ಸ್ಟಾಕ್ಹೋಮ್: ಅತ್ಯಾಚಾರ, ಹೆಣ್ಮಕ್ಕಳ ಮೇಲೆ ದೌರ್ಜನ್ಯದಂಥ ಸುದ್ದಿಗಳೇ ಅಪ್ಪಳಿಸುತ್ತಿದ್ದ ವೇಳೆಯಲ್ಲಿ ಇಡೀ ಜಗತ್ತು ಸಂಭ್ರಮಿಸುವಂಥ ಸುದ್ದಿ ಸ್ವೀಡನ್ ದೇಶದ ಸ್ಟಾಕ್ಹೋಮ್‌ನಿಂದ ಬಂದಿದೆ. ಇಬ್ಬರು ಮಹಿಳಾ ವಿಜ್ಞಾನಿಗಳು 2020ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಜೀನೋಮ್ ಎಡಿಟಿಂಗ್ ವಿಧಾನವನ್ನುಅಭಿವೃದ್ಧಿ ಮಾಡಿದ ಸಾಧನೆಗಾಗಿ ಜರ್ಮನಿಯ ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಅಮೆರಿಕದ ಜೆನಿಫರ್ ಎ.ಡೌಡ್ನಾ ಅವರನ್ನು ರಸಾಯನಶಾಸ್ತ್ರ ನೊಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಈ ವರ್ಷ ಇಬ್ಬರು ಮಹಿಳೆಯರು ರಸಾಯನಶಾಸ್ತ್ರದ ನೊಬೆಲ್ ಹಂಚಿಕೊಂಡಿರುವುದಕ್ಕೆ ಸಹಜವಾಗಿಯೇ ಜಾಗತಿಕವಾಗಿ ಇದೊಂದು ದೊಡ್ಡ ಸುದ್ದಿಯಾಗಿದೆ. ಈ ಇಬ್ಬರ ಪೈಕಿ, ಎಮಾನ್ಯುಯೆಲ್ ಅವರು ಜರ್ಮನಿಯ ಬರ್ಲಿನ್‌ನಲ್ಲಿರುವ ಮ್ಯಾಕ್ಸ್ ಬ್ಲ್ಯಾಂಕ್ ಯೂನಿಟ್ ಫಾರ್ ದಿ ಸೈನ್ಸ್ ಆಫ್ ಪ್ಯಾಥೊಜೆನ್ಸ್‌ನ ವಿಭಾಗದ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೆನಿಫರ್ ಎ.ಡೌಡ್ನಾ ಅವರು ಅಮೆರಿಕದ ಬರ್ಕ್ಲಿಯಲ್ಲಿರುವ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ.
ತಳಿಗುಣ (ಜೀನ್) ತಂತ್ರಜ್ಞಾನದಲ್ಲಿ ಅತ್ಯಂತ ತೀಕ್ಷ್ಣವಾದ ತಂತ್ರಗಳ (ಟೂಲ್ಸ್) ಅನ್ವೇಷಣೆಯನ್ನು ಎಮಾನ್ಯುಯೆಲ್ ಮತ್ತು ಜೆನಿಫರ್ ಮಾಡಿದ್ದು, ತಳಿಗುಣ ಬದಲಾವಣೆಗೆ ಉಪಯೋಗಿಸಲಾಗುವ ಅತಿಸೂಕ್ಷ್ಮ ಕ್ರಿಸ್‌ಪರ್ (CRISPR/Cas9) ಕತ್ತರಿಗಳನ್ನು (ಜೆನೆಟಿಕ್ ಸಿಸರ್ಸ್) ಇವರು ಅಭಿವೃದ್ಧಿಗೊಳಿಸಿದ್ದಾರೆ.
ಈ ನಡುವೆ ಇವರಿಬ್ಬರ ಸಂಶೋಧನೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಜಗತ್ತಿನ ಮೇಲೆ ಇವರ ಸಂಶೋಧನೆ ಬೀರಬಹುದಾದ ಪರಿಣಾಮಗಳ ಬಗ್ಗೆಯೂ ಸಂವಾದ ನಡೆಯುತ್ತಿದೆ. ಇವರು ಸಂಶೋಧಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಸಂಶೋಧಕರು ಸೂಕ್ಷ್ಮ ಜೀವಿಗಳು, ಸಸ್ಯಗಳು ಹಾಗೂ ಪ್ರಾಣಿಗಳ ಡಿಎನ್‌ಎಯನ್ನು ನಿಖರವಾಗಿ ಬದಲಿಸಬಹುದು. ಜತೆಗೆ, ಸಸ್ಯತಳಿಗಳ ಅಭಿವೃದ್ಧಿ ಮಾಡುವುದೂ ಸೇರಿ ಅತ್ಯಂತ ಪರಿಣಾಮಕಾರಿಯಾಗಿ ಮಾರಕ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ. ಹಾಗೆಯೇ, ಅನುವಂಶಿಕ ರೋಗಗಳನ್ನೂ ಗುಣಪಡಿಸಲು ಈ ತಂತ್ರಜ್ಞಾನ ಹೆಚ್ಚು ಪರಿಣಾಮಕಾರಿಯಾಗಿ ನೆರವಾಗುತ್ತದೆ ಎಂದು ಹೇಳಲಾಗಿದೆ.
ಏತನ್ಮಧ್ಯೆ, ನೊಬೆಲ್ ಪುರಸ್ಕಾರ ಸಂದ ಬಗ್ಗೆ ಈ ಇಬ್ಬರು ಸಾಧಕಿಯರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
2009ರಲ್ಲಿ ನಮ್ಮ ದೇಶದವರೇ ಆದ ತಮಿಳುನಾಡು ಮೂಲದವರು, ಅಮೆರಿಕದಲ್ಲಿ ನೆಲೆಸಿರುವ ಡಾ. ವೆಂಕಟರಾಮನ್ ರಾಮಕೃಷ್ಣನ್ ಅವರು ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಅಮೆರಿಕದ ಥಾಮಸ್ ಎ. ಸ್ಟೀಟ್ಜ್ ಹಾಗೂ ಇಸ್ರೇಲ್‌ನ ಆಡ ಯೊನಾತ್ ಅವರೊಂದಿಗೆ ಹಂಚಿಕೊಂಡಿದ್ದರು. ಡಿಎನ್‌ಎ ಒಳನೋಟದ ರಹಸ್ಯವನ್ನು ಹೊರತೆಗೆಯುವ ʼರೈಬೊಸೋಮ್ʼನ ಸಂಶೋಧನೆಗಾಗಿ ಅವರಿಗೆ ನೊಬೆಲ್ ಸಂದಿತ್ತು.