movie review
- ಸಿನಿಮಾ: ನಿಶ್ಯಬ್ದಂ
- ಭಾಷೆ: ತೆಲುಗು, ತಮಿಳು, ಮಲೆಯಾಳಂ
- ತಾರಾಗಣ: ಅನುಷ್ಕಾ ಶೆಟ್ಟಿ, ಮಾಧವನ್, ಅಂಜಲಿ, ಶಾಲಿನಿ ಪಾಂಡೆ, ಮೈಕಡಲ್ ಮ್ಯಾಡ್ಸನ್
- ನಿರ್ದೇಶನ: ಹೇಮಂತ್ ಮಧುಕರ್
- rating ****
ಗಾಂಧಿ ಜಯಂತಿ ದಿನ (ಶುಕ್ರವಾರ) ಮನೆಯಲ್ಲಿ ಎಲ್ಲವೂ ನಿಶ್ಯಬ್ದವಾಗಿತ್ತು. ನೆನಪಾದಾಗಲೆಲ್ಲ ಕೇಳುವಂತೆಯೇ ಇವತ್ತು ಕೂಡ ಪಂಡಿತ್ ಜಸ್‌ರಾಜ್ ಅವರು ಹಾಡಿರುವ “ವೈಷ್ಣವ ಜನತೋ” ಭಜನೆಯನ್ನು ಕೇಳಿದ ಮೇಲೆ ನನ್ನ ಮನಸ್ಸಿನ ತುಂಬಾ ಬಾಪು ಅವರೇ ತುಂಬಿಕೊಂಡಿದ್ದರು. ಅಷ್ಟರಲ್ಲಿ ನನ್ನ ಚಿಕ್ಕ ಮಗಳು, “ಡ್ಯಾಡ್, ಅಮೆಜಾನ್ ಪ್ರೈಮ್‌ನಲ್ಲಿ ‘ನಿಶ್ಯಬ್ದಂ’ ರಿಲೀಸ್ ಆಗಿದೆ, ನೋಡೋಣವೇ” ಎಂದಳು. ಥೀಯೇಟರ್‌ಗೆ ಹೋಗಿ ಸಿನಿಮಾ ನೋಡುವ ಅವಕಾಶ ಹೇಗೋ ಇಲ್ಲವಲ್ಲ ಎಂಬ ಕಾರಣಕ್ಕೆ ಆ ಸಿನಿಮಾ ನೋಡಲು ಎಲ್ಲರೂ ಕೂತೆವು.
ಹೇಳಿಕೇಳಿ ಅನುಷ್ಕಾ ಶೆಟ್ಟಿ ಸಿನಿಮಾ ಇದು. ತಮಿಳು ನಟ ಮಾಧವನ್ ಇದ್ದಾರೆ, ಜತೆಗೆ ‘ಅರ್ಜುನ್‌ರೆಡ್ಡಿ’ ಫೇಮ್ ಶಾಲಿನಿ ಪಾಂಡೆ ಬೇರೆ. ಹಾಗೆಯೇ, ಬಹುಭಾಷಾ ಗ್ಲಾಮರ್ ನಟಿ ಅಂಜಲಿ.. ನೋಡಬಹುದು ಎನ್ನಿಸಿತು. ಹಾಗೆ ನೋಡಿದರೆ ‘ಬಾಹುಬಲಿ’, ‘ಭಾಗಮತಿ’ ನಂತರ ಅನುಷ್ಕಾ ನಟಿಸಿರುವ ಚಿತ್ರವಿದು. ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಜಾನರ್‌ನ ಕಥೆ ಹೊಂದಿದೆ. ಕೋವಿಡ್ ಎಂಬುದು ಇರಲಿಲ್ಲವಾಗಿದ್ದರೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲೇ ರಿಲೀಸ್ ಆಗಬೇಕಾಗಿದ್ದ ಚಿತ್ರವಿದು. ಲಾಕ್‌ಡೌನ್ ಕಾರಣಕ್ಕೆ ಥಿಯೇಟರುಗಳೆಲ್ಲ ಬಾಗಿಲು ಹಾಕಿಕೊಂಡ ಮೇಲೆ ಹೆಚ್ಚೂಕಮ್ಮಿ ಆರು ತಿಂಗಳ ತಡವಾಗಿ ತೆರೆ ಕಂಡಿದೆ. ಇವತ್ತು, ಅಂದರೆ ಅಕ್ಟೋಬರ್ 2ರಂದು ಪ್ರಮುಖ ಓಟಿಟಿ ಫ್ಲಾಟ್‌ಫಾರಂ ಅಮೆಜಾನ್ ಪ್ರೈಂ ಮೂಲಕ “ನಿಶ್ಯಬ್ದಂ” ಪ್ರೇಕ್ಷಕರ ಮುಂದೆ ಬಂದಿದೆ. ಸಿನಿಮಾ ನಿರಾಸೆ ಮಾಡುವುದಿಲ್ಲ, ಇನ್ನು ವಿವರಗಳಿಗೆ ಹೋಗೋಣ..
ಕಥೆ ಹೇಗಿದೆ ಗೊತ್ತಾ?
ಇಡೀ ಕಥೆ ಅಮೆರಿಕದ ಸಿಯಾಟಲ್ ನಗರದಲ್ಲಿ ನಡೆಯುತ್ತದೆ. ಅನುಷ್ಕಾ ಶೆಟ್ಟಿ ಇದುವರೆಗೂ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ನೋಡಬಹುದು. ಹುಟ್ಟಿನಿಂದಲೇ ಮಾತು ಬಾರದ, ಕಿವಿ ಕೇಳದ ಯುವತಿ ಸಾಕ್ಷಿ (ಅನುಷ್ಕಾ ಶೆಟ್ಟಿ) ಕೇವಲ ಲಿಪ್ ಮೂವ್‌ಮೆಂಟಿನಿಂದಲೇ ಎಲ್ಲವನ್ನೂ ಗ್ರಹಿಸಿ ಉತ್ತರ ನೀಡುತ್ತಾಳೆ. ಜತೆಗೆ, ಈಕೆ ಒಳ್ಳೆಯ ಪೈಂಟರ್ ಕೂಡ. ಇನ್ನು ಈಕೆಯ ಲೈಫಿನೊಳಕ್ಕೆ ಎಂಟ್ರಿ ಕೊಡುವ ಆಂಥೋನಿ (ಮಾಧವನ್) ಅದ್ಭುತವಾದ ಪಾಶ್ಚಾತ್ಯ ವಯಲಿನ್ ವಾದಕ. ಅಪಾರ ಅಭಿಮಾನಿಗಳನ್ನು ಹೊಂದರುವ ಕಲಾವಿದ. ಇವರಿಬ್ಬರ ನಡುವೆ ಬರುವ ಸೋನಾಲಿ (ಅಂಜಲಿ ಪಾಂಡೆ).. ಒಂದು ನೈಟ್‌ಪಾರ್ಟಿಯಲ್ಲಿ ಸಾಕ್ಷಿ-ಆಂಥೋನಿ ಎಂಗೇಜ್ ಆಗುತ್ತಾರೆ. ಅದಾದ ಮೇಲೆ ಇದ್ದಕ್ಕಿದ್ದಂತೆ ಮಿಸ್ ಆಗಿಬಿಡುತ್ತಾಳೆ ಸೋನಾಲಿ. ಒಂದು ಕಡೆ ಸೋನಾಲಿ ಹುಡುಕಾಟ ನಡೆಯುತ್ತಿರುವಾಗಲೇ ಮನೆಯೊಂದರಲ್ಲಿ ಆಂಥೋನಿ ಕೊಲೆಯಾಗಿಬಿಡುತ್ತಾನೆ. ಇದೇ ವೇಳೆ ಆಂಥೋನಿ ಕೊಲೆ ಕೇಸನ್ನು ತನಿಖೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿ ಕ್ಯಾಪ್ಟೆನ್ ರಿಜರ್ಡ್ (ಕಿಲ್‌ಬಿಲ್ ಫೇಮ್ ಮೈಕೆಲ್ ಮ್ಯಾಡ್ಸನ್) ಜತೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಮಹಾಲಕ್ಷ್ಮೀ (ಅಂಜಲಿ) ತನಿಖೆ ಆರಂಭಿಸುತ್ತಾರೆ.
ಹೇಳಬೇಕೆಂದರೆ ಮೊದಲ ದೃಶ್ಯದಿಂದಲೇ ಸಿನಿಮಾ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತದೆ. ಏಕೆಂದರೆ, ಮೊದಲ ದೃಶ್ಯದಿಂದಲೇ ಟ್ವಿಸ್ಟುಗಳು ಶುರುವಾಗುತ್ತವೆ. ನಿಜಕ್ಕಾದರೆ ಕಥೆಯೇ ಹೀರೋ. ಮೊದಲೇ ಒಂದು ಜೋಡಿಯ ಕೊಲೆಯಾಗುತ್ತೆ, ಏಕೆ? ಆಮೇಲೆ ಆಂಥೋನಿ ಹತ್ಯೆ ಯಾಕೆ ಆಗುತ್ತೆ? ಯಾರು ಮಾಡುತ್ತಾರೆ? ಇಡೀ ಕಥೆಯನ್ನು ನಡೆಸೋರು ಯಾರು? ಕೊಲೆಯ ಮಿಸ್ಟರಿಯನ್ನು ಮಹಾಲಕ್ಷ್ಮೀ ಬೇಧಿಸುತ್ತಾರಾ? ಇಡೀ ಕಥೆಯಲ್ಲಿ ರಿಚರ್ಡ್ ಮತ್ತು ಮಾಧವನ್ ಪಾತ್ರಗಳಲ್ಲಿ ಮಾತ್ರ ಆಗುವ ತಿರುವುಗಳೇನು? ಹೀಗಿರಬೇಕಾದರೆ, ತನಿಖೆ ಎಂಬುದು ಹೇಗೆ ಮುಗಿಯುತ್ತದೆ? ಅಂತಿಮವಾಗಿ ಆಂಥೋನಿ ಕೊಲೆ ಮಾಡಿದವರು ಯಾರು? ಇಷ್ಟೆಲ್ಲ ಪಾತ್ರಗಳ ಜತೆಗೆ ಸಾಕ್ಷಿ ಗೆಳೆಯ (ಸುಬ್ಬರಾಜು) ಬಂದು ಮಾಡೋದೇನು? ಕಟ್ಟಕಡೆಯ ಸೀನ್‌ವರೆಗೂ ಸಿನಿಮಾ ಈ ಟ್ವಿಸ್ಟುಗಳಿನ್ನಿಟ್ಟುಕೊಂಡೇ ನೋಡಿಸಿಕೊಳ್ಳುತ್ತದೆ.
ಅನುಷ್ಕಾ ನಟನೆ ಬಗ್ಗೆ ಹೇಳೋದಾದ್ರೆ..
ಇದುವರೆಗೂ ಬಾಹುಬಲಿ ಮತ್ತು ಭಾಗಮತಿ ಚಿತ್ರಗಳ ಪಾತ್ರಗಳು, ಅದಕ್ಕೂ ಮೊದಲು ಅರುಂಧತಿ ಪಾತ್ರವನ್ನು ಲೀಲಾಜಾಲವಾಗಿ ನಿರ್ವಹಿಸಿದ್ದ ಅನುಷ್ಕಾ ಶೆಟ್ಟಿ ಈ ಚಿತ್ರದ ಸಾಕ್ಷಿ ಪಾತ್ರಕ್ಕೆ ಕಂಪ್ಲೀಟ್ ನ್ಯಾಯ ಮಾಡಿದ್ದಾರೆ. ಮಾತು ಬರಲ್ಲ, ಕಿವಿ ಕೇಳಲ್ಲ.. ಇವೆರಡೂ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಡೀ ಚಿತ್ರದಲ್ಲಿ ಅವರಿಗೆ ಒಂದೇಒಂದು ಡೈಲಾಗ್ ಇರುವುದಿಲ್ಲ! ಕಷ್ಟವಾದ ಈ ಪಾತ್ರವನ್ನು ಅವರು ಸುಲಭವಾಗಿ ನಿರ್ವಹಿಸಿದ್ದಾರೆನ್ನಬಹುದು. ಬರೀ ಭಾವನೆಗಳಲ್ಲೇ ಆಟವಾಡಿರುವ ಅವರು ತಮ್ಮನೇ ನೋಡುತ್ತಿರುವ ಪ್ರೇಕ್ಷಕನ ಕಣ್ಣುಗಳನ್ನೇ ಕಟ್ಟಿಹಾಕಿಬಿಡುತ್ತಾರೆ. ಕೆಲವೊಮ್ಮೆ ಮನಸ್ಸು, ಹೃದಯ ಭಾರವಾಗುವಂತೆ ಮಾಡಿಬಿಡುತ್ತಾರೆ. ಚಿತ್ರ ಮುಗಿದ ಮೇಲೆ ಪ್ರೇಕ್ಷಕನಲ್ಲಿ ಅವರೇ ಇರುತ್ತಾರೆ ಕೂಡ.
ಮಾಧವನ್ ಫುಲ್ ಡಿಫರೆಂಟ್
ಹೀರೋಯಿಸಂ ಇಲ್ಲದ ಪಾತ್ರವನ್ನು ಲೀಲಾಜಾಲವಾಗಿ ಇಷ್ಟಪಟ್ಟು ನಟಿಸುವ ಕೆಲವೇ ನಟರಲ್ಲಿ ಮಾಧವನ್ ಒಬ್ಬರು. ಭರ್ಜರಿ ಎಂಟ್ರಿ,ಇಂಟ್ರಡಕ್ಷನ್ ಸಾಂಗ್‌ಗಳ ಮೂಲಕವೇ ತೆರೆ ಮೇಲೆ ಎಂಟ್ರಿ ಕೊಡುವ ಹೀರೋಗಳ ಕಾಲದಲ್ಲಿ ಮಾಧವನ್ ವಿಭಿನ್ನವಾಗಿ ನಿಲ್ಲುತ್ತಾರೆ. ಅವರು ಈ ಪಾತ್ರವನ್ನು ಮಾಡಿದ್ದಾರಾ? ಎಂದು ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ರೀತಿಯಲ್ಲಿ ಮಾಧವನ್ ನಟಿಸಿದ್ದಾರೆ. ಅವರು ಇನ್ನೂ ತೆರೆ ಮೇಲೆ ಇನ್ನಷ್ಟು ಹೊತ್ತು ಕಾಣಬೇಕು ಎಂದು ಅಂದುಕೊಳ್ಳುತ್ತಿರುವ ಗಳಿಗೆಯಲ್ಲೇ ಅವರು ಎಲ್ಲೂ ಮಿಸ್ ಆಗಿಬಿಡುತ್ತಾರೆ? ಆದರೆ ಎಲ್ಲಿ ಹೋಗಿಬಿಡುತ್ತಾರೆ? ಅವರ ಪಾತ್ರ ಹೇಗೆಲ್ಲ ಶೇಡ್ ತೆಗೆದುಕೊಳ್ಳುತ್ತದೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಅವರ ವಯಲಿನ್ ವಾದನ. ಆ ವಾದನದ ಬೆಡಗಿಗೆ ಸೋಲುವ ಬೆಡಗಿಯರು.. ಓಹ್!!
ಉಳಿದಂತೆ ಅಂಜಲಿ ಪಾಂಡೆ ಅವರದ್ದು ಕಥೆಯನ್ನು ನಡೆಸುವ ಪಾತ್ರ. ಪಾತ್ರಕ್ಕೆ ತಕ್ಕಹಾಗೆ ನಟಿಸಿದ್ದಾರೆ. ಇನ್ನು ಲೇಡಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿರುವ ಅಂಜಲಿಯದ್ದು ಇಡೀ ಚಿತ್ರದುದ್ದಕ್ಕೂ ನಡೆಯುವ ಪಾತ್ರ. ಬಿಗಿನಿಂಗ್ ಟು ಎಂಡ್‌ವರೆಗೂ ಅವರು ಪ್ರೇಕ್ಷಕರನ್ನು ಅತ್ತಿತ್ತ ಕದಲದಂತೆ ನೋಡಿಕೊಳ್ಳುತ್ತಾರೆ. ಇನ್ನು ಮೈಕೆಲ್ ಮ್ಯಾಡ್ಸನ್ ಮತ್ತು ಸುಬ್ಬರಾಜು ಅವರಿಬ್ಬರದ್ದು ಹದಭರಿತ ನಟನೆ. ಮ್ಯಾಡ್ಸನ್ ನಟನೆಯಲ್ಲಿ ಹಿಂದಿಯ ಹಿರಿಯ ನಟ ಫಿರೋಜ್ ಖಾನ್ ಇಣುಕಿದಂತೆ ಅನಿಸುತ್ತದೆ.
ಉಳಿದದ್ದೆಲ್ಲ ಹೇಗಿದೆ?
ತಾಂತ್ರಿಕವಾಗಿ ಸಿನಿಮಾ ಹಾಲಿವುಡ್ ಲೆವೆಲ್‌ಗಿದೆ. ಷಾನಿಲ್ ಡಿಯೋ ಅವರ ಛಾಯಾಗ್ರಾಹಣ ಸಿಯಾಟಲ್ ನಗರವನ್ನು ಸೊಗಸಾಗಿ ತೋರಿಸುತ್ತದೆ. ಗೋಪಿ ಸುಂದರ್ ಮ್ಯೂಸಿಕ್, ಗಿರೀಶ್ ಕೊಟ್ಟಿರುವ ಬ್ಯಾಕ್‌ಗ್ರೌಂಡ್ ಸ್ಕೋರ್ ಕಥೆಗೆ ತಕ್ಕ ಹಾಗಿದೆ. ನಿರ್ದೇಶಕ ಹೇಮಂತ್ ಮಧುಕರ್ ಕಥೆಯನ್ನು ಪ್ರೆಸೆಂಟ್ ಮಾಡಿರುವ ರೀತಿ ಚೆನ್ನಾಗಿದೆ. ಕೋವಿಡ್ ಬರುವ ಮುನ್ನವೇ ಅವರು ಅಮೆರಿಕದಲ್ಲಿ ಶೂಟಿಂಗ್ ಮುಗಿಸಿಕೊಂಡ ಹಾಗೆ ಕಾಣುತ್ತದೆ. ಆ ನಂತರ ನಡೆದಿರುವ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಕೋವಿಡ್ ಪ್ರಭಾವ ಅವರ ಮೇಲೆ ಬಿದ್ದಹಾಗೆ ಕಾಣುವುದಿಲ್ಲ. ಕಥೆ, ಚಿತ್ರಕಥೆಯಲ್ಲಿ ಅವರ ಪ್ರತಿಭೆ ಎದ್ದುಕಾಣುತ್ತದೆ. ಆದರೆ, ಮಾಧವನ್ ಪಾತ್ರದ ವಿಷಯದಲ್ಲಿ ಕೊಂಚ ತಕರಾರು ತೆಗೆಯಬಹುದಾದರೂ ಅದಕ್ಕೆ ನಿರ್ದೇಶಶಕರು ಕೊನೆಯಲ್ಲಿ ಉತ್ತರ ಕೊಡುತ್ತಾರೆ.
ಒಟ್ಟಾರೆಯಾಗಿ ಇನ್ನೇನು ಥಿಯೇಟರ್‌ಗಳ ಕದ ತೆರೆಯಲು ಸಿದ್ಧತೆ ನಡೆಯುತ್ತಿದೆ. ಅದಕ್ಕೆ ಮೊದಲೇ ಓಟಿಟಿಯಲ್ಲಿ ಬಂದ ʼನಿಶ್ಯಬ್ದಂʼ ಹೊಸ ಅನುಭವ ನೀಡುತ್ತದೆ. ಇವತ್ತು ತೆಲುಗು, ತಮಿಳು ಮತ್ತು ಮಲೆಯಾಳಂ ವರ್ಷನ್ ಬಿಡುಗಡೆಯಾಗಿದೆ. ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ, ಕೋನಾ ಫಿಲ್ಮ್ ಕಾರ್ಪೋರೇಷನ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಕೇವಲ ಐದು ಪಾತ್ರಗಳ ಸಿನಿಮಾ ಪ್ರೇಕ್ಷಕರನ್ನು ಇಡಿಯಾಗಿ ಆವರಿಸಿಕೊಳ್ಳುತ್ತದೆ.