ಹೈದರಾಬಾದ್: ದಕ್ಷಿಣ ಭಾರತದ ಮೆಗಾಸ್ಟಾರ್ ಚಿರಂಜೀವಿ ಹೊಸ ಸುದ್ದಿ ಕೊಟ್ಟಿದ್ದಾರೆ. ಅವರು ಈ ವರ್ಷ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಈ ವಿಷಯವನ್ನು ದೀಪಾವಳಿ ಹಬ್ಬಕ್ಕೆ ಮೆಗಾಸ್ಟಾರ್ ಟೀಮ್ ಕನ್ಫರ್ಮ್ ಮಾಡಿದೆ.
2015ರಲ್ಲಿ ತಮಿಳಿನಲ್ಲಿ ಅಜಿತ್ ನಟಿಸಿದ್ದ ʼವೇದಾಳಂʼ ಚಿತ್ರವನ್ನು ಮೆಗಾಸ್ಟಾರ್ ಆಯ್ಕೆ ಮಾಡಿಕೊಂಡಿದ್ದು, ಮೂಲ ಚಿತ್ರವನ್ನು ಶಿವ ನಿರ್ದೇಶನ ಮಾಡಿದ್ದರು. ಆ ಚಿತ್ರ ಕಥೆಯನ್ನು ಬಹುವಾಗಿ ಇಷ್ಟಪಟ್ಟಿರುವ ಚಿರು, ಕೋವಿಡ್ ನಡುವೆಯೇ ಶೂಟಿಂಗ್ಗೆ ರೆಡಿ ಎಂದಿದ್ದಾರೆಂಬ ಮಾಹಿತಿ ಟಾಲಿವುಡ್ನಿಂದ ಬಂದಿದೆ.
ಈ ಚಿತ್ರ ಚಿರಂಜೀವಿ ಅವರ 153ನೇ ಚಿತ್ರವಾಗಿದ್ದು, ಕನ್ನಡದಲ್ಲಿ ಪುನೀತ್ ರಾಜಕುಮಾರ್ ನಟಿಸಿದ್ದ ʼವೀರ ಕನ್ನಡಿಗʼ, ʼಅಜಯ್ʼ ಚಿತ್ರಗಳನ್ನು ನಿರ್ದೇಶಿಸಿ ಮೇಹರ್ ರಮೇಶ್, ಮುಖ್ಯವಾಗಿ ರೀಮೇಕ್ ಚಿತ್ರಗಳನ್ನು ತೆಗೆಯುವುದರಲ್ಲಿ ಸಿದ್ಧಹಸ್ತರು.
ಈಗಾಗಲೇ ಚಿರಂಜೀವಿ ಅವರು ಕೊರಟಾಲ ಶಿವ ನಿರ್ದೇಶನದ ʼಆಚಾರ್ಯʼ ಚಿತ್ರದಲ್ಲಿ ನಟಿಸುತ್ತಿದ್ದು, ಅದರ ಶೂಟಿಂಗ್ ಬಹುತೇಕ ಮುಗಿದಿದೆ. ʼಸೈರಾʼ ನಂತರ ನಟಿಸುತ್ತಿರುವ ಚಿತ್ರ ಇದಾಗಿದ್ದು, ಇದಾದ ಮೇಲೆ ತೆಲುಗು ವೇದಾಳಂ ಸೆಟ್ಟೇರಲಿದೆ ಎಂಬ ಮಾಹಿತಿ ಬಂದಿದೆ. ಅಂದಹಾಗೆ; ಈ ಚಿತ್ರದಲ್ಲಿ ಚಿರಂಜೀವಿ ತಂಗಿಯಾಗಿ ʼಮಹಾನಟಿʼ ಖ್ಯಾತಿಯ ಕೀರ್ತಿ ಸುರೇಶ್ ನಟಿಸುವುದು ಪಕ್ಕಾ ಆಗಿದೆ.