indigo flight: courtesy; Wikipedia
ಬೆಂಗಳೂರು: ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತದೆ ಎಂದು ಐಸಿಎಂಆರ್ ಎಚ್ಚರಿಕೆ ನೀಡಿದ ನಡುವೆಯೂ ರಾಜ್ಯದಲ್ಲಿ ಸೋಂಕಿತರ ಪ್ರಮಾಣದಲ್ಲಿ ಏರಿಳಿತ ಆಗುತ್ತಲೇ ಇದೆ. ಈ ನಡುವೆ ದೇಶಿಯ ವಿಮಾನ ಸಂಚಾರವೂ ನಿರಾಂತಕವಾಗಿ ಸಾಗಿದ್ದು, ವಿಮಾನ ನಿಲ್ದಾಣ ಮತ್ತು ವಿಮಾನಗಳಲ್ಲಿ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೋವಿಡ್ ಅನ್‌ಲಾಕ್‌ನಿಂದ ಪುಟಿದೆದ್ದಿರುವ ದೇಶಿಯ ನಾಗರೀಕ ವಿಮಾನಯಾನವು ದೀಪಾವಳಿ ಹೊತ್ತಿಗೆ ಒಂದು ಹಂತಕ್ಕೆ ಬಂದು ನಿಂತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೋವಿಡ್‌ಗೂ ಮೊದಲೇ ಆಪರೇಟ್ ಮಾಡುತ್ತಿದ್ದ ಎಲ್ಲ ಮಾರ್ಗಗಳಲ್ಲೂ ವಿಮಾನ ಸಂಚಾರವನ್ನು ಪುನಾರಂಭ ಮಾಡಿದೆ. ಲಭ್ಯ ಮಾಹಿತಿ ಪ್ರಕಾರ ಈಗಾಗಲೇ ಶೇ.90ರಷ್ಟು ದೇಶಿಯ ಮಾರ್ಗಗಳಲ್ಲಿ ಈಗಾಗಲೇ ವಿಮಾನ ಹಾರಾಟ ನಡೆಯುತ್ತಿದೆ. ಪ್ರಯಾಣಕರೂ ಕೋವಿಡ್ ಮುನ್ನೆಚ್ಚರಿಕೆಗಳೊಂದಿಗೆ ವಿಮಾನ ವಿಹಾರ ಮಾಡುತ್ತಿದ್ದಾರೆ.
ಹಾಗಾದರೆ, ವಿಮಾನಗಳಲ್ಲಿ ಹಾಗೂ ವಿಮಾನ ನಿಲ್ದಾಣಗಳಲ್ಲಿ ಕೈಗೊಂಡಿರುವ ಕೋವಿಡ್ ಮುನ್ನೆಚ್ಚರಿಕೆಗಳ ಬಗ್ಗೆ ಬುಧವಾರ ಸ್ವತಃ ಬೆಂಗಳೂರಿನಿಂದ ಉತ್ತರಾಖಂಡದ ಡೆಹರಾಡೂನ್‌ಗೆ ಇಂಡಿಗೋ ಫ್ಲೈಟ್‌ನಲ್ಲಿ ಪ್ರಯಾಣ ಮಾಡಿದ ಖಾಸಗಿ ಕಂಪನಿ ಉದ್ಯೋಗಿ ಜಿ.ಎನ್.ಚಂದ್ರಶೇಖರ್ ತಮ್ಮ ಸ್ವಾನುಭವ ಹಾಗೂ ಕಂಡ ದೃಶ್ಯಗಳನ್ನು ಸಿಕೆನ್ಯೂಸ್ ನೌ ಓದುಗರಿಗಾಗಿ ಇಲ್ಲಿ ಹಂಚಿಕೊಂಡಿದ್ದಾರೆ.



- ವಿಮಾನದೊಳಗೆ / ಪ್ರಯಾಣಿಕರ ಕೋವಿಡ್ ಕಿಟ್ / ಚೆಕ್ʼಇನ್ ಕೌಂಟರ್
ಆತಂಕ ಮತ್ತು ನಿರಾತಂಕ
ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಉತ್ತಮವಾಗಿ ಕೈಗೊಳ್ಳಲಾಗಿದೆ. ಹಾಗೆಯೇ, ಎಲ್ಲ ವಿಮಾನಗಳಲ್ಲೂ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ಮೇಲ್ನೋಟಕ್ಕೆ ಎಲ್ಲವೂ ಉತ್ತಮವಾಗಿಯೇ ಇತ್ತು. ಆದರೆ, ನಮ್ಮೊಳಗೆ ತುಸು ಆತಂಕವೂ ಇರುತ್ತದೆ, ಹಾಗೆಯೇ ಆ ವ್ಯವಸ್ಥೆಗಳನ್ನು ನೋಡಿದಾಗ ಕೊಂಚ ನಿರಾತಂಕವೂ ಆಯಿತು ಎನ್ನುತ್ತಾರೆ ಚಂದ್ರಶೇಖರ್.
ಮುಂದುವರಿದು ಅವರು ಹೇಳಿದ್ದು ಇಷ್ಟು;
ಕೋವಿಡ್ ಹಿನ್ನೆಲೆಯಲ್ಲಿ ನಿಗದಿತ ವಿಮಾನ ಹತ್ತಬೇಕಾದರೆ ನಾವು ಮೂರು ಗಂಟೆ ಮೊದಲೇ ಚೆಕ್ʼಇನ್ ಆಗಬೇಕು. ಏರ್‌ಪೋರ್ಟ್ ಲಾಂಜ್‌ಗೆ ಎಂಟ್ರಿ ಕೊಡುತ್ತಿದ್ದಂತೆಯೇ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ಜತೆಗೆ ಮೊದಲ ಸುತ್ತಿನ ಸ್ಯಾನಿಟೈಸೇಷನ್ ಕೂಡ. ಇದಾದ ಮೇಲೆ ಪ್ರಯಾಣಕರು ಚೆಕ್ ಇನ್ ಆಗಬೇಕಾದರೆ, ಕೌಂಟರ್‌ನಲ್ಲಿ ಆದರೂ ಮಾಡಿಕೊಳ್ಳಬಹುದು ಅಥವಾ ವೆಬ್ ಚೆಕ್ʼಇನ್ ಕೂಡ ಆಗಬಹುದು. ಕೌಂಟರ್ ಚೆಕ್ʼಇನ್‌ಗೆ ಹೋದರೆ ೧೦೦ ರೂ. ಶುಲ್ಕವಿದೆ. ವೆಬ್ ಚೆಕ್ʼಇನ್ ಮಾಡಿಕೊಂಡರೆ ಅಲ್ಲಿಯೇ ಪ್ರಿಂಟ್ ತೆಗೆದುಕೊಳ್ಳುವ ಸೌಲಭ್ಯವಿದೆ. ಇಲ್ಲೆಲ್ಲ ಕೋವಿಡ್ ಬಗ್ಗೆ ಪರಿಹಾರಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಾಗಿದೆ. ಸಮಸ್ಯೆ ಇಲ್ಲ.
ನಾನು ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡಿದೆ. ಚೆಕ್ʼಇನ್ ಆಗುವಾಗಲೇ ಇಂಡಿಗೋದವರು ಕೋವಿಡ್ ಸುರಕ್ಷತಾ ಕಿಟ್ ಕೊಡುತ್ತಾರೆ. ಆ ಕಿಟ್‌ನಲ್ಲಿ ಸ್ಯಾಚೆಟ್ ಮಾದರಿಯ ಸ್ಯಾನಿಟೈಸರ್‌ನ ನಾಲ್ಕೈದು ಪಾಕೆಟ್‌ಗಳು, ಒಂದು ಮಾಸ್ಕ್, ಮುಖಕ್ಕೆ ಕೋವಿಡ್ ಫೇಸ್‌ಶೀಲ್ಡ್ ನೀಡುತ್ತಾರೆ. ಸಾಮಾನ್ಯವಾಗಿ ವಿಮಾನದಲ್ಲಿ ಇಕ್ಕೆಲಗಳಲ್ಲಿ ತಲಾ ಮೂರು ಆಸಗಳಿದ್ದು, ನಡುವೆ ಓಡಾಡಲು ಪ್ಯಾಸೇಜ್ ಇರುತ್ತದೆ. ಈ ಮೂರು ಆಸನಗಳ ಪೈಕಿ ಮಧ್ಯದ ಆಸನದಲ್ಲಿ ಕೂರುವ ಪ್ರಯಾಣಿಕರಿಗೆ ಇಡೀ ದೇಹವನ್ನು ಕವರ್ ಮಾಡುವ ಪಿಪಿಇ ಕಿಟ್ ನೀಡಲಾಗುತ್ತದೆ. ಪ್ಯಾಸೇಜ್ ಪಕ್ಕ ಅಥವಾ ವಿಂಡೋ ಕಡೆ ಕೂರುವ ಪ್ರಯಾಣಿಕರಿಗೆ ಈ ಕಿಟ್ ನೀಡಲಾಗುವುದಿಲ್ಲ.

ಸೆಕ್ಯೂರಿಟಿ ಚೆಕ್ ಕೂಡ ಸೆನ್ಸಾರ್ ಸಿಸ್ಟಮ್ ಮೂಲಕವೇ ಇರುತ್ತದೆ. ದೈಹಿಕ ಸ್ಪರ್ಶ ಎಂಬುದು ಇರುವುದೇ ಇಲ್ಲ. ಲಗೇಜ್‌ಗೂ ಇದೇ ಮಾದರಿಯ ಚೆಕ್ ಇದೆ. ಎಲ್ಲವೂ ಆಟೋಮ್ಯಾಟಿಕ್.
–ಜಿ.ಎನ್.ಚಂದ್ರಶೇಖರ್
ವಿಮಾನದಲ್ಲಿಯೂ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಲಾಗಿತ್ತು. ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮುನ್ನ ವಿಮಾನವನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಕೋವಿಡ್ ಮುನ್ನೆಚ್ಚರಿಕೆ, ದೈಹಿಕ ಅಂತರದ ಬಗ್ಗೆ ಸೂಚನೆಗಳನ್ನು ನೀಡಲಾಗುತ್ತಿತ್ತು. ವಿಮಾನ ಹತ್ತುವಾಗ ಇಳಿಯುವಾಗ ತಳ್ಳುವಂತಿಲ್ಲ. ಮುಖ್ಯವಾಗಿ ಗಗನಸಖಿಯರು, ಸಿಬ್ಬಂದಿ ಈ ಬಗ್ಗೆ ಹೆಚ್ಚು ಗಮನ ಹರಿಸಿದ್ದರಲ್ಲದೆ, ಹಿರಿಯ ನಾಗರಿಕರ ನೆರವಿಗೆ ಧಾವಿಸುತ್ತಿದ್ದರು. ಮಧ್ಯದ ಸೀಟಿನಲ್ಲಿ ಕೂತಿದ್ದ ಪ್ರಯಾಣಿಕರಿಗೆ ಪಿಪಿಇ ಕಿಟ್ ಕಡ್ಡಾಯ ಮಾಡಲಾಗಿತ್ತು. ಇನ್ನು ಅಕ್ಕಪಕ್ಕ ಸೀಟುಗಳಲ್ಲಿದ್ದವರು ಇಂಥ ಕಿಟ್‌ಗಳನ್ನು ಧರಿಸಿದ್ದರು. ಕಡ್ಡಾಯವಿಲ್ಲದಿದ್ದರೂ ಮುನ್ನೆಚ್ಚರಿಕೆಯಿಂದ ಅವರು ಅವುಗಳನ್ನು ಧರಿಸಿದ್ದರು. ಉಳಿದಂತೆ ವಿಮಾನವು ಶೇ.80ರಷ್ಟು ತುಂಬಿತ್ತು.
ಇನ್ನು ಡೆಹರಾಡೂನ್‌ನಲ್ಲಿ ವಿಮಾನ ಇಳಿದು ನಿರ್ಗಮಿಸುವಾಗಲೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಿತ್ತು. ಜತೆಗೆ, ಆಗಮಿಸುವ ಪ್ರಯಾಣಿಕರ ವಿವರಗಳನ್ನು ದಾಖಲು ಮಾಡಲಾಗುತ್ತಿತ್ತು. ವಿಶೇಷವಾಗಿ ಪ್ರವಾಸಿಗರ ಮೇಲೆ ಹೆಚ್ಚು ನಿಗಾ ಇರಿಸಲಾಗಿತ್ತು. ಏನಕ್ಕೆ ಬಂದಿದ್ದೀರಿ? ಯಾವಾಗ ವಾಪಸ್ ಹೋಗುತ್ತೀರಿ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದ ಅಧಿಕಾರಿಗಳು, ಪ್ರಯಾಣಿಕರಿಗೆ ಕೋವಿಡ್ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದು ಚಂದ್ರಶೇಖರ್ ಮಾಹಿತಿ ನೀಡಿದರು.
story photos: GN Chandrashekar


















