ಮೇಜರ್ ಜನರಲ್ ಸರ್ ಜೇಮ್ಸ್ ಜಾನ್ಸ್’ಸ್ಟೋನ್ ಅವರೇ ಹೇಳುವಂತೆ ಅಂದಿನ ಬ್ರಿಟಿಷ್ ಆಡಳಿತ ಬೇಕೆಂದೇ ನಾಗಾಗಳ ಜತೆ ನಡೆಸಿದ ಹೋರಾಟವನ್ನು ಮರೆಮಾಚಿದೆ. ಆ ಕಾಲಕ್ಕೆ ನಾಗಗಳ ಚತುರತೆ, ಯುದ್ಧನೀತಿ ಹಾಗೂ ವಿರೋಚಿತ ಗುಣಗಳು ಹೆಚ್ಚು ಪ್ರಚಾರ ಪಡೆಯಬೇಕಿತ್ತು. ಆದರೆ, ಆಪ್ಘಾನಿಸ್ತಾನದಲ್ಲಿ ನಡೆಸಿದ ಯುದ್ಧವನ್ನು ವೃಭವೀಕರಿಸುವ ಸ್ವಾರ್ಥದಿಂದ ಆಂಗ್ಲ ಅಧಿಕಾರಿಗಳು ವಿಶ್ವದ ಗಮನ ಸೆಳೆಯಬೇಕಿದ್ದ ಘಟನೆಯನ್ನು ನಾಗಾ ಕಣಿವೆಗಳಲ್ಲಿಯೇ ಹೂತುಹಾಕಿದರು. ಈಗಲಾದರೂ ಈ ಅಸಾಮಾನ್ಯ ಇತಿಹಾಸದ ಮೇಲೆ ಇನ್ನಷ್ಟು ಬೆಳಕು ಚೆಲ್ಲಬೇಕಿದೆ. ಆ ನಿಟ್ಟಿನಲ್ಲಿ ಜಾನ್ಸ್’ಸ್ಟೋನ್ ಅವರ ಕದನರಂಗದ ಪ್ರತ್ಯಕ್ಷ ಕಥನವನ್ನು ಕನ್ನಡೀಕರಿಸಿದ್ದಾರೆ ಹಿರಿಯ ಭೂವಿಜ್ಞಾನಿ ಡಾ.ಎಂ. ವೆಂಕಟಸ್ವಾಮಿ.
***
ಭಾಗ 3
ಅಕ್ಟೋಬರ್ 24ರಂದು ಮೈಯಾಂಗ್ ಖಾಂಗ್ ಬಿಟ್ಟು ಮೈತುಫೆಯುಮ್ ಕಡೆಗೆ ನಡೆದೆವು. ಇಪ್ಪತ್ತು ಮೈಲಿಗಳ ರಸ್ತೆ ಕಡಿದಾದ ಪರ್ವತ ಮತ್ತು ದಟ್ಟಕಾಡಿನಿಂದ ಕೂಡಿದ್ದು ನಾವು ತೀರ ಕಷ್ಟದಿಂದ ಸಾಗಬೇಕಾಯಿತು. 34 ಬಟಾಲಿಯನ್ ಆ ಕಾಡನ್ನು ಕಡಿದು ರಸ್ತೆ ಮಾಡುತ್ತಾ ಹೋಗಿತ್ತು. ನಾನು ಪೋನಿಯಿಂದ ಇಳಿದು ಸ್ವಲ್ಪ ದೂರ ನಡೆಯುತ್ತ ಹಿಂದೆ ಬಿದ್ದಿದ್ದ ಒಬ್ಬ ಸೈನಿಕನಿಗೆ ಪೋನಿ ಕೊಟ್ಟಿದ್ದೆ. ಮಧ್ಯಮಧ್ಯ ಇಳಿದು ದಣಿವಾರಿಸಿಕೊಳ್ಳುತ್ತ ಹಿಂದೆ ಬಿದ್ದವರನ್ನು ಮುಂದಕ್ಕೆ ಬಿಡುತ್ತಾ ಅವರನ್ನು ಹುರಿದುಂಬಿಸುತ್ತಿದ್ದೆ. ಎಲ್ಲರೂ ದಣಿದಿದ್ದರೂ ನಾರಾಯಣ್ ಸಿಂಗ್ ಮುಖದಲ್ಲಿ ದಣಿವೆ ಇರಲಿಲ್ಲ. ಕತ್ತಲಾದ ಮೇಲೆ ಮೈತುಫೆಯುಮ್ ತಲುಪಿದೆವು. ನಮ್ಮ ಹಿಂದಿದ್ದ ಕಾವಲು ಪಡೆ ಮರುದಿನ ಬೆಳಗ್ಗೆಯಾದರೂ ನಮ್ಮನ್ನು ಸೇರಿಕೊಳ್ಳಲಿಲ್ಲ.
ಮೈತುಫೆಯುಮ್ನಲ್ಲಿ ಎಲ್ಲಾ ಪಡೆಗಳನ್ನು ಒಟ್ಟುಗೂಡಿಸಿದೆ. ಜುಬ್ರಾಜ್ ಮತ್ತು ಕೊತ್ವಾಲ್ ಕೊಯಿರೆಂಗ್ರನ್ನು ನನ್ನ ಜೊತೆಗೆ ಕಳುಹಿಸಿಲು ಮಣಿಪುರ ಮಹಾರಾಜರು ಅವರ ಜೊತೆಗೆ ಬಂದಿದ್ದರು. ಆದರೆ ಅವರಲ್ಲಿ ಕೇವಲ ಕೆಲವು ಮಣಿಪುರಿಗಳು ಮಾತ್ರ ಇದ್ದು ನನ್ನ ಉತ್ಸಾಹವೆಲ್ಲ ಭೂಮಿಗೆ ಇಳಿದುಹೋಗಿತ್ತು. ಪ್ರಯಾಣವನ್ನು ವಿಧಿ ಇಲ್ಲದೆ ಮುಂದೂಡಲಾಯಿತು. ನನ್ನ ಜೊತೆಗಿದ್ದ ಸೈನಿಕರೆಲ್ಲ ಹೊಡೆತ ತಿಂದವರಂತೆ ನೆಲಕ್ಕೆ ಕುಸಿದುಹೋಗಿದ್ದರು. ನನಗೆ ಏನು ಮಾಡಬೇಕೋ ಒಂದೂ ಅರ್ಥವಾಗಲಿಲ್ಲ. ನಿಂತಲ್ಲಿ ನಿಲ್ಲದೆ ಕುಳಿತುಕೊಳ್ಳಲಾಗದೆ ಅಡ್ಡಾಡತೊಡಗಿದೆ. ಸಾಯಂಕಾಲ ತಂಗಲ್ ಮೇಜರ್ ಮತ್ತು ಜುಬ್ರಾಜ್ರೊಂದಿಗೆ ವಿಷಯ ಪ್ರಸ್ತಾಪಿಸಿದಾಗ ವಯಸ್ಸಾದ ತಂಗಲ್, ‘ನಮ್ಗೆ ಇನ್ನೂ ಬಹಳ ಸೈನಿಕರು ಬೇಕು. ಸ್ವಲ್ಪ ದಿನ ಉಳಿದುಕೊಂಡು ಅವರನ್ನೆಲ್ಲ ಒಟ್ಟುಗೂಡಿಸ್ಕೊಂಡು ಹೋಗೋಣ’ ಎಂದರು. `ನಾವು ಇಲ್ಲಿ ಒಂದು ದಿನ ಉಳಿದ್ಕೊಂಡರೂ ಗ್ಯಾರಿಸನ್ ಹತರಾಗಬಹುದು. ನೀವು ಮಣಿಪುರಿಗಳು ಬರುವುದಕ್ಕೆ ತಯಾರಿಲ್ಲದೆ ಹೋದರೆ ನನ್ನ ಸೈನಿಕರೊಂದಿಗೆ ನಾನು ಹೊರಡ್ತೀನಿ’ ಎಂದೆ. ಜುಬ್ರಾಜ್ ನನ್ನ ಜೊತೆಗೆ ನಡೆದೇಬಿಟ್ಟರು. ಇದನ್ನು ನಾನು ಎಂದೂ ಮರೆಯಲಾರೆ. ಜುಬ್ರಾಜ್ಗಾಗಿ ನಾನು ಎಂದೆಂದಿಗೂ ಋಣಿ. ಮರುದಿನ ನಾವು ಕೊಹಿಮಾ ಕಡೆಗೆ ಹೆಜ್ಜೆ ಹಾಕಿದೆವು.
ಮಧ್ಯರಾತ್ರಿ, ಕಡಿದಾದ ಬೆಟ್ಟ
ಮಣಿಪುರಿ ನಾಗಾಗಳು (ಮಣಿಪುರದಲ್ಲೂ ನಾಗಾ ಬುಡಕಟ್ಟುಗಳಿವೆ) ದಂಗೆ ಏಳುವ ಸೂಚನೆಗಳಿದ್ದು, ಅವರಿಗೆ ವಿರುದ್ಧವಾದ ಯಾವುದೇ ರೀತಿಯ ನಡುವಳಿಕೆ ನಮ್ಮ ಕೊಹಿಮಾ ಯಾತ್ರೆಗೆ ತೊಂದರೆಯಾಗಿ ಕಥೆ ಇಲ್ಲಿಗೆ ಮುಗಿದುಹೋಗುವ ಸೂಚನೆಗಳಿದ್ದವು. 26ರ ಬೆಳಗ್ಗೆ ಮೈತುಫೆಯುಮ್ ಬಿಟ್ಟು ಎಷ್ಟು ಸಾಧ್ಯವೊ ಅಷ್ಟು ಬಿರುಸಾಗಿ ನಡೆದೆವು. ನಲವತ್ತು ಮೈಲಿಗಳ ದೂರದ ಕೊಹಿಮಾ ಪಟ್ಟಣವನ್ನು ಮಧ್ಯರಾತ್ರಿ ತಲುಪುವ ನಿರೀಕ್ಷೆ ಇತ್ತು. ಮಾವೂ ನದಿಯಲ್ಲಿ ನೀರು ಕುಡಿದು ನದಿಯನ್ನು ದಾಟಿದೆವು. ಸೈನಿಕರು ನೀರಿನಲ್ಲಿ ಸಮಯ ಕಳೆಯುವುದನ್ನು ತಪ್ಪಿಸಲು ನನ್ನ ರಿವಾಲ್ವರ್ನ್ನು ಕೈಗೆ ತೆಗೆದುಕೊಂಡು `ಯಾರಾದರೂ ಸುಮ್ಮನೆ ಕಾಲಹರಣ ಮಾಡಿದರೆ ಗುಂಡು ಹಾರಿಸಿಬಿಡ್ತೀನಿ’ ಎಂದೆ. ನಾವು ಒಂದು ಕಡಿದಾದ ಬೆಟ್ಟವನ್ನು ಹತ್ತುತ್ತ ಹೋದಂತೆ ಒಂದು ಹಳ್ಳಿಯನ್ನು ದಾಟಿ ಹೋಗಬೇಕಾಯಿತು. ಅದು ಕೊಹಿಮಾ ಪಕ್ಕದ ಹಳ್ಳಿಯಾಗಿದ್ದು ಬ್ರಿಟಿಷ್ ರಾಜ್ಯದ ಗಡಿಯಲ್ಲಿತ್ತು. ಆಗ ಸಮಯ ಮೂರು ಗಂಟೆಯಾಗಿದ್ದು ನಾವು ಪೂರ್ಣವಾಗಿ ನಿತ್ರಾಣರಾಗಿದ್ದು ರಾತ್ರಿಯನ್ನು ಅಲ್ಲೆ ಕಳೆಯಲು ತಿರ್ಮಾನಿಸಿದೆವು.
ಇಲ್ಲಿ ವಿಶ್ವೇಮಾ ಹಳ್ಳಿಯ ದೂತ ನಮ್ಮ ಜೊತೆಗೆ ಸೇರಿಕೊಂಡ. ದೂತ ಎಲ್ಲವನ್ನು ನಿಭಾಯಿಸಿರುವುದಾಗಿ, ಆ ಹಳ್ಳಿಯವರು ಯಾರೂ ನಮ್ಮ ತಂಟೆಗೆ ಬರುವುದಿಲ್ಲವೆಂದು, ನೀವು ಅವರಿಗೆ ಬಹುಮಾನಗಳನ್ನು ಕಳುಹಿಸಬೇಕೆಂದು ತಿಳಿಸಿದ. ಆತನನ್ನು ಅದೇ ರಾತ್ರಿ ಹಿಂದಕ್ಕೆ ಕಳುಹಿಸಿ ಅವರು ಹಿಡಿದಿಟ್ಟುಕೊಂಡಿರುವ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಬೇಕು ಮತ್ತು ಹಳ್ಳಿಯನ್ನು ಕ್ರಮಬದ್ದವಾಗಿ ನಮಗೆ ಒಪ್ಪಿಸಬೇಕು. ಇಲ್ಲವೆಂದರೆ ಹಳ್ಳಿಯ ಮೇಲೆ ಆಕ್ರಮಣ ಮಾಡಿ ಒಬ್ಬರನ್ನೂ ಬಿಡದೆ ಮುಗಿಸುವುದಾಗಿ ತಿಳಿಸಿದೆ. ಆದರೆ ವಿಶ್ವೇಮಾ ಹಳ್ಳಿಯವರು ನಮ್ಮ ವಿರುದ್ಧವಾಗಿ ನಿಲ್ಲುವುದಾಗಿ ಮರುದಿನ ಊಹೆಗಳು ಹುಟ್ಟುಕೊಂಡಿದ್ದವು.
ಮರುದಿನ ಮಧ್ಯಾಹ್ನ ಮಾಹೋ ನಾಗಾಗಳು ಏಳು ಜನ ನೇಪಾಳಿ ಕೂಲಿಯಾಳುಗಳನ್ನು ಕರೆದುಕೊಂಡು ಬಂದರು. ಅವರೆಲ್ಲ ಕೊಹಿಮಾದಿಂದ ತಪ್ಪಿಸಿಕೊಂಡು ಬಂದವರಾಗಿದ್ದರು. ರಾತ್ರಿಯಲ್ಲ ಕಾಡಿನಲ್ಲಿ ಅಲೆದಾಡುತ್ತ, ಪ್ರಾಣವನ್ನು ಕೈಯಲ್ಲೆ ಹಿಡಿದುಕೊಂಡು ಬಂದಂತಿದ್ದರು. ಅವರು ನಾಗಾಗಳ ಕೈಯಿಗೆ ದೊರಕಿದ್ದರೆ ರುಂಡ ಮುಂಡಗಳು ಬೇರೆಬೇರೆಯಾಗಿ ಎಲ್ಲೆಲ್ಲಿ ಬಿದ್ದಿರುತ್ತಿದ್ದವೊ? ಮಾಹೋ ನಾಗಾಗಾಗಳಿಗೆ 20 ರೂ. ಬಹುಮಾನ ನೀಡಿದೆ. ನಾಗಾಗಳು, ನೇಪಾಳಿಗಳನ್ನು ತಪ್ಪಾಗಿ ತಿಳಿದುಕೊಂಡು ಸ್ಟಾಕೇಡ್ ಬಾಗಿಲು ಹೊರಗೆ ಒಂದು ಗುಡಿಸಿಲಲ್ಲಿ ಕೂಡಾಕಿದ್ದರಂತೆ. ಕತ್ತಲಾಗುವವರೆಗೂ ಅಲ್ಲೆ ಬಚ್ಚಿಟ್ಟುಕೊಂಡಿದ್ದ ಅವರು ರಾತ್ರಿಯಲ್ಲ ಕಾಡಿನಲ್ಲಿ ಅಲೆದಾಡಿ ಬಂದಿರುವುದಾಗಿ ತಿಳಿಸಿದರು. ಕೊಹಿಮಾ ಬಗ್ಗೆ ಕೇಳಿದಾಗ ಕೆಲವು ವಿವರಗಳನ್ನು ನೀಡಿದರು.
ಕೊಹಿಮಾ ಮಿಲಿಟರಿ ಶಿಬಿರದಲ್ಲಿ ತಿನ್ನಲು ಆಹಾರವಿಲ್ಲ, ಮದ್ದು ಗುಂಡುಗಳು ಪೂರ್ಣವಾಗಿ ಖಾಲಿಯಾಗಿವೆ. ಶ್ರೀಮತಿ ಕವ್ವಲೆ ಮತ್ತು ಶ್ರೀಮತಿ ಡಾಮೆಂಟ್ರನ್ನು ಗುಡಿಸಲಲ್ಲಿ ಕೂಡಿ ಹಾಕಿದ್ದಾರೆ. ಡಾಮೆಂಟ್ರನ್ನು ಅಪಹರಿಸಿಕೊಂಡು ಹೋಗಿರುವುದಾಗಿ, ಅದೇ ಸ್ಥಳದಲ್ಲಿ ಐವತ್ತು ಜನರನ್ನು ಕೂಂದು ಹಾಕಿರುವುದಾಗಿ ಮತ್ತು ಮೂವತ್ತು ಜನರು ತಪ್ಪಿಸಿಕೂಂಡು ಕಾಡಿಗೆ ಓಡಿಹೋಗಿರುವುದಾಗಿ; ಕೆಲವರು ಶಸ್ತ್ರಾಸ್ತ್ರಗಳನ್ನು ತೆಗೆದುಕೂಂಡು ಓಡಿದರೆ, ಕೆಲವರು ಬಿಸಾಕಿ ಓಡಿಹೋದರೆಂದು ತಿಳಿಸಿದರು. ಬಹಳಷ್ಟು ಯೋಧರ ಕೈಗಳಲ್ಲಿದ್ದ ಬಂದೂಕುಗಳನ್ನು ನಾಗಾಗಳು ತುಂಡರಿಸಿ ಬಿಸಾಕಿದ್ದುದಾಗಿ ತಿಳಿಯಿತು. ಪ್ರತಿಯೊಬ್ಬ ನಾಗಾ ಐವತ್ತು ಸಿಡಿ ಮದ್ದುಗಳನ್ನು ಹೊಂದಿರುವುದಾಗಿ, ಅದೇ ದಿನ ಬೆಳಗ್ಗೆಯಿಂದಲೆ ಕೊಹಿಮಾ ಪಟ್ಟಣದ ಮಧ್ಯದಿಂದ ಹೊಗೆ ಎದ್ದೇಳುತ್ತಿದ್ದುದಾಗಿ ತಿಳಿಸಿದರು. ಕವ್ವಲೆಯನ್ನು ಸುರಿಕ್ಷಿತವಾಗಿ ಸಮಗುಡ್ಟಿಂಗ್ಗೆ ಕೊಂಡೊಯ್ಯಲಾಯಿತು ಎಂದರು. (ಆದರೆ ಕವ್ವಲೆಯನ್ನು ಎಲ್ಲಿಗೆ ಕರೆದೊಯ್ಯಲಾಯಿತು ಎಂದು ಕೊನೆಯವರೆಗೂ ತಿಳಿಯಲಿಲ್ಲ. ದಾರಿಯಲ್ಲಿ ಅವರನ್ನು ಹತ್ಯೆ ಮಾಡಿರಬೇಕು?) ಸಾಯಂಕಾಲ ಸೈನಿಕರಿದ್ದ ಕಟ್ಟಡದ ಒಳಕ್ಕೆ ಕಲ್ಲುಗಳಿಗೆ ಬಟ್ಟೆಗಳನ್ನು ಸುತ್ತಿ, ಬೆಂಕಿ ಹಚ್ಚಿ ಎಸೆದು ಸೈನಿಕರನ್ನು ಸುಡಲಾಯಿತು. ಆಕ್ರಮಣ ಮಾಡಿದ ನಾಗಾಗಳ ಸಂಖ್ಯೆ 6000ಕ್ಕೂ ಮೀರಿದ್ದು, ಒಂದು ಬೃಹತ್ತಾದ ಸೈನ್ಯದೊಂದಿಗೆ ಬ್ರಿಟಿಷ್ ಶಿಬಿರವನ್ನು ಸುತ್ತುವರಿದು ಎಲ್ಲವನ್ನೂ ದ್ವಂಸ ಮಾಡಿದರು ಎಂದು ತಿಳಿಸಿದರು. ಇದೆಲ್ಲವನ್ನು ಕೇಳಿದ ನನ್ನ ಮನಸ್ಸು ವ್ಯಾಕುಲಗೂಂಡಿತು.
ಎರಡು ಕಾಗದ ತುಂಡುಗಳು
ತಪ್ಪಿಸಿಕೊಂಡು ಬಂದಿದ್ದ ನೇಪಾಳಿಗಳು ಆಹಾರ ನೀರಿಲ್ಲದೆ ತೀರ ಚಿಂತಾಜನಿಕ ಸ್ಥಿತಿಯಲ್ಲಿದ್ದರು. ಅವರು ಯಾವ ರೀತಿ ಭೀತಿಗೊಳಗಾಗಿದ್ದರು ಎಂದರೆ ಪ್ರಾಣ ಇದ್ದರೂ ಸತ್ತವರಂತೆ ಕಾಣಿಸುತ್ತಿದ್ದರು. ರಾತ್ರಿ ಮದ್ದುಗುಂಡುಗಳ ಜೊತೆಗೆ ಮಲಗಿ ಬೆಳಗಿನ ಜಾವ ಮೂರು ಗಂಟೆಗೆಲ್ಲ ಎಚ್ಚರಗೊಂಡೆವು. ನಾಗಾಗಳು ಯಾವಾಗಲೂ ಶತ್ರುಗಳ ಮೇಲೆ ಆಕ್ರಮಣ ಮಾಡುವುದು ಅದೇ ಸಮಯದಲ್ಲಿ. ನಾನು ಎದ್ದು ನನ್ನ ಸಿಬ್ಬಂದಿಯನ್ನು ಸಂಬೋಧಿಸತೊಡಗಿದೆ. `ನಾವು ಭಾರಿ ಅಪಾಯದ ಪರಿಸ್ಥಿತಿಯಲ್ಲಿ ನಡೆಯುತ್ತಿದ್ದೇವೆ. ಆದರೂ ಕೊನೆಗೆ ಗೆಲ್ಲುವುದು ನಾವೇ. ಒಂದು ವೇಳೆ ದಾರಿಯ ಮಧ್ಯ ಯುದ್ಧದಲ್ಲಿ ನಾನು ಗಾಯಗೊಂಡರೆ ಇಲ್ಲ ಪ್ರಾಣಬಿಟ್ಟರೆ ನನ್ನನ್ನು ಬಿಟ್ಟು ನೀವು ಮುಂದೆ ಹೋಗಿ. ಕೊಹಿಮಾದಲ್ಲಿರುವ ಗ್ಯಾರಿಸನ್ ಅವರನ್ನು ನೀವು ರಕ್ಷಿಸಬೇಕಾಗಿದೆ. ಈ ರಾತ್ರಿಗೆ ನೀವು ಕೊಹಿಮಾ ತಲುಪುವುದರಲ್ಲಿ ಸಫಲರಾದರೆ ನಾನು ಪ್ರಮಾಣ ಮಾಡಿ ಹೇಳುತ್ತೇನೆ. ನಿಮಗೆಲ್ಲರಿಗೂ ಖಂಡಿತ ಪ್ರಮೋಷನ್ ಕೊಡಿಸುತ್ತೇನೆ’. ಪರ್ವತಗಳ ಮೇಲೆ ಸೂರ್ಯನ ಕಿರಣಗಳು ಪಸರಿಸುವ ಮುನ್ನ ಎರಡು ಕಾಗದ ತುಂಡುಗಳು ನನ್ನ ಕೈ ತಲುಪಿದವು. ಹೆಚ್ಚುವರಿ ಅಸಿಸ್ಟೆಂಟ್ ಕಮಿಷನರ್ ಮಿ.ಹಿಂದೆ, ಇಬ್ಬರು ನೇಪಾಳಿಗಳ ಕೈಯಲ್ಲಿ ಕಳುಹಿಸಿಕೊಟ್ಟಿದ್ದರು. ಆ ನೇಪಾಳಿಗಳು ಕಾಗದ ತುಂಡುಗಳನ್ನು ತಮ್ಮ ತಲೆಕೂದಲಿನಲ್ಲಿ ಬಚ್ಚಿಟ್ಟುಕೊಂಡು ಓಡಿಬಂದಿದ್ದರು.
ಒಂದು ತುಂಡು ಕಾಗದದಲ್ಲಿದ್ದ ಸಂದೇಶ:
“ನಾಗಾಗಳು ನಮ್ಮನ್ನು ಸುತ್ತುವರಿದಿದ್ದಾರೆ, ನೀರಿನ ಸರಬರಾಜನ್ನು ತುಂಡರಿಸಲಾಗಿದೆ.
ಗ್ಯಾರಿಸನ್ರನ್ನು ರಕ್ಷಿಸಬೇಕಾದರೆ ಹಾರುವ ಸೈನಿಕರನ್ನು ಕಳುಹಿಸಿ.
ಎಲ್ಲವೂ ತುರ್ತಾಗಿ ನಡೆಯಬೇಕಿದೆ.
ಎಚ್.ಎಮ್.ಹಿಂದೆ, ಎ.ಪಿ.ಎ. ಕೊಹಿಮಾ 25.10.1879”
ಎರಡನೇ ತುಂಡು ಕಾಗದದಲ್ಲಿದ್ದ ಸಂದೇಶ:
“ನಾವು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಇದ್ದೀವಿ. ಬೇಗನೆ ಧಾವಿಸಿ ಬನ್ನಿ.
ಕೊಹಿಮಾ ಇನ್ನೂ ನಮ್ಮ ಕೈಯಲ್ಲೆ ಇದೆ.
ಕೊಹಿಮಾ ಇನ್ನೂ ನಮ್ಮ ಕೈಯಲ್ಲೆ ಇದೆ.
ಎಚ್.ಎಮ್.ಹಿಂದೆ, ಎ.ಪಿ.ಎ. ಕೊಹಿಮಾ 25.10.1879”
ಈ ಸಂದೇಶವನ್ನು ನೋಡಿದ ಮೇಲೆ ನಾನು ಕಾಲಹರಣ ಮಾಡುವುದು ಸರಿ ಇಲ್ಲ ಎನಿಸಿತು. ಮಣಿಪುರಿಗಳು ಇನ್ನೂ ಪೂರ್ಣವಾಗಿ ತಯಾರಿರಲಿಲ್ಲ. ಮೊದಲಿಗೆ ಐವತ್ತು ಸೈನಿಕರೊಂದಿಗೆ ವಯಸ್ಸಾದ ಅಧಿಕಾರಿಯೊಬ್ಬರ ಜೊತೆಗೆ ಪ್ರಯಾಣ ಪ್ರಾರಂಭಿಸಿದೆ. ನನ್ನ ಜೊತೆಗೆ ಇದ್ದ ಅರವತ್ತು ಸೈನಿಕರೂ ಸೇರಿ ರಭಸವಾಗಿ ನಡೆಯತೊಡಗಿದೆವು. ನಮ್ಮ ಜೊತೆಗೆ ನಾರಾಯಣ್ ಸಿಂಗ್ ಮತ್ತು ಎರುಂಗ್ಬಾಪೊಲ್ಲಾ ಕೂಡ ಇದ್ದರು. ನಮ್ಮ ಪಡೆ ಯುನಿಯನ್ ಜಾಕನ್ನು ಹೊತ್ತುಕೊಂಡು ಹೊರಟಿತು.
ವಿಶ್ವೇಮಾ ಹಳ್ಳಿಯವರು ಸೆರೆ ಹಿಡಿದಿಟ್ಟುಕೊಂಡಿದ್ದವರನ್ನು ಬಿಡಿಸಿಕೊಂಡ ಮೇಲೆ ಕೆಲವು ಸೈನಿಕರನ್ನು ಅಲ್ಲೇ ಬಿಟ್ಟು ಹಳ್ಳಿಗರು ನಮ್ಮ ಮೇಲೆ ಆಕ್ರಮಣ ಮಾಡಿದರೆ ಗುಂಡು ಹಾರಿಸುವಂತೆ ಆಜ್ಞೆ ಮಾಡಿದೆ. ನಾವು ಹಳ್ಳಿ ತಲುಪಿದಾಗ ಹಳ್ಳಿಯವರು ನಮ್ಮನ್ನು ಆದರದಿಂದ ಬರಮಾಡಿಕೊಂಡರು. ರಿಗ್ವೇಮಾ ಹಳ್ಳಿಯ ನಾಗಾಗಳು ನಮ್ಮ ಮೇಲೆ ದಾಳಿ ಮಾಡಲು ಹೊಂಚು ಹಾಕುತ್ತಿರುವುದಾಗಿ ತಿಳಿದು ಎಚ್ಚರಿಕೆಯಿಂದ ತಪ್ಪಿಸಿಕೊಂಡು ಮುಂದೆ ಹೋದೆವು. ಕೊಹಿಮಾ ಮಿಲಿಟರಿ ಬಿಡಾರಗಳಿಗೆ ಯಾವುದೇ ದಕ್ಕೆ ಆಗದೆ ಇರುವುದು ದೂರದಿಂದಲೆ ಕಂಡುಬಂದಿತ್ತು. ಪರ್ವತಗಳ ದಾರಿಯನ್ನು ಸುತ್ತಿಬಳಸಿ ಹೋದ ಮೇಲೆ ಬಿಡಾರಗಳು ನಮ್ಮ ಕಣ್ಣುಗಳ ಮುಂದೆ ಪೂರ್ಣವಾಗಿ ಕಾಣಿಸಿಕೊಂಡವು.
ಕೊಹಿಮಾ ಕಣಿವೆಯತ್ತ ಬಿರುಸಾಗಿ ಸಾಗಿ ತಪ್ಪಲಿನಲ್ಲಿ ಇಳಿದು ಶಿಬಿರದ ಹತ್ತಿರಕ್ಕೆ ಬಂದಿದ್ದೆವು. ಗುಡಾರಗಳು ಅಲ್ಲಿಂದ ಕೇವಲ ನೂರು ಗಜಗಳ ದೂರ ಮಾತ್ರ ಇದ್ದವು. ಗ್ಯಾರಿಸನ್ ದೊಡ್ಡದಾಗಿ ಉತ್ಸಾಹದಿಂದ ಒಮ್ಮೆಲೆ ಕೂಗಿಕೊಂಡರು. ನಾವು ಅದಕ್ಕೆ ಉತ್ತರವಾಗಿ ಕೂಗಿದೆವು. ನಮ್ಮನ್ನು ನೋಡಿದ ಗ್ಯಾರಿಸನ್ ಸೈನಿಕರು ಹೊರಕ್ಕೆ ಓಡಿಬಂದರು. ನಾನು ಹತ್ತಿರಕ್ಕೆ ಹೋಗಿದ್ದೆ ಶ್ರೀಮತಿ ಕವ್ವಲೆ ಮತ್ತು ಶ್ರೀಮತಿ ಹಿಂದೆ ಅವರು ನನ್ನ ಕೈಗಳನ್ನು ಹಿಡಿದುಕೊಂಡರು. ಗ್ಯಾರಿಸನ್ ಸೈನ್ಯ ಬಾಗಿಲಲ್ಲಿ ಎರಡೂ ಕಡೆ ಸಾಲಾಗಿ ನಿಂತುಕೊಂಡು, ನಾವು ಅವರ ಮಧ್ಯ ನಡೆದು ಒಳಗೆ ಹೋದೆವು. ಅವರಲ್ಲಿ ನನಗೆ ಗೊತ್ತಿದ್ದ ಹಲವು ಹಳೆ ಮುಖಗಳೂ ಇದ್ದವು. ಅವರನ್ನು ನಾನು 1874ರಲ್ಲಿ ನಾಗಾ ಪರ್ವತಗಳನ್ನು ಬಿಟ್ಟಾಗ ನೋಡಿದ್ದು. ಅವರೆಲ್ಲ ನಮ್ಮನ್ನು ಬಹಳ ಪ್ರೀತಿಯಂದ ಬರಮಾಡಿಕೊಂಡರು. ಅವರಲ್ಲಿ ಫ್ರಾಂಟಿಯರ್ ಪೊಲೀಸ್ ಸುಬೆದಾರ್ ಮೇಮಾರಾಮ್ ಮತ್ತು ಕುರಮ್ಸಿಂಗ್ ಮತ್ತಿತರರಿದ್ದರು. ನಾನು ಬರುವುದನ್ನು ಕೇಳಿದ ಮೇಮಾರಾಮ್ `ಓ ಜಾನ್ಸ್ಟೋನ್ ಸಾಹೇಬರು ಬರುವುದಾದರೆ ನಾವೆಲ್ಲ ಸುರಕ್ಷಿತ’ ಎಂದಿದ್ದನಂತೆ.
ಗ್ಯಾರಿಸನ್ ಪಡೆಯ ಕೆಳಗಿನ ಅಧಿಕಾರಿಗಳಿಗೆ ನಾನು ಹೇಳಿದಂತೆ ಕೇಳಬೇಕು ಎಂದು ಮೊದಲೇ ತಾಕೀತು ಮಾಡಿಬಿಟ್ಟೆ. ಗಂಡಸರನ್ನು ಕಳೆದುಕೊಂಡು ವಿದವೆಯರಾಗಿದ್ದ ಶ್ರೀಮತಿ ಡಾಮೆಂಟ್ ಮತ್ತು ಶ್ರೀಮತಿ ಕವ್ವಲೆ ಅವರನ್ನು ನೋಡಿ ದುಃಖವಾಯಿತು. ಅವರ ಎದುರಿಗೆ ಅವರ ಗಂಡಂದಿರ ತಲೆಗಳನ್ನು ನಾಗಾಗಳು ಉಗ್ರರು ಹಾರಿಸಿಕೊಂಡು ಹೋಗಿದ್ದರು. ಶ್ರೀಮತಿ ಕವ್ವಲೆ ಅವರ ಜೊತೆಗೆ ಮಾತನಾಡುತ್ತಿದ್ದಾಗ ಅವರ ಚಿಕ್ಕ ಮಗು ಕುಡಿಯಲು ನೀರು ಕೇಳಿ, ಉಳಿದಿದ್ದ ಗುಟುಕು ನೀರನ್ನು ಮಗುವಿಗೆ ನೀಡುತ್ತ ಸಮಾಧಾನ ಮಾಡಿದಳು.
ಮಣಿಪುರಿಗಳ ಸೈನ್ಯ ಈಗ ಸಾಲಾಗಿ ನಮ್ಮ ಶಿಬಿರ ತಲಪುತ್ತಿತ್ತು. ಅವರೆಲ್ಲ ಗ್ಯಾರಿಸನ್ಗೆ ವಂದಿಸುತ್ತ ಒಳಗೆ ಬಂದರು. ನಾನು ಆಗಲೇ ನೋಡಿದ್ದ ಕವ್ವಲೆಯವರ ನಾಶವಾಗಿದ್ದ ಶಿಬಿರವನ್ನು ತೋರಿಸಿದೆ. ಮಣಿಪುರಿಗಳು ಬಿಡಾರ ಹೂಡುವ ಸ್ಥಳವನ್ನು ತೋರಿಸಿ ವಿಶ್ರಾಂತಿ ಪಡೆಯಲು ಹೇಳಿದೆ. ಮಣಿಪುರದಲ್ಲಿದ್ದ ನನ್ನ ಪತ್ನಿಗೆ ನಾವು ಕೊಹಿಮಾ ಕ್ಷೇಮವಾಗಿ ತಲುಪಿದ್ದು, ಆರಾಮಾಗಿ ಇರುವುದಾಗಿ ಪತ್ರ ಬರೆದು ಕಳುಹಿಸಿದೆ. ಮುಖ್ಯ ಕಮಿಷನರ್ ಮತ್ತು ಇಂಡಿಯನ್ ಸರ್ಕಾರಕ್ಕೆ (ಅಸ್ಸಾಂ) ಟೆಲಿಗ್ರಾಮ್ ಕಳುಹಿಸುವಂತೆ ಹತ್ತಿರದ ಕಛಾರ್ ಟೆಲಿಗ್ರಾಮ್ ಕೇಂದ್ರಕ್ಕೆ ಕಳುಹಿಸಿಕೊಟ್ಟೆ.
ಅಕ್ಟೋಬರ್ 14ರಂದು ಡಾಮೆಂಟ್ ಜೋಟ್ಸೋಮಾದಿಂದ ಕೊಹಿಮಾಗೆ ಹೋಗಿ ಕೆಲವು ನಿಬಂಧನೆಗಳನ್ನು ಹೇರಿದ್ದರಂತೆ. ಖೋನೊಮಾ ಹಳ್ಳಿಯ ಮೆರಿಮಾ ನಾಗಾಗಳು ಡಾಮೆಂಟ್ ಸೈನಿಕರ ದಾರಿಗೆ ಅಡ್ಡಪಡಿಸುತ್ತಿರುವುದನ್ನು ಡಾಮೆಂಟ್ ಹಲವು ಸಲ ವಿರೋಧಿಸಿದಾಗ ನಾಗಾಗಳು ಕೆಲವರು ಡಾಮೆಂಟ್ ಅವರಿಗೆ ಮೆರಿಮಾ ನಾಗಾಗಳ ಹತ್ತಿರಕ್ಕೆ ಹೊಗಬೇಡಿ. ನಿಮ್ಮ ಸೈನಿಕರ ಸ್ನೇಹ ಬಯಸುವ ಸೆಮಿಯಾ ನಾಗಾಗಳ ಜೊತೆಗೆ ಸಂಬಂಧ ಇರಿಸಿಕೊಳ್ಳಿ ಎಂದರೂ ಡಾಮೆಂಟ್ ಕೇಳಿಸಿಕೊಳ್ಳಲಿಲ್ಲವಂತೆ. ಒಂದು ದಿನ ಡಾಮೆಂಟ್ ಮೆರಿಮಾ ಹಳ್ಳಿಯ ಸರಿಹದ್ದಿಗೆ ಹೋಗಿ ಸೈನಿಕರಿಗೆ ದಾರಿ ನೀಡುವಂತೆ ಕೇಳಿಕೊಂಡರಂತೆ. ದಾರಿ ಮುಚ್ಚಿದ ಮೆರಿಮಾ ನಾಗಾಗಳನ್ನು ಡಾಮೆಂಟ್ ವಿರೋಧಿಸಿದರು, ಘರ್ಷಣೆಯಾಗಿ ಮೆರಿಮಾ ನಾಗಾಗಳು ಡಾಮೆಂಟರಿಗೆ ಗುಂಡು ಹೊಡೆದರಂತೆ. ಜೊತೆಗಿದ್ದ ಸೈನಿಕರನ್ನು ನಾಗಾಗಳು ದಾವುಗಳಲ್ಲಿ ತುಂಡರಿಸಿದರೆ, ಉಳಿದವರು ಬಂದೂಕುಗಳಲ್ಲಿ ಗುಂಡುಗಳ ಮಳೆಗೆರೆದರಂತೆ. ಎಷ್ಟೋ ಸೈನಿಕರು ಅಲ್ಲೆ ಹತರಾದರೆ, ಉಳಿದವರು ಕೊಹಿಮಾ ಕಡೆಗೆ ಓಡಿಹೋದರು. ವಿಷಯ ತಿಳಿದ ಕವ್ವಲೆ ಒಂದು ಶಿಬಿರವನ್ನು ತಮ್ಮ ಸೈನಿಕರಿಂದಲೆ ದ್ವಂಸ ಮಾಡಿಸಿ ಎಲ್ಲಾ ಸೈನಿಕರನ್ನು ಒಂದು ಶಿಬಿರದಲ್ಲಿ ಕುಡಿಸಿ ಅದನ್ನು ಗಟ್ಟಿಭದ್ರ ಮಾಡಿದರಂತೆ. ಹತ್ತಿರದ ಇನ್ನಷ್ಟು ನಾಗಾಗಳು ಕೊಹಿಮಾ ಮೇಲೆ ದಾಳಿ ಮಾಡಲು ಸಜ್ಜಾಗುತ್ತಿರುವ ವಿಷಯ ಕವ್ವಲೆ ಕಿವಿ ತಲುಪಿತು.
ಅಂಗಾಮಿ ಬುಡಕಟ್ಟಿನ ನಾಗಾ ಯೋಧ.
ನೀರಿನಲ್ಲಿ ಮನುಷ್ಯರ ತಲೆಗಳು
ಕವ್ವಲೆ 60 ಕಿ.ಮೀ. ದೂರದಲ್ಲಿದ್ದ ವೊಖಾ ಪಟ್ಟಣದಲ್ಲಿದ್ದ ಮಿ.ಹಿಂದೆಯವರಿಗೆ ದೂತನ ಮೂಲಕ ವಿಷಯ ತಲುಪಿಸಿ 50 ಪೊಲೀಸರೊಂದಿಗೆ ಕೂಡಲೆ ಕೊಹಿಮಾ ತಲುಪುವಂತೆ ತಿಳಿಸಿದರು. ಮಿ.ಹಿಂದೆ ರಾತ್ರೋರಾತ್ರಿ ಹೊರಟು ಕತ್ತಲಲ್ಲಿ ದಾರಿ ಸವೆದು 19ರ ಬೆಳಗ್ಗೆ ಕೊಹಿಮಾ ತಲುಪಿದ್ದರು. ಇದರಿಂದ ಗ್ಯಾರಿಸನ್ ಕೊಹಿಮಾ ಶಿಬಿರವನ್ನು ಅಷ್ಟು ದಿನಗಳು ಉಳಿಸಿಕೊಳ್ಳಲು ಸಾಧ್ಯವಾಯಿತು. 44ನೇ ಆರ್.ಎಲ್.ಇನ್ಫಂಟ್ರಿಯ (ಕಾಲಾಳುಪಡೆ) ಮೇ.ಟಿ.ಎನ್.ವಾಕರ್ ಅವರು ಸಂಗ್ರಹಿಸಿ ಇಟ್ಟುಕೊಂಡಿದ್ದ ಆಹಾರ ಧಾನ್ಯಗಳ ಸಹಾಯ ಗ್ಯಾರಿಸನ್ ಸೈನ್ಯಕರಿಗೆ ದೊರಕಿತ್ತು. ವಾಕರ್ ಎರಡು ತಿಂಗಳ ಹಿಂದೆ ಕೊಹಿಮಾಗೆ ಬಂದಿದ್ದಾಗಲೂ ಆಹಾರ ವಸ್ತುಗಳನ್ನು ಕೊಟ್ಟುಹೋಗಿದ್ದರು. ಆದರೆ ಅದು ಕೇವಲ ಕೆಲವು ದಿನಗಳಲ್ಲಿ ಮುಗಿದುಹೋಗಿತ್ತು. ನಾಗಾಗಳ ಧಾಳಿ ನಡೆದಾಗ ಆಹಾರಧಾನ್ಯಗಳು ಮುಗಿದು ನೀರಿನ ಸರಬರಾಜನ್ನು ತುಂಡರಿಸಲಾಗಿತ್ತು. ಜೊತೆಗೆ ನೀರಿನಲ್ಲಿ ಮನುಷ್ಯರ ತಲೆಗಳನ್ನು ಎಸೆದು ನೀರನ್ನು ವಿಷವಾಗಿ ಪರಿವರ್ತಿಸಿದ್ದರು.
ಗ್ಯಾರಿಸನ್ ಸೈನಿಕರು ಶಿಬಿರದ ಹೊರಗಡೆ ಸಿಕ್ಕರೆ ಸಾಕು ನಾಗಾಗಳು ಹಿಡಿದುಕೊಂಡು ಹೋಗುತ್ತಿದ್ದರು. ಶಿಬಿರಗಳ ಸುತ್ತಲಿದ್ದ ದಟ್ಟ ಕಾಡುಗಳಿಂದ ನಾಗಾಗಳು ರಾತ್ರಿ ಹೊತ್ತು ದಾಳಿ ನಡೆಸುತ್ತಲೆ ಇದ್ದರು. ನನ್ನ ಪತ್ರ ತಲುಪುವ ಒಂದೆರಡು ಗಂಟೆಗಳ ಮುನ್ನ ಗ್ಯಾರಿಸನ್ ನಾಗಾಗಳ ಮಧ್ಯ ಮಾತುಕತೆ ನಡೆಸಿ ಈಗಿನ ಶಿಬಿರದ ಸ್ಥಳವನ್ನು ನಾಗಾಗಳಿಗೆ ಕೊಟ್ಟು ಅಲ್ಲಿಂದ ಸಮಗುಡ್ಟಿಂಗ್ಗೆ ಹೋಗಲು ದಾರಿಯನ್ನು ಬಿಡುವ ಬಗ್ಗೆ ಯೋಚಿಸಿದ್ದರಂತೆ. ಹಾಗೇನಾದರೂ ನಡೆದುಹೋಗಿದ್ದರೆ ಗ್ಯಾರಿಸನ್ ಪೂರ್ಣವಾಗಿ ಸೋತು ಹೋಗುತ್ತಿದ್ದರು. ಅದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿತ್ತು. ಫಲಿತಾಂಶ ಏನಾಗುತ್ತಿತ್ತೊ ಏನೋ? ನಾಗಾಗಳ ಬಗ್ಗೆ ಊಹಿಸುವುದೇ ಕಷ್ಟ.
ನಾನು ಕೊಹಿಮಾ ತಲುಪಿ ಶಿಬಿರದ ಸುತ್ತಲೂ ತಪಾಷಣೆ ನಡೆಸಿದಾಗ ಬ್ರಿಟಿಷರು ಮತ್ತು ಇಂಡಿಯನ್ ಯೋಧರ 545 ದೇಹಗಳು ರುಂಡವಿಲ್ಲದೆ ಬೆತ್ತಲಾಗಿ ನೆಲವೆಲ್ಲ ಛದ್ರಗೊಂಡು ಬಿದ್ದಿದ್ದವು. ಕೊಹಿಮಾ ಪರ್ವತಗಳು ಭೀಕರ ಮಸಣವಾಗಿ ಕಾಣಿಸುತ್ತಿದ್ದವು. 500 ನಿಲುವುಗಳ ಶಸ್ತ್ರಾಸ್ತ್ರಗಳು ಮತ್ತು 2,50,000 ಸುತ್ತಿನ ಮದ್ದುಗುಂಡುಗಳನ್ನು ನಾಗಾಗಳು ದೋಚಿದ್ದರು. ಇದರಿಂದ ನಾಗಾ ಪರ್ವತಗಳನ್ನು ಮೂರು ವರ್ಷಗಳು ಕಾಲ ಉರಿಸಬಹುದಿತ್ತು, ಇಲ್ಲ ಅರ್ಧ ಡಜನ್ ರೆಜಿಮೆಂಟ್ಗಳನ್ನು ಅಷ್ಟೇ ಕಾಲ ಪೋಷಿಸಬಹುದಾಗಿತ್ತು. ಆ ಮದ್ದುಗುಂಡುಗಳ ಬೆಲೆ 10 ಲಕ್ಷ ಸ್ಟರ್ಲಿಂಗ್. ಆದರೆ ಇದೆಲ್ಲದರಿಂದ ಹೋದ ಮನುಷ್ಯರ ಪ್ರಾಣಗಳನ್ನು ಹಿಂದಕ್ಕೆ ತರಲಾಗುವುದೇ?
ಜನವರಿ 26, 1880ರಂದು ಅಸ್ಸಾಂನ ಬಲಾದನ್ ಟೀ ತೊಟಗಳಲ್ಲಿ ಕೆಲಸ ಮಾಡುವ ಅಸ್ಸಾಮಿ ಮತ್ತು ಇತರೆ ಬುಡಜಕಟ್ಟು ಜನರ ಮೇಲೆ ನಡೆಸಿದ ಭೀಕರ ಆಕ್ರಮಣದ ಬಗ್ಗೆ ಕಛಾರ್ನಲ್ಲಿದ್ದ ಇಂಗ್ಲಿಷ್ ಪತ್ರಕರ್ತ ತನ್ನ ವರದಿಯ ಕೊನೆಯಲ್ಲಿ ಹೀಗೆ ವಿವರಿಸಿದ್ದ. ಇದನ್ನು ನಡೆಸಿದವರು ಬೇರೆ ಯಾರೂ ಅಲ್ಲ. ಅದೇ ಖೋನೊಮಾ ನಾಗಾಗಳು. ಒಟ್ಟಾಗಿ ಅತಿ ಘೋರವಾದ ಅಸ್ವಸ್ಥ ಮನಸಿನ ರಾಕ್ಷಸರು ನಡೆಸಿದ ಘನಘೋರ ಚಿತ್ರಣ ಅದಾಗಿತ್ತು. ಟೀ ತೋಟಗಳೆಲ್ಲ ಪೂರ್ಣವಾಗಿ ಭಗ್ನಗೊಂಡು ರಕ್ತಸಿಕ್ತವಾಗಿದ್ದವು. ಅದನ್ನು ನಿಜವಾಗಿಯೂ ಮನುಷ್ಯನಾದವನು ನಡೆಸಲಾರ. ಕ್ರೂರ ರಾಕ್ಷಸ ಮನುಷ್ಯತ್ವವನ್ನು ಹೊಂದಿರುವವರು ಮಾತ್ರ ಮಾಡಲಾರರು.
ಶ್ರೀಮತಿ ಡಾಮೆಂಟ್ ಮತ್ತು ಶ್ರೀಮತಿ ಕವ್ವಲೆ ಆಕ್ರಮಣದ ಉದ್ದಕ್ಕೂ ಶೌರ್ಯದಿಂದ ನಡೆದುಕೊಂಡಿದ್ದರು. ದಿನಾ ಬೆಳಗ್ಗೆ ಗಾಯಗೊಂಡವರ ಸುಶ್ರೂಷೆಯ ಮೇಲ್ವಿಚಾರಣೆಯನ್ನು ಮಾಡುತ್ತಿದ್ದರು. ಪುಟ್ಟ ಮಕ್ಕಳು ಏನು ನಡೆಯುತ್ತಿದೆ ಎನ್ನುವುದು ತಿಳಿಯದೆ ಅವು ಪಿಳಿಪಿಳಿ ಕಣ್ಣು ಬಿಡುತ್ತ ನೋಡುತ್ತಿದ್ದವು. ನಾಗಾಗಳು ಎಷ್ಟು ಜಾಗರೂಕರಾಗಿ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುತ್ತಿದ್ದರೆಂದರೆ ಹೊಡೆದ ಗುಂಡು ಒಂದೂ ಪೋಲಾಗದಂತೆ ಗುರಿಯನ್ನು ಸಾಧಿಸುತ್ತಿದ್ದರು. ಬ್ರಿಟಿಷರ ಶಿಬಿರಗಳನ್ನು ಮರ, ಕಲ್ಲು ಮಣ್ಣಿನಿಂದ ನಿರ್ಮಿಸಿದ ಕಾರಣ ಅವು ಬೆಂಕಿಗೆ ಬೇಗನೆ ಆಹುತಿಯಾಗಿಬಿಡುತ್ತಿದ್ದವು. 6000 ನಾಗಾಗಳು ಸುತ್ತುವರಿದು ಯಾರನ್ನೂ ಬಿಡದೆ ಕತ್ತರಿಸಿ ಹಾಕಿ ಎಲ್ಲವನ್ನೂ ದ್ವಂಸಮಾಡಿ ಹೋಗಿದ್ದರು.
ನಾಗಾ-ಬ್ರಿಟಿಷ್ ಯುದ್ಧದ ಮೊದಲ ಭಾಗವಾದ ಈ ಕೆಳಗಿನ ಲೇಖನವನ್ನೂ ಓದಬಹುದು…
ಕೊಹಿಮಾದಲ್ಲಿ ಕಷ್ಟದ ಸ್ಥಿತಿ
ಕೊಹಿಮಾದಲ್ಲಿ ಆಹಾರ ಧಾನ್ಯಗಳ ಕೊರತೆ, ನೀರಿನ ಸರಬರಾಜು ಯಾವುದೂ ಸರಿ ಇರಲಿಲ್ಲ. ಇದ್ದಬದ್ದ ಆಹಾರ ಪದಾರ್ಥಗಳನ್ನು ನಾಗಾಗಳು ದೋಚಿದ್ದರು, ಇಲ್ಲ ಬೆಂಕಿಯಲ್ಲಿ ಸುಟ್ಟು ಕರಕಲಾಗಿತ್ತು. ಈ ದಿಢೀರ್ ಯುದ್ಧದ ಮುಂದಾಳತ್ವವನ್ನು ವಹಿಸಿದ್ದವರು ಇಬ್ಬರು ಬ್ರಿಟಿಷ್ ನಾಗರಿಕ ಅಧಿಕಾರಿಗಳು. ಪರಿಸ್ಥಿತಿ ಹೇಗಿತ್ತೆಂದರೆ ಯುದ್ಧ ಮಾಡುವುದರ ಬದಲಿಗೆ ಶತ್ರುಗಳ ಎದುರಿಗೆ ತಲೆ ಬಗ್ಗಿಸಿಬಿಡುವುದೇ ಒಳ್ಳೆಯದು ಎಂದು ನಿರ್ಧಾರ ಮಾಡಿಬಿಟ್ಟದ್ದರಂತೆ. ಎಷ್ಟು ದಿನಗಳ ಕಾಲ ಆಹಾರ ನೀರಿಲ್ಲದೆ ಕಳೆಯುವುದು? ನಿಜವಾಗಿಯೂ ಯಾರಾದರು ಬರುತ್ತಾರೆಯೇ? ಸಹಾಯ ದೊರಕುತ್ತದೆಯೇ? ಎನ್ನುವ ಆಲೋಚನೆ ಅವರನ್ನು ಕಂಗೆಡಿಸಿಬಿಟ್ಟಿತ್ತಂತೆ. ಮಿ.ಹಿಂದೆ ಕಳುಹಿಸಿದ ಪತ್ರಗಳು ಮಣಿಪುರ ತಲುಪಿತೊ ಅಥವಾ ದಾರಿಯಲ್ಲಿ ಯಾರಾದರೂ ಹಾರಿಸಿಬಿಟ್ಟರೆ? ದೂತರನ್ನು ಸಾಯಿಸಿಬಿಟ್ಟರೆ ಎನ್ನುವ ಯೋಚನೆಗಳು ಅವರನ್ನು ಕಾಡುತ್ತಿತ್ತಂತೆ. ಸುಮಾರು 15 ವರ್ಷಗಳ ಹಿಂದಿನ ಘಟನೆಗಳನ್ನೆಲ್ಲ ಮೆಲಕು ಹಾಕಿದ ಮೇಲೆ ಬ್ರಿಟಿಷರು ಕೊಹಿಮಾವನ್ನು ಆಕ್ರಮಿಸಿಕೊಂಡಿದ್ದು ಸರಿ ಎನಿಸಿತು. ನಾನು ಸರಿಯಾದ ಕಾರಣಕ್ಕಾಗಿ ದೇಶದ ಹಿತಕ್ಕಾಗಿ ಇಲ್ಲಿದ್ದೀನಿ ಎನಿಸಿತು.
ಅಕ್ಟೋಬರ್ 28ರ ಮುಂಜಾನೆ ಎಲ್ಲಾ ಸೈನಿಕರನ್ನು ಕರೆದುಕೊಂಡು ಶತ್ರುಗಳು ಅಡಗಿಕೊಂಡು ಯಾವುದೇ ಕಾರ್ಯಗಳನ್ನು ನಡೆಸದಂತೆ ಶಿಬಿರದ ಸುತ್ತಲಿನ ಕಾಡನ್ನು ಕಡಿದು ಸ್ವಚ್ಛ ಮಾಡಿಸಿದೆ. ಕೊಹಿಮಾದಲ್ಲಿದ್ದ 1200 ಮನೆಗಳಿಂದ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ ಸೈನಿಕರನ್ನು ಕಳುಹಿಸಿ ಆಹಾರಧಾನ್ಯ ಇನ್ನಿತರ ವಸ್ತಗಳನ್ನು ಸಂಗ್ರಹಿಸುವಂತೆ ತಿಳಿಸಿದೆ. ಖೊನೊಮಾ ಹಳ್ಳಿಗೆ ದೂತರನ್ನು ಕಳುಹಿಸಿ ಹಳ್ಳಿಯ ಮುಖ್ಯಸ್ಥನಿಂದ ಡಾಮೆಂಟರ ದೇಹವನ್ನು ತೆಗೆದುಕೊಂಡು ಬರುವಂತೆ ಆಜ್ಞಾಪಿಸಿದೆ. ಡಾಮೆಂಟರ ರುಂಡವನ್ನು ಮಾತ್ರ ಕಳುಹಿಸಿಕೊಟ್ಟಿದ್ದು, ದೇಹವನ್ನು ಬಿಸಾಕಿದೆವು ಎಂದು ಮುಖ್ಯಸ್ಥನು ಹೇಳಿ ಕಳುಹಿಸಿದ್ದ. ಅವರ ಮಾತಿನಲ್ಲಿ ಯಾವುದೇ ಸಂದೇಹವಿರಲಿಲ್ಲ. ನಾಗಾಗಳಿಗೆ ಮನುಷ್ಯರ ದೇಹಕ್ಕಿಂತ ತಲೆ ಮಾತ್ರ ಮುಖ್ಯ. ಶತ್ರುಗಳ ತಲೆಗಳನ್ನು ಚೆಂಡಾಡಿದ ಮೇಲೆ ವಿಜಯದ ಟ್ರೋಪಿಗಳಂತೆ ಮನೆಗಳ ಮುಂದೆ ಗೋಡೆಗಳಿಗೆ ನೇತಾಕುವುದು ಸಹಜ. ಡಾಮೆಂಟರ ಬೆರಳಲ್ಲಿದ್ದ ಉಂಗುರ ಮತ್ತಿತರ ಸಣ್ಣಪುಟ್ಟ ವಸ್ತುಗಳನ್ನು ಕೊಟ್ಟು ಕಳುಹಿಸಿದ್ದರು. ಡಾಮೆಂಟರ ರುಂಡವನ್ನು ಸೈನಿಕ ಮರ್ಯಾದೆಗಳಿಂದ ಮೆರವಣಿಗೆಯಲ್ಲಿ ಕೊಂಡೊಯ್ದು ಹೂಳಲಾಯಿತು. ಜುಬ್ರಾಜ್ ಮತ್ತು ಸೂರ್ಚಂದ್ರಸಿಂಗ್ ಬಹಳ ದಃಖತಪ್ತರಾಗಿ ತಮ್ಮ ನೋವನ್ನು ತೋಡಿಕೊಂಡರು.
ಒಂದು ಕಡೆ ನೀರಿನ ಸರಬರಾಜನ್ನು ಸರಿಪಡಿಸಿ ಮತ್ತೊಂದು ಕಡೆ ಮನುಷ್ಯರ ತಲೆಗಳನ್ನು ಎಸೆದಿದ್ದ ನೀರನ್ನು ಸ್ವಚ್ಛ ಮಾಡಿಸಲಾಯಿತು. ನಾಗಾಗಳಿಂದ ತಪ್ಪಿಸಿಕೊಂಡು ಕಾಡು ಸೇರಿಕೊಂಡಿದ್ದ 43ನೆ ರೆಜಿಮೆಂಟಿನ ಸಿಪಾಯಿ ಒಬ್ಬನನ್ನು ನಾಗಾ ಗೆಳೆಯರು ನನ್ನಲ್ಲಿಗೆ ಕರೆದು ತಂದರು. ಅವನು ಹೆಚ್ಚು ಕಡಿಮೆ ಹುಚ್ಚನಾಗಿಹೋಗಿದ್ದ. ಅವನ ಬಾಯಿಂದ ಮಾತೆ ಹೊರಡಲಿಲ್ಲ. ಅವನನ್ನು ಕಾಡಿನಿಂದ ಬೆನ್ನಿನ ಮೇಲೆ ಹೊತ್ತುಕೊಂಡು ಬಂದಿದ್ದರು.
ಮೇಲಿನ ಚಿತ್ರ: ಖೋನೊಮಾ ಗ್ರಾಮದ ಪ್ರವೇಶ ದ್ವಾರ. / courtesy wikipidia
***
ನಿರೀಕ್ಷಿಸಿ ಭಾಗ 4
ನಾಗಾ-ಬ್ರಿಟಿಷ್ ಯುದ್ಧದ ಎರಡನೇ ಭಾಗವಾದ ಈ ಕೆಳಗಿನ ಲೇಖನವನ್ನೂ ಓದಬಹುದು…
ಡಾ.ಎಂ.ವೆಂಕಟಸ್ವಾಮಿ
ನಮ್ಮ ರಾಜ್ಯದ ಹೆಸರಾಂತ ಭೂವಿಜ್ಞಾನಿ ಮತ್ತು ಲೇಖಕ. ಮೂಲತಃ ಕೆಜಿಎಫ್’ನವರೇ. ಆ ಗಣಿಗಳನ್ನು ನೋಡಿಕೊಂಡೇ ಬೆಳೆದವರು. ಅವುಗಳ ವೈಭವ ಮತ್ತು ಪತನವನ್ನು ಪ್ರತ್ಯಕ್ಷವಾಗಿ ನೋಡಿದವರು. ಅನೇಕ ವರ್ಷ ಚಿನ್ನದ ಗಣಿಗಳ ಬಗ್ಗೆ ಅಧ್ಯಯನ ಮಾಡಿದವರು ಕೂಡ. ಈ ಗಣಿಗಳ ಬಗ್ಗೆ ಅವರು ಬರೆದಿರುವ ’ಸುವರ್ಣ ಕಥನ’ ಒಂದು ಮಹತ್ತ್ವದ ಕೃತಿ. ಹಂಪಿ ವಿಶ್ವವಿದ್ಯಾಲಯ ಇದನ್ನು ಪ್ರಕಟಿಸಿದೆ. ಇನ್ನು, ಭೂವಿಜ್ಞಾನಿಯಾಗಿ ಅವರು ದೇಶದ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ. ಎಂಟು ವರುಷಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. “ಏಳು ಪರ್ವತಗಳು ಒಂದು ನದಿ”, “ಈಶಾನ್ಯ ಭಾರತದ ಆಧುನಿಕ ಕಥೆಗಳು” ಮತ್ತು “ಈಶಾನ್ಯ ಭಾರತದ ಕವಿತೆಗಳು” ನವಕರ್ನಾಟಕದಲ್ಲಿ ಪ್ರಕಟವಾಗಿವೆ.
Comments 1