LEAD PHOTO BY Anna Tarazevich FROM Pexels
ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸಿ ಕೊರೊನಾ ಸೋಂಕಿಗೊಳಗಾದ ಮೂತ್ರಪಿಂಡ ತಜ್ಞ ಡಾ.ಬಾಲಾಜಿ ಪ್ರಸಾದ್ ಅವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 25 ಲಕ್ಷ ರೂ. ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದರು.
ಬೆಂಗಳೂರಿನ ಮೂತ್ರಪಿಂಡ ತಜ್ಞ ಡಾ.ಬಾಲಾಜಿ ಪ್ರಸಾದ್ ಅವರು 100ಕ್ಕೂ ಅಧಿಕ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಕೊರೊನಾ ವಾರಿಯರ್ ಹೀರೋ ಎಂದು ಹೆಸರು ಪಡೆದಿದ್ದರು. ಅವರ ಸೇವೆಯ ಕುರಿತು ಮಾಧ್ಯಮಗಳಲ್ಲೂ ಸುದ್ದಿ ಪ್ರಸಾರವಾಗಿತ್ತು. ಆದರೆ ನಂತರ ಅವರಿಗೂ ಕೊರೊನಾ ಸೋಂಕು ತಗಲಿದ್ದು, ಶೇಷಾದ್ರಿಪುರ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. 37 ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 26 ದಿನಗಳಿಂದ ವೆಂಟಿಲೇಟರ್ ಅಳವಡಿಸಲಾಗಿದೆ.
ವೈದ್ಯರ ಶ್ವಾಸಕೋಶಕ್ಕೆ ಹಾನಿಯಾಗಿರುವುದರಿಂದ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆ ಮಾಡಬೇಕಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಲಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಸಹಾಯ ಮಾಡಬೇಕು ಎಂದು ಕೋರಲಾಗಿತ್ತು.
ಸಚಿವ ಡಾ.ಕೆ.ಸುಧಾಕರ್ ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಹಣ ಬಿಡುಗಡೆ ತೀರ್ಮಾನ ಕೈಗೊಳ್ಳಲು ಪ್ರಯತ್ನ ಮಾಡಿದ್ದರು. ಸಚಿವರ ಪ್ರಯತ್ನದ ಫಲವಾಗಿ ಸಿಎಂ ಪರಿಹಾರ ನಿಧಿಯಿಂದ 25 ಲಕ್ಷ ರೂ. ನೀಡುವುದಾಗಿ ಸಿಎಂಆರ್‍ಎಫ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.