ಬೆಂಗಳೂರು: ಕೋವಿಡ್ ಸೋಂಕಿನಿಂದ ಬುಧವಾರ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ನವದೆಹಲಿಯ ದ್ವಾರಕಾದ ಸೆಕ್ಟರ್ 24ರಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ನೆರವೇರಿತು.
ಕೋವಿಡ್ ಹಿನ್ನೆಲೆಯಲ್ಲಿ ಅಂಗಡಿಯರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತರಲಾಗಲಿಲ್ಲ. ಬದಲಿಗೆ ಎಸ್ಒಪಿ ಪ್ರಕಾರವೇ ದಿಲ್ಲಿಯಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು. ಬೆಳಗಾವಿಯಲ್ಲಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲಾದ ಕಾರಣಕ್ಕೆ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ತೀವ್ರ ಶೋಕತಪ್ತರಾಗಿದ್ದರು.
ಈ ವೇಳೆ ಅಂಗಡಿಯವರ ಬೀಗರಾದ ಸಚಿವ ಜಗದೀಶ್ ಶೆಟ್ಟರ್ ಕುಟುಂಬ, ಅಂಗಡಿಯವರ ಪತ್ನಿ ಮಂಗಳಾ, ಪುತ್ರಿಯರು, ಅಳಿಯಂದಿರು ಹಾಗೂ ಸಚಿವರಾದ ರಮೇಶ್ ಜಾರಕಿಹೊಳಿ, ವಿ. ಸೋಮಣ್ಣ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಜ್ಯದ ಸಂಸದರು ಸೇರಿ ಅನೇಕರು ಹಾಜರಿದ್ದು ಅಂಗಡಿಯವರಿಗೆ ಅಂತಿಮ ನಮನ ಸಲ್ಲಿಸಿದರು.
ಅಂತ್ಯಕ್ರಿಯೆಯ ಕೆಲ ಚಿತ್ರಗಳು ಇಲ್ಲಿವೆ.
ಈ ಲೇಖನವನ್ನೂ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಸಂಸತ್ ಅಧಿವೇಶನಕ್ಕೆ ತೆರಳಿದ್ದ ಅವರು ಕಲಾಪಕ್ಕೆ ಹಾಜರಾಗುವ ಮುನ್ನ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಫಲಿತಾಂಶ ಪಾಸಿಟೀವ್ ಬಂದ ಕಾರಣಕ್ಕೆ ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ಅವರು ನಿಧನರಾಗಿದ್ದರು.
ಕಲಾಪದಲ್ಲಿ ಕಂಬನಿಗರೆಸಿದ ಅಂಗಡಿ
ಗುರುವಾರ ಬೆಳಗ್ಗೆ ವಿಧಾನಮಡಲದ ಕಲಾಪ ಆರಂಭವಾಗುತ್ತಿದ್ದಂತೆ ಅಂಗಡಿ ಅಗಲಿಕೆಯ ನೋವು ಎಲ್ಲೆಲ್ಲೂ ಕಂಡಿತು. ಎರಡೂ ಸದನಗಳಲ್ಲೂ ನೀರವಮೌನ ಆವರಿಸಿತ್ತು. ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿಲುವಳಿ ಮಂಡನೆಯಾದಾಗ ಒಬ್ಬೊಬ್ಬ ಸದಸ್ಯರೇ ಮಾತನಾಡುತ್ತಾ, ಸುರೇಶ್ ಅಂಗಡಿಯವರ ಜತೆಗಿನ ತಮ್ಮ ಒಡನಾಟವನ್ನು ನೆನಪು ಮಾಡಿಕೊಂಡು ಗದ್ಗದಿತರಾದರು.
ಮುಖ್ಯವಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಆರ್.ವಿ.ದೇಶಪಾಂಡೆ, ಲಕ್ಷ್ಮೀ ಹೆಬ್ಬಾಳ್ಕರ್, ಸಚಿವ ಮಾಧುಸ್ವಾಮಿ, ಎಚ್.ಕೆ. ಪಾಟೀಲ್, ಬಸನಗೌಡ ಪಾಟೀಲ್ ಮುಂತಾದವರು ಅಂಗಡಿಯವರ ನೆನಪುಗಳಲ್ಲಿ ಮುಳುಗಿದರಲ್ಲದೆ, ಒತ್ತರಿಸಿದ ದುಃಖವನ್ನು ಅದುಮಿಟ್ಟುಕೊಂಡು ಅಗಲಿದ ನಾಯಕನಿಗೆ ನಮನ ಸಲ್ಲಿಸಿದರು.
ಸಂಪುಟ ಸಭೆಯಲ್ಲಿ ನಮನ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗಡಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ವರ್ಚುಯಲ್ ಸಂಪುಟ ಸಭೆಯಲ್ಲಿ ಮೋದಿ ಅವರ ಜತೆಗೆ, ಗೃಹ ಸಚಿವ ಅಮಿತ್ ಶಾ, ಅಂಗಡಿಯವರ ಕ್ಯಾಬಿನೆಟ್ ಒಡವಾಡಿ ಹಾಗೂ ರೈಲ್ವೆ ಸಚಿವ ಪಿಯೂಶ್ ಗೋಯಲ್ ಮುಂತಾದವರು ಪಾಲ್ಗೊಂಡಿದ್ದರು.