ಮೇಲಿನ ಚಿತ್ರ: ನಾಗಾಗಳು ಮತ್ತು ಬ್ರಿಟಿಷರ ಯುದ್ಧಗಳಿಗೆ ಸಾಕ್ಷಿಯಾಗಿರುವ ಕಣಿವೆಗಳು
lead photo from nagaland BJP facebook page
ಹೇಗಾದರೂ ಸರಿ ನಾಗಾಗಳ ಹೆಡೆಮುರಿ ಕಟ್ಟಲು ಹೊಂಚು ಹಾಕಿದ್ದ ಆಂಗ್ಲರಿಗೆ ಆ ದಿನ ಬಂದೇಬಿಟ್ಟಿತು. ಅಂದುಕೊಂಡಿದ್ದನ್ನು ಮಾಡಲೇಬೇಕು, ಈ ಸಲ ಗುರಿ ತಪ್ಪಲೇಬಾರದು ಎನ್ನುವುದು ಮೇಜರ್ ಜಾನ್ಸ್ಟೋನ್ ನಿರ್ಧಾರವಾಗಿತ್ತು. ಅದಕ್ಕಾಗಿ ಅವರು ಮಾಡಿದ ಐಡಿಯಾಗಳು, ತೆಗೆದ ಜೀವಗಳು ಲೆಕ್ಕಕ್ಕಿಲ್ಲ. ಇಡೀ ವಿಶ್ವವನ್ನೇ ನಡುಗಿಸಿದ್ದ ಬ್ರಿಟಿಷರಿಗೆ ಈಶಾನ್ಯ ಬೆಟ್ಟಗಳಲ್ಲಿ ಮುಖವುಳಿಸಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಜಾನ್ಸ್ಟೋನ್ ಬರೆದ ಯುದ್ಧಚಿತ್ರಗಳನ್ನು ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಕನ್ನಡಕ್ಕೆ ತಂದಿದ್ದಾರೆ.
***
ಭಾಗ 4
ಖೋನೊಮಾಗಳ ಮೇಲೆ ಆದಷ್ಟು ಬೇಗನೆ ಆಕ್ರಮಣ ಮಾಡಲು ನನ್ನ ಮನಸ್ಸು ಆತುರಗೊಂಡಿತ್ತು. ಇದನ್ನು ಅರಿತ ಕೆಲವು ಮಣಿಪುರಿಗಳು ಸಂಧಾನ ಮಾಡಿಕೊಳ್ಳಲು ಮಾತು ನಡೆಸಿದ್ದರು. ಅವರೆಲ್ಲ ಖೋನೊಮಾಗಳ ಬಗ್ಗೆ ಎಷ್ಟು ಭೀತಿಗೊಳಗಾಗಿದ್ದರೆಂದರೆ ಹೇಳಲು ಅಸಾಧ್ಯ. ನಾಲ್ಕು ತಿಂಗಳಿಂದ ನಡೆಸಿದ ತಯಾರಿಗಿಂತ ಈ ಒಂದು ದಿನದ ತಯಾರಿ ದೊಡ್ಡದಾಗಿತ್ತು. ಕೆಲವು ಕಠಿಣವಾದ ನಿಯಮಗಳನ್ನು ಸೈನಿಕರ ಮೇಲೆ ಹೇರಬೇಕಾಯಿತು. ಮಣಿಪುರಿಗಳು ಎಂದೂ ನಮ್ಮ ಮೇಲೆ ಆಕ್ರಮಣ ಮಾಡಲಾರರು ಎಂದುಕೊಂಡಿದ್ದರು ನಾಗಾಗಳು. ನಾಗಾಗಳು ಮಣಿಪುರಿಗಳನ್ನು ಪೂರ್ಣವಾಗಿ ಎದುರಿಸಿಬಿಟ್ಟಿದ್ದರು. ಮಣಿಪುರದ ಎಲ್ಲಾ ಹಳ್ಳಿಗಳಲ್ಲೂ ಪ್ರಾರಂಭಿಕ ರಕ್ಷಣಾ ಪಡೆಗಳನ್ನು ಸ್ಥಾಪಿಸಿದ್ದರಿಂದ ಮಣಿಪುರಿ ಹಳ್ಳಿಗಳಲ್ಲಿ ಗಂಡಸರೇ ಉಳಿದಿರಲಿಲ್ಲ. ಕೆಲವು ಹಳ್ಳಿಗಳು ನೈಸರ್ಗಿವಾಗಿ ರಕ್ಷಾತ್ಮಕ ಸ್ಥಳಗಳಲ್ಲಿ ನೆಲೆಗೊಂಡಿದ್ದವು. ಆದರೆ ಯಾವ ಹಳ್ಳಿಯೂ ನಾಗಾಗಳ ಆಕ್ರಮಣದಿಂದ ತಪ್ಪಿಸಿಕೊಳ್ಳುವಂತಿರಲಿಲ್ಲ.
courtesy: Wikipedia
ನಾನು ಯುದ್ಧ ತಯಾರಿಯ ಮಧ್ಯಭಾಗದಲ್ಲಿದ್ದೆ. ಅಕ್ಟೋಬರ್ 30ರಂದು 43ನೇ ರೆಜಿಮೆಂಟ್‌ಗೆ ಸೇರಿದ ಅಸ್ಸಾಂನ ಲೈಟ್ ಇನ್ಫಂಟ್ರಿಯ ಮೇಜರ್ ಇವಾನ್ ದಿಬ್ರೂಗರ್‌ನಿಂದ 200 ಸೈನಿಕರೊಂದಿಗೆ ಬಂದಿದ್ದರು. ಜನರಲ್ ನೇಶನ್ ಅವರು 1000 ಸೈನಿಕರು ಮತ್ತು ಎರಡು ಮೌಂಟನ್ ಗನ್‌ಗಳೊಂದಿಗೆ ನವೆಂಬರ್ 9ರಂದು ಬರುವುದಾಗಿ ಟೆಲಿಗ್ರಾಮ್ ಬಂದಿತ್ತು. ನೇಶನ್ ಬರುವವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಕಾಯುವಂತೆ ನನಗೆ ಆಜ್ಞೆ ನೀಡಲಾಗಿತ್ತು. ನಾನು ಕಾದು ಕುಳಿತು, ನಾಗಾಗಳು ಚತುರಿಸಿಕೊಂಡರೆ ಹೇಗೆ ಎನ್ನುವ ಯೋಚನೆ ಬಂದಿತ್ತು. ಆದರೇ ಸರ್ಕಾರದ ಆಜ್ಞೆಯ ಹಿಂದೆ ಯಾವುದೊ ಬಲವಾದ ಕಾರಣ ಇರಲೇಬೇಕು ಎಂದುಕೊಂಡೆ.
ಬ್ರಿಟಿಷ್ ಶಿಬಿರದ ಮೇಲೆ ಆಕ್ರಮಣ ನಡೆಸಿದ್ದ ಕೋನೊಮಾ ನಾಗಾಗಳು ಇನ್ನು ಚತುರಿಸಿಕೊಂಡಿರಲಿಲ್ಲ. ಇದೇ ಸಮಯದಲ್ಲಿ ಅವರ ಮೇಲೆ ಎರಗಿದ್ದರೆ ಕೆಲವೇ ದಿನಗಳಲ್ಲಿ ನಾಗಾ ಪರ್ವತಗಳು ನಮ್ಮ ಕಾಲಿನ ಕೆಳಗಿರುತ್ತಿದ್ದವು. ನವೆಂಬರ್ 9 ಮುಗಿದು 99 ಬಂದರೂ ನೇಶನ್ ಪಡೆ ಕೊಹಿಮಾ ತಲುಪಲಿಲ್ಲ. ಕೊನೆಗೆ ಖೋನೊಮಾ ಹತ್ತಿರ ತಲುಪಿ ನೋಡುತ್ತೇವೆ. ಪರ್ವತದ ಮೇಲೆ ಊರಿನ ಸುತ್ತ ದೊಡ್ಡದಾದ ಆಧುನಿಕ ಕಲ್ಲು ಕೊಟೆಯನ್ನೇ ನಾಗಾಗಳು ಕಟ್ಟಿ ನಿಲ್ಲಿಸಿಬಿಟ್ಟಿದ್ದಾರೆ. ಅದನ್ನು ಜಯಿಸಬೇಕಾದರೆ ಎಷ್ಟು ಬೆಲೆಯ ಸೈನಿಕರ ಪ್ರಾಣಗಳನ್ನು ಕಳೆದುಕೊಳ್ಳಬೇಕೋ ನನಗೆ ಅರ್ಥವಾಗಲಿಲ್ಲ. ಸಮಸ್ಯೆ ಎಂದರೆ ನನಗೆ ಜನರಲ್ ಸರ್.ಸ್ಟೂವರ್ಟ್ ಬೈಲೆ ಅವರಿಂದ ಇನ್ನೂ ಆಜ್ಞೆ ಬಂದಿರಲಿಲ್ಲ. ನಿಜ ಹೇಳಬೇಕೆಂದರೆ ಆಜ್ಞೆಯನ್ನು ತಪ್ಪಾಗಿ ಗ್ರಹಿಸಲಾಗಿತ್ತು.
ತಕ್ಷಣ ಯಾವುದೇ ಕೆಲಸ ಇಲ್ಲದ ಕಾರಣ ಮೇ.ಇವಾನ್‌ರನ್ನು ಸಮಗಡ್ಟಿಂಗ್‌ಗೆ ಕಳುಹಿಸಿ ಅಲ್ಲಿನ ಸೈನಿಕ ಗುಡಾರದಲ್ಲಿ ಇಟ್ಟಿದ್ದ 2000 ಸುತ್ತಿನ ಮದ್ದುಗುಂಡನ್ನು ನೋಡಿಕೊಳ್ಳುವಂತೆ ತಿಳಿಸಿದೆ. ನನಗೆ ಒಬ್ಬ ದಕ್ಷ ಅಧಿಕಾರಿ ಬೇಕಾಗಿದ್ದು ಅವರ ಜೊತೆಯಲ್ಲಿದ್ದ ಬರೇಟರನ್ನು ಕರೆದುಕೊಂಡೆ. ಇವಾನ್ ಹೋಗುವ ದಾರಿಯಲ್ಲಿ 43ನೇ ರೆಜಿಮೆಂಟಿನ ಯೋಧರು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನಾಗಾಗಳಿಗೆ ಗುಂಡು ಹೊಡೆದು ಸಾಯಿಸಿಬಿಟ್ಟಿದ್ದರು. ಅವರು ಹೆಪ್ರೂಮೊಹ್ ಬುಡಕಟ್ಟಿಗೆ ಸೇರಿದ ಹಳ್ಳಿಯ ಮುಖ್ಯಸ್ಥನ ಸಂಬಂಧಿಗಳಾಗಿದ್ದು ಸೈನಿಕರು ತಪ್ಪಾಗಿ ತಿಳಿದು ಗುಂಡು ಹಾರಿಸಿದ್ದರು. ಕೊಹಿಮಾ ನಾಗಗಳಿಗೆ ಆಗಲೆ ಹಲವು ಆಮಿಷಗಳನ್ನು ಒಡ್ಡಿ ನೆರವೇರಿಸಲಾಗದೆ ಪೇಚಾಟಕ್ಕೆ ಸಿಲುಕಿಕೊಂಡಿದ್ದೆ. ಖೋನೊಮಾ ಜನರು ನಮ್ಮ ಮೇಲೆ ಆಕ್ರಮಣ ಮಾಡಿದಾಗ ಕೊಹಿಮಾ ಜನರು ನಮ್ಮ ಆಮಿಷಗಳಿಂದ ತಟಸ್ಥರಾಗಿದ್ದರು. ಅವರು ಖೋನೊಮಾ ಜನರ ಜೊತೆಗೆ ಸೇರಿಕೊಂಡಿದ್ದರೆ ಗ್ಯಾರಿಸನ್ ಸೈನ್ಯ ಹೇಳಲು ಹೆಸರಿಲ್ಲದೆ ಬೂದಿಯಾಗಿ ಹೋಗುತ್ತಿತ್ತು. ಈ ಇಬ್ಬರು ನಾಗಾಗಳ ಸಾವಿನಿಂದ ನನ್ನ ತೊಂದರೆ ಇನ್ನಷ್ಟು ಉಲ್ಬಣಗೊಂಡಿತ್ತು.
ಮಣಿಪುರದಿಂದ ಆಹಾರಧಾನ್ಯಗಳ ಸರಬರಾಜು ನಿರಂತರವಾಗಿ ನಮ್ಮ ಶಿಬಿರಕ್ಕೆ ಬಂದು ಬೀಳುತ್ತಿತ್ತು. ಅದೆಲ್ಲ ಇದೇ ದಾರಿಯಲ್ಲಿ ಬರಬೇಕಾಗಿತ್ತು. ಘರ್ಷಣೆಯ ಸಮಯದಲ್ಲಿ ಚಿಟೊನೊಮಾ ಬುಡಕಟ್ಟು ಜನರು ಅಪಹರಿಸಿದ್ದ ಆರು ಬಂದೂಕುಗಳನ್ನು ಹಿಂದಿರಿಗಿಸುವಂತೆ ಮತ್ತು ಅಪರಾಧಕ್ಕೆ ಬದಲಾಗಿ 200 ಮಣ ಬತ್ತವನ್ನು ನೀಡಬೇಕೆಂದು ಆಜ್ಞಾಪಿಸಿದ್ದೆ. ಮಣಿಪುರದ ಕುಕಿನಾಗಾಗಳ ಒಂದು ತುಕಡಿ ಆಗ ತಾನೆ ನಮ್ಮ ಸಹಾಯಕ್ಕೆ ಬಂದಿತ್ತು. ಅವರ ಮುಖ್ಯಸ್ಥ ನನ್ನ ಜೊತೆಗೆ ಮಾತನಾಡುತ್ತ ‘ನಮ್ಮ ಮಹತ್ವದ ಅಪೇಕ್ಷೆಯಂದರೆ ಆ ಹಳ್ಳಿಯ ಮೇಲೆ ಆಕ್ರಮಣ ನಡೆಸಿ (ಕೊಹಿಮಾ ಕಡೆಗೆ ಕೈ ತೋರಿಸುತ್ತ) ಪ್ರತಿ ಗಂಡು ಹೆಣ್ಣು, ಮಕ್ಕಳು ಯಾರನ್ನೂ ಬಿಡದೆ ಕತ್ತರಿಸುವುದು’ ಎಂದ. ಅವನು ಹೇಳುವ ರೀತಿಯಂತೂ ನಿಜವಾಗಿ ಮಾಡಿಯೇ ಬಿಡುತ್ತಾನೆ ಎನ್ನುವಂತಿತ್ತು.
ಮಗನ ಸಾವು, ತೀರದ ಸೇಡು
ಮಣಿಪುರದಿಂದ ಬರುತ್ತಿದ್ದ ಜನರಿಗಾಗಿ ದಾರಿಯ ಉದ್ದಕ್ಕೂ ಅಲ್ಲಲ್ಲಿ ಶಿಬಿರಗಳನ್ನು ಸ್ಥಾಪಿಸಿದ್ದು ದಿನಾಗಲೂ ಪತ್ರಗಳ ರವಾನೆ ನಡೆಯುತ್ತಿತ್ತು. ನನ್ನ ಚಿಕ್ಕ ಮಗನಾದ ಆರ್ಥರ್ ಅನಾರೋಗ್ಯವಾಗಿರುವ ವಿಷಯ ನನಗೆ ತಲುಪಿತ್ತು. ನನ್ನ ಪತ್ನಿ ವ್ಯಾಕುಲಗೊಂಡಿದ್ದರೂ ನಾನು ಮಗನನ್ನು ನೋಡವ ಪರಿಸ್ಥಿತಿಯಲ್ಲಿ ಇರಲಿಲ್ಲ. ನಾವು ಖೋನೊಮಾ ಹಳ್ಳಿಯ ಮೇಲೆ ದಾಳಿ ಮಾಡದೆ ಇರುವುದು ನಾಗಾಗಳ ನಡುವೆ ತಪ್ಪಾರ್ಥ ಕಲ್ಪಿಸಿತ್ತು. ಈಗ ಯಾರ ಮೇಲಾದರೂ ಆಕ್ರಮಣ ಮಾಡಲೇಬೇಕಿತ್ತು. ನಮ್ಮ ವೈರಿಗಳಾದ ಕೊಹಿಮಾದ ಚಿಟೋಮಾ ನಾಗಾಗಳ ಮೇಲೆ ದಾಳಿ ಮಾಡಿ ಅವರ ಮನೆಗಳನ್ನು ಧ್ವಂಸ ಮಾಡಿಸಿದೆ. ನವೆಂಬರ್ 10ನೇ ತಾರೀಖು ಮಣಿಪುರದಿಂದ ಆಹಾರ ಧಾನ್ಯಗಳನ್ನು ತರುತ್ತಿದ್ದವರ ಮೇಲೆ ಚಿಟೋಮಾ ಹಳ್ಳಿಗರು ಆಕ್ರಮಣ ನಡೆಸಿದ್ದರು. ಅದು ನಮ್ಮ ಶಿಬಿರದ ಕೆಳಗೆ ನಡೆದು ಗುಂಡು ಹಾರಿಸಿದ ಸದ್ದು ಕೇಳಿ ನಾವು ಹೊರಗೆ ಬಂದು ಪ್ರತಿಯಾಗಿ ಗಂಡು ಹಾರಿಸಿದಾಗ ಶತ್ರುಗಳು ಓಡಿಹೋದರು.
ಮೇಜರ್ ಜನರಲ್ ಸರ್ ಜೇಮ್ಸ್ ಜಾನ್‌ಸ್ಟೋನ್
ಶಿಬಿರದ ಮುಖ್ಯ ಬಾಗಿಲಿನ ಒಳಗೆ ಬಂದವನೊಬ್ಬ ನನ್ನ ಕೈಯಿಗೆ ಒಂದು ಪತ್ರ ನೀಡಿದ. ಕುತೂಹಲದಿಂದ ಬಿಚ್ಚಿ ನೋಡಿದೆ. ಆ ಪತ್ರ ನನ್ನ ಮಗ ಆರ್ಥರ್ ಸಾವಿನ ಸುದ್ದಿಯನ್ನು ತಂದಿತ್ತು. ನಾನು ನನ್ನ ಪತ್ನಿ ಇಂಫಾಲ್ ಹತ್ತಿರದ ಕಂಗ್‌ಜೋಪ್ ಎಂಬ ಸ್ಥಳವನ್ನು ಮೊದಲೇ ಆಯ್ಕೆ ಮಾಡಿಕೊಂಡಿದ್ದೆವು. ನಮ್ಮಲ್ಲಿ ಯಾರೇ ಸತ್ತರೂ ಅಲ್ಲಿ ಹೂಳಬೇಕೆಂದು ನಿರ್ಧರಿಸಿದ್ದೆವು. ಆ ಕೆಲಸವನ್ನು ಆಕೆ ಮಾಡಿ ಮುಗಿಸಿದ್ದಳು. ಡಾ.ಕ್ಯಾಪ್‌ಬೆಲ್ ಕಛಾರ್‌ನಿಂದ ತನ್ನ ಸೈನ್ಯದೊಂದಿಗೆ ಆಹಾರ ಧಾನ್ಯಗಳ ಸಮೇತ ಬಂದರು. ಅವರು ಬಂದಿದ್ದು ನನಗೆ ಭಾರಿ ಖುಷಿಯಾಗಿತ್ತು. ಅವರ ಜೊತೆಗಿನ ಮಣಿಪುರಿಗಳ ಒಂದು ಘಟನೆ ಜ್ಞಾಪಕಕ್ಕೆ ಬಂದಿತು. ಗಾಯಗೊಂಡ ಮಣಿಪುರಿ ಒಬ್ಬನ ಕೈಮೇಲೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಶಸ್ತ್ರಚಿಕಿತ್ಸೆ ತುಂಬಾ ನೋವಾಗಲಿದ್ದು ಕಾಂಪ್‌ಬೆಲ್ ಆತನಿಗೆ ಕ್ಲೊರೋಫಾರಂ ನೀಡಲು ಮುಂದಾದರು. ಆತ ಮತ್ತು ಬರಿಸುವ ಯಾವುದನ್ನು ತೆಗೆದುಕೊಳ್ಳವುದಿಲ್ಲ ಎಂದು ಕೈಯನ್ನು ಕಾಂಪ್‌ಬೆಲ್ ಕಡೆಗೆ ಎತ್ತಿ ಹಿಡಿದ. ಶಸ್ತ್ರಚಿಕಿತ್ಸೆ ನಡೆಯುವವರೆಗೂ ಆತ ಹಲ್ಲು ಕಡಿದು ಕಣ್ಣು ಮುಚ್ಚಿಕೊಂಡಿದ್ದನ್ನು ನೋಡಿದ ಕಾಂಪ್‌ಬೆಲ್ ದಂಗಾಗಿಹೋಗಿದ್ದರು.
ನಾಗಾಗಳ ಮೇಲೆ ನಾವು ಆಕ್ರಮಣ ಮಾಡದೆ ದಿನದಿನವೂ ನಾಗಾಗಳ ಉತ್ಸಾಹ ಇಮ್ಮಡಿಯಾಗುತ್ತಿತ್ತು. ಅವರ ಉತ್ಸಾಹವನ್ನು ಭಂಗ ಮಾಡಬೇಕಾದರೆ ನಾವು ಯಾರ ಮೇಲಾದರೂ ನಮ್ಮ ಪೌರುಷವನ್ನು ತೋರಿಸಲೇಬೇಕಾಗಿತ್ತು. ನಮ್ಮ ದೂತರ ಪ್ರಕಾರ ಮಣಿಪುರದ ನಮ್ಮ ಫೆಸೇಮಾ ಹಳ್ಳಿ ಠಾಣೆಯ ಮೇಲೆ ಕೆಲವು ಹಳ್ಳಿಗರು ದಾಳಿ ಮಾಡುವುದಾಗಿ ಮತ್ತು ಅವರಿಗೆ ಖೋನೊಮಾ ಹಳ್ಳಿಯವರು ಕುಮ್ಮಕ್ಕು ನೀಡುತ್ತಿರುವುದಾಗಿ ತಿಳಿಯಿತು. ಈಗ ನಾನು ಫೆಸೇಮಾ ಹಳ್ಳಿಯ ಮೇಲೆ ಎರಗಬೇಕಾಯಿತು. ಆ ಹಳ್ಳಿ ಕೊಹಿಮಾದಿಂದ ಅಷ್ಟೇನೂ ದೂರ ಇರಲಿಲ್ಲ. ನವೆಂಬರ್ 11ರ ರಾತ್ರಿ ಮಣಿಪುರ ಮತ್ತು ಕುಕಿ ನಾಗಾಗಳನ್ನು ದಾಳಿ ಮಾಡುವಂತೆ ಕಳುಹಿಸಿದೆ. ಅವರು ಆ ಹಳ್ಳಿಯನ್ನು ನಾಶಮಾಡಿ ನೂರಾರು ಜನರನ್ನು ಸಾಯಿಸಿ 21 ಯುವತಿಯರು ಮತ್ತು ಮಕ್ಕಳನ್ನು ಹಿಡಿದು ತಂದಿದ್ದರು. ಯುವತಿಯರನ್ನು ಸೆಕ್ಸ್’ಗಾಗಿ ಹಿಡಿದು ತಂದಿದ್ದರು. ಅವರೆಲ್ಲರನ್ನು ಸಾಯಿಸಲು ಮುಂದಾದ ಕುಕಿಗಳಿಂದ ಮಣಿಪುರಿಗಳು ರಕ್ಷಿಸಿ ತಂದಿದ್ದರು.
ಮರು ದಿನ ನನ್ನ ಹಳೆ ಗೆಳೆಯ ಕ್ಯಾ.ವಿಲಿಯಂಸನ್ ನನ್ನ ಸಹಾಯಕನಾಗಿ ಕೆಲಸ ನಿರ್ವಹಿಸಲು ಬಂದಿದ್ದರು. ಆತನನ್ನು ನಾನು ಮುಖ್ಯ ರಾಜಕೀಯ ಅಧಿಕಾರಿಯಾಗಿ ನೇಮಿಸಿ ಸೈನಿಕರ ಒಂದು ತುಕಡಿಯನ್ನು ಆತನಿಗೆ ಕೊಟ್ಟೆ. ನವೆಂಬರ್ 20ರಂದು, ಜನರಲ್ ನೇಶನ್ ಕೊಹಿಮಾಗೆ 10 ಮೈಲಿ ದೊರದಲ್ಲಿದ್ದ ಸಚೇಮಾಗೆ ಬಂದಿದ್ದು; ಅವರನ್ನು ಭೇಟಿಯಾಗಲು ನಾನು ಮತ್ತು ವಿಲಿಯಂಸನ್ ಹೊರೆಟೆವು. ದಾರಿಯಲ್ಲಿ ಅವಿತು ಕುಳಿತ ಯಾರೊ ನಮ್ಮ ಮೇಲೆ ಗುಂಡು ಹಾರಿಸಿದರು. ನಮ್ಮ ಅದೃಷ್ಟ ಚೆನ್ನಾಗಿದ್ದರಿಂದ ಏನೂ ತೊಂದರೆ ಆಗಲಿಲ್ಲ. ಸೈನಿಕರಲ್ಲಿ 43 ಮತ್ತು 44ನೇ ರೆಜಿಮೆಂಟಿನ ಅಸ್ಸಾಂ ಲೈಟ್ ಇನ್ಫಂಟ್ರಿ, ಎಂಜಿನಿಯರ್ ಮತ್ತು ವೈದ್ಯಕೀಯ ಅಧಿüಕಾರಗಳು ಬಂದಿದ್ದರು. ಜೊತೆಗೆ ಏಳು ಪೌಂಡ್ ತೂಕದ ಎರಡು ಮೌಂಟಿನ್ ಗನ್‌ಗಳಿದ್ದವು. 21ರಂದು, ಆನೆಗಳ ಮೇಲೆ ಬಂದೂಕುಗಳು ಬಂದವು. ಅವುಗಳನ್ನು ಸಾಗಿಸಲು 100 ಕುಕಿ ಕೂಲಿಗಳನ್ನು ಕರೆದುಕೊಂಡು ಬಂದಿದ್ದೆವು.
ಮರು ದಿನವೇ ನಮ್ಮ ಯುದ್ಧ ಪ್ರಾರಂಭವಾಗಲಿತ್ತು. ಮೆಜುಮಾ ಹಳ್ಳಿಯವರು ತಟಸ್ಥರಾಗಿದ್ದು, ಕೆಲವು ಕೂಲಿಗಳು ಮತ್ತು ಮಾರ್ಗದರ್ಶಿಗಳನ್ನು ಕಳುಹಿಸಿಕೂಟ್ಟಿದ್ದರು. ಮಾರ್ಗದರ್ಶಿಗಳಲ್ಲಿ ಒಬ್ಬನಾದ ಲೊಟೊಜೆ ಒಂದು ರಹಸ್ಯವನ್ನು ಬಯಲು ಮಾಡಿದ್ದ. ಖೋನೊಮಾ ನಾಗಾಗಳು ತಮ್ಮ ಎಲ್ಲ ಬಂದೂಕು ಮತ್ತು ಸಿಡಿಮದ್ದುಗಳ ಆಕ್ರಮಣವನ್ನು ಅಧಿಕಾರಿಗಳ ಮೇಲೆ ಕೇಂದ್ರೀಕರಿಸುವುದಾಗಿ, ಹಾಗೆ ಮಾಡಿದರೆ ಸುತ್ತಲಿರುವವರು ಪಲಾಯನವಾಗುತ್ತಾರೆ ಎಂಬುದಾಗಿ ಯೋಚನೆ ಮಾಡಿದ್ದರಂತೆ. ಇದನ್ನ ಜನರಲ್ ಮತ್ತು ಮೇಜರ್ ಕುಕ್‌ಗೆ ತಿಳಿಸಿ ಅವರು ತಮ್ಮ ಬಿಳಿ ಹೆಲ್ಮಟ್‌ಗಳ ಮೇಲೆ ನೀಲಿ ಬಟ್ಟೆಗಳನ್ನು ಸುತ್ತಿಕೊಳ್ಳುವಂತೆ ಒತ್ತಾಯಿಸಿದೆ. ಸೈನಿಕರ ಮಧ್ಯೆ ಇವರು ಎದ್ದು ಕಾಣಿಸದಂತೆ ಇರಲಿ ಎನ್ನುವುದು ನನ್ನ ಆಲೋಚನೆ. ಆದರೆ ಜನರಲ್ ಒಪ್ಪಿಕೊಳ್ಳಲಿಲ್ಲ. ಕುಕ್ ಕೂಡ ಅವರನ್ನೇ ಅನುಸರಿಸಿದ್ದರು. ನಾನು ಅವರಿಗೆ ಮತ್ತೆ ಹೇಳಲಿಲ್ಲ.
ಆ ಒಂದು ರಾತ್ರಿ
ನವೆಂಬರ್ 21ರ ರಾತ್ರಿಯನ್ನು ಮರೆಯಲು ಹೇಗೆ ಸಾದ್ಯ? ವಿಲಿಯಂಸನ್ ಮತ್ತು ನಾನು ಜನರಲ್ ಜೊತೆಗೆ ಇದ್ದೆವು. ಇಡೀ ಸಬ್ಬಂದಿ ಅಡುಗೆ ಭಟ್ಟ ಎಲ್ಲರಿಗೂ ಜನರಲ್ ಉತ್ಸಾಹಭರಿತ ಸಾಹಸಗಾಥೆಗಳನ್ನು ಹೇಳಿದರು. ಆರು ಅಡಿಗಿಂತ ಎತ್ತರದ ಜನರಲ್ ಯಾವುದೇ ಕಾರ್ಯಕ್ಕೂ ಎಂತಹ ಪರಿಸ್ಥಿತಿಯಲ್ಲೂ ಹಿಂದೆ ಬೀಳುತ್ತಿರಲಿಲ್ಲ. ಅಸ್ಸಾಂನ ನೌಆಂಗ್ ಕಾಡುಗಳಲ್ಲಿ ಪ್ರಾಣಿಗಳ ಬೇಟಿಯಾಡುವಾಗ ಅವರ ಜೊತೆಗಿದ್ದ ಮೆಜುಮಾ ನಾಗಾಗಳು ಕೆಲವರು ಬಂದಿದ್ದರು. ವೈದ್ಯರಾದ ಡಾ.ರೆಂಜಿ ಗಾಯವಾದಾಗ ತುರ್ತು ಚಿಕಿತ್ಸೆ ಹೇಗೆ ನೀಡಬೇಕು ಎನ್ನುವುದನ್ನು ವಿವರಿಸುತ್ತಿದ್ದರು. ಅವರು ಹೇಳುತ್ತಿದ್ದ ರೀತಿಯಿಂದ ಸುತ್ತಲಿದ್ದ ನಾವೆಲ್ಲ ಬಿದ್ದೂಬಿದ್ದು ನಗುತ್ತಿದ್ದೆವು. ನಮ್ಮ ಮುಂದೆ ಕಠಿಣವಾದ ಕಾದಾಟ ಇರುವುದು ಗೊತ್ತು. ಹೋರಾಟಕ್ಕೆ ಹೋಗುವ ಮುನ್ನ ಎಲ್ಲದರ ಲೆಕ್ಕವನ್ನು ತೆಗೆದುಕೊಂಡೆವು. ಯಾರು ಗಾಯಗೊಳ್ಳುತ್ತಾರೆ? ಯಾರು ಯಾರನ್ನ ಹೊತ್ತೊಯ್ಯುವರು ಎಲ್ಲವನ್ನೂ ಕಾಲವೆ ನಿರ್ಧರಿಸುತ್ತದೆ. ಆದರೆ ಎಲ್ಲರೂ ಯೋಚಿಸುವುದೆಂದರೆ ನಾನು ವಿಶೇಷ. ನನಗೇನು ಆಗುವುದಿಲ್ಲ. ಹೌದು ಎಲ್ಲರೂ ಹಾಗೆಯೆ ಯೋಚಿಸಬೇಕು. ಇಲ್ಲವೆಂದರೆ ಬದುಕಿಗೆ ಅರ್ಥವೆ ಇರುವುದಿಲ್ಲ.
ನವೆಂಬರ್ 22ರ ಬೆಳಗಿನ ಜಾವ 4:30ಕ್ಕೆ ನಾವೆಲ್ಲ ಶಸ್ತ್ರಾಸ್ತ್ರಗಳೊಂದಿಗೆ ತಯಾರಾಗಿ ನಿಂತಿದ್ದೆವು. ಮೊದಲ ಗುಂಪು ಎರಡು ಕಂಪನಿಗಳನ್ನು ಒಳಗೊಂಡಿತ್ತು. 43ರ ಅಸ್ಸಾಂ ಲೈಟ್ ಇನ್ಫಂಟ್ರಿ ಮತ್ತು 28 ನಾಗಾ ಪರ್ವತಗಳ ಪೊಲೀಸರು. ಮೆ. ಇವಾನ್ಸ್ ಮತ್ತು ಲೆ.ಬೆರೆಟರ್ ಕೆಳಗೆ ಕ್ಯಾ. ವಿಲಿಯಂಸನ್ ಸಾರಿತ್ಯದಲ್ಲಿ ಹೊರಟೆವು. ಕ್ಯಾಪ್ಟನ್‌ಗೆ ಇಡೀ ವಲಯ ಗೊತ್ತಿದ್ದು ಪರ್ವತಗಳ ಮೇಲಿನ ರಸ್ತೆಯ ಮೂಲಕ ಖೋನೊಮಾ ಹಿಂಬದಿಯ ತಪ್ಪಲಿನ ಕಡೆಗೆ ಮುನ್ನುಗ್ಗಿದೆವು. ಸಮಯ ಬೆಳಿಗ್ಗೆ 7:30ಕ್ಕೆ ಉಳಿದ ಸೈನ್ಯ ಪಡೆ ಹಿಂದೆ ನಡೆಯಿತು. ಎಲ್ಲರೂ ಒಟ್ಟಾಗಿ ಮೆಜುಮಾ ಬೆಟ್ಟ ತಲುಪಿದೆವು. ಅಲ್ಲಿ ಲೆ.ರಾಬನ್ ರಾಕೆಟ್ ಬ್ಯಾಟರಿಯೊಂದಿಗೆ ಪ್ರತ್ಯೇಕಗೊಂಡರು. ಅವರು ಅಲ್ಲಿ ಬೆಟ್ಟದ ಮರೆಯಿಂದ ಖೋನೊಮಾ ಮೇಲೆ ಬಂದೂಕುಗಳೊಂದ ದಾಳಿ ಮಾಡಲು ನಿರ್ಧಾರವಾಗಿತ್ತು. ಸಚೇಮಾದಲ್ಲಿ ನಮ್ಮ ಆಹಾರ ಧಾನ್ಯಗಳು ಮತ್ತು ಶಸಸ್ತçಗಳ ಭಂಡಾರವಿದ್ದು ಅಲ್ಲಿ 120 ಕುಕಿಗಳ ಜೊತೆಗೆ ಒಂದು ಸಣ್ಣ ಸೈನಿಕ ಪಡೆಯನ್ನು ಕಾವಲಿಗೆ ಇಡಲಾಗಿತ್ತು.
ಜನರಲ್ ಹೇಳಿದಂತೆ 200 ಸೈನಿಕರನ್ನು ಕಣಿವೆಯಲ್ಲಿ ನಿಲ್ಲಿಸಿ ಜೋಟ್ಸೋಮಾ ಕಡೆಯಿಂದ ಯಾರೂ ಬರದಂತೆ ತಡೆಯಲಾಗಿತ್ತು. ಲೆ.ರಾಬನ್ ಹೋದ ಮೇಲೆ ನಾವು ಖೋನೊಮಾ ಮತ್ತು ಮೆಜುಮಾ ಹಳ್ಳಿಗಳನ್ನು ವಿಭಾಗಿಸುವ ಕಣಿವೆ ದಾಟಿ ಬೆಟ್ಟಗಳ ಮಧ್ಯಭಾಗಕ್ಕೆ ತಲುಪಿದಾಗ ಲೆ.ರಿಡ್ಜ್’ವೇ 44ನೇ ಕಂಪನಿ ಸೈನಿಕರೊಂದಿಗೆ ಖೋನೊಮಾ ಹಳ್ಳಿಯ ಜೊತೆಗೆ ಕಾದಾಟಕ್ಕೆ ಹೊರಟರು. ಮುಖ್ಯ ಸೈನಿಕರು ಬಂದೂಕುಗಳೊಂದಿಗೆ ಸರ್ಕಾರಿ ರಸ್ತೆಯಿಂದ ಹಳ್ಳಿ ಇದ್ದ ಬೆಟ್ಟದ ಕಡೆಗೆ ಏರತೊಗಿದರು. ಹತ್ತಿರದ ಝರಿಯಲ್ಲಿ ರುಂಡಗಳಿಲ್ಲದ ಆರ್ಯನ್ ದೇಹಗಳು ಕೊಳೆತು ನಾರುತ್ತಿದ್ದವು. ಆ ನತದೃಷ್ಟ ಸೈನಿಕರೆಲ್ಲ ಮಿ.ಡಾಮೆಂಟ್‌ರ ಜೊತೆಗೆ ಬಂದಿದ್ದ ಸೈನಿಕರಾಗಿದ್ದರು.
ರಸ್ತೆಯಲ್ಲಿ ಸ್ವಲ್ಪ ದೂರ ನಡೆದ ಮೇಲೆ ದಟ್ಟ ಕಾಡಿನ ಮಧ್ಯ ಬಂದೂಕುಗಳು ತೂರುವಷ್ಟು ಸ್ಥಳ ಸಿಕ್ಕಿ ಅಸ್ಸಾಂ ಇನ್ಫಂಟ್ರಿಯ 50 ಸೈನಿಕರನ್ನು ಲೆ.ಹೆಂಡರ್‌ಸನ್ ನೇತೃತ್ವದಲ್ಲಿ ಖೋನೊಮಾ ಹಳ್ಳಿಯ ಮೇಲೆ ದಾಳಿ ಮಾಡಲು ಕಳುಹಿಸಲಾಯಿತು. ಬಂದೂಕುಗಳನ್ನು ಕೂಲಿಯಾಳುಗಳು ಹಿಂದಿನಿಂದ ಹೊತ್ತು ತರುತ್ತಿದ್ದರು. ಅವರ ಹಿಂದೆ ಜನರಲ್ ಮತ್ತು ಅವರ ಸಿಬ್ಬಂದಿ ಮತ್ತು ನಾನು ಇದ್ದೆವು. ನಾವು ಬೆಟ್ಟಗಳನ್ನು ಏರುತ್ತಿದ್ದಂತೆ ಕಲೋನಲ್ ನುಟ್ಟಲ್ 44ನೇ ರೆಜಿಮೆಂಟ್ ಸೈನಿಕರು ನಮ್ಮ ಹಿಂದೆ ಅಂಗರಕ್ಷಕರಾಗಿದ್ದರು. ನಾವು ಖೋನೊಮಾ ಮತ್ತು ಬಸೊಮಾ ಬೆಟ್ಟಗಳನ್ನು ವಿಭಾಗಿಸಿರುವ ಕಣಿವೆಗೆ ಬಂದೆವು. ಅಲ್ಲಿಂದ ಕೆಲವು ನೂರು ಅಡಿಗಳ ದೂರದಲ್ಲಿರುವ ಮುಖ್ಯ ಕಣಿವೆಯೆಯಿಂದ ತಪ್ಪಲನ್ನು ಏರಿ ನಿಂತುಕೊಂಡೆವು. ಬಹಳ ಕಷ್ಟ ಪಟ್ಟ ಮೇಲೆ ಅತಿ ಎತ್ತರದ ಸ್ಥಳದಿಂದ 1200 ಗಜಗಳ ದೂರದಲ್ಲಿ ಖೋನೊಮಾ ಕಡೆಗೆ ಬಂದೂಕುಗಳನ್ನು ಹಿಡಿದು ನಿಂತುಕೊಂಡೆವು.
ಇನ್ನು ಕೆಲ ನಿಮಿಷಗಳಾದ ಮೇಲೆ…
ಮುಂದಿನ ಭಾಗ ನಿರೀಕಿಸಿ..
ಬ್ರಿಟಿಷ್-ನಾಗಾ ಯುದ್ಧದ ಹಿಂದಿನ ಅಧ್ಯಾಯ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
ಡಾ.ಎಂ.ವೆಂಕಟಸ್ವಾಮಿ
ನಮ್ಮ ರಾಜ್ಯದ ಹೆಸರಾಂತ ಭೂವಿಜ್ಞಾನಿ ಮತ್ತು ಲೇಖಕ. ಮೂಲತಃ ಕೆಜಿಎಫ್’ನವರೇ. ಆ ಗಣಿಗಳನ್ನು ನೋಡಿಕೊಂಡೇ ಬೆಳೆದವರು. ಅವುಗಳ ವೈಭವ ಮತ್ತು ಪತನವನ್ನು ಪ್ರತ್ಯಕ್ಷವಾಗಿ ನೋಡಿದವರು. ಅನೇಕ ವರ್ಷ ಚಿನ್ನದ ಗಣಿಗಳ ಬಗ್ಗೆ ಅಧ್ಯಯನ ಮಾಡಿದವರು ಕೂಡ. ಈ ಗಣಿಗಳ ಬಗ್ಗೆ ಅವರು ಬರೆದಿರುವ ’ಸುವರ್ಣ ಕಥನ’ ಒಂದು ಮಹತ್ತ್ವದ ಕೃತಿ. ಹಂಪಿ ವಿಶ್ವವಿದ್ಯಾಲಯ ಇದನ್ನು ಪ್ರಕಟಿಸಿದೆ. ಇನ್ನು, ಭೂವಿಜ್ಞಾನಿಯಾಗಿ ಅವರು ದೇಶದ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ. ಎಂಟು ವರುಷಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. “ಏಳು ಪರ್ವತಗಳು ಒಂದು ನದಿ”, “ಈಶಾನ್ಯ ಭಾರತದ ಆಧುನಿಕ ಕಥೆಗಳು” ಮತ್ತು “ಈಶಾನ್ಯ ಭಾರತದ ಕವಿತೆಗಳು” ನವಕರ್ನಾಟಕದಲ್ಲಿ ಪ್ರಕಟವಾಗಿವೆ.
Comments 1