PM NARENDRA MODI(IMAGE COURTESY: TWITTER.COM/BJP4INDIA)
ಮೈಸೂರು: ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಮೂಲಾಗ್ರವಾಗಿ ಮೂಲಭೂತ ಬದಲಾವಣೆಯನ್ನು ತರುವ ಬಹುದೊಡ್ಡ ಉದ್ದೇಶವೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವದಲ್ಲಿ ಸೋಮವಾರ ಪ್ರಧಾನ ಭಾಷಣ ಮಾಡಿದ ಅವರು, ತಮ್ಮ ಮಾತಿನಲ್ಲಿ ಮುಖ್ಯವಾಗಿ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸ್ತಾಪಿಸಿದರು. ಈ ನೀತಿಯು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳಿಗೆ ಕಾರಣವಾಗುವ ಮಹತ್ತ್ವದ ಮಿಷನ್ ಇದಾಗಿದೆ ಎಂದು ಹೇಳಿದರು.
“ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳನ್ನು ತರುವ ಪ್ರಮುಖ ಉದ್ದೇಶ ಹೊಂದಿದೆ. ನರ್ಸರಿ ಮಟ್ಟದಿಂದ ಪಿಎಚ್‌ಡಿʼವರೆಗೆ ಇದು ಎಲ್ಲವನ್ನೂ ಬದಲಾಯಿಸಲಿದೆ. ನಮ್ಮ ದೇಶದ ಸಮರ್ಥ ಯುವಕರನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ನಾವು ಬಹು ಆಯಾಮವುಳ್ಳ ವಿಧಾನದತ್ತ ಗಮನ ಹರಿಸಿದ್ದೇವೆ. ಉದ್ಯೋಗಗಳ ಸ್ವರೂಪವನ್ನು ಬದಲಿಸಲು ನಾವು ಅವುಗಳನ್ನು ಸುಲಭವಾಗಿ ಹೊಂದಿಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಧಾನಿ ನುಡಿದರು.
ಯುವಜನರ ಸಬಲೀಕರಣ
ಒಂದು ಕಡೆ ಈ ನೀತಿಯು ಶಿಕ್ಷಣ ಕ್ಷೇತ್ರದ ಭವಿಷ್ಯವನ್ನು ಸುಧಾರಿಸುತ್ತಿದೆ. ಇನ್ನೊಂದೆಡೆ ಯುವಜನರನ್ನು ಸಬಲೀಕರಣಗೊಳಿಸುತ್ತಿದೆ. ಪ್ರತಿಯೊಂದು ಹಂತದಲ್ಲೂ ಬಾಲಕಿಯರ ಒಟ್ಟು ದಾಖಲಾತಿ ಈಗ ಹುಡುಗರಿಗಿಂತ ಹೇಗೆ ಹೆಚ್ಚಾಗಿದೆ ಎಂಬುದನ್ನು ಪ್ರಧಾನಿ ಉಲ್ಲೇಖಿಸಿದರಲ್ಲದೆ, ಉನ್ನತ ಶಿಕ್ಷಣದಲ್ಲಿ ಮತ್ತು ಹೊಸ ತಂತ್ರಜ್ಞಾನದಲ್ಲಿ ಯುವತಿಯರ ಭಾಗವಹಿಸುವಿಕೆ ಹೆಚ್ಚಾಗಿದೆ ಎಂದರು.
ಕಳೆದ ಆರು ವರ್ಷಗಳಲ್ಲಿ ಒಂದು ಹೊಸ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಯನ್ನು ಸರಕಾರವು ಸ್ಥಾಪಿಸಿದ ಬಗ್ಗೆ ಮಾಹಿತಿ ನೀಡಿದ ಅವರು, ಹೊಸ ಐಐಟಿಗಳಲ್ಲಿ ಒಂದನ್ನು ಧಾರವಾಡದಲ್ಲಿ ತೆರೆಯಲಾಯಿತು. ಮೈಸೂರು ವಿಶ್ವವಿದ್ಯಾಲಯದಂತೆಯೇ ಈ ಐಐಟಿ ಕೂಡ ಕರ್ನಾಟಕದಲ್ಲಿದೆ. ಕಳೆದ ಆರು ವರ್ಷಗಳಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಗಳನ್ನು ಸ್ಥಾಪಿಸಲಾಗಿದೆ. 2014ಕ್ಕೂ ಮೊದಲು ದೇಶದಲ್ಲಿ ಕೇವಲ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಐಐಎಂʼಗಳು ಇದ್ದವು ಎಂದು ಪ್ರಧಾನಿ ಹೇಳಿದರು.
ರಾಜ್ಯದಲ್ಲಿ ಜಾರಿಗೆ ವೇಗದ ಕ್ರಮ
ಘಟಿಕೋತ್ಸವಕ್ಕೆ ನಂತರ ವಿವಿ ಕ್ಯಾಂಪಸ್ಸಿನಲ್ಲಿಯೇ ಸುದ್ದಿಗಾರರ ಜತೆ ಮಾತನಾಡಿದ ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ; “ನೂತನ ಶಿಕ್ಷಣ ನೀತಿ ಜಾರಿಗೆ ಸರಕಾರ ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ನೀತಿಯ ಅನುಷ್ಟಾನಕ್ಕಾಗಿ ರೂಪಿಸಲಾಗಿರುವ ಕಾರ್ಯಪಡೆ ಮೊದಲ ವರದಿಯನ್ನು ನೀಡಿದೆ. ಈ ವರ್ಷ ಎಲ್ಲ ಸಿದ್ಧತೆಗಳನ್ನು ಪರಿಣಾಮಕಾರಿಯಾಗಿ ಮಾಡಿಕೊಂಡು 2021ನೇ ಸಾಲಿನಿಂದ ನೂತನ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿ ಮಾಡಲಾಗುವುದು. ಘಟಿಕೋತ್ಸವ ಕಾರ್ಯಕ್ರದಲ್ಲಿ ದಿಲ್ಲಿಯಿಂದಲೇ ಆಲ್‌ಲೈನ್ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಶಿಕ್ಷಣ ನೀತಿಯ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಹೀಗಾಗಿ, ಕಳೆದ ಎಂಟು ತಿಂಗಳಿಂದಲೇ ರಾಜ್ಯ ಸರಕಾರ ಈ ನಿಟ್ಟಿನಲ್ಲಿ ತಯಾರಿ ಮಾಡಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪನೆ ಮಾಡಿದ ಮೈಸೂರು ವಿಶ್ವವಿದ್ಯಾಲಯವು ಇಂದು ಶತಮಾನೋತ್ಸವ ಘಟಿಕೋತ್ಸವದ ಸಂಭ್ರಮದಲ್ಲಿದೆ. ಇದಕ್ಕೆ ಮೂಲ ಕಾರಣರಾದ ನಾಲ್ವಡಿ ಪ್ರಭುಗಳಿಗೆ ಸರಕಾರ ನಮನಗಳನ್ನು ಸಲ್ಲಿಸುತ್ತದೆ. ಶಿಕ್ಷಣದ ಬಗ್ಗೆ ಅವರಿಗಿದ್ದ ದೂರದೃಷ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರಭುಗಳ ಪ್ರೇರೇಪಣೆಯೊಂದಿಗೆ ಸರಕಾರ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತದೆ ಎಂದು ಡಿಸಿಎಂ ತಿಳಿಸಿದರು.