Lead photo: CKPhotography ಸಿಕೆಪಿ@ckpixels
ಕಲಿಯುಗ ವೈಕುಂಠ, ಕಲಿಯುಗದ ಪ್ರತ್ಯಕ್ಷ ದೈವ ತಿರುಮಲದ ಏಳುಬೆಟ್ಟಗಳ ಒಡೆಯ ಶ್ರೀ ವೆಂಕಟೇಶ್ವರ ಸ್ವಾಮಿಯವರು ನೆಲೆನಿಂತಿರುವ ನೆರೆಯ ಆಂಧ್ರಪ್ರದೇಶದಲ್ಲಿ ಏನಾಗುತ್ತಿದೆ? ಅಲ್ಲಿ ಪ್ರಜಾಸತ್ತಾತ್ಮಕವಾಗಿ ಜನರಿಂದ ಆಯ್ಕೆಯಾದ ಸರ್ಕಾರ ಇದೆಯಾ? ಅಥವಾ ಕ್ರೈಸ್ತೀಕರಣವನ್ನೇ ತುಷ್ಠೀಕರಣ ಮಾಡುವ ಸರ್ಕಾರವಿದೆಯಾ? ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಬರೆದಿರುವ ಈ ಲೇಖನ ಬೆಚ್ಚಿಬೀಳಿಸುವಂತಿದೆ.
***
ಆ ರಾಜ್ಯದ ಮುಖ್ಯಮಂತ್ರಿ ಕ್ರಿಶ್ಚಿಯನ್. ಗೃಹಮಂತ್ರಿ ಕ್ರಿಶ್ಚಿಯನ್. ಡಿಜಿಪಿ ಕ್ರಿಶ್ಚಿಯನ್. ಗುಪ್ತಚರ ಮುಖ್ಯಸ್ಥ ಕ್ರಿಶ್ಚಿಯನ್. ಸಂಪುಟದ ಶೇ.60ರಷ್ಟು ಸಚಿವರೂ ಕ್ರಿಶ್ಚಿಯನ್’ರೇ. ಅಷ್ಟೇ ಅಲ್ಲ, ರಾಜ್ಯದ ಬಹುತೇಕ ಜಿಲ್ಲಾಕಾರಿಗಳೆಲ್ಲರೂ ಕ್ರಿಶ್ಚಿಯನ್’ರೇ.
ಆ ರಾಜ್ಯದ ಯಾವುದೇ ಯೋಜನೆಗಳಿರಲಿ, ಅದರಲ್ಲಿ ಕ್ರಿಶ್ಚಿಯನ್ನರಿಗೇ ಆದ್ಯತೆ. ಅಂತಹ ರಾಜ್ಯ ಬಹುಶಃ ಇಂಗ್ಲೆಂಡ್‌ನಲ್ಲೋ ಕೆನಡಾದಲ್ಲೋ ಅಥವಾ ಇನ್ನಾವುದೋ ಯುರೋಪಿಯನ್ ರಾಷ್ಟ್ರದಲ್ಲಿರಬಹುದು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಆ ರಾಜ್ಯ ಇರುವುದು ಇನ್ನೆಲ್ಲೋ ಅಲ್ಲ. ನಮ್ಮದೇ ಭಾರತದಲ್ಲಿ! ಆ ರಾಜ್ಯದ ಹೆಸರು ಆಂಧ್ರ ಪ್ರದೇಶ.
courtesy: CMO Andhra Pradesh
ಇದನ್ನು ಕೇಳಿ ನಿಮಗೆ ಆಘಾತವಾಗಬಹುದು. ನಾನು ಹೇಳುತ್ತಿರುವುದು ಸುಳ್ಳೆನಿಸಬಹುದು. ಆದರೆ ಸುಳ್ಳು ಹೇಳಿ ನನಗೆ ಆಗಬೇಕಾದುದೇನೂ ಇಲ್ಲ. ಆಂಧ್ರದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಕ್ರಿಶ್ಚಿಯನ್. ಅಲ್ಲಿನ ಗೃಹಮಂತ್ರಿ ಮೆಕತೋಟಿ ಸುಚರಿತ ಕ್ರಿಶ್ಚಿಯನ್. ಶಿಕ್ಷಣ ಸಚಿವ ಆದಿಮೂಲಪು ಸುರೇಶ್ ಕ್ರಿಶ್ಚಿಯನ್. ಆಂಧ್ರ ಪ್ರದೇಶ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಅತ್ಯಂತ ಸಿರಿವಂತ ಹಿಂದು ದೇವಾಲಯ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ನ ಅಧ್ಯಕ್ಷರಾಗಿರುವ ವೈ.ವಿ.ಸುಬ್ಬಾರೆಡ್ಡಿ ಕೂಡ ಕ್ರಿಶ್ಚಿಯನ್. ನಾನು ಮೇಲೆ ತಿಳಿಸಿದವರೆಲ್ಲರ ಹೆಸರುಗಳೆಲ್ಲ ಮೇಲ್ನೋಟಕ್ಕೆ ಹಿಂದು ಹೆಸರುಗಳೆಂದೇ ಭಾಸವಾಗುತ್ತದೆ. ಅದು ನಿಜವೂ ಹೌದು. ಆದರೆ ಅವರೆಲ್ಲ ಮತಾಂತರಿತ ಕ್ರಿಶ್ಚಿಯನ್ನರು. ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡರೂ ತಮ್ಮ ಹೆಸರನ್ನು ಮಾತ್ರ ಹಿಂದಿನದನ್ನೇ ಉಳಿಸಿಕೊಂಡಿದ್ದಾರೆ. ಹೀಗೆ ಮಾಡಿರುವುದರ ಹಿಂದೆ ವೋಟ್ ಬ್ಯಾಂಕ್ ರಾಜಕೀಯವಿದೆ. ಹಿಂದು ಸಮಾಜವನ್ನು ವಂಚಿಸುವ ಹುನ್ನಾರವೂ ಇದೆ. ಚರ್ಚ್‌ನ ರಿಜಿಸ್ಟರ್‌ನಲ್ಲಿ ಮಾತ್ರ ಇವರೆಲ್ಲರಿಗೆ ಬೇರೆಯದೇ ಆದ ಕ್ರೈಸ್ತ ಹೆಸರು ಇದೆ.
ಈಗಿನ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಕೂಡ ಕ್ರಿಶ್ಚಿಯನ್. ಅವರ ಇಡೀ ವಂಶ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದು ಬಹಳ ಹಿಂದೆಯೇ. ವೈ.ಎಸ್.ಆರ್. ಆಂಧ್ರದ ಮುಖ್ಯಮಂತ್ರಿಯಾಗಿದ್ದಾಗ ಮತಾಂತರ ಕಾರ್ಯಕ್ಕೆ ಬಹಳಷ್ಟು ಉತ್ತೇಜನವನ್ನು ರಾಜಾರೋಷವಾಗಿಯೇ ನೀಡಿದ್ದರು. ಸರ್ಕಾರದ ಹಣವನ್ನೂ ಸಾಕಷ್ಟು ಪ್ರಮಾಣದಲ್ಲಿ ದುರ್ಬಳಕೆ ಮಾಡಿದ್ದರು. ಅವರ ಪುತ್ರ ಜಗಮೋಹನ್ ರೆಡ್ಡಿ ತನ್ನ ತಂದೆಗಿಂತಲೂ ಶರವೇಗದಲ್ಲಿ ಕ್ರೈಸ್ತೀಕರಣ ಪ್ರಕ್ರಿಯೆಗೆ ಭಾರೀ ಉತ್ತೇಜನ ನೀಡುತ್ತಿರುವುದು ಈಗ ಆಂಧ್ರದಾದ್ಯಂತ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
ಬಲಾತ್ಕಾರದ ಮತಾಂತರ
ಮುಖ್ಯಮಂತ್ರಿಯೊಬ್ಬರು ತನ್ನ ಇಡೀ ಸರ್ಕಾರಿ ಯಂತ್ರವನ್ನು ಮತಾಂತರ ಚಟುವಟಿಕೆಗೆ ದುರ್ಬಳಕೆ ಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ? ನಮ್ಮ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ಅದರಂತೆ ಅವರವರ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸಲು ಆಚರಣೆಗಳನ್ನು ಕೈಗೊಳ್ಳಲು ಅಡ್ಡಿಯೇನಿಲ್ಲ. ಆದರೆ ಧಾರ್ಮಿಕ ಸ್ವಾತಂತ್ರ್ಯ ಇದೆಯೆಂದ ಮಾತ್ರಕ್ಕೆ ಆಸೆ ಆಮಿಷಗಳನ್ನೊಡ್ಡಿಯೋ ಮೋಸದಿಂದಲೋ ಇಲ್ಲವೇ ಬಲಾತ್ಕಾರಪೂರ್ವಕವಾಗಿಯೋ ಯಾರನ್ನೂ ಮತಾಂತರ ಮಾಡುವಂತಿಲ್ಲ. ಅದನ್ನು ಸಂವಿಧಾನವೇ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲೆ ಇಂತಹ ಬಲಾತ್ಕಾರದ ಮತಾಂತರಗಳನ್ನು ತಡೆಯುವ ಅಥವಾ ನಿಷೇಧಿಸುವ ಉದ್ದೇಶದಿಂದ ಮತಾಂತರ ವಿರೋಧಿ ಕಾಯ್ದೆಗಳನ್ನು ಹಲವು ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಇಂತಹ ಕಾಯ್ದೆಗಳಿದ್ದರೂ ಅದರ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ.
ಜಾತ್ಯತೀತ ರಾಷ್ಟ್ರವೆನಿಸಿಕೊಂಡ ಭಾರತದಲ್ಲಿ ಸರ್ಕಾರ ಕೈಗೊಳ್ಳುವ ಯೋಜನೆಗಳಾಗಲೀ, ಅದರ ಮೂಲಚಿಂತನೆಗಳಾಗಲೀ ಜಾತ್ಯತೀತ ಸಿದ್ಧಾಂತಕ್ಕೆ ಬದ್ಧವಾಗಿರಬೇಕು. ಯಾವುದೋ ಒಂದು ಮತದ ಓಲೈಕೆಯಾಗಲಿ ಅಥವಾ ಇನ್ನೊಂದು ಮತದ ಕುರಿತು ತಿರಸ್ಕಾರವಾಗಲಿ ಸಲ್ಲದು. ಎಲ್ಲ ಸಮುದಾಯದವರನ್ನೂ ಸಮಾನವಾಗಿ ಕಂಡು ಎಲ್ಲರ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು. ಪ್ರಜಾತಂತ್ರ ವ್ಯವಸ್ಥೆಯ ಸಂದೇಶವೂ ಇದೇ. ಆದರೆ ಆಂಧ್ರದಲ್ಲಿ ಈಗ ನಡೆಯುತ್ತಿರುವುದೆಲ್ಲವೂ ಪ್ರಜಾತಂತ್ರ ವಿರೋಧಿ, ಸಂವಿಧಾನ ವಿರೋಧಿ ಕೃತ್ಯಗಳು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಹಿಂದು ವಿರೋಧಿ ವರ್ತನೆಗಳು.
ಸಕಲ ಸೌಲಭ್ಯ ಕೊಟ್ಟ ಜಗನ್
ಕಳೆದ ವರ್ಷ ನವೆಂಬರ್‌ನಲ್ಲಿ ಜಗಮೋಹನ್ ರೆಡ್ಡಿ ಸರ್ಕಾರ ಅಧಿಕಾರಕ್ಕೇರಿದ ಕೂಡಲೇ ಮೊದಲು ಮಾಡಿದ ಕೆಲಸ; ಕ್ರೈಸ್ತರ ಪವಿತ್ರ ಯಾತ್ರಾಸ್ಥಳ ಜೆರೂಸಲೆಂ (ಅದಿರುವುದು ಇಸ್ರೇಲ್‌ನಲ್ಲಿ)ಗೆ ತೆರಳುವ ಕ್ರೈಸ್ತ ಯಾತ್ರಿಕರಿಗೆ ಅನುದಾನವನ್ನು 40 ಸಾವಿರದಿಂದ 60 ಸಾವಿರಕ್ಕೇರಿಸಿದ್ದು. ಅದಾದ ಬಳಿಕ ಕ್ರೈಸ್ತ ಮತ ಪ್ರಚಾರಕರಿಗೆ, ಧರ್ಮಗುರುಗಳಿಗೆ ಸರ್ಕಾರದಿಂದಲೇ ಫ್ಲ್ಯಾಟ್, ಮನೆ ನಿರ್ಮಾಣಕ್ಕೆ ಸಹಾಯಧನ, ಕ್ರೈಸ್ತ ಬಡಯುವತಿಯರ ಮದುವೆಗೆ ಒಂದು ಲಕ್ಷ ರೂ. ನೆರವು ಒದಗಿಸಿತು. ಅದೇ ವೇಳೆ ಹಿಂದು ಬಡಯುವತಿಯರ ಮದುವೆಗೆ ಯಾವುದೇ ನೆರವು ನೀಡಲಿಲ್ಲ. ಆರ್ಥಿಕವಾಗಿ ತೊಂದರೆಯಲ್ಲಿರುವ ಹಿಂದು ದೇಗುಲಗಳಿಗೆ ಕಿಂಚಿತ್ ಸಹಾಯವೂ ಸಿಗಲಿಲ್ಲ. ಬದಲಿಗೆ ನೆಲ್ಲೂರು, ಚಿತ್ತೂರು, ಗುಂಟೂರು ಮೊದಲಾದೆಡೆಯ ಪ್ರಮುಖ ಹಿಂದು ದೇಗುಲಗಳ ಮೇಲೆ ಕ್ರೈಸ್ತರ ದಾಳಿ ನಡೆದು, ಅಲ್ಲಿನ ದೇವರ ರಥಗಳನ್ನು ನಾಶಪಡಿಸಲಾಯಿತು. ಪೊಲೀಸರು ಈ ದುಷ್ಕೃತ್ಯದ ವಿರುದ್ಧ ದೂರನ್ನು ಸ್ವೀಕರಿಸಲಿಲ್ಲ. ಯಾವುದೇ ಕ್ರಮವನ್ನೂ ಕೈಗೊಳ್ಳಲಿಲ್ಲ. ಜಗಮೋಹನ್ ರೆಡ್ಡಿ ಸರ್ಕಾರದಿಂದಲೇ ಇಂತಹ ಕೃತ್ಯಗಳಿಗೆ ಪರೋಕ್ಷ ಕುಮ್ಮಕ್ಕು ಇತ್ತೆಂಬುದು ಮಾಧ್ಯಮಗಳ ವರದಿ.
ಆಂಧ್ರದಲ್ಲಿ ಕ್ರೈಸ್ತರ ಚರ್ಚು, ಮುಸ್ಲಿಮರ ಮದ್ರಸಾ, ಮಸೀದಿಗಳ ಆಡಳಿತ ವ್ಯವಸ್ಥೆ, ಹಣಕಾಸು ವ್ಯವಹಾರ ಇತ್ಯಾದಿ ಎಲ್ಲವೂ ಆಯಾ ಸಮುದಾಯಕ್ಕೆ ಸೇರಿದ ಸ್ವತಂತ್ರ ವಿಚಾರಗಳಾಗಿದ್ದರೂ ಹಿಂದು ದೇಗುಲಗಳ ವಿಚಾರದಲ್ಲಿ ಮಾತ್ರ ಹೀಗಿಲ್ಲ. ಪ್ರಮುಖ ಹಿಂದು ದೇಗುಲಗಳ ಆಡಳಿತ ನಿರ್ವಹಣೆ, ಹಣಕಾಸು ವ್ಯವಹಾರ ಇತ್ಯಾದಿ ಎಲ್ಲವೂ ಸರ್ಕಾರದ ಹಿಡಿತದಲ್ಲಿ ಇದೆ. ಹಾಗಾಗಿ ಆ ದೇಗುಲಗಳ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ಹುದ್ದೆಗಳಿಗೆ ಬೇಕೆಂದೇ ಹಿಂದುಯೇತರ ವ್ಯಕ್ತಿಗಳ ನೇಮಕ ಮಾಡಲಾಗುತ್ತಿದೆ. ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಅಧ್ಯಕ್ಷರು ಕ್ರೈಸ್ತರಾಗಿರುವುದು ಇದಕ್ಕೊಂದು ದಿವ್ಯ ನಿದರ್ಶನ.
ಸ್ಟೇಟ್ ಕ್ರಿಶ್ಚಿಯನ್ ಫೈನಾನ್ಸ್ ಕಾರ್ಪೊರೇಷನ್
ಆಂಧ್ರದಲ್ಲಿ ಮತಾಂತರ ಚಟುವಟಿಕೆಗಳನ್ನು ವ್ಯಾಪಕವಾಗಿ ನಡೆಸುವುದಕ್ಕಾಗಿಯೇ ಸರ್ಕಾರವು ಸ್ಟೇಟ್ ಕ್ರಿಶ್ಚಿಯನ್ ಫೈನಾನ್ಸ್ ಕಾರ್ಪೊರೇಷನ್ ಎಂಬ ಸಂಸ್ಥೆಯೊಂದನ್ನು ಅಸ್ತಿತ್ವಕ್ಕೆ ತಂದಿದೆ. ಸರ್ಕಾರ ಈ ಫೈನಾನ್ಸ್ ಕಾರ್ಪೊರೇಷನ್ ಮೂಲಕ ರಾಜ್ಯದಲ್ಲಿ ಚರ್ಚುಗಳ ನಿರ್ಮಾಣಕ್ಕೆಂದೇ ಅಪಾರ ಪ್ರಮಾಣದ ಹಣಕಾಸು ನೆರವು ನೀಡುತ್ತಿದೆ. ಕಳೆದ 2019ರಲ್ಲಿ ಗುಂಟೂರು ಜಿಲ್ಲೆಯ ಚರ್ಚ್‌ವೊಂದರ ನಿರ್ಮಾಣಕ್ಕೆ 15 ಲಕ್ಷ ರೂ. ಬಿಡುಗಡೆಯಾಯಿತು. ಅದೇ ವರ್ಷ ಕಡಪ ಜಿಲ್ಲೆಯ ಚರ್ಚ್ ರಿಪೇರಿ ಕೆಲಸಕ್ಕೆ 30 ಲಕ್ಷ ರೂ. ಹಾಗೂ ವಿಜಯವಾಡದ ಸೈಂಟ್ ಪಾಲ್ಸ್ ಬೆಸಿಲಿಕಾ ಚರ್ಚ್ ನಿರ್ಮಾಣಕ್ಕೆ ಬರೋಬ್ಬರಿ 1 ಕೋಟಿ ರೂ. ಮೊತ್ತವನ್ನು ಸರ್ಕಾರ ಮಂಜೂರು ಮಾಡಿದೆ. ಸಂವಿಧಾನದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಜಗಮೋಹನ್ ರೆಡ್ಡಿ ಹೀಗೆ ಮಾಡುವುದು ಸಂವಿಧಾನ ಹಾಗೂ ಪ್ರಜಾತಂತ್ರ ನೀತಿಗೆ ಬಗೆದ ದ್ರೋಹವಲ್ಲದೆ ಮತ್ತೇನು?
ದಲಿತರು, ಹಿಂದುಳಿದವರೇ ಹೆಚ್ಚಾಗಿರುವ ಹಳ್ಳಿಹಳ್ಳಿಗಳನ್ನೇ ಸಾಮೂಹಿಕ ವಾಗಿ ಕ್ರೈಸ್ತ ಮತಕ್ಕೆ ಮತಾಂತರಿಸಲಾಗುತ್ತಿದೆ. 2015ರಲ್ಲಿ 6 ಲಕ್ಷ ಜನರನ್ನು ಮತಾಂತರಗೊಳಿಸಲಾಗಿದೆ ಎಂದು ಕ್ರೈಸ್ತ ಮತ ಪ್ರಚಾರಕ ಪ್ರವೀಣ್ ಮತ್ತು ಆತನ ‘ಸೈಲಾಂ ಪಾಸ್ಟರ್ ಲೀಗ್’ ಹೇಳಿಕೊಂಡಿದೆ. ಸ್ವಾರಸ್ಯದ ಸಂಗತಿಯೆಂದರೆ ಮತಾಂತರಿತರ ಮೂಲ ಹಸರನ್ನು ಬದಲಿಸುವ ಗೊಡವೆಗೆ ಮತ ಪ್ರಚಾರಕರು ಹೋಗುವುದಿಲ್ಲ. ಸಾರ್ವಜನಿಕವಾಗಿ ಮತಾಂತರಿತರನ್ನು ಮೂಲ ಹಿಂದು ಹೆಸರಿನಿಂದಲೇ ಕರೆಯಲಾಗುತ್ತದೆ. ಚರ್ಚ್‌ಗಳ ರಿಜಿಸ್ಟರ್ ಬುಕ್‌ನಲ್ಲಿ ಮಾತ್ರ ಅವರಿಗೆಲ್ಲ ಬೇರೆಯೇ ಹೆಸರು. ಹಾಗಾಗಿ ಮತಾಂತರ ಭಾರೀ ಪ್ರಮಾಣದಲ್ಲಿ ನಡೆಯುತ್ತಿದೆ ಎಂಬ ಸಂಗತಿ ಪ್ರಚಾರ ಪಡೆಯುವುದೇ ಇಲ್ಲ. ಆದರೆ ಕ್ರೈಸ್ತರ ಜನಸಂಖ್ಯೆ ಮಾತ್ರ ಆಘಾತಕರ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. 2011ರ ಜನಗಣತಿಯ ಪ್ರಕಾರ ಆಂಧ್ರ ಪ್ರದೇಶದಲ್ಲಿದ್ದ ಕ್ರೈಸ್ತರ ಜನಸಂಖ್ಯೆ ಕೇವಲ ಶೇ 1.4ರಷ್ಟಿತ್ತು. ಆದರೆ ಈಗೇನಾದರೂ ಜನಗಣತಿ ನಡೆದರೆ ಕ್ರೈಸ್ತರ ಜನಸಂಖ್ಯೆಯ ಪ್ರಮಾಣ ಶೇ.25ರಷ್ಟು ಏರಿಕೆಯಾಗಬಹುದು ಎಂಬುದು ತಜ್ಞರ ವರದಿ.
ತಿರುಮಲದ ಹುಂಡಿ ಹಣ ಯಾರಿಗೆ?
ಆಂಧ್ರದ ಅತ್ಯಂತ ಶ್ರೀಮಂತ ದೇವಸ್ಥಾನವಾಗಿರುವ ತಿರುಮಲ ತಿರುಪತಿಯಲ್ಲಿ ಭಕ್ತಾದಿಗಳಿಂದ ಸಂಗ್ರಹವಾಗುವ ಅಪಾರ ಪ್ರಮಾಣದ ಕಾಣಿಕೆ ಮೊತ್ತದ ಬಹುತೇಕ ಭಾಗ ವಿನಿಯೋಗವಾಗುವುದು ರಾಜ್ಯಾದ್ಯಂತ ಚರ್ಚ್‌ಗಳ ನಿರ್ಮಾಣ ಅಥವಾ ನವೀಕರಣ ಹಾಗೂ ಮತಾಂತರ ಚಟುವಟಿಕೆಗಳಿಗೆ! ಈ ಅಪಸವ್ಯದ ವಿರುದ್ಧ ಆಂಧ್ರದ ವಿಶ್ವಹಿಂದು ಪರಿಷತ್ ಮತ್ತಿತರ ಹಿಂದು ಸಂಘಟನೆಗಳು ನಿರಂತರವಾಗಿ ಹೋರಾಡುತ್ತಲೇ ಬಂದಿದ್ದರೂ ಕ್ರೈಸ್ತರ ಓಲೈಕೆಯೇ ಮುಖ್ಯ ಅಜೆಂಡಾವಾಗಿರುವ ಆಂಧ್ರದ ಜಗಮೋಹನ್ ಸರ್ಕಾರ ಕ್ಯಾರೇ ಎಂದಿಲ್ಲ.
ಜಗಮೋಹನ್ ರೆಡ್ಡಿ ಸರ್ಕಾರ ಕೈಗೊಳ್ಳುವ ಬಹುತೇಕ ಜನಪರ ಕಲ್ಯಾಣ ಯೋಜನೆಗಳೆಲ್ಲವೂ ಹಿಂದು ವಿರೋಧಿಯಾಗಿವೆ ಎಂಬುದು ಹಗಲಿನಷ್ಟು ಸತ್ಯ. ಹಾಗಾಗಿ ನಿಜವಾದ ಜನಪರ ಯೋಜನೆಗಳೆಲ್ಲವೂ ದಾರಿತಪ್ಪಿ, ಸ್ಥಗಿತಗೊಂಡಿವೆ. ಸರ್ಕಾರವೇ ಹೀಗೆ ಕ್ರೈಸ್ತ ಮತಾಂತರ ಚಟುವಟಿಕೆಗೆ ನೇರ ಕುಮ್ಮಕ್ಕು ನೀಡುತ್ತಾ ಹೋದರೆ ಮುಂದೊಂದು ದಿನ ಅದು ಹಿಂಸಾಚಾರ, ದೊಂಬಿಗೆ ತಿರುಗುವುದರಲ್ಲಿ ಅಚ್ಚರಿಯೇನಿಲ್ಲ ಎಂದು ಸಂಡೇ ಗಾರ್ಡಿಯನ್ ಪತ್ರಿಕೆ ಎಚ್ಚರಿಕೆ ನೀಡಿದೆ.
ಜಗನ್ ಸರ್ಕಾರದ ಇನ್ನೊಂದು ದೇಶವಿರೋಧಿ ಕೃತ್ಯವೆಂದರೆ; ಸಮಾಜಘಾತಕ ಮಾವೋವಾದಿ ನಕ್ಸಲರೊಂದಿಗೆ ಅಪವಿತ್ರ, ಅನೈತಿಕ ಮೈತ್ರಿ. ಕಳೆದ ಚುನಾವಣೆಯಲ್ಲಿ ಮಾವೋವಾದಿ ನಕ್ಸಲರೊಂದಿಗೆ ಮಾಡಿಕೊಂಡ ಅಪವಿತ್ರ ಮೈತ್ರಿಯ ಕಾರಣದಿಂದಾಗಿಯೇ ಜಗನ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು. ಈಗಂತೂ ನಕ್ಸಲ್ ಚಟುವಟಿಕೆಗಳು, ಮುಸ್ಲಿಂ ಉಗ್ರರ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ಆಂಧ್ರ ಪ್ರದೇಶ ಇಂತಹ ಸಮಾಜಘಾತುಕರ ಸುರಕ್ಷಿತ ಅಡಗುದಾಣವೇ ಆಗಿಬಿಟ್ಟಿದೆ.
‘ಟೈಮ್ಸ್‌ನೌ’ ಟಿವಿ ವಾಹಿನಿಯಲ್ಲಿ ಈಚೆಗೆ ನಡೆದ ಒಂದು ಚರ್ಚೆಯ ಸಂದರ್ಭದಲ್ಲಿ ವೈಎಸ್‌ಆರ್‌ಸಿಪಿ ಪಕ್ಷದ ಸಂಸದ ರಘುರಾಮ ಕೃಷ್ಣರಾಜು (ನರಸಾಪುರಂ ಕ್ಷೇತ್ರ) ಅವರೇ ಆಂಧ್ರ ಪ್ರದೇಶದಲ್ಲೀಗ ಕ್ರೈಸ್ತರ ಜನಸಂಖ್ಯೆ ಶೇ.25ಕ್ಕೆ ಏರಿಕೆಯಾಗಿದೆ ಎಂಬ ಸತ್ಯವನ್ನು ಹೊರಗೆಡವಿದ್ದರು. ಆದರೆ, ಈ ಬಗ್ಗೆ ಯಾವ ಮಾಧ್ಯಮಗಳಲ್ಲೂ ವರದಿಯಾಗಲೀ ವಿಶ್ಲೇಷಣೆಯಾಗಲೀ ನಡೆಯಲೇ ಇಲ್ಲ.
ಭಾರತದ ಮೊಟ್ಟಮೊದಲ ದಲಿತ ರಾಷ್ಟ್ರಪತಿಯೆನಿಸಿಕೊಂಡಿದ್ದ ಕೇರಳದ ಕೆ.ಆರ್.ನಾರಾಯಣನ್ ಕೂಡ ಮತಾಂತರಿತ ದಲಿತ ಕ್ರಿಶ್ಚಿಯನ್ ಎಂಬುದು ಕೊನೆವರೆಗೂ ಗುಟ್ಟಾಗಿಯೇ ಉಳಿಯಿತು. ಅವರು ನಿಧನರಾದ ಬಳಿಕ ನಾರಾಯಣನ್‌ರ ಚಿತಾಭಸ್ಮವನ್ನು ದೆಹಲಿಯ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿಟ್ಟು ಸಮಾಧಿ ಮಾಡಿದಾಗಲೇ ಈ ಗುಟ್ಟು ರಟ್ಟಾಗಿದ್ದು! ಅವರು ಹಿಂದುವೇ ಆಗಿದ್ದಿದ್ದರೆ ನಾರಾಯಣನ್‌ರ ಚಿತಾಭಸ್ಮವನ್ನು ಗಂಗಾನದಿಯಲ್ಲೋ ಇನ್ನಾವುದಾದರೂ ನದಿಯಲ್ಲೋ ವಿಸರ್ಜಿಸಬೇಕಿತ್ತು. ಕ್ರಿಶ್ಚಿಯನ್ ರುದ್ರಭೂಮಿಂiಲ್ಲಿ ಸಮಾಧಿ ಮಾಡುವ ಅಗತ್ಯವೇನಿತ್ತು? ಮತಾಂತರಿತ ದಲಿತ ಕ್ರೈಸ್ತರಿಗೂ ಮೀಸಲಾತಿ ಸೌಲಭ್ಯಗಳನ್ನು ಒದಗಿಸಬೇಕೆಂದು ಕ್ರೈಸ್ತ ಧರ್ಮಗುರುಗಳೇ ಈಚೆಗೆ ಒಂದು ಆಂದೋಲನ ಹಮ್ಮಿಕೊಂಡಿರುವುದಕ್ಕೂ ಇದೇ ಹಿನ್ನೆಲೆ.
ಆಂಧ್ರ ಪ್ರದೇಶ ಕ್ರೈಸ್ತ ಬಾಹುಳ್ಯದ ಮತ್ತೊಂದು ನಾಗಾಲ್ಯಾಂಡ್ ಅಥವಾ ಮೇಘಾಲಯ ಆಗಲಿದೆಯೇ? ಈ ಗುಮಾನಿಯೇನಾದರೂ ನಿಜವಾದಲ್ಲಿ ಭಾರತದ ಪ್ರಜಾತಂತ್ರಾತ್ಮಕ ಒಕ್ಕೂಟ ವ್ಯವಸ್ಥೆಗೆ ಗಂಡಾಂತರ ತಪ್ಪಿದ್ದಲ್ಲ.
***
ದು.ಗು.ಲಕ್ಷ್ಮಣರ ಇನ್ನೊಂದು ಲೇಖನ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…