PHOTO COURTESY: PVSINDHU@PVSINDHU1
ಬೆಂಗಳೂರು: ಸುದ್ದಿ ವಿಷಯದಲ್ಲಿ ಧಾವಂತ ಇದ್ದರೆ ಹೀಗಾಗುತ್ತಿದೆ. ಇವತ್ತು ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಅವರ ವಿಷಯದಲ್ಲಿ ಆಗಿದ್ದೂ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು, “ಐ ರಿಟೈರ್” ಎಂಬ ಪೋಸ್ಟ್ ಹಾಕುತ್ತಿದ್ದಂತೆಯೇ ʼಸಿಂಧು ಬ್ಯಾಡ್ಮಿಂಟನ್ ಆಟದಿಂದಲೇ ನಿವೃತ್ತಿಯಾದರುʼ ಎಂಬ ಬ್ರೇಕಿಂಗ್ ನ್ಯೂಸ್ ಪ್ಲಾಶ್ ಆಯಿತು!
ಆದರೆ, ಅವರು ರಿಟೈರ್ ಆಗುತ್ತಿರುವುದು ಆಟದಿಂದ ಅಲ್ಲ! ಕೊರೊನದಿಂದ!!
ಇನ್ನು ಸುದ್ದಿಯೊಳಕ್ಕೆ ಹೋದರೆ; ಸೋಮವಾರ ಮೂರೂ ಮುಕ್ಕಾಲು ಗಂಟೆ ಸುಮಾರಿಗೆ ಟಿಟ್ಟರ್ ಮತ್ತು ಇನ್ಸ್‌ಸ್ಟಾದಲ್ಲಿ ಈ ಪೋಸ್ಟ್ ಮಾಡಿದ್ದ ಅವರು, ೩ ಪುಟಗಳ ಟೆಕ್ಸ್ಟ್ ಬರೆದಿದ್ದರು. ಮೊದಲ ಪುಟದಲ್ಲಿ, “ಡೆನ್ಮಾರ್ಕ್ ಓಪೆನ್ ವಾಸ್ ದ ಫೈನಲ್ ಸ್ಟ್ರಾ, ಐ ರಿಟೈರ್” ಎಂದು ಬರೆದಿದ್ದರು. ಇದಿಷ್ಟನ್ನೇ ಓದಿಕೊಂಡ ಕೆಲವರಿಗೆ ಅದೇ ಬ್ರೇಕಿಂಗ್ ನ್ಯೂಸ್ ಆಯಿತು. ಮುಂದಿನ ಎರಡು ಪುಟಗಳನ್ನು ಅವರು ಓದಲು ಹೋಗಲೇ ಇಲ್ಲ. ಅಷ್ಟೊತ್ತಿಗೆ ಆಭಿಮಾನಿಗಳು ಕೂಡ ತೀವ್ರ ಶಾಕ್‌ಗೆ ಗುರಿಯಾಗಿದ್ದರಲ್ಲದೆ, ಈ ನಿರ್ಧಾರವನ್ನು ವಾಪಸ್ ಪಡೆಯುಂತೆ ಅದೇ ಜಾಲತಾಣಗಳಲ್ಲಿ ಸಿಂಧು ಅವರನ್ನು ಒತ್ತಾಯಿಸತೊಡಗಿದದರು.
ತಮ್ಮ ʼರಿಟೈರ್ʼ ಎಂಬ ಮಾತನ್ನು ಅದೇ ಪೋಸ್ಟ್‌ನಲ್ಲಿ ಅವರು ಹೀಗೆ ವಿವರಿಸಿದ್ದಾರೆ.
“ನನ್ನ ಈ ಭಾವನೆಗಳನ್ನು ಹೇಳಿಕೊಳ್ಳಬೇಕು ಎಂದು ನನಗೆ ಬಹಳ ದಿನಗಳಿಂದ ಅನಿಸುತ್ತಿತ್ತು. ಈ ಭಾವನೆಗಳನ್ನು ಈವೆರೆಗೂ ಹೇಳಲಾಗದೆ ತುಂಬಾ ಕಷ್ಟಪಟ್ಟಿದ್ದೇನೆ. ಅದು ನನಗೆ ತಪ್ಪು ಎನಿಸಿತು. ಅದಕ್ಕಾಗಿ ಇವತ್ತು ಇಷ್ಟೆಲ್ಲವನ್ನೂ ಬರೆದಿದ್ದೇನೆ. ಇದರಿಂದ ಯಾರಾದರೂ ಶಾಕ್ ಅಥವಾ ಕನ್‌ಫ್ಯೂಸ್ ಆಗಿದ್ದರೆ ಇಡೀ ನನ್ನ ಬರಹವನ್ನು ಓದಿದರೆ ಆ ನನ್ನ ಮಾತುಗಳ ಭಾವಾರ್ಥ ಅರ್ಥವಾಗುತ್ತದೆ. ಎಲ್ಲರೂ ಅದಕ್ಕೆ ಬೆಂಬಲ ಕೊಡುತ್ತಾರೆಂದು ನಂಬಿದ್ದೇನೆ.”
“ಈ ಕೋವಿಡ್ ಪೀಡೆಯಿಂದ ನಾನು ತುಂಬಾ ಕಲಿತಿದ್ದೇನೆ. ಆ ಕಾಲದಲ್ಲಿ ನನ್ನ ಅತ್ಯಂತ ಕಠಿಣ ಎದುರಾಳಿಗಳ ವಿರುದ್ಧ ಹೇಗೆ ಸೆಣಸಬೇಕು ಎಂಬ ಬಗ್ಗೆ ಕಷ್ಟಪಟ್ಟು ಕಲಿತಿದ್ದೇನೆ. ಅಂಥ ಹೋರಾಟವನ್ನೂ ಹಿಂದೆಯೂ ಮಾಡಿದ್ದೆ. ಮುಂದೆಯೂ ಮಾಡುತ್ತೇನೆ. ಆದರೆ, ಇಡೀ ಜಗತ್ತನ್ನೇ ಕಷ್ಟಕ್ಕೆ ನೂಕಿರುವ ಈ ಕೋವಿಡ್ ಅನ್ನು ಹೇಗೆ ಸೋಲಿಸಲಿ?.”
ಇಷ್ಟು ದಿನ ತಿಂಗಳುಗಟ್ಟಲೆ ಮನೆಯಲ್ಲೇ ಇದ್ದೇವೆ. ಆದರೆ, ಈಗ ಹೊರಗೆ ಹೋಗಬೇಕಾದರೆ ಒಮ್ಮೆ ಯೋಚಿಸುವಂತೆ ಆಗಿದೆ. ಹೊರಗೆ ಹೋಗುವಾಗಲೆಲ್ಲ ಇದು ಸರೀನಾ ಅಥವಾ ತಪ್ಪಾ ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ಇದೆಲ್ಲವನ್ನೂ ಅರಗಿಸಿಕೊಂಡು, ಆನ್‌ಲೈನ್‌ನಲ್ಲಿ ಕೋವಿಡ್ ಕುರಿತಾದ ಹೃದಯವಿದ್ರಾವಕ ಕಥೆಗಳನ್ನು ಓದುತ್ತಾ ನನ್ನ ಬಗ್ಗೆ ಹಾಗೂ ನಾವು ಜೀವಿಸುತ್ತಿರುವ ಈ ಜಗತ್ತಿನ ಬಗ್ಗೆ ಅನೇಕ ಪ್ರಶ್ನೆಗಳು ಮೂಡಿದವು. ಡೆನ್ಮಾರ್ಕ್ ಓಪೆನ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸದೇ ಇರುವುದಕ್ಕೆ ನನಗೆ ಬೇಸರವಾಗಿದೆ. ನನ್ನೆಲ್ಲ ತುಮುಲಗಳಿಗೆ ಇದೂ ಒಂದು ಕಾರಣ. ಇವತ್ತು, ನಾನು ನಿವೃತ್ತಿ ಆಗಬೇಕು ಎಂದುಕೊಂಡುರುವುದು ಪ್ರಸ್ತುತ ಇರುವ ಈ ಪ್ರಕ್ಷಬ್ಧತೆಯಿಂದ. ಹಾಗೆಯೇ ನಾಕಾರಾತ್ಮಕತೆ, ನಿರಂತರ ಭಯ, ಅನಿಶ್ಚಿತತೆಯಿಂದ ರಿಟೈರ್ ಆಗಬೇಕು ಎಂದುಕೊಂಡಿದ್ದೇನೆ.”
“ಈಗಿರುವ ಸಂಪೂರ್ಣ ಅನಿಯಂತ್ರಿತ ಪರಿಸ್ಥಿತಿಯಿಂದ ಹೊರಬರಬೇಕು ಎಂದಿದ್ದೇನೆ. ಅತಿ ಮುಖ್ಯವಾಗಿ; ಈ ವೈರಸ್ ಬಗ್ಗೆ ತೋರುತ್ತಿರುವ ಗುಣಮಟ್ಟವಿಲ್ಲದ ಶುಚಿತ್ವ, ನಿರ್ಲಕ್ಷ್ಯ ಮನೋಭಾವದಿಂದ ನಿವೃತ್ತಿ ಆಗಬೇಕು ಎಂದಿದ್ದೇನೆ. ಈ ಪರಿಸ್ಥಿತಿಯನ್ನು ನಾವು ಅಲಕ್ಷ್ಯ ಮಾಡುವಂತಿಲ್ಲ. ಸದಾ ಸನ್ನದ್ಧರಾಗಿರಬೇಕು. ಎಲ್ಲರೂ ಒಟ್ಟಾಗಿ ಈ ವೈರಸ್ ಅನ್ನು ಸೋಲಿಸಬೇಕು.”
“ಇವತ್ತು ನಾವು ತೆಗೆದುಕೊಳ್ಳುವ ನಿರ್ಧಾರ ನಮ್ಮ ಭವಿಷ್ಯದ ಮೇಲೆ ಮತ್ತು ನಮ್ಮ ಮುಂದಿನ ಪೀಳಿಗೆಯ ಮೇಲೆ ಪ್ರಭಾವ ಬೀರುತ್ತದೆ. ನಮ್ಮ ಭವಿಷ್ಯದ ಪೀಳಿಗೆಯನ್ನು ಕೈಬಿಡಲು ಸಾಧ್ಯವಿಲ್ಲ. ಹಾಗೆ ಮಾಡಬಾರದು.”
“ನಾನು ನಿಮಗೆಲ್ಲ ಲಘು ಹೃದಯಾಘಾತವಾಗುವ ಸುದ್ದಿ ಕೊಟ್ಟಿರಬಹುದು. ಊಹೆಗೂ ನಿಲುಕದ ಸಮಯದಲ್ಲಿ ಊಹೆಗೂ ನಿಲುಕದ ಕ್ರಮಗಳನ್ನು ನಾವು ಕೈಗೊಳ್ಳಬೇಕು. ಇಂಥ ಸೂಕ್ಷ್ಮ ಸಂದರ್ಭದಲ್ಲಿ ನಾನು ಎಲ್ಲರ ಗಮನ ಸೆಳೆದಿದ್ದೇನೆ ಎಂದು ಭಾವಿಸಿದ್ದೇನೆ. ನಾವು ಎಷ್ಟೇ ಕಷ್ಟದಲ್ಲಿದ್ದರೂ ಅದರಿಂದ ಹೊರಬರುವ ಒಂದು ದಾರಿ ಇದ್ದೇಇರುತ್ತದೆ. ಡೆನ್ಮಾರ್ಕ್ ಓಪೆನ್ ಟೂರ್ನಿಯಲ್ಲಿ ನಾನು ಭಾಗವಹಿಸಲಾಗಲಿಲ್ಲ, ನಿಜ. ಆದರೆ; ಅದರಿಂದ ನನ್ನ ತರಬೇತಿಗೆ ಧಕ್ಕೆ ಆಗಲಿಲ್ಲ. ಜೀವನದಲ್ಲಿ ಕಷ್ಟ ಬಂದಾಗ ಅದರ ದುಪ್ಪಟ್ಟು ಶ್ರಮದಿಂದ ಆ ಕಷ್ಟವನ್ನು ಎದುರಿಸಬೇಕು. ಆದ್ದರಿಂದ ನಾನು ಏಷ್ಯಾ ಓಪೆನ್ ಟೂರ್ನಿಯಲ್ಲಿ ಬಾಗವಹಿಸುತ್ತೇನೆ. ಒಂದು ಸದೃಢ ಪೈಪೋಟಿ ಕೊಡದೇ ಬಿಟ್ಟುಕೊಡುವುದಿಲ್ಲ. ನಾನು ನನ್ನ ಭಯವನ್ನು ಗೆಲ್ಲದೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಅದು ಎಂದಿನವರೆಗೂ ಎಂದರೆ; ಜಗತ್ತು ಸುರಕ್ಷಿತ ಸ್ಥಿತಿಗೆ ಮರಳುವ ತನಕ.”
ಇಷ್ಟು ಬರೆದಿರುವ ಸಿಂಧು ಕೊರೊನ ಕುರಿತ ತಮ್ಮ ಭಾವನೆಗಳನ್ನು ಅತ್ಯಂತ ಭಾವುಕತೆಯಿಂದ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಇಷ್ಟೆಲ್ಲ ಓದುವ ಮುನ್ನವೇ ಸಿಂಧು ನಿವೃತ್ತಿ ಎಂದು ಸುದ್ದಿ ಬ್ರೇಕ್ ಆಗಿದ್ದು ಮಾತ್ರ ಇವತ್ತಿನ ಮೀಡಿಯಾ ದುರಂತವೇ ಸರಿ.
ಕ್ರೀಡಾ ಸಚಿವರಿಗೆ ಶಾಕ್
ಸಿಂಧು ಅವರ ಟ್ವೀಟ್ ಗಮನಿಸುತ್ತಿದ್ದಂತೆ ಚಿಕ್ಕದೊಂದು ಶಾಕ್ ಆಯಿತೆಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ಈ ಬಗ್ಗೆ ಅವರು ಸಿಂಧುಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.