ಸರ್ವ ಸಮಸ್ಯೆ, ಜಿಜ್ಞಾಸೆಗಳಿಗೆ ವೇದಗಳಲ್ಲೇ ಉತ್ತರವಿದೆ: ಡಿಸಿಎಂ
ಸತ್ಯಸಾಯಿ ಗ್ರಾಮ (ಮುದ್ದೇನಹಳ್ಳಿ): ಆಧುನಿಕ ಸಮಾಜದ ಎಲ್ಲ ಜಿಜ್ಞಾಸೆಗಳಿಗೆ, ಪ್ರಶ್ನೆಗಳಿಗೆ ವೇದಗಳಲ್ಲಿ ಸ್ಪಷ್ಟ ಉತ್ತರವಿದೆ ಮತ್ತು ಪರಿಹಾರವೂ ಇದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸೋಮವಾರ ಶ್ರೀ ಸತ್ಯಸಾಯಿ ಹ್ಯೂಮನ್ ಎಕ್ಸ್‌ಲೆನ್ಸ್ ವಿಶ್ವವಿದ್ಯಾಲಯದಲ್ಲಿ ವೇದಗಳ ಅಧ್ಯಯನದ ಪದವಿ ವಿಭಾಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು; ನಮ್ಮ ಬೆಳವಣಿಗೆಯ ಮೂಲ, ನಮ್ಮ ಉನ್ನತಿಯ ಮೂಲ ವೇದಗಳಲ್ಲಿಯೇ ಅಡಗಿದೆ. ಆದರೆ, ನಾವೆಲ್ಲರೂ ಇಂದು ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯೇ ಶ್ರೇಷ್ಠವೆಂಬ ಭ್ರಮಾಲೋಕದಲ್ಲಿದ್ದೇವೆ. ವೇದಗಳು ನಮ್ಮವು. ಮನುಕುಲದ ಸರ್ವಾಂಗೀಣ ಶ್ರೇಯೋವೃದ್ಧಿಗೆ ನಮ್ಮ ಪೂರ್ವಜರು ಬಿಟ್ಟುಹೋಗಿರುವ ಅನರ್ಘ್ಯ ಸಂಪತ್ತು ಇದಾಗಿದೆ ಎಂದು ನುಡಿದರು.
ವೇದಗಳನ್ನು ಧರ್ಮದ ಆಧಾರದಲ್ಲಿ ನೋಡಬಾರದು. ವೇದಗಳೆಂದರೆ ನಮ್ಮ ನೈಜ ಮೂಲ. ಇವತ್ತಿಗೂ ಇಡೀ ಜಗತ್ತು ವೇದಗಳತ್ತಲೇ ನಿಬ್ಬೆರಗಾಗಿ ನೋಡುತ್ತಿದೆ. ಆದರೆ, ಈ ಪರಮಜ್ಞಾನ ಸಂಪತ್ತಿನ ನೈಜ ವಾರಸುದಾರರಾದ ನಾವು ಅರಿವಿನ ಕೊರತೆಯಿಂದ ಅನಗತ್ಯವಾದುದನ್ನು ನೆಚ್ಚಿಕೊಂಡಿದ್ದೇವೆ. ಇನ್ನು ಮುಂದೆಯಾದರೂ ವೇದಗಳ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಅಧ್ಯಯನ ನಡೆಯಬೇಕು. ಈ ನಿಟ್ಟಿನಲ್ಲಿ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳು ದೇಶಕ್ಕೆ, ಸಮಾಜಕ್ಕೆ ಸಾಟಿ ಇಲ್ಲದ ಕೊಡುಗೆ ನೀಡುತ್ತಿವೆ ಎಂದರು ಉಪ ಮುಖ್ಯಮಂತ್ರಿ.
ಭಯದಿಂದ ಆಚೆ ಬನ್ನಿ
ನಮ್ಮಲ್ಲಿ ಒಂದು ನಕಾರಾತ್ಮಕ ಗುಣವಿದೆ. ಅದೇನೆಂದರೆ; ಸದಾ ಭಯದಲ್ಲೇ ಬದುಕುವುದು. ಹಾಗೆ ಆಗಬಾರದು. ಒಮ್ಮೆ ಭಯದಿಂದ ಹೊರಬಂದು ಜಗತ್ತನ್ನು ನೋಡಿದರೆ ಅನೇಕ ಅವಕಾಶಗಳು ನಮಗೆ ಕಾಣುತ್ತವೆ. ವೇದಗಳಲ್ಲಿ ಹೀಗೆ ನಮಗೆ ಜ್ಞಾನೋದಯ ಮಾಡಿಸುವಂಥ ಹಾಗೂ ಬದುಕಿಗೆ ಹೊಸ ದಾರಿ ತೋರುವಂಥ ಅನೇಕ ಅಂಶಗಳಿವೆ. ಸರ್ವ ಸಮಸ್ಯೆಗಳಿಗೂ ವೇದಗಳಲ್ಲೇ ಪರಿಹಾರವಿದೆ ಎಂದು ಡಾ.ಅಶ್ವತ್ಥನಾರಾಯಣ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಓದುವುದಷ್ಟೇ ಮುಖ್ಯವಲ್ಲ
ಸಾಮಾನ್ಯವಾಗಿ ಬಹುತೇಕ ಪೋಷಕರು, ವಿದ್ಯಾರ್ಥಿಗಳು ಸಂಪಾದನೆಯತ್ತ ಗಮನ ಹರಿಸುತ್ತಾರೆ. ಆ ನಿಟ್ಟಿನಲ್ಲಿ ತೀರಾ ಮೆಟಿರಿಯಲಿಸ್ಟಿಕ್ ಆಗಿಬಿಡುತ್ತಾರೆ. ಹಾಗೆ ಓದಿಕೊಂಡೇ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಿಗೆ ಹೋಗುತ್ತಾರೆ. ಆದರೆ, ನಿಜವಾಗಿ ತಮಗೇನು ಬೇಕು ಎಂಬುದನ್ನು ಅವರು ಮರೆತುಬಿಡುತ್ತಾರೆ. ಕೊನೆಹಂತಕ್ಕೆ ಬಂದಾಗ ಎಲ್ಲವನ್ನೂ ಕಳೆದುಕೊಂಡು ನೆಮ್ಮದಿಗಾಗಿ ಹಪಾಹಪಿಸುತ್ತಾರೆ. ವೇದಗಳು ಇಂಥ ಸ್ಥಿತಿಯಿಂದ ನಮ್ಮನ್ನು ಪಾರು ಮಾಡುತ್ತವೆ ಎಂಬುದು ನನ್ನ ಬಲವಾದ ನಂಬಿಕೆ ಎಂದು ಡಿಸಿಎಂ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿಹಾರ
ನಮ್ಮ ಶೈಕ್ಷಣಿಕ ವ್ಯವಸ್ಥೆ ಎದುರಿಸುತ್ತಿರುವ ಅನೇಕ ಮೂಲಭೂತ ಸಮಸ್ಯೆಗಳನ್ನು ಇಡಿಯಾಗಿ ಪರಿಹರಿಸಿ ಕಲಿಕೆ ಮತ್ತು ಬೋಧನೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೆ; ಗುಣಮಟ್ಟಕ್ಕೆ ಅಗ್ರಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಅವರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದೆ. ನಾನು ಮೇಲೆ ಹೇಳಿದ ಎಲ್ಲ ಸಮಸ್ಯೆಗಳಿಗೂ ಈ ನೀತಿಯಲ್ಲೇ ಪರಿಹಾರ ಅಡಗಿದೆ. ಸಮಾಜಕ್ಕೆ ಅಗತ್ಯವಾದ ಶಿಕ್ಷಣ ಇನ್ನು ಮುಂದೆ ದೊರೆಯಲಿದೆ. ಓರ್ವ ವಿದ್ಯಾರ್ಥಿಗೆ ಕಲಿಕೆಯ ಸ್ವಾತಂತ್ರ್ಯ ಸಿಗುತ್ತದೆ ಮಾತ್ರವಲ್ಲ, ವಿವಿಗಳಲ್ಲಿ ಬಹುವಿಷಯಗಳ ಬೋಧನೆಯೂ ಆಗಲಿದೆ. ಭಾರತವು ವಿಶ್ವಗುರುವಾಗುವತ್ತ ಪಯಣ ಆರಂಭವಾಗಿದೆ ಎಂದು ಉಪ ಮುಖ್ಯಮಂತ್ರಿ ನುಡಿದರು.
ಸತ್ಯಸಾಯಿ ಗ್ರಾಮದ ಶ್ರೀ ಮಧುಸೂದನ ಸಾಯಿ, ವಿವಿಯ ಕುಲಪತಿ ನರಸಿಂಹಮೂರ್ತಿ, ಉಪ ಕುಲಪತಿ ಡಾ.ಶ್ರೀನಿವಾಸ್, ವೇದಗುರುಗಳಾದ ಸುಬ್ರಹ್ಮಣ್ಯ ಶಾಸ್ತ್ರಿ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಜತೆಗೆ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.