1977ರಲ್ಲಿ ತೆಗೆದಿರುವ ಲೂಯಿಸ್ ಗ್ಲುಕ್ಸ್ ಅವರ ಚಿತ್ರ./ courtesy: wikipidia
ಸ್ಟಾಕ್ಹೋಮ್: ಇವತ್ತು ಕೂಡ ಸ್ವೀಡನ್ ದೇಶದ ಸ್ಟಾಕ್ಹೋಮ್‌ನಿಂದ ಒಳ್ಳೆಯ ಸುದ್ದಿಯೇ ಬಂದಿದೆ. ನಿನ್ನೆ (ಬುಧವಾರ) ಇಬ್ಬರು ಮಹಿಳೆಯರು ರಾಸಾಯನಿಕ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡ ಬೆನ್ನಲ್ಲೇ ಅಮೆರಿಕಕ್ಕೆ ಸೇರಿದ ಭಾರತೀಯ ಸಾಹಿತ್ಯಾಸಕ್ತರಿಗೆ ಕಡಿಮೆ ಪರಿಚಯವಿರುವ ಕವಯತ್ರಿ ಲೂಯೀಸ್ ಗ್ಲುಕ್ಸ್ ಅವರು ಪ್ರತಿಷ್ಠಿತ ಸಾಹಿತ್ಯ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
ಗುರುವಾರ ಸ್ಟಾಕ್ಹೋಮ್ ನಲ್ಲಿರುವ ಸ್ವಿಡಿಷ್ ಅಕಾಡೆಮಿ ಈ ಪ್ರಕಟಣೆ ಮಾಡಿದೆ. 2020ನೇ ಸಾಲಿನ ನೊಬೆಲ್ ಪ್ರಶಸ್ತಿ ಲೂಯೀಸ್ ಗ್ಲುಕ್ಸ್ ಅವರಿಗೆ ಸಂದಿದ್ದು, ಪ್ರಶಸ್ತಿಯು 10 ದಶಲಕ್ಷ ಸ್ವೀಡಿಷ್ ಕ್ರೋನಾ; ಅಂದರೆ 121.12 ಮಿನಿಯನ್ ಡಾಲರ್‌ನಷ್ಟು ನಗದು ಹಾಗೂ ಮೆಡಲ್ ಅನ್ನು ಒಳಗೊಂಡಿದೆ ಎಂದು ಅದು ತಿಳಿಸಿದೆ.
“ಪ್ರಸಕ್ತ ವರ್ಷದ ಸಾಹಿತ್ಯ ವಿಭಾಗದ ನೊಬೆಲ್ ಪುರಸ್ಕಾರವನ್ನು ಅಮೆರಿಕದ ಕವಯತ್ರಿ ಲೂಯಿಸ್ ಗ್ಲುಕ್ಸ್ ಅವರಿಗೆ ಘೋಷಿಸಲಾಗಿದ್ದು, “ಅವರ ನಿಖರ, ಸ್ಪಷ್ಟವಾದ, ನಿಸ್ಸಂದಿಗ್ಧವಾದ ಕಾವ್ಯಾತ್ಮಕ ದನಿ ಹಾಗೂ ಕಠಿಣತೆಯು ಅವರ ವೈಯಕ್ತಿಕ ಅಸ್ತಿತ್ವವನ್ನು ಸಾರ್ವತ್ರಿಕರಣಗೊಳಿಸಿದೆ. ಇದುವೇ ಅವರ ಕಾವ್ಯದಲ್ಲಿನ ನಿಜವಾದ ಸೌಂದರ್ಯ” ಎಂಬುದಾಗಿ ಪ್ರಶಸ್ತಿ ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ.
1943 ಏಪ್ರಿಲ್ 22ರಂದು ಜನಿಸಿದ ಗ್ಲುಕ್ಸ್ ಅವರು, ಅಮೆರಿಕದ ಸಮಕಾಲೀನ ಕಾವ್ಯಕಾಲದ ಬಹಮುಖ್ಯ ಕವಯತ್ರಿ. ಅಮೆರಿಕದಲ್ಲಿ ಅವರ ಕಾವ್ಯಕ್ಕೆ ಅಪಾರ ಓದುಗ ಬಳಗವಿದೆಯಲ್ಲದೆ, ನೊಬೆಲ್‌ಗೂ ಮೊದಲು ಅನೇಕ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.
ಹತ್ತುಹಲವು ಸವಾಲುಗಳನ್ನು ಎದುರಿಸುತ್ತಲೇ ಬೆಳೆದ ಅವರು, ಪ್ರೌಢಶಿಕ್ಷಣದ ಹಂತದಲ್ಲಿ ಇರುವಾಗಲೇ ಅನೋರೆಕ್ಸಿಯಾ ನರ್ವೋಸಾ (ಹಸಿವಿಲ್ಲದಿರುವಿಕೆ) ಕಾಯಿಲೆಯಿಂದ ಬಳಲುತ್ತಿದ್ದರು. ಹೀಗೆ ತಮ್ಮ ಅನಾರೋಗ್ಯವನ್ನೇ ಮೆಟ್ಟಿ ನಿಂತ ಗ್ಲುಕ್ಸ್ ಅವರು, ಪದವಿ ವ್ಯಾಸಂಗದ ವೇಳೆಯಲ್ಲೂ ಸಮಸ್ಯೆಗೆ ಸಿಲುಕಿದ್ದರು. ಹೀಗಿದ್ದರೂ ಕಾವ್ಯದ ಮೇಲಿನ ಅವರ ಉತ್ಕಟತೆಯೇ ಇಡೀ ಅಮೆರಿಕದಲ್ಲಿ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಬಳಿಕ ಕಾವ್ಯವನ್ನೇ ಕಾವ್ಯಾಸಕ್ತರಿಗೆ ಬೋಧಿಸುತ್ತಾ ಹೋದ ಅವರು ತಮ್ಮ ಅಭಿವ್ಯಕ್ತಿಯ ತುಂಬಾ ಕಾವ್ಯವನ್ನಷ್ಟೇ ತುಂಬಿಕೊಂಡರು. ಅದುವೇ ಇವತ್ತು ಅವರನ್ನು ನೊಬೆಲ್‌ವರೆಗೂ ಕರೆತಂದು ನಿಲ್ಲಿಸಿದೆ.
ಇದುವರೆಗೂ ಗ್ಲುಕ್ ಅವರು ಹನ್ನೆರಡು ಕಾವ್ಯಗುಚ್ಛಗಳನ್ನು ಪ್ರಕಟಿಸಿದ್ದಾರೆ. ಕಾವ್ಯದ ಬಗ್ಗೆ ಅವರು ಬರೆದಿರುವ ಅನೇಕ ಪ್ರಬಂಧಗಳು ಪಾಶ್ಚಾತ್ಯ ಸಾಹಿತ್ಯಾಸಕ್ತರ ಗಮನ ಸೆಳೆದಿವೆ.
“ಗ್ಲುಕ್ ಅವರ ಕಾವ್ಯವನ್ನು ಓದುತ್ತಿದ್ದರೆ ಬೆಳದಿಂಗಳ ಮುಂದಿನ ನವಿಲುಕಿನ್ನರಿ ಹೆಜ್ಜೆನಾದದಂತೆ, ಹಾಯಾಗಿ ಬೀಸುವ ಗಾಳಿಗೆ ಹೃದಯವನ್ನೊಡ್ಡಿ ನಿಂತಂತೆ ಭಾಸವಾಗುತ್ತದೆ. ಅದರ ಜತೆಗೆ, ವಾಸ್ತವಗಳ ಅಚ್ಚರಿಗಳು, ಬಯಕೆಗಳ ಉತ್ಕಟ ವಿಹಾರ, ಪ್ರಕೃತಿ ವಿಜೃಂಭಣೆಯ ಅನೇಕ ಸಂಗತಿಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ” ಎಂದು ವಿಮರ್ಶಕರು ಬರೆದಿದ್ದಾರೆ.
ಕುಟುಂಬದ ಹಿನ್ನೆಲೆಯಲ್ಲಿ ದೇಶವನ್ನು ನೋಡಿದ ಕವಯತ್ರಿ
ಲೂಯೀಸ್ ಗ್ಲುಕ್ ಅವರಿಗೆ ಈ ವರ್ಷದ ನೊಬೆಲ್ ಸಂದ ಬಗ್ಗೆ ಕನ್ನಡದ ಹೆಸರಾಂತ ಕಥೆಗಾರ ಎಸ್.ದಿವಾಕರ್ ಅವರು ಹೇಳಿದ್ದಿಷ್ಟು;
“ಆಧುನಿಕ ಅಮೆರಿಕ ಸಾಹಿತ್ಯದಲ್ಲಿ ಗ್ಲುಕ್ ಅವರದ್ದು ಬಹದೊಡ್ಡ ಹೆಸರು. ನಾನು ಅಮೆರಿಕ ಕಾನ್ಸುಲೇಟ್‌ನಲ್ಲಿ ಕೆಲಸ ಮಾಡುವಾಗ ಅವರ ಕಾವ್ಯವನ್ನು ಓದಿಕೊಂಡಿದ್ದೆ. ಕೌಟುಂಬಿಕ ಹಿನ್ನೆಲೆಯೊಳಗೆ ದೇಶವನ್ನು ತಮ್ಮ ಕಾವ್ಯದ ಮೂಲಕ ಅವರು ನೋಡುತ್ತಿದ್ದರು. ಇದು ಬಹಳ ವಿಶೇಷ ಎನ್ನಿಸಿತು ನನಗೆ. ಅದು ನಮ್ಮ ದೇಶದ ಪರಿಕಲ್ಪನೆಯ ವಸುಧೈವ ಕುಟುಂಬಕಂ ಎನ್ನುವ ಹಾಗೆ. ಹಾಗಿದ್ದರೆ ಪರವಾಗಿಲ್ಲ, ಕೆಲವೊಮ್ಮೆ ಕೌಟುಂಬಿಕವಾಗಿ ನಡೆಯುವ ದುರಂತಗಳ ಹಿನ್ನೆಲೆಯಲ್ಲಿ ದೇಶವನ್ನೂ ನೋಡುವುದು ಆಗುತ್ತದೆ. ಹಾಗೆ ಆಗಬಾರದು. ಆದರೆ ಅವರ ಕಾವ್ಯಕ್ಕೆ ಅಮೆರಿಕದಲ್ಲಿ ಉನ್ನತ ಸ್ಥಾನವಿದೆ. ಇನ್ನು, ಈ ವರ್ಷದ ಸಾಹಿತ್ಯದ ನೊಬೆಲ್ ಆಯ್ಕೆ ಅಚ್ಚರಿ ತಂದಿದೆ ನನಗೆ. ಅವರ ಆಯ್ಕೆ ನಿಜಕ್ಕೂ ಅನಿರೀಕ್ಷಿತ.”
photo courtesy: S Diwakar facebook page
ದಿವಾಕರ್ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡಿದರು.
107 ವರ್ಷಗಳ ಹಿಂದೆ; ಅಂದರೆ 1913ರಲ್ಲಿ ಭಾರತದ ರವೀಂದ್ರನಾಥ ಟ್ಯಾಗೋರ್ ಅವರ ʼಗೀತಾಂಜಲಿʼ ಕಾವ್ಯಗುಚ್ಛಕ್ಕೆ ನೊಬೆಲ್ ಪ್ರಶಸ್ತಿ ಸಂದಿತ್ತು.
ಕೆಳಗಿನ ಸುದ್ದಿಯನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…