ದಿನಕ್ಕೆ 1000 ಭಕ್ತರಿಗೆ ಮಾತ್ರ ಪ್ರವೇಶ; ತಜ್ಞರ ಸಮಿತಿ ಶಿಫಾರಸು
ರಾಜ್ಯದಿಂದ ಪ್ರತಿವರ್ಷ ತಪ್ಪದೇ ಸ್ವಾಮಿ ಅಯ್ಯಪ್ಪ ಯಾತ್ರೆ ಕೈಗೊಳ್ಳುವ ಭಕ್ತರು ಮಿಸ್ ಮಾಡದೇ ಓದಲೇಬೇಕಾದ ಸುದ್ದಿ ಇದು. ಮುಂಬರುವ ನವೆಂಬರ್ 16ರಿಂದ ಶುರುವಾಗಲಿರುವ ಮಕರವಿಳಕ್ಕು ಹಾಗೂ ಮಂಡಲೋತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು, ಈ ವರ್ಷ ಕೋವಿಡ್-19 ಕಾರಣಕ್ಕೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ.
ಶಬರಿಮಲೆ ಸನ್ನಿಧಾನದ ಹಿಂದಿನ ವರ್ಷದ ಚಿತ್ರಗಳು.
ಬೆಂಗಳೂರು/ತಿರುವನಂತಪುರ: ಎರಡು ತಿಂಗಳ ಕಾಲ ನಡೆಯಲಿರುವ ವಾರ್ಷಿಕ ಮಂಡಲಪೂಜೆ ಹಾಗೂ ಮಕರವಿಳಕ್ಕು ಉತ್ಸವವನ್ನು ನಿರ್ವಿಘ್ನವಾಗಿ ಸಂಪನ್ನಗೊಳಿಸಲು ಟ್ರಾವಂಕೂರ್ ದೇವಾಸ್ವಂ ಮಂಡಳಿ ನಿರ್ಧರಿಸಿದ್ದು,ಕೋವಿಡ್ ಹಿನ್ನೆಲೆಯಲ್ಲಿ ಭಕ್ತರಿಗೆ ವಿಧಿಸಬಹುದಾದ ನಿರ್ಬಂಧಗಳ ಬಗ್ಗೆ ತಜ್ಞರಿಂದ ಕೆಲ ಸಲಹೆಗಳನ್ನು ಸ್ವೀಕರಿಸಿದೆ.
ತಜ್ಞರ ಸಮಿತಿಯು ಬುಧವಾರ ತಿರುವನಂತಪುರದಲ್ಲಿ ಕೇರಳದ ಮುಜರಾಯಿ (ದೇವಾಸ್ವಂ) ಸಚಿವ ಕೆ.ಸುರೇಂದ್ರನ್ ಅವರಿಗೆ ತನ್ನ ವರದಿಯನ್ನು ಸಲ್ಲಿಸಿದ್ದು, ಶಬರಿಮಲೆ ಅಯ್ಯಪ್ಪ ಸ್ವಾಮಿಯವರ ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಕಡ್ಡಾಯವಾಗಿ ಕೋವಿಡ್-19 ನೆಗಟಿವ್ ಪ್ರಮಾಣ ಪತ್ರ ಹೊಂದಿರಬೇಕು ಎಂದು ಶಿಫಾರಸು ಮಾಡಿದೆ.
ಕೋವಿಡ್’ನಿಂದ ರಾಜ್ಯವು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಮಂಡಲೋತ್ಸವದ ಕಾಲದಲ್ಲಿ ಲಕ್ಷಾಂತರ ಭಕ್ತರು ಸನ್ನಿಧಾನಕ್ಕೆ ಬರಲಿದ್ದಾರೆ. ಹೀಗಾಗಿ ಎರಡು ತಿಂಗಳ ಕಾಲ ಕೈಗೊಳ್ಳಬೇಕಾದ ಎಲ್ಲ ಮುನ್ನೆಚ್ಚರಿಕೆಗಳ ಬಗ್ಗೆ ಸಮಿತಿ ಮಹತ್ತ್ವದ ಶಿಫಾರಸುಗಳನ್ನು ಸಮಿತಿ ಮಾಡಿದೆ.
ಸನ್ನಿಧಾನದಲ್ಲೂ ಪರೀಕ್ಷೆ
ಕೋವಿಡ್-19 ನೆಗಟಿವ್ ಪ್ರಮಾಣಪತ್ರದೊಂದಿಗೆ ಸನ್ನಿಧಾನಕ್ಕೆ ಬರುವ ಭಕ್ತರಿಗೆ ಇಲ್ಲಿಯೂ ಹೊಸದಾಗಿ ಪರೀಕ್ಷೆ ಮಾಡಿಸಿಕೊಳ್ಳುವ ಅವಕಾಶ ಇರಬೇಕು. ಅದಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಶಬರಿಮಲೆಯ ಬೇಸ್ ಕ್ಯಾಂಪ್ ನಿಲಕ್ಕಲ್’ನಲ್ಲಿಯೂ ಭಕ್ತರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಹಿರಿಯ ನಾಗರೀಕರು, ಅಂದರೆ 60 ವರ್ಷಕ್ಕಿಂತ ಮೇಲ್ಪಟ್ಟವರು ತಮಗೆ ಯಾವುದೇ ರೀತಿಯ ಗಂಭೀರ ಕಾಯಿಲೆಗಳಿಲ್ಲ ಎಂದು ವೈದ್ಯಕೀಯ ಪ್ರಮಾಣ ಪತ್ರವನ್ನು ಕೂಡ ನೀಡಬೇಕು. ನವೆಂಬರ್ 16ರಿಂದ ದಿನಕ್ಕೆ ಒಂದು ಸಾವಿರ ಭಕ್ತರಿಗೆ ಮಾತ್ರ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಎಂದು ಸಮಿತಿ ಶಿಫಾರಸು ಮಾಡಿದೆ.
ಸರಕಾರ ಹೇಳಿದ್ದೇನು?
ವರದಿಯನ್ನು ಪರಿಶೀಲಿಸಿ ಜಾರಿ ಮಾಡಲಾಗುವುದು. ಸನ್ನಿಧಾನದಲ್ಲಿ ದರ್ಶನ ಮಾಡಲು ಬಯಸುವ ಯಾತ್ರಿಕರು ಮೊದಲು ಕೋವಿಡ್-19 ಜಾಗ್ರತಾ ಪೋರ್ಟಲ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಪ್ರವೇಶ ಕೇಂದ್ರಗಳಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಿದ ನಂತರ ಯಾತ್ರಾರ್ಥಿಗಳನ್ನು ಪರೀಕ್ಷಿಸಬಹುದು. ಜತೆಗೆ, ಪಂಪಾ ನದಿಯಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ಭಕ್ತರು ಸನ್ನಿಧಾನದಲ್ಲಿ ಮತ್ತು ಪಕ್ಕದ ಗಣಪತಿ ದೇವಸ್ಥಾನದ ಬಳಿ ನಿಲ್ಲುವುದನ್ನು ಸಹ ನಿಷೇಧಿಸಲಾಗಿದೆ ಮತ್ತು ಎಲ್ಲಾ ವಸತಿಗೃಹಗಳನ್ನುಮುಚ್ಚಲಾಗಿದೆ. ಭಕ್ತರು ದರ್ಶನ ಮಾಡಿಕೊಂಡು ತಮ್ಮ ಸ್ವಸ್ಥಳಗಳಿಗೆ ವಾಪಸ್ ತೆರಳಬೇಕು” ಎಂದು ಸಚಿವ ಸುರೇಂದ್ರನ್ ಹೇಳಿದ್ದಾರೆ.
ಸಮಿತಿಯ ಶಿಫಾರಸುಗಳನ್ನು ಸರ್ಕಾರ ಜಾರಿ ಮಾಡಲಿದೆ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ಹೇಳಿದ್ದಾರೆ. ಬುಧವಾರ ಸಚಿವ ಸಂಪುಟ ಸಭೆ ಇದ್ದು, ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಜತೆಗೆ ಕೆಲ ಪ್ರಮುಖ ಸಂಗತಿಗಳನ್ನು ಅವರು ಸ್ಫಷ್ಟಪಡಿಸಿದರು
*10 ರಿಂದ 60 ವರ್ಷದೊಳಗಿನ ಯಾತ್ರಾರ್ಥಿಗಳನ್ನು ಮಾತ್ರ ದೇವಾಲಯಕ್ಕೆ ಸೇರಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ದೈಹಿಕವಾಗಿ ದುರ್ಬಲರಾಗಿರುವ ಕಾರಣ ಅವರೆಲ್ಲರೂ ಕೇರಳದ ಕೋವಿಡ್ ನಿಯಮಗಳ ಪ್ರಕಾರ ಜನಸಂದಣಿಯಿಂದ ದೂರವಿರಬೇಕು.
*ಶಬರಿಮಲೆಯಲ್ಲಿ ವಾರ್ಷಿಕ ಉತ್ಸವವು ನವೆಂಬರ್’ನಲ್ಲಿ ಮಧ್ಯದಲ್ಲಿ ನಡೆಯಲಿದ್ದು, ನಂತರ ದೇವಾಲಯವು ಭಕ್ತರಿಗೆ ತೆರೆಯುತ್ತದೆ. ಕೇರಳ ಪೊಲೀಸರು ಮಾಡಿರುವ ಶಬರಿಮಲೆ ವರ್ಚುವಲ್ ಕ್ಯೂ ವ್ಯವಸ್ಥೆಯಿಂದ ಯಾತ್ರಾರ್ಥಿಗಳ ದಟ್ಟಣಿಯನ್ನು ನಿಯಂತ್ರಿಸಲಾಗುವುದು. ಈ ವ್ಯವಸ್ಥೆಯನ್ನು 2011-2012ರ ತೀರ್ಥಯಾತ್ರೆಯಲ್ಲಿ ಪ್ರಾರಂಭಿಸಲಾಯಿತು ಮತ್ತು ಭಕ್ತರಿಗೆ ದರ್ಶನಕ್ಕಾಗಿ ಸ್ಲಾಟ್‌ಗಳನ್ನು ಕಾಯ್ದಿರಿಸಲು ಕೂಡ ಅವಕಾಶ ಮಾಡಿಕೊಡುತ್ತದೆ.
ಭಕ್ತರು ಮುನ್ನೆಚ್ಚರಿಕೆ ವಹಿಸುವುದು ಉತ್ತಮ
ಈ ವರ್ಷ ಶಬರಿಮಲೆ ಯಾತ್ರೆ ಕೈಗೊಳ್ಳಲೇಬೇಕೆಂದಿರುವ ಭಕ್ತರು ಸಮಿತಿ ಮಾಡಿರುವ ಶಿಫಾರಸುಗಳಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಕೋವಿಡ್ ವಿಷಯದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸುವುದು ಉತ್ತಮ. ಹಿರಿಯ ನಾಗರೀಕರು ಈ ವರ್ಷ ಯಾತ್ರೆ ಮಾಡದಿದ್ದರೆ ಉತ್ತಮ ಎಂದು ಕೆಲ ತಜ್ಞರು ಹೇಳಿದ್ದಾರೆ.