ಸ್ವರ್ಣ ಅಂಬಾರಿಯಲ್ಲಿ ಅಲಂಕೃತಗೊಂಡು ಸಾಗಿಬಂದ ಚಾಮುಂಡೇಶ್ವರಿ ಅಮ್ಮನವರಿಗೆ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
Lead photo: CM of Karnataka@CMofKarnataka
ಮೈಸೂರು: ಮಾರಕ ಕೋವಿಡ್ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಸೀಮಿತ ಅತಿಥಿಗಳ ನಡುವೆ ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವವಿಖ್ಯಾತ ಜಂಬೂ ಸವಾರಿಗೆ ಸೋಮವಾರ ಚಾಲನೆ ನೀಡಿದರು. ನಂತರ ಅರಮನೆ ಆವರಣದಲ್ಲೇ 400 ಮೀಟರ್ ದೂರ ಕ್ರಮಿಸಿದ ನಂತರ ಐತಿಹಾಸಿಕ ಜಂಬೂ ಸವಾರಿ ಸಂಪನ್ನವಾಯಿತು.
ಸುತ್ತೂರು ಮಠದಿಂದ ಅರಮನೆಗೆ ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 2.59ರಿಂದ 3.20ವರೆಗೆ ಸಲ್ಲುವ ಶುಭ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ಅದಾದ ಮೇಲೆ 3.40ರಿಂದ 4.15ವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಸ್ವರ್ಣ ಅಂಬಾರಿಯಲ್ಲಿ ಅಲಂಕೃತಗೊಂಡು ಸಾಗಿಬಂದ ಚಾಮುಂಡೇಶ್ವರಿ ಅಮ್ಮನವರಿಗೆ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.
ಸಿಎಂ ಪುಷ್ಪಾರ್ಚನೆ ಮಾಡಿದ ವೇದಿಕೆಯ ಮೇಲೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮೇಯರ್ ತಸ್ಲೀಂ, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಇದ್ದರು. ಅತ್ಯಂತ ಗಾಂಭಿರ್ಯದಿಂದ ಸಾಗಿದ ಅಭಿಮನ್ಯುವಿನ ಮೇಲೆ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ಅಮ್ಮನವರನ್ನು ಕಂಡು ಅಲ್ಲಿ ನೆರೆದಿದ್ದವರೆಲ್ಲರೂ ಪುಳಕಿತರಾದರು.
ಮುಖ್ಯಮಂತ್ರಿಗಳು ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವ ಸಂದರ್ಭದಲ್ಲಿ 21 ಸುತ್ತಿನ ಕುಶಾಲತೋಪು ಸಿಡಿಸಲಾಯಿತು.
ಇನ್ನೊಂದೆಡೆ; ಕೋವಿಡ್ ಕಬಂಧಬಾಹುಗಳ ನಡುವೆಯೂ ಇಡೀ ದಸರಾ ಹಾಗೂ ಜಂಬೂ ಸವಾರಿ ಯಶಸ್ವಿಯಾಗಿದ್ದಕ್ಕೆ ಜಿಲ್ಲಾಡಳಿತದ ಜತೆಗೆ, ಸರಕಾರವೂ ನಿರಾಳವಾಗಿದೆ. ವೈರಸ್ ಅಬ್ಬರ ಹೆಚ್ಚುತ್ತಿದ್ದ ಕಾರಣಕ್ಕೆ ಜಂಬೂ ಸವಾರಿಯನ್ನು ಅರಮನೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಹಿಂದೆಲ್ಲ ಅರಮನೆಯಿಂದ ಬನ್ನಿ ಮಂಟಪದವರೆಗೆ, ಅಂದರೆ; ಐದೂವರೆ ಕಿ.ಮೀ ದೂರ ಕ್ರಮಿಸುತ್ತಿದ್ದ ಜಂಬೂ ಸವಾರಿಯನ್ನು ಈ ವರ್ಷ ಕೇವಲ 400 ಮೀಟರ್ಗೆ ಸೀಮಿತಗೊಳಿಸಲಾಗಿತ್ತು. ಪ್ರತಿ ವರ್ಷ ಜಂಬೂಸವಾರಿ ವೀಕ್ಷಣೆಗೆ ಸಾವಿರಾರು ಮಂದಿ ಸೇರುತ್ತಿದ್ದ ಅರಮನೆಯಲ್ಲಿ ಈ ಬಾರಿ 300 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು.
ಒಂದೇ ಸ್ತಬ್ಧಚಿತ್ರ
ಸರಳ ದಸರಾ ನಿಮಿತ್ತ ಈ ಸಲ ಕೇವಲ ಒಂದು ಸ್ಥಬ್ಧಚಿತ್ರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಮೈಸೂರು ಜಿಲ್ಲಾ ಪಂಚಾಯತಿ ವತಿಯಿಂದ ತಯಾರಿಸಲಾಗಿದ್ದ ಕೋವಿಡ್ ಜಾಗೃತಿ ಸ್ತಬ್ಧಚಿತ್ರ ಇದಾಗಿತ್ತು. ನಾಲ್ಕು ಕಲಾತಂಡ, ಅಶ್ವಾರೋಹಿ ದಳದ ಎರಡು ತುಕಡಿ, ಕರ್ನಾಟಕ ಪೊಲೀಸ್ ಬ್ಯಾಂಡ್ʼನ ಆನೆಗಾಡಿ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಪಾಲ್ಗೊಂಡಿದ್ದವು.