ ಗೌಡ ತಿಳಿಸಿದ್ದಾರೆ.
ಮಾಜಿ ಸಂಸದ ಪ್ರೊ. ರಾಜೀವ್ ಗೌಡ ಅವರ ನೇತೃತ್ವದ ಬೆಂಗಳೂರು ನೀಡ್ಸ್ ಯು (ಬಿಎನ್‌ವೈ) ಈ ವರ್ಚುಯಲ್ ಟೌನ್‌ಹಾಲ್ ಸಭೆಯನ್ನು ಆಯೋಜಿಸಿತ್ತು. ಇದರ ಜತೆ ಇನ್ನು ಹಲವಾರು ಸಂಸ್ಥೆಗಳು ಕೈಜೋಡಿಸಿವೆ. ಈ ಸಂಸ್ಥೆಗಳ ತಜ್ಞರ ಜತೆಗೆ, ಮಾಜಿ ಸಂಸದ ಪ್ರೊ. ರಾಜೀವ್ ಗೌಡ, ಶಾಸಕ ಎನ್.ಎ. ಹ್ಯಾರೀಸ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿಯ ಸಿಇಒ ರೇವತಿ ಆಶೋಕ್ ಮುಂತಾದವರು ಟೌನ್‌ಹಾಲ್ ಸಭೆಯಲ್ಲಿ ಹಾಜರಿದ್ದರು.