ತಿರುವನಂತಪುರ: ಪ್ರಸಿದ್ಧ ಶಬರಿಮಲೆ ದೇವಳದ ಪ್ರಸಾದವನ್ನು ಭಕ್ತರು ಈಗ ಮನೆಗೇ ತರಿಸಿಕೊಳ್ಳಬಹುದು. ಅದೂ ಅಂಚೆಯ ಮೂಲಕ.
ಕೋವಿಡ್ ಹಿನ್ನೆಲೆಯಲ್ಲಿ ಈ ಮಹತ್ತ್ವದ ನಿರ್ಧಾರ ಕೈಗೊಂಡಿರುವ ತಿರುವಾಂಕೂರು ದೇವಸ್ವಂ ಮಂಡಳಿಯವರು; ಭಕ್ತರು ತಮಗೆ ಬೇಕು ಎನಿಸಿದಾಗ ಸ್ವಾಮಿಯವರ ಪ್ರಸಾದವನ್ನು ಮನೆಗೇ ತರಿಸಿಕೊಳ್ಳಬಹುದು. ಈ ಕಿಟ್ನಲ್ಲಿ ಅರವಣ, ಅರಿಶಿಣ, ಕುಂಕುಮ, ವಿಭೂತಿ ಹಾಗೂ ಇತರೆ ಪ್ರಸಾದಗಳೂ ಇರಲಿವೆ. ಅಂದಹಾಗೆ; ಈ ಕಿಟ್ಗೆ ಒಂದರ ಬೆಲೆ 450 ರೂ. ಆಗಿದೆ ಎಂದು ದೇವಸ್ವಂ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಅಯ್ಯಪ್ಪ ಸ್ವಾಮಿ ಅವರ ಪ್ರಸಾದದ ಕಿಟ್ಟನ್ನು ದೇಶದ ಯಾವುದೇ ಅಂಚೆ ಕಚೇರಿಯಲ್ಲಿ ಹಣ ಪಾವತಿ ಮಾಡಿ ಕಾದಿರಿಸಬಹುದು. ಈ ಪ್ರಸಾದವನ್ನು ಸ್ಪೀಡ್ʼಪೋಸ್ಟ್ ಮೂಲಕ ಡೆಲಿವರಿ ಮಾಡಲಾಗುತ್ತದೆ. ಈ ಶುಕ್ರವಾರದಿಂದಲೇ, ಅಂದರೆ; ನವೆಂಬರ್ 11ರಿಂದಲೇ ಬುಕ್ಕಿಂಗ್ ಆರಂಭವಾಗಲಿದೆ. ಇನ್ನು ಪ್ರಸಾದದ ಕಿಟ್ಗಳನ್ನು ನವೆಂಬರ್ 16ರಿಂದಲೇ ಭಕ್ತರಿಗೆ ಕಳುಹಿಸಿಕೊಡಲಾಗುತ್ತದೆ.
ದೇವಸ್ವಂ ಮಂಡಳಿಯು ಪ್ರತಿ ಒಂದು ಕಿಟ್ಗೆ 250 ರೂ. ದರ ನಿಗದಿ ಮಾಡಿದ್ದು, ಉಳಿದ 200 ರೂ. ಅಂಚೆ ವೆಚ್ಚವಾಗಿದೆ. ದೇವಸ್ವಂ ಮಂಡಳಿ ಸಿಬ್ಬಂದಿಯವರು ಪ್ರಸಾದದ ಕಿಟ್ ಅನ್ನು ಸ್ವಾಮಿಯ ಸನ್ನಿಧಾನದಿಂದ ಪಂಪೆಗೆ ಕಳುಹಿಸುವರು. ಪಂಪೆಯಿಂದ ಈ ಪ್ರಸಾದವು ಕಾದಿರಿಸಿದ ಭಕ್ತರು ನೀಡಿರುವ ಅಂಚೆ ವಿಳಾಸಕ್ಕೆ ಕೇವಲ ಮೂರೇ ದಿಗಳಲ್ಲಿ ತಲುಪಲಿದೆ. ಹೆಚ್ಚಿನ ಮಾಹಿತಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.