ದೀಪಾವಳಿ ಲಹರಿ
Photo by CkPhotography ಸಿಕೆಪಿ@ckphotographi
ಹೊರಗೆ ಕೋವಿಡ್ ಇದ್ದರೂ ಮನೆಯೊಳಗೆ ಹಬ್ಬದ ಸಂಭ್ರಮಕ್ಕೇನೂ ಕಡಿಮೆಯಾಗಿಲ್ಲ. ದೀಪಾವಳಿಯೇ ಹಾಗೆ. ಅದೆಷ್ಟೇ ದುಗುಡ ದುಮ್ಮಾನಗಳಿದ್ದರೂ ಎಲ್ಲವನ್ನೂ ದೂರ ಸರಿಸಿ ನವಚೈತನ್ಯ ತುಂಬಿಸಿ ಮನಸ್ಸನ್ನು ಹೊಸ ಬೆಳಕಿನತ್ತ ಮುಖ ಮಾಡಿಸುತ್ತದೆ. ಅದೇ ಕಾರಣಕ್ಕೆ ಬದುಕಿಗೆ ದಾರಿ ಎಷ್ಟು ಮುಖ್ಯವೋ ಅದರಲ್ಲಿ ಸಾಗಲು ಬೆಳಕೆಂಬ ಸಾಧನವೂ ಅಷ್ಟೇ ಮುಖ್ಯ.
ನಮ್ಮೂರಿನಲ್ಲಿಯೂ ಹಾಗೆಯೇ. ನಾನು ಚಿಕ್ಕವನಾಗಿದ್ದಾಗ ಪುಟ್ಟಪ್ಪ ಸ್ವಾಮಿಗಳು ಅಂತ ಇದ್ದರು. ಅವರು ದೀಪಾವಳಿ ಅಥವಾ ಯುಗಾದಿಯಂಥ ಹಬ್ಬದ ದಿನ ಬಂದರೆ ಇಂಥದೊಂದು ಪುಟ್ಟ ಸತ್ಸಂಗವನ್ನೇ ಮಾಡುತ್ತಿದ್ದರು. ಎಲ್ಲರೂ ಚೆನ್ನಾಗಿರಬೇಕು, ಒಳ್ಳೆಯವರಾಗಿ ಬಾಳಿ ಬದುಕಬೇಕು ಎಂಬ ಅವರ ಇಚ್ಚೆ ಅದೆಷ್ಟು ಉನ್ನತವಾದುದು ಎಂಬುದು ಅರಿವಿಗೆ ಬರಲು ನನಗೆ ಅವರು ತೀರಿಹೋದ ಮೇಲೆ ಎಷ್ಟೋ ಸಂವತ್ಸರಗಳೇ ಬೇಕಾದವು. ಆವತ್ತು ಒಂದು ದಿನ ಪುಟ್ಟಪ್ಪ ಸ್ವಾಮಿಗಳು ಹಚ್ಚಿದ್ದ ಬೆಳಕಿನ ಹಣತೆ ಇವತ್ತಿಗೂ ನನ್ನೊಳಗೆ ಪ್ರಜ್ವಲಿಸುತ್ತಲೇ ಇದೆ.
ಇದಾದ ಮೇಲೆ ಇನ್ನೊಂದು ಪ್ರಸಂಗ. ನಮ್ಮೂರಿನಲ್ಲಿ ಪ್ಯಾಂಟ್ ಅಶ್ವತ್ಥಮ್ಮ ಎಂಬುವವರಿದ್ದರು. ಬಹಳ ಧೈರ್ಯದ ಮಹಿಳೆ. ನಾನು ಎಂದರೆ ಅವರಿಗೆ ಎಣೆಯಿಲ್ಲದ ಪ್ರೀತಿ-ವಾತ್ಸಲ್ಯ. ನಮ್ಮ ತಾಯಿಯಂತೆ ಅವರಿಗೂ ನಾನೆಂದರೆ ಬಲು ಅಕ್ಕರೆ. ಆದರೆ, ಪರಮ ತುಂಟನಾಗಿದ್ದ ನಾನು ಇಡೀ ಊರಿಗೇ ಅಪಥ್ಯ. ಆದರೆ, ನಮ್ಮ ಅಮ್ಮನಷ್ಟೇ ನನ್ನನ್ನು ಆರೈಕೆ ಮಾಡುತ್ತಿದ್ದವರೆಂದರೆ ಇದೇ ಅಶ್ವತ್ಥಮ್ಮ. ಆದರೆ ವಿಧಿಲೀಲೆಯೋ ಅಥವಾ ನನ್ನ ಪರಮ ತುಂಟತನದ ಕಾರಣಕ್ಕೋ ನನ್ನನ್ನು ಅಪರಿಮಿತ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದ ಅವರ ಕಾರಣಕ್ಕಾಗಿಯೇ ನಾನು ನಮ್ಮಮ್ಮ ಗೋಪಮ್ಮನಿಂದ ಹುಣಸೆ ಕಡ್ಡಿ ಬರೆಯಲ್ಲಿ ಒದೆ ತಿನ್ನಬೇಕಾಯಿತು. ನನ್ನ ಜೀವನದಲ್ಲಿ ದೀಪಾವಳಿ ಹಬ್ಪದಂದು ಒದೆ ಎಂಬ ಇನ್ನೊಂದು ಕಜ್ಜಾಯ ಇದೆ ಎಂದು ಗೊತ್ತಾಗಿದ್ದು ಆವತ್ತೇ.
ಆ ಪ್ರಸಂಗ ಹೀಗಿದೆ
ಆವತ್ತು ದೀಪಾವಳಿ. ನಾನು ಬಹುಶಃ ನಾಲ್ಕನೇ ಕ್ಲಾಸು ಎನ್ನುವ ಜ್ಞಾಪಕ. ನನ್ನ ತಂಗಿ ಇನ್ನೂ ಶಾಲೆಗೆ ಸೇರಿರಲಿಲ್ಲ ಅನಿಸುತ್ತದೆ. ನಮ್ಮಿಬ್ಬರಿಗೂ ಹೊಸಬಟ್ಟೆ, ಪಟಾಕಿಗೆ ಕೊರತೆಯೇನೂ ಇರಲಿಲ್ಲ. ವಾರಕ್ಕೆ ಮೊದಲೇ ನಮ್ಮಪ್ಪ ಪಟಾಕಿ ತಂದು ಕೊಡುತ್ತಿದ್ದರು. ಹಬ್ಬಕ್ಕೆ ಐದಾರು ದಿನವಿದ್ದಾಗಲೇ ನಾನು ಪಟಾಕಿ ಹೊಡೆಯಲು ಶುರು ಮಾಡುತ್ತಿದ್ದೆ. ನಮ್ಮ ಮನೆಯ ಮುಂದೆ ಬೆಳಗ್ಗೆ-ಸಂಜೆ ಪುಟ್ಟ ಕೆಂಪು ಪಟಾಕಿ ಪ್ಯಾಕನ್ನು ಜೇಬಿನಲ್ಲಿಟ್ಟುಕೊಂಡು ಅದರಲ್ಲಿ ಒಂದೊಂದೇ ತೆಗೆದು, ಅಗರಬತ್ತಿ ಕಡ್ಡಿಯಿಂದ ಸಂಭ್ರಮದಿಂದ ಹಚ್ಚುತ್ತಿದ್ದೆ. ಆ ಪಟಾಕಿ ಸದ್ದಿಗೆ ಇಡೀ ಊರಿನಲ್ಲಿದ್ದ ನನ್ನ ವಯಸ್ಸಿನ ಹುಡುಗರೆಲ್ಲ ನಮ್ಮನೆಯ ಬಳಿ ಜಾತ್ರೆಯಂತೆ ಸೇರುತ್ತಿದ್ತರು. ಇಂಥ ಹೊತ್ತಿನಲ್ಲಿ ಕತ್ತಲಾದ ಮೇಲೆಯೂ ಪಟಾಕಿ ಹಚ್ಚಿ ಅಕ್ಕಪಕ್ಕದ ಮನೆಗಳ ಅಜ್ಜಿಯರ ನಿದ್ರೆಯನ್ನೂ ಹಾಳು ಮಾಡುತ್ತಿದ್ದೆ. ನಮ್ಮನೆಯಲ್ಲಿದ್ದ ಅಜ್ಜಿ ತಾತನ ನಿದ್ರೆಗೂ ಭಂಗವಾಗಿ ಅಜ್ಜಿಯಂತೂ “ಈ ಹಾಳು ದೀಪಾವಳಿ ಯಾಕಾದರೂ ಬರುತ್ತೋ, ಈ ಪೀಡೆ ಮುಂಡೆದು ನಿದ್ದೆ ಮಾಡೋಕೂ ಬಿಡ್ತಿಲ್ಲ ” ಎಂದು ತೆಲುಗಿನಲ್ಲೇ ಗೊಣಗುತ್ತಲೇ ಇರುತ್ತಿದ್ದರು.
ಆದರೆ, ಊರ ಹೆಂಗಸರು ಮಾತ್ರ ನನಗೆ ಹಿಡಿಶಾಪ ಹಾಕುತ್ತಿದ್ದದ್ದು ಮಾತ್ರ ನನಗೆ ಗೊತ್ತಾಗುತ್ತಲೇ ಇರಲಿಲ್ಲ. ಇವನೂ, ಇವನ ಪಟಾಕಿ ನೆಗೆದುಬಿದ್ದು ಹೋಗಾ… ಈ ಗೋಪಮ್ಮನ ಮಗ ಅದ್ಯಾವಾಗ ಸಾಯ್ತಾನೋ ಎಂದು ಬೈದುಕೊಂಡು ಹೋಗುತ್ತಿದ್ದರಂತೆ ಕೆಲವರು. ಆ ಮಾತುಗಳನ್ನು ಕೇಳಿಕೊಂಡು ನಮ್ಮಮ್ಮ ಅಳುತ್ತಾ ಕೂತರೆ ಪ್ಯಾಂಟ್ ಅಶ್ವತ್ಥಮ್ಮ ಮಾತ್ರ, ಹಾಗೆ ನನಗೆ ಶಾಪ ಹಾಕುತ್ತಿದ್ದ ಹೆಂಗಸರಿಗೆ ಅದೇ ಜೋರಿನಲ್ಲಿ ಚಳಿ ಬಿಡಿಸಿ, ಆ ಮಗೂನ ಯಾಕೆ ಹಂಗಂತೀರಾ? ಎಳೆಕೂಸು. ಅವಳಿಗೆ ಒಬ್ನೆ ಮಗ. ಆ ಮಗುವನ್ನ ಹೊಟ್ಟೆಗೆ ಇಟ್ಕೋಬೇಕೂಂತಿದ್ದೀರಾ? ಅಂತ ಝಾಡಿಸುತ್ತಿದ್ದರು.
ಹೀಗೆ ಊರ ಮಹಿಳೆಯರಿಂದ ನನ್ನನ್ನು ಡಿಫೆನ್ಸ್ ಮಾಡಿಕೊಳ್ಳುತ್ತಿದ್ದ ಅಶ್ವತ್ಥಮ್ಮ ನನಗೆ ಶಾಪ ಹಾಕುತ್ತಿದ್ದ ಇತರೆಲ್ಲಾ ಹೆಂಗಸರಿಗಿಂತ ಹೆಚ್ಚಾಗಿ ನನ್ನ ಮೇಲೆ ಉರಿದುಬೀಳುವಂಥ ಪ್ರಸಂಗವೊಂದು ನಡೆದುಹೋಯಿತು. ಆವತ್ತೂ ದೀಪಾವಳಿಯೇ. ಆ ಹಿಂದಿನ ದೀಪಾವಳಿಗೆಲ್ಲ ಕೆಂಪು ಪಟಾಕಿ, ಸುರ್ ಸುರ್ ಬತ್ತಿ, ಫ್ಲವರ್ ಪಾಟ್, ಅದರ ಜತೆಗೆ ಲಕ್ಷ್ಮೀ ಪಟಾಕಿಯನ್ನಷ್ಟೇ ತರುತ್ತಿದ್ದ ನಮ್ಮಪ್ಪ. ಆ ವರ್ಷದ ಹಬ್ಬಕ್ಕೆ ಎರಡು ಬಾಕ್ಸ್ ರಾಕೆಟ್ ತಂದಿದ್ದರು. ನಾನೋ ಆ ರಾಕೆಟ್ಟಿನಂತೆ ಹಾರಲು ಅದಷ್ಟೇ ಸಾಕಾಯಿತು. ನನ್ನ ಹತ್ತಿರ ರಾಕೆಟ್ ಇದೆ ಅಂತ ತೋರಿಸಿಕೊಳ್ಳಲು ಊರಿನ ಬೀದಿಬೀದಿಯಲ್ಲೂ ಒಂದೊಂದನ್ನು ಹಾರಿಸಿ ಬಂದಿದ್ದೆ. ಕೊನೆಗೆ ನಮ್ಮೂರ ಆಂಜನೇಯ ಸ್ವಾಮಿ ಗುಡಿಯತ್ತಿರ ಒಂದು ರಾಕೆಟ್ ಹಾರಿಸಿವುದರೊಂದಿಗೆ ಒಂದು ಬಾಕ್ಸ್ ಖಾಲಿ ಮಾಡಿದ್ದೆ.
ಪಟಾಕಿ ಹೊಡೆಯುವುದಕ್ಕಿಂತಲೂ ರಾಕೆಟ್ ಹಾರಿಸುವುದು ಎಂದರೆ ಭಾರೀ ಜೋಶ್ ನನಗೆ. ನಾನು ರಾಕೆಟ್ʼನೊಂದಿಗೆ ಆಚೆ ಬಂದರೆ ಜತೆಯಲ್ಲಿ ನಾಲ್ಕೈದು ಹುಡುಗರು ಇರುತ್ತಿದ್ದರು. ಆಗಲೇ ಒಂದು ರೀತಿಯ ಡಾನ್ʼಗಿರಿ! ಬೀಯರ್ ಬಾಟಲಿಯಂಥ ಉದ್ದವಾದ ಒಂದು ಬಾಟಲಿ ಹುಡುಕಿಕೊಂಡು ಅದರೊಳಕ್ಕೆ ರಾಕೆಟ್ ಇಟ್ಟು ಬತ್ತಿ ಹಚ್ಚಿದರೆ ಆ ರಾಕೆಟ್ ನೇರ ಗಗನಮುಖಿಯಾಗುತ್ತಿತ್ತು. ಹಾಗೆ ಸೊಯ್ಯನೇ ಹಾರುತ್ತಿದ್ಕ ರಾಕೆಟ್ ನಮ್ಮೂರು ಶಾಲೆ ಮುಂದಿದ್ದ ಬೇವಿನ ಮರಕ್ಕಿಂತ ಎತ್ತರ ಹಾರಿದರೆ ಅದು ಒಳ್ಳೆಯ ರಾಕೆಟ್ ಎಂದರ್ಥ. ಇನ್ನು ಅಷ್ಟು ಮೇಲೆ ಹಾರದಿದ್ದರೆ ಇದು ಡಬ್ಬಾ ರಾಕೆಟ್ ಎಂದರ್ಥ.
ಹೀಗೆ ಮಸ್ತ್ ಜೋಶ್ʼನಲ್ಲಿದ್ದ ನಾನು ಸಂಜೆ ಊರಿನ ಮಹಿಳೆಯರೆಲ್ಲ ಕಜ್ಜಾಯ ನೋಮುವ (ನೋಮುವ ಎಂದರೆ ಪೂಜಿಸುವುದು ಎಂದರ್ಥ) ನಮ್ಮ ಶಾಲೆಯ ಬಳಿ ಉಳಿದ ರಾಕೆಟ್ʼಗಳನ್ನು ಹಾರಿಸಲು ಪ್ಲ್ಯಾನ್ ಮಾಡಿಕೊಂಡಿದ್ದೆ. ಆ ಸಂದರ್ಭದಲ್ಲಿ ಯಾರು ಜಾಸ್ತಿ ಪಟಾಕಿ ಹೊಡೆಯುತ್ತಾರೋ ಅವರು ಎಲ್ಲರ ದೃಷ್ಟಿಯಲ್ಲಿ ʼತೋಪುʼ ಅಂತರ್ಥ. ತೋಪು ಎಂದರೆ ನಮ್ಮ ಕಡೆ ಹೀರೋ ಥರಾ ಲೆಕ್ಕ. ಹೀಗೆ ಹೀರೋಗಿರಿ ತೋರಿಸಲು ನಾನು ಆವತ್ತು ಸಂಜೆ ರಾಕೆಟ್ʼಗಳ ಜತೆಯಲ್ಲಿ ಕಜ್ಜಾಯ ನೋಮುತ್ತಿದ್ದ ನಮ್ಮೂರ ಸ್ಕೂಲ್ ಕಾಂಪೌಂಡಿಗೆ ಎಂಟ್ರಿ ಕೊಟ್ಟೆ.
ಹಾದಿ ತಪ್ಪಿದ ರಾಕೆಟ್
ಹಾಗೆ ಲೆವೆಲ್ಲಾಗಿ ಎಂಟ್ರಿ ಕೊಟ್ಟು ಅಲ್ಲೆಲ್ಲ ತುಂಬಿಕೊಂಡು ಪಟಾಕಿ ಹೊಡೆಯುತ್ತಿದ್ದ ಹುಡುಗರ ಮಧ್ಯೆ ನುಗ್ಗಿ ಬಾಟಲಿ ಒಳಗಿಂದ ಒಂದು ರಾಕೆಟ್ ಅನ್ನು ಯಶಸ್ವಿಯಾಗಿ ಹಾರಿಸಿದೆ. ಅದೋ ಬೇವಿನ ಮರಕ್ಕೂ ಎತ್ತರಹೋಗಿ ಢಂ ಎಂದು ಸದ್ದು ಮಾಡಿತು. ಅದುವರೆಗೂ ಪಟಾಕಿ ಕಡೆ ನೋಡಿಕೊಂಡು ಶಿಳ್ಳೆ ಹೊಡೆಯುತ್ತಿದ್ದವರೆಲ್ಲ ನನ್ನ ರಾಕೆಟ್ ನೋಡಿ ಹೋ.. ಎಂದರು. ನನ್ನ ಜೋಶ್ ಮತ್ತೂ ಹೆಚ್ಚಿ ಇನ್ನೊಂದು ರಾಕೆಟ್ ಅನ್ನು ಬಾಟಲಿಗಿಟ್ಟು ಬತ್ತಿ ಹಚ್ಚಿದೆ. ಆದರೆ ಅದು, ನಾನು ಬತ್ತಿ ಹಚ್ಚಿ ಓಡಿಬರುವ ಧಾವಂತದಲ್ಲಿ ಬಾಟಲಿಯೇ ಕೆಳಗೆ ಬಿತ್ತೋ ಅಥವಾ ಯಾರಾದರೂ ಹೊಟ್ಟೆಕಿಚ್ಚಿಗೆ ಕೆಳಕ್ಕೆ ತಳ್ಳಿದರೋ ಗೊತ್ತಿಲ್ಲ. ಮೇಲೆ ಹಾರಬೇಕಿದ್ದ ರಾಕೆಟ್ ನೆಲದ ಮೇಲೆ ಬಿದ್ದು ಹೊರಳಾಡತೊಡಗಿತು. ಹಾಗೆಯೇ ಬಿಟ್ಟಿದ್ದರೂ ಆಗುತ್ತಿತ್ತು, ಯಾರೋ ಕಾಲಿನಲ್ಲಿ ಒದ್ದರೂ ಅನಿಸುತ್ತೆ. ಅಲ್ಲೇ ಎಲ್ಲೋ ಪಕ್ಕ ಹಾರಿ ಬಿದ್ದು ಸದ್ದು ಮಾಡಬೇಕಿದ್ದ ರಾಕೆಟ್ ಊರಿನ ಮಹಿಳೆಯರೆಲ್ಲ ಭಕ್ತಿಯಿಂದ ಪುಟ್ಟಪ್ಪ ಸ್ವಾಮಿಗಳ ಸಾರಥ್ಯದಲ್ಲಿ ಕಜ್ಜಾಯ ನೋಮುತ್ತಿದ್ದ ಶಾಲೆಯ ಕೊಠಡಿಯೊಳಕ್ಕೆ ನುಗ್ಗಿತ್ತು. ಅಲ್ಲಿ ಮಹಿಳೆಯರೆಲ್ಲ ಕಿಕ್ಕಿರಿದು ತುಂಬಿದ್ದರು. ಅದು ಎಲ್ಲಿ ಹೋಯಿತು ಎಂದು ನೋಡುವಷ್ಟರಲ್ಲಿ ಆ ಹೆಂಗಸರ ಮಧ್ಯೆದಲ್ಲಿ ಎಲ್ಲೋ ಢಂ ಅಂತ ಜೋರು ಸದ್ದು ಮಾಡಿತು. ಒಳಗಿದ್ದ ಹೆಂಗಸರೆಲ್ಲ ಜೋರಾಗಿ ಕೂಗಿಕೊಂಡರು, ಕೆಲವರು ಹೊರಗೆ ಓಡಿಬಂದರು. ಪಾಪ, ಇದೇ ಅಶ್ವತ್ಥಮ್ಮನ ಬಳಿ ಹೋಗಿ ಆ ಹಾಳು ರಾಕೆಟ್ ಸ್ಫೋಟಿಸಿತ್ತು. ಆ ಸೌಂಡ್ʼಗೆ ಅವರು ಭಯದಿಂದ ಚೀರಿದರು, ಹಬ್ಪಕ್ಕೆ ಹೊಸದಾಗಿ ಕೊಂಡು ಉಟ್ಟಿದ್ದ ಸೀರೆಯೂ ಕೊಂಚ ಸುಟ್ಟುಹೋಗಿತ್ತು. ಅವರಿಗೆ ಪಿತ್ತ ನೆತ್ತಿಗೇರಲು ಅಷ್ಟು ಸಾಕಾಯಿತು.
ʼಯಾವನೋ ರಾಕೆಟ್ ಬಿಟ್ಟ ಫಟಿಂಗʼ ಅಂತ ಪುಟ್ಟಪ್ಪ ಸ್ವಾಮಿಗಳು ಏರಿದ ಧ್ವನಿಯಲ್ಲಿ ಕೂಗಿದ್ದರು. ಅದ್ಯಾರೋ ಒಬ್ಬರು; ʼಕೇಶವಪ್ಪನ ಮಗ ಚನ್ನಕಷ್ಣ ಸ್ವಾಮಿʼ ಅಂತ ಕೂಗಿದ್ದಷ್ಟೇ ಕೇಳಿತು. ಅಷ್ಟರಲ್ಲಿ ನಾನು ಸ್ಕೂಲ್ ಕಾಂಪೌಂಡು ಹಾರಿ ಓಡಿದ್ದೆ. ನನ್ನ ಹಿಡಿಯಲು ಬಂದವರಿಗೂ ಸಿಗದೆ ಮಾಯವಾಗಿದ್ದೆ. ಆಮೇಲೆ ಅಶ್ವತ್ಥಮ್ಮ ಸೀರೆ ಸುಟ್ಟುಹೋದ ನೋವಿನಲ್ಲಿ ನನಗೆ ಹಿಡಿಶಾಪ ಹಾಕಿದ್ದರು. ಅವರಿಗೆ ಗೊತ್ತಿದ್ದ ಬೈಗುಳಜಾಲವೆಲ್ಲ ಆವತ್ತು ನಿರರ್ಗಳವಾಗಿ ಹೊರಬಂದಿತ್ತು. ಅಲ್ಲಿದ್ದ ಹೆಂಗಸರೆಲ್ಲ ಸೇರಿ, ʼಏನು ಗೋಪಮ್ಮ. ಮಗನನ್ನ ಹೆತ್ತಿದೆಯೋ ಅಥವಾ ರಾಕ್ಷಸನನ್ನ ಹೆತ್ತಿದಿಯೋ. ಕೃಷ್ಣನ ಬದಲು ಆ ಕಂಸಾಸುರನನ್ನು ಹೆತ್ತಿದಿಯಾ ನೀನು!! ನಿನ್ನ ಮಗ.. ನೆಗೆದುಬಿದ್ಹೋಗಲಿ… ನಾಶನಾಗಿ ಹೋಗಲಿʼ ಎಂದು ಪರಿಪರಿಯ ಶಾಪ ಹಾಕುತ್ತಿದ್ದಂತೆ ಅಮ್ಮ ಕಜ್ಜಾಯ ನೋಮುವುದನ್ನು ಅಷ್ಟಕ್ಕೇ ಬಿಟ್ಟು ಅಳುತ್ತಾ ಮನೆಗೆ ಬಂದುಬಿಟ್ಟಿದ್ದರು.
ನಾನೋ ಎಲ್ಲರ ಕಣ್ತಪ್ಪಿಸಿಕೊಂಡು ಅಲ್ಲಿ ಇಲ್ಲಿ ಸುತ್ತಾಡಿ ಕೊನೆಗೆ ನಮ್ಮ ಮಾವಿನ ತೋಪು ಸೇರಿ ಒತ್ತಗೆ ಎಲೆ ತುಂಬಿಕೊಂಡಿದ್ದ ಮಲಗೂಬಾ ಮಾವಿನ ಮರವನ್ನು ಹತ್ತಿಕೂತಿದ್ದೆ. ನಾನೇನಾದರೂ ಓಡದೇ ಸ್ಕೂಲ್ ಬಳಿಯೇ ಸಿಕ್ಕಿಬಿದ್ದಿದ್ದರೆ ಮಸ್ತ್ ಒದೆ ತಪ್ಪುತ್ತಿರಲಿಲ್ಲ. ಯಾರಿಂದ ಒದೆ ತಪ್ಪಿದರೂ ಅಮ್ಮನಿಂದ ಕಂಬಳಿ ಸೊಪ್ಪಿನ ಕಡ್ಡಿ ಅಥವಾ ಹುಣಸೆ ಮರದ ಕಡ್ಡಿಯಿಂದ ಬರೆ ಮಿಸ್ ಆಗುವ ಸಾಧ್ಯತೆಯೇ ಇರಲಿಲ್ಲ. ಸದ್ಯಕ್ಕೆ ಪಾರಾಗಿದ್ದೆ.
ಅಪ್ಪ ಊರೆಲ್ಲ ಹುಡುಕಿದ್ದರು. ರಾಗಿ ಹೊಲಗಳು, ಶ್ರೀರಾಮರೆಡ್ಜಿಯವರ ಮಾವಿನ ತೋಪು, ಜಂಗಾಲಹಳ್ಳಿ ಕರೆ ಏರಿ, ನಮ್ಮ ಹುಲ್ಲು ಬಣವೆ ಎಲ್ಲ ಹುಡುಕಿದ್ದರು. ಕೊನೆಗೆ ಸುಸ್ತಾಗಿ ನಮ್ಮ ಮಾವಿನ ತೋಪು ಕಡೆಗೇ ಬಂದರು ಅಪ್ಪ. “ಕೃಷ್ಣಾ.. ಕೃಷ್ಣಾ” ಅಂತ ಕೂಗುತ್ತಿದ್ದರು. ನನಗೋ ಮರದಲ್ಲಿ ಕೂತೂ ಕೂತು ಸಾಕಾಗಿತ್ತು. ಕತ್ತಲು ಬೇರೆ ಆವರಿಸಿ ಭಯ ಶುರುವಾಗಿತ್ತು. ನಾನು ಮರದಿಂದ ಇಳಿಯುತ್ತಿದ್ದಂತೆ ಅಪ್ಪ ನಮ್ಮ ನೀರ ಬಾವಿಯ ಕಡೆ ಹೋಗಿ ಗಟ್ಟಿಯಾಗಿ “ಕೃಷ್ಣಾ.. ಕೃಷ್ಣಾ” ಎಂದು ಕೂಗುತ್ತಿದ್ದರು. ದೀಪಾವಳಿ ಜಡಿ ಮಳೆ ಬೇರೆ, ಬಾವಿ ತುಂಬಾ ನೀರಿತ್ತು. ಅಷ್ಟರಲ್ಲಿ ಅಮ್ಮ ಗೋಪಮ್ಮ ಊರ ದಾರಿಯಲ್ಲಿ ಅಳುತ್ತಾ ಬಾವಿಯತ್ತ ಓಡಿಬರುತ್ತಿದ್ದರು.
ನಾನು ಮರದಿಂದ ಇಳಿದು ಜೋರಾಗಿ “ಅಪ್ಪಾ..” ಎಂದು ಕೂಗಿದೆ. ನನ್ನ ಕಡೆ ಬ್ಯಾಟರಿ ಬೆಳಕು ಹಾಕಿಕೊಂಡು ಓಡಿಬಂದ ಅಪ್ಪ ನನ್ನನ್ನು ಬಿಗಿಯಾಗಿ ಹಿಡಿದುಕೊಂಡರು. ನಾನು ಭಯದಿಂದ ನಡುಗುತ್ತಿದ್ದೆ. ಅಪ್ಪ ಹೊಡೆಯಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ಅಮ್ಮನ ಸಿಟ್ಟು ಎಲ್ಲಿತ್ತೋ ಗೊತ್ತಿಲ್ಲ, ಕೈಗೆ ಸಿಕ್ಕ ಕೋಲಿನಿಂದ ಸರಿಯಾಗಿ ಒಂದು ಬಿಟ್ಟರು. ಮೊದಲೇ ಹೆದರಿದ್ದ ನಾನು ಒಮ್ಮೆಲೆ ಜೋರಾಗಿ ಅಳತೊಡಗಿದೆ. ಮತ್ತೆ ಹೊಡೆಯಲು ಅಪ್ಪ ಬಿಡಲಿಲ್ಲ. ಅಲ್ಲಿಂದ ಭುಜದ ಮೇಲೆ ಕೂರಿಸಿಕೊಂಡ ಅಪ್ಪ ನೇರವಾಗಿ ಪ್ಯಾಂಟ್ ಅಶ್ವತ್ಥಮ್ಮನ ಮನೆ ಹತ್ರ ಬಂದಿದ್ದರು. ಅಷ್ಟೊತ್ತಿಗೆ ಅವರು ಶಾಂತರಾಗಿ ನಾನು ಎಲ್ಲಿ ಹೋದೆನೋ ಎಂಬ ಭಯದಲ್ಲಿದ್ದರು. ಕೆಲವರಂತೂ, ಪಾಪಿ ನನ್ಮಗ, ಚೆನ್ನಪ್ಪನ ಬಾವಿಗೆ ಹಾರಿ ಸತ್ತಿರಬಹುದು ಎಂದುಕೊಂಡಿದ್ದರು.
ಅಶ್ವತ್ಥಮ್ಮ ನನ್ನನ್ನು ದಿಟ್ಟಿಸಿದವರೇ, ʼನನ್ನ ಮಗನೇ.. ನನ್ನ ಮೇಲೆಯೇ ರಾಕೆಟ್ ಬಿಡ್ತೀಯಾ? ಸೀರೆ ಸುಟ್ಹೋಗಿದೆ. ಹೊಸ ಸೀರೆ ಯಾವಾಗ ಕೊಡುಸ್ತೀಯಾ? ದೊಡ್ಡವನಾದ ಮೇಲೆ ನನಗೆ ನೀನು ಸೀರೆ ಕೊಡಿಸಬೇಕು. ಆಯಿತಾ?ʼ ಎಂದು ನಕ್ಕರು. ʼತಪ್ಪಾಯಿತು ದೊಡ್ಡಮ್ಮʼ ಎಂದು ಅಳತೊಡಗಿದೆ ನಾನು. ಬಾಚಿ ತಬ್ಬಿಕೊಂಡ ಅವರು ʼಅಯ್ಯೋ ಕಂದಾ, ಅಳಬೇಡ. ಸುಮ್ಕಿರು. ನೀನು ಸೀರೆ ಕೊಡಿಸೋದೇನೂ ಬೇಡʼ ಎಂದು ಮುದ್ದುಮಾಡಿ ಕಜ್ಜಾಯ ಕೊಟ್ಟರು.
ನಾನು ನಾಲ್ಕನೇ ಕ್ಲಾಸಿನಲ್ಲಿದ್ದಾಗ ಬಂದಿದ್ದ ದೀಪಾವಳಿ ಅದೇ ನನಗೆ, ಮೈಮೇಲೆ ನಾಲ್ಕೂವರೆ ದಶಕ ಕಳೆದು ಐವತ್ತರ ಹತ್ತಿರ ಬರುವಷ್ಟೊತ್ತಿಗೆ ಬಂದ ಈ ದೀಪಾವಳಿಗೆ (2020) ಆ ಅಶ್ವತ್ಥಮ್ಮ ತೀರಿಕೊಂಡು ಹನ್ನೊಂದು ದಿನವಾಗಿತ್ತು (ನವೆಂಬರ್ 13). ನರಕ ಚತುರ್ದಶಿ ದಿನವೇ ಅವರ ಪುಣ್ಯತಿಥಿ. ಅವರ ಗೌರವಾರ್ಥ ಊರಿನವರೆಲ್ಲ ಸೇರಿ ಹಬ್ಬವನ್ನು ಒಂದು ದಿನ ಮುಂದಕ್ಕೆ ಹಾಕಿದ್ದರು. ಇವತ್ತು ನಮ್ಮೂರಿನಲ್ಲಿ ಕಜ್ಜಾಯಕ್ಕೆ ಅಕ್ಕಿ ನೆನೆ ಹಾಕುವ ಆಚರಣೆ. ನರಕ ಚತುರ್ದಶಿ ದಿನ ಮಾಡಬೇಕಾಗಿದ್ದ ಶಾಸ್ತ್ರವಿದು. ಒಂದು ದಿನಬಿಟ್ಟು ಮಾಡಲಾಗುತ್ತಿದೆ. ಇನ್ನು ಅಮಾವಾಸ್ಯೆಯ ದಿನ ಕಜ್ಜಾಯಗಳನ್ನು ನೋಮುವ ಶಾಸ್ತ್ರವಿತ್ತು. ಅದೂ ಒಂದು ದಿನ ಮುಂದೆ ಹಾಕಲಾಯಿತು. ಆ ಕಾರ್ಯ ನಾಳೆ (ನ.15) ನಡೆಯಲಿದೆ. ಅಶ್ವತ್ಥಮ್ಮನವರಿಗೆ ನಮ್ಮೂರು ಕೊಟ್ಟ ಗೌರವ ಇದು.
ಅಂದಹಾಗೆ ಬರೀ ಅಶ್ವತ್ಥಮ್ಮ ಆಗಿದ್ದ ಅವರ ಹೆಸರಿನ ಹಿಂದೆ ಪ್ಯಾಂಟ್ ಹೇಗೆ ಸೇರಿಕೊಂಡಿತು. ಅದಕ್ಕೂ ಒಂದು ಕಥೆ ಇದೆ. ಅವರ ಪತಿ ನಾರಾಯಣಪ್ಪ ಅಂತ. ಅವರನ್ನು ನೋಡಿದ ಅಸ್ಪಷ್ಟ ನೆನಪು ನನ್ನದು. ಆ ಕಾಲಕ್ಕೆ ನಮ್ಮೂರಿನಲ್ಲಿ ಯಾವಾಗಲೂ ಪ್ಯಾಂಟ್ ಧರಿಸುತ್ತಿದ್ದ ಏಕೈಕ ವ್ಯಕ್ತಿ ಅವರಾಗಿದ್ದರಂತೆ. ಹೀಗಾಗಿ ಅವರನ್ನು ಪ್ಯಾಂಟ್ ನಾರಾಯಣಪ್ಪ ಅಂತ ಎಲ್ಲರೂ ಕರೆಯುತ್ತಿದ್ದರಂತೆ. ಕ್ರಮೇಣ ಅವರ ಪತ್ನಿ ಅಶ್ವತ್ಥಮ್ಮ ಅವರಿಗೂ ಪ್ಯಾಂಟ್ ಸೇರಿಕೊಂಡು ಕೊನೆಗೆ ಅವರೂ ಪ್ಯಾಂಟ್ ಅಶ್ವತ್ಥಮ್ಮ ಆದರಂತೆ.
ನನ್ನ ಬದುಕಿನ ಪ್ರತಿ ದೀಪಾವಳಿಗೂ ಊರಿನಲ್ಲಿ ತಪ್ಪದೇ ಸಿಗುತ್ತಿದ್ದ ಅವರು, ನನ್ನ ಪಾಲಿನ ಅಚ್ಚಳಿಯದ ನೆನಪು. ಈ ದೀಪಾವಳಿಗೆ ಅವರಿಲ್ಲ. ಹಬ್ಬಕ್ಕೆ ನಾನು ಊರಿಗೆ ಬರುವಷ್ಟರಲ್ಲಿ ಅವರ ಪುಣ್ಯತಿಥಿ ಕಾರ್ಯ ನಡೆಯುತ್ತಿತ್ತು. ಅವರು ಮತ್ತೆಂದೂ ಸಿಗುವುದಿಲ್ಲ. ದೊಡ್ಚವನಾದ ಮೇಲೆ ಅವರಿಗೆ ನಾನೊಂದು ಸೀರೆಯನ್ನೂ ಕೊಡಿಸಲಾಗಲಿಲ್ಲ. ನಾನು ಅವರ ಸೀರೆಗೆ ರಾಕೆಟ್ ಇಟ್ಟ ಮರುವರ್ಷಕ್ಕೆ ಅಮ್ಮನೂ ಇರಲಿಲ್ಲ. ಹೀಗಾಗಿ ಪಟಾಕಿ, ಬೆಳಕು ಎರಡೂ ದೂರವಾದವು. ಮದುವೆಯಾಗಿ ಮಕ್ಕಳಿಬ್ಬರು ಬಂದ ಮೇಲೆ ಕಳೆದುಹೋಗಿದ್ದ ಬೆಳಕು ಮರಳಿ ಬಂದಿದೆ.
ಎಲ್ಲರ ಬದುಕಿನಲ್ಲೂ ಬೆಳಕು ತುಂಬಲಿ. ಹ್ಯಾಪಿ ದೀಪಾವಳಿ.