courtesy: CNN
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆ ಅನೇಕ ಕಾರಣಗಳಿಗೆ ಮಹತ್ತ್ವದ್ದೆನಿಸುತ್ತಿದೆ. ಈವರೆಗೂ ʼಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕʼ ಆಗಿದ್ದ ಆ ದೇಶವು ಇದೀಗ ʼಡಿವೈಡೆಡ್ ಸ್ಟೇಟ್ಸ್ ಆಫ್ ಅಮೆರಿಕʼ ಆಗಿ ಹೊರಹೊಮ್ಮಿದೆ. ನಾಲ್ಕು ದಿನಗಳ ಸತತ ಮತ ಎಣಿಕೆಯೊಂದಿಗೆ ಮುಗಿದ ಚುನಾವಣೆಯಿಂದ ಹೊರಬಿದ್ದ ಸ್ಪಷ್ಟವಾದ ಫಲಿತಾಂಶ ಇದೆನ್ನಬಹುದು.
ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಅಮೆರಿಕ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿ ವಿಭಜನೆಯಾಗಿತ್ತು. ಆ ದೇಶದ ಮೂಲನಿವಾಸಿಗಳಲ್ಲಿ ಅನೇಕರು ಟ್ರಂಪ್ ಪರವೇ ನಿಂತರೆ, ಅದೇ ಟ್ರಂಪ್ ಸರಕಾರದಿಂದ ವೀಸಾ ಹೆಸರಿನಲ್ಲಿ ತೀವ್ರ ಕಿರುಕುಳಕ್ಕೆ ಒಳಗಾಗಿದ್ದ ಭಾರತೀಯ ಮೂಲದವರು ಮತ್ತು ಶ್ವೇತವರ್ಣೀಯರಿಂದ ಅಮಾನುಷ ದೌರ್ಜನ್ಯಕ್ಕೊಳಗಾಗಿದ್ದ ಕಪ್ಪು ವರ್ಣೀಯರು ಅತ್ಯಂತ ಗಟ್ಟಿಯಾಗಿ ಬೈಡನ್ ಪರ ನಿಂತುಬಿಟ್ಟರು. ಈಗ ಅವರ ಆನಂದ, ಸಂಭ್ರಮಕ್ಕೆ ಪಾರವೇ ಇಲ್ಲ. ಫಲಿತಾಂಶ ಹೊರಬಿದ್ದು ದಿನವೇ ಉರುಳಿದರೂ ವಿವಿಧ ನಗರಗಳ ಬೀದಿಗಳಲ್ಲಿ ಬೈಡನ್ ಜೋಶ ಕಮ್ಮಿಯಾಗಿಲ್ಲ.
ಲೈವ್‌ನಲ್ಲೇ ಕಣ್ಣೀರು ಮತ್ತು ಆನಂದಬಾಷ್ಪ
ಇದೊಂದು ಬೆಳವಣಿಗೆಯಾದರೆ, ಮತ್ತೊಂದೆಡೆ ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ಅಮೆರಿಕದ ಜನಪ್ರಿಯ ಸುದ್ದಿವಾಹಿನಿ ಸಿಎನ್‌ಎನ್ ಲೈವ್‌ನಲ್ಲೇ ನಡೆದ ಪ್ರಸಂಗ ಇಡೀ ಜಗತ್ತು ಮತ್ತೊಮ್ಮೆ ಅಮೆರಿಕದ ಕಡೆ ನೋಡುವಂತೆ ಮಾಡಿತು. ಟ್ರಂಪ್ ಆಡಳಿತದಲ್ಲಿ ಅಮಾನವೀಯ ದಾಳಿಗಳಿಗೆ ಸಿಕ್ಕಿ ನಲುಗಿದೆವೆಂದೂ, ಬೈಡನ್ ಗೆಲ್ಲುವ ಮೂಲಕ ನಮಗೆಲ್ಲರಿಗೂ ಒಳ್ಳೆಯ ದಿನಗಳು ಬರಲಿವೆ ಎಂದು ಕಪ್ಪು ವರ್ಣೀಯರು ಕೂಗಿ ಹೇಳುತ್ತಿದ್ದ ಬೆನ್ನಲ್ಲೇ ಖ್ಯಾತ ನಿರೂಪಕ ವಾನ್ ಜೋನ್ಸ್ ಅವರು, ಸಿಎನ್‌ಎನ್ ಸುದ್ದಿವಾಹಿನಿಯ ಲೈವ್‌ನಲ್ಲಿದ್ದಾಗಲೇ ಕಣ್ಣೀರು ತುಂಬಿಕೊಂಡು ಗದ್ಗದಿತರಾದರು. ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿಯೇ ಯಾಂಕರ್ ಫಲಿತಾಂಶದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ, ಉತ್ತರಿಸಲು ಮುಂದಾದ ವಾನ್ ಭಾವುಕರಾದರು. ಮಾತು ಮುಂದುವರಿಸಲಾಗದೆ ಗದ್ಗದಿತರಾದರು. ʼಒಬ್ಬ ತಂದೆಯಾಗಿ, ನನ್ನ ಮಕ್ಕಳ ಪಾಲನೆಯನ್ನು ನೋಡಿಕೊಳ್ಳುವ ರಕ್ಷಕನಾಗಿ ಇವತ್ತು (ಶನಿವಾರ) ಬೆಳಗ್ಗೆಯಿಂದ ನಿಶ್ಚಿಂತೆಯಾಗಿ ಬದುಕಬಹುದು. ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಕಲಿಸಬಹುದು” ಎಂದು ಹೇಳುತ್ತಾ ಬಿಕ್ಕಳಿಸಿದರು. ಅಕ್ಕಪಕ್ಕ ಕೂತಿದ್ದವರೆಲ್ಲ ವಾನ್ ಕಂಬನಿ ಕಂಡು ತಾವೂ ಭಾವುಕರಾದರು.
ಈ ಲೈವ್‌ನಲ್ಲಿ ಕಣ್ಣೀರು ತುಂಬಿಕೊಂಡ ವಾನ್ ಪರವಾಗಿ ಲಕ್ಷಾಂತರ ಮೇಸೇಜುಗಳು, ಸಾಂತ್ವನದ ಮಾತುಗಳು ಸಿಎನ್‌ಎನ್ ಸುದ್ದಿವಾಹಿನಿಗೆ ರುವುದು ಅತ್ಯಂತ ಮಹತ್ತ್ವದ ಸಂಗತಿ. ನಮ್ಮ ಕಣ್ಣೆದುರಿನಲ್ಲೇ ಜಾರ್ಜ್ ಫ್ಲಾಯ್ಡ್‌ರಂಥ ಅನೇಕ ಕಪ್ಪು ವರ್ಣೀಯರು ಉಸಿರಾಡಲಾಗದೇ ಜೀವ ಬಿಟ್ಟಿದ್ದಾರೆ. ಹಾಗೆ ಪ್ರಾಣ ಬಿಟ್ಟ ಎಲ್ಲರಿಗೂ ನನ್ನ ಕ್ಷಮಾಪಣೆಗಳು. ಈ ದಿನ ಅಮೆರಿಕ ಜನರೆಲ್ಲರಿಗೂ ಶುಭದಿನ. ಈಗ ನಮಗೆಲ್ಲರಿಗೂ ಕೊಂಚ ನೆಮ್ಮದಿ ಸಿಕ್ಕಂತಾಗಿದೆ” ಎಂದು ಹೇಳಿದ್ದಾರೆ.
ಇದೇ ವರ್ಷದ ಮೇ ತಿಂಗಳ ೨೫ರಂದು ೪೬ ವರ್ಷದ ಕಪುವರ್ಣೀಯ ವ್ಯಕ್ತಿ ಜಾರ್ಜ್ ಪ್ಲಾಯ್ಡ್ ಅದೇ ಅಮೆರಿಕದ ಮಿನ್ನಿಯಾ ಪೊಲೀಸ್ ಎಂಬಲ್ಲಿ ಅಲ್ಲಿನ ಪೊಲೀಸರು ಅತ್ಯಂತ ಪೈಶಾಚಿಕವಾಗಿ ಎಲ್ಲರೂ ನೋಡುತ್ತಿದ್ದಂತೆ ಹಾಡುಹಗಲೇ ರಸ್ತೆಯಲ್ಲಿ ಕುತ್ತಿಗೆಯ ಮೇಲೆ ಕಾಳಿಟ್ಟು ತುಳಿದು ಉಸಿರುಗಟ್ಟಿಸಿ ಕೊಂದ ಘಟನೆ ಆ ದೇಶದಲ್ಲಿ ನೆಲೆಸಿರುವ ಕಪ್ಪುವರ್ಣೀಯರೆಲ್ಲ ಬೆಚ್ಚಿಬೀಳುವಂತೆ ಮಾಡಿತ್ತು. ಡೋನಾಲ್ಡ್ ಟ್ರಂಪ್ ಆಡಳಿತ ಮಾತ್ರವಲ್ಲದೆ, ಅಬ್ರಾಹಾಂ ಲಿಂಕನ್ ನಂತರದ ಅಮೆರಿಕದ ಇತಿಹಾಸದಲ್ಲಿ ಈ ಘಟನೆ ಕಪ್ಪುಚುಕ್ಕೆ ಎಂದು ಇಡೀ ಜಗತ್ತು ಆ ದೇಶಕ್ಕೆ ಛೀಮಾರಿ ಹಾಕಿತ್ತು.
courtesy: Wikipedia
ಬೈಡನ್ ತಂದ ನೆಮ್ಮದಿ
ಇಡೀ ಚುನಾವಣೆ ಬೈಡನ್ ಮತ್ತು ಟ್ರಂಪ್ ನಡುವಿನ ಸೆಣಸು ಎಲ್ಲುವುದಕ್ಕಿಂತ ಕಪ್ಪು ವರ್ಣೀಯರ ಅಳಿವಿನ ಪ್ರಶ್ನೆ ಎಂದು ಭಾವಿಸಲಾಗಿತ್ತು. ಹೀಗಾಗಿ ಅಮೆರಿಕದ ಸಮಸ್ತ ವಲಸಿಗರೆಲ್ಲರೂ ಡೆಮಾಕ್ರಟಿಕ್ ಪಾರ್ಟಿಯ ವಿರುದ್ಧ ಬಲವಾಗಿ ನಿಂತರು. ಅಷ್ಟೇ ಅಲ್ಲದೆ, ಚುನಾವಣೆ ಹೊತ್ತಿನಲ್ಲೂ ಟ್ರಂಪ್ ಅವರು ಪ್ಲಾಯ್ಡ್ ಕೊಲೆಯ ಬಗ್ಗೆ ಒಂದು ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಬದಲಿಗೆ, ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು, ನಾಯಕರು ಕೂಡ ಈ ಬಗ್ಗೆ ಸೊಲ್ಲೆತ್ತಲಿಲ್ಲ. ಆರದ ಗಾಯವಾಗಿ ಹಾಗೆಯೇ ಉಳಿದಿದ್ದ ಪ್ಲಾಯ್ಡ್ ಎಂಬ ಆಸ್ಲಿತೆಯಿಂದ ಟ್ರಂಪ್ ದೊಡ್ಡ ಬೆಲೆ ತೆತ್ತರೆಂದೇ ಹೇಳಬಹುದು.