Lead photo pixabay from pexels
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಕಾರ್ಯಪಡೆಯ ಅಂತಿಮ ವರದಿ
ಬೆಂಗಳೂರು: ಎಲ್ಲ ಹಂತಗಳ ಶಿಕ್ಷಣವನ್ನು ಒಂದೇ ವ್ಯಾಪ್ತಿಗೆ ತಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಶಿಕ್ಷಣ ಆಯೋಗ ರಚಿಸುವುದು, ಶಾಲಾ ಶಿಕ್ಷಣ ಹಾಗೂ ಉನ್ನತ ಶಿಕ್ಷಣದ ಸ್ವರೂಪ ಬದಲಾವಣೆ ಜತೆಗೆ, ಇಡೀ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಮೂಲಾಗ್ರವಾಗಿ ರಾಜ್ಯದಲ್ಲಿ ಜಾರಿ ಮಾಡುವ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ನಿವೃತ್ತ ಐಎಎಸ್ ಆಧಿಕಾರಿ ಎಸ್.ವಿ.ರಂಗನಾಥ್ ನೇತೃತ್ವದ ಕಾರ್ಯಪಡೆ ಸರಕಾರಕ್ಕೆ ಸಲ್ಲಿಸಿದೆ.
ಬೆಂಗಳೂರಿನಲ್ಲಿ ಶನಿವಾರ ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಕಾರ್ಯಪಡೆಯ ಅಧ್ಯಕ್ಷ ಎಸ್.ವಿ.ರಂಗನಾಥ್ ವರದಿ ಸಲ್ಲಿಸಿದರಲ್ಲದೆ, ಈ ವರದಿಯಲ್ಲಿ ಮಾಡಲಾಗಿರುವ ಶಿಫಾರಸುಗಳೂ ಮತ್ತೂ ಅವುಗಳ ಜಾರಿಯ ಬಗ್ಗೆ ಇಬ್ಬರೂ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ವರದಿ ಶೀಘ್ರ ಸಂಪುಟಕ್ಕೆ
ವರದಿಯನ್ನು ಸ್ವೀಕರಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ, ಶಿಕ್ಷಣ ನೀತಿ ಜಾರಿಯ ನಿಟ್ಟಿನಲ್ಲಿ ಈ ವರದಿಯೂ ನಮಗೆ ಸ್ಪಷ್ಟ ದಿಕ್ಸೂಚಿಯಾಗಿದೆ. ಕೂಡಲೇ ವರದಿಯ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸಂಪುಟದ ಮುಂದೆ ಇಡಲಾಗುವುದು ಎಂದರು. ಕಾರ್ಯಪಡೆ ಅಧ್ಯಕ್ಷ ಎಸ್.ವಿ.ರಂಗನಾಥ್, ಸದಸ್ಯರಾದ ಪ್ರೊ.ಎಂ.ಕೆ.ಶ್ರೀಧರ್, ಪ್ರೊ.ಅನುರಾಗ್ ಬೇಹರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
3 ಅಂಶಗಳ ಆಧಾರಿತ ಸಮಗ್ರ ವರದಿ
ಇಡೀ ವರದಿ ಜಾರಿಗೆ 3 ಮೂರು ಮುಖ್ಯ ಅಂಶಗಳನ್ನು ಕಾರ್ಯಪಡೆ ಗುರುತಿಸಿದ್ದು, ಅವುಗಳ ಆಧಾರದ ಮೇಲೆ ಇಡೀ ಶಿಫಾರಸುಗಳ ಜಾರಿಯಾಗಬೇಕು ಎಂದು ತಿಳಿಸಿದೆ. ಅವುಗಳೆಂದರೆ; ಮೂಲತತ್ವ, ಆದ್ಯತೆ ಮತ್ತು ಸಂಬಂಧಪಟ್ಟವರೆಲ್ಲರೂ ನಿರ್ಣಾಯವಾಗಿ ತೊಡಗಿಸಿಕೊಳ್ಳುವುದು.
ಮೂಲತತ್ವದ ಅಡಿಯಲ್ಲಿ ಶಾಸಕಾಂಗದ ಕ್ರಿಯೆಗಳು, ರಚನಾತ್ಮಕ ಪರಿವರ್ತನೆ, ಆಡಳಿತಾತ್ಮಕ ಬದಲಾವಣೆ, ಪಠ್ಯಕ್ರಮ ಸುಧಾರಣೆ ಆಧರಿಸಿ ಕಾರ್ಯಚಟುವಟಿಕೆ ರೂಪಿಸುವುದು ನಿರಂತರ ಸಮಾಲೋಚನೆ ಮೂಲಕ ಶಿಕ್ಷಣ ನೀತಿಯ ಅನುಷ್ಠಾನದ ಹಂತಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು. ಇನ್ನು; ಆದ್ಯತೆ ಅಂಶಕ್ಕೆ ಬಂದರೆ, ಮುಖ್ಯವಾಗಿ ʼಶೂನ್ಯ ವರ್ಷʼಕ್ಕೆ (2020-2021) ಸಂಬಂಧಿಸಿ ಕಾರ್ಯಚಟುವಟಿಕೆಗೆ ಆದ್ಯತೆ ನೀಡಬೇಕು. ಈ ಅವಧಿಯಲ್ಲಿ ಶಿಕ್ಷಣ ನೀತಿ ಜಾರಿಗೆ ಬೇಕಾದ ಎಲ್ಲ ಶಾಸಕಾಂಗ, ಆಡಳಿತಾತ್ಮಕ ಹಾಗೂ ಹಣಕಾಸು ಕ್ರಮಗಳನ್ನು ಮಾಡಿ ಮುಗಿಸಿಕೊಳ್ಳಬೇಕು. ಕೊನೆಗೆ ನಿರ್ಣಾಯವಾಗಿ ತೊಡಗಿಸಿಕೊಳ್ಳುವಿಕೆ ಅಂಶಕ್ಕೆ ಬಂದರೆ; ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳೂ ಎಲ್ಲಾ ಕಾರ್ಯ ಚಟುವಟಿಕೆಗಳ ಮೇಲೆ ಹೊಣೆಗಾರಿಕೆ ಹೊಂದಿರಬೇಕು. ಶಿಕ್ಷಣ ನೀತಿಯ ನಿಬಂಧನೆಗಳ ಅನುಸಾರ ಶಾಲಾ ಹಂತದಲ್ಲಿಯೇ ಸ್ವಾಯತ್ತತೆ ನೀಡಲಾಗುವುದಲ್ಲದೆ, ಎಲ್ಲಾ ಭಾಗೀದಾರರನ್ನೂ ಒಳಗೊಳ್ಳುವುದರ ಜತೆಗೆ ಭಾಗೀದಾರರು ತಮ್ಮ ಚಟುವಟಿಕೆಗಳಲ್ಲಿ ಪೂರ್ಣವಾಗಿ ತೊಡಗಿಸಿಳ್ಳುವುದು ಮತ್ತೂ ಅದಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಸಜ್ಜು ಮಾಡಿಕೊಳ್ಳುವುದು. ಈ ಮೂರು ಅಂಶಗಳನ್ನು ಕಾರ್ಯಪಡೆ ಒತ್ತಿ ಹೇಳಿದೆ.
ಕರ್ನಾಟಕ ಶಿಕ್ಷಣ ಆಯೋಗ ಹಾಗೂ ಕರ್ನಾಟಕ ಶಿಕ್ಷಣ ಕಮಿಷನ್
ರಾಜ್ಯದ ಎಲ್ಲ ಹಂತಗಳ ಶಿಕ್ಷಣ ವ್ಯವಸ್ಥೆಯನ್ನು ಒಂದೇ ವೇದಿಕೆಗೆ ತಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಶಿಕ್ಷಣ ಆಯೋಗ (ಕೆಎಸ್‌ಎ) ಹಾಗೂ ಕರ್ನಾಟಕ ಶಿಕ್ಷಣ ಕಮಿಷನ್ (ಕೆಇಸಿ) ಸ್ಥಾಪನೆ ಮಾಡಬೇಕೆಂದು ವರದಿಯಲ್ಲಿ ಮಾಡಿರುವ ಬಹುಮುಖ್ಯ ಶಿಫಾರಸು.
ಎಲ್ಲ ಇಲಾಖೆಗಳು, ಚಟುವಟಿಕೆಗಳು, ಅಂಗ ಸಂಸ್ಥೆಗಳು, ಸಂಘಟನೆಗಳ ನಡುವೆ ಸಂಯೋಜನೆ ಮತ್ತು ಹೊಂದಾಣಿಕೆ ಅಗತ್ಯವಿದ್ದು, ಹೀಗೆ ಸರ್ಕಾರದ ವಿವಿಧ ಸಂಸ್ಥೆಗಳು ಹಾಗೂ ಇಲಾಖೆಗಳಲ್ಲಿ ಪ್ರಗತಿಯಲ್ಲಿರುವ ವಿವಿಧ ಕಾರ್ಯಕ್ರಮಗಳನ್ನು ಸಂಯೋಜಿಸುವ ಒಂದು ಬೃಹತ್ತಾದ ವ್ಯಾಪಕತೆಯುಳ್ಳ ಅಂಗಸಂಸ್ಥೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಇವೆರಡೂ ಸಂಸ್ಥೆಗಳನ್ನು ರೂಪಿಸಲು ಸಲಹೆ ನೀಡಿದೆ. ರಾಜ್ಯದಲ್ಲಿನ ಶೈಕ್ಷಣಿಕ ಬೆಳವಣಿಗೆಯನ್ನು ಸಮಗ್ರವಾಗಿ ಪರಿಶೀಲಿಸಲು ಇವು ಅಗತ್ಯ ಎಂದು ಕಾರ್ಯಪಡೆ ಪ್ರತಿಪಾದಿಸಿದೆ. ಉನ್ನತ ಶಿಕ್ಷಣ ಸಚಿವರು ಹಾಗೂ ಪ್ರೌಢ-ಪ್ರಾಥಮಿಕ ಶಿಕ್ಷಣ ಸಚಿವರು ಇವೆರಡೂ ಸಂಸ್ಥೆಗಳ ಉಪಾಧ್ಯಕ್ಷರಾಗಿರಬೇಕು ಎಂದು ತಿಳಿಸಲಾಗಿದೆ.
ಶಾಲಾ ಶಿಕ್ಷಣದ ಸ್ವರೂಪ
ಶಾಲಾ ಶಿಕ್ಷಣದ ಆಡಳಿತ ಹಾಗೂ ನಿಯಂತ್ರಣಕ್ಕೆ ಪ್ರಸ್ತಾಪಿತವಾದ ಸ್ವರೂಪವು ಅಧಿಕಾರದ ಪ್ರತ್ಯೇಕತೆಯನ್ನು ಹಾಗೂ ಶಾಲಾ ಶಿಕ್ಷಣದ ವಿವಿಧ ಏಜೆನ್ಸಿಗಳ ನಡುವೆ ಅವುಗಳ ವ್ಯಾಪ್ತಿಯ ಅತಿಕ್ರಮಣ ಆಗದಿರುವುದನ್ನು ಖಾತರಿಪಡಿಸುತ್ತದೆ. ಪ್ರಸ್ತಾವಿತ ಸ್ವರೂಪದಲ್ಲಿ ಸ್ವತಂತ್ರ ಅಂಗಸಂಸ್ಥೆಗಳು ಶಾಲೆಗಳ ಆಡಳಿತ, ಶಾಲಾ ನಿಯಂತ್ರಣ, ಶೈಕ್ಷಣಿಕ ವಿಷಯಗಳ ನಿರ್ಧಾರ, ಮೌಲ್ಯಮಾಪನಗಳನ್ನು ಕ್ರಮವಾಗಿ ನಡೆಸುತ್ತದೆ. ಅಧಿಕಾರದ ಈ ಪ್ರತ್ಯೇಕತೆಯನ್ನು ಕರ್ನಾಟಕ ರಾಜ್ಯ ಶೈಕ್ಷಣಿಕ ಮಂಡಳಿ (ಕೆಎಸ್‌ಇಸಿ)ಯ ಸ್ಥಾಪನೆಯು ಖಾತರಿಪಡಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
2020ರ ಸ್ವರೂಪವನ್ನು ಪ್ರತಿಫಲಿಸುವ ಕಾರ್ಯಪಡೆಯು ಉನ್ನತ ಶಿಕ್ಷಣದ ಆಡಳಿತ ಹಾಗೂ ನಿಯಂತ್ರಣವನ್ನು ಪ್ರಸ್ತಾಪಿಸುತ್ತದೆ. ಕರ್ನಾಟಕ ಉನ್ನತ ಶಿಕ್ಷಣ ಆಯೋಗವು (ಕೆಎಚ್‌ಇಸಿ) ಉನ್ನತ ಶಿಕ್ಷಣ ಕ್ಷೇತ್ರದ ಆಡಳಿತ ಹಾಗೂ ನಿಯಂತ್ರಣದ ಮೇಲ್ವಿಚಾರಣೆ ಮಾಡುವ ಸ್ವತಂತ್ರ ಸ್ವಾಯತ್ತ ಅಂಗಸಂಸ್ಥೆಗಳ ಮೇಲೆ ನಿಗಾ ಇಟ್ಟಿರುವ ಒಂದು ಸಂಸ್ಥೆ. ಉದಾಹರಣೆಗೆ, ಕರ್ನಾಟಕ ಉನ್ನತ ಶಿಕ್ಷಣ ನಿಯಂತ್ರಣಾ ಮಂಡಳಿ (ಕೆಎಚ್‌ಇಆರ್‌ಸಿ), ಕರ್ನಾಟಕ ಸಂಶೋಧನೆ ಹಾಗೂ ನಾವೀನ್ಯತೆಯ ಶೋಧನಾ ಮಂಡಳಿ (ಕೆಆರ್‌ಐಸಿ). ಕೇಂದ್ರದ ರಾಷ್ಟ್ರೀಯ ಮಾನ್ಯತಾ ಸಂಸ್ಥೆ (ನ್ಯಾಕ್)ಯು ರಾಜ್ಯದಲ್ಲಿ ಅಗತ್ಯ ಮಾನ್ಯತಾ ಸಂಸ್ಥೆ (ಎಐಗಳು)ಗಳನ್ನು ಸ್ಥಾಪಿಸುತ್ತದೆ.
ಶಾಲೆಗಳ ನಿಯಂತ್ರಣ ಹಾಗೂ ಕಾರ್ಯಾಚರಣೆ
ಕರ್ನಾಟಕ ಶಾಲಾ ಶಿಕ್ಷಣ ಮಂಡಳಿ (ಕೆಎಸ್‌ಇಸಿ) ಶಾಲಾ ಶಿಕ್ಷಣ ಹಾಗೂ ಸರಕಾರದೊಂದಿಗೆ ಸಂಬಂಧವುಳ್ಳ ವಿವಿಧ ಇಲಾಖೆಗಳು ಹಾಗೂ ಅಂಗಸಂಸ್ಥೆಗಳ ನಡುವೆ ಸಮನ್ವಯ, ಸಂಪರ್ಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ವಿಶಾಲ ಹಂತಗಳಲ್ಲೂ ನಿಗಾ ವಹಿಸಬೇಕು. ಶಾಲಾ ಶಿಕ್ಷಣಕ್ಕೆ ಸಾರ್ವಜನಿಕ ಧನಸಹಾಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವುದು ಹೇಗೆ ಎಂಬ ಪ್ರಯತ್ನದಲ್ಲಿ ಒಂದು ಕಾರ್ಯಪಡೆಯನ್ನು ಸ್ಥಾಪಿಸಬೇಕು. ಶಿಕ್ಷಣದ ನಿಯಂತ್ರಣಾ ಘಟಕವಾಗಿ ಎಸ್‌ಎಸ್‌ಎಸ್‌ಎ ಎಂಬ ಮತ್ತೊಂದು ಹೊಸ ಅಂಗಸಂಸ್ಥೆಯನ್ನು ಸ್ಥಾಪಿಸಬೇಕು. ಡಿಎಸ್‌ಇಆರ್‌ಟಿಯು ಸೂಕ್ತ ಭಾಗೀದಾರರೊಂದಿಗೆ ಸಮಾಲೋಚನೆ ನಡೆಸಿ ‘ಹಗುರ ಆದರೆ ಪ್ರಬಲವಾದ’ ಶಾಲಾ ಗುಣಮಟ್ಟದ ಪರಿಶೀಲನೆ ಹಾಗೂ ಮಾನ್ಯತಾ ರಚನೆ (ಎಸ್‌ಕ್ಯೂಎಎಎಫ್)ಯ ಮೇಲೆ ಆಧಾರಿತವಾದ ನಿಯಂತ್ರಣಾ ತತ್ವಗಳನ್ನು ಅಭಿವೃದ್ಧಿಪಡಿಸಬೇಕು. ಶಾಲಾ ಶಿಕ್ಷಣ ಇಲಾಖೆಯೊಳಗಿನ ಇತರ ಅಂಗಸಂಸ್ಥೆಗಳ ಜವಾಬ್ದಾರಿಗಳನ್ನು ಮರುರೂಪಿಸಬೇಕು ಮತ್ತು ಅವುಗಳ ನಡುವೆ ಕಾರ್ಯವ್ಯಾಪ್ತಿಯ ಅತಿಕ್ರಮಣ ಅಥವಾ ಆಸಕ್ತಿಗಳ ನಡುವಿನ ಸಂಘರ್ಷ ಉಂಟಾಗುವುದಿಲ್ಲ ಎಂಬುದನ್ನು ಖಾತರಿಪಡಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.