lead photo courtesy: Wikipedia
ನವೆಂಬರ್ 14 ಪಂಡಿತ್ ನೆಹರು ಅವರ ಜನ್ಮದಿನ. ಮಕ್ಕಳ ದಿನವೂ ಹೌದು. ಆದರೆ; ಅವರಿಗಿಂತ ಅವರು ರಾಷ್ಟ್ರದ ಹಿಸಾಸಕ್ತಿ ವಿಚಾರದಲ್ಲಿ ಎಸಗಿದ ತಪ್ಪುಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಅದೇ ನಿಟ್ಟಿನಲ್ಲಿ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಇಲ್ಲಿ ಬೆಳಕು ಚೆಲ್ಲಿದ್ದಾರೆ.
****
ಸರ್ದಾರ್ ವಲ್ಲಭಭಾಯ್ ಪಟೇಲ್ ಎಲ್ಲ ದೃಷ್ಟಿಯಿಂದಲೂ ಈ ದೇಶದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾಗಲು ಸಮರ್ಥರಾಗಿದ್ದರು. ಆದರೆ ಮಹಾತ್ಮಗಾಂಜಿಯವರಿಗೆ ಜವಾಹರಲಾಲ್ ನೆಹರೂ ಅವರ ಬಗೆಗಿದ್ದ ಕುರುಡು ʼಧೃತರಾಷ್ಟ್ರ ವ್ಯಾಮೋಹʼದಿಂದಾಗಿ ನೆಹರು ದೇಶದ ಮೊಟ್ಟಮೊದಲ ಪ್ರಧಾನಿ ಗಾದಿಗೇರಲು ಸಾಧ್ಯವಾಯಿತು. ನೆಹರು ಅವರನ್ನು ಪ್ರಧಾನಿಯಾಗಿ ಮಾಡುವ ಮೂಲಕ ಗಾಂಧೀಜಿ ಅತಿದೊಡ್ಡ ಪ್ರಮಾದವೆಸಗಿದ್ದರು. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯಾ ನಂತರದ ನಮ್ಮ ದೇಶದ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವೇದ್ಯವಾಗುವ ಸಂಗತಿ ಇದು.
ಹೋಗಲಿ ಬಿಡಿ. ನೆಹರೂ ಅದೃಷ್ಟವಂತರು. ಮೊದಲ ಪ್ರಧಾನಿಯಾಗುವ ಯೋಗ ಅವರ ಹಣೆಯಲ್ಲಿ ಬರೆದಿತ್ತು. ಆದರೆ ಒಂದು ದಶಕಕ್ಕೂ ಹೆಚ್ಚು ಕಾಲ ಪ್ರಧಾನಿಯಾಗಿದ್ದರೂ ನೆಹರು ಭಾರತದ ಭವಿಷ್ಯಕ್ಕೆ ಉಜ್ವಲ ಮುನ್ನುಡಿಯನ್ನು ಬರೆಯಲೇ ಇಲ್ಲ. ತಪ್ಪುಗಳ ಮೇಲೆ ತಪ್ಪುಗಳನ್ನೆಸಗುತ್ತಲೇ ಹೋದರು. ಸಹೋದ್ಯೋಗಿಗಳ, ಹಿತಚಿಂತಕರ ಮಾತಿಗೆ ಕಿವಿಗೊಡಲೇ ಇಲ್ಲ. ನೆಹರೂ ಹಿಂಬಾಲಕರು ಅವರನ್ನು ‘ಆಧುನಿಕ ಭಾರತದ ಶಿಲ್ಪಿ’ ಎಂದು ಆಗಾಗ ಬಣ್ಣಿಸುವುದುಂಟು. ಒಂದರ್ಥದಲ್ಲಿ ಅದು ನಿಜ! ಸ್ವಾತಂತ್ರ್ಯಾ ನಂತರದ ಭಾರತದ ಹತ್ತು ಹಲವು ಘನಗಂಭೀರ ಸಮಸ್ಯೆಗಳಿಗೆ ನೆಹರು ಅವರ ತಪ್ಪು ನಿರ್ಧಾರಗಳೇ ಕಾರಣ. ಆ ಮಟ್ಟಿಗೆ ಅವರು ಆಧುನಿಕ ಭಾರತದ ಶಿಲ್ಪಿಯೇ ಸರಿ!
ಗೃಹ ಮಂತ್ರಿ ಸರ್ದಾರ್ ಪಟೇಲರನ್ನು ಅವರಷ್ಟಕ್ಕೇ ಬಿಟ್ಟಿರುತ್ತಿದ್ದರೆ, ನೆಹರೂ ಮೂಗು ತೂರಿಸದಿದ್ದರೆ ಕಾಶ್ಮೀರ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿರಲೇ ಇಲ್ಲ. ಹೈದ್ರಾಬಾದ್, ಜುನಾಗಡದಂತಹ ಸ್ವತಂತ್ರ ಸಂಸ್ಥಾನಗಳನ್ನು ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ವಿಲೀನಗೊಳಿಸಿದ ಪಟೇಲರಿಗೆ ಕಾಶ್ಮೀರವನ್ನೂ ಅದೇ ರೀತಿ ವಿಲೀನಗೊಳಿಸುವುದು ಕಷ್ಟದ ಸಂಗತಿ ಆಗಿರಲಿಲ್ಲ. ಆಗ ಕಾಶ್ಮೀರದ ರಾಜನಾಗಿದ್ದವನು ರಾಜಾ ಹರಿಸಿಂಗ್. ಆದರೆ ಸಂಸ್ಥಾನದ ಶೇ.77 ಮಂದಿ ಪ್ರಜೆಗಳು ಮುಸ್ಲಿಮರಾಗಿದ್ದರು. ಇದೇ ಕಾರಣಕ್ಕೆ ನೆರೆಯ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ಎಸಗಿತು. ರಾಜಾ ಹರಿಸಿಂಗ್ ರಕ್ಷಣೆಗಾಗಿ ಪಟೇಲರ ಬಳಿ ಧಾವಿಸಿ ಬಂದರು. ಕೊಡಗಿನ ಕಲಿ ಜನರಲ್ ತಿಮ್ಮಯ್ಯ ಕಾಶ್ಮೀರದ ರಕ್ಷಣೆಯ ಸಂಪೂರ್ಣ ಹೊಣೆ ಹೊತ್ತಿದ್ದರು. ಪಾಕಿಸ್ಥಾನ ವಶಪಡಿಸಿಕೊಂಡ ಐದನೇ ಎರಡು ಭಾಗ ಕಾಶ್ಮೀರವನ್ನು (ಪಿಓಕೆ) ಮರಳಿ ಪಡೆಯಲು ಸೈನ್ಯದೊಂದಿಗೆ ಸಜ್ಜಾಗಿದ್ದರು. ಆದರೆ ಅವರ ಈ ಸಾಹಸಕ್ಕೆ ಅಡ್ಡ ಬಂದವರು ಸನ್ಮಾನ್ಯ ನೆಹರು! ಇದ್ದಕ್ಕಿದ್ದಂತೆ ನೆಹರು ಕದನ ವಿರಾಮ ಘೋಷಿಸಿಬಿಟ್ಟರು. ಅಸಲಿಗೆ ಅಂತಹ ಪರಿಸ್ಥಿತಿಯೇ ಆಗ ಉದ್ಭವಿಸಿರಲಿಲ್ಲ. ಅಷ್ಟೇ ಅಲ್ಲ, ನೆಹರು ಕಾಶ್ಮೀರ ಸಮಸ್ಯೆಯನ್ನು ವಿನಾಕಾರಣ ವಿಶ್ವಸಂಸ್ಥೆಗೊಯ್ದು ಅದನ್ನೊಂದು ಅಂತಾರಾಷ್ಟ್ರೀಯ ಸಮಸ್ಯೆಯಾಗಿಸಿದರು. ಜಮ್ಮು-ಕಾಶ್ಮೀರಕ್ಕೆ ೩೭೦ನೇ ವಿಧಿ ಕರುಣಿಸಿ, ವಿಶೇಷ ಸ್ಥಾನಮಾನ ಕಲ್ಪಿಸಿ, ಒಂದೇ ದೇಶದಲ್ಲಿ ಇಬ್ಬರು ಪ್ರಧಾನಿ, ಎರಡು ಸಂವಿಧಾನ, ಎರಡು ರಾಷ್ಟ್ರಧ್ವಜಗಳಿರುವಂತೆ ನೋಡಿಕೊಂಡರು. ನೆಹರು ಎಸಗಿದ ಈ ಪ್ರಮಾದವನ್ನು ಸರಿಪಡಿಸಲು ೭೩ ವರ್ಷ ಬೇಕಾಯಿತು.
ಕಲಾತ್ ವಿಲೀನಕ್ಕೆ ತಿರಸ್ಕಾರ
1947ರ ಬಲೂಚಿಸ್ಥಾನದ ಒಂದು ರಾಜ ಸಂಸ್ಥಾನವಾಗಿದ್ದ ಕಲಾತ್ ಅನ್ನು ಭಾರತದಲ್ಲಿ ವಿಲೀನಗೊಳಿಸಲು ಆ ಸಂಸ್ಥಾನದ ಮುಖ್ಯಸ್ಥನಾಗಿದ್ದ ಖಾನ್ ಎಲ್ಲ ಬಗೆಯ ಸಿದ್ಧತೆಯೊಂದಿಗೆ ನೆಹರೂ ಬಳಿಗೆ ಬಂದಿದ್ದರು. ಸಮ್ಮತಿ ಪತ್ರಕ್ಕೆ ನೆಹರೂ ಸಹಿ ಹಾಕಿದ್ದರೆ ಸಾಕಿತ್ತು. ಆದರೆ ಯಾವುದೋ ಕಾರಣಕ್ಕೆ ಕಲಾತ್ ವಿಲೀನ ಪತ್ರಕ್ಕೆ ಸಹಿ ಹಾಕಲಿಲ್ಲ. ಇದನ್ನೇ ಕಾಯುತ್ತಿದ್ದ ಪಾಕಿಸ್ತಾನ ಬಲೂಚಿಸ್ತಾನದ ಮೇಲೆ ದಾಳಿ ಮಾಡಿ ಅದನ್ನು ತನ್ನ ವಶಪಡಿಸಿಕೊಂಡಿತು. ನೆಹರು ಆಗ ಮನಸ್ಸು ಮಾಡಿದ್ದರೆ ಬಲೂಚಿಸ್ತಾನ ಭಾರತದ ಭಾಗವಾಗಿ ಉಳಿಯುತ್ತಿತ್ತು.
ಹೈದ್ರಾಬಾದ್ ವಿಲೀನಕ್ಕೂ ವಿರೋಧ
ನಿಜಾಮನ ಆಳ್ವಿಕೆಯಲ್ಲಿದ್ದ ಹೈದ್ರಾಬಾದ್ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸಲು ಪಟೇಲರು ಹೊರಟಾಗ ಎರಡು ಲಕ್ಷ ರಜಾಕಾರ್ ಸೈನಿಕರು ಆ ಸಂಸ್ಥಾನದ ಹಿಂದು ಪ್ರಜೆಗಳ ಮೇಲೆರಗಿದರು. ಈ ಅನಾಹುತವನ್ನು ತಪ್ಪಿಸಲು ಗೃಹಮಂತ್ರಿ ಪಟೇಲರು ನಿಜಾಮನ ವಿರುದ್ಧ ಮಿಲಿಟರಿ ಕಾರ್ಯಾಚರಣೆ ಕೈಗೊಂಡರು. ನೆಹರೂಗೆ ಸರ್ದಾರರ ಈ ನಿರ್ಧಾರ ಸುತರಾಂ ಇಷ್ಟವಿರಲಿಲ್ಲ. ಜಾತ್ಯತೀತ ರಾಷ್ಟ್ರವಾದ ಭಾರತದಲ್ಲಿ ನೀವೇಕೆ ಕೋಮುವಾದಿ ಎಂಬ ಹಣೆಪಟ್ಟಿ ಅಂಟಿಸಿಕೊಳ್ಳಲು ಹೊರಟಿದ್ದೀರಿ? ಎಂದು ಪಟೇಲರನ್ನು ಹಂಗಿಸಿದರು. ಪಟೇಲರು ಮಾತ್ರ ಇದಕ್ಕೆ ಕ್ಯಾರೇ ಅನ್ನಲಿಲ್ಲ. ಹೀಗಾಗಿ ಹೈದ್ರಾಬಾದ್ ಭಾರತದಲ್ಲೇ ಉಳಿಯಿತು. ಇಲ್ಲದಿದ್ದರೆ ಅದೂ ಕೂಡ ಪಾಕಿಸ್ತಾನದ ಭಾಗವಾಗಿರುತ್ತಿತ್ತು.
ಕಾಬೋ ಕಣಿವೆ ಬರ್ಮಾಕ್ಕೆ ಬಹುಮಾನ
ಫಲವತ್ತಾದ, ಸಮೃದ್ಧ, ಹಸಿರು ನಳನಳಿಸುವ 11 ಸಾವಿರ ಚದರ ಕಿ.ಮೀ. ವಿಸ್ತೀರ್ಣದ ಮಣಿಪುರ ರಾಜಧಾನಿಯ ಭಾಗವಾಗಿದ್ದ ಕಾಬೋ ಕಣಿವೆ ಇತಿಹಾಸದ ದಾಖಲೆಗಳ ಪ್ರಕಾರ 1950ರಿಂದಲೂ ಭಾರತದ ಭಾಗವಾಗಿಯೇ ಇತ್ತು. ಮಣಿಪುರವನ್ನು ಬ್ರಿಟಿಷರು ವಶಪಡಿಸಿಕೊಂಡ ಬಳಿಕ ಕಾಬೋ ಕಣಿವೆಯನ್ನು1934ರಲ್ಲಿ ಬರ್ಮಾಕ್ಕೆ ಭೋಗ್ಯಕ್ಕೆ ನೀಡಿದರು. ಬರ್ಮಾ ಪ್ರತಿ ತಿಂಗಳು ಇದಕ್ಕೆ ಪ್ರತಿಯಾಗಿ ತಲಾ 500ರೂ.ಗಳನ್ನು ಮಣಿಪುರಕ್ಕೆ ಕೊಡಬೇಕಾಗಿತ್ತು. ಸ್ವಾತಂತ್ರ್ಯ ಬಂದ ಬಳಿಕ ಭೋಗ್ಯಕ್ಕೆ ನೀಡಿದ ಸಂಪದ್ಭರಿತ ಕಾಬೋ ಕಣಿವೆಯನ್ನು ಬರ್ಮಾದಿಂದ ಮತ್ತೆ ಮರಳಿ ಪಡೆಯುವ ಎಲ್ಲಾ ಅವಕಾಶಗಳಿತ್ತು. ಸೂಕ್ತ ಪರಿಹಾರ ನೀಡಿದ್ದರೆ ಬರ್ಮಾ ಅದನ್ನು ಭಾರತಕ್ಕೆ ಬಿಟ್ಟುಕೊಡುತ್ತಿತ್ತು. ಆದರೆ ನೆಹರೂಗೆ ತಾನೊಬ್ಬ ದಾನಶೂರ ಕರ್ಣನೆಂದು ತೋರಿಸಿಕೊಳ್ಳಬೇಕಾಗಿತ್ತು. ಅಂತಹ ಫಲವತ್ತಾದ ಕೃಣಿವೆಯನ್ನೇ ಬರ್ಮಾಕ್ಕೆ ಬಹುಮಾನವಾಗಿ ಬಳುವಳಿ ನೀಡಿಬಿಟ್ಟರು.
ಕೋಕೋ ದ್ವೀಪಗಳೂ ಬರ್ಮಾಕ್ಕೆ ದಾನ!
ಅಂಡಮಾನ್‌ನ ಭಾಗವಾಗಿದ್ದ ಎರಡು ಕೊಕೋ ದ್ವೀಪಗಳನ್ನೂ ಸ್ವಾತಂತ್ರ್ಯ ಬಂದ ಕೂಡಲೇ ನೆಹರೂ ಬರ್ಮಾಕ್ಕೆ ಬಹುಮಾನವಾಗಿ ನೀಡಿಬಿಟ್ಟರು. ಬರ್ಮಾ ಅವುಗಳನ್ನು ಚೀನಾ ದೇಶಕ್ಕೆ ಕೊಡುಗೆಯಾಗಿ ನೀಡಿತು. ಚೀನಾ ಮಾತ್ರ ಭಾರತದ ಮಿಲಿಟರಿ ಆಗುಹೋಗುಗಳ ಮೇಲೆ ಕಣ್ಣಿಡಲು ಆ ದ್ವೀಪದಲ್ಲೊಂದು ಎಲೆಕ್ಟ್ರಾನಿಕ್ ಸರ್ವೆಯಲೆನ್ಸ್ ಸ್ಟೇಷನ್ ಸ್ಥಾಪಿಸಿದೆ.
ಸೋಮನಾಥ ಮರು ನಿರ್ಮಾಣಕ್ಕೆ ವಿರೋಧ
ಸೌರಾಷ್ಟ್ರದಲ್ಲಿರುವ ಸೋಮನಾಥ ನಮ್ಮ ಜ್ಯೋತಿರ್ಲಿಂಗಗಳಲ್ಲಿ ಒಂದು. ಪದೇಪದೇ ಮುಸಲ್ಮಾನರ ದಾಳಿಯಿಂದಾಗಿ ಭವ್ಯ ಸೋಮನಾಥ ಮಂದಿರ ಭಗ್ನವಾಗಿ ಹೋಗಿತ್ತು. ಗೃಹಮಂತ್ರಿ ಪಟೇಲರು ಸೋಮನಾಥ ಮಂದಿರದ ಮರು ನಿರ್ಮಾಣಕ್ಕೆ ನಿರ್ಧರಿಸಿದಾಗ ಮೊದಲು ವಿರೋಧಿಸಿದ್ದು ಮುಸಲ್ಮಾನ ಮುಖಂಡರಲ್ಲ, ಪ್ರಧಾನಿ ನೆಹರು! ಹಿಂದುಗಳ ಬಗ್ಗೆ ಹಿಂದು ಧರ್ಮದ ಬಗ್ಗೆ ನೆಹರೂಗಿದ್ದ ತಾತ್ಸಾರ ಮನೋಭಾವ ತಿಳಿದಿದ್ದ ಪಟೇಲರು ಮಾತ್ರ ಹಿಂದೆಗೆಯಲಿಲ್ಲ. ಮಂದಿರ ನಿರ್ಮಾಣ ಮಾಡಿ ಉದ್ಘಾಟನೆಗೆ ಆಗ ರಾಷ್ಟ್ರಪತಿಯಾಗಿದ್ದ ಡಾ. ಬಾಬುರಾಜೇಂದ್ರ ಪ್ರಸಾದರನ್ನು ಆಮಂತ್ರಿಸಿದರು. ಭಾರತದ ಜಾತ್ಯತೀತ ನೀತಿಯನ್ನು ಎತ್ತಿ ಹಿಡಿಯಲು ಈ ಕಾರ್ಯಕ್ರಮಕ್ಕೆ ನೀವು ಹೋಗದಿರುವುದು ಲೇಸು ಎಂದು ನೆಹರೂ ರಾಜೇಂದ್ರ ಪ್ರಸಾದರ ಕಿವಿಗೆ ಹುಳ ಬಿಟ್ಟರು. ಅವರು ಮಾತ್ರ ಅದನ್ನು ಕೇಳಿಸಿಕೊಳ್ಳಲೇ ಇಲ್ಲ. ಭವ್ಯ ಸೋಮನಾಥ ಮಂದಿರವನ್ನು ತಮ್ಮ ಕೈಯ್ಯಾರೆ ಉದ್ಘಾಟಿಸಿದರು. ಹಿಂದು ಶ್ರದ್ಧಾಕೇಂದ್ರಕ್ಕೆ ಗೌರವ ಸಲ್ಲಿಸಿದರು.
ಭದ್ರತಾ ಮಂಡಳಿ ಕಾಯಂ ಸ್ಥಾನ ತಿರಸ್ಕರಿಸಿದರು
1950ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಭಾರತವನ್ನು ಕಾಯಂ ಸದಸ್ಯನನ್ನಾಗಿ ಮಾಡಿಕೊಳ್ಳಲು ಅಮೆರಿಕ ಆಹ್ವಾನ ನೀಡಿತ್ತು. ನೆಹರೂ ಮಾತ್ರ ಅದನ್ನು ತಿರಸ್ಕರಿಸಿದರು. ಚೀನಾಕ್ಕೆ ಕಾಯಂ ಸ್ಥಾನ ನೀಡದಿದ್ದರೆ ಭಾರತಕ್ಕೂ ಬೇಡ ಎಂದುಬಿಟ್ಟರು. 1955ರಲ್ಲಿ ಅಮೆರಿಕ ಮತ್ತೊಮ್ಮೆ ರಷ್ಯಾದೊಂದಿಗೆ ಸೇರಿ, ಭಾರತಕ್ಕೆ ಕಾಯಂ ಸ್ಥಾನ ನೀಡಲು ಮುಂದಾಗಿತ್ತು. ಮೊದಲು ಚೀನಾಕ್ಕೆ ಕೊಡಿ ಎಂದರು ನೆಹರು. ಹೀಗೆ ನೆಹರು ಅವರ ಕೃಪೆಯಿಂದ ಚೀನಾಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಕ್ಕಿಬಿಟ್ಟಿತು. ಭಾರತಕ್ಕೆ ಎಷ್ಟು ಸಾಧ್ಯವೋ ಅಷ್ಟು ತೊಂದರೆ ಕೊಡಲು ಈ ಅಕಾರವನ್ನು ಚೀನಾ ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ!
ಗ್ವಾದರ್ ಬಂದರು ಬೇಡವೆಂದರು
1958ರಲ್ಲಿ ಒಮನ್ ದೇಶದ ಸುಲ್ತಾನರು ಆಯಕಟ್ಟಿನ ಗ್ವಾದರ್ ಬಂದರು ಪ್ರದೇಶವನ್ನು ಭಾರತಕ್ಕೆ ನೀಡಲು ಸಿದ್ಧವಾಗಿದ್ದರು. ಆದರೆ ನೆಹರೂ ಅವರೇ ಬೇಡವೆಂದರು. ಕೂಡಲೇ ಪಾಕಿಸ್ಥಾನ ಅದನ್ನು ಖರೀದಿಸಿತು. ಇದೀಗ ಗ್ವಾದರ್ ಬಂದರು ಚೀನಾದ ಎಲ್ಲ ರಸ್ತೆ ನಿರ್ಮಾಣ ಯೋಜನೆಗಳಿಗೆ ಹೆಬ್ಬಾಗಿಲಿನಂತಾಗಿದೆ.
ನೇಪಾಳ ವಿಲೀನಕ್ಕೂ ನೆಹರೂ ಅಡ್ಡಿ
ಹಿಂದು ದೇಶವಾಗಿದ್ದ, ಹಿಂದು ಸಂಸ್ಕೃತಿ, ಪರಂಪರೆಗಳನ್ನೇ ಹೊದ್ದಿರುವ ನೇಪಾಳವನ್ನು ಭಾರತದಲ್ಲಿ ವಿಲೀನಗೊಳಿಸಲು ಅಲ್ಲಿನ ರಾಜ ತ್ರಿಭುವನ ಅವರು 1950ರಲ್ಲಿ ಬಯಸಿದ್ದರು. ಭಾರತದಲ್ಲಿ ವಿಲೀನಗೊಂಡರೆ ನೇಪಾಳದ ಸರ್ವಾಂಗೀಣ ವಿಕಾಸ ಸಾಧ್ಯವೆಂದು ತ್ರಿಭುವನ್ ನಂಬಿದ್ದರು. ಆದರೆ ಅದೇಕೋ ನೇಪಾಳ ಭಾರತದಲ್ಲಿ ವಿಲೀನಗೊಳ್ಳುವುದು ನೆಹರೂಗೆ ಬೇಕಿರಲಿಲ್ಲ. ಬಹುಶಃ ಅದು ಹಿಂದು ರಾಜ್ಯವಾಗಿದ್ದೇ ಕಾರಣ ಇರಬಹುದು! ನೇಪಾಳವೇನಾದರೂ ಭಾರತದಲ್ಲಿ ವಿಲೀನವಾಗಿದ್ದಿದ್ದರೆ ಭಾರತ ಬಲಿಷ್ಠವಾಗುತ್ತಿತ್ತು. ಚೀನಾದ ಯಾವ ದುಸ್ಸಾಹಸಕ್ಕೂ ಆಸ್ಪದವಿರುತ್ತಿರಲಿಲ್ಲ. ಇಂದು ಮಾವೋವಾದಿಗಳ ಹಿಡಿತದಲ್ಲಿ ನೇಪಾಳ ತೊಳಲಾಡಬೇಕಾದ ಅನಿವಾರ್ಯತೆಯೂ ಬರುತ್ತಿರಲಿಲ್ಲ.
ಭಾರತ ಪರಮಾಣು ಶಕ್ತಿ ರಾಷ್ಟ್ರವಾಗದಂತೆ ತಡೆ
ಚೀನಾ ದೇಶಕ್ಕೂ ಮೊದಲು ಭಾರತ ಏಷ್ಯಾದಲ್ಲೇ ಮೊದಲ ಪರಮಾಣು ಶಕ್ತಿ ರಾಷ್ಟ್ರವಾಗಬಹುದಿತ್ತು. ಅಮೆರಿಕ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ ಅವರು ರಾಜಸ್ಥಾನದ ಮರಳುಗಾಡಿನಲ್ಲಿ ಪರಮಾಣು ಬಾಂಬ್ ಪರೀಕ್ಷೆಗೆ ನೆರವಾಗುವುದಾಗಿ ಭರವಸೆಯನ್ನೂ ನೀಡಿದ್ದರು. ‘ದೇಶದ ಭದ್ರತೆಗಿಂತ ಮುಖ್ಯವಾದದ್ದು ಬೇರೆ ಯಾವುದೂ ಅಲ್ಲ’ ಎಂಬ ವಾಕ್ಯವಿರುವ ಪತ್ರವನ್ನೂ ಕೆನಡಿ ನೆಹರೂಗೆ ಬರೆದಿದ್ದರು. ಆದರೆ ನೆಹರು ಅವರು ಕೆನಡಿ ನೀಡಿದ ಈ ಕೊಡುಗೆಯನ್ನು ತಿರಸ್ಕರಿಸಿದರು. ಕೆನಡಿಯವರ ನೆರವನ್ನು ಪಡೆದಿದ್ದರೆ ಭಾರತ ಏಷ್ಯಾದಲ್ಲೇ ಮೊದಲ ನ್ಯೂಕ್ಲಿಯರ್ ಪವರ್ ದೇಶವಾಗಿರುತ್ತಿತ್ತು.
ಚೀನಾದ ಮೇಲೆ ಕುರುಡು ವ್ಯಾಮೋಹ
ನೆಹರು ಅವರಿಗೆ ನೆರೆಯ ಚೀನಾ ದೇಶವೆಂದರೆ ಅದೇಕೋ ವ್ಯಾಮೋಹ. ಅವರೆಲ್ಲ ನಮ್ಮ ಸಹೋದರರಿದ್ದಂತೆ ಎಂಬ ಭ್ರಮೆ. ಅದಕ್ಕೇ ಹಿಂದಿ-ಚೀನೀ ಭಾಯಿ ಭಾಯಿ ಎಂದು ಘೋಷಿಸಿದರು. ಚೀನಾದ ಷಡ್ಯಂತ್ರ ನೆಹರೂಗೆ ಕೊನೆವರೆಗೂ ತಿಳಿಯಲೇ ಇಲ್ಲ. ಭಾರತದ ಸಾವಿರಾರು ಚದರ ಕಿ.ಮೀ. ಭೂಭಾಗವನ್ನು 1962ರ ಯುದ್ಧದಲ್ಲಿ ಚೀನಾದ ವಶವಾದಾಗಲೇ ನೆಹರೂಗೆ ಜ್ಞಾನೋದಯವಾಗಿದ್ದು! ಭಾರತ ಆ ಯುದ್ಧದಲ್ಲಿ ಹೀನಾಯವಾಗಿ ಸೋತು ಹೋಗಲು ನೆಹರು ಅವರ ತಪ್ಪು ನೀತಿಗಳೇ ಕಾರಣ.
ದೇಶದ ಪ್ರಥಮ ಪ್ರಧಾನಿಯಾಗಿ ನೆಹರು ಮಾಡಿದ ತಪ್ಪುಗಳು ಒಂದೆರಡಲ್ಲ. ಬಾಬು ರಾಜೇಂದ್ರ ಪ್ರಸಾದರ ‘ಇಂಡಿಯಾ ಡಿವೈಡೆಡ್’, ಲೋಹಿಯಾ ಅವರ ‘ಗಿಲ್ಟಿ ಮೆನ್ ಆಫ್ ಪಾರ್ಟಿಶನ್’ , ಹೊ.ವೆ. ಶೇಷಾದ್ರಿಯವರ ‘ಆ ಕಾಳರಾತ್ರಿ ಪ್ರಶ್ನೆ’ , ದಳವಿಯವರ ‘ಹಿಮಾಲಯನ್ ಬ್ಲಂಡರ್’ , ಎಂ.ಓ. ಮಥಾಯ್ ಬರೆದ ‘ರೆಮೆನಿಸೆನ್ಸಸ್ ಆಫ್ ದಿ ನೆಹರು ಏಜ್’, ಎಂ.ಕೆ.ಸಿಂಗ್ ಅವರ ‘ಎನ್‌ಸೈಕ್ಲೋಪೀಡಿಯಾ ಆಫ್ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್’ ಕೃತಿಯ 13ನೇ ಸಂಪುಟ ಕೃತಿಗಳನ್ನು ಓದಿದಾಗ ನೆಹರು ವ್ಯಕ್ತಿತ್ವ ಎಂತಹುದಾಗಿತ್ತು ಎಂದು ಅರಿವಾಗದೇ ಇರದು. ಈಚೆಗೆ ಪ್ರಕಟವಾದ ಬಂದೋಪಾಧ್ಯಾಯರ ‘ದಿ ಮೇಕಿಂಗ್ ಆಫ್ ಇಂಡಿಯಾಸ್ ಫಾರಿನ್ ಪಾಲಿಸಿ’ ಪುಸ್ತಕದಲ್ಲೂ ನೆಹರು ಅವರ ದ್ವಂದ್ವ ನಿಲುವುಗಳು, ದೇಶವಿರೋಧಿ ನೀತಿಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.
ನೆಹರು ಒಬ್ಬ ಪ್ರತಿಭಾವಂತ. ವಿದೇಶದಲ್ಲಿ ವ್ಯಾಸಂಗ ಮಾಡಿದ ವ್ಯಕ್ತಿ. ಪ್ರಖರ ವಾಗ್ಮಿ. ಸುಂದರ ಸದೃಢ ಶರೀರ. ಮೋಡಿ ಮಾಡಬಲ್ಲ ವ್ಯಕ್ತಿತ್ವ. ರಸಿಕ. ಇವೆಲ್ಲವೂ ನಿಜ. ಆದರೆ ಸ್ವತಂತ್ರ ಭಾರತಕ್ಕೊಂದು ಸ್ಪಷ್ಟ ದಿಕ್ಕು ದೆಸೆ ಕೊಡುವಲ್ಲಿ ಅವರು ವಿಫಲರಾದರು. ದೇಶದ ಮಿತ್ರರಾರು, ಶತ್ರುಗಳಾರು ಎಂಬುದನ್ನು ಗುರುತಿಸುವಲ್ಲಿ ಸೋತರು. ನೇತಾಜಿ, ಸಾವರ್ಕರ್‌ರಂತಹ ಪ್ರಖರ ದೇಶಭಕ್ತರನ್ನು ಅವಮಾನಿಸಿದರು. ಶೇಖ್ ಅಬ್ದುಲ್ಲಾ, ಕೃಷ್ಣ ಮೆನನ್‌ರಂತಹ ಸಮಾಜಘಾತುಕರಿಗೆ ಮಣೆಹಾಕಿದರು. ಇಂಥವರನ್ನು ನಮ್ಮ ಮಕ್ಕಳು ಚಾಚಾ ನೆಹರೂ ಎಂದು ಯಾವ ಪುರುಷಾರ್ಥಕ್ಕೆ ಕರೆಯಬೇಕು? ನೀವೇ ಹೇಳಿ.
***
ದು.ಗು. ಲಕ್ಷ್ಮಣ
ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.