photos: B.S. Yediyurappa@BSYBJ
ತುಮಕೂರು: ಮತದಾನಕ್ಕೆ ಇನ್ನು ನಾಲ್ಕೇ ದಿನ (ನವೆಂಬರ್ 3) ಇರುವಂತೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ಪ್ರಚಾರಕ್ಕೆ ಇಳಿದಿದ್ದು, ಶಿರಾದಲ್ಲಿ ಶುಕ್ರವಾರ ಮತಯಾಚನೆ ಮಾಡಿದರು. ಪುತ್ರ ವಿಜಯೇಂದ್ರ ಮಾಡಿಟ್ಟಿದ್ದ ಬಿಜೆಪಿ ವೋಟ್ʼಬೇಸ್ ವಿಸ್ತರಣೆಗೆ ಮತ್ತಷ್ಟು ನೀರೆರೆದರು.
ಇದೇ ಮೊದಲಿಗೆ ಕ್ಷೇತ್ರದಲ್ಲಿ ಅಕೌಂಟ್ ತೆರೆಯುವ ಉಮೇದಿನಲ್ಲಿರುವ ಬಿಜೆಪಿಗೆ ಶಿರಾ ಪಾಲಿಟಿಕ್ಸ್ ಬಹುತೇಕ ಅರ್ಥವಾಗಿರುವ ಹಾಗಿದೆ. ಏಕೆಂದರೆ, ಪಕ್ಷದ ಅಭ್ಯರ್ಥಿ ರಾಜೇಶ್‌ಗೌಡ ನಾಮಪತ್ರ ಸಲ್ಲಿಸಿದಾಗಿನಿಂದ ಕ್ಷೇತ್ರದಲ್ಲಿಯೇ ಬೀಡುಬಿಟ್ಟಿರುವ ವಿಜಯೇಂದ್ರ ದೊಡ್ಡ ಪ್ರಮಾಣದ ಕಾರ್ಯಕರ್ತರ ಪಡೆ ಇಟ್ಟುಕೊಂಡು ಬಲವಾದ ನೆಲೆ ಕ್ರಿಯೇಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಂಡ್ಯದ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಅನುಸರಿಸಿದ ಕಾರ್ಯತಂತ್ರವನ್ನೇ ಫಾಲೋ ಮಾಡುತ್ತಿದ್ದು, ಬಿಜೆಪಿಗೆ ಭರ್ಜರಿ ಫಸಲು ಸಿಗುವ ನಿರೀಕ್ಷೆ ಇದೆ.
ಇದರ ಬೆನ್ನಲ್ಲೇ ಯಡಿಯೂರಪ್ಪ ಅವರು ಕ್ಷೇತ್ರದಲ್ಲಿ ಇಡೀ ದಿನ ಸಂಚಾರ ಮಾಡಿರುವುದು ಪಕ್ಷಕ್ಕೆ ಹೊಸ ಹರುಪು ಮೂಡಿಸಿತು. ಅವರು ಮಾಡಿದ ಪ್ರಚಾರ ಭಾಷಣ ಇದೀಗ ಕ್ಷೇತ್ರದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ ಎಂದು ವರದಿಯಾಗಿದೆ. ಅವರು ಹೇಳಿದ ಮಾತುಗಳು ಹೀಗಿವೆ;
ಈ ಯಡಿಯೂರಪ್ಪ ಆಡಿದ ಮಾತನ್ನು ತಪ್ಪುವವನಲ್ಲ. ಅಕ್ಷರಶಃ ನಡೆಸಿಕೊಡುವಂತವನು. ಮುಂದಿನ ಎರಡೂವರೆ ವರ್ಷಗಳಲ್ಲಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. ಎಲ್ಲ ವರ್ಗದ ಜನರಗೂ ಅನುಕೂಲ ಮಾಡಿಕೊಡುತ್ತೇನೆ.
ಅನಿರೀಕ್ಷಿತವಾಗಿ ಬಂದ ಕೋವಿಡ್ ಸೋಂಕಿನಿಂದ ಕೊಂಚಮಟ್ಟಿಗೆ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಇದೀಗ ಎಲ್ಲವೂ ಸುಧಾರಣೆ ಆಗುತ್ತಿದೆ. ರಾಜ್ಯದ ಎಲ್ಲ ಭಾಗಗಳೂ ಶರವೇಗದಲ್ಲಿ ಅಭಿವೃದ್ಧಿ ಆಗುತ್ತಿವೆ. ಶಿರಾಗೆ ಈ ವಿಷಯದಲ್ಲಿ ಅನ್ಯಾಯವಾಗಲು ನಾನು ಬಿಡುವುದಿಲ್ಲ.
ಮಾದರಿ ತಾಲ್ಲೂಕು, ಮಾದರಿ ಜಿಲ್ಲೆ
ಶಿರಾವನ್ನು ಮಾದರಿ ತಾಲ್ಲೂಕು ಮಾಡುತ್ತೇನೆ. ತುಮಕೂರು ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುತ್ತೇನೆ. ನವೆಂಬರ್ 3 ಕಳೆದ ಮೇಲೆ ಈ ಕ್ಷೇತ್ರದಲ್ಲಿ ಆಗಬೇಕಿರುವ ಎಲ್ಲ ಕೆಲಸಗಳನ್ನೂ ಮಾಡಿಕೊಡುತ್ತೇನೆ. ದೇವಸ್ಥಾನಕ್ಕೆ ಅನುದಾನ ನೀಡಲಾಗುವುದು. ನನ್ನಲ್ಲಿ ಯಾವುದೇ ಜಾತಿ ಪ್ರಶ್ನೆ ಇರುವುದಿಲ್ಲ. ಎಲ್ಲ ಜಾತಿಗಳ ಜನರೂ ಉತ್ತಮವಾಗಿ ಬದುಕಬೇಕು. ಇದು ನನ್ನ ಅಭಿಲಾಶೆ.
ಬಿಜೆಪಿ ಅಭ್ಯರ್ಥಿಯನ್ನು ಮತದಾರರು ದೊಡ್ಡ ಅಂತರದಲ್ಲಿ ಗೆಲ್ಲಿಸಬೇಕು. ಅಂದರೆ; ಡಾ. ರಾಜೇಶ್ ಗೌಡ ಅವರನ್ನು 25-35 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ನೀವು ಆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಆಗ, ನಿಮಗೆ ಆಗಬೇಕಿರುವ ಕೆಲಸವನ್ನು ನಾನು ಮಾಡಿಕೊಡಲು ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಇದರಲ್ಲಿ ಜನರಿಗೆ ಯಾವುದೇ ಸಂದೇಹ ಬೇಡ.
ಕೆರೆ ಪೂಜೆಗೆ ನಾನೇ ಬರುತ್ತೇನೆ
ಮದಲೂರು ಕೆರೆ ಮುಂಭಾಗ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕೆರೆ ತುಂಬಿಸಲಾಗುವುದು. ಕೆರೆ ತುಂಬಿಸಬೇಕು ಎಂಬುದು ಇಲ್ಲಿನ ಜನರ ಪ್ರಮುಖ ಬೇಡಿಕೆ. ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ ಇದೇ ಕೆರೆಗೆ ನೀರು ಬಿಡಲು ಕಾಲುವೆ ನಿರ್ಮಿಸಲು ಅನುದಾನ ಮಂಜೂರು ಮಾಡಿದ್ದೆ. ಆ ವಿಷಯ ಎಲ್ಲರಿಗೂ ಗೊತ್ತಿದೆ. ಮುಂದಿನ ಆರು ತಿಂಗಳ ಒಳಗಾಗಿ ಮದಲೂರು ಕೆರೆಗೆ ನೀರು ತುಂಬಿಸಲಾಗುವುದು. ನಾನೇ ಬಂದು ಕೆರೆಗೆ ಪೂಜೆ ಸಲ್ಲಿಸುತ್ತೇನೆ. ಇದು ನನ್ನ ಸ್ಪಷ್ಟ ಭರವಸೆ.
ಕೆ.ಆರ್.ಪೇಟೆಯಂತೆ ಇಲ್ಲೂ ಕೆಲಸ ಆಗುತ್ತದೆ
ಕೆ.ಆರ್.ಪೇಟೆ ಕ್ಷೇತ್ರ ಹಿಂದುಳಿದಿತ್ತು. ಅಲ್ಲೀಗ ಅಭಿವೃದ್ಧಿ ಕೆಲಸಗಳು ಚೆನ್ನಾಗಿ ಆಗುತ್ತಿವೆ. ಏನು ಮಾತು ಕೊಟ್ಟಿದ್ದೆವೋ ಅದರಂತೆ ಅಭಿವೃದ್ಧಿ ಮಾಡುತ್ತಿದ್ದೇವೆ. ಹೇಮಾವತಿ ನದಿಯಿಂದ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುತ್ತೇವೆ. ಒಟ್ಟು 60 ಕೆರೆಗಳನ್ನು ತುಂಬಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ.
ಪರಿಶಿಷ್ಟ ವರ್ಗಕ್ಕೆ ಕುಂಚಿಟಿಗರು
ಬಹುದಿನಗಳ ಬೇಡಿಕೆಯಾಗಿ ಉಳಿದಿರುವ ಕುಂಚಿಟಿಗ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ನಮ್ಮ ಸರಕಾರ ಕ್ರಮ ಕೈಗೊಳ್ಳುತ್ತದೆ. ಸಾಮಾಜಿಕ ನ್ಯಾಯ ಒದಗಿಸುವುದು ನನ್ನ ಹೊಣೆ. ಸರ್ವ ಸಮುದಾಯಗಳನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಹಂಬಲ ನನ್ನದು. ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಕಾಡುಗೊಲ್ಲರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮ ರೂಪಿಸಿದ್ದೇನೆ.
5 ಲಕ್ಷದಲ್ಲಿ ಮನೆ
ಶಿರಾ ಕ್ಷೇತ್ರ ಒಂದೇ ಅಲ್ಲ, ಇಡೀ ರಾಜ್ಯಕ್ಕೆ ಒಳ್ಳೆಯದಾಗಬೇಕು. ಎಲ್ಲರಿಗೂ ನಿವೇಶನ ಸಿಗಬೇಕು. ಯಾರಿಗೆ ಮನೆ ಸಿಗಬೇಕೋ ಅವರ ಪಟ್ಟಿ ಕೊಡಿ. 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿ ಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿ ಸಿಎಂ ಮಾತು ಮುಗಿಸಿದರು.
ವೇದಿಕೆ ಮೇಲಿನ ಸಮಾರಂಭದಲ್ಲಿ ಸಿಎಂ ಜತೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಡಿಸಿಎಂ ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಬಿ.ವೈ.ವಿಜಯೇಂದ್ರ ಮುಂತಾದವರು ಉಪಸ್ಥಿತರಿದ್ದರು.