ಬೆಳಗಾವಿ /ಬೆಂಗಳೂರು: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ನೆರೆ ಸಂಸ್ರಸ್ಥರ ಭೇಟಿಗೆ ಹೋಗದೆ ಶಿರಾದಲ್ಲಿ ಬಿಜೆಪಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಹೋಗಿದ್ದ ರಗಳೆ ನೆರೆಯಷ್ಟೇ ಉದ್ರಿಕ್ತವಾಗುತ್ತಿದ್ದಂತೆ, ಅದಕ್ಕೆ ತತ್‌ಕ್ಷಣದ ಮುಲಾಮು ಹಚ್ಚುವ ಯತ್ನವಾಗಿ ಕಂದಾಯ ಸಚಿವ ಆರ್. ಅಶೋಕ್ ನೆರೆಪೀಡಿತ ಪ್ರದೇಶಗಳಿಗೆ ತುರ್ತಾಗಿ ಭೇಟಿ ನೀಡಿದ್ದಾರೆ.
ಸೋಮವಾರ ಬೆಳಗ್ಗೆ ಬೆಳಗಾವಿಗೆ ಧಾವಿಸಿದ ಸಚಿವರು; ಮೊದಲಿಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸಭೆ ನಡೆಸಿ ಅತಿವೃಷ್ಟಿ-ಪ್ರವಾಹದಿಂದ ಉಂಟಾಗಿರುವ ಹಾನಿಯ ಕುರಿತು ಮಾಹಿತಿ ಪಡೆದುಕೊಂಡರು. ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾದ ಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದರು.
ಜಿಲ್ಲೆಯ ಪ್ರವಾಹದ ಸ್ಥಿಗತಿಯ ಬಗ್ಗೆ ಜನಪ್ರತಿಧಿಗಳು, ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಬಳಿಕ ಹುಕ್ಕೇರಿ ಮತ್ತು ಚಿಕ್ಕೋಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.
ಮೊದಲು ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಹಾಗೂ ಜಿನರಾಳ ಗ್ರಾಮದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಬೆಳೆಹಾನಿಯನ್ನು ವೀಕ್ಷಿಸಿದರು. ನಂತರ ಹುಕ್ಕೇರಿ ಪಟ್ಟಣದಲ್ಲಿ ಮಳೆಯಿಂದ ಮನೆಗಳು ಹಾಗೂ ಇತರೆ ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿ ಪರಿಶೀಲಿಸಿದರು.
ಹಣದ ಕೊರತೆ ಇಲ್ಲ
ಈ ಸಂದರ್ಭದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಸಚಿವ ಅಶೋಕ್ ಅವರು, ಸಂತ್ರಸ್ತರಿಗೆ ಪರಿಹಾರ ನೀಡಲು ಹಣದ ಕೊರತೆಯಿಲ್ಲ; ಎಲ್ಲ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಯಲ್ಲಿ ಹಣವಿದೆ.
ಮಾರ್ಗಸೂಚಿ ಪ್ರಕಾರ ಪರಿಹಾರ ನೀಡಲಾಗುವುದು. ಎನ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಪರಿಹಾರ ಕಡಿಮೆ ಬರುವುದರಿಂದ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಹೆಚ್ಚಿನ ನೆರವು ನೀಡಲು ಪ್ರಯತ್ನಿಸಲಾಗುವುದು. ಮೂಲಸೌಕರ್ಯಗಳ ದುರಸ್ತಿಗೆ ತಕ್ಷಣ ಕ್ರಮ ಕೈಗೊಂಡಿದ್ದು, ಸಮರೋಪಾದಿಯಲ್ಲಿ ಪರಿಹಾರ ಕೆಲಸ ಮಾಡುವ ಮೂಲಕ ಸಂತ್ರಸ್ತರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುವುದು. ಬಾಕಿ ಉಳಿದಿರುವ ಬೆಳೆ ಪರಿಹಾರ ಹಾಗೂ ಮನೆ ನಿರ್ಮಾಣದ ಕಂತಿನ ಹಣವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಅಶೋಕ್ ಹೇಳಿದರು.
ಬೆಳಗಾವಿಯಲ್ಲಿ ಸುಸಜ್ಜಿತ ಕಾಳಜಿ ಕೇಂದ್ರ
ಪ್ರವಾಹ ಮತ್ತಿತರ ತುರ್ತು ಸಂದರ್ಭಗಳಲ್ಲಿ ಜನರಿಗೆ ಸುರಕ್ಷಿತ ನೆಲೆ ಒದಗಿಸುವುದಕ್ಕಾಗಿ ಬೆಳಗಾವಿ ಜಿಲ್ಲೆಯಲ್ಲಿ ಸುಸಜ್ಜಿತ ಪರಿಹಾರ(ಕಾಳಜಿ) ಕೇಂದ್ರ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು. ಈ ಕೇಂದ್ರದಲ್ಲಿ ಅಡುಗೆ ಕೋಣೆ, ಸ್ನಾನಗೃಹಗಳು, ವಸತಿ ಕೋಣೆಗಳನ್ನು ನಿರ್ಮಿಸಲಾಗುವುದು. ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಜನರ ಪುನರ್ವಸತಿಗೆ ಅನುಕೂಲ ಆಗಲಿದೆ ಎಂದು ಸಚಿವ ಆರ್.ಅಶೋಕ್ ಹೇಳಿದರು.
ಆಗಸ್ಟ್ ಸಂತ್ರಸ್ತರಿಗೆ ಮನೆ
ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡವರ ಸಮೀಕ್ಷೆ ಪೂರ್ಣಗೊಂಡು ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಿಸಲಾಗಿರುವ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕು. ಈಗಾಗಲೇ ಪರಿಹಾರ ಪಡೆದವರು ಮನೆ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ಸಚಿವ ಆರ್. ಅಶೋಕ್ ಅವರು ಜಿಲ್ಲಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಒಂದು ವೇಳೆ ತಂತ್ರಾಂಶದಲ್ಲಿ ಬೋಗಸ್ ಎಂಟ್ರಿ ಆಗಿರುವುದು ಕಂಡುಬಂದರೆ ರದ್ದುಪಡಿಸಿ, ಉಳಿದ ಎಲ್ಲ ಕೆಟಗರಿ ಮನೆಗಳ ಸಮೀಕ್ಷೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಿ ಕೂಡಲೇ ಪರಿಹಾರ ಬಿಡುಗಡೆಗೊಳಿಸಿ, ಮನೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ತಿಳಿಸಿದರು.
ನಿರ್ಮಾಣ ವಿಳಂಬಕ್ಕೆ ಬೇಸರ
ಅತಿವೃಷ್ಟಿ ಹಾಗೂ ಪ್ರವಾಹದಿಂದ ನೊಂದವರಿಗೆ ಎಲ್ಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಕಳೆದ ಬಾರಿ ಪ್ರವಾಹದಲ್ಲಿ ಉಂಟಾಗಿರುವ ಹಾನಿಯನ್ನು ಇದುವರೆಗೆ ಭರಿಸಿಲ್ಲ ಹಾಗೂ ಮನೆ ನಿರ್ಮಾಣಕ್ಕೆ ಪರಿಹಾರ ನೀಡಿಲಗಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಈಗಾಗಲೇ ಸರ್ಕಾರ ಹಣ ಬಿಡುಗಡೆ ಮಾಡಿದ್ದಾಗ್ಯೂ ಇದುವರೆಗೆ ಎಲ್ಲ ಕುಟುಂಬಗಳಿಗೆ ಪರಿಹಾರ ಯಾಕೆ ತಲುಪಿಲ್ಲ ಎಂದು ಜಿಲ್ಲಾಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಹಾನಿಯಾಗಿರುವ ಸುಮಾರು 6000 ಮನೆಗಳ ನಿರ್ಮಾಣಕ್ಕೆ ಪರಿಹಾರ ಬಿಡುಗಡೆ ಮಾಡಿದಾಗ್ಯೂ ಇದುವರೆಗೆ ಕೇವಲ 500 ಮನೆಗಳ ನಿರ್ಮಾಣ ಆಗಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಪರಿಹಾರ ನೀಡಲಾದ ಮನೆಗಳ ನಿರ್ಮಾಣಕ್ಕೆ ಮೊದಲು ಕ್ರಮಕೈಗೊಳ್ಳಬೇಕು. ಮನೆ ನಿರ್ಮಿಸಿಕೊಳ್ಳದಿದ್ದರೆ ಅಂತಹವರ ಪರಿಹಾರ ರದ್ದುಗೊಳಿಸಬೇಕು ಹಾಗೂ ಮನೆ ನಿರ್ಮಾಣದಲ್ಲಿ ಪ್ರಗತಿ ಸಾಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವ ಅಶೋಕ್ ತಿಳಿಸಿದರು.
ಪ್ರತಿವರ್ಷ ಪ್ರವಾಹದಿಂದ ಬಾಧಿತಗೊಳ್ಳುವ ಹಳ್ಳಿಗಳನ್ನು ಸ್ಥಳಾಂತರಿಸಲು ಅವಕಾಶಗಳಿವೆ. ಆದರೆ ಈಗಾಗಲೆ ನಿರ್ಮಿಸಿ ಕೊಟ್ಟಿರುವ ಮನೆಗಳಿಗೆ ಜನ ಹೊಗದೇ, ಮೊದಲು ಇದ್ದ ಮನೆಗಳಲ್ಲೇ ವಾಸಿಸುತ್ತಿದ್ದಾರೆ. ಬೆಳೆ ಪರಿಹಾರದ ಸಮಿಕ್ಷೇಯನ್ನು ಆದಷ್ಟು ಬೇಗ ಮೂಗಿಸಿ ಪರಿಹಾರ ನೀಡಬೇಕು. ಜಿಲ್ಲಾಡಳಿತ ಪ್ರವಾಹ ನಿರ್ವಹಣೆಗೆ ಮುಂಜಾಗೃತ ಕ್ರಮ ಕೈಗೊಳಬೇಕು. ಆ ಸಂದರ್ಭದಲ್ಲಿ ಅಧಿಕಾರಿಗಳು ರಜೆ ಹಾಕದೇ ಕರ್ತವ್ಯಕ್ಕೆ ಹಾಜರಾಗಬೇಕು; ಪ್ರವಾಹ ನಿರ್ವಹಣೆ ಅನುದಾನ ದುರುಪಯೋಗ ಆಗಬಾರದು ಎಂದು ಕಂದಾಯ ಸಚಿವರು ಹೇಳೀದರು
ಶೀಘ್ರ ಬೆಳೆ ಪರಿಹಾರ
ಕಳೆದ ವರ್ಷದಿಂದ ಎದುರಾಗಿರುವ ಅತಿವೃಷ್ಟಿ ಮತ್ತು ಪರಿಹಾರದ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಆಗಸ್ಟ್‌ನಲ್ಲಿ ಶೇ.139 ರಷ್ಟು ಅಧಿಕ ಮಳೆಯಿಂದ ಪ್ರವಾಹ ಸ್ಥಿತಿ ಎದುರಾಗಿತ್ತು. ಸದ್ಯಕ್ಕೆ ಪ್ರವಾಹ ಸ್ಥಿತಿಯಿಲ್ಲ. ಹುಕ್ಕೇರಿಯಲ್ಲಿ ಮಾತ್ರ ಅತಿವೃಷ್ಟಿಯಿಂದ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ಧಾರೆ. ಜಿಲ್ಲೆಯಲ್ಲಿ ಒಟ್ಟಾರೆ 4619 ಮನೆಗಳಿಗೆ ಹಾನಿ ಯಾಗಿದ್ದು, ಸದ್ಯಕ್ಕೆ ಕಾಳಜಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿಲ್ಲ. 14 ಸಾವಿರ ರೈತರಿಗೆ 6.40 ಕೋಟಿ ಬೆಳೆ ಪರಿಹಾರ ಪಾವತಿಸಲಾಗಿದ್ದು, ಉಳಿದವರಿಗೆ ಶೀಘ್ರ ಪಾವತಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
1.66 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದ್ದು, ಜಂಟಿ ಸಮೀಕ್ಷೆ ನಡೆದಿದ್ದು, ಇದಾದ ಬಳಿಕ ಹಾನಿಯ ಸಮಗ್ರ ವರದಿಯನ್ನು ಸಲ್ಲಿಸಲಾಗುವುದು. ಹತ್ತು ದಿನಗಳಲ್ಲಿ ಪರಿಹಾರ ವಿತರಣಾ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಮನೆಹಾನಿಗೆ 488 ಕೋಟಿ ರೂ. ಪರಿಹಾರ
ಜಿಲ್ಲೆಯಲ್ಲಿ ಕಳೆದ ವರ್ಷ ಮನೆ ಕಳೆದುಕೊಂಡಿರುವ ಎ.ಬಿ ಮತ್ತು ಸಿ ಕೆಟಗರಿಯ ಕುಟುಂಬಗಳಿಗೆ ಒಟ್ಟು 488 ಕೋಟಿ ರೂಪಾಯಿ ಪರಿಹಾರ ವಿತರಣೆ ಮಾಡಲಾಗಿರುತ್ತದೆ. ಹಣದ ಕೊರತೆಯಿಲ್ಲ; ಮಳೆ ಹಾಗೂ ಕೊರೊನಾ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ವಿಳಂಬವಾಗಿದೆ. ಪಟ್ಟಿಯಿಂದ ಬಿಟ್ಟು ಹೋಗಿರುವ ಮನೆಗಳನ್ನು ಮರು ಸಮೀಕ್ಷೆ ಕೈಗೊಂಡು ಪುನಃ ವಸತಿ ನಿಗಮಕ್ಕೆ ಕಳಿಸಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಹೇಳಿದರು.