ಗಣಿ ಶಾಫ್ಟ್‌ವೊಂದರ ವಿಹಂಗಮ ನೋಟ.
lead photo: CKPhotography ಸಿಕೆಪಿ@ckpixlels
Q&A
ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಸಂದರ್ಶನ
ಕೆಜಿಎಫ್ ಈಗ ಮತ್ತೆ ಸುದ್ದಿಯಲ್ಲಿದೆ. ಅಲ್ಲಿ ಪುನಾ ಗಣಿಗಾರಿಕೆ ಮಾಡಲು ಸಾಧ್ಯವಾ? ಅಥವಾ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡಬಹುದಾ? ರಾಜಕಾರಣಿಗಳು ಇನ್ನೇನು ಮೈನಿಂಗ್ ಆರಂಭವಾಗಿಯೇ ಬಿಡುತ್ತದೆ ಎನ್ನುತ್ತಿದ್ದಾರೆ. ಜನರೂ ಅದನ್ನೇ ನಂಬುತ್ತಿದ್ದಾರೆ. ಇದೆಲ್ಲ ನಿಜವಾ? ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ ಅವರು ಸಿಕೆನ್ಯೂಸ್ ನೌ ಜತೆ ಮಾತನಾಡುತ್ತ ಕೆಲ ಮಹತ್ತ್ವದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
Q: ನಿಜಕ್ಕಾದರೆ ಕೆಜಿಎಫ್‌ನಲ್ಲಿ ಏನು ನಡೆಯುತ್ತಿದೆ? ಒಂದೆಡೆ ಗಣಿಗಳನ್ನು ರೀ ಒಪೆನ್ ಮಾಡ್ತೀವಿ ಅನ್ನುತ್ತಿದ್ದಾರೆ ರಾಜಕಾರಣಿಗಳು? ಇನ್ನೊಂದೆಡೆ ಇಂಡಸ್ಟ್ರೀಯಲ್ ಪಾರ್ಕ್ ಮಾಡ್ತೀವಿ ಎನ್ನುತ್ತಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು. ಇದರಲ್ಲಿ ಜನರು ಯಾವುದನ್ನು ನಂಬಬೇಕು?
ಕೆಜಿಎಫ್‌ನಲ್ಲಿ ಸುಮಾರು 12,500 ಎಕರೆಗೂ ಹೆಚ್ಚು ಭೂಮಿ ಭಾರತ್ ಗೋಲ್ಡ್ ಮೈನಿಂಗ್ ಕಂಪನಿ (ಬಿಜಿಎಂಎಲ್) ವಶದಲ್ಲಿದೆ. ಈ ಪೈಕಿ 3,200 ಎಕರೆಯಷ್ಟು ಜಾಗದಲ್ಲಿ ಮೈನಿಂಗ್ ನಡೆದಿಲ್ಲ. ಬಹುಶಃ ಈ ಭಾಗದಲ್ಲಿ ಚಿನ್ನ ಇಲ್ಲ ಅನ್ನುವ ಕಾರಣಕ್ಕೆ ಹಾಗೆಯೇ ಬಿಟ್ಟಿದ್ದಾರೆ. ಈಗ ಅಲ್ಲಿ ಗಣಿಗಾರಿಕೆಗಿಂತ ಕೈಗಾರಿಕಾ ಪಾರ್ಕ್ ಮಾಡುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಅದರ ಫೀಸಬಲಿಟಿಯೇ ಜಾಸ್ತಿ. ಆದರೆ, ಮುಚ್ಚಿರುವ ಗಣಿಗಳಲ್ಲಿ ಮತ್ತೆ ಗಣಿಗಾರಿಕೆ ಮಾಡಲು ಸಾಧ್ಯವಿಲ್ಲ. ತೆರೆದ ಗಣಿಗಾರಿಕೆ ಮಾಡಲಿಕ್ಕೂ ಕಷ್ಟ. ಹಾಗೆ ಮಾಡಬೇಕಾದರೆ ಇಡೀ ಕೆಜಿಎಫ್ ನಗರವನ್ನೇ ಬೇರೆಡೆಗೆ ಸ್ಥಳಾಂತರ ಮಾಡಬೇಕು. ಅಷ್ಟೆಲ್ಲ ವೆಚ್ಚ ಮಾಡಿದರೂ ಅದಕ್ಕೆ ಸರಿಹೊಂದುವಷ್ಟು ಚಿನ್ನ ಅಲ್ಲಿ ಇಲ್ಲ. ಗಣಿಗಾರಿಕೆ ಮಾಡಿದರೆ ನಷ್ಟ ಕಟ್ಟಿಟ್ಟ ಬುತ್ತಿ. ನನ್ನ ಪ್ರಕಾರ, ಡ್ರಿಲ್ಲಿಂಗ್ ಮಾಡುತ್ತಿರುವ ಜಾಗದಲ್ಲಿ ಚಿನ್ನ ಸಿಗುವ ಸಾಧ್ಯತೆ ಕಡಿಮೆ.
Q: ಹಾಗಾದರೆ; ಜನರನ್ನು ನಾಯಕರು ಯಾಕೆ ದಿಕ್ಕು ತಪ್ಪಿಸುತ್ತಿದ್ದಾರೆ?
ಇದೇನೂ ಹೊಸದಲ್ಲ ಬಿಡಿ. ಮುಗ್ಧ ಕಾರ್ಮಿಕರನ್ನು ದಿಕ್ಕು ತಪ್ಪಿಸುವ ಕೆಲಸ ಕಳೆದ ಇಪ್ಪತ್ತು ವರ್ಷಗಳಿಂದ ಆಗುತ್ತಲೇ ಇದೆ. ಇದೋ ಮೈನಿಂಗ್ ಮತ್ತೆ ಶುರು ಮಾಡುತ್ತೇವೆ, ಅದೋ ಆಸ್ಟ್ರೇಲಿಯಾ ಕಂಪನಿ ಬರುತ್ತೆ ಎಂದೆಲ್ಲ ಹೇಳಲಾಯಿತು. ಕೆಲ ಬೆಳವಣಿಗೆಗಳು ನಡೆದಿದ್ದು ನಿಜ. ಆದರೆ, ಅಲ್ಲಿ ಚಿನ್ನ ಇರಬೇಕಲ್ಲ. ಬಹುತೇಕ ಚಿನ್ನವನ್ನು ಬ್ರಿಟೀಷರೇ ಕೊಳ್ಳೆ ಹೊಡೆದುಕೊಂಡು ಹೋದರು. ಆಮೇಲೆ ನಮ್ಮ ಸರಕಾರಕ್ಕೆ ಗಣಿಗಳನ್ನು ಒಪ್ಪಿಸಿದ ಮೇಲೆ ಸಿಕ್ಕಿದ್ದು ʼಕೊಸರುʼ ಅಂತೀವಲ್ಲ, ಅಷ್ಟು ಮಾತ್ರ. ಚಿನ್ನದ ಲಭ್ಯತೆ ಇಲ್ಲ ಅನ್ನುವ ಕಾರಣಕ್ಕೆ 2002ರಲ್ಲಿ ಗಣಿಗಳನ್ನು ಮುಚ್ಚಲಾಯಿತು. ಹೀಗಾಗಿ ಮತ್ತೆ ಗಣಿಗಾರಿಕೆ ಎನ್ನುವುದು ದೂರದ ಮಾತು. ಇನ್ನು ಕೈಗಾರಿಕಾ ಪಾರ್ಕ್ ಮಾಡುತ್ತೇವೆ ಎನ್ನುವುದು ಒಳ್ಳೆಯ ಯೋಚನೆ. ಇದೇನಾದರೂ ಆದರೆ; ಕೆಜಿಎಫ್ ಜನರಿಗೆ ಖಂಡಿತಾ ಒಳ್ಳೆಯದಾಗುತ್ತದೆ. ಅಲ್ಲಿನ ಯುವಕರಿಗೆ ಕೆಲಸ ಸಿಗುತ್ತದೆ. ಆ ಪಟ್ಟಣದ ಬೆಂಗಳೂರು ಅವಲಂಭನೆ ಕಡಿಮೆಯಾಗುತ್ತದೆ.
Q: ಈಗ ಡ್ರಿಲ್ಲಿಂಗ್ ಮಾಡುತ್ತಿರುವ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಇದೆಯಾ? ಇಲ್ಲವಾ? ಒಂದು ವೇಳೆ ಇಲ್ಲದಿದ್ದರೆ ಆ ಡ್ರಿಲ್ಲಿಂಗ್ ಏತಕ್ಕೆ ಮಾಡಲಾಗುತ್ತಿದೆ?
ಗಣಿಗಾರಿಕೆ ಮಾಡದೆ ಬಾಕಿ ಬಿದ್ದಿರುವ 3,200 ಎಕರೆ ಪ್ರದೇಶದಲ್ಲಿರುವ; ಅಂದರೆ, ದಕ್ಷಿಣದಲ್ಲಿ ಬಿಸಾನತ್ತಂ (ಇದು ಆಂಧ್ರ ಪ್ರದೇಶದ ಗಡಿ) ಸಮೀಪದಲ್ಲಿ ವಿರೂಪಾಕ್ಷಪುರ ಮತ್ತು ನಕ್ಕೇನಹಳ್ಳಿ ಇದೆ. ಇನ್ನು ಉತ್ತರಕ್ಕೆ ಬ್ಯಾಟರಾಯನ ಸ್ವಾಮಿ ಬೆಟ್ಟವಿದೆ. ಈ ಬೆಟ್ಟಕ್ಕೆ ಪೂರ್ವ ದಿಕ್ಕಿನಲ್ಲಿ ಒಂದು ಕಿ.ಮೀ ದೂರದ ಒಂದು ನಿರ್ದಿಷ್ಟ ಭಾಗದಲ್ಲಿ ಡ್ರಿಲ್ಲಿಂಗ್ ಮಾಡಲಾಗುತ್ತಿದೆ. ಉಳಿದಂತೆ ಚಿನ್ನದ ಗಣಿಗಳು 8 ಕಿ.ಮೀಯಷ್ಟು ಉದ್ದ ಇವೆ. ಈ ಗಣಿಗಳ ದಕ್ಷಿಣದ ಕೊನೆ ಭಾಗವೆಂದರೆ ಮೈಸೂರು ಮೈನ್ಸ್ ಅಥವಾ ಮಾರಿಕುಪ್ಪಂ ಶಾಫ್ಟ್, ಉತ್ತರದಲ್ಲಿ ಗೋಲ್ಕೊಂಡ ಶಾಫ್ಟ್ ಇದೆ. ಇನ್ನು ಇಲ್ಲಿ ಡ್ರಿಲ್ಲಿಂಗ್ ಮಾಡಲು ಕಾರಣವಿದೆ. ಯಾವುದೇ ಕೈಗಾರಿಕೆ ಅಥವಾ ಗಣಿಗಾರಿಕೆಗೆ ಅನುಮತಿ ನೀಡಬೇಕಾದರೆ ಕೇಂದ್ರ ಸರಕಾರ ಒಂದು ನಿಯಮವನ್ನು ತಪ್ಪದೇ ಪಾಲಿಸುತ್ತದೆ. ಆ ಜಾಗದ ಭೂಗರ್ಭದಲ್ಲಿ ಯಾವುದಾದರೂ ಅಮೂಲ್ಯ ಖನಿಜ ನಿಕ್ಷೇಪ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷೆ ಮಾಡಿಸುತ್ತದೆ. ಆ ನಿಟ್ಟಿನಲ್ಲಿ ಕೆಜಿಎಫ್‌ನಲ್ಲಿ ಡ್ರಿಲ್ಲಿಂಗ್ ನಡೆಯುತ್ತಿದೆ.
Q: ಕೆಜಿಎಫ್‌ನಲ್ಲಿ ಬಿಇಎಂಎಲ್‌ಗೆ ಕೊಟ್ಟಿರುವ ಜಾಗ ಯಾವುದು? ಆ ಕಂಪನಿ ಬಳಿ ಹೆಚ್ಚುವರಿ ಜಾಗವಿದೆಯಾ?
ಹೌದು. ಈಗ ಬಿಇಎಂಎಲ್ ಇರುವ ಜಾಗದ ಮೂಲ ಒಡೆತನ ಬಿಜಿಎಂಎಲ್‌ಗೇ ಸೇರುತ್ತದೆ. ಆ ಕಾರ್ಖಾನೆಯನ್ನು ಸ್ಥಾಪಿಸುವಾಗ ಅಗತ್ಯವಿದ್ದ ಭೂಮಿಯನ್ನು ಗಣಿಸಂಸ್ಥೆ ನೀಡಿತ್ತು. ಇದೀಗ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಮಾಡುವ ಉದ್ದೇಶ ಇರುವುದರಿಂದ ಬಿಇಎಂಎಲ್ ಬಳಿ ಬಳಕೆಯಾಗದೆ ಉಳಿದಿರುವ ಹೆಚ್ಚುವರಿ ಭೂಮಿಯನ್ನು ವಾಪಸ್ ಮಾಡುವಂತೆ ಬಿಜಿಎಂಎಲ್ ಕೇಳುತ್ತಿದೆ ಎಂಬ ಮಾಹಿತಿ ಬಂದಿದೆ. ಬಿಇಎಂಎಲ್‌ಗೆ ಪಶ್ಚಿಮ ದಿಕ್ಕಿನಲ್ಲಿರುವ ಅಂಜನಾಪುರ ಎಂಬಲ್ಲಿ ಆ ಬಾಕಿ ಜಾಗವಿದ್ದು, ಅಲ್ಲಿಂದಲೇ ಕೈಗಾರಿಕಾ ಪಾರ್ಕ್ ಆರಂಭಿಸುವ ಪ್ರಸ್ತಾಪವಿದೆ. ಆ ಜಾಗವೂ ಸ್ವಲ್ಪಮಟ್ಟಿಗೆ ಒತ್ತುವರಿಯಾಗಿದೆ. ಹೀಗಾಗಿ ಆ ಜಾಗವನ್ನು ವಾಪಸ್ ಮಾಡುವಂತೆ ಬಿಜಿಎಂಎಲ್ ಕೇಳುತ್ತಿರುವುದು ಒಂದು ಮುಖ್ಯ ಬೆಳವಣಿಗೆ. ಒಟ್ಟಾರೆಯಾಗಿ ಡ್ರಿಲ್ಲಿಂಗ್ ಮಾಡುತ್ತಿರುವುದು, ಇನ್ನೊಂದೆಡೆ ತನ್ನ ಭೂಮಿಯನ್ನು ಬಿಜಿಎಂಎಲ್ ಹಿಂದಕ್ಕೆ ಕೇಳುತ್ತಿರುವುದು.. ಇವೆರಡೂ ಬೆಳವಣಿಗೆಗಳಿಂದ ಕೆಪಿಎಫ್‌ನಲ್ಲಿ ಏನಾದರೂ ಒಳ್ಳೆಯದಾಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.
Q: ಸಂಸದ ಮುನಿಸ್ವಾಮಿ ಸೇರಿದಂತೆ ಇನ್ನೂ ಅನೇಕರು ಡ್ರಿಲ್ಲಿಂಗ್ ಮಾಡುತ್ತಿರುವುದು ಗಣಿಗಾರಿಕೆ ಆರಂಭಿಸಲು ಎಂದು ಹೇಳುತ್ತಿದ್ದಾರಲ್ಲ..?
ಇಲ್ಲ. ಡ್ರಿಲ್ಲಿಂಗ್ ಕೆಲಸ ಗಣಿಗಾರಿಕೆಗೆ ಸಂಬಂಧಿಸಿದ್ದಲ್ಲ. ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಈ ಕಾರ್ಯ ನಡೆಯುತ್ತಿದೆ. ಭೂಮಿಯ ಆಳದಲ್ಲಿ ಏನಾದರೂ ನಿಕ್ಷೇಪಗಳಿವೆಯೇ ಎಂಬುನ್ನು ಪರಿಶೀಲಿಸಲಾಗುತ್ತಿದೆ. ಇಡೀ ಪ್ರಕ್ರಿಯೆ ಮುಗಿಯಲು ಆರು ತಿಂಗಳಾದರೂ ಬೇಕು. ಒಂದು ವೇಳೆ ಇಲ್ಲಿ ಚಿನ್ನದ ನಿಕ್ಷೇಪ ಸಿಕ್ಕರೆ ಗಣಿಗಾರಿಕೆ ನಡೆಯುತ್ತದೆ. ಚಿನ್ನದ ನಿಕ್ಷೇಪ ಸಿಗದಿದ್ದರೆ ಕೈಗಾರಿಕಾ ಪಾರ್ಕ್ ಬರುತ್ತದೆ. ಅಷ್ಟೇ..
Q: ಇಷ್ಟಕ್ಕೂ ಈ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಮಾಡಲು ಸಾಧ್ಯವೇ? ಆಳ ಗಣಿಗಳಿರುವ ಜಾಗದಲ್ಲಿ ಇದೆಲ್ಲ ಕಾರ್ಯಸಾಧುವೆ?
ಖಂಡಿತಾ ಸಾಧ್ಯವಿದೆ. ಯಾಕೆಂದರೆ; ಕೈಗಾರಿಕಾ ಪಾರ್ಕ್ ಎಂಬುದು ಗಣಿಗಾರಿಕೆ ನಡೆದಿರುವ ಪ್ರದೇಶದಲ್ಲಿ ಬರುತ್ತಿಲ್ಲ. ಚಿನ್ನದ ಗಣಿಗಾರಿಕೆ ನಡೆದಿರುವ ಪ್ರದೇಶದ ವಿಸ್ತೀರ್ಣ 8 ಕಿ.ಮೀ ಉದ್ದ ಹಾಗೂ 2 ಕಿ.ಮೀ ಅಗಲದಷ್ಟು ಇದೆ. ಇದನ್ನು ಹೊರತುಪಡಿಸಿದ ಪ್ರದೇಶದಲ್ಲಿ ಕೈಗಾರಿಕಾ ಎಸ್ಟೇಟ್ ಅಂತೀರೋ ಅಥವಾ ಕೈಗಾರಿಕಾ ಪಾರ್ಕ್ ಅಂತೀರೋ ಅದನ್ನು ಸ್ಥಾಪನೆ ಮಾಡುವುದಕ್ಕೆ ಸಮಸ್ಯೆಯೇ ಇಲ್ಲ. ಬಹುಶಃ ಕೆಜಿಎಫ್‌ಗೆ ಗತ ವೈಭವ ತಂದುಕೊಡಲು ಇದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ.
Q: ಗಣಿ ಪ್ರದೇಶವೂ ಉದ್ದೇಶಿತ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡುವ ಪ್ರದೇಶಕ್ಕೆ ಹೊಂದಿಕೊಂಡೇ ಇದೆ. ಆಳ ಗಣಿಗಳಿಂದ ಅದಕ್ಕೆ ಅಪಾಯವಿಲ್ಲವೇ? ಅದರಲ್ಲಿ ನೀರು ತುಂಬಿದೆ..
ಇಲ್ಲ. ಭೂಮೇಲ್ಮೈನಿಂದ 100 ಅಡಿ ಆಳದಲ್ಲಿ ಗಣಿ ಸುರಂಗಗಳನ್ನು ಕೊರೆಯಲಾಗಿದೆ, ಅಷ್ಟೇ ಅಲ್ಲ, ಗಣಿ ಪ್ರದೇಶಕ್ಕೆ ಉದ್ದೇಶಿತ ಕೈಗಾರಿಕೆ ಪ್ರದೇಶಕ್ಕೂ ತುಂಬಾ ಅಂತರವಿದೆ. ಹೀಗಾಗಿ ಕೈಗಾರಿಕೆಗಳಿಗೆ ಯಾವುದೇ ತೊಂದರೆ ಇಲ್ಲ. ಜತೆಗೆ, ಗಣಿಗಳಲ್ಲಿ ಸಾಕಷ್ಟು ನೀರಿದೆ ಹೌದು. ಸಾಕಷ್ಟು ನೀರು ಸಂಗ್ರಹಣೆ ಇದೆ. ಈ ನೀರನ್ನೇ ಕೈಗಾರಿಕೆಗಳಿಗೂ ಬಳಕೆ ಮಾಡಬಹುದು. ಆ ನೀರಿನಲ್ಲಿ ಮೀಥೆನ್‌ನಂಥ ವಿಷಕಾರಿ ಅಂಶಗಳು ಇಲ್ಲ. ಆ ನೀರನ್ನು ಉತ್ತಮವಾಗಿ ಸಂಸ್ಕರಿಸಿ ಕುಡಿಯಬಹುದು. ಕೊಂಚ ಮಟ್ಟಿಗೆ ಸಲ್ಫೇಡ್ ಅಂಶವಿರುತ್ತದೆ. ವಾಟರ್ ಟ್ರೀಟ್ಮೆಂಟ್ ಮಾಡಿದ ಮೇಲೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚು ಮಳೆ ಬಂದಾಗ ಈ ಗಣಿಗಳಿಂದ ನೀರು ಉಕ್ಕುತ್ತದೆ. ನಾನು ಮೊದಲೇ ಹೇಳಿದಂತೆ ಗಣಿ ಸುರಂಗಗಳು ಭೂಮೇಲ್ಮೈ ಪ್ರದೇಶದಿಂದ 100 ಅಡಿ ಆಳದಲ್ಲಿವೆ. ಅಷ್ಟು ಆಳಕ್ಕೆ ಒಂದು ಪಂಪ್ ಅಳವಡಿಸಿ ನೀರನ್ನು ಹೊರತೆಗೆಯಬಹುದು. ಬೆಮೆಲ್ ಕಾರ್ಖಾನೆಗೆ ಹಾಗೂ ಅಲ್ಲಿನ ಬೆಮೆಲ್ ಕಾಲೋನಿಯಾದ ಭಾರತ್ ನಗರ, ಆಫೀಸರ್ಸ್ ಕಾಲೋನಿಗೂ ಇದೇ ನೀರನ್ನೇ ಪುರಸಭೆಯವರು ಸಂಸ್ಕರಿಸಿ ಪೂರೈಕೆ ಮಾಡುತ್ತಿದ್ದಾರೆ. ಈ ನೀರು ಸದ್ಯಕ್ಕೆ ಬೆಂಗಳೂರಿನಿಂದ ಕೋಲಾರ-ಚಿಕ್ಕಬಳ್ಳಾಪುರ ಕೆರೆಗಳಿಗೆ ಹರಿಸುತ್ತಿರುವ ಕೊಳಚೆ ನೀರಿಗಿಂತ ಉತ್ತಮ. ಗಣಿಗಳಲ್ಲಿ ಈಗಿರುವ ನೀರು ಖಾಲಿ ಮಾಡಿದರೆ, ಮತ್ತೆ ಶುದ್ಧ ನೀರು ತುಂಬುತ್ತದೆ. ಒಂದರ್ಥದಲ್ಲಿ ಇದು ಕೆಜಿಎಫ್ ಜನರಿಗೆ ಭೂಗರ್ಭದಲ್ಲಿ ನಿರ್ಮಾಣವಾಗಿರುವ ಮಾನವ ನಿರ್ಮಿತ ಜಲಾಶಯ ಎಂದು ಹೇಳಬಹುದು.
Q: ಹಾಗಾದರೆ, ಕೈಗಾರಿಕೆ ಪಾರ್ಕ್ ಸ್ಥಾಪನೆ ಮಾಡುವುದೇ ಉತ್ತಮ ಅಂತೀರಾ?
ಹೌದು. ಗಣಿಗಾರಿಕೆಗಿಂತ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದೇ ಉತ್ತಮ. ಇದರಿಂದ ರಾಜ್ಯಕ್ಕೆ ತುಂಬಾ ಒಳ್ಳೆಯದಾಗುತ್ತದೆ. ಕೇಂದ್ರ ಸರಕಾರದ ಆಲೋಚನೆ ಸರಿಯಾದ ದಿಕ್ಕಿನಲ್ಲೇ ಇದೆ. ಮೈನಿಂಗ್ ಮಾಡಿದರೆ ನಷ್ಟವನ್ನು ಮೈಮೇಲೆ ಎಳೆದುಕೊಂಡಂತೆ. ಏಕೆಂದರೆ ಡ್ರಿಲ್ಲಿಂಗ್ ಮಾಡುತ್ತಿರುವ ಜಾಗದಲ್ಲಿ ಚಿನ್ನದ ನಿಕ್ಷೇಪ ಸಿಗುವ ಅವಕಾಶ ತೀರಾ ಕ್ಷೀಣ ಎಂಬುದು ನನ್ನ ಅಭಿಪ್ರಾಯ.
***