ರಾಜ್ಯೋತ್ಸವ ವಿಶೇಷ
ಚಿಕ್ಕಬಳ್ಳಾಪುರ: ಮತ್ತೆ ಬಂದಿದೆ ಕರ್ನಾಟಕ ರಾಜ್ಯೋತ್ಸವ. ನಾಡಿಗೆ, ದೇಶಕ್ಕೆ ಮಹಾನ್ ಪ್ರತಿಭೆಗಳನ್ನು ಕೊಟ್ಟಿರುವ ಈ ನೆಲದ ಪ್ರತಿಭೆಯೊಬ್ಬರು ದೂರದ ಕೆನಡಾದಲ್ಲಿ ಕನ್ನಡ ಕಂಪನ್ನು ಹರಡುತ್ತಿದ್ದು, ಆ ಮೂಲಕ ಚಿಕ್ಕಬಳ್ಳಾಪುರದ ಸಿರಿಯನ್ನೂ ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ.
ಕೆನಡಾದಲ್ಲಿ ಕನ್ನಡ ಕಂಪಿನ ಜತೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿರುವ ʼಬಾರಿಸು ಕನ್ನಡ ಡಿಂಡಿಮವಾʼ ಗೀತೆಯೂ ಸದ್ದು ಮಾಡುತ್ತಿದ್ದು, ಅಲ್ಲಿಯೇ ನೆಲೆಸಿರುವ ಚಿಕ್ಕಬಳ್ಳಾಪುರ ಮೂಲದ ನೃತ್ಯ ಕಲಾವಿದೆ ಕಾವ್ಯಶ್ರೀ ನಾಗರಾಜ್ ಈ ನಾಡಗೀತೆಗೆ ಹೆಜ್ಜೆ ಹಾಕಿ ಕನ್ನಡಕ್ಕೆ ನಮನ ಸಲ್ಲಿಸಿದ್ದಾರೆ.
ರಾಜ್ಯೋತ್ಸವ ನಿಮಿತ್ತ ಕಾವ್ಯಶ್ರೀ ಅವರು ಕೆನಡಾದಲ್ಲಿ ತಮ್ಮ ನಾಲ್ವರು ಶಿಷ್ಯರಾದ ಪಲ್ಲವಿ, ಮೇಘನಾ, ಗ್ರೀಷ್ಮಾ, ಹರ್ಷಿತಾ ಅವರೊಂದಿಗೆ ʼಭಾರಿಸು ಕನ್ನಡ ಡಿಂಡಿಮವಾʼ ಗೀತೆಗೆ ನೃತ್ಯವನ್ನು ಸಂಯೋಜಿಸಿ ಕೆನಡಾದ ಹ್ಯಾಲಿಫ್ಯಾಕ್ಸ್ ಎಂಬ ನಗರದಲ್ಲಿ ಚಿತ್ರೀಕರಿಸಿ ನವೆಂಬರ್ 1ರಂದು ‘ಕಾವ್ಯಶ್ರೀ ನಾಗರಾಜ್’ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ.
ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ…
ಯಾರು ಕಾವ್ಯಶ್ರೀ?
ಜಗದ್ವಿಖ್ಯಾತ ನಂದಿಬೆಟ್ಟದ ಮೇಲಿನ ಶ್ರೀ ಯೋಗ ನಂದೀಶ್ವರ ದೇವಾಲಯದ ಅರ್ಚಕರು ಹಾಗೂ ಹೆಸರಾಂತ ನಾರು-ಬೇರು ಕಲಾವಿದರಾದ ಟಿ.ಎನ್. ನಾಗರಾಜ್ ಅವರ ಪುತ್ರಿ ಕಾವ್ಯಶ್ರೀ. ಅಂತಾರಾಷ್ಟ್ರೀಯ ಮಟ್ಟದ ನೃತ್ಯ ಕಲಾವಿದೆಯಾದ ಅವರು; ಕೆನಡಾದಲ್ಲಿ ನೆಲೆಸಿದ್ದು, ತಮ್ಮ ನೃತ್ಯಸಂಸ್ಥೆ ʼಕಾವ್ಯಶ್ರೀ ಆರ್ಟ್ ಫೌಂಡೇಷನ್ʼ ಮೂಲಕ ಕರ್ನಾಟಕದ 60 ಮಕ್ಕಳಿಗೆ ಅನ್ಲೈನ್ ಮೂಲಕ ಹಾಗೂ ಕೆನಡಾದ ತಮ್ಮ ನೃತ್ಯ ಶಾಲೆಯಲ್ಲಿ 20 ವಿದ್ಯಾರ್ಥಿಗಳಿಗೆ ನೃತ್ಯಪಾಠ ಮಾಡುತ್ತಿದ್ದಾರೆ.