ಕೆಲ ರಾಜ್ಯಗಳು ಕೋವಿಡ್ ಜತೆ ಗುದ್ದಾಡುತ್ತಲೇ ಅಭಿವೃದ್ಧಿಯತ್ತ ಗಮನ ಹರಿಸಿದ್ದರೆ, ಕರ್ನಾಟಕದಲ್ಲಿ ರಾಜಕೀಯ ಕೆಸರೆಚಾಟದಲ್ಲಿಯೇ ಕಾಲಹರಣ ಆಗುತ್ತಿದೆ. ಡಿಕೆಶಿ ಮೇಲೆ ಸಿಬಿಐ ದಾಳಿ ನಡೆದ ಮೇಲೆ ಅದು ಮತ್ತಷ್ಟು ತೀವ್ರವಾಗಿದೆ. ಉಪ ಚುನಾವಣೆ ಅಖಾಡದಲ್ಲಿ ಅರಚಿಕೊಳ್ಳುವುದು ಹೆಚ್ಚಲಿದೆ. ನಮ್ಮಲ್ಲಿ ಪ್ರಗತಿಗಿಂತ ಚುನಾವಣೆಗಳು, ಆರೋಪ-ಪ್ರತ್ಯಾರೋಪಗಳೇ ಹುಚ್ಚೆದ್ದು ಕುಣಿಯುತ್ತಿವೆ.
***
photos: bnmk photographs
ಬೆಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಕಾವು ಏರುತ್ತಿರುವಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಮೇಲೆ ನಡೆದ ಸಿಬಿಐ ದಾಳಿಗೆ ರಾಜಕೀಯ ತಿರುವು ಸಿಕ್ಕಿರುವುದು ಒಂದೆಡೆಯಾದರೆ, ಒಟ್ಟು 74.93 ಕೋಟಿ ರೂ. ಮೊತ್ತದ, ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಸಿದ ಕಾರಣಕ್ಕೆ ಡಿಕೆಶಿ ಮತ್ತವರ ಕುಟುಂಬದ ವಿರುದ್ಧಎಫ್ಐಆರ್ ದಾಖಲಿಸಿದೆ.
ಸೋಮವಾರ ಬೆಳಗ್ಗೆಯಿಂದಲೇ ಶುರುವಾದ ದಾಳಿ ಅಂತ್ಯವಾದ ಮೇಲೆ ಡಿಕೆಶಿ ಮಾಧ್ಯಮದ ಜತೆಯೂ ಮಾತನಾಡಿದರಲ್ಲದೆ, ಕಾಂಗ್ರೆಸ್ ಪಕ್ಕಕ್ಕೆ ಹಾಗೂ ಕಾರ್ಯಕರ್ತರಿಗೆ ಕಪ್ಪುಚುಕ್ಕೆ ಆಗುವಂಥ ಯಾವುದೇ ಕೃತ್ಯವನ್ನು ಮಾಡಿಲ್ಲ. ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದ ವಿರುದ್ಧ ಕಾನೂನಾತ್ಮಕವಾಗಿ, ರಾಜಕೀಯವಾಗಿ ಉತ್ತರ ನೀಡುತ್ತೇನೆ ಎಂದು ಹೇಳಿದರು.
ಈ ನಡುವೆ ಸಿಬಿಐ, ಡಿಕೆಶಿ ಮತ್ತವರ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿದೆಯಲ್ಲದೆ ಅವರಿಗೆ ಸಂಬಂಧಿಸಿದ 14 ಸ್ಥಳಗಳಲ್ಲಿ ದಾಳಿ ನಡೆಸಿ ವ್ಯಾಪಕ ಶೋಧ ನಡೆಸಿದೆ. ಇದೇ ವೇಳೆ 57 ಲಕ್ಷ ರೂ.ಗಳಷ್ಟು ಹಣ, ಕೆಲ ಆಸ್ತಿಪತ್ರಗಳು, ವಿವಿಧ ಬ್ಯಾಂಕ್ ಖಾತೆಗಳ ವಿವರಗಳು, ಕಂಪ್ಯೂಟರ್ ಹಾರ್ಡ್’ಡಿಸ್ಕ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಸಂಜೆ ಹೊತ್ತಿಗೆ, ಅಂದರೆ ಡಿಕೆಶಿ ಪತ್ರಿಕಾಗೋಷ್ಟಿ ನಡೆಸುವ ಹೊತ್ತಿಗೆ ಸಿಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಿಬಿಐ ಹೊರಡಿಸಿರುವ ಪ್ರಕಟಣೆಯಲ್ಲಿ ಮತ್ತಷ್ಟು ಮಾಹಿತಿ ಇದೆ;
74.93 ಕೋಟಿ ರೂ. ಮೌಲ್ಯದ ಅಸಮರ್ಪಕ ಆಸ್ತಿಗಳನ್ನು ಡಿ.ಕೆ.ಶಿವಕುಮಾರ್ ಮತ್ತವರ ಕುಟುಂಬ ಸದಸ್ಯರು ಹೊಂದಿದ್ದಾರೆ ಎಂಬ ಆರೋಪದ ಮೇಲೆ ಮಾರ್ಚ್ 2020ರಲ್ಲಿಯೇ ಕರ್ನಾಟಕ ಸರಕಾರವು ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್’ಮೆಂಟ್ ಕಾಯ್ದೆ 6ರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. ಅದರ ಭಾಗವಾಗಿಯೇ ಕೇಂದ್ರ ಸರಕಾರ ಡಿಎಸ್’ಪಿಇ ಕಾಯ್ದೆಯ ಅಧಿಸೂಚನೆ 5ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದೆ ಎಂದು ಸಿಬಿಐ ಹೇಳಿಕೊಂಡಿದೆ.
ಗೌರ್ನಮೆಂಟ್ ಹೇಳಿದೆ; ಸಿಬಿಐ ದಾಳಿ ಮಾಡಿದೆ..
ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರಕಾರ ಹೇಳಿದಂತೆ ಸಿಬಿಐ ಕೇಳುತ್ತಿದೆ. ಈ ಉಪ ಚುನಾವಣೆ ಮುಗಿಯುವ ತನಕ ಈ ದಾಳಿ ಇದ್ದೇ ಇರುತ್ತದೆ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಸಿಬಿಐ ದಾಳಿ ಮುಕ್ತಾಯವಾದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಯಾವ ತಪ್ಪು ಮಾಡಿಲ್ಲ. ಪಕ್ಷಕ್ಕಾಗಲಿ ಅಥವಾ ಕಾರ್ಯಕರ್ತರಿಗೆ ಕಪ್ಪುಚುಕ್‌ಎಯಾಗುವಂಥ ಯಾವ ಕೆಲಸವನ್ನು ಮಾಡಿಲ್ಲ. ನನ್ನ ಪಾಳಿನ ದೈವವಾದ ನಿಮ್ಮೆಲ್ಲರ ಅಭಿಮಾನಕ್ಕೆ ಚಿರ ಋಣಿಯಾಗಿದ್ದೇನೆ, ನನ್ನ ಮೇಲೆ ನೀವು ಹೊಂದಿರುವ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಭಾವುಕರಾಗಿ ಹೇಳಿದರು.
ನನ್ನ ಮೇಲೆ ದಾಳಿ ಇದೇ ಮೊದಲಲ್ಲ. 2017ರಲ್ಲಿ ಗುಜರಾತ್’ನಲ್ಲಿ ನಡೆದ ರಾಜ್ಯಸಭೆ ಚುನಾವಣೆ ವೇಳೆಯಲ್ಲೂ ಆದಾಯ ತೆರಿಗೆ ದಾಳಿ ನಡೆದಿತ್ತು. 2018ರಲ್ಲಿ ಇಡಿ ಪ್ರಕರಣ ಹಾಕಿ ಬಂಧನ ಮಾಡಿದರು. ಈಗ ಸಿಬಿಐ ತನಿಖೆಗೆ ಅಡ್ವೋಕೇಟ್ ಜನರಲ್ ಬೇಡ ಎಂದರೂ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡಿದಿದೆ. ಚುನಾವಣೆ ಮುಗಿಯುವವರೆಗೂ ಈ ದಾಳಿ ನಡೆಯುತ್ತೆ. ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ನನ್ನ ಮೇಲೆ ಇಂಥ ಗುಮ್ಮಗಳನ್ನು ಬಿಟ್ಟು ಕಟ್ಟಿಹಾಕಲು ಸಾಧ್ಯವಿಲ್ಲ ಎಂದರು.
ನನ್ನ ಮನೆಯಲ್ಲಿ 50 ಲಕ್ಷ ಸಿಕ್ಕಿದೆ ಅಂತ ವರದಿಗಳು ಬರುತ್ತಿವೆ. ನಾನಂತು ಸ್ವಲ್ಪವೂ ತಲೆ ಕೆಡಿಸಿಕೊಳ್ಳಲು ಹೋಗೋದಿಲ್ಲ. ಮನೆಯ ಮೇಲೆ ದಾಳಿ ಮಾಡಿದ ಸಿಬಿಐ ಅಧಿಕಾರಿಗಳು ಎಲ್ಲ ಮಾಹಿತಿ ತೆಗೆದುಕೊಂಡು ಹೋಗಿದ್ದಾರೆ. ಕಪಾಟಿನಲ್ಲಿದ್ದ ಪ್ಯಾಂಟ್’ಗಳು, ಪಂಚೆಗಳು, ಸೀರೆಗಳೆಲ್ಲವುಗಳ ಲೆಕ್ಕವನ್ನು ಹಾಕಿ ಬರೆದುಕೊಂಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಹಾಗೂ ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಕ್ಕೆ ಮಣಿಯಲ್ಲ. ಹೆದರುವ ಮಗ ನಾನಲ್ಲ ಎಂದು ಅವರು ಕಿಡಿ ಕಾರಿದರು.
ಹೆದರಲ್ಲ, ಓಡಿ ಹೋಗಲ್ಲ..
ನನ್ನ ಮೇಲೆ, ನನ್ನ ಸಹೋದರ ಡಿ.ಕೆ. ಶಿವಕುಮಾರ್ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ಕಾನೂನಾತ್ಮಕವಾಗಿಯೇ ಎದುರಿಸುತ್ತೇವೆ. ನಾವು ಹೆದರುವುದಾಗಲಿ, ಓಡಿ ಹೋಗುವುದಾಗಲಿ ಇಲ್ಲ. ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇವೆ. ಹೀಗೆಂದವರು ಸಂಸದ ಡಿ.ಕೆ. ಸುರೇಶ್.
ದಾಳಿಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ದಾಳಿ ನಂತರ ಮಾಧ್ಯಮಗಳ ಜತೆಯೂ ಮತನಾಡಿದರು, ಬಿಜೆಪಿಯ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಿಲ್ಲ. ಕುಗ್ಗುವುದೂ ಇಲ್ಲ ಎಂದರು.
ಬಿಜೆಪಿ ನಾಯಕರ ಜಾಣ ಹೇಳಿಕೆಗಳು
ಇದೆಲ್ಲ ಒಂದೆಡೆ ಸಾಗಿದ್ದರೆ, ಪ್ರತಿಪಕ್ಷ, ಮುಖ್ಯವಾಗಿ ಕಾಂಗ್ರೆಸ್ ನಾಯಕರು ಸಿಬಿಐ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಕಡೆಗೇ ಬೊಟ್ಟುಮಾಡಿ ತೋರಿಸುತ್ತಿದ್ದರು. ಆದಾಯ ತೆರಿಗೆ ದಾಳಿ ನಡೆದ ದಿನವನ್ನೇ ಗಣನೆಗೆ ತೆಗೆದುಕೊಂಡರೆ ಸಿಬಿಐ ದಾಳಿ ಬಗ್ಗೆಯೂ ಕಾಂಗ್ರೆಸ್ ನಾಯಕರ ಆರೋಪಗಳು ಸಹಜವಾಗಿಯೇ ಇದ್ದವು. ಗುಜರಾತ್ ಶಾಸಕರು ಬೆಂಗಳೂರಿನಲ್ಲೇ ಇದ್ದಾಗ ಐಟಿ ದಾಳಿ ನಡೆದಿತ್ತು. ಆಗ ಗುಜರಾತ್ ಅಸೆಂಬ್ಲಿಯಿಂದ ಅಹಮದ್ ಪಟೇಲ್ ಸ್ಪರ್ಧಿಸಿದ್ದರು. ಅವರನ್ನು ಸೋಲಿಸುವುದೇ ಬಿಜೆಪಿ ಅಂದಿನ ಅಧ್ಯಕ್ಷ ಅಮಿತ್ ಶಾ ಉದ್ದೇಶವಾಗಿತ್ತು ಎಂಬುದರಲ್ಲಿ ಯಾವುದೇ ಹುರುಳಿಲ್ಲ. ಈಗ ಬೈ ಎಲೆಕ್ಷನ್ ನಡುವೆ ಸಿಬಿಐ ಬಂದಿದೆ.
ಬಿಜೆಪಿ ನಾಯಕರ ಪೈಕಿ ಮೊದಲು ಪ್ರತಿಕ್ರಿಯಿಸಿದ್ದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ; ಅವರ ಹೇಳಿಕೆ ಹೀಗಿದೆ.
“ಈಗಾಗಲೇ ಡಿ.ಕೆ.ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಹಾಗೂ ಇಡಿ ದಾಳಿ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಸಿಬಿಐ ದಾಳಿ ನಡೆದಿರಬಹುದು. ಹೀಗಾಗಿ ಇದಕ್ಕೆ ರಾಜಕೀಯ ಬಣ್ಣ ಬಳಿಯುವುದು ಬೇಡ. ಸಮಾಜದಲ್ಲಿ ವ್ಯಕ್ತಿಗಿಂತ ವ್ಯವಸ್ಥೆಯೇ ದೊಡ್ಡದು. ಇದರಲ್ಲಿ ನಂಬಿಕೆ ಹೆಚ್ಚುವ ರೀತಿಯಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಸತ್ಯ ಏನೆಂದು ಹೊರಬರಲಿ. ಇನ್ನು ತನಿಖೆಗೆ ಸಹಕಾರ ನೀಡುವುದಾಗಿ ಸ್ವತಃ ಡಿಕೆಶಿ ಹೇಳಿದ್ದಾರೆ. ಅದರಂತೆ ಅವರು ಸಹಕಾರ ನೀಡಲಿ. ತಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡಲು ಇದೊಂದು ಅವಕಾಶ. ಸಿಕ್ಕಿದ ಅವಕಾಶವನ್ನು ಅವರು ಸದ್ಬಳಕೆ ಮಾಡಿಕೊಳ್ಳಲಿ” ಎಂದರು.
ಅದಾದ ಮೇಲೆ ಮಾತನಾಡಿದವರು ಸಚಿವ ಕೆ.ಎಸ್. ಈಶ್ವರಪ್ಪ. “ನಮ್ಮ ನಾಯಕ ಯಡಿಯೂರಪ್ಪ ಜೈಲಿಗೆ ಹೋದಾಗ ಇದೇ ಕಾಂಗ್ರೆಸ್ ನಾಯಕರು ಮಾತನಾಡಿದ್ದೇನು? ಒಮ್ಮೆ ನೆನಪು ಮಾಡಿಕೊಳ್ಳಲಿ. ಡಿಕೆಶಿ ಅವರು ಸೀತೆಯಂತೆ ಪವಿತ್ರರಾಗಿ ಆರೋಪಮುಕ್ತರಾಗಲಿ” ಎಂದು ಲೇವಡಿ ಮಾಡಿದರು.
ಇನ್ನು ಡಾ.ಸುಧಾಕರ್ ವರಸೆಯೇ ಬೇರೆ ಆಗಿತ್ತು. “ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿದ್ದರು. ಅವರ ಮೇಲೆ ಯಾಕೆ ದಾಳಿ ಆಗಲಿಲ್ಲ. ಡಿಕೆಶಿ ಮೇಲೆಯೇ ಯಾಕೆ ಆಯಿತು. ಅವರ ಮೇಲೆ ಹಿಂದೆ ಐಟಿ, ಇಡಿ ದಾಳಿ ಆಗಿತ್ತು. ಅದು ಮುಂದುವರಿದ ಭಾಗವಾಗಿಯೇ ಇದೂ ಆಗಿರಬಹುದು” ಎಂದರು ಅವರು.