ಬೆಂಗಳೂರು: ಕೋವಿಡ್ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸುವುದು ಬೇಡ ಎಂಬ ಕೂಗು ಎದ್ದಿದ್ದರೂ ರಾಜ್ಯ ಸರಕಾರವು 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಿ ಸಾಧಕರನ್ನು ಗುರುತಿಸಿದೆ. ವಿವಿಧ ಕ್ಷೇತ್ರಗಳ ಒಟ್ಟು 60 ಗಣ್ಯರು ರಾಜ್ಯೋತ್ಸವ ಗೌರವಕ್ಕೆ ಪಾತ್ರರಾಗಿದ್ದಾರೆ. ಜತೆಗೆ ಐದು ಸಂಘ-ಸಂಸ್ಥೆಗಳಿಗೆ ಕೂಡ ಈ ಸಲ ಪ್ರಶಸ್ತಿ ಘೋಷಿಸಲಾಗಿದೆ.
ಈ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ‘ಹಸಿರು ಜಿಲ್ಲಾಧಿಕಾರಿ’ ಎಂದೇ ಖ್ಯಾತರಾಗಿರುವ ಕೆ.ಅಮರನಾರಾಯಣ ಅವರಿಗೆ ಪರಿಸರ ವಿಭಾಗದಲ್ಲಿ, ಕೋಲಾರ ಜಿಲ್ಲೆಯ ದಲಿತ ಸಾಹಿತ್ಯ ಕ್ಷೇತ್ರದ ವಿದ್ವಾಂಸ ಡಾ. ಮುನಿ ವೆಂಕಟಪ್ಪ ಅವರಿಗೆ ಸಾಹಿತ್ಯ ವಿಭಾಗದಲ್ಲಿ ಹಾಗೂ ಕೋಲಾರ ಮೂಲದ ಆರ್ಥಿಕ ತಜ್ಞ ಡಾ.ಕೆ.ವಿ.ರಾಜು ಅವರಿಗೆ ಸಂಕೀರ್ಣ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.
****
ಪ್ರಶಸ್ತಿ ಪುಸ್ಕೃತರ ಪರಿಚಯ
ಕೆ.ಅಮರನಾರಾಯಣ
ಇವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸಮೀಪದ ಸುಗಟೂರು ಗ್ರಾಮದವರು. ಐಎಎಸ್ ಅಧಿಕಾರಿಯಾಗಿ ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಹಾಗೂ ಅನೇಕ ಉನ್ನತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಅವರು, ಮೊದಲಿನಿಂದಲೂ ಪರಿಸರ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ನಿವೃತ್ತಿಯ ನಂತರವೂ ಪೂರ್ಣ ಪ್ರಮಾಣದಲ್ಲಿ ತಮ್ಮ ಬದುಕನ್ನು ಪರಿಸರಕ್ಕೇ ಮೀಸಲಿಟ್ಟಿದ್ದಾರೆ. ಬರಪೀಡಿತ ಜಿಲ್ಲೆಯಾದ ಚಿಕ್ಕಬಳ್ಳಾಪುರ ಸೇರಿ ಬಯಲು ಸೀಮೆಯ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಂದು ಕೋಟಿ ಸಸಿಗಳನ್ನು (ಕೋಟಿ ನಾಟಿ) ನೆಡುವ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅರಣ್ಯದ ಪ್ರಮಾಣ ಶೇ.9ರಷ್ಟು ಮಾತ್ರವಿದ್ದು, ಮುಂದಿನ ದಿನಗಳಲ್ಲಿ ಕಾಡಿನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಪ್ರತಿ ತಾಲ್ಲೂಕಿನಲ್ಲಿ ತಲಾ ಹತ್ತು ಲಕ್ಷ ಸಸಿ ನಡೆಸಲು ಅವರು ಶ್ರಮಿಸುತ್ತಿದ್ದಾರೆ.
“ಪ್ರತಿದಿನವು ಪರಿಸರ ದಿನ”ವಾಗಬೇಕು ಎನ್ನುವುದು ಅಮರನಾರಾಯಣ ಅವರ ಧ್ಯೇಯವಾಕ್ಯ. ಸರಕಾರಿ ಸೇವೆಯಲ್ಲಿದ್ದಾಗಲೂ ಪರಿಸರಕ್ಕಾಗಿ ಅವಿರತವಾಗಿ ಕೆಲಸ ಮಾಡಿದ್ದ ಹಸಿರುಜೀವಿ. ವಿವಿಧ ಜಿಲ್ಲೆಗಳಲ್ಲಿ ಅವರು ಜಾರಿಗೊಳಿಸಿದ ಅನೇಕ ಕಾರ್ಯಕ್ರಮಗಳು ಹಚ್ಚಹಸಿರಾಗಿವೆ. ʼಶಾಲಾವನʼ ಪರಿಕಲ್ಪನೆಯನ್ನು ಹುಟ್ಟುಹಾಕಿದವರು ಇವರೇ. ಚಿತ್ರದುರ್ಗದಲ್ಲಿ ಈಗಲೂ ಅವರು ʼಹಸಿರು ಜಿಲ್ಲಾಧಿಕಾರಿʼ ಎಂದೇ ಚಿರಪರಿಚಿತರು.
ಪ್ರಶಸ್ತಿ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಅಮರನಾರಾಯಣ ಅವರು ಹೇಳಿದ್ದು ಹೀಗೆ;
ನೆಲದ ಮೇಲೆ ಹಸಿರು ಬರಿದಾದಂತೆಲ್ಲ ಭೂಗರ್ಭದಲ್ಲಿ ಜಲವೂ ಬತ್ತಿ ಹೋಗುತ್ತದೆ. ನಮ್ಮ ಪೂರ್ವಜರು ಹಸಿರು, ನೆಲ ಮತ್ತು ಜಲದ ಪರಿಕಲ್ಪನೆಯಲ್ಲೇ ಕೃಷಿ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಆಗ ಎಲ್ಲವೂ ಸಮೃದ್ಧಿಯಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಏಳು ನದಿಗಳಿವೆ. ಎಲ್ಲವೂ ಬತ್ತಿವೆ. ಮತ್ತೆ ಅವೆಲ್ಲ ನೀರಿನಿಂದ ತುಂಬಬೇಕು. ಇದೇ ನನ್ನ ಕನಸು. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ.
“ನಾವು ಹಮ್ಮಿಕೊಂಡಿದ್ದ ಕೋಟಿ ನಾಟಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಸುಮಾರು 157 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಓಡಾಡಿ ರೈತರಲ್ಲಿ ಗಿಡ ನೆಡುವ ಮಹತ್ತ್ವವನ್ನು ತಿಳಿಸಿ ಹೇಳಿದ್ದೇನೆ. ನನ್ನ ಪ್ರಕಾರ ಒಂದು ಏಕರೆ ಭೂಮಿಯಲ್ಲಿ ೪೦ ಗಿಡಗಳಾದರೂ ಇರಬೇಕು. ಹಾಗೆ ಆದಲ್ಲಿ ನಮ್ಮಲ್ಲಿ ಜಲಕ್ಷಾಮ ಎಂಬುದೇ ಇರಲ್ಲ. ಪರಿಸರ ಮೇಲೆ ಪ್ರೀತಿ ಇಟ್ಟುಕೊಂಡು ಗಿಡ ನೆಟ್ಟು ಪೋಷಿಸುತ್ತಿರುವ ಎಲ್ಲರಿಗೂ ಈ ಪ್ರಶಸ್ತಿ ಸಲ್ಲುತ್ತದೆ” ಎನ್ನುತ್ತಾರೆ ಅಮರನಾರಾಯಣ ಅವರು.
ಡಾ.ಮುನಿ ವೆಂಕಟಪ್ಪ
ದಲಿತ ಸಾಹಿತ್ಯದಲ್ಲಿ ಬಹುದೊಡ್ಡ ಹೆಸರು ಇವರದ್ದು. ಕಳೆದ 45 ವರ್ಷಗಳಿಂದಲೂ ದಲಿತ ಮತ್ತು ಬಂಡಾಯ ಸಾಹಿತ್ಯ ಹಾಗೂ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. ದಲಿತ ಸಂಘರ್ಷ ಸಮಿತಿಯ ಮುಂಚೂಣಿಯಲ್ಲಿದ್ದವರು ಕೂಡ. ತಮ್ಮ ವಿದ್ಯಾರ್ಥಿ ದಿನಗಳಿಂದಲೂ ಅವಿಭಜಿತ ಕೋಲಾರ ಜಿಲ್ಲೆ ಮತ್ತು ರಾಜ್ಯದೆಲ್ಲೆಡೆ ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದವರು. ದಲಿತ ಮತ್ತು ಬಂಡಾಯ ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ಮುನಿ ವೆಂಕಟಪ್ಪ ಅವರು, ಈವರೆಗೆ 62 ಪುಸ್ತಕಗಳನ್ನು ಬರೆದಿದ್ದಾರೆ.
ಮುನಿ ವೆಂಕಟಪ್ಪ ಅವರದು ಕೋಲಾರ ತಾಲ್ಲೂಕಿನ ಯಡಹಳ್ಳಿ ಗ್ರಾಮ. ಮೂಲತಃ ವಿಜ್ಞಾನ ಪದವೀಧರರು. ಕೃಷಿಯಲ್ಲಿ ಅಪರಿಮಿತ ಆಸಕ್ತಿ. ಎಂ.ಎಸ್ಸಿ ಪದವಿ ಗಳಿಸಿದ ನಂತರ ಕೃಷಿಯ ಬಗ್ಗೆ ವ್ಯಾಪಕ ಅಧ್ಯಯನ ನಡೆಸಿ ಕೃಷಿ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಪಡೆದರು. 1968ರಲ್ಲಿ ದಲಿತ ಕ್ರಿಯಾ ಸಮಿತಿ ಮತ್ತು ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು.
ʼಕೆಂಡದ ನಡುವೆʼ, ʼಸ್ವಾಭಿಮಾನದ ಬೀಡಿಗೆʼ, ʼಕಾಡು ಕಣಿವೆಯ ಹಕ್ಕಿʼ, ʼಬುದ್ಧ ಮತ್ತು ಅಂಗುಲಿ ಮಾಲʼ; ಇವು ಮುನಿ ವೆಂಕಟಪ್ಪ ಅವರ ಕಾವ್ಯಕೃತಿಗಳು. ʼಬಾಲಕ ಅಂಬೇಡ್ಕರ್ʼ, ʼಮಹಾಚೇತನ ಅಂಬೇಡ್ಕರ್ʼ, ʼಐಕ್ಯಗೀತೆʼ; ನಾಟಕಗಳು. ʼದಲಿತ ಚಳುವಳಿ-ಒಂದು ಅವಲೋಕನʼ, ʼದಲಿತ ಸಾಹಿತ್ಯ ದರ್ಶನʼ ಅವರ ಅತ್ಯಂತ ಪ್ರಮುಖ ಕೃತಿಗಳು. ʼಅಂತ್ಯಜನ ಅಂತರಂಗʼ ಕೃತಿ ಮುನಿ ವೆಂಕಟಪ್ಪ ಅವರ ಆತ್ಮಕಥೆ.
ಈಗಾಗಲೇ ಅವರಿಗೆ, ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ರತ್ನ ಪ್ರಶಸ್ತಿ ಹಾಗೂ ಮೈಸೂರು ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಶಸ್ತಿಗಳು ಸಂದಿವೆ.
ಪ್ರಶಸ್ತಿ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡುತ್ತಾ ಪ್ರತಿಕ್ರಿಯಿಸಿದ ಡಾ.ಮುನಿ ವೆಂಕಟಪ್ಪ ಹೇಳಿದ್ದು ಹೀಗೆ
ಇದು ಕೋಲಾರ ಜಿಲ್ಲೆಗೆ ಸಂದ ಪ್ರಶಸ್ತಿ. ತುಂಬಾ ಸಂತೋಷವಾಗಿದೆ. ಇಷ್ಟಕ್ಕೆ ಮಿಗಿಲಾಗಿ ಮತ್ತೇನನ್ನೂ ಹೇಳಲು ಪದಗಳೇ ಸಿಗುತ್ತಿಲ್ಲ. ಆನಂದವಾಗಿದೆ.
ಡಾ.ಕೆ.ವಿ.ರಾಜು
ಮೂಲತಃ ಕೋಲಾರದ ಕೆ.ವಿ.ರಾಜು ಅವರದು ಹಣಕಾಸು ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಈ ಹಿಂದೆ ಯಡಿಯೂರಪ್ಪ ಸರಕಾರ ಇದ್ದಾಗ ಆರ್ಥಿಕ ಸಲಹೆಗಾರರಾಗಿದ್ದರು. ಆರ್ಥಿಕ ವಿಷಯಗಳ ಬಗ್ಗೆ ಕರಾರುವಕ್ಕಾದ ಜ್ಞಾನವುಳ್ಳವರು. ಇನ್ಸಿಟ್ಯೂಟ್ ಆಫ್ ಸೋಶಿಯಲ್ ಅಂಡ್ ಎಕಾನಮಿಕ್ ಚೇಂಜ್‌ನಲ್ಲಿ ಪ್ರೊಫೆಸರ್ ಆಗಿದ್ದರು. ಸದ್ಯಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ನಮ್ಮ ರಾಜ್ಯವೂ ಸೇರಿದಂತೆ ಉತ್ತರ ಪ್ರದೇಶದಲ್ಲಿ ಕಾರ್ಯಗತವಾಗಿರುವ ಅನೇಕ ಯೋಜನೆಗಳ ಹಿಂದೆ ಇವರ ಸಲಹೆ ಸಹಕಾರವಿದೆ.
ಪ್ರಶಸ್ತಿ ಪುರಸ್ಕೃತರ ಸಮಗ್ರ ಪಟ್ಟಿ
ಸಾಹಿತ್ಯ
ಪ್ರೊ.ಸಿ.ಪಿ.ಸಿದ್ಧಾಶ್ರಮ-ಧಾರವಾಡ
ವಿ.ಮುನಿವೆಂಕಟಪ್ಪ-ಕೋಲಾರ
ರಾಮಣ್ಣ ಬ್ಯಾಟಿ (ವಿಶೇಷ ಚೇತನ)-ಗದಗ
ವಲೇರಿಯನ್ ಡಿಸೋಜಾ (ವಲ್ಲಿವಗ್ಗ)-ದಕ್ಷಿಣ ಕನ್ನಡ
ಡಿ.ಎನ್.ಅಕ್ಕಿ-ಯಾದಗಿರಿ
ಸಂಗೀತ
ಅಂಬಯ್ಯ ನೂಲಿ-ರಾಯಚೂರು
ಅನಂತ ತೇರದಾಳ-ಬೆಳಗಾವಿ
ಬಿ.ವಿ.ಶ್ರೀನಿವಾಸ್-ಬೆಂಗಳೂರು
ಗಿರಿಜಾ ನಾರಾಯಣ್-ಬೆಂಗಳೂರು
ಕೆ.ಲಿಂಗಪ್ಪ ಶೇರಿಗಾರ್ ಕಟೀಲು-ದಕ್ಷಿಣ ಕನ್ನಡ
ನ್ಯಾಯಾಂಗ
ಎನ್.ಕೆ.ಭಟ್-ಬೆಂಗಳೂರು
ಕೆ.ಎನ್.ವಿಜಯಕುಮಾರ್-ಉಡುಪಿ
ಮಾಧ್ಯಮ
ಸಿ.ಮಹೇಶ್ವರನ್-ಮೈಸೂರು
ಟಿ. ವೆಂಕಟೇಶ್-ಬೆಂಗಳೂರು
ಯೋಗ
ಡಾ.ಎ.ಎಸ್.ಚಂದ್ರಶೇಖರ-ಮೈಸೂರು
ಶಿಕ್ಷಣ
ಎಂ.ಎನ್.ಷಡಕ್ಷರಿ-ಚಿಕ್ಕಮಗಳೂರು
ಡಾ.ಆರ್.ರಾಮಕೃಷ್ಣ-ಚಾಮರಾಜನಗರ
ಡಾ.ಎಂ.ಜಿ.ಈಶ್ವರಪ್ಪ-ದಾವಣಗೆರೆ
ಡಾ.ಪುಟ್ಟಸಿದ್ದಯ್ಯ-ಮೈಸೂರು
ಅಶೋಕ್ ಶೆಟ್ಟರ್-ಬೆಳಗಾವಿ
ಡಿ.ಎಸ್.ದಂಡಿನ್-ಗದಗ
ಹೊರನಾಡು ಕನ್ನಡಿಗ
ಕುಸುಮೋದರ ದೇರಣ್ಣ ಶೆಟ್ಟಿ ಕೇಲ್ತಡ್ಕಾ- ಮುಂಬಯಿಯ ವಿದ್ಯಾ ಸಿಂಹಾಚಾರ್ಯ ಮಾಹುಲಿ
ಕ್ರೀಡೆ
ಎಚ್.ಬಿ.ನಂಜೇಗೌಡ-ತುಮಕೂರು
ಉಷಾರಾಣಿ-ಬೆಂಗಳೂರು
ಸಂಕೀರ್ಣ
ಡಾ.ಕೆ.ವಿ.ರಾಜು-ಕೋಲಾರ
ವೆಂಕೋಬರಾವ್-ಹಾಸನ
ಡಾ.ಕೆ.ಎಸ್.ರಾಜಣ್ಣ-ಮಂಡ್ಯ
ವಿ.ಲಕ್ಷ್ಮೀನಾರಾಯಣ್-ಮಂಡ್ಯ.
ಸಂಘ-ಸಂಸ್ಥೆ
ಬೆಂಗಳೂರು ನಗರದ ಯೂತ್ ಫಾರ್ ಸೇವಾ
ಬಳ್ಳಾರಿಯ ದೇವದಾಸಿ ಸ್ವಾವಲಂಬನಾ ಕೇಂದ್ರ
ಬೆಂಗಳೂರಿನ ಬೆಟರ್ ಇಂಡಿಯಾ
ಬೆಂಗಳೂರು ಗ್ರಾಮಾಂತರದ ಯುವ ಬ್ರಿಗೇಡ್
ದಕ್ಷಿಣ ಕನ್ನಡದ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್
ಸಮಾಜ ಸೇವೆ
ಎನ್.ಎಸ್.ಹೆಗಡೆ-ಉತ್ತರ ಕನ್ನಡ
ಪ್ರೇಮಾ ಕೋದಂಡರಾಮ ಶ್ರೇಷ್ಠಿ-ಚಿಕ್ಕಮಗಳೂರು
ಮಣೆಗಾರ್ ಮೀರಾನ್ ಸಾಹೇಬ್-ಉಡುಪಿ
ಮೋಹಿನಿ ಸಿದ್ದೇಗೌಡ-ಚಿಕ್ಕಮಗಳೂರು
ವೈದ್ಯ
ಡಾ.ಅಶೋಕ್ ಸೊನ್ನದ್-ಬಾಗಲಕೋಟೆ
ಡಾ.ಬಿ.ಎಸ್.ಶ್ರೀನಾಥ-ಶಿವಮೊಗ್ಗ
ಡಾ.ಎ.ನಾಗರತ್ನ-ಬಳ್ಳಾರಿ
ಡಾ.ವೆಂಕಟಪ್ಪ-ರಾಮನಗರ
ಕೃಷಿ
ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್-ಬೀದರ್
ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ-ಚಿತ್ರದುರ್ಗ
ಡಾ.ಸಿದ್ದರಾಮಪ್ಪ ಬಸವಂತರಾವ್ ಪಾಟೀಲ್-ಕಲಬುರಗಿ
ಪರಿಸರ
ಕೆ.ಅಮರ ನಾರಾಯಣ-ಚಿಕ್ಕಬಳ್ಳಾಪುರ
ಎನ್.ಡಿ.ಪಾಟೀಲ್-ವಿಜಯಪುರ.
ವಿಜ್ಞಾನ-ತಂತ್ರಜ್ಞಾನ
ಪ್ರೊ.ಉಡುಪಿ ಶ್ರೀನಿವಾಸ-ಉಡುಪಿ
ಡಾ.ಚಿಂದಿ ವಾಸುದೇವಪ್ಪ-ಶಿವಮೊಗ್ಗ
ಸಹಕಾರ
ಡಾ.ಸಿ.ಎನ್.ಮಂಜೇಗೌಡ-ಬೆಂಗಳೂರು
ಕೆಂಪವ್ವ ಹರಿಜನ-ಬೆಳಗಾವಿ
ಚೆನ್ನಬಸಪ್ಪ ಬೆಂಡಿಗೇರಿ-, ಹಾವೇರಿ
ಯಕ್ಷಗಾನ
ಬಂಗಾರ್ ಆಚಾರಿ-ಚಾಮರಾಜನಗರ
ಡಾ.ಎಂ.ಕೆ.ರಮೇಶ್ ಆಚಾರ್ಯ-ಶಿವಮೊಗ್ಗ
ರಂಗಭೂಮಿ
ಅನುಸೂಯಮ್ಮ-ಹಾಸನ
ಎಚ್.ಷಡಕ್ಷರಪ್ಪ- ದಾವಣಗೆರೆ
ತಿಪ್ಪೇಸ್ವಾಮಿ-ಚಿತ್ರದುರ್ಗ
ಚಲನಚಿತ್ರ
ಬಿ.ಎಸ್.ಬಸವರಾಜು-ತುಮಕೂರು
ಎ.ಟಿ. ರಘು-ಕೊಡಗು
ಚಿತ್ರಕಲೆ
ಎಂ.ಜೆ.ವಾಜೇದ್ ಮಠ-ಧಾರವಾಡ
ಜಾನಪದ
ಗುರುರಾಜ ಹೊಸಕೋಟೆ-ಬಾಗಲಕೋಟೆ
ಡಾ.ಹಂಪನಹಳ್ಳಿ ತಿಮ್ಮೇಗೌಡ-ಹಾಸನ
ಶಿಲ್ಪಕಲೆ
ಎನ್.ಎಸ್.ಜನಾರ್ದನ ಮೂರ್ತಿ-ಮೈಸೂರು
ನೃತ್ಯ
ನಾಟ್ಯವಿದುಷಿ ಜ್ಯೋತಿ ಪಟ್ಟಾಭಿರಾಮನ್,
ಜಾನಪದ-ತೊಗಲುಬೊಂಬೆ
ಕೇಶಪ್ಪ ಶಿಳ್ಳೆಕ್ಯಾತರ-ಕೊಪ್ಪಳ