ಮೈಸೂರಿನಲ್ಲಿ ಈಗ ವಿಶ್ವವಿಖ್ಯಾತ ದಸರಾ ಸಡಗರ. ಈ ನಾಡಹಬ್ಬದ ಶುಭ ಸಂದರ್ಭದಲ್ಲಿ ‘ಪೆಟ್ರೋಮ್ಯಾಕ್ಸ್’ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಿದ್ದು, 15 ದಿನಗಳ ಕಾಲ ಮೈಸೂರಿನಲ್ಲೇ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ. ವಿಶೇಷವೆಂದರೆ, ಈ ಚಿತ್ರದ ನಾಯಕಿಯಾಗಿ ಚಿಕ್ಕಬಳ್ಳಾಪುರ ಮೂಲದ ಹರಿಪ್ರಿಯಾ ನಟಿಸುತ್ತಿದ್ದಾರೆ.
ಸತೀಶ್ ಪಿಕ್ಚರ್ ಹೌಸ್ ನಿರ್ಮಿಸುತ್ತಿರುವ ಹಾಗೂ ಸ್ಟುಡಿಯೋ 18 ಮತ್ತು ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಸಹ ನಿರ್ಮಾಣವಿರುವ ಈ ಚಿತ್ರವನ್ನು ’ಸಿದ್ಲಿಂಗು’, ’ನೀರ್ ದೋಸೆ’ ಚಿತ್ರಗಳ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾ ರಚನೆ ಕೂಡ ವಿಜಯ್ ಪ್ರಸಾದ್ ಅವರದ್ದೇ.
ನೀನಾಸಂ ಸತೀಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಅರುಣ್ (ಗೊಂಬೆಗಳ ಲವ್ ಖ್ಯಾತಿ), ನಾಗಭೂಷಣ್, ಕಾರುಣ್ಯಾ ರಾಮ್ ಮುಂತಾದವರು ನಟಿಸುತ್ತಿದ್ದಾರೆ.
ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ’ಪೆಟ್ರೋಮ್ಯಾಕ್ಸ್’ ಗೆ ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ವಿನಯ್ (ತುಮಕೂರು) ಸಹ ನಿರ್ದೇಶನ ಈ ಚಿತ್ರಕ್ಕಿದೆ. ಪೆಟ್ರೋಮ್ಯಾಕ್ಸ್ ಬೆಳಕನ್ನು ಸಂಕೇತಿಸುತ್ತದೆಯಲ್ಲದೆ, ಅದು ಎಲ್ಲರ ಜೀವನದಲ್ಲಿ, ಅದರಲ್ಲೂ ಸಿನಿಮಾದಲ್ಲಿ ಬಂದುಹೋಗುವ ಪಾತ್ರಗಳಿಗೆ ಅಗತ್ಯವಾಗಿದೆ ಎಂದು ನಿರ್ದೇಶಕರು ಹೇಳುತ್ತಾರೆ.