ಬೆಂಗಳೂರು: ಹದಿನೆಂಟು ವರ್ಷಗಳ ಹಿಂದೆ; ಅಂದರೆ 2002ರಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ನಡೆದ ಹಿಂಸಾಚಾರದ ಬಿಸಿ ಸ್ಯಾಂಡಲ್‌ವುಡ್‌ಗೆ ಈಗ ತಟ್ಟಿದೆ. ಸುಮಾರು 2,000 ಮಂದಿಯನ್ನು ಬಲಿ ತೆಗೆದುಕೊಂಡ ಈ ಘಟನೆ ಈಗಲೂ ಮೈ ಕಂಪಿಸುವಂತೆ ಮಾಡುತ್ತದೆ. ಇಷ್ಟಕ್ಕೂ ಅಸಲು ವಿಷಯ ಏನು ಗೊತ್ತಾ?
ನೀನಾಸಂ ಸತೀಶ್‌ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ‘ಗೋಧ್ರಾ’ ಚಿತ್ರಕ್ಕೆ ಇದೀಗ ಕಂಟಕ ಎದುರಾಗಿದೆ. ಗುಜರಾತ್ ಗೋಧ್ರಾ ಕಾರಣಕ್ಕೆ ಸಿನಿಮಾಕ್ಕೆ ಇಡಲಾಗಿರುವ ‘ಗೋಧ್ರಾ’ ಎಂಬ ಟೈಟಲ್ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಬೆಳವಣಿಗೆಯಿಂದ ಆ ಚಿತ್ರತಂಡ ಕಂಗಾಲಾಗಿದ್ದು, ಅನಿವಾರ‍್ಯವಾಗಿ ಟೈಟಲ್ ಬದಲಿಸಲು ಹೊರಟಿದೆ.
ಕೆಲ ನಿಮಿಷಗಳ ಮೊದಲು ’ಗೋಧ್ರಾ’ ಟೈಟಲ್ ಅನ್ನು ’ಗೋಧ್ರಾನ್’ ಅಂತ ಬದಲಿಸುವುದಾಗಿ ಹೇಳಿದ್ದ ಚಿತ್ರತಂಡ, ಆ ನಂತರ ಬಿಡುಗಡೆ ಮಾಡಲಾದ ಇನ್ನೊಂದು ಹೇಳಿಕೆಯಲ್ಲಿ ’ಗೋಧ್ರಾನ್’ ಕೂಡ ತಾತ್ಕಾಲಿಕ ಶೀರ್ಷಿಕೆ .ಚಲನಚಿತ್ರ ವಾಣೀಜ್ಯ ಮಂಡಳಿ ಮತ್ತು ಸೆನ್ಸಾರ್’ಯೊಂದಿಗೆ ಸಮಾಲೋಚಿಸಿದ ನಂತರ ಹೊಸ ಶೀರ್ಷಿಕೆಯನ್ನು ಪ್ರಕಟಿಸುತ್ತೇವೆ ಎಂದಿದೆ. ಇಡೀ ಬೆಳವಣಿಗೆ ಕೆಲ ಪ್ರಶ್ನೆಗಳಿಗೆ ಕಾರಣವಾಗಿದೆ.
ಆಘಾತಕ್ಕೀಡಾಗಿರುವ ಚಿತ್ರತಂಡವು ಇಡೀ ಬೆಳವಣಿಗೆಯನ್ನು ಪತ್ರಿಕಾ ಹೇಳಿಕೆಯಲ್ಲಿ ಹೀಗೆ ಹೇಳಿಕೊಂಡಿದೆ…
“ನಾವು ಇತ್ತೀಚೆಗೆ ನಮ್ಮ ಈ ಸಿನಿಮಾವನ್ನು ಸಿಬಿಎಫ್‌ಸಿ (ಸೆನ್ಸಾರ್ ಮಂಡಳಿ) ಸರ‍್ಟಿಫಿಕೇಟ್‌ಗಾಗಿ ಸಲ್ಲಿಸಿದ್ದೆವು. ಮಂಡಳಿ ಸದಸ್ಯರು ಸಿನಿಮಾವನ್ನು ವೀಕ್ಷಿಸಿ, ಸಿನಿಮಾದ ಶೀರ್ಷಿಕೆ ಬದಲಾಯಿಸುವಂತೆ ಸೂಚಿಸಿದ್ದಾರೆ. ಮಂಡಳಿಯ ಸದಸ್ಯರಿಗೆ ಮತ್ತು ಅಧಿಕಾರಿಗಳಿಗೆ ನಮ್ಮ ಚಿತ್ರದ ನಿಲುವು, ಕಥಾವಸ್ತು ಮತ್ತು ಕೆಲ ವಿಷಯಗಳ ಕುರಿತಾದ ಆಕ್ಷೇಪಣೆ ಮತ್ತು ಅದಕ್ಕಾಗಿ ಶೀರ್ಷಿಕೆಯನ್ನು ಬದಲಾಯಿಸಬೇಕು ಎನ್ನುವ ಸಲಹೆಗಳು ಬಂದವು. ಗೋಧ್ರಾದಲ್ಲಿ ನಡೆದ ಘಟನೆಗೂ ಮತ್ತು ಈ ಸಿನಿಮಾಗೂ ಯಾವುದೇ ಸಂಬಂಧವಿಲ್ಲ ಎಂದು ವಿವರಿಸಿದರೂ, ಮನವರಿಕೆ ಮಾಡಿಕೊಡಲು ಪ್ರಯತ್ನ ಮಾಡಿದೆವು. ಆದರೆ, ನಮ್ಮ ಮನವಿಯನ್ನು ಸೆನ್ಸಾರ್ ಮಂಡಳಿ ಪುರಸ್ಕರಿಸಲಿಲ್ಲ. ಹಾಗಾಗಿ ಸೆನ್ಸಾರ್ ಸಿಬಿಎಫ್ʼಸಿ ಅಧಿಕಾರಿಗಳ ಜತೆ ಚರ್ಚಿಸಿ ನಮ್ಮ ಚಿತ್ರದ ಶೀರ್ಷಿಕೆಯನ್ನು ‘ಗೋಧ್ರಾನ್’ ಎಂದು ಬದಲಿಸಲು ನಿರ್ಧಾರ ತಗೆದುಕೊಂಡಿದ್ದೇವೆ..”
ಇದೇ ವೇಳೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಚಿತ್ರದ ನಾಯಕ ನಟ ನೀನಾಸಂ ಸತೀಶ್, “ಸಿನಿಮಾ ಟೈಟಲ್ ಬದಲಿಸಲು ನಮ್ಮ ಚಿತ್ರತಂಡ ನಿರ್ಧರಿಸಿದೆ. ನಮಗೆ ಯಾವುದೇ ವಿವಾದ ಬೇಡ ಹಾಗೂ ಯಾರಿಗೂ ನೋವುಂಟು ಮಾಡುವ ಉದ್ದೇಶ ನಮಗೆ ಖಂಡಿತಾ ಇಲ್ಲ. ಇನ್ನು ಕಥೆ ಬಗ್ಗೆ ಹೇಳುವುದಾದರೆ, ಚಿತ್ರದ ಕಥೆಗೂ ಗುಜರಾತ್ ಗೋಧ್ರಾ ಘಟನೆಗೂ ಯಾವ ಸಂಬಂಧವೂ ಇಲ್ಲ. ಈ ವಿಷಯವನ್ನು ನಾವು ವಾಣಿಜ್ಯ ಮಂಡಳಿಯ ಜತೆ ಚರ್ಚೆ ಮಾಡುತ್ತೇವೆ” ಎಂದಷ್ಟೇ ಹೇಳಿದರು.
ಚೇಂಬರ್ʼಗೆ ಅಧಿಕಾರ ಇಲ್ಲವೇ?
ಇದೇ ವೇಳೆ ಸೆನ್ಸಾರ್ ಮಂಡಳಿ, ಕನ್ನಡ ಚಿತ್ರರಂಗದ ಮಾತೃಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರದ ಟೈಟಲ್ ನೀಡುವ ಅಧಿಕಾರ ಇಲ್ಲವೆಂದಿದೆ. ಈ ವಿಷಯವನ್ನು ಚಿತ್ರತಂಡ ಹೇಳಿರುವುದು ಹೀಗೆ;
“ನಮ್ಮ ಚಿತ್ರತಂಡಕ್ಕೊಂದು ಅನುಮಾನ ಎದುರಾಗಿದೆ. ನಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ)ಯಲ್ಲಿ ‘ಗೋಧ್ರಾ’ ಎಂದು ನಮ್ಮ ಚಿತ್ರಕ್ಕೆ ಹೆಸರಿಡಲು ಅನುಮತಿ ಪಡೆದಿದ್ದೇವೆ. ಈ ಅನುಮೋದಿತ, ನೋಂದಾಯಿಸಿದ ಶೀರ್ಷಿಕೆಗೆ ಯಾವುದೇ ಸಿಂಧುತ್ವವಿಲ್ಲ ಎಂದು ಸಿಬಿಎಫ್‌ಸಿಯಿಂದ ಈಗ ನಮಗೆ ತಿಳಿದು ಆಘಾತವಾಯಿತು. ಕೆಎಫ್‌ಸಿಸಿ ಶೀರ್ಷಿಕೆಗಳನ್ನು ನೀಡುವ ಯಾವುದೇ ಅಧಿಕಾರ ಹೊಂದಿರುವುದಿಲ್ಲ ಮತ್ತು ಅದು ಅನುಮತಿಸಿದ ಶೀರ್ಷಿಕೆಯನ್ನು ಸಿಬಿಎಫ್ʼಸಿ ಒಪ್ಪಬೇಕಿಲ್ಲ ಎಂದು ಮಂಡಳಿ ಹೇಳಿದಾಗ ನಮಗೆ ಆಶ್ಚರ್ಯವಾಯಿತು. ಗೋಧ್ರಾ ಎಂಬ ಶೀರ್ಷಿಕೆಯು ಗುಜರಾತ್‌ನ ಗೋಧ್ರಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದಲ್ಲ ಎಂಬ ಭರವಸೆಯನ್ನು ನಾವು ಕೆಎಫ್‌ಸಿಸಿಗೆ ನೀಡಿದ್ದೆವು. ಸಿನಿಮಾವನ್ನು ಅದೇ ರೀತಿಯಲ್ಲೇ ಮಾಡಿದ್ದೇವೆ. ಚಿತ್ರದ ಚಿತ್ರೀಕರಣಕ್ಕೆ ಶೀರ್ಷಿಕೆಯನ್ನು ನೋಂದಾಯಿಸಲು ಕೆಎಫ್‌ಸಿಸಿಯಿಂದ ಅನುಮತಿ ಪಡೆಯುವಾಗ ಪ್ರತಿಯೊಬ್ಬ ನಿರ್ಮಾಪಕರು ಅನುಸರಿಸಬೇಕಾದ ಎಲ್ಲ ಕಾರ್ಯವಿಧಾನಗಳನ್ನು ಪಾಲಿಸಿದ್ದೇವೆ. ಚಿತ್ರೀಕರಣದ ಸಮಯದಲ್ಲಿ ತನ್ನದೇ ಅಂಗಸಂಸ್ಥೆಗಳ ಸದಸ್ಯರನ್ನು ಎಲ್ಲಿ, ಎಷ್ಟು ಬಳಸಿಕೊಳ್ಳಬೇಕು, ಯಾವೆಲ್ಲ ನಿಯಮಗಳನ್ನು ಅನುಸರಿಸಬೇಕು ಎಂದೆಲ್ಲ ಹೇಳುತ್ತದೆ. ಅದನ್ನು ಕೂಡ ಚಾಚೂ ತಪ್ಪದೇ ಪಾಲಿಸಬೇಕು ಎಂದು ಅವುಗಳ ಬೆನ್ನಿಗೆ ನಿಲ್ಲುತ್ತದೆ. ಆದರೆ, ಕೋಟಿ-ಕೋಟಿ ಹಣ ಹಾಕಿ ಸಿನಿಮಾ ಮಾಡುವ ಚಿತ್ರತಂಡವನ್ನು ರಕ್ಷಿಸಲು ಸಾಧ್ಯವಾಗದಂತಹ ಶೀರ್ಷಿಕೆಗಳನ್ನು ನೀಡುತ್ತದೆ? ಈ ಸೋಜಿಗವನ್ನು ಹೊರತುಪಡಿಸಿ, ಗೋಧ್ರಾ ಶೀರ್ಷಿಕೆಯನ್ನು ಬಳಸಿಕೊಂಡು ನಾವು ಈಗಾಗಲೇ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ ಮತ್ತು ಕಳೆದ ಎರಡು ವರ್ಷಗಳಿಂದ ಈ ಹೆಸರಿನಿಂದಲೇ ಸಿನಿಮಾ ಪ್ರಚಾರ ಮಾಡಿದ್ದೇವೆ. ಅದಕ್ಕಾಗಿ ಹಣವನ್ನೂ ವ್ಯಯಿಸಿದ್ದೇವೆ” ಎನ್ನುವುದು ಚಿತ್ರತಂಡದ ಕಳವಳ.
“ಈಗಾಗಲೇ ನಾವು ನಮ್ಮ ಸಿನಿಮಾದ ಹೆಸರನ್ನು ಬದಲಾಯಿಸುವುದಾಗಿ ಸಿಬಿಎಫ್‌ಸಿಗೆ ಭರವಸೆ ನೀಡಿದ್ದೇವೆ. ಆದರೆ ಈ ಹೆಸರನ್ನು ಬದಲಾಯಿಸುವ ಮೂಲಕ ನಾವು ಈಗ ಅನುಭವಿಸಬೇಕಾದ ಎಲ್ಲಾ ನಷ್ಟಗಳನ್ನು ಯಾರು ಸರಿದೂಗಿಸಲಿದ್ದಾರೆ? ಕಳೆದ ಎರಡು ವರ್ಷಗಳಲ್ಲಿ ನಾವು ಕೈಗೊಂಡ ಎಲ್ಲ ಪ್ರಚಾರದ ಗತಿ ಏನು? ಚೇಂಬರ್ ಈ ವಿಷಯದಲ್ಲಿ ನಮಗೆ ಧೈರ್ಯ ತುಂಬಬೇಕಿದೆ. ಆಗಿರುವ ಈ ಗೊಂದಲವನ್ನು ತಿಳಿಗೊಳಿಸಬೇಕಿದೆ. ಜವಾಬ್ದಾರಿಯುತ ನಿರ್ಮಾಪಕರಾಗಿ, ನಾವು ಉತ್ತರಗಳನ್ನು ಕೋರುತ್ತೇವೆ. ನಿರ್ಮಾಪಕರು, ನಿರ್ದೇಶಕರು, ನೂರಾರು ಕಲಾವಿದರು ಮತ್ತು ತಂತ್ರಜ್ಞರನ್ನು ಕೆಎಫ್‌ಸಿಸಿ ಒಳಗೊಳ್ಳುವುದರಿಂದ, ನೀವು ಕೊಟ್ಟ ಶೀರ್ಷಿಕೆಗಳನ್ನೇ ನಂಬಿಕೊಂಡು ಶ್ರಮ ಹಾಕಿರುವುದರಿಂದ, ಕೊನೆಗೆ ನೀವು ಕೊಡುವ ಶೀರ್ಷಿಕೆಗೆ ಯಾವುದೇ ಬೆಲೆ ಇಲ್ಲ ಅಂದಾಗ ನಾವು ಯಾರನ್ನು ನಂಬಬೇಕು? ನಾವು ಸಿಬಿಎಫ್‌ಸಿಗೆ ಬದ್ಧರಾಗಿದ್ದೇವೆ ಮತ್ತೂ ಚಿತ್ರದ ಶೀರ್ಷಿಕೆಯನ್ನು ‘ಗೋಧ್ರಾ’ದಿಂದ ‘ಗೋಧ್ರಾನ್’ಗೆ ಬದಲಾಯಿಸುತ್ತೇವೆ” ಎಂದು ಚಿತ್ರತಂಡ ಪುನರುಚ್ಚರಿಸಿದೆ.
ಈ ಚಿತ್ರಕ್ಕೆ ನೀನಾಸಂ ಸತೀಶ್ ನಾಯಕರಾದರೆ, ಶ್ರದ್ಧಾ ಶ್ರೀನಾಥ್ ನಾಯಕಿ. ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷ ಸೋಮಶೇಖರ್ ಮತ್ತು ಸೋನು ಗೌಡ ಮುಂತಾದವರ ತಾರಾ ಬಳಗವಿದೆ. ಜುಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ, ಕೆ.ಪಿ. ಹಿನ್ನೆಲೆ ಸಂಗೀತ ಕೊಟ್ಟಿದ್ದಾರೆ. ಕೆ.ಎಸ್.ನಂದೀಶ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ಕೂಡ ನಡೆಸಲಾಗಿದೆ ಎಂದು ತಂಡ ಮಾಹಿತಿ ನೀಡಿದೆ.
ಆ ಚಿತ್ರದಲ್ಲಿ ನೀನಾಸಂ ಸತೀಶ್, ಶ್ರದ್ಧಾ ಶ್ರೀನಾಥ್.
ಇದಿಷ್ಟೂ ದೀರ್ಘವಾದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ ಸ್ವಲ್ಪಹೊತ್ತಿನ ಅವಧಿಯಲ್ಲೇ ಮತ್ತೊಂದು ಸಂಕ್ಷಿಪ್ತ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿತು. ಅದೂ ಹೀಗಿದೆ;
“ನಮ್ಮ ಚಿತ್ರದ ಶೀರ್ಷಿಕೆ ಅನಗತ್ಯ ಚರ್ಚೆಗಳನ್ನು ಹುಟ್ಟುಹಾಕಲು ಪ್ರಾರಂಭಿಸಿದೆ. ಅದಕ್ಕಾಗಿ ನಾವು ವಿಷಾದಿಸುತ್ತೇವೆ. ಈಗಾಗಲೇ ಹೇಳಿದಂತೆ, ನಾವು ಇನ್ನು ಮುಂದೆ ನಮ್ಮ ಚಲನಚಿತ್ರಕ್ಕಾಗಿ ʼಗೋಧ್ರಾʼ ಶೀರ್ಷಿಕೆಯನ್ನು ಬಳಸುತ್ತಿಲ್ಲ. ಇದಕ್ಕಾಗಿ ಸಂಪೂರ್ಣವಾಗಿ ವಿಭಿನ್ನ ಹೆಸರನ್ನು ಬಳಸಲು ನಾವು ತೀರ್ಮಾನಿಸಿದ್ದೇವೆ ಮತ್ತು ಅದನ್ನು ಶೀಘ್ರದಲ್ಲೇ ಘೋಷಿಸಲಾಗುವುದು. ಹಿಂದಿನ ಗೋಧ್ರಾದಿಂದ ಶೀರ್ಷಿಕೆಯನ್ನು ʼಗೋಧ್ರಾನ್ʼ ಎಂದು ಬದಲಾಯಿಸಲು ನಾವು ಮೊದಲೇ ಯೋಜಿಸಿದ್ದೆವು. ಆದರೆ ಅದು ಕೂಡ ತಾತ್ಕಾಲಿಕ ಶೀರ್ಷಿಕೆ ಆಗಿತ್ತು. ಈಗ ಅದನ್ನೂ ಕೈಬಿಡಲು ನಿರ್ಧಾರ ಮಾಡಿದ್ದೇವೆ. ಕೆಎಫ್‌ಸಿಸಿ ಮತ್ತು ಸಿಬಿಎಫ್‌ಸಿಯೊಂದಿಗೆ ಸಮಾಲೋಚಿಸಿದ ನಂತರ ನಾವು ಶೀರ್ಷಿಕೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದ್ದೇವೆ. ಹೊಸ ಶೀರ್ಷಿಕೆ ಅವರ ಒಪ್ಪಿಗೆಯಂತೆ ಇರುತ್ತದೆ. ಯಾವುದೇ ಕಾರಣಕ್ಕೂ ಯಾರ ಭಾವನೆಗಳನ್ನು ನೋಯಿಸುವ ಉದ್ದೇಶ ನಮಗಿಲ್ಲ. ಈ ವಿಷಯದಿಂದ ವಿವಾದವನ್ನು ಉಂಟು ಮಾಡಲು ನಾವು ಪ್ರಯತ್ನಿಸುವುದಿಲ್ಲ. ಇದು ಸಂಪೂರ್ಣವಾಗಿ ಅನಗತ್ಯ. ಮನರಂಜನೆ ಮತ್ತು ಸಾಮಾಜಿಕ ಸಂದೇಶದ ಮೂಲಕ ಸಂತೋಷವನ್ನು ಹಂಚುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಲಾಗಿದೆ. ಆದ್ದರಿಂದ ಶೀರ್ಷಿಕೆ ಈ ಪ್ರಕ್ರಿಯೆಯ ಹಾದಿಯಲ್ಲಿ ಬರಬಾರದು.”
ಉಳಿದಂತೆ ಅನೇಕ ವರ್ಷಗಳಿಂದ ಕನ್ನಡ ಚಿತ್ರಗಳಿಗೆ ಟೈಟೆಲ್ ನೀಡುತ್ತಿರುವ ವಾಣಿಜ್ಯ ಮಂಡಳಿ ಈ ವಿಷಯದಲ್ಲಿ ಯಾವ ಹೆಜ್ಜೆ ಇಡುತ್ತದೋ ಗೊತ್ತಿಲ್ಲ. ಇದುವರೆಗೂ ಚೇಂಬರ್ ಟೈಟಲ್ ಕೊಡುವ ಬಗ್ಗೆ ಎಲ್ಲೂ ತಕರಾರು ಇರಲಿಲ್ಲ. ಈ ಚೇಂಬರ್‌ಗೆ ಕಾನೂನಾತ್ಮಕ ಮಾನ್ಯತೆ ಬೇಕೆಂದು ಸ್ಯಾಂಡಲ್‌ವುಡ್ ಪ್ರಮುಖರು ಯತ್ನಿಸುತ್ತಿರುವಾಗಲೇ ಸೆನ್ಸಾರ್ ಮಂಡಳಿ ಶಾಕ್ ನೀಡಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಚೇಂಬರ್ ಅಧ್ಯಕ್ಷ ಡಿ.ಆರ್. ಜೈರಾಜ್ ಅವರಿಗೆ ಕರೆ ಮಾಡಲಾಯಿತಾದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಸದ್ಯಕ್ಕೆ ‘ಗೋಧ್ರಾ’ ಬೇರೆ ಹೆಸರಿನಲ್ಲಿ ರಿಲೀಸ್ ಆದರೂ ಮುಂದೆ ಟೈಟಲ್ ವಿವಾದ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ.