lead photo: bnmk photographs
ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ನಡೆಯುತ್ತಿರುವ ಮಾತಿನ ಯುದ್ಧಕ್ಕೆ ತೆರೆ ಬೀಳುವಂತೆ ಕಾಣುತ್ತಿಲ್ಲ. ಶುಕ್ರವಾರವೂ ಡಿಸಿಎಂ ಡಾ.ಅಶ್ವತ್ಥನಾರಾಯಣ; ಡಿಕೆ ಬ್ರದರ್ಸ್ ಗುರಿಯಾಗಿಟ್ಟುಕೊಂಡು ತೀವ್ರ ವಾಗ್ದಾಳಿ ನಡೆಸಿದ್ದು, ಆರ್.ಆರ್.ನಗರದ ರಗಳೆ ಮತ್ತಷ್ಟು ತಾರಕಕ್ಕೇರಿದೆ.
ಬೆಳಗ್ಗೆ ಮಲ್ಲೇಶ್ವರದ ಸ್ಯಾಂಕಿ ಕೆರೆಗೆ ಬಾಗೀನ ಅರ್ಪಿಸಿದ ನಂತರ ಮೀಡಿಯಾ ಜತೆ ಮಾತನಾಡಿದ ಡಿಸಿಎಂ, ಪುನಾ ಡಿಕೆ ಬ್ರದರ್ಸ್ ಮೇಲೆ ಮುಗಿಬಿದ್ದರು. “ನಾನು ಹೇಳಿದ್ದೆಲ್ಲವೂ ಸತ್ಯ. ಸತ್ಯ ಎನ್ನುವುದು ಯಾವಾಗಲೂ ಕಹಿಯಾಗಿರುತ್ತದೆ. ಅದನ್ನು ಎದುರಿಸುವಂಥ ಶಕ್ತಿ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಡಿಕೆ ಬ್ರದರ್ಸ್ ವಾಸ ಮಾಡುತ್ತಿರುವ ಸದಾಶಿವನಗರಕ್ಕೆ ಹೊಂದಿಕೊಂಡೇ ಇರುವ ಸ್ಯಾಂಕಿ ಕೆರೆಯ ಕಟ್ಟೆಯ ಮೇಲೆ ನಿಂತು ಡಿಸಿಎಂ ಹೂಡಿದ ಮಾತಿನ ಬಾಣಗಳು ಹೀಗಿವೆ;
*ಇವತ್ತಿನ ರಾಜಕೀಯ ಬರೀ ಕುತಂತ್ರದಿಂದಲೇ ಬೆಳೆದು ನಿಂತಿದೆ. ಸ್ವಾರ್ಥದಿಂದ ತುಂಬಿತುಳುಕುತ್ತಿದೆ. ರಾಜಕೀಯ ಎಂದ ಕೂಡಲೇ ಜನರಲ್ಲಿ ಕೀಳಿರಿಮೆ ಬರುವಂತೆ ಆಗಿಬಿಟ್ಟಿದೆ.
*ಇಂಥ ನಡವಳಿಕೆಯಿಂದ ರಾಜಕಾರಣಕ್ಕೆ ಕೆಟ್ಟ ಹೆಸರು ಬಂದಿದೆ. ಉತ್ತಮ ಗುಣಮಟ್ಟದ, ಪಕ್ಷ ಆಧಾರಿತ, ಸಿದ್ದಾಂತ ಆಧಾರಿತವಾಗಿ ರಾಜಕೀಯ ಮಾಡಿದಾಗ ಒಂದು ಅರ್ಥವಿರುತ್ತದೆ. ಇಲ್ಲಿ ಏನಾಗಿದೆ ಎಂದರೆ, ಇಲ್ಲಿ ನಾವು ಆಡಿದ್ದೇ ಆಟ ಎನ್ನುವಂತಾಗಿದೆ. ಇವರಿಗೆ ಲೆಕ್ಕ ಕೇಳೋರಿಲ್ಲ, ಅಕೌಂಟಬಲಿಟಿ ಇಲ್ಲ. ಏನಾದರೂ ಪ್ರಶ್ನಿಸಿದರೆ ಬಾಯಿಗೆ ಬಂದ ಹಾಗೆ ಮಾತನಾಡ್ತಾರೆ. ಉತ್ತರ ಹೇಳುವುದನ್ನು ಬಿಟ್ಟು ಅನಗತ್ಯವಾದ್ದನ್ನು ಮಾತನಾಡುತ್ತಾರೆ. ತಮಗೆ ಪರ್ಯಾಯ ಇಲ್ಲದಂತೆ ಮಾಡಿಕೊಂಡಿದ್ದಾರೆ. ಅವರ ಕೊರತೆ ತುಂಬೋರು ಯಾರು? ಇವರೇ.. ಅಂದರೆ; ಹಾಳೂರಿಗೆ ಉಳಿದವನೇ.. ಅನ್ನುವಂತೆ ಆಗಿಬಿಟ್ಟಿದೆ.
*ಅವರೊಂದು ರೀತಿ ಸರ್ವೀಸ್ ಪ್ರೊವೈಡರ್. ಅವರಿಗೆ ಕರೆ ಮಾಡಿ, ʼಮೀರ್ಸಾದಿಕ್.. ಸೋ ಅಂಡ್ ಸೋ ಕೆಲಸ ಮಾಡಿʼ ಅಂತ ಹೇಳ್ತಾ ತಮಗೆ ಬೇಕಾದ ಸರ್ವೀಸ್ ಪಡೀತಾ ಇರ್ತಾರೆ. ಹೀಗಾಗಿ ಮನಃಸ್ಥಿತಿ ಹೇಗಿದೆಯೋ ಅವರು ಹಾಗೆಯೇ ಮಾತನಾಡ್ತಾರೆ.
*ಇವರು ಎಂಥವರು ಅಂದ್ರೆ? ಬೇರೆಯವರ ಪಕ್ಷ ಬಿಡಿ. ಅವರ ಪಕ್ಷಕ್ಕೆ, ಅಂದರೆ; ಸ್ವಪಕ್ಷಕ್ಕೇ ದ್ರೋಹ ಬಗೆದವರು. ತಾಯಿಯಂಥ ಪಕ್ಷಕ್ಕೆ ದ್ರೋಹ ಬಗೆದವರು ಇವರು. ಸ್ವಾರ್ಥ ಬಿಟ್ಟರೆ ಬೇರೆ ಯಾವ ಯೋಗ್ಯತೆಯೂ ಇವರಿಗೆ ಇಲ್ಲ. ನಾವು ಹೇಳಿದ್ದೂ ಅದೇ. ಅವರ ತಂತ್ರಗಾರಿಕೆಯನ್ನು ಜನರ ಮುಂದೆ ಇಟ್ಟಿದ್ದೇವೆ.
*ನಾವೇನೂ ಕಥೆ ಕಟ್ಟಿ ಹೇಳ್ತಿಲ್ಲ. ಕ್ಲೈಮ್ಯಾಕ್ಸ್ ಅನ್ನು ಮೊದಲೇ ಹೇಳ್ತಾ ಇದೀವಿ ಅಷ್ಟೇ. ಇವರೇನು ಮಾಡಲು ಹೊರಟಿದ್ದಾರೋ ಅದನ್ನು ಮೊದಲೇ ಪತ್ತೆಹಚ್ಚಿ ಹೇಳಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ ಅಷ್ಟೇ.
*ಅವರು ಹತಾಶರಾಗಿದ್ದಾರೆ. ಮೈಯ್ಯಲ್ಲ ಪರಚಿಕೊಳ್ಳುತ್ತಿದ್ದಾರೆ.
ಒಟ್ಟಾರೆಯಾಗಿ; ಈ ಚಕಿಮಕಿ ಎಲ್ಲಿ ಕೊನೆಗೊಳ್ಳುತ್ತದೋ ಕಾದು ನೋಡಬೇಕಿದೆ.