Photo by Oleg Magni from Pexels
ಬೆಂಗಳೂರು: ಜಗತ್ತಿನಲ್ಲಿ ಬಿಲಿಯನ್ಗಟ್ಟಲೆ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಮೆಸೆಂಜರ್ ಆಪ್ಗೆ ಹ್ಯಾಕರ್ಗಳ ಕಾಟ ತಪ್ಪುತ್ತಿಲ್ಲ. ಸರಿಸುಮಾರು 2 ಬಿಲಿಯನ್ಗೂ ಹೆಚ್ಚು ಜನ ತಮ್ಮ ನಿತ್ಯದ ಸಂದೇಶವಾಹಕವಾಗಿ ಈ ಆಪ್ ಅನ್ನೇ ಅವಲಂಬಿಸಿದ್ದಾರೆ.
ವಾಟ್ಸಾಪಿನಲ್ಲಿ ಕಂಪ್ಲೀಟ್ ಸುರಕ್ಷತೆ (ಎಂಡ್ ಟು ಎಂಡ್ ಎನ್ಕ್ರಿಪ್ಷನ್) ಇದೆ ಎಂದು ಆ ಕಂಪನಿ ಹೇಳುತ್ತಿದ್ದರೂ, ಬಳಕೆದಾರರು ಕಳಿಸುವ ಸಂದೇಶಗಳು, ಫೊಟೋಗಳು, ವಿಡಿಯೋಗಳು ಮೂರನೇ ಕಣ್ಣಿಗೆ ಕಾಣುತ್ತಿವೆ ಎಂಬ ಆರೋಪ ನಿನ್ನೆಮೊನ್ನೆಯದಲ್ಲ. ಈ ಆತಂಕದ ನಡುವೆಯೇ ಹ್ಯಾಕರುಗಳು ಕೈಚಳಕ ತೋರುತ್ತಿದ್ದಾರೆಂಬ ಭೀತಿಯೂ ಇದೆ.
ಇಂಥ ಸಂದರ್ಭದಲ್ಲಿ ವಾಟ್ಸಾಪ್ ಸೆಟ್ಟಿಂಗ್ಸ್ನಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ನಮ್ಮ ಡಾಟಾವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು. ಅಷ್ಟೇ ಅಲ್ಲ, ವಾಟ್ಸಾಪ್ ಮೂಲಕ ಹಾದುಹೋಗುವ ಪ್ರತಿಯೊಂದು ಕಂಟೆಂಟ್ (ಟೆಕ್ಸ್ಟ್, ಫೊಟೋ, ವಿಡಿಯೋ ಇತ್ಯಾದಿ) ಬೈ ಡಿಫಾಲ್ಟಾಗಿ ಗೂಗಲ್ ಡ್ರೈವಿನೊಳಕ್ಕೆ ಬ್ಯಾಕಪ್ ಆಗುತ್ತದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ಇದರ ಅರಿವು ಇರುವುದಿಲ್ಲ. ಅದೇ ರೀತಿ ಗೂಗಲ್ ಡ್ರೈವ್ನಲ್ಲಿರುವ ಕಂಟೆಂಟ್ಗೂ ಕಂಪ್ಲೀಟ್ ಸುರಕ್ಷತೆ ಅಂದರೆ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಇರುತ್ತದೆ ಎಂದು ಹೇಳಲಾಗುತ್ತಿದೆಯಾದರೂ ಅದು ಇನ್ನಾರದೋ ಕೈಸೇರುವ ಭಯ ಇದ್ದೇಇದೆ. ಹೀಗಾಗಿ ನಮ್ಮ ಮೊಬೈಲಿನಿಂದ ಅಥವಾ ವಾಟ್ಸಾಪ್ನಿಂದ ಯಾವುದೇ ಕಂಟೆಂಟ್ ಅನ್ನು ಬ್ಯಾಕಪ್ ಮಾಡುವ ಮುನ್ನ ತುಂಬಾ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳುವ ಮಾತು.
ಇದಕ್ಕಾಗಿ ವಾಟ್ಸಾಪ್ ಬಳಕೆದಾರರಾದ ನಾವು ಮಾಡಬೇಕಾದ್ದು ಇಷ್ಟೇ…
ಮೊದಲು ವಾಟ್ಸಾಪ್ ತೆರೆದು ‘ಸೆಟ್ಟಿಂಗ್ಸ್’ ತೆರೆಯಿರಿ. ಆಗ ಮತ್ತೊಂದು ಮೆನು ತೆರೆದುಕೊಂಡು ಅದರಲ್ಲಿ ಬೂದು ಬಣ್ಣದಲ್ಲಿ ಕಾಣುವ ʼಬ್ಯಾಕಪ್ʼ ಮೇಲೆ ಕ್ಲಿಕ್ ಮಾಡಬೇಕು. ಆಗ ಐದು ಆಪ್ಷನ್ಗಳು ತೆರೆದುಕೊಳ್ಳುತ್ತವೆ. ಅದರಲ್ಲಿ ‘never’ ಇಲ್ಲವೇ ‘only when i tap backup’ ಅಪ್ಷನ್ಗಳನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು. ಹೀಗೆ ಈ ಎರಡು ಆಪ್ಷನ್ಗಳನ್ನು ಆಯ್ಕೆ ಮಾಡಿಕೊಂಡು ಯಾವುದಾದರೂ ಒಂದನ್ನು ಕ್ಲಿಕ್ ಮಾಡಿದರೆ ತದನಂತರ ಬ್ಯಾಕಪ್ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತವಾಗುತ್ತದೆ. ಹಾಗೆಯೇ ನಮ್ಮ ವಾಟ್ಸಾಪ್ ನಲ್ಲಿರುವ ಡಾಟಾ ಕೂಡ ಗೂಗಲ್ಗೆ ಬ್ಯಾಕಪ್ ಆಗುವುದಿಲ್ಲ. ಹ್ಯಾಕರ್ಗಳ ಹಾವಳಿಯಿಂದ ಪಾರಾಗಲು ಬ್ಯಾಕಪ್ ಅವಲಂಬನೆ ಬಿಟ್ಟರೆ ಕ್ಷೇಮ.
ವಾಟ್ಸಾಪ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಭಾರತವು ಸೇರಿದಂತೆ ಜಗತ್ತಿನಾದ್ಯಂತ 2021ರ ಹೊತ್ತಿಗೆ ಜಗತ್ತಿನಾದ್ಯಂತ ವಾಟ್ಸಾಪ್ ಬಳಕೆದಾರರ ಪ್ರಮಾಣ 2.87 ಬಿಲಿಯನ್ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಏಷ್ಯಾ ಖಂಡದಲ್ಲಂತೂ ಭಾರತದಲ್ಲಿಯೇ ವಾಟ್ಸಾಪ್ಗೆ ಅತಿಹೆಚ್ಚು ಗ್ರಾಹಕರಿದ್ದಾರೆ.