ಚಿಕ್ಕಬಳ್ಳಾಪುರ: ಪದವೀಧರರು, ಶಿಕ್ಷಕರ ಹಿತಕ್ಕಾಗಿ ರಾಜ್ಯ ಬಿಜೆಪಿ ಸರಕಾರ ಕೆಲಸ ಮಾಡುತ್ತಿದ್ದು, ಕೋವಿಡ್ ಆರ್ಥಿಕ ಸಂಕಷ್ಟದಲ್ಲೂ ಎಲ್ಲ ಜನರಿಗೆ ನೆರವು ನೀಡುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಪರವಾಗಿ ಚಿಕ್ಕಬಳ್ಳಾಪುರದ ನಾನಾ ಭಾಗಗಳಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡು ಮಾತನಾಡಿದರು.
ಬಿಜೆಪಿ ಅಭಿವೃದ್ಧಿಯ ಆಧಾರದಲ್ಲಿ ಮತ ಯಾಚಿಸುತ್ತದೆ. ಕೋವಿಡ್ʼನಿಂದಾದ ಆರ್ಥಿಕ ಸಂಕಷ್ಟದಿಂದ ಹೊರರಾಜ್ಯ, ದೇಶಗಳಲ್ಲಿ ಉದ್ಯೋಗ ಕಡಿತ, ವೇತನ ಕಡಿತವಾಗಿದೆ. ಆದರೆ ನಮ್ಮ ಸರ್ಕಾರವು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ವೇತನ, ಶಿಷ್ಯವೇತನ ಮೊದಲಾದವುಗಳಲ್ಲಿ ಹೆಚ್ಚಳ ಮಾಡಿದೆ ಎಂದು ವಿವರಿಸಿದರು.
ಆರ್ಥಿಕ ಸಂಕಷ್ಟದಿಂದ ಹೊರೆಯಾದರೂ ಉದ್ಯೋಗಿಗಳ ವೇತನ ಕಡಿತ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸಾಲ ಮಾಡಿಯಾದರೂ ಆರ್ಥಿಕ ಸಂಕಷ್ಟ ನೀಗಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಪದವೀಧರರು ಮತ್ತು ಶಿಕ್ಷಕರ ವಿಚಾರದಲ್ಲಿ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ ಎಂದರು.
ಪದವೀಧರರು ಪ್ರಬುದ್ಧ ಮತದಾರರಾಗಿದ್ದು, ಸಮಾಜಮುಖಿಯಾಗಿ ಚಿಂತಿಸಿ ಮತದಾನ ಮಾಡುತ್ತಾರೆ. ಆ ಕಾರಣದಿಂದಲೇ ಆಗ್ನೇಯ ಕ್ಷೇತ್ರದಲ್ಲಿ ಹಿಂದೆ 8 ಬಾರಿ ಬಿಜೆಪಿ ಗೆದ್ದಿದೆ. ನಮ್ಮ ಅಭ್ಯರ್ಥಿ ಚಿದಾನಂದಗೌಡರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಗೆಲ್ಲಿಸಿದರೆ ಮತ್ತಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿ ಮಾಡಿರುವ ಹೊಸ ಶಿಕ್ಷಣ ನೀತಿ ಕ್ರಾಂತಿಯನ್ನುಂಟುಮಾಡಲಿದೆ. ಈ ನೀತಿಯು ನಗರ ಮತ್ತು ಗ್ರಾಮೀಣ ಎಂದು ಪ್ರತ್ಯೇಕತೆ ಮಾಡದೆ ಎಲ್ಲ ಕಡೆ ಸಮಾನ ರೀತಿಯ ಶಿಕ್ಷಣ ನೀಡುವ ಕ್ರಮವನ್ನು ತರಲಿದೆ ಎಂದು ತಿಳಿಸಿದರು.
ಅನೇಕ ಪಕ್ಷಗಳ ನಾಯಕರು ಹೋರಾಟ, ಮತಯಾಚನೆ ಮಾಡುತ್ತಿದ್ದಾರೆ. ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಪ್ರತಿಪಕ್ಷಗಳ ನಾಯಕರು ಯಾರೂ ಸಮಾಜಮುಖಿಯಾಗಿ ಕೆಲಸ ಮಾಡುತ್ತಿಲ್ಲ. ನಾನು ಮೇಲೆ ಇರಬೇಕೆಂಬ ಉದ್ದೇಶದಿಂದ ಮಾತ್ರ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಬಿಜೆಪಿ ಪಕ್ಷವು ಮೊದಲು ನಮ್ಮ ದೇಶ, ನಂತರ ಪಕ್ಷ, ಬಳಿಕ ನಾನು ಎಂದು ಹೇಳುತ್ತದೆ ಎಂದರು.
ಸಚಿವರು ಹೇಳಿದ ಇತರೆ ಅಂಶಗಳು
*ಎಂಜಿನಿಯರ್, ವೈದ್ಯರು, ಶಿಕ್ಷಕರು ಅನೇಕ ಪದವೀಧರರು ಮತದಾನ ಮಾಡಲು ನೋಂದಣಿ ಮಾಡಿಸಿಕೊಂಡಿಲ್ಲ. ಅವರೆಲ್ಲರನ್ನೂ ನೋಂದಣಿ ಮಾಡಿಸಬೇಕು.
*ಚಿಕ್ಕಬಳ್ಳಾಪುರದಲ್ಲಿ 15 ಸಾವಿರ ಪದವೀಧರ ಮತದಾರರಿದ್ದಾರೆ. ಇನ್ನೂ ಹೆಚ್ಚು ಇದ್ದರೂ ನೋಂದಣಿ ಮಾಡಿಕೊಂಡಿರುವವರು ಬಹಳ ಕಡಿಮೆ. ಕೋಲಾರದಲ್ಲಿ 18 ಸಾವಿರ ಮತದಾರರಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 40 ಸಾವಿರ ಮತದಾರರಿದ್ದಾರೆ.
*ಈ ಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಲ್ಲಿ ಗೆಲವು ದೊರೆಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಮ್ಮ ಎಲ್ಲ ಕಾರ್ಯಕರ್ತರು ಪ್ರತಿಯೊಂದು ಚುನಾವಣೆ ಮುಖ್ಯ ಎಂದು ಅರಿತುಕೊಂಡು ಪ್ರಚಾರ ಮಾಡಬೇಕು. ಕೆಳಮನೆಯಂತೆ ಮೇಲ್ಮನೆ ಕೂಡ ಮುಖ್ಯ.
*ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ 15 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ನಾನೊಬ್ಬನೇ ಶಾಸಕ ಇದ್ದೇನೆ. ಮುಂದಿನ ಬಾರಿ ಕನಿಷ್ಠ 7 ರಿಂದ 8 ಕ್ಷೇತ್ರಗಳನ್ನು ಗೆಲ್ಲುವ ಮಟ್ಟಿಗೆ ಶಕ್ತಿ ವೃದ್ಧಿಯಾಗಬೇಕು.