Photo: parashuram (in left) and anil chingari (in right)
good news
ಬಾಗೇಪಲ್ಲಿ: ಇದಕ್ಕೆ ಮನಸ್ಸಿದ್ದರೆ ಮಾರ್ಗ ಎನ್ನಬಹುದು ಅಥವಾ ಕರ್ತವ್ಯದ ಮೇಲಿನ ಪ್ರೀತಿಯೂ ಎನ್ನಬಹುದು. ಏನೇ ಅಂದರೂ ಈ ಇಬ್ಬರು ಯುವ ಪವರ್‌ಮನ್‌ಗಳ ಕರ್ತವ್ಯ ಪ್ರಜ್ಞೆಗೆ ಪ್ರತಿಯೊಬ್ಬರೂ ಹ್ಯಾಟ್ಸಾಪ್ ಹೇಳಲೇಬೇಕು.
ಎಲ್ಲಿ ನೋಡಿದರೂ ಈಗ ವರ್ಕ್ ಫ್ರಮ್ ಹೋಮ್, ಮಕ್ಕಳಿಗೆ ಅನ್‌ಲೈನ್ ಕ್ಲಾಸುಗಳು ಕೂಡ. ಕೋವಿಡ್ ಕಾರಣದಿಂದ ಮನೆಗಳೇ ಕಚೇರಿಗಳಾಗಿ ಮತ್ತು ಶಾಲೆ-ಕಾಲೇಜುಗಳಾಗಿ ಬದಲಾಗಿಬಿಟ್ಟಿವೆ. ಬೆಂಗಳೂರಿನಂಥ ಮಹಾನಗರದಿಂದ ಮೊದಲುಗೊಂಡು ಬಾಗೇಪಲ್ಲಿಯಂಥ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನವರೆಗೂ ಎಲ್ಲೆಲ್ಲೂ ಇದೇ ವ್ಯವಸ್ಥೆ ಮಾಮೂಲಿನಂತೆ ಆಗಿಬಿಟ್ಟಿದೆ. ಅನೇಕರು ಮನೆಗಳಲ್ಲಿಯೇ ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ಮುಂದೆ ಕೂತು ಯಂತ್ರಗಳಂತೆ ಕೆಲಸ ಮಾಡುತ್ತಿದ್ದಾರೆ. ಈ ವ್ಯವಸ್ಥೆ ಕೊಂಚವೂ ಹಳಿತಪ್ಪದಂತೆ ನಡೆಯಬೇಕಾದರೆ ಅದಕ್ಕೆ ಬೇಕಾದ ಮುಖ್ಯ ಇಂಧನವೆಂದರೆ ವಿದ್ಯುತ್. ಅದು ವ್ಯತ್ಯಯವಾಗದಂತೆ ನೋಡಿಕೊಳ್ಳುವ ಕಾಯಕದಲ್ಲಿ ಈ ಯುವಕರಿಬ್ಬರೂ ತಲ್ಲೀನರಾಗಿದ್ದಾರೆ.
ಪೂರಕ ಮಾಹಿತಿ ಮತ್ತು ಚಿತ್ರಗಳು: ಡಿ.ಎನ್.ಕೃಷ್ಣಾರೆಡ್ಡಿ
***
ಏನಿದು ಕಥೆ?
ಇವರಿಬ್ಬರ ಹೆಸರು ಅನಿಲ್ ಚಿಂಗಾರಿ ಮತ್ತು ಪರಶುರಾಮ್. ಅನಿಲ್ ಮೂಲತಃ ಕಲ್ಬುರ್ಗಿಯವರು ಮತ್ತು ಪರಶುರಾಮ್ ದೂರದ ಬೆಳಗಾವಿಯವರು. ಬೆಸ್ಕಾಂನಲ್ಲಿ ಪವರ್‌ಮನ್‌ಗಳಾಗಿ ಕೆಲಸ ಮಾಡುತ್ತಿರುವ ಇವರಿಬ್ಬರೂ ಸಹೋದ್ಯೋಗಿಗಳು ಮಾತ್ರವಲ್ಲದೆ ಗೆಳೆಯರು ಕೂಡ. ಈಗ ಬಾಗೇಪಲ್ಲಿ ಪಟ್ಟಣದಲ್ಲಿ ಬೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗುರುವಾರ ಬೆಳಗ್ಗೆ ಬಾಗೇಪಲ್ಲಿ ಪಟ್ಟಣದ 9ನೇ ವಾರ್ಡ್‌ನಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕರು ಬೆಸ್ಕಾಂ ಕಚೇರಿಗೆ ಕರೆ ಮಾಡಿ ದೂರು ನೀಡಿದ್ದರು. ಒಂದು ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತವಾದರೆ ಗ್ರಾಹಕ ಸೇವಾ ಕೇಂದ್ರಕ್ಕೆ ಅದೆಷ್ಟು ದೂರುಗಳು ಬರುತ್ತವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆವತ್ತು ಕರ್ತವ್ಯದಲ್ಲಿದ್ದ ಅನಿಲ್ ಮತ್ತು ಪರಶುರಾಮ್ ತಕ್ಷಣಕ್ಕೆ ಈ ದೂರಿಗೆ ಸ್ಪಂಧಿಸಿದರಲ್ಲದೆ, ಸ್ಥಳಕ್ಕೆ ಧಾವಿಸಿದಾಗ ವಿದ್ಯುತ್ ಕಂಬದಲ್ಲಿ ಸಮಸ್ಯೆ ಇರುವುದು ಅವರಿಗೆ ಗೊತ್ತಾಯಿತು. ತಕ್ಷಣಕ್ಕೆ ಕಂಬ ಹತ್ತಿ ಸಮಸ್ಯೆ ಸರಿ ಮಾಡಬೇಕಿತ್ತು. ಅಕ್ಕಪಕ್ಕದ ಮನೆಗಳಲ್ಲಿ ಏಣಿ ಸಿಗಲಿಲ್ಲ. ಕಚೇರಿಯಲ್ಲಿದ್ದ ಏಣೀವಾಹನ ನಿರ್ವಹಣೆಯಲ್ಲಿತ್ತು. ಈ ಕಾರಣಕ್ಕೆ ಕಂಬದ ಪಕ್ಕದ ಮನೆಯ ಕಾಂಪೌಂಡ್ ಹತ್ತಿದ ಅನಿಲ್, ಸ್ವತಃ ತಾವೇ ಪರಶುರಾಮ್‌ಗೆ ಏಣಿಯಾದರು. ಅನಿಲ್ ಕಾಂಪೌಂಡ್ ಮೇಲೆ ನಿಂತರೆ, ಅವರ ಮೇಲೆ ಹತ್ತಿದ ಪರಶುರಾಮ್ ಕಂಬದಲ್ಲಿ ಆಗಿದ್ದ ತಾಂತ್ರಿಕ ಸಮಸ್ಯೆಯನ್ನು ಸರಿ ಮಾಡಿದರು. ಹೀಗೆ ಪವರ್‌ಮನ್‌ಗಳಿಬ್ಬರೂ ತಮ್ಮ ವೃತ್ತಿಬದ್ಧತೆ ಮೆರೆದದ್ದನ್ನು ಕಂಡು ಪಟ್ಟಣದ ನಿವಾಸಿಗಳು ಈ ಯುವಕರಿಗೆ ಮೆಚ್ಚುಗೆ ಸೂಚಿಸಿದರು ಮಾತ್ರವಲ್ಲದೆ, ಕೃತಜ್ಞತೆಗಳನ್ನೂ ಸಲ್ಲಿಸಿದ್ದಾರೆ.
ಏಣಿಯಾದ ಅನಿಲ್, ಹತ್ತಿದ ಪರಶುರಾಮ್
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡುತ್ತ ತಮ್ಮ ಅನುಭವವನ್ನು ಹಂಚಿಕೊಂಡ ಪವರ್‌ಮನ್ ಅನಿಲ್ ಚಿಂಗಾರಿ ಹೇಳಿದ್ದಿಷ್ಟು;
“ನಮ್ಮ ಕರ್ತವ್ಯವನ್ನು ನಾವು ಶ್ರದ್ಧೆಯಿಂದ ಮಾಡಿದ್ದೇವೆ. ಜನರು ನಮ್ಮ ಕೆಲಸವನ್ನು ಮೆಚ್ಚಿದ್ದಕ್ಕೆ ಸಂತೋಷವಾಗಿದೆ” ಎನ್ನುತ್ತಾರೆ. ಮುಂದುವರೆದು ಅವರು ಹೇಳಿದರು.. “ವಾರ್ಡ್ ನಂ 9ರಲ್ಲಿ ವಿದ್ಯುತ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಈ ಸಮಸ್ಯೆಯಾಗಿತ್ತು. ಗುರುವಾರ ಬೆಳಗ್ಗೆ ಆ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತವಾಗಿತ್ತು. ಜನರು ಕಾಲ್ ಮಾಡತೊಡಗಿದರು. ನಾನು, ಪರಶುರಾಮ್ ಡ್ಯೂಟಿಯಲ್ಲಿದ್ದೆವು. ತಕ್ಷಣ ಸ್ಥಳಕ್ಕೆ ಧಾವಿಸಿದೆವು. ಟ್ರಾನ್ಸ್‌ಫಾರ್ಮರ್‌ನಲ್ಲಿ ವಿದ್ಯುತ್ ಸಂಪರ್ಕ ತೆಗೆದು ನೋಡಿದಾಗ ಕಂಬದಲ್ಲಿ ಸ್ವಲ್ಪ ಕೆಲಸವಿತ್ತು ಎಂಬುದು ಗೊತ್ತಾಯಿತು. ಆದರೆ ತಕ್ಷಣಕ್ಕೆ ಏಣಿ ಸಿಗಲಿಲ್ಲ. ಹೀಗಾಗಿ ನಾನೇ ಏಣಿಯಾಗಬೇಕಾಯಿತು. ಸುಮಾರು 76 ಕೆಜಿ ತೂಕದ ಪರಶುರಾಮ್ ನನ್ನ ಭುಜಗಳ ಮೇಲೆ ಹತ್ತಿ ಸಮಸ್ಯೆ ಸರಿಮಾಡಿದರು. ಬಹುಶಃ 2-3 ನಿಮಿಷಗಳಲ್ಲಿ ಈ ಕೆಲಸ ಪೂರ್ತಿಯಾಯಿತು.” ಎಂದರು.
ಇವರಿಬ್ಬರ ಕರ್ತವ್ಯನಿಷ್ಠೆಗೆ ಇಡೀ ಪಟ್ಟಣವೇ ಮಾರುಹೋಗಿದೆ. ಎದುರಿಗೆ ಸಿಗುವ ಪ್ರತಿಯೊಬ್ಬರು ಇವರನ್ನು ಕೊಂಡಾಡುತ್ತಿದ್ದಾರೆ. “ಬೆಸ್ಕಾಂನಲ್ಲಿ ಪವರ್‌ಮನ್ ಕೆಲಸ ಎಂದರೆ ಜೀವದ ಹಂಗು ತೊರೆದು ಕೆಲಸ ಮಾಡುವುದೇ ಎಂದರ್ಥ. ಈ ಯುವಕರು ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಉದ್ದೇಶದಿಂದ, ಶಾಲಾ ಮಕ್ಕಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹೀಗೆ ಕೆಲಸ ಮಾಡಿದ್ದಾರೆ. ಅವರ ಕರ್ತವ್ಯಪ್ರಜ್ಞೆ ಎಲ್ಲರಿಗೂ ಮಾದರಿ” ಎನ್ನುತ್ತಾರೆ ಹಿರಿಯ ಪತ್ರಕರ್ತ ಡಿ.ಎನ್.ಕೃಷ್ಣಾರೆಡ್ಡಿ.
***