Lead photos courtesy: Wikipedia
ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರೀಸ್
courtesy: cnn
ವಾಷಿಂಗ್ಟನ್: ಅಮೆರಿಕ ಹಿಂದೆಂದೂ ಕಂಡರಿಯದಷ್ಟು ಕುತೂಹಲ ಕೆರಳಿಸಿದ್ದ ಅಧ್ಯಕ್ಷೀಯ ಚುನಾವಣೆ ರೋಚಕವಾಗಿ ಕೊನೆಗೊಂಡಿದೆ. ಮಾಜಿ ಉಪಾಧ್ಯಕ್ಷ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇನ್ನೊಂದೆಡೆ; ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅಮೆರಿಕದಲ್ಲಿರುವ ಭಾರತೀಯರೆಲ್ಲರೂ ವಿಜಯೋತ್ಸವ ಆಚರಿಸುತ್ತಿದ್ದಾರೆ. ಜನವರಿ 26ರಂದು ಬೈಡನ್ ಮತ್ತು ಕಮಲಾ ಹ್ಯಾರೀಸ್ ಪ್ರಮಾಣ ಸ್ವೀಕರಿಸಲಿದ್ದಾರೆ.
ಅಮೆರಿಕ ಮಾಧ್ಯಮಗಳು ಬೈಡನ್ ಆಯ್ಕೆಯನ್ನು ಖಚಿತಪಡಿಸಿದ್ದು, ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಸೋಲಿಸಿದ್ದಾರೆ. ಬೈಡನ್ ಅವರಿಗೆ 273 ಎಲೆಕ್ಟ್ರೋಲ್ ಮತಗಳು ಬಂದರೆ, ಟ್ರಂಪ್ ಅವರಿಗೆ 213 ಎಲೆಕ್ಟ್ರೋಲ್ ಮತಗಳು ಬಿದ್ದಿವೆ. ಗೆಲುವಿಗೆ 270 ಮತಗಳು ಸಾಕಿತ್ತು. ಹೀಗಾಗಿ ಬೈಡನ್ ಗೆಲುವನ್ನು ಭರ್ಜರಿ ಅನ್ನುವುದಕ್ಕಿಂತ ಐತಿಹಾಸಿಕ ಎಂದು ಅಲ್ಲಿನ ಮಾಧ್ಯಮಗಳು ಬಣ್ಣಿಸಿವೆ.
ಈ ಫಲಿತಾಂಶದೊಂದಿಗೆ ಅಮೆರಿಕ ಕಂಡ ಅತ್ಯಂತ ವಿವಾದಾಸ್ಪದ ಅಧ್ಯಕ್ಷ, ಅಮೆರಿಕ ಗ್ರೇಟ್ ಅಗೈನ್ ಎಂಬ ಘೋಷಣೆಯೊಂದಿಗೆ 2016ರಲ್ಲಿ ಅಧಿಕಾರಕ್ಕೆ ಬಂದಿದ್ದ ಡೊನಾಲ್ಡ್ ಟ್ರಂಪ್ ಅವರ 4 ವರ್ಷಗಳ ಅಧಿಕಾರಾವಧಿ ಹೀಗೆ ಅಂತ್ಯವಾಯಿತು.
ಇನ್ನೊಂದೆಡೆ, ಬೈಡನ್ ಅಮೆರಿಕ ಪ್ರಜೆಗಳಿಗೆ ಅಭಿವಂದನೆ ಸಲ್ಲಿಸಿದ್ದು, “ನಾನು ಎಲ್ಲ ಅಮೆರಿಕನ್ನರ ಅಧ್ಯಕ್ಷ” ಎಂದು ಹೇಳಿದ್ದಾರೆ. ಈ ಹೇಳಿಕೆಗೂ ಅಮೆರಿಕ ಮಾಧ್ಯಮಗಳು ಭಾರೀ ಮಹತ್ವ ನೀಡಿ ಭಿತ್ತರಿಸುತ್ತಿವೆ.
ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಆಯ್ಕೆಯಾಗಲು ಶತಾಯಗತಾಯ ಪ್ರಯತ್ನ ಮಾಡಿದ್ದರು. ಅದಕ್ಕೆ ಬೇಕಿದ್ದ ಸರ್ವ ಅವಕಾಶಗಳನ್ನು ಬಳಸಿಕೊಂಡಿದ್ದರು. ಕೊನೆಗೆ ಸೋಲು ಎಂದು ಖಚಿತವಾಗುತ್ತಿದ್ದಂತೆ ಮತ ಎಣಿಕೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೂ ಹೋಗಿದ್ದರು. ಆದರೆ, ಬೈಡನ್ ಪರವಾದ ಅಲೆಯನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ.
ಕಮಲಾ ಹ್ಯಾರಿಸ್ ಸಂತಸ
ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರೀಸ್ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಅಂತಿಮ ಫಲಿತಾಂಶ ಹೊರಬರುತ್ತಿದ್ದಂತೆ ಬೈಡನ್ ಅವರಿಗೆ ಕರೆ ಮಾಡಿದ ಅವರು, ʼಅಂತೂ ನಾವು ಸಾಧಿಸಿಬಿಟ್ಟೆವು. ನೀವು ಅಮೆರಿಕದ ಮುಂದಿನ ಅಧ್ಯಕ್ಷರು” ಎಂದು ಹೇಳಿದರು. ಅವರು ಮಾತನಾಡಿರುವ ವಿಡಿಯೋ ಟಿಟ್ಟರ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಮೆರಿಕ ಇತಿಹಾಸದಲ್ಲಿಯೇ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಮಹಿಳೆ ಕಮಲಾ ಹ್ಯಾರೀಸ್.
ಇನ್ನೊಂದೆ ಅಂತಿಮ ಫಲಿತಾಂಶ ಹೊರಬೀಳುವುದಕ್ಕೆ ಕೆಲ ಗಂಟೆಗಳ ಮೊದಲು ಡೊನಾಲ್ಡ್ ಟ್ರಂಪ್ ಮಾಡಿರುವ ಟ್ವೀಟ್ ಕೂಡ ದೊಡ್ಡ ಸುದ್ದಿಯಾಗಿದೆ.
ಯಾರು ಕಮಲಾ?
ಅಮೆರಿಕದ ಉಪಾಧ್ಯಕ್ಷರಾಗುತ್ತಿರುವ ಕಮಲಾ, ಕ್ಯಾಲಿಫೋರ್ನಿಯಾದ ಸೆನೆಟರ್. ವೃತ್ತಿಯಲ್ಲಿ ವಕೀಲರು. ಸ್ಯಾನ್ಫ್ರಾನ್ಲಸಿಸ್ಕೋದಲ್ಲಿ ವಾಸ. ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದರು. ಕಮಲಾ ಅವರ ತಾಯಿ ತಮಿಳುನಾಡು ಮೂಲದ ಭಾರತೀಯರು, ತಂದೆ ಜಮೈಕಾ ದೇಶದವರು.
ಹೇಗಾದರೂ ಸರಿ ಮತ್ತೆ ಆಯ್ಕೆಯಾಗಬೇಕೆಂದು ಟ್ರೈ ಮಾಡಿದ್ದ ಟ್ರಂಪ್ ಅನೇಕ ಸ್ಟಂಟ್‌ಗಳನ್ನು ಮಾಡಿದ್ದರು. ಹ್ಯೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ಹಾಗೂ ಗುಜರಾತ್‌ನಲ್ಲಿ ಆಯೋಜಿಸಲಾಗಿದ್ದ ನಮಸ್ತೆ ಟ್ರಂಪ್ ಇದರ ಭಾಗವೇ ಆಗಿತ್ತು. ಇವೆರಡಕ್ಕೂ ಆಘಾತ ನೀಡುವಂತೆ ಬೈಡನ್ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಭಾರತೀಯ ಮೂಲದ ಕಮಲಾ ಅವರನ್ನು ಆಯ್ಕೆ ಮಾಡಿದ್ದರು. ಅದು ಫಲಿತಾಂಶದ ದಿಕ್ಕು ಬದಲಿಸಿತು. ಎಲೆಕ್ಷನ್‌ಗೂ ಮೊದಲೇ ವಿವಾದಗಳನ್ನೇ ಮೈವೆತ್ತಿದ್ದ ಟ್ರಂಪ್, ಚುನಾವಣೆ ಘೋಷಣೆಯಾದ ಮೇಲೂ ತಮ್ಮ ವರಸೆ ಬದಲಿಸಿಕೊಳ್ಳಲಿಲ್ಲ. ಅವರ ನಡೆ ಅವರದ್ದೇ ರಿಪಬ್ಲಿಕನ್ ಪಕ್ಷಕ್ಕೂ ಇರಿಸುಮುರಿಸು ಉಂಟು ಮಾಡಿತ್ತು. ಅದರಲ್ಲೂ ಮುಖ್ಯವಾಗಿ ಕಮಲಾ ಅವರನ್ನು ತೀರಾ ಕೀಳು ಭಾಷೆಯಲ್ಲಿ ಟೀಕಿಸಿದ್ದರು. ಅಮೆರಿಕದಲ್ಲಿರುವ ಭಾರತೀಯರಿಂದಲೇ ಗೆಲ್ಲಬೇಕಾಗಿದ್ದ ಟ್ರಂಪ್, ಭಾರತವು ಕೊಳಕು ಹಾಗು ಕೊಳಕು ಗಾಳಿಯ ದೇಶ ಎಂದು ಹೀಗಳೆದಿದ್ದರು. ಹೀಗೆ ಅನೇಕ ಕಾರಣಗಳು ಅವರನ್ನು ಸೋಲಿನ ಪ್ರಪಾತಕ್ಕೆ ನೂಕಿದವು ಎನ್ನಬುಹುದು.