lead photo @ckphotography9
ಬೆಂಗಳೂರು: ಕಳೆದ ಉಪ ಚುನಾವಣೆ ಸೇರಿ ಹಿಂದೆ ನಡೆದಿದ್ದ ಎಲ್ಲ ಚುನಾವಣೆಗಳಲ್ಲಿ ಕನ್ನಡ ಸಿನಿಮಾ ನಟ-ನಟಿಯರಿಗೆ ರತ್ನಗಂಬಳಿ ಹಾಸಿ ಪ್ರಚಾರ ಮಾಡಿಸಿಕೊಂಡಿದ್ದ ರಾಜ್ಯ ಎಲ್ಲ ರಾಜಕೀಯ ಪಕ್ಷಗಳು ಈ ಉಪ ಚುನಾವಣೆಯಲ್ಲಿ ವರಸೆ ಬದಲಿಸಿವೆ.
ಸಿನಿಮಾ ತಾರೆಯರು ಮತ್ತು ರಾಜಕೀಯ ನಾಯಕರ ಸಂಬಂಧ ಗುಟ್ಟಿನ ವಿಷಯವೇನಲ್ಲ. ಆದರೆ, ಅದು ಚುನಾವಣಾ ಅಖಾಡದಲ್ಲೂ ಇದೀಗ ಸದ್ದು ಮಾಡುತ್ತಿದೆ. ಈಗಾಗಲೇ ಎಲ್ಲ ಪಕ್ಷಗಳಿಗೆ ಪ್ರತಿಷ್ಠೆಯಾಗಿರುವ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಡ್ರಗ್ಸ್ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿತರಾಗಿರುವ ಹಾಗೂ ತೀವ್ರ ವಿಚಾರಣೆಗೆ ಒಳಪಡುತ್ತಿರುವ ತಾರೆಯರ ರಾಜಕೀಯ ನಂಟಿನ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಡ್ರಗ್ಸ್ ಕೇಸ್ ಎಲೆಕ್ಷನ್ ಮೇಲೆ ಪರಿಣಾಮ ಬೀರುತ್ತಾ? ಇಲ್ಲವಾ? ಎಂಬುದನ್ನು ಕಾದು ನೋಡಬೇಕಿದೆ.
ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಆತಂಕದಲ್ಲಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಈ ಚುನಾವಣೆಯಲ್ಲಿ ಸಿನಿಮಾ ತಾರೆಯರಿಂದ ಸಂಪೂರ್ಣ ದೂರ ಇರಲು ನಿರ್ಧರಿಸಿವೆ ಎಂದು ಗೊತ್ತಾಗಿದೆ. ಕಳೆದ ಉಪ ಚುನಾವಣೆಯಲ್ಲಿ ಸಾಕಷ್ಟು ತಾರೆಯರನ್ನು ಕರೆಸಿ ಭರ್ಜರಿ ಪ್ರಚಾರ ಮಾಡಿಸಿದ್ದ ಬಿಜೆಪಿಯಂತೂ ನಟ-ನಟಿಯರ ಗೊಡವೆಯೇ ಬೇಡ ಎನ್ನುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಪರ ನಟಿಯರಾದ ರಾಗಿಣಿ, ಸಂಜನಾ, ದಿಗಂತ್, ಐಂದ್ರಿತಾ ರೈ, ಪ್ರಜ್ವಲ್ ದೇವರಾಜ್, ಹರಿಪ್ರಿಯಾ ಮುಂತಾದವರು ಪ್ರಚಾರ ನಡೆಸಿದ್ದರು. ಮುಖ್ಯವಾಗಿ ಚಿಕ್ಕಬಳ್ಳಾಪುರ, ಹೊಸಕೋಟೆ ಮತ್ತಿತರ ಕಡೆ, ಅಂದರೆ ಅಭ್ಯರ್ಥಿಗಳು ಆಹ್ವಾನಿಸಿದ ಕಡೆಗೆಲ್ಲ ಇವರು ಹೋಗಿಬಂದಿದ್ದರು. ಬಹುಶಃ ಡ್ರಗ್ಸ್ ಕೇಸ್ ಇಲ್ಲದಿದ್ದರೆ ಇವರೆಲ್ಲರೂ ಈ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದರು. ಆದರೆ, ಪ್ರಕರಣ ಧುತ್ತೆಂದು ಮೇಲೆದ್ದು ಕೂತ ಕಾರಣಕ್ಕೆ ಪಕ್ಷವೇ ಇವರನ್ನು ದೂರ ಇಟ್ಟಿದೆ ಎಂದು ಆ ಮೂಲಗಳು ಹೇಳುವ ಮಾತು.
ಇನ್ನೊಂದೆಡೆ ಕೋವಿಡ್ ವಿಜೃಂಭಿಸುತ್ತಿರುವ ಹೊತ್ತಿನಲ್ಲಿ ತಾರಾ ಪ್ರಚಾರಕರನ್ನು ಕಡಿಮೆ ಮಾಡುವಂತೆ ಎಲ್ಲ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚಿಸಿದೆ. ಅದರಂತೆ ಪಕ್ಷದ ನಾಯಕರಷ್ಟೇ ಪ್ರಚಾರ ಮಾಡಲಿದ್ದಾರೆ ಎಂದು ಜೆಡಿಎಸ್ ನಾಯಕ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಾರೆ.
ಎಚ್.ಡಿ. ಕುಮಾರಸ್ವಾಮಿ
“ನಮ್ಮ ಪಕ್ಷಕ್ಕೆ ಸಿಲೆಬ್ರಿಟಿಗಳು ಬೇಕಾಗಿಲ್ಲ. ನಮ್ಮ ಕಾರ್ಯಕರ್ತರೇ ನಮ್ಮ ಸಿಲೆಬ್ರಿಟಿಗಳು. ಅವರೇ ಪಕ್ಷವನ್ನು ಗೆಲ್ಲಿಸುತ್ತಾರೆ, ಮುನ್ನಡೆಸುತ್ತಾರೆ ಕೂಡ. ಸ್ಟಾರ್‌ಗಳಿಗೆ ಹಣ ಕೊಟ್ಟು ಕರೆತಂದು ಪ್ರಚಾರ ಮಾಡಿಸಿಕೊಳ್ಳುವ ಶಕ್ತಿ ನಮ್ಮ ಪಕ್ಷಕ್ಕಿಲ್ಲ” ಎನ್ನುತ್ತಾರೆ ಎಚ್‌ಡಿಕೆ. ಅವರು ಸಿಕೆನ್ಯೂಸ್ ನೌ ಜತೆ ಮಾತನಾಡಿದರು.
ಸ್ಟಾರ್‌ಗಳ ಪ್ರಭಾವ ಇರುತ್ತಾ?
ಇರುತ್ತದೆ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಹಿರಿಯ ಪತ್ರಕರ್ತ ಎಂ. ಕೃಷ್ಣಪ್ಪ. ಅವರು ಹೇಳಿದ್ದಿಷ್ಟು; “ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಈಗಿನ ವೈದ್ಯಕೀಯ ಸಚಿವ ಡಾ. ಸುಧಾಕರ್ ಪರವಾಗಿ ಅನೇಕ ನಟ-ನಟಿಯರು ಬಂದು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಅವರು ಬಂದು ಹೋಗಿದ್ದರಿಂದ ಸಿನಿಮಾ ಒಲವು ಇರುವ ಯುವಜನರ ಮೇಲೆ ಕೊಂಚ ಪ್ರಭಾವ ಬೀರಿದ್ದು ಹೌದು. ಅದರಲ್ಲೂ ತೆಲುಗಿನ ಹಾಸ್ಯನಟ ಬ್ರಹ್ಮಾನಂದಂ ಪ್ರಚಾರ ಮಾಡಿದ್ದು ಅವರಿಗೆ ಪ್ಲಸ್ ಆಯಿತು” ಎನ್ನುವುದು ಅವರ ಮಾತು.
ಸ್ಟಾರ್‌ಗಳು ಯಾಕೆ ಪ್ರಚಾರಕ್ಕೆ ಬರ್ತಾರೆ?
“ಕೆಲ ನಟ-ನಟಿಯರಿಗೆ ರಾಜಕೀಯ ಪಕ್ಷಗಳ ಮೇಲೆ ಒಲವಿರುತ್ತದೆ. ಆ ಕಾರಣಕ್ಕಾಗಿ ಉಚಿತವಾಗಿಯೇ ಬಂದು ಪ್ರಚಾರ ಮಾಡುತ್ತಾರೆ. ಇನ್ನು ಕೆಲವರು ಅಭ್ಯರ್ಥಿಯಿಂದ ಹಣ ಪಡೆದು ಪ್ರಚಾರಕ್ಕೆ ಬರುತ್ತಾರೆ, ಇನ್ನು ಕೆಲವರು ಏನಾದರೂ ಫೇವರ್ ಮಾಡಿಸಿಕೊಳ್ಳುವ ಉದ್ದೇಶದಿಂದ ಮುಂದಾಲೋಚನೆ ಇಟ್ಟುಕೊಂಡು ಬಂದು ಕ್ಯಾಂಪೇನ್ ಮಾಡುತ್ತಾರೆ. ಆದರೆ ಎಲ್ಲರೂ ಹಣ ಪಡೆದುಕೊಂಡೇ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಲಾಗದು. ಈ ಬಾರಿ ಶಿರಾಕ್ಕಿಂತ ರಾಜರಾಜೇಶ್ವರಿ ನಗರದಲ್ಲಿ ತಾರೆಯರು ಪ್ರಚಾರ ಮಾಡುವ ನಿರೀಕ್ಷೆ ಇತ್ತು. ಕಾಂಗ್ರೆಸ್ ಇರಬಹುದು ಅಥವಾ ಬಿಜೆಪಿ ಇರಬಹುದು ಎರಡೂ ಪಕ್ಷಗಳಿಗೆ ಗೆಲ್ಲಲೇಬೇಕಾದ ಕ್ಷೇತ್ರಗಳಿವು. ಮೇಲಾಗಿ ಶಿರಾವನ್ನು ಉಳಿಸಿಕೊಳ್ಳಲೇಬೇಕಾದ ಒತ್ತಡದಲ್ಲಿ ಜೆಡಿಎಸ್ ಇದೆ. ಹೀಗಾಗಿ ಕೊನೆಕ್ಷಣದಲ್ಲಾದರೂ ಕೆಲ ಸ್ಟಾರ್‌ಗಳು ಪ್ರಚಾರಕ್ಕೆ ಬರಬಹುದು. ಡ್ರಗ್ ಕೇಸಿನಲ್ಲಿ ಸಿಲುಕಿಕೊಂಡಿರುವ ತಾರೆಯರು ಬಿಟ್ಟು ಪಕ್ಷಗಳ ಜತೆ ಗುರುತಿಸಿಕೊಂಡಿರುವ ತಾರೆಯರು ಪ್ರಚಾರ ಮಾಡಲಿದ್ದಾರೆ” ಎನ್ನುತ್ತಾರೆ ಬಿಜೆಪಿ ನಾಯಕರೊಬ್ಬರು.
“ಈಗಾಗಲೇ ಪಕ್ಷದ ಜತೆ ಗುರುತಿಸಿಕೊಂಡಿರುವ ಕೆಲ ತಾರೆಯರು ನಾಯಕರಾಗಿ ಬೆಳೆದಿದ್ದಾರೆ. ಉದಾಹರಣೆಗೆ, ತಾರಾ ಅವರು ಮೇಲ್ಮನೆ ಸದಸ್ಯರಾಗಿದ್ದರು. ಅವರು ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಇನ್ನು ಶ್ರುತಿ ಅವರೂ ಇದ್ದಾರೆ. ಉಳಿದಂತೆ ಮಾಳವಿಕಾ ಅವಿನಾಶ್ ಕೂಡ ಪ್ರಚಾರಕ್ಕೆ ಬರಲಿದ್ದಾರೆ. ಮೂಲತಃ ತುಮಕೂರು ಜಿಲ್ಲೆಯವರೇ ಆದ ಹಿರಿಯ ನಟ ಜಗ್ಗೇಶ್ ಅವರು ಶಿರಾ ಜತೆಗೆ ರಾಜರಾಜೇಶ್ವರಿ ನಗರದಲ್ಲೂ ಪ್ರಚಾರ ಮಾಡಲಿದ್ದಾರೆ. ಕೊನೆಗೆ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಸುನೀಲ್ ಪುರಾಣಿಕ್ ಕೂಡ ಒಂದಿಷ್ಟು ಕಿರುತೆರೆ ಕಲಾವಿದರಿಂದ ಪ್ರಚಾರ ಮಾಡಿಸಬಹುದು. ಒಂದು ವೇಳೆ ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಅವರಿಗೇ ಟಿಕೆಟ್ ಕೊಟ್ಟರೆ ದೊಡ್ಡ ಪ್ರಮಾಣದಲ್ಲಿ ತಾರಾ ದಂಡನ್ನೇ ಪ್ರಚಾರಕ್ಕೆ ಇಳಿಸಲಿದ್ದಾರೆ. ಅವರು ಮೂಲತಃ ಚಿತ್ರ ನಿರ್ಮಾಪಕರು. ಮುಖ್ಯವಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಒಂದು ಕಾಲದ ಹೀರೋ. ಅವರು ಕೂಡ ಪ್ರಚಾರಕ್ಕೆ ಬರಲಿದ್ದಾರೆ” ಎಂದು ಅವರು ಹೇಳುತ್ತಾರೆ.