ಮೈಸೂರು: ಕೊರೊನಾ ಸಂಕಷ್ಟವು ತಾಯಿ ಚಾಮುಂಡೇಶ್ವರಿ ಅಮ್ಮನವರ ದಯೆಯಿಂದ ಕಳೆದರೆ ಮುಂದಿನ ವರ್ಷ ವಿಜೃಂಭಣೆಯಿಂದ ದಸರಾ ಮಹೋತ್ಸವವನ್ನು ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ದಸರಾ ಮಹೋತ್ಸವ ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಸೋಮವಾರ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.
ತಾಯಿ ಚಾಮುಂಡೇಶ್ವರಿ ದಯೆಯಿಂದ ಕೊರೊನಾದಿಂದ ಬಿಡುಗಡೆಗೊಂಡ ಮೇಲೆ ಮುಂದಿನ ವರ್ಷ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸು ಉದ್ದೇಶವಿದೆ. ಹಾಗೆ ಆಚರಿಸುವಂತಹ ಶಕ್ತಿಯನ್ನು ಆ ತಾಯಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆಂದರು ಸಿಎಂ.
ಎಲ್ಲ ಸಂಕಷ್ಟದಿಂದ ಪಾರಾಗಿ ನೆಮ್ಮದಿಯಿಂದ ಬದುಕುವ ಕಾಲ ತಾಯಿ ಚಾಮುಂಡೇಶ್ವರಿ ನೀಡಲಿ ಎಂದವರು ಆಶಿಸಿದರು.
ಕೋವಿಡ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದು, ಪ್ರತಿಯೊಬ್ಬರು ತಪ್ಪದೆ ಮಾಸ್ಕ್ ಧರಿಸಬೇಕು ಹಾಗೂ ದೈಹಿಕ ಅಂತರ ಕಾಪಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ವರ್ತಿಸಬೇಕು ಎಂದು ಸಿಎಂ ಜನತೆಯನ್ನು ಕೋರಿದರು.
ಈ ಬಾರಿ ಕೊರೊನಾ ಹಿನ್ನೆಲೆ ದಸರಾ ಜಂಬೂಸವಾರಿ ಸರಳವಾಗಿ ನಡೆಸಲಾಗುತ್ತಿದೆ. ಎಲ್ಲರೂ ಮನೆಯಲ್ಲೇ ಇದ್ದು ಜಂಬೂ ಸವಾರಿಯನ್ನು ವೀಕ್ಷಿಸಿ. ಯಾವುದೇ ಕಾರಣಕ್ಕೂ ಜನದಟ್ಟಣಿ ಇರುವ ಪ್ರದೇಶಗಳಿಗೆ ಹೋಗಬಾರದು ಎಂದು ಕೋರಿದರು.
ಜಂಬೂ ಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಆಗಮಿಸಿ ಮುಖ್ಯಮಂತ್ರಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ರಾಮದಾಸ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮುಂತಾದವರು ಸ್ವಾಗತಿಸಿದರು.