ಬೆಂಗಳೂರು: ಸದಾ ನಗುಮೊಗದ ಡಿ.ವಿ.ಸದಾನಂದ ಗೌಡರು ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಸರಳತೆ ಮತ್ತು ದಕ್ಷತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಅವರು; ಇದೀಗ ಕೇಂದ್ರದಲ್ಲಿ ತಮ್ಮ ಖಾತೆಯಲ್ಲಿ ಉತ್ತಮ ಸಾಧನೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ.
ನೀತಿ ಆಯೋಗವು (ಹಿಂದಿನ ಯೋಜನಾ ಆಯೋಗ) ನಡೆಸಿರುವ ವಾರ್ಷಿಕ ಸಮೀಕ್ಷೆಯಲ್ಲಿ ಸದಾನಂದಗೌಡರು ನಿರ್ವಹಿಸುತ್ತಿರುವ ರಸಗೊಬ್ಬರ ಮತ್ತು ಔಷಧಿ ಇಲಾಖೆಗಳಿಗೆ ಕ್ರಮವಾಗಿ 2 ಮತು 3ನೇ ಸ್ಥಾನದ ರೇಟಿಂಗ್ ಸಿಕ್ಕಿದ್ದು, ಕೇಂದ್ರದ ವ್ಯಾಪ್ತಿಯಲ್ಲಿರುವ ಒಟ್ಟು 65 ಇಲಾಖೆಗಳಲ್ಲಿ ಗೌಡರ ಇಲಾಖೆಗಳು ಈ ಸಾಧನೆಯನ್ನು ಮಾಡಿವೆ. ನೀತಿ ಆಯೋಗ ನಡೆಸಿರುವ ಕ್ಷಮತೆಯ ಸಮೀಕ್ಷೆಯಲ್ಲಿ ಒಟ್ಟು 16 ಪ್ರಮುಖ ಖಾತೆಗಳು ಚೆನ್ನಾಗಿ ಕೆಲಸ ಮಾಡಿವೆ ಎಂದು ಗುರುತಿಸಲಾಗಿದೆ.
“ರಸಗೊಬ್ಬರಗಳ ಇಲಾಖೆ ಆರೋಗ್ಯ ಕಾರ್ಡ್‌ಗಳ ಸಂಪರ್ಕವನ್ನು ಉತ್ತಮಪಡಿಸಿ ರಸಗೊಬ್ಬರಗಳ ಸಮರ್ಥ ಮಾರಾಟ ಮತ್ತು ರೈತರಿಗೆ ರಸಗೊಬ್ಬರ ಸಬ್ಸಿಡಿಯ ನೇರ ವರ್ಗಾವಣೆ (ಡಿಬಿಟಿ) ಮಾಡುವಲ್ಲಿ ಉತ್ತಮ ಸಾಧನೆ ಮಾಡಿದೆ” ಎಂದು ನಿತಿ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.
ಸಾಮಾನ್ಯವಾಗಿ ಸದಾನಂದ ಗೌಡರ ಕೆಲಸದಲ್ಲಿ ನಿಯಮಬಾಹಿರ ಕ್ರಮಗಳಿಗೆ ಅವಕಾಶವೇ ಇರುವುದಿಲ್ಲ. ತಮಗೆ ಸಿಕ್ಕ ಸದಾವಕಾಶವನ್ನು ಸಂಪೂರ್ಣವಾಗಿ ಜನರಿಗೆ ಮೀಸಲಿಡುವ ಅವರು, ಹಿಂದೆ ನಿರ್ವಹಿಸಿದ್ದ ರೈಲ್ವೆ, ಸಂಸದೀಯ ವ್ಯವಹಾರ ಖಾತೆಗಳಲ್ಲೂ ಇದೇ ಗುಣಮಟ್ಟದ ಛಾಪು ಮೂಡಿಸಿದ್ದರು. ಲೋಕಸಭೆಯಲ್ಲಿ ಅವರು ಬೆಂಗಳೂರು ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
65 ಇಲಾಖೆಗಳು
ಕೇಂದ್ರ ಸರಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಕೇಂದ್ರದ 65 ಸಚಿವಾಲಯ/ಇಲಾಖೆಗಳು ತಮ್ಮ ಆಡಳಿತದಲ್ಲಿ ಸಮರ್ಥವಾಗಿ ಅಳವಡಿಸಿಕೊಂಡ ಆಧುನಿಕ ತಂತ್ರಜ್ಞಾನ, ಗುಣಮಟ್ಟದ ಸರಳ ಹಾಗೂ ಸುರಕ್ಷಿತ ದತ್ತಾಂಶಗಳ ಬಳಕೆ, ಮಾನವ ಸಂಪನ್ಮೂಲ ನಿಯೋಜನೆ.., ಹೀಗೆ ಒಟ್ಟಾರೆ ಕ್ಷಮತೆ ಬಗ್ಗೆ ನೀತಿ ಆಯೋಗವು ನಡೆಸಿದ ಸಮೀಕ್ಷೆಯಲ್ಲಿ ಕೇಂದ್ರ ಸದಾನಂದ ಗೌಡ ಅವರು ನಿರ್ವಹಿಸುವ ರಸಗೊಬ್ಬರ ಇಲಾಖೆಯು ೩ನೇ ಸ್ಥಾನ ಪಡೆದಿದೆ. ಹಾಗೆಯೇ 16 ಪ್ರಮುಖ ಖಾತೆಗಳ ಆರ್ಥಿಕ ಕ್ಷಮತೆಯ ಸಮೀಕ್ಷೆಯಲ್ಲಿ ರಸಗೊಬ್ಬರ ಇಲಾಖೆ 2ನೇ ರಾಂಕ್ ಹಾಗೂ ಗೌಡರು ನಿರ್ವಹಿಸುವ ಇನ್ನೊಂದು ಖಾತೆಯಾದ ಔಷಧ ಇಲಾಖೆ 3ನೇ ರಾಂಕ್ ಪಡೆದಿವೆ.
ಸಂತೋಷ ಉಂಟು ಮಾಡಿದೆ
ನೀತಿ ಆಯೋಗ ನನ್ನ ಇಲಾಖೆಯ ಕೆಲಸವನ್ನು ಗುರುತಿಸಿ ರೇಟಿಂಗ್ ನೀಡಿರುವುದು ಸಂತೋಷ ಉಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ಹಾಗೂ ನನ್ನ ಇಲಾಖೆಯ ಎಲ್ಲ ಅಧಿಕಾರಿಗಳ ಪರಿಶ್ರಮದಿಂದ ಇದೆಲ್ಲ ಸಾಧ್ಯವಾಗಿದೆ. ಕೋವಿಡ್ ಪೀಡೆಯ ನಡುವೆಯೂ ದೇಶದ ಯಾವುದೇ ಭಾಗದಲ್ಲಿಯೂ ರಸಗೊಬ್ಬರ ಅಥವಾ ಔಷಧಗಳ ಕೊರತೆಯಾಗದಂತೆ ಕೆಲಸ ಮಾಡಿದ್ದೇವೆ. ಕೆಲಸದ ಬಗ್ಗೆ ತೃಪ್ತಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ ಎಂದು ಸದಾನಂದ ಗೌಡರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಅಭಿನಂದನೆ
ಕರ್ನಾಟಕದ ಮಖ್ಯಮಂತ್ರಿಯಾಗಿದ್ದಾಗ ಪಾರದರ್ಶಕ ಆಡಳಿತ ನಡೆಸಿ ತಮ್ಮದೇ ಛಾಪು ಒತ್ತಿದ್ದ ಸದಾನಂದ ಗೌಡರು, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಖಾತೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ ತಾವೊಬ್ಬ ದಕ್ಷ ಆಡಳಿತಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿಯೂ ದೇಶಾದ್ಯಂತ ದಾಖಲೆ ಪ್ರಮಾಣದಲ್ಲಿ ರಸಗೊಬ್ಬರ, ಔಷಧಗಳನ್ನು ಪೂರೈಸುವುದರ ಮೂಲಕ ತಾವು ಪ್ರತಿನಿಧಿಸುವ ಕರ್ನಾಟಕ ರಾಜ್ಯಕ್ಕೆ ಕೀರ್ತೀ ತಂದಿದ್ದಾರೆ. ಅದೇ ರೀತಿ ಕೊರೊನಾದಿಂದಾಗಿ ವಿದೇಶಗಳಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ವ್ಯವಸ್ಥೆ ಮಾಡಿ ರಾಜ್ಯದ ಜನರ ಪ್ರೀತಿ-ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಕ್ಷತೆಯ ಇನ್ನೊಂದು ಹೆಸರೇ ಡಿವಿಎಸ್
ಸರಳತೆ, ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದ ಸದಾನಂದ ಗೌಡರು ಕನ್ನಡಿಗರು ಹೆಮ್ಮೆಪಡುವಂಥ ಸಾಧನೆ ಮಾಡಿದ್ದಾರೆ. ಈ ಹಿಂದೆಯೂ ಶಾಸಕರಾಗಿ, ಮುಖ್ಯಮಂತ್ರಿಯಾಗಿ, ಸಂಸದರಾಗಿ ಉತ್ತಮವಾಗಿ ಕೆಲಸ ಮಾಡಿದ್ದರು, ಇದೀಗ ಕೇಂದ್ರ ಸಚಿವರಾಗಿಯೂ ಅವರು ಉತ್ತಮ ಸಾಧನೆ ಮಾಡಿದ್ದಾರೆ. ನರೇಂದ್ರ ಮೋದಿ ಸರಕಾರ ರೂಪಿಸಿದ ಅನೇಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ಹೆಗ್ಗಳಿಕೆ ರಸಗೊಬರ ಇಲಾಖೆಯದ್ದು. ಸದಾನಂದ ಗೌಡರ ಅನುಭವೀ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಮೋದಿಯವರು ವಹಿಸಿದ ಖಾತೆಯನ್ನು ಗೌಡರು ಸಮರ್ಥವಾಗಿ ನಿಭಾಯಿಸಿದ್ದಾರೆ. ಕೋವಿಡ್-19 ಸಂಕಷ್ಟ ಕಾಲದಲ್ಲೂ ಅವರು ತಮ್ಮ ಹೊಣೆಗಾರಿಕೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.