lead photo: B.S. Yediyurappa@BSYBJP
ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ನಡೆಯುತ್ತಿರುವುದೇನು? ಎಲ್ಲವೂ ಗೊತ್ತಾಗುವಂತೆಯೇ ಇದೆ! ಆದರೆ, ಅಷ್ಟೂ ನಿಗೂಢವಾಗಿಯೇ ಇದೆ. ಯತ್ನಾಳ್ ಮಾತನಾಡುತ್ತಿದ್ದಾರೆ? ಸರಿ; ಅವರ ಹಿಂದೆ ಯಾರೂ ಇಲ್ಲವಾ? ಡಾ.ಅಶ್ವತ್ಥನಾರಾಯಣ ಅವರನ್ನೂ ಈ ನಿಗೂಢತೆಯೊಳಕ್ಕೆ ಎಳೆದು ತರಲಾಗಿದೆ. ಹಾಗಾದರೆ; ಅವರ ಪಾತ್ರವೇನು? ಬೈಎಲೆಕ್ಷನ್ ನಂತರ ಏನಾದರೂ ನಡೆಯುತ್ತಾ? ಅದಕ್ಕೆ ಇದೆಲ್ಲ ಪೂರ್ವ ನಾಟಕವಾ?
ಬೆಂಗಳೂರು: ಯಡಿಯೂರಪ್ಪ ಪದಚ್ಯುತಿಗೆ ಬಿಜೆಪಿಯಲ್ಲೇ ಪ್ರಯತ್ನಗಳು ನಡೆಯುತ್ತಿವೆ ಎಂಬ ಸುದ್ದಿಗಳ ಹಿನ್ನಲೆಯಲ್ಲಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಡಿಸಿರುವ ಬಾಂಬ್ ಅನ್ನು ಡಿಫ್ಯೂಸ್ ಮಾಡುವ ಕೆಲಸದಲ್ಲಿ ಬಿಜೆಪಿ ಸರ್ಕಸ್ ಆರಂಭಿಸಿದೆ. ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪ ಚುನಾವಣೆ ಹೊತ್ತಿನಲ್ಲಿಯೇ ಹೊರಬಂದಿರುವ ಈ ಡೈಲಾಗ್‌ಗಳ ರೂಪದ ಪಟಾಕಿಗಳು ಬಾಂಬ್‌ನಷ್ಟೇ ಸದ್ದು ಮಾಡುತ್ತಿರುವುದು ಆಡಳಿತ ಪಕ್ಷಕ್ಕೆ ತೀವ್ರ ಇರಿಸುಮುರುಸು ಉಂಟು ಮಾಡಿದೆ.
ತಣ್ಣಗೆ ಎರಡೂ ಕ್ಷೇತ್ರಗಳಲ್ಲಿ ವಿವಿಧ ಪಕ್ಷಗಳ ಸ್ಥಳೀಯ ನಾಯಕರ ಆಯಾರಾಂ ಗಯಾರಾಂಗಷ್ಟೇ ಸೀಮಿತವಾಗಿದ್ದ ಚುನಾವಣೆ ರಾಜಕೀಯ, ಮಂಗಳವಾರ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಾಂಗ್ರೆಸ್ ನಾಯಕರು ಆರ್.ಆರ್. ನಗರದಲ್ಲಿ ವೋಟರ್ ಐಡಿಗಳನ್ನು ಸಂಗ್ರಹ ಮಾಡುತ್ತಿರುವ ಸುದ್ದಿ ತಿಳಿಸಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯನ್ನು ಮೀರ್‌ಸಾದಿಕ್ ಎಂದು ಕರೆದಿದ್ದರು. ಎಚ್.ಡಿ.ಕುಮಾರಸ್ವಾಮಿ ಸರಕಾರದ ಪತನಕ್ಕೆ ಡಿಕೆ ಬ್ರದರ್ಸ್ ಹಾಗೂ ಸಿದ್ದರಾಮಯ್ಯ ಕಾರಣ ಎಂದು ದೂರಿದ್ದರು.
ಈ ಆರೋಪಕ್ಕೆ ಅದಕ್ಕಿಂತ ತೀವ್ರವಾಗಿ ಪ್ರತಿಕ್ರಿಯಿಸಿದ್ದ ಸಂಸದ ಡಿ.ಕೆ.ಸುರೇಶ್; ಆಶ್ವತ್ಥನಾರಾಯಣ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರಲ್ಲದೆ, ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ʼಮೀರ್‌ಸಾದಿಕ್ʼ ರೀತಿಯಲ್ಲಿ ಹಿಂಬಾಗಿಲಿನಿಂದ ಕೆಲಸ ಮಾಡುತ್ತಿರುವವರು ಯಾರು? ಯಾರು, ಯಾರ ಮನೆ ಬಾಗಿಲಿಗೆ ಹೋಗುತ್ತಿದ್ದಾರೆಂಬುದು ತಮಗೆ ಗೊತ್ತಿದೆ ಎಂದಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಡಿಕೆಸು; ಸರಕಾರದಲ್ಲಿದೆ ಎನ್ನಲಾದ ಮಿತ್ರಮಂಡಳಿಯನ್ನು ಪ್ರಸ್ತಾಪ ಮಾಡಿದ್ದಾರೆ. ಅಲ್ಲದೆ, ಅಷ್ಟದಿಕ್ಪಾಲಕರು, ಪಂಚಪಾಂಡವರು ೨,೦೦೦ ಕೋಟಿ ರೂ. ಲೂಟಿ ಹೊಡೆದಿದ್ದಾರೆಂದು ನೇರ ಆರೋಪ ಮಾಡಿದ್ದಾರೆ.
ಇವೆರಡೂ ಏಟು-ಎದಿರೇಟುಗಳ ಕಾರಣದಿಂದಲೇ ಬೆಂಗಳೂರು ಕುದಿಯುತ್ತಿದ್ದರೆ, ಅತ್ತ ವಿಜಯಪುರದಲ್ಲಿ ಯತ್ನಾಳ್ ಸಿಡಿಸಿದ ಬಾಂಬ್ ಬಿಜೆಪಿ ಪಡಸಾಲೆಯಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷಿ ಮಾಡಿದೆ. “ಮುಖ್ಯಮಂತ್ರಿ ಯಡಿಯೂರಪ್ಪ ಬಹಳ ದಿನ ಅಧಿಕಾರದಲ್ಲಿ ಇರಲ್ಲ. ವರಿಷ್ಠರಿಗೆ ಅವರು ಸಾಕಾಗಿ ಹೋಗಿದ್ದಾರೆ” ಎಂದು ಬಸನಗೌಡರು ಬಿಟ್ಟ ಬಾಣ ತಗುಲಬೇಕಾದವರಿಗೆ ತೀವ್ರವಾಗಿಯೇ ತಟ್ಟಿದೆ. ಅಷ್ಟು ಮಾತನಾಡಿ ಸುಮ್ಮನಾಗಲಿಲ್ಲ ಅವರು. ಉತ್ತರ ಕರ್ನಾಟಕದ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆಂದು ಅವರು ಹೇಳಿರುವುದು ಸಿಎಂ ಬಣಕ್ಕೆ ನುಂಗಲಾದ ಬಿಸಿತುಪ್ಪವಾಗಿದೆ.
ಈಗ ಬೇಕಿರಲಿಲ್ಲ ಇದೆಲ್ಲ
ಎರಡೂ ಕ್ಷೇತ್ರಗಳ ಉಪ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಎರಡೂ ಕ್ಷೇತ್ರಗಳನ್ನು ಗೆದ್ದರೂ ಅಥವಾ ಸೋತರೂ ಬಿಜೆಪಿ ಸರಕಾರಕ್ಕೆ ಏನೂ ಆಗುವುದಿಲ್ಲ. ಆದರೆ, ಉಪ ಚುನಾವಣೆಯನ್ನು ಕೈಚೆಲ್ಲಬಾರದು. ವರಿಷ್ಠರ ಮುಂದೆ ದುರ್ಬಲ ಎನಿಸಿಕೊಳ್ಳದಿರಬೇಕಾದರೆ ಗೆದ್ದೇಗೆಲ್ಲಬೇಕು ಎನ್ನುವುದು ಯಡಿಯೂರಪ್ಪ ಹಠ. ಹಾಗಂತ ಕಾಂಗ್ರೆಸ್ ಏನೂ ಕಮ್ಮಿ ಇಲ್ಲ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಎದುರಾದ ಮೊದಲ ಎಲೆಕ್ಷನ್ ಇದು. ಈ ಗೆಲುವು ಅವರಿಗೂ ಅಗತ್ಯ. ಅದೇ ಅವರ ಸಹೋದರ ಡಿ.ಕೆ.ಸುರೇಶ್ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜರಾಜೇಶ್ವರಿ ನಗರ ಬರುವುದರಿಂದ ಅವರಿಗೂ ಇಲ್ಲಿನ ವಿಜಯ ಬಹಳಮುಖ್ಯ. ಜತೆಗೆ, ಮುನಿರತ್ನ ಅವರಂತೂ ಡಿಕೆ ಬ್ರದರ್ಸ್ ಪಾಲಿಗೆ ಬಿಗ್ ಟಾರ್ಗೆಟ್. ಇವೆಲ್ಲ ಕಾರಣಗಳ ಹಿನ್ನೆಲೆಯಲ್ಲಿ ಈ ಉಪ ಚುನಾವಣೆಗೆ ವಿಪರೀತ ಎನ್ನುವಷ್ಟು ಮಹತ್ತ್ವ ಬಂದಿದೆ.
ಡ್ಯಾಮೇಜ್ ಕಂಟ್ರೋಲ್‌ಗಿಳಿದ ಕಟೀಲ್
ಅನಿರೀಕ್ಷಿತವಾಗಿ ಚುನಾವಣೆ ಅಖಾಡದಲ್ಲಿ ಎದ್ದ ಸುನಾಮಿ ಯಡಿಯೂರಪ್ಪ ಅವರಿಗೂ ಇರಿಸುಮುರಿಸು ಉಂಟು ಮಾಡಿದೆ. ಅವರ ಸುತ್ತಮುತ್ತ ಇರೋರೇ ಅವರಿಗೆ ಹಳ್ಳ ತೋಡುತ್ತಿದ್ದಾರೆ ಎಂಬುದು ಇದೀಗ ಗುಟ್ಟಾಗಿ ಉಳಿದಿಲ್ಲ. ಯತ್ನಾಳ್ ಹೇಳಿರುವ ಮಾತುಗಳನ್ನು ಅಸತ್ಯ ಎನ್ನಲಾಗದು ಎನ್ನುತ್ತಾರೆ ಅದೇ ಪಕ್ಷದ ನಾಯಕರೊಬ್ಬರು.
ಇದರ ನಡುವೆ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದಿದ್ದಾರೆ. ಅವರ ಪ್ರಕಾರ ಯಡಿಯೂರಪ್ಪನವರೇ ಮುಂದಿನ ಮೂರು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯಲಿದ್ದಾರೆ. ಅಶಿಸ್ತು ಹಾಗೂ ಅನಗತ್ಯ ಹೇಳಿಕೆ ನೀಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ ಎಂದು ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಇದುವರೆಗೂ ಸರಕಾರ ಮತ್ತು ಪಕ್ಷದ ಬಗ್ಗೆ ನೇರವಾಗಿ, ನಿಷ್ಠುರವಾಗಿ ಮಾತನಾಡುತ್ತಿದ್ದ ಯತ್ನಾಳ್ ಅವರಿಗೆ ಈವರೆಗೆ ಏನಾದರೂ ನೊಟೀಸ್ ನೀಡಲಾಗಿದೆಯಾ? ಇಲ್ಲ. ಇದಕ್ಕೆ ಬಿಜೆಪಿ ಒಳಗೆ ಉತ್ತರ ಇಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಾಗಿನಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಯತ್ನಾಳ್ ಅವರು, ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. ಇದರ ಜತೆಗೆ, ಬುಧವಾರವೂ ಅವರು, ಸಿಎಂ ಮೇಲೆ ಮತ್ತೂ ದಾಳಿ ಮುಂದುವರಿಸಿದ್ದಾರೆ.
ಡಿಫೆನ್ಸ್ʼಗೆ ಇಳಿದ ಟೀಮ್ ಶಿವಮೊಗ್ಗ
ಇನ್ನೊಂದೆಡೆ ಯತ್ನಾಳ್ ಮೇಲೆ ಬಿಜೆಪಿಯ ಶಿವಮೊಗ್ಗ ಜಿಲ್ಲೆ ನಾಯಕರು ಮುಗಿಬಿದ್ದಿದ್ದಾರೆ. ಯಾವ ನೊಟೀಸ್ ನೀಡವ ಅಗತ್ಯವಿಲ್ಲ, ವಿಚಾರಣೆಯೂ ಬೇಕಾಗಿಲ್ಲ. ಕೂಡಲೇ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದರೆ; ಇನ್ನು ಹೊನ್ನಾಳಿಯ ರೇಣುಕಾಚಾರ್ಯ, ಯತ್ನಾಳ್ ಓರ್ವ ದುರಂತ ನಾಯಕ ಎಂದಿದ್ದಾರೆ. ಇದರ ನಡುವೆ ಬಿಜೆಪಿಯಲ್ಲಿ ಈಗ ಶಿವಮೊಗ್ಗ ವರ್ಸಸ್ ಉತ್ತರ ಕರ್ನಾಟಕದ ಕದನ ಶುರುವಾಗುವ ಲಕ್ಷಣವೂ ಕಾಣುತ್ತಿದೆ.
ಮತ್ತೆ ಗುಡುಗಿದ ಡಿಸಿಎಂ
ಸತ್ಯ ಕಹಿಯಾಗಿರುತ್ತದೆ ಎಂಬುದು ಡಿ.ಕೆ.ಸುರೇಶ್ ಅವರ ಪ್ರತಿಕ್ರಿಯೆ ನೋಡಿದರೆ ಅರ್ಥವಾಗುತ್ತದೆ. ಅವರೆಷ್ಟು ಹತಾಶರಾಗಿದ್ದಾರೆ ಎಂಬುದು ಅವರ ಮಾತುಗಳಿಂದಲೇ ತಿಳಿಯುತ್ತದೆ. ನನ್ನನ್ನು ಅವರು; ಅವನು-ಇವನು ಎಂದು ಏಕವಚನದಲ್ಲಿ ಕರೆದಿದ್ದಾರೆ. ಸಂತೋಷ. ನಾನೆಂದಿಗೂ ಕಿರಿಯವನೇ. ಅವರ ಮಾತುಗಳು ಅವರ ಸಂಸ್ಕಾರಕ್ಕೆ ಹಿಡಿದ ಕನ್ನಡಿ. ನಾನು ಅವರ ಭಾಷೆಯಲ್ಲಿ ಉತ್ತರ ಕೊಡುವುದಕ್ಕೆ ಹೋಗುವುದಿಲ್ಲ. ಎಲ್ಲವನ್ನೂ ಜನರೇ ಗಮನಿಸುತ್ತಿದ್ದಾರೆ ಎಂದು ಡಿಕೆಸು ಕಾಲೆಳೆದಿದ್ದಾರೆ ಡಿಸಿಎಂ ಡಾ. ಅಶ್ವತ್ಥನಾರಾಯಣ.
ಬುಧವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿ, ಅನಗತ್ಯವಾಗಿ ಗೊಂದಲ ಉಂಟು ಮಾಡಲಾಗುತ್ತಿದೆ. ಯಡಿಯೂಪ್ಪ ನಮ್ಮ ನಾಯಕರು. ಇಡೀ ಅವಧಿಗೆ ಅವರೇ ಮುಖ್ಯಮಂತ್ರಿ. ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮಿಶ್ರ ಸರಕಾರ ಹೇಗೆ ಪತನವಾಯಿತು ಎಂಬುದು ಇಡೀ ಜಗತ್ತಿಗೇ ಗೊತ್ತು. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಯಾರು, ಯಾರನ್ನು ಎಲ್ಲೆಲ್ಲಿಗೆ ಕಳಿಸಿದರು? ಬೀದಿಯಲ್ಲಿ ನಿಂತು ಏನೆಲ್ಲ ಡ್ರಾಮಾ ಮಾಡಿದರು? ನಂಬಿದ ಜೆಡಿಎಸ್ ಬೆನ್ನಿಗೆ ಹೇಗೆ ಇರಿದರು? ಅಷ್ಟೇ ಏಕೆ? ತಮ್ಮ ಪಕ್ಷದ ಹೈಕಮಾಂಡಿಗೂ ಹೇಗೆಲ್ಲ ಯಾಮಾರಿಸಿದರು? ಎಂದೆಲ್ಲ ನಾನು ಹೇಳಬೇಕೆ? ಜನರಿಗೆ ಗೊತ್ತಿದೆ. ಅವರೇ ಉತ್ತರ ಕೊಡುತ್ತಾರೆ. ಗುಂಡಿ ತೋಡುವ ಅಭ್ಯಾಸ, ಅಕ್ಕಪಕ್ಕದವರನ್ನು ನಂಬಿಸಿ ಗುಂಡಿಗೆ ತಳ್ಳುವುದು ಅವರ ರಾಜಕೀಯ ನೀತಿ. ನಿರಂತರವಾಗಿ ಪಿತೂರಿ ಮಾಡಿಕೊಂಡು ಇರೋರಿಗೆ ಪಿತೂರಿಯದ್ದೇ ಚಿಂತೆಯಾಗಿರುತ್ತದೆ. ನಮಗೆ ಅದರ ಅಗತ್ಯವಿಲ್ಲ. ನಮ್ಮ ನಾಯಕರು ಹಾಗೆ ನನ್ನನ್ನು ಬೆಳೆಸಿಲ್ಲ. ನಾನು ಏನು ಎನ್ನುವುದು ನನ್ನ ಪಕ್ಷಕ್ಕೆ ಮತ್ತು ನನ್ನ ನಾಯಕರಿಗೆ ಗೊತ್ತಿದೆ ಎಂದು ಹೇಳಿದ್ದಾರೆ ಡಿಸಿಎಂ.
ಗಮನ ಸೆಳೆದ ಎಚ್‌ಡಿಕೆ ಹೇಳಿಕೆ
ಕಾಂಗ್ರೆಸ್ ಮತ್ತು ಬೆಜೆಪಿ ನಾಯಕರು ಕಿತ್ತಾಡಿಕೊಳ್ಳುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಎಲ್ಲರಿಗೂ ಬಿಸಿ ಮುಟ್ಟಿಸುವಂತಿದೆ. “ಉಪ ಮುಖ್ಯಮಂತ್ರಿ ಮಾಹಿತಿ ಇಲ್ಲದೇ ಮಾತನಾಡುತ್ತಾರೆಯೇ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅಲ್ಲಿಗೆ ಡಿಸಿಎಂ ಅಶ್ವತ್ಥನಾರಾಯಣ ಮಾಡಿದ್ದ ಆರೋಪಕ್ಕೆ ಎಚ್‌ಡಿಕೆ ತುಪ್ಪ ಸುರಿದಿದ್ದಾರೆ ಎನ್ನಬಹುದು.
ಇದರಲ್ಲಿ ದೊಡ್ಡ ಒಳರಾಜಕೀಯವೇ ಇದೆ
ಆರ್.ಟಿ.ವಿಠ್ಠಲಮೂರ್ತಿ
ಯತ್ನಾಳ್ ಹೇಳಿದಂತೆ ಬಿಜೆಪಿ ವರಿಷ್ಠರಿಗೆ ಯಡಿಯೂರಪ್ಪ ಬೇಕಾಗಿಯೇ ಇಲ್ಲ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಇನ್ನು ಯತ್ನಾಳ್ ಹೇಳಿರುವುದರಲ್ಲಿ ಉತ್ಪ್ರೇಕ್ಷೆ ಏನೂ ಇಲ್ಲ. ಆದರೆ, ಅವರಿಂದೆ ಯಾರೋ ಇದ್ದಾರೆ ಎಂಬುರಲ್ಲಿ ಹುರುಳಿಲ್ಲ ಅನ್ಸುತ್ತೆ. ಮಂತ್ರಿ ಮಾಡಲಿಲ್ಲ ಅನ್ನುವ ಸಿಟ್ಟು ಯತ್ನಾಳ್‌ಗೆ ಇದೆ. ಅದೆಲ್ಲವೂ ಇದನ್ನು ಮಾತನಾಡಿಸುತ್ತಿದೆ. ಅದೇ ರೀತಿ; ಡಾ.ಅಶ್ವತ್ಥನಾರಾಯಣ ಅವರು ಡಿಕೆಶಿ ವಿರುದ್ಧ ಮಾತನಾಡಿದ್ದರಲ್ಲಿ ಕೊಂಚ ವಿಶೇಷವಿದೆ. ಅವರು ಡಿಸಿಎಂ ಆಗುವಲ್ಲಿ ಯಡಿಯೂರಪ್ಪ ಪಾತ್ರವೂ ಇದೆ. ಹೀಗಾಗಿ; ಸಿಎಂ ವಿರುದ್ಧ ಕೆಲಸ ಮಾಡುವ ಅಗತ್ಯ ಅವರಿಗೇನಿದೆ? ಇದಾದ ಮೇಲೆ, ಕುಮಾರಸ್ವಾಮಿ ಸರಕಾರ ತೆಗೆಯುವ ವಿಚಾರದಲ್ಲಿ ಡಿಕೆಶಿ ಪಾತ್ರವಿಲ್ಲ ಅನ್ನುವುದು ಈಗಷ್ಟೇ ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಚಿಕ್ಕ ನಾಯಕನಿಗೂ ಗೊತ್ತಿದೆ. ಯಾಕೆಂದರೆ, ಆ ಸರಕಾರ ಬರಲು ಕಾರಣರಲ್ಲಿ ಡಿಕೆಶಿಯೂ ಒಬ್ಬರು. ಹಾಗೆ ನೋಡಿದರೆ ಆ ಸರಕಾರದಲ್ಲಿ ಅವರೇ ಡಿಸಿಎಂ ಆಗಬೇಕಾಗಿತ್ತು. ಆದರೆ, ಅವರಿಗೆ ಮಿಸ್ ಮಾಡಲಾಯಿತು. ಡಾ.ಜಿ.ಪರಮೇಶ್ವರ ಆದರು. ಹೀಗಾಗಿ ಡಿಕೆಶಿ ಮೇಲೆ ಅಶ್ವತ್ಥನಾರಾಯಣ ಮಾಡಿದ ಆರೋಪಕ್ಕೆ ಬೇರೆಯದ್ದೇ ಉದ್ದೇಶವಿದೆ ಅನಿಸುತ್ತೆ. ತೀರಾ ಸಾಫ್ಟ್ ಗುಣದ ಡಿಸಿಎಂಗೆ ಡಿಕೆಶಿ ಅವರನ್ನು ಟೀಕಿಸಿ ಏನೂ ಆಗಬೇಕಿಲ್ಲ. ಡಿ.ಕೆ.ಸುರೇಶ್ ಅಷ್ಟು ತೀವ್ರವಾಗಿ ಪ್ರತಿಟೀಕೆ ಮಾಡುವ ಅಗತ್ಯವೂ ಇರಲಿಲ್ಲ. ಕಳೆದ ಸಮ್ಮಿಶ್ರ ಸರಕಾರ ಬೀಳಿಸಿದ ʼಇಲಿʼಗೆ ಇವರೆಲ್ಲ ಸೇರಿ ಹೊಗೆ ಹಾಕುವಂತಿದೆ ಇಡೀ ಬೆಳವಣಿಗೆ. ಎಲೆಕ್ಷನ್ ಕಳೆದ ಮೇಲೆ ಇದರ ಪರಿಣಾಮ ಸ್ಪಷ್ಟವಾಗಿ ಕಾಣುತ್ತದೆ. ಇನ್ನು; ಕಾಂಗ್ರೆಸ್ ಕೂಡ ರಾಜ್ಯದಲ್ಲಿ ತನಗೆ ನಿಷ್ಠರು ಯಾರು? ಅಲ್ಲದವರು ಯಾರು? ಎಂಬುದನ್ನು ಬಯಲು ಮಾಡಲು ಈ ಚುನಾವಣೆಯನ್ನು ಬಳಸಿಕೊಳ್ಳುವ ಹಾಗೆ ಕಾಣುತ್ತದೆ ಎನ್ನುತ್ತಾರೆ ರಾಜಕೀಯ ವಿಶ್ಲೇ಼ಷಕ ಹಾಗೂ ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ.
ಮುಂದೆ ತೆರೆದುಕೊಳ್ಳಲಿದೆ ಕುತೂಹಲಕರ ಅಧ್ಯಾಯ!